ನಾನು ದೀಪ ಹಚ್ಚಬೇಕೆಂದಿದ್ದೆ…

ಅಕ್ಷತಾ ಕೃಷ್ಣಮೂರ್ತಿ ಅವರ ಹೊಸ ಕವನ ಸಂಕಲನ – ನಾನು ದೀಪ ಹಚ್ಚಬೇಕೆಂದಿದ್ದೇನೆ

ಪಂಚಮಿ ಈ ಸಂಕಲನವನ್ನು ಪ್ರಕಟಿಸಿದೆ

ಈ ಸಂಕಲನಕ್ಕೆ ಸತೀಶ್ ಕುಲಕರ್ಣಿ ಅವರು ಬರೆದ ಮುನ್ನುಡಿ ಹಾಗೂ ಎಚ್ ಎಲ್ ಪುಷ್ಪ ಅವರು ಬರೆದ ಬೆನ್ನುಡಿ ಇಲ್ಲಿದೆ

ಸತೀಶ ಕುಲಕರ್ಣಿ

ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸುವ ಹೊಸಬರಿಗೆ ಮುಖ್ಯವಾಗಿ ಒಳಗೊಂದು ಉಮೇದಿ ಇರಬೇಕು. ಓದುವ, ಅರಿಯುವ ಹಾಗೂ ಕಲಿಯುವ ಗುಣಗಳಿದ್ದಾಗ ಬಹಳ ದೂರ ಸಾಗಲು ಸಾಧ್ಯ. ಜೊತೆಗೆ ಸರೀಕ ಮತ್ತು ಹಿರಿಯ ಬರಹಗಾರರೊಂದಿಗೆ ನಿರಂತರ ಓದಿನ ಸಂಪರ್ಕ ಇದ್ದಾಗ ಅವರ ಬರಹಕ್ಕೂ ಹೊಸ ಆಯಾಮ ತಂತಾನೆ ಸಿಗುತ್ತದೆ.

ಅಕ್ಷತಾ ಕೃಷ್ಣಮೂರ್ತಿ ಈ ಮೇಲಿನ ಮಾತುಗಳಿಗೆ ಒಂದು ಮಾದರಿ. ಕಿರಿಯವಳಾದ ಅಕ್ಷತಾ ಜೊತೆಗಿನ ಭೇಟಿಗಳು ಒಂದೆರಡು ಮಾತ್ರ. ಹತ್ತಾರು ನಿಮಿಷ ಮಾತನಾಡಿರಬಹುದು. ಆದರೆ ನನ್ನಂತಹ ಹಿರೀಕನ ಮನಸ್ಸಿನಲ್ಲಿ ಅವರೊಬ್ಬ ಉತ್ಸಾಹಿ ಬರಹಗಾರ್ತಿಯಾಗಿ ಅಚ್ಚು ಮೂಡಿಸಿದ್ದಾರೆ. ನೇರ, ಮುಕ್ತ ತನಗನಿಸಿದ್ದನ್ನು ಬಳಬಳನೆ ಹೇಳಿಬಿಡುವ ಅವರ ಮೊದಲ ಭೇಟಿಯೆ ಚಕಿತಗೊಳಿಸಿತು. ಎಪ್ಪತ್ತು-ಎಂಬತ್ತರ ದಶಕದಲ್ಲಿ ಹಲವು ಲೇಖಕರಲ್ಲಿ ಈ ಗುಣಗಳನ್ನು ಕಂಡಿದ್ದೆ. ಈಗಲೂ ಭೇಟಿಯಾದಾಗ ಎಂಥ ಭಿನ್ನ ಆಲೋಚನೆಗಳ ನಡುವೆಯೂ, ಜೀವನ ಪ್ರೀತಿ ಇಟ್ಟು ಮಾತನಾಡುವ ಸರಜೂ, ಜಯಂತ, ಹೇಮಾ, ಸುಕನ್ಯಾ, ಶರೀಫಾ, ಆರ್.ಜಿ. ಹಳ್ಳಿ, ರಾಜಪ್ಪ ದಳವಾಯಿ, ಸಿದ್ದನಗೌಡ ಪಾಟೀಲ ನೆನಪಾಗುತ್ತಾರೆ.

ತಳ ಬುಡ, ಹಿಂದೆ ಮುಂದೆ ಆದಿ ಅಂತ್ಯವಿಲ್ಲದೆ ಹಾಸ್ಯವಾಗಿ ಮಾತು ಕಥೆಗಳನ್ನು ಈಗಲೂ ನಾವು ಹಂಚಿಕೊಳ್ಳುತ್ತೇವೆ. ಅಕ್ಷತಾ ಈ ಸಾಲಿಗೆ ಸೇರಬಹುದಾದ ಇನ್ನೊಂದು ಹೆಸರು. ತನ್ನ ಮಾತಿಗೆ, ತನ್ನ ಕಾವ್ಯಕ್ಕೆ, ತಾನೇ ಬೆರಗಾಗುವ ಮನಸ್ಸಿನವರು. ಪ್ರತಿ ನಗುವಿನ ಹಿಂದೆ ಒಂದು ಅಪೂರ್ಣತೆ ಮತ್ತು ವಿಷಾದ ಕೂಡ ಇರುತ್ತದೆ. ಕವಯತ್ರಿಯ `ನಾನು ದೀಪ ಹಚ್ಚಬೇಕೆಂದಿದ್ದೆ…’ ಕವಿತೆಗಳನ್ನು ಓದುವಾಗ ಈ ರೀತಿ ಅನಿಸಿತು. ೨೦೨೦ನೇ ಸಾಲಿನ ಪ್ರತಿಷ್ಠಿತ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪಡೆದ ಕೃತಿ ಇದು. ಪ್ರಕಟನೆಯ ಬಾಗಿಲಲ್ಲಿ ನಿಂತ ಕೃತಿಗೆ, ನುಡಿ ತೋರಣ ಕಟ್ಟುವ ಕೆಲಸ ನನ್ನದು.

ಕಡೆಂಗೋಡ್ಲು ನನ್ನ ಸಾಹಿತ್ಯಾಭಿರುಚಿ ಬೆಳೆಯುವ ದಿನಗಳಲ್ಲಿ ಒಂದಿಷ್ಟು ಕುತೂಹಲ ಹುಟ್ಟಿಸಿದ ಹೆಸರಿದು. ಒಂದು ರೀತಿಯ ವಿಚಿತ್ರ ಭಾವನೆಗಳು ಓದಿದಾಗ ಹುಟ್ಟು ಹಾಕುತ್ತಿತ್ತು. ಆನಂತರದಲ್ಲಿ ಅದು ದಕ್ಷಿಣ ಕನ್ನಡದ ಒಂದು ಹಳ್ಳಿ ಎಂದು ಗೊತ್ತಾಯಿತು. ಈ ಹೆಸರಿನ ಬೆನ್ನು ಹತ್ತಿ ಹೋದಾಗ, ಶಂಕರಭಟ್ಟರ ಘೋಷಕಾವ್ಯ ಮತ್ತು ಮಾದ್ರಿಯ ಚಿತೆ ಕೃತಿಗಳು ನನ್ನನ್ನು ಸೆಳೆದವು. `ಎಂತದು ಮಾರಾಯ್ರೆ’ ಎಂದು ದ.ಕ. ಭಾಷೆಯನ್ನು ಹಾಸ್ಯ ಮಾಡುತ್ತಿದ್ದ ನನಗೆ ಅದರ ನಿಜ ರುಚಿಯನ್ನು ಕಾಣಿಸಿದವರು.

ಕಡೆಂಗೋಡ್ಲು ಹೆಸರಿನ ಜೊತೆಗೆ ಇನ್ನೂ ಕೆಲವು ಹೆಸರುಗಳಾದ ಕೈಯ್ಯಾರ ಕಿಞ್ಞಣ್ಣ ರೈ, ಗೋವಿಂದ ಪೈ, ಪಂಜೆಮಂಗೇಶರಾವ್ ಹಾಗೂ ನಮ್ಮ ಬೋಳುವಾರ ಮಹ್ಮದಕುಞ್ ಇವನ್ನೂ ಸೇರಿಸಬಹುದು. ಈಗಲೂ ಈ ಎಲ್ಲ ಹೆಸರುಗಳನ್ನು ಓದುವಾಗ, ಬರೆಯುವಾಗ ಅಷ್ಟೇ ಏಕೆ ಉಚ್ಚರಿಸುವಾಗ ರಸ್ತೆಯ ಹಬ್ಸ್ ದಾಟುವಾಗಿನ ಗಾಡಿಯಂತೆ ತಡಬಡಿಸುತ್ತೇನೆ!

ಪ್ರತಿ ಲೇಖಕನಿಗೆ ಒಂದು ಅಪೂರ್ಣತೆ ಮತ್ತು ಅತೃಪ್ತಿ ಕಾಡುತ್ತದೆ. ಕಾಡಲೂ ಬೇಕು. ಅಂದಾಗ ಮಾತ್ರ ಏನನ್ನಾದರೂ ಹೊಸದನ್ನು ಬರೆಯಲು ಸಾಧ್ಯ. `ನಾನು ದೀಪ ಹಚ್ಚಬೇಕೆಂದಿದ್ದೆ’ ಸಂಕಲನವು ಇದಕ್ಕೆ ಹೊರತಾಗಿಲ್ಲ. ಭಿನ್ನ ಭಾವ ನೆಲೆಗಳಲ್ಲಿ ಮತ್ತೆ ಮತ್ತೆ ಭೂತ-ವರ್ತಮಾನಗಳ ತೂಗಿದ ಕಾವ್ಯವಿದು. ತಾನು ಅನುಭವಿಸಿದ್ದನ್ನು ಕೇರಿಹಳಮಾಡಿ (ಹಸನ ಮಾಡುವ) ಅಂದಗೊಳಿಸಿದ ಕವಿತೆಗಳಿಲ್ಲಿವೆ. ಭಾಷಿಕ ರುಚಿಯಲ್ಲಿ ಮುಚ್ಚುಗಳಿಲ್ಲದೆ ಬಿಚ್ಚು ಭಾವದ ಕವಿತೆಗಳಿವು.

ಗಂಡು ಕಾಮದ ಕುರಿತು ಕಾವ್ಯ ಬರೆದಾಗ (ಕವಿ ಎಚ್.ಎಂ. ಚನ್ನಯ್ಯ ನೆನಪಾಗುತ್ತಾರೆ) ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಅದೆ ಹೆಣ್ಣು ಬರೆದಾಗ, ಆಳೆತ್ತರದ ಸಂಶಯದ ಹುತ್ತಗಳೇಳುತ್ತವೆ. ಈಗ ಕಾಲ ಸ್ವಲ್ಪ ಬದಲಾಗಿದೆ. ಇಂತಹ ನಿಷೇಧವನ್ನು ಮುರಿದ ಕಾವ್ಯ ಪರಂಪರೆ ಮುನ್ನಡೆದಿದೆ. ಇದು ಆರೋಗ್ಯಪೂರ್ಣವೂ ಕೂಡ. ಅವರವರ ಕಾವ್ಯ ಅವರವರ ಮನೋಸೂಕ್ಮಗಳೂ ಹೌದು. ಇಂಥ ಕವಿತೆಗಳು ಇಲ್ಲಿವೆ. ಸಂಕಲನದಲ್ಲಿ ಒಟ್ಟು ನಲವತ್ತೆರಡು ಕವಿತೆಗಳಿವೆ. ಅಕ್ಷತಾ ಎಲ್ಲ ಕವಿತೆಗಳಲ್ಲಿ ಉಸಿರಾಡುತ್ತಾರೆ. ತಮ್ಮಚ್ಚಳಿಕೆಯನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ. ಜೊತೆಗೆ ಮುದ ಕೊಡುವ ಆರು ಮಕ್ಕಳ ಕವಿತೆಗಳಿವೆ.

ಮನಸು ಈಗ ಪಟ/ ಬಾನಿಗೆ ಹಾರುವ ಹಟ/ ಬಿದ್ದರು ಎದ್ದರು ನೋಯದ ನಾವು/ ಗೆದ್ದೆ ಗೆಲ್ಲುವೆವು ಬಾಲ್ಯದ ಆಟ- ಸುಂದರ ಸಾಲುಗಳಿವು. ಕವಯತ್ರಿಯ ಬಾಲ್ಯ ಮತ್ತು ವೃತ್ತಿ ಇವುಗಳಲ್ಲಿ  ಆವೃತ್ತಗೊಂಡಿವೆ. ನೋವು-ವಿಷಾದದ ಪ್ರತಿಯಾಗಿ, ಪ್ರತಿರೋಧ ಒಡ್ಡುವ ಇಲ್ಲಿಯ ಕವಿತೆಗಳು ಇಬ್ಬರ ನಡುವಿನ ಪಿಸುಮಾತಿನಂತಿವೆ. ಪ್ರೀತಿಸುವ, ಪ್ರಶ್ನಿಸುವ, ಪರಿತಪಿಸುವ ಉತ್ಕಟ ಭಾವದಲ್ಲಿ ಬರೆದವು. ಗೋಕುಲದ ಮಾಧವ, ಜೀವ ಪ್ರೀತಿಯ ಬುದ್ಧ, ಮರೆವಿನ ರಾಜ ದುಷ್ಯಂತನನ್ನು ಜಪಿಸಿದ್ದಾರೆ. ವ್ಯಕ್ತಿಗತ ತಳದಿಂದ ಬಿಡಿಸಿಕೊಂಡು ಸಾಮಾಜಿಕವಾಗುವ ಇಲ್ಲಿನ ಕವಿತೆಗಳು ಭಾರವೆನಿಸುವುದಿಲ್ಲ.

ಗೋಕುಲದ ಕಾಲ್ದಾರಿಯು

ಗಿಡಗಂಟೆಗಳಿಂದ ಮುಚ್ಚಿ

ನೀ ನಡೆಯದೆ ಅಜ್ಞಾತವೀಗ

`ಗೋಕುಲದ ಮುರ್ಕಿಯಲ್ಲಿ’ ನಿಂತು ಮರೆವು ವಿರಹಗಳನ್ನು ಸಮ್ಮಿಳಿಸಿದ ಸಾಲುಗಳಿವು. ಹೆಜ್ಜೆಗಳು ಮತ್ತೆ ಮತ್ತೆ ಬೀಳದಿದ್ದಾಗ ಹುಲ್ಲುಗಂಟಿಗಳು ಹುಟ್ಟುವುದು ಸಹಜ. ಇದು ಇಬ್ಬರ ನಡುವಿನ ಕಾಲುದಾರಿ. ಪ್ರೀತಿಯ ಪದತಲದಲ್ಲಿ ಹುಟ್ಟಿದ ಏಕಾಂತದ ಭಾವಗಳಿವು. “ನನ್ನ ನಿನ್ನ ಮನೆಯ ಕಾಲು ದಾರಿಯಲಿ, ಹುಲ್ಲು ಬೆಳೆಯದಿರಲಿ ಗೆಳೆಯ” ಎಂಬ ಇಂಗ್ಲೀಷ್ ಕವಿತೆಯ ಸಾಲೊಂದು ನೆನಪಾಯಿತು. ದಟ್ಟ ಭಾವಗಳನ್ನು ತುಂಬುವ ಈ ಇಡೀ ಕವಿತೆ ಬೇಕಾದಷ್ಟು ಅರ್ಥ ವಿಸ್ತಾರಗಳಿಗೆ ದಾರಿ ಮಾಡಿಕೊಡುತ್ತದೆ.

ಅಕ್ಷತಾ ಅವರ ಕವಿತೆಗಳಲ್ಲಿ ಗುರುತಿಸಬಹುದಾದ ಇನ್ನೊಂದು ಗುಣ, ಅವರಿಗಿರುವ ಕಾವ್ಯ ಶಿಲ್ಪದ ಕಾಳಜಿ. ಪ್ರತಿ ಪದ, ಸಾಲು ತನ್ನನ್ನು ತಾನು ಅರ್ಥಚ್ಯುತಿಗೊಳಸದೆ ಮೆಟ್ಟಲು ಮೆಟ್ಟಲಾಗಿ ಕಟ್ಟಿಕೊಳ್ಳುವ ಕ್ರಮ ಬದ್ಧತೆಯಿದೆ. ಇದಕ್ಕೆ ಬೆವರು ಹನಿಗಳು ಎಂಬ ನೂರಮೂವತ್ತೆಂಟು ಸಾಲಿನ ದೀರ್ಘಕವಿತೆ ಈ ಮಾತಿಗೆ ಉತ್ತಮ ಉದಾಹರಣೆ. ಎಲ್ಲಿಯೂ ಕುಂದಿಲ್ಲದೆ ನೇಯ್ಗೆ ಪಡೆಯುವ ಇಂಥ ದೊಡ್ಡ ಕವಿತೆಯನ್ನು ನಿಭಾಯಿಸುವುದು ತುಂಬ ಕಷ್ಟಕರ. ಆದರೆ ಅಕ್ಷತಾ ಆಗುವಾಗಿಸಿದ್ದಾರೆ.

ಬೆವರು ಹನಿಗಳು-ಕವಿತೆ ಕುರಿತು ಇನ್ನಿಷ್ಟು ಹೇಳುವುದಾದರೆ (ಇದೇ ರೀತಿಯ ಬೆವರು ಎಂದರೆ ಎಂಬ ಕವಿತೆ ಕೂಡ ಇದೆ) ಶ್ರಮದ ಪ್ರತೀಕವಾಗುವ ಬೆವರು ಇಲ್ಲಿ ಅನೇಕ ಆಯಾಮ ಪಡೆದಿದೆ. ಅವನಿದ್ದ/ ಅವಳ ಹಣೆಯಲ್ಲಿ/ ಪೋಣಿಸಿದ ಮುತ್ತು ಇರಬಹುದು. ಅಂತೆಯೇ, ಸಗಣಿ ಬಳೆಯುವ ಕೈ/ ತುಂಬಿದ ಬಳೆಗಳ ನಡುವೆ/ ಅವಿತ ತೇವ-ಇವೆಲ್ಲ ಸಾಲುಗಳಲ್ಲಿ ಹಲವು ಜೀವ ಚಿತ್ರಗಳನ್ನು ಕಟ್ಟಿಕೊಟ್ಟಿದ್ದಾರೆ.

ಭತ್ತ ಬಸಿಯುವ ಹೊತ್ತು

ರೈತನ ಹಸ್ತದಂಚಿನಲಿ

ಜನಿಸಿದ ಜಲ

ಪ್ರೀತಿ ಪ್ರೇಮ ವಿರಹಗಳ ಹಳಹಳಿಕೆ ದಾಟಿ, ಸಮಾಜಮುಖಿ ವಿಸ್ತಾರಕ್ಕೆ ಚಾಚಿಕೊಳ್ಳುವ ಇಂತಹ ಕವಿತೆಗಳನ್ನು ಹೆಚ್ಚೆಚ್ಚು ಅಕ್ಷತಾ ಬರೆಯಲಿ ಎಂದು ಆಶಿಸುವೆ. `ನಾನು ದೀಪ ಹಚ್ಚಬೇಕೆಂದಿದ್ದೆ’ ಸಂಕಲನದ ಶೀರ್ಷಿಕೆಯೇ ಇಲ್ಲಿಯ ಕವಿತೆಗಳ ಬಗ್ಗೆ ಸಾಕಷ್ಟು ಮಾತನಾಡುತ್ತದೆ. ಹೆಣ್ಣಿನ ಬದುಕಿನ ಸ್ಥಿತ್ಯಂತರದ ತಳಮಳಗಳು ವಿಷಾದದಿಂದ ಮಾರ್ದನಿಸಿವೆ.

ಅಸ್ಮಿತೆ ಹೋರಾಟ

ಸೌಹಾರ್ದತೆಗಾಗಿ ಎಲ್ಲ ಎಂದೆ

ಕೈಯಲ್ಲಿ ಬಂದೂಕು ಹಿಡಿದು

ನಾವು ಜೊತೆಗಿದ್ದೇವೆ ಎಂದರು

ನೇರ ವಧಾಸ್ಥಾನ ತಲುಪಿಬಿಟ್ಟೆ

ಸಂಕಲನದ ಮುಖ್ಯ ಕವಿತೆಯ ಕೊನೆಯ ಸಾಲುಗಳಿವು. ಯಾವ ಅಬ್ಬರ ಆಕ್ರೋಶವಿಲ್ಲದೆ ಹೆಣ್ಣಸ್ಮಿತೆ ಅಳುಕಿಸುವ ರಿವಾಜನ್ನು ತಣ್ಣನೆಯ ನೋವಿನಲ್ಲಿ ಹೇಳಿದ್ದಾರೆ. ಜೀವನ್ಯಾಯದ ಕಡೆ ತುಡಿಯುವ ಈ ಸಾಲುಗಳು ಗಂಡು ಆಕ್ರಮಣ ಚಿತ್ರಿಸುವಂತಹವು. ಆಗಬೇಕಾದದ್ದು, ಆಗುವುದು, ಆಗದಿರುವುದು ಹಾಗೂ ಆಗಿಬಿಟ್ಟದ್ದನ್ನು ಬಹಳ ದಟ್ಟವಾಗಿ ಅಕ್ಷತಾ ಕಟ್ಟಿಕೊಟ್ಟಿದ್ದಾರೆ. ಅಕ್ಷತಾರ ಎಲ್ಲ ಕವಿತೆಗಳಲ್ಲಿ ಹಳವಂಡ ಮನಸ್ಸಿನ ಹಲವು ಹಾದಿಗಳಿವೆ. ಒಂಟಿತನ, ವಿರಹ, ತಹತಹಿಕಿಗಳು ಜೀಕು ಪಡೆದಿವೆ. ಒಟ್ಟು ಕಾವ್ಯದ ಹಿಂದೆ ವಿಷಾದವೇ ಸ್ಥಾಯಿಯಾಗಿದೆ.

ಉರಿದ ನಂತರವೂ ಕೆಂಡವಾಗದ ನೀನು

ಕರಗಿದ ಮೇಲೂ ಹರಿದು ಹೋಗದ ನಾನು

(ಎಷ್ಟೋ ದಿನಗಳವರೆಗೆ…)

ದ್ವಾರಕೆಗೆ ಹೋದವನು

ಬೇಗ ಮರಳುವೆ ಎಂದವನು

ನನ್ನಾತ್ಮ ನೀ ಪಿಸುಗುಟ್ಟಿದವನು

(ಗೋಕುಲದ ಮುರ್ಕಿಯಲಿ)

ನಿನ್ನ ನಕ್ಷತ್ರಲೋಕ

ಕೈ ಸುಟ್ಟುಕೊಂಡಿದೆ

ಅಹಮ್ಮಿನ ಶಾಖಕ್ಕೆ

ಕೆಂಡ ಉದುರಿಸುತ್ತಿದ್ದಾನೆ

(ಕಾಲದ ಬಣ್ಣ)

ಮೇಲಿನ ಮೂರು ಸ್ಯಾಂಪಲ್ಲುಗಳು ನೂರು ಮಾತುಗಳಾಗಿ ಹೇಳಬಹುದು. ಕೊರಗುವುದನ್ನು ನಿಲ್ಲಿಸಬೇಕು/ ಆಗದಿದ್ದರೆ/ ಕಾಯುವುದನ್ನು ಕಲಿಯಬೇಕು/ ಅದೂ ಆಗದಿದ್ದರೆ/ ಬಿಡುವಿಲ್ಲದೆ ಕೆಲಸ ಮಾಡಬೇಕು-ಹೀಗೆ `ನೀ ನನ್ನ ಮಿಂಚುಹುಳ’ ಕವಿತೆಯಲ್ಲಿ ಹೇಳುತ್ತಾರೆ. ಮಣ್ಣಿನ ಮೌನ ಮುರಿಯಲು/ ಮಣ್ಣೊಳಗಾಡಬೇಕು/ ಮೊಳಕೆಯೊಡೆಯುವುದನ್ನು ನೋಡಬೇಕು-ಇವು `ಕೊಳಲದನಿ’ ಕವಿತೆಯಲ್ಲಿನ ಅಳಲು. ತನ್ನೊಳಗೆ ತಾನು ಮಾತನಾಡಿ ಸಮಾಧಾನಿಸಿ, ಸಾಂತ್ವನಿಸುವ ಸರಳ ನುಡಿಗಟ್ಟುಗಳು ಚಿಂತನೆಗೆ ಹಚ್ಚುತ್ತವೆ. ಮಧುರಚೆನ್ನರ ಬರುವುದೇನುಂಟು ಬರುವ  ಕಾಲಕೆ ಬರುವುದು… ನೆನಪಾಗುವುದು. 

ಇಷ್ಟೆಲ್ಲ ಹೇಳಿದ ನಂತರ, ಕಾವ್ಯದ ಜೊತೆಗೆ ದೇಶ ಕಾಲದ ಬಗ್ಗೆ ಬರೆಯದಿದ್ದರೆ ವಾಸ್ತವಕ್ಕೆ ವಿಮುಖವಾಗುವ ಗಿಲ್ಟ್ ನನ್ನನ್ನು ಕಾಡಬಹುದು. ಸಾಹಿತ್ಯ ಸಂಸ್ಕೃತಿ, ಜೀವನ ವಿಧಾನ, ನಮ್ಮ ಇತಿಹಾಸ ಪರಂಪರೆಗಳೆಲ್ಲ ದಿಕ್ಕೆಟ್ಟು ಅರ್ಥ ಕಳೆದುಕೊಂಡಿರುವಂತಹ ಕೊರೋನಾದ ಅಕಾಲದಲ್ಲಿ ನಮ್ಮ ಸೃಜನಶೀಲತೆ ಮತ್ತೊಂದು ದಾರಿಯನ್ನು ಕಂಡುಕೊಳ್ಳಬಹುದೆ? ಎಂಬ ಜಿಜ್ಞಾಸೆ ನನ್ನದು. ಕರೋನಾ ನಂತರದ ಜಗತ್ತು ಈ ಮುಂಚಿನ ಜಗತ್ತಿನಂತಿರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವಿದೆ. ನಮ್ಮೆಲ್ಲ ಲಲಿತ ಕಲೆಗಳ ಮಾರ್ಗ ವಿಧಾನವೂ ಬದಲಾಗಲಿದೆ ಎಂಬ ಸಣ್ಣ ಸೂಚನೆಯೂ ಇಲ್ಲಿದೆ.  ಜೀವ ಜಗತ್ತು ಇದ್ದರೆ ನಮ್ಮ ಕಲೆ ಸಾಹಿತ್ಯ ಎಲ್ಲವೂ. ಅಕ್ಷತಾ ಕಾವ್ಯದ ಓದಿನ ಹಿನ್ನೆಲೆಯಲ್ಲಿ ನಾವಷ್ಟು ಚಿಂತಿಸೋಣ.

ಡಾ. ಎಚ್. ಎಲ್. ಪುಷ್ಪ

  ಈ ಕವಿತೆಗಳು ವಿಶೇಷ ಎನಿಸುವುದು ಏಕಕಾಲದಲ್ಲಿ ಅವು ಒಳಗೊಳ್ಳುವ ಸ್ವಕೇಂದ್ರ, ಹಾಗೂ ತನಗೆ ಅಂಟಿಕೊಂಡ `ಅವನೆಂಬ’ ಸಾಂಗತ್ಯದ ಕೇಂದ್ರಗಳಿಂದಾಗಿ.  ಬೇಂದ್ರೆಯವರು ಹೇಳುವಂತಹ ಸಖ್ಯದ ಆಖ್ಯಾನವಿದು. ಸಖ್ಯದ ಆಖ್ಯಾನಗಳು ಲೀಲೆಯಾಗಿ, ಆಟವಾಗಿ ಹಲವು ಕವಿತೆಗಳಲ್ಲಿ ಮುಂದುವರೆಯುತ್ತವೆ. ಈ ಒಲವಾಗಿ ನಲಿವಾಗಿ, ಕಾಡುವಿಕೆ, ಅರ್ಪಣೆಯ ಭಾವದಲ್ಲಿ, ಬಂಧನಕ್ಕೆ ಒಳಗಾಗುವ ತವಕದಲ್ಲಿಯೇ ಸಾರ್ಥಕತೆ ಕಂಡುಕೊಂಡಿದೆ.

`ಮುಳುಗಡೆ ಮತ್ತು ಅಣೆಕಟ್ಟು ಒಡೆಯುವಿಕೆ’ ಇವರ ಕವಿತೆಗಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತವೆ. ಚಲನೆಯೇ ಮೂಲವಾದ ಜಲ, ಇಲ್ಲಿ ಖೈದಿಯಾಗುವುದು ಒಂದು ರೀತಿಯ ಹೊಸ ಪ್ರತಿಮೆಯಾಗಿದೆ. ಈ ಚಲನೆಯನ್ನು ಹಿಡಿದಿಡುವ ಜಡತೆಯನ್ನು, ಅಣೆಕಟ್ಟಿನಲ್ಲಿ ಬಂಧಿಯಾಗಿ ಪ್ರಶ್ನಿಸುವುದನ್ನು ಏಕಕಾಲಕ್ಕೆ ಕವಿತೆ ಹಿಡಿದಿಡುತ್ತದೆ. ಬೇರೆ ಬೇರೆಯದಾದ ಸಾಮಾಜಿಕ ಅಸಮಾನತೆಯ ಬಗ್ಗೆ, ವಿಷಮ ವಾತಾವರಣದ ಬಗ್ಗೆ, ಧಾರ್ಮಿಕ ಸೌಹಾರ್ದತೆಯ ಬಗ್ಗೆ, ಮರ್ಯಾದೆ ಹತ್ಯೆಯ ಬಗ್ಗೆ ಇಲ್ಲಿನ ಕವಿತೆಗಳು ಮಾತನಾಡುತ್ತವೆ.

ಹೊರನೋಟಕ್ಕೆ ಪ್ರೇಮವೇ ಪ್ರಧಾನ ಕಾಡುವಿಕೆಯಾಗಿ ಕಂಡರೂ ಆಂತರ್ಯದಲ್ಲಿ ಬದುಕಿನ ಎಲ್ಲ ಮಗ್ಗುಲಗಳಿಗೆ ಮಿಡಿಯುವ ಕವಿತೆಗಳಾಗಿ ಇವು ತೋರುತ್ತವೆ. ಕಾವ್ಯ ಸುಲಭದ ಉದ್ಯಮವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಅಕ್ಷತಾ ಅವರ ಕವಿತೆಗಳು `ಕಾವ್ಯ ಉದ್ಯಮವಲ್ಲ. ಸಂಕಟಗಳಂʼತೀವ್ರ ಅಭಿವ್ಯಕ್ತಿಯ ಮಾಧ್ಯಮ’ ಎಂದು ಹೇಳ ಹೊರಟಿರುವುದು ಖುಷಿ ತರುವ ಸಂಗತಿಯಾಗಿದೆ.

                                 

‍ಲೇಖಕರು Avadhi

September 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: