ನಾನು ಮತ್ತು ಜ್ಯುಪಿಟರ

ತಮ್ಮಣ್ಣ ಬೀಗಾರ

ನನ್ನ ಒಂದು ಕಥೆಯಲ್ಲಿ ಜ್ಯುಪಿಟರ ಅನ್ನುವ ಹುಡುಗ ಅನ್ಯ ಗ್ರಹಗಳ ಜೀವಿಗಳೊಂದಿಗೆ ಬೇರೆ ಬೇರೆ ಗ್ರಹಗಳಿಗೆ ಹೋಗಿ ಬಂದಿದ್ದನ್ನು ಆ ಹುಡುಗನೇ ಹೇಳಿದ ಸಂಗತಿ ಇದೆ. ಅದನ್ನು ನೀವು ನಂಬಿದಿರೋ ಬಿಟ್ಟಿರೋ ನನಗೆ ಗೊತ್ತಿಲ್ಲ. ಜ್ಯುಪಿಟರ ಆ ಸಂಗತಿ ಹೇಳಿ ಎರಡು ವರ್ಷ ಆಯಿತು. ನನಗೆ ನಂತರ ಜ್ಯಪಿಟರ ಸಿಗಲೇ ಇಲ್ಲ… ಹೌದು ಆಕಾಶ ಕಾಯಗಳ ಕುರಿತಾಗಿ ಅತಿಯಾಗಿ ಪ್ರೀತಿ ಇರುವ ಅವನ ಅಪ್ಪ ತನ್ನ ಮಗನಿಗೆ ಜ್ಯುಪಿಟರ ಎಂದು ಹೆಸರಿಡುವ ಮೂಲಕ ತನ್ನ ಆಕಾಶಕಾಯಗಳ ಪ್ರೀತಿಯನ್ನು ವ್ಯಕ್ತಪಡಿಸಿಕೊಂಡಿದ್ದ. ಜ್ಯುಪಿಟರ ಈಗ ಅಪ್ಪನ ಸಂಗಡ ಬೈಕ್ ಹತ್ತಿ ಪೇಟೆಯ ಶಾಲೆಗೆ ಹೋಗುತ್ತಿದ್ದಾನೆ. ಹಳ್ಳಿಯ ಶಾಲೆಗೆ ಹೋಗುವ ನನಗೆ ಈಗ ಅವನು ಸಿಗುತ್ತಿಲ್ಲ. ಆದರೆ ಅವನು ಹೇಳುತ್ತಿದ್ದ ಕಥೆಗಳು ಅವನ ಅನುಭವಗಳೆಲ್ಲ ನನಗೆ ಬಹಳ ಖುಷಿ ನೀಡುತ್ತಿದ್ದವು.

ಇಂದು ಅವನನ್ನು ಭೆಟ್ಟಿ ಆಗಬೇಕೆಂದು ಅವನ ಮನೆಯ ಕಡೆ ನಡೆದೆ. ಭಾನುವಾರ ಆದ್ದರಿಂದ ಮನೆಯಲ್ಲಿಯೇ ಇರುತ್ತಾನೆ… ಸಿಕ್ಕಿದರೆ ಮಾತಾಡಿಕೊಂಡು ಬರುವುದು. ಸಿಗದೇ ಇದ್ದರೆ ಶಂಕರ ಪಾಂಡು ಎಲ್ಲ ಊರ ಹೊರಗಿನ ಬಯಲಿನಲ್ಲಿ ಕ್ರಿಕೆಟ್ ಆಡುತ್ತಲೋ ಕಬಡ್ಡಿ ಆಡುತ್ತಲೋ ಇರುತ್ತಾರೆ, ಅಲ್ಲಿಗೆ ಹೋದರಾಯಿತು… ಎಂದುಕೊಳ್ಳುತ್ತ ಜುಪಿಟರ ಮನೆಯ ಹತ್ತಿರ ಬಂದೆ. ಯಾರೂ ಕಾಣಲಿಲ್ಲ… ಅವನ ಕಾಳುನಾಯಿ ಈಗ ಸ್ವಲ್ಪ ದಡೂತಿ ಆಗಿದೆ. ಕಬ್ಬಿಣದ ಸರಪಳಿ ಹಾಕಿ ಮರದ ಕಂಬವೊಂದಕ್ಕೆ ಕಟ್ಟಿ ಹಾಕಿದ್ದರಿಂದ ಭಯ ಅನಿಸಲಿಲ್ಲ. ಡಿಶ್ ಅಂಟೇನಾದಂತಹ ಮೂರು ನಾಲ್ಕು ಅಂಟೇನಾಗಳನ್ನು ಮನೆಯ ಮೇಲೆ ಅಲ್ಲಲ್ಲಿ ಇಟ್ಟಿರುವುದು ಕಂಡಿತು. ಮನೆಯ ಅಂಗಳದಲ್ಲಿಯೇ ನನ್ನಷ್ಟು ಎತ್ತರದ ಒಂದು ಗ್ಲೋಬನ್ನು ಸಿಮೆಂಟಿನ ಒಂದು ಪುಟ್ಟ ಪೀಠ ಮಾಡಿ ಅದರ ಮೇಲೆ ಇಟ್ಟಿದ್ದರು. ಜ್ಯುಪಿಟರ ಮಾಳಿಗೆಯ ಮೇಲೆ ಇರಬಹುದೇನೋ ಅನಿಸಿತು.

ಜ್ಯುಪಿಟರ ಜ್ಯುಪಿಟರ ಎಂದು ಕೂಗಿದೆ. ಯಾರದು ಆರ್ಮಷ್ಟಾಂಗ ರಾಕೇಶ ಶರ್ಮ… ಯಾರು ಬಂದಿದ್ದೀರಿ ಎಂದು ಒಂದು ರೀತಿ ನಾಟಕೀಯವಾಗಿ ಮಾತಾಡುತ್ತ ಮಾಳಿಗೆಯಿಂದ ಮೆಟ್ಟಿಲು ಇಳಿಯುತ್ತ ನನ್ನ ಕಡೆ ನೋಡಿದ. ಓಹೋಹೋ ಸೂರ್ಯನೇ ನಮ್ಮ ಮನೆಗೆ ಬಂದಿದ್ದಾನೆ. ಬೇಜಾರಾಗ ಬೇಡ ರವಿ, ರವಿ ಅಂದರೆ ಸೂರ್ಯ ಅಂತಲೂ ಆಗುತ್ತದೆ ಅಲ್ವಾ ಎನ್ನುತ್ತ ಕೈ ಮುಂದೆ ಮಾಡಿಕೊಂಡು ಬಂದ. ನಾನೂ ಕೈ ಮುಂದೆ ಮಾಡಿದೆ. ಅವನು ಕೈಹಿಡಿದು ಎಳೆದುಕೊಂಡು ನನ್ನನ್ನು ಅಪ್ಪಿಕೊಂಡು ಬಿಟ್ಟ. ಎಷ್ಟು ದಿನವಾಗಿತ್ತು ನಿನ್ನನ್ನು ಕಾಣದೆ. ನಾನು ಇತ್ತೀಚೆಗೆ ಏನೆಲ್ಲಾ ಮಾಡಿದೆ ಎನ್ನೋದು ನಿನಗೆ ಗೊತ್ತೇ ಇಲ್ಲ. ಆ ಸಾರಿ ಅನ್ಯ ಲೋಕಗಳಿಗೆಲ್ಲಾ ಹೋಗಿ ಬಂದ ಮೇಲೆ ನಮ್ಮ ಲೋಕದ ಬಗ್ಗೆ ಒಂದಿಷ್ಟು ಸಂಶೋಧನೆಗೆ ಇಳಿದಿದ್ದೇನೆ… ಎಂದು ಮಾತು ಪ್ರಾರಂಭಿಸಿಯೇ ಬಿಟ್ಟ.

‘ಅಲ್ಲ, ಏನಾದರೂ ಇಲ್ಲದ್ದನ್ನು ಹೇಳುವುದನ್ನು ನೀನು ಇನ್ನೂ ಬಿಟ್ಟಿಲ್ಲವಾ…’ ಅಂದೆ. ‘ಆದರೆ ನೀನು ಹೇಳುವುದರಲ್ಲಿ ಮಜವಿರುತ್ತದೆ. ಅದಕ್ಕೇ ಕೇಳಲು ಬಂದೆ’ ಅಂದೆ. ‘ಹಾಗೆಲ್ಲಾ ಹೇಳಿದರೆ ನನಗೆ ಬೇಜಾರಾಗುತ್ತದೆ. ನಾನು ಹಾಗೆಲ್ಲಾ ಸುಳ್ಳು ಸುಳ್ಳು ಹೇಳುವುದಿಲ್ಲ. ಮೊನ್ನೆ ಏನಾಯಿತು ಗೊತ್ತಾ? ನಮ್ಮ ತೋಟದಲ್ಲಿ ಒಳ್ಳೊಳ್ಳೆ ಜಾತಿಯ ಬಾಳೆ ಮರಗಳಿವೆ. ದೊಡ್ಡದೊಂದು ಬಾಳೆ ಗೊನೆಯ ತುದಿಯಲ್ಲಿರುವ ಕುಂಡಿಗೆಗೆ ಒಂದು ಗಿಳಿ ಬಂದು ಕುಳಿತಿತ್ತು…’ ಅನ್ನುತ್ತಿದ್ದಂತೆಯೇ ‘ಬಾಳೆ ಕುಂಡಿಗೆಗೆ ಬಾಳೆ ಗಿಳಿ ನಮ್ಮ ಮನೆಯ ತೋಟದಲ್ಲೂ ಬಂದು ಕುಳಿತಿರುತ್ತದೆ. ಅದು ವಿಶೇಷ ಎನ್ನುವ ಹಾಗೆ ಹೇಳುತ್ತಿದ್ದೀಯಲ್ಲ, ಗಿಳಿ ಬರುವುದು ವಿಶೇಷ ಅಲ್ಲ’ ಅಂದೆ.

‘ನಾನು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡಿದ್ದೇನೆ. ನನ್ನಲ್ಲಿ ಸಂಶೋಧನಾ ಪ್ರವೃತ್ತಿ ಇದೆ. ಹಾಗಾಗಿ ನಾನು ಒಂದುರೀತಿ ವೈಜ್ಞಾನಿಕ ಕಣ್ಣಿನಿಂದ ನೋಡುತ್ತಾ ಇರುತ್ತೇನೆ. ಆಗಲೇ ಹೇಳಿದ ಹಾಗೆ ಗಿಳಿ ಬಂದರೆ ಏನೂ ವಿಶೇಷ ಅಲ್ಲ. ಅದು ಗಿಳಿಯಾಗಿರಲಿಲ್ಲ… ಗಿಳಿಯ ಹಾಗೇ ಇರುವ ದ್ರೋಣ ಸಿದ್ಧಪಡಿಸಿ ಬೇರೆ ದೇಶದವರೋ ಅನ್ಯ ಲೋಕದವರೋ ಇಲ್ಲಿಗೆ ಕಳಿಸಿದ್ದಾರೆ. ಅವು ನಮ್ಮ ವಿಶೇಷ ಬಾಳೆ ತಳಿಗಳಿಗೆ ಸಂಬಂಧಿಸಿದ ಮಕರಂದವನ್ನೊ ಇನ್ನೇನನ್ನೊ ಸಂಗ್ರಹಿಸಿಕೊಂಡು ಹೋಗುತ್ತದೆ. ಇದೊಂದು ರೀತಿ ನಮ್ಮ ದೇಶದ ವಿಶೇಷ ತಳಿಯನ್ನು ಕದಿಯೊ ವಿಧಾನ’ ಎಂದೆಲ್ಲಾ ಹೇಳತೊಡಗಿದ. ಇವನು ಬದಲಾವಣೆ ಆಗಿಲ್ಲಪ್ಪ.

ಮೊದಲಿನ ಹಾಗೇ ಏನೇನೋ ಹೇಳುತ್ತಾನೆ ಎಂದುಕೊಂಡು… ‘ಹಾಗಾದರೆ ಬಾಳೆ ಗಿಳಿ ಒಂದು ದಿನ ನಿನ್ನನ್ನೂ ಎತ್ತಿಕೊಂಡು ಹೋದರೂ ಹೋದೀತು! ನೀನು ಒಬ್ಬ ಸಂಶೋಧಕ ಎಂದು ಯಾರಿಗಾದರೂ ತಿಳಿದರೆ ಏನು ಮಾಡುತ್ತಾರೆ ಹೇಳಲು ಬರುವುದಿಲ್ಲ’ ಅಂದೆ. ಜುಪಿಟರ ದೊಡ್ಡದಾಗಿ ನಕ್ಕ. ‘ನಾನು ಈಗ ಒಂದು ಹೊಸ ಸಂಶೋಧನೆಯಲ್ಲಿ ತೊಡಗಿದ್ದೇನೆ. ಅದೇನಾದರೂ ಯಶಸ್ವಿಯಾದರೆ ನನಗೆ ತುಂಬಾ ಲಾಭ ಇದೆ’ ಅಂದ. ‘ಹೌದಾ… ಏನು ಅಂತಹ ಸಂಶೋಧನೆ’ ಅಂದೆ. ನಿನಗೆ ಅರ್ಥ ಆಗುವಹಾಗೆ ಸುಲಭವಾಗಿ ಹೇಳುತ್ತೇನೆ ಕೇಳು ಎನ್ನುತ್ತ ನನ್ನನ್ನು ಮನೆಯ ಮುಂದೆ ಇಟ್ಟಿದ್ದ ಗ್ಲೋಬಿನ ಕಡೆಗೆ ಒಯ್ದ.

‘ನೋಡು ಇದು ಭೂಮಿಯ ಮಾದರಿ ನಿನಗೆ ಗೊತ್ತೇ ಇದೆ. ಭೂಮಿಯ ಸುತ್ತಲೂ ವಾಯು ಮಂಡಲ, ಭೂಮಿಯ ಮೇಲೆ ನೀರು, ಆಮೇಲೆ ಶಿಲಾ ಗೋಳ ಹೀಗೆಲ್ಲಾ ನಾವು ಓದಿದ್ದೇವೆ ಅಲ್ಲವಾ…’ ಎನ್ನುತ್ತಿದ್ದಂತೆ ಇವನು ಒಳ್ಳೆಯ ಟೀಚರ ಪಾಠ ಮಾಡುವ ಹಾಗೇ ಹೇಳುತ್ತಿದ್ದಾನಲ್ಲ… ಅಂದುಕೊಂಡೆ. ʻಇದರ ಮಧ್ಯದಲ್ಲಿ ಲಾವಾ ಇದೆ ಅಂತ ನಮಗೆ ಹೇಳಿದ್ದಾರಲ್ಲ. ಲಾವಾ ಹೊರಕ್ಕೆ ಬರಲು ಸದಾ ಪ್ರಯತ್ನಿಸುತ್ತದೆ ಎಂಬುದೂ ನಮಗೆ ಗೊತ್ತು. ನಾನೀಗ ಸಣ್ಣ ವ್ಯಾಸದ ತುಂಬಾ ಗಟ್ಟಿಯಾದ ಕೊಳವೆಯೊಂದನ್ನು ಭೂಮಿಯ ಒಳಗೆ ಲಾವಾ ಇರುವವರೆಗೂ ತಲುಪುವಂತೆ ತೂರ ಬೇಕು. ಕೊಳವೆಯ ಮೂಲಕ ವಿವಿಧ ಧಾತುಗಳು ಕರಗಿ ಆದ ದ್ರವ ನಿರಂತರವಾಗಿ ಹೊರಗೆ ಬರುತ್ತದೆ. ಬೇರೆ ಬೇರೆ ರೀತಿಯ ಅಚ್ಚಿನಲ್ಲಿ ಅದನ್ನು ಸಂಗ್ರಹಿಸಿ ತಣಿಸಿದರೆ… ನಮಗೆ ಬೇಕಾಗುವ ರೀತಿಯ ಪ್ರತಿಮೆ, ಪಾತ್ರೆ, ಗೊಂಬೆ ಎಲ್ಲ ತಯಾರಿಸಬಹುದು’ ಎಂದು ಒಂದೇ ಉಸುರಿಗೆ ಹೇಳುವಂತೆ ಹೇಳಿದ. ‘ನಿನ್ನ ಆಲೋಚನೆ ಚನ್ನಾಗಿದೆ. ತುಂಬಾ ಉಷ್ಣತೆಯಲ್ಲೂ ಕರಗದ ನಳಿಕೆ, ಹೊರಗೆ ಬರುವ ಲಾವಾವನ್ನು ನಿಯಂತ್ರಿಸುವುದಸು, ಅದರ ಬಳಕೆ ಎಲ್ಲ…’ ಎಂದು ನಾನು ತಲೆಯ ತಲೆಯ ಮೇಲೆ ಕೈ ಇಟ್ಟುಕೊಂಡರೆ… ‘ಚಾಲೆಂಜ ತೆಗೆದುಕೊಳ್ಳದೆ ಏನೂ ಮಾಡಲು ಆಗುವುದಿಲ್ಲ’ ಎಂದು ತಿರಸ್ಕಾರದ ಧ್ವನಿಯಲ್ಲಿ ಹೇಳುತ್ತ ಅಂತಹದೇ ನೋಟದಲ್ಲಿ ನನ್ನನ್ನು ನೋಡಿದ.

ನಾನು ‘ಸಿಟ್ಟಾಗಬೇಡ. ಹಿಂದೆಲ್ಲ ವಿಜ್ಞಾನಿಗಳು ನಿನ್ನ ಹಾಗೇ ಚಾಲೆಂಜ, ಪ್ರಯತ್ನ ಎಲ್ಲ ಮಾಡಿಯೇ ಏನೇನೋ ಸಾಧನೆ ಮಾಡಿದ್ದು’ ಅಂದೆ. ‘ಹೌದು ಮತ್ತೆ, ನೀನು ಕನಿಷ್ಟ ಅಬ್ಧುಲ್ ಕಲಾಂ ಅವರ ಬಗೆಗಾದರೂ ಓದಿಕೊಳ್ಳ ಬೇಕು. ಆಗ ನಿಮ್ಮಂತವರಲ್ಲಿ ಒಂದಿಷ್ಟು ಬದಲಾವಣೆ ಆಗುತ್ತದೆ. ನನಗೂ ನನ್ನ ಅಪ್ಪನೇ ಪ್ರೇರಣೆ. ನನ್ನ ಅಪ್ಪ ಏನೇನೋ ಮಾಡುತ್ತಿರುತ್ತಾನೆ. ಮೊನ್ನೆ ಅದೇ ನಮ್ಮ ಸೌರಮಂಡಲದ ಹೊರತಾದ ಗ್ರಹವೊಂದರ ಜೀವಿಗಳು ನಮ್ಮಲ್ಲಿಗೆ ಬಂದಿದ್ದರು…’ ಅಂದ. ‘ಏನು, ಸೌರ ಮಂಡಲದಲ್ಲಿರುವ ಮಂಗಳ ಗ್ರಹವನ್ನೇ ನಾವಿನ್ನೂ ಸಂಪೂರ್ಣವಾಗಿ ಅಭ್ಯಾಸ ಮಾಡಲಾಗದೇ ಇರುವಾಗ… ಸೌರವ್ಯೂಹದ ಹೊರತಾದ ಗ್ರಹದ ಜೀವಿಗಳು ಇಲ್ಲಿಗೆ ಹೇಗೆ ಬರುತ್ತವೆ?’ ಎಂದು ನಾನೂ ತುಂಬಾ ತಿರಸ್ಕಾರದ ಧ್ವನಿಯಲ್ಲಿಯೇ ಮಾತಾಡಿದೆ.

ಜ್ಯುಪಿಟರ ನನ್ನ ಕೈಹಿಡಿದು ಬಾ ಎಂದು ಕರೆದುಕೊಂಡು ಹೊರಟ. ಅವನ ಮನೆಯ ತೋಟದ ಮಧ್ಯದಲ್ಲಿ ಹೋಗಿ ನಿಂತ. ಅಲ್ಲೊಂದು ವೃತ್ತಾಕಾರದ ಕೆರೆ. ಕೆರೆಯ ವ್ಯಾಸ ಹತ್ತು ಮೀಟರ ಇರಬಹುದು. ಕೆರೆಯ ತುಂಬಾ ನೀರು. ‘ಇದೇ ಅವರ ವಾಹನ ಇಳಿದ ಜಾಗ’ ಎಂದು ತೋರಿಸಿದ. ‘ಬಹು ದೂರದಿಂದ ಬಂದ ಅವರ ವಾಹನ ಈ ಕೆರೆಯ ನೀರಿನಲ್ಲಿ ಜೋಪಾನವಾಗಿ ಇಳಿಯಿತು…’ ಎಂದು ತುಂಬಾ ಸಹಜವಾಗಿ ಹೇಳಿದ.

ನಾನು ಅವನಲ್ಲಿ ವಾದ ಮಾಡುವುದು ಬೇಡ. ಅವನು ಏನೆಲ್ಲಾ ಹೇಳುತ್ತಾನೆ ಕೇಳಬೇಕು ಅಂದುಕೊಂಡೆ. ʻಇಲ್ಲಿ ಇಳಿಯುವ ಬದಲು ನಿಮ್ಮ ಮನೆಯ ಹಿಂದೆ ಪೂರ್ತಿ ಬೋಳಾಗಿ ಕಲ್ಲು ಬಂಡೆಗಳಷ್ಟೇ ಇರುವ ಗುಡ್ಡದ ಮೇಲೆ ಇಳಿಯಬಹುದಿತ್ತಲ್ಲಾ…’ ಅಂದೆ. ‘ನಿಜ ನಿಜ, ಅಪ್ಪ ನಾನು ಹಾಗೇ ಆಲೋಚಿಸಿದ್ದೆವು. ಗುಡ್ಡದ ಮೇಲೆ ಇಳಿದರೆ ಯಾವುದೇ ಅಪಾಯವಿಲ್ಲ. ಇಲ್ಲಿ ಇಳಿದು ನಮ್ಮ ತೋಟ ಗಿಡಮರಗಳಿಗೆ ಅಪಾಯ ಆಗಬಹುದೂ ಅಂತ. ಆದರೆ ಅವರು ನೀರಿನಲ್ಲಿಯೇ ಇಳಿಯುವುದಂತೆ. ಅವರ ಗ್ರಹದಲ್ಲಿ ತುಂಬಾ ಹಸಿರು ಗಿಡಗಳಿದ್ದು ಹಣ್ಣುಗಳು ಬೇಕಾದಷ್ಟು ಸಿಗುತ್ತವೆಯಂತೆ’ ಅಂದ. ‘ಹಾಗಾದರೆ ನಮ್ಮ ಬೋಳಾದ ಪ್ರದೇಶವೆಲ್ಲಾ ಹಸಿರಾಗಿಸಲು ಅವರಲ್ಲಿ ಏನಾದರೂ ಉಪಾಯವಿದೆಯಾ, ಅವರು ಹಸಿರನ್ನು ಹೇಗೆಲ್ಲಾ ರಕ್ಷಿಸಿದ್ದಾರೆ ಎಂಬುದನ್ನೆಲ್ಲ ಕೇಳಬೇಕಿತ್ತು’ ಅಂದೆ.

‘ಸರಿ ಸರಿ ನಿನ್ನಲ್ಲೂ ಈಗ ವೈಜ್ಞಾನಿಕ ಮನೋಭಾವ ಬೆಳೆಯುತ್ತಾ ಇದೆ. ನೀನು ಹೇಳಿದ್ದನ್ನೇ ನಾವು ಅವರನ್ನು ಕೇಳಿದ್ದು. ಅವರು ಏನು ಮಾಡಿದ್ದಾರಂತೆ ಗೊತ್ತಾ? ಅವರಲ್ಲಿ ನಮ್ಮಲ್ಲಿಯ ಹಾಗೆ ಕೃಷಿ ಭೂಮಿ ಮತ್ತು ಅರಣ್ಯ ಪ್ರದೇಶ ಅಂತ ಬೇರೆ ಬೇರೆ ಇಲ್ಲವಂತೆ. ಇಡೀ ಗ್ರಹದಲ್ಲೂ ಸಾಗರ, ಸಮುದ್ರ, ನದಿ, ಸರೋವರ ಮುಂತಾದ ಜಲಾಶಯಗಳನ್ನು ಬಿಟ್ಟರೆ ಅರಣ್ಯ ಮಾತ್ರ ಇದೆಯಂತೆ. ಅರಣ್ಯದಲ್ಲಿಯೇ ಎಲ್ಲರಿಗೂ ಆಹಾರಕ್ಕೆ ಬೇಕಾದ ಹಣ್ಣುಗಳು, ಗಡ್ಡೆ ಗೆಣಸು, ಸೊಪ್ಪು, ಬೀಜ ಸಿಗುತ್ತದಂತೆ…’ ಎಂದು ಜುಪಿಟರ ಹೇಳುತ್ತಿದ್ದಂತೆ ‘ಹಾಗಾದರೆ ಅವರ ಲೋಕದ ಅರಣ್ಯ ಸಸ್ಯಗಳು ನಮಗೂ ಬೇಕಿತ್ತು ಅನಿಸುತ್ತದೆ’ ಅಂದೆ. ‘ಅದನ್ನೇ ಅಪ್ಪ ಮತ್ತು ನಾನು ಮಾಡಿದ್ದೀವಿ. ಬಹುಬೇಗ ಬೆಳೆದು ಮರವಾಗುವ ರುಚಿಯಾದ ಹಣ್ಣುಗಳನ್ನು ಇತರ ಆಹಾರ ವಸ್ತುಗಳನ್ನು ಕೊಡುವ ಸಸ್ಯಗಳ ಬೀಜಗಳನ್ನು ತಂದು ಕೊಡುತ್ತೇವೆ, ಅಷ್ಟೇ ಅಲ್ಲ ಅವುಗಳನ್ನು ಬೆಳೆಸುವುದು ಹೇಗೆ ಅಂತಲೂ ಹೇಳುತ್ತೇವೆ ಅಂದಿದ್ದಾರೆ. ಆದರೆ ಎಲ್ಲರಲ್ಲೂ ಸಸ್ಯಗಳ ಕುರಿತಾಗಿ ಪ್ರೀತಿ ಬೆಳೆದರೆ ಸಾಕು ಮತ್ತೇನೂ ಬೇಡ ಎಂಬ ಮಾತನ್ನೂ ಸೇರಿಸಿದ್ದಾರೆ’ ಅಂದ. ‘ಇಲ್ಲಿ ನೋಡು ನಮ್ಮ ಆಕಾಶ ಯಾನ ಪ್ರಾರಂಭಿಸೊ ಸ್ಥಳ ಸಿದ್ಧ ಮಾಡುತ್ತಾ ಇದ್ದೀವಿ’ ಎಂದು ಸ್ವಲ್ಪ ಮಣ್ಣು ಅಗೆದು ಸಮತಟ್ಟು ಮಾಡಿರುವ ಸ್ಥಳ ತೋರಿಸತೊಡಗಿದ.

ಗುಡ್ಡಕ್ಕೆಲ್ಲ ಅವರು ಕೊಡುವ ಬೀಜ ನೆಡುವ ಯಂತ್ರ ಬಹುಬೇಗ ತಯಾರಿಸಬೇಕು ಅಂದುಕೊಂಡಿದ್ದೇನೆ ಅಂದ. ‘ಅದೆಲ್ಲ ಸರಿ, ಅವರು ಹೇಳಿದ ಹಾಗೆ ನಮ್ಮ ಜನರಲ್ಲಿ ಸಸ್ಯಗಳ ಬಗ್ಗೆ ಪ್ರೀತಿ ಹೆಚ್ಚಿಸೋದಕ್ಕೆ ಏನಾದರೂ ಸಂಶೋಧನೆ ಮೊದಲು ಮಾಡು ಎಂದು ನಾನು ಅನ್ನುತ್ತಿದ್ದಂತೆ… ‘ನೀನು ಬಹಳ ಬುದ್ದಿವಂತ ಆಗುತ್ತಾ ಇದ್ದೀಯ’ ಎನ್ನುತ್ತ ಅಪ್ಪ ಕರೆಯುತ್ತಾ ಇದ್ದಾನೆ… ಬರ‍್ತೀನಿ ಟಾಟಾ ಎಂದು ಹೇಳುತ್ತ ಅವನು ಮನೆಯ ಕಡೆ ಓಡಿದರೆ… ನಾನು ನಮ್ಮ ಭೂಮಿ ಪೂರ್ತಿ ಹಸಿರಾದ ಹಾಗೆ ಕನಸು ಕಾಣುತ್ತ ನನ್ನ ಮನೆಯಕಡೆ ಹೊರಟೆ.

‍ಲೇಖಕರು Admin

September 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: