ನಾನು ಕಾಡ ನಡುವಿನ ಪಯಣಕ್ಕೆ ಬಂದವನು. ಮನುಷ್ಯರ ನಾಡಿನಲ್ಲಿ ನನಗೆ ಜಾಗ ಇಲ್ಲ..

10

ಕೊಳತ್ತೋಡಿನಲ್ಲಿ ಅತ್ಯಂತ ರುಚಿಯಾಗಿದ್ದ ಪರೋಟಾ, ಸಾಂಬಾರ್ ಮುಂತಾದವನ್ನು ಸ್ವಾಮಿಗಳ ಕೃಪೆಯಿಂದ ಹೊಟ್ಟೆಗಿಳಿಸಿದ ನಂತರ ನಮ್ಮ ಪಯಣ ಮುಂದುವರೆಯಿತು. ಮುಂದೆ ಉದ್ದಕ್ಕೂ ಬಯಲು; ಹಾಸಿಗೆ ಹಾಸಿದಂತೆ ನೇರಾನೇರ ರಸ್ತೆ. ಹಾತೂರು, ಕೈಕೇರಿ ಬಾಳೆಲೆ, ದೇವಮಚ್ಚಿ, ಮಜ್ಜಿಗೆ ಹಳ್ಳ, ಕಾರೆಕಂಡಿ, ಅಲ್ಲೂರು, ಮುದ್ದೇನಹಳ್ಳಿ, ಕೊಕ್ಕರೆ ಹೊಸಳ್ಳಿ, ಹರೀನಹಳ್ಳಿ, ಮುತ್ತುರಾಯನಹೊಸಳ್ಳಿ, ಹೈರಿಗೆ, ಹುಣಸೆಗಾಲ ಮುಂತಾದ ಹಳ್ಳಿಗಳನ್ನ ದಾಟಿಕೊಳ್ಳುತ್ತ ಸಾಗುತ್ತಿದ್ದೆವು. ಅಲ್ಲೆಲ್ಲೂ ಕಾಡುಗಳಿಲ್ಲ. ರಸ್ತೆ ಪಕ್ಕದಲ್ಲಿ, ಹೊಲದಲ್ಲಿ ಒಂದಿಷ್ಟು ಹುಣಸೆ ಮುಂತಾದ ಮರಗಳಷ್ಟೇ. ಅಕ್ಕಪಕ್ಕದಲ್ಲಿ ಹೊಲಗಳು. ತರಕಾರಿ, ಧನ್ಯದ ಸಸ್ಯಗಳನ್ನ ಬೆಳೆದಿದ್ದು ಕಾಣುತ್ತಿತ್ತು. ಹಸಿರು ಕಾಣುತ್ತಿದ್ದುದರಿಂದ ನೀರಿನ ಆಶ್ರಯ ಇರಬೇಕು ಅಂದುಕೊಂಡೆ.

ಬೆಳಗಿನಿಂದಲೂ ಹುಣಸೂರು ಎನ್ನುವ ಹೆಸರು ಕೇಳುವಾಗೆಲ್ಲ ಮನಸ್ಸಿನಲ್ಲಿ ಏನೋ ಒಂದು ವಿಷಯ ಹಾಗೇ ಬಂದು.ಹೀಗೇ ಹೋಗಿಬಿಡುತ್ತಿತ್ತು. ಅದನ್ನು ಗಪ್ಪನೆ ಹಿಡಿದುಕೊಳ್ಳಲಾಗಿರಲಿಲ್ಲ. ಸುತ್ತಲಿನ ಹೊಲಗಳನ್ನ ನೋಡುತ್ತ ಸಾಗುತ್ತಿರುವಂತೆಯೇ ರಸ್ತೆ ಪಕ್ಕದ ಮೈಲಿಕಲ್ಲಿನಲ್ಲಿ ‘ಕಲ್ಲಹಳ್ಳಿ’ ಎಂದು ಬರೆದಿರುವದು ಕಂಡಿತು. ತಟ್ಟನೆ ಮನಸ್ಸಿನಲ್ಲಿ ಆಟ ಆಡಿಸುತ್ತಿದ್ದ ವಿಷಯ ನೆನಪಿಗೆ ಬಂದಿತು. ತರಾತುರಿಯಲ್ಲಿ ಸ್ವಾಮಿಯವರ ಬಳಿ ‘ ಅಲ್ರೀ ಸ್ವಾಮಿ, ದೇವರಾಜ ಅರಸರ ಊರು ಹುಣಸೂರು ಸಮೀಪದ ಕಲ್ಲಳ್ಳಿ ಅಲ್ವಾ, ಮುಂದೆ ಬರೋ ಕಲ್ಲಳ್ಳಿ ಅದೇ ಇರಬೇಕು ಕಣ್ರೀ’ಎಂದೆ.

ಸ್ವಾಮಿಗೂ ಅಚ್ಚರಿಯಾಗಿತ್ತು. ‘ಹೌದಲ್ರೀ, ನಾನೂ ಮರೆತೇಬಿಟ್ಟಿದ್ದೆ. ಅರಸರ ಊರು ಇದೇ ಕಲ್ಲಳ್ಳಿನೇ ಎನ್ನುತ್ತಿರುವಂತೆ ಆ ಊರು ಎದುರಾಯ್ತು. ಅಕ್ಕಪಕ್ಕ ನೋಡುತ್ತಿದ್ದ ನನಗೆ ಎಡ ಭಾಗದಲ್ಲಿ ಒಂದು ಒಂದು ಕಮಾನು ಕಾಣಿಸಿತು. ಆ ಕಮಾನಿನ ಫಲಕದ ಮೆಲೆ ‘ಮಾಜಿ ಮುಖ್ಯಮಂತ್ರಿ ದೇವರಾಜ ಅರಸರ ಹುಟ್ಟೂರು ಕಲ್ಲಹಳ್ಳಿ’ ಅಂತಾ ದಪ್ಪ ಅಕ್ಷರದಲ್ಲಿ ಬರೆದಿತ್ತು. ಅದನ್ನು ನೋಡುತ್ತಿದ್ದಂತೇ ನನಗೆ ಭಾವೋದ್ವೇಗ. ‘ಸ್ವಾಮಿ, ಇದೇರಿ ದೇವರಾಜ ಅರಸರ ಊರು’ ಎಂದು ಅಕ್ಷರಶಃ ಕೂಗಿಬಿಟ್ಟೆ. ಸ್ವಾಮಿಯೂ ಜೀಪ್‍ನ್ನ ನಿಲ್ಲಿಸಿ ಮತ್ತೆ ವಾಪಸ್ ತಿರುಗಿಸಿದರು.

ಆ ಕಮಾನಿನ ಬುಡದಲ್ಲಿ ನಿಂತಾಗ ನನಗೆ ಮನಸ್ಸು ತುಂಬಿಬಂದಿತ್ತು. ಇಡೀ ದೇಶದಲ್ಲೇ ಕ್ರಾಂತಿಕಾರಕವಾದ ಕಾಯ್ದೆ ಮೂಲಕ ಬಡ ರೈತರ ಬದುಕಿಗೆ ಚೈತನ್ಯ ತುಂಬಿದ ಮಹಾನ್ ವ್ಯಕ್ತಿಯೊಬ್ಬನ ಹುಟ್ಟಿದ ಊರಿನಲ್ಲಿ ನಾನು ನಿಂತಿದ್ದೆ. ನನ್ನ ತಂದೆಯವರೂ ದೇವರಾಜ ಅರಸರು ತಂದ ಐತಿಹಾಸಿಕವಾದ ಭೂ ಸುಧಾರಣಾ ಕಾಯಿದೆಯಿಂದ ಸುಮಾರು 5 ಎಕರೆ ಹೊಲವನ್ನು ಕಳೆದುಕೊಂಡಿದ್ದು ನನಗೆ ಗೊತ್ತಿತ್ತು.

ಯಾವ ಆಕ್ಷೇಪವೂ ಇಲ್ಲದೇ ಆ ಜಮೀನನ್ನು ಸಾಗುವಳಿ ಮಾಡುತ್ತಿದ್ದ ನಮ್ಮೂರ ಪಕ್ಕದ ನಾಗಾ ನಾಯ್ಕ ಎನ್ನುವ ರೈತನಿಗೆ ಅದನ್ನು ಬಿಟ್ಟುಕೊಟ್ಟಿದ್ದರು.  ತಂದೆಯವರೇ ಖುದ್ದಾಗಿ ಹೋಗಿ ಲ್ಯಾಂಡ್ ಟ್ರಿಬೂನಲ್ ಸಮಿತಿಗೆ ಹೇಳಿಕೆ ಕೊಟ್ಟು ಬಂದದ್ದನ್ನ ಚಿಕ್ಕವನಾದ ನನಗೆ ಹೇಳಿದ ನೆನಪು ಈಗಲೂ ಇದೆ. ಆ ರೈತನೂ ಕೂಡ ಕೊನೆವರೆಗೂ ನಮ್ಮ ಕುಟುಂಬದ ಬಗ್ಗೆ ಪ್ರೀತಿ,ವಿಶ್ವಾಸ ತೋರಿಸುತ್ತಿದ್ದ.

ದೇವರಾಜ ಅರಸರ ಊರಿನಲ್ಲಿ ಸ್ವಲ್ಪಕಾಲ ನಿಂತು ನಂತರ ಜೀಪ್‍ನಲ್ಲಿ ಕೂತಿದ್ದರೂ ಅವರದ್ದೇ ನೆನಪು. ನಾನು ಒಮ್ಮೆ ಮಾತ್ರ ಅರಸು ಅವರನ್ನು ನೋಡಿದ್ದೆ. ಆಗ ನಾನು ಸಿದ್ದಾಪುರದ ಪ್ರೌಢಶಾಲೆಯ ಎಂಟನೆಯ ತರಗತಿಯಲ್ಲಿದ್ದೆ. ನಮ್ಮ ಶಾಲೆಯ ಎದುರಿನಲ್ಲಿ ವಿಶಾಲವಾದ ನೆಹರೂ ಮೈದಾನದಲ್ಲಿ ಅರಸು ಅವರ ಕಾರ್ಯಕ್ರಮವಿತ್ತು. ಈಗಿನಂತೆ ಶಾಮೀಯಾನಾ ಇಲ್ಲದ ಕಾರಣಕ್ಕೆ ಇಡೀ ಮೈದಾನಕ್ಕೆ ಅಡಕೆ ದಬ್ಬೆ, ಸೋಗೆ, ತಾಳೆ ಮಡಿಲುಗಳ ಚಪ್ಪರ ಹಾಕಿದ್ದರು.

ಅವತ್ತು ಇಡೀ ಮೈದಾನ ಏನಿಲ್ಲೆವೆಂದರೂ ಆರೆಂಟು ಸಾವಿರ ಜನರಿಂದ ತುಂಬಿಹೋಗಿತ್ತು. ಕುತೂಹಲದಿಂದ ಅವರು ನಿಂತು ಮಾತನಾಡುತ್ತಿದ್ದ ವೇದಿಕೆಯ ಬಳಿ ಹೋಗಿ ಅರಸುರನ್ನ ಹತ್ತಿರದಿಂದ ನೋಡಿದ್ದೆ. ಆ ಕಾರ್ಯಕ್ರಮ ಆಯೋಜಿಸಿದ್ದವರು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ. ಅವೆಲ್ಲ ನೆನಪಾಗುತ್ತಿತ್ತು. ಸ್ವಾಮಿಯವರಿಗೂ ನನ್ನ ಲಹರಿ ಅರ್ಥವಾಗಿತ್ತೇನೋ? ಜೀಪ್ ಹೊರಡಿಸದೇ ಸುಮ್ಮನೆ ಕೂತಿದ್ದರು.

ಅಷ್ಟರಲ್ಲಿ ಓರ್ವ ವೃದ್ದರು ನಮ್ಮ ಜೀಪ್ ಸಮೀಪ ಬಂದು ಯಾರು, ಏನು? ಅಂತೆಲ್ಲ ವಿಚಾರಿಸಿದರು. ನಮ್ಮ ಪ್ರವರ ಹೇಳಿ, ಅರಸು ಅವರ ಬಗ್ಗೆ ವಿಚಾರಿಸಿದೆ. ‘ಅಂತಾ ಗಂಡಸು ಇನ್ನು ಹುಟ್ಟೋದಿಲ್ರೀ, ಎಂತಾ ಮನುಷ್ಯ ಆತ. ಅವರೊಟ್ಟಿಗೆ ನಾನು ಹೊಲ ಉಳ್ದೋನು; ಬೆಳಿಗ್ಗೆ ಗಳೆ ಕಟ್ಟಿದ್ರೇ ಮಧ್ಯಾಹ್ನ ನಿಲ್ಲಿಸೋರು. ದೈತ್ಯ ಮನುಷ್ಯ ಕಂಡ್ರೀ. ಹಾಂಗೇ ಉಣ್ಣೋದು. ಕಲ್ಲನಾದ್ರೂ ಉಂಡು ಅರಗಿಸ್ಕೋಬೇಕು ಅನ್ನೋರು. ಎರಡು ಮಂದಿ ಊಟ ಒಬ್ರೇ ಮಾಡೋರು. ಹಾಂಗೇ ಪೈಲ್ವಾನ್ ಕೂಡ.ಕುಸ್ತಿ ಅಂದ್ರೇ ಬಲೇ ಇಷ್ಟ’ ಎನ್ನುತ್ತಿದ್ದ ಆ ವೃದ್ದರ ದನಿ ಯಾಕೋ ಮೆತ್ತಗಾಯಿತು. ನೆನಪು ಅವರನ್ನು ತುಂಬಿಕೊಂಡಿರಬೇಕು.

ಹೆಗಲ ಶಲ್ಯದಿಂದ ಕಣ್ಣೊರೆಸಿಕೊಂಡರು. ‘ಅವರು ತೀರಿಕೊಂಡಾಗ ಈ ರಸ್ತೆಯಿದೆಯಲ್ಲ’ಎಂದು ಉದ್ದಕ್ಕೂ ಕೈ ತೋರಿಸಿ ನಾಲ್ಕಾರು ಕಿಲೋಮೀಟರ್ ಎರಡೂ ಪಕ್ಕ ವಾಹನಗಳೇ ನಿಂತಿದ್ವು. ಅವರೆಷ್ಟು ಹೆಸರು ಮಾಡಿದ್ರೀ. ಅಂಥಾ ಗಂಡುಮಗ ಇನ್ನು ಹುಟ್ಟೋಕೆ ಸಾಧ್ಯಾ ಇಲ್ರೀ’ಎಂದು ಸರಿದುಹೋದರು. ಮತ್ತೆ ಮಾತನಾಡಲು ಅವರಿಗೆ ಸಾಧ್ಯವಾಗಲಿಲ್ಲೇನೋ? ಅರಸು ಬಗ್ಗೆ ಕೇಳಿ,ಓದಿ ಮಾತ್ರ ಗೊತ್ತಿರುª, ಜೀವನದಲ್ಲಿ ಮೊದಲಬಾರಿಗೆ ಅವರ ಹುಟ್ಟಿದೂರಲ್ಲಿ ನಿಂತ ನನ್ನಂಥ ಚಿಕ್ಕವನಿಗೆ ಅವರು ಅಂತ:ಸ್ಪೂರ್ತಿ ಹುಟ್ಟಿಸುತ್ತಿರುವಾಗ ಆ ಯಜಮಾನರಿಗೆ ಏನನ್ನಿಸುತ್ತಿರಬೇಡ.

ಮುಂದಿನ ದಾರಿಯಲ್ಲಿ ಸ್ವಾಮಿಯವರಿಂದ ಅರಸು ಬಗ್ಗೆ, ಅವರ ಜೊತೆಗಿದ್ದ ಹುಚ್ಚಮಾಸ್ತಿ ಗೌಡರ ಬಗ್ಗೆ, ಆ ಕಾಲದ ರಾಜಕಾರಣದ ಬಗ್ಗೆ ಒಂದಿಷ್ಟು ಅಮೂಲ್ಯವಾದ ಮಾಹಿತಿಗಳನ್ನು ಕೇಳಿಸಿಕೊಂಡೆ.

ಮುಂದೆ ಬಂದದ್ದು ಹುಣಸೂರು. ನಾವು ನಾಗರಹೊಳೆ ಕಾಡನ್ನು ದಾಟಿ, ಹೆಗ್ಗಡದೇವನ ಕೋಟೆಗೆ ಹೋಗಬೇಕಾದರೆ ಅಲ್ಲಿನ ಅರಣ್ಯ ಇಲಾಖೆಗೆ ಹೋಗಿ ವಿಷಯ ತಿಳಿಸಬೇಕಿತ್ತು. ಸ್ವಾಮಿಯವರ ಬಳಿ ಇದ್ದ ಅನುಮತಿ ಪತ್ರದ ಪ್ರಕಾರ ನಾವು ಸೀದಾ ಹೋಗಬಹುದಿತ್ತಾದರೂ ಆ ವ್ಯಾಪ್ತಿಯ ಅಧಿಕಾರಿಗಳಿಗೆ ತಿಳಿಸಿ ಹೋಗುವದು ಸೂಕ್ತ ಎಂದು ಡಿ.ಎಪ್.ಓ.ಕಚೇರಿಯ ಬಳಿ ಹೊದೆವು. ಆಗಲೇ ಮಧ್ಯಾಹ್ನ ಒಂದು ಗಂಟೆಯಾಗುತ್ತ ಬಂದಿತ್ತು. ಸುಡು, ಸುಡು ಬಿಸಿಲು. ಅಷ್ಟರ ಮೊದಲೇ ಸ್ವಾಮಿ ಸಂಬಂಧಿಸಿದ ಅಧಿಕಾರಿಗಳನ್ನೆಲ್ಲ ಮೊಬೈಲ್‍ನಲ್ಲೇ ಸಂಪರ್ಕಿಸುತ್ತಿದ್ದರು. ಆದರೆ ಅವರ್ಯಾರಿಂದಲೂ ಸ್ಪಷ್ಟವಾದ ಉತ್ತರ ಸಿಗುತ್ತಿರಲಿಲ್ಲ. ಹಾಗಾಗಿ ನೇರವಾಗಿ ಭೇಟಿಯಾಗುವದು ಅನಿವಾರ್ಯವಾಗಿತ್ತು.

ಕಚೇರಿಯಲ್ಲಿದ್ದ ಡಿ.ಎಪ್.ಓ. ಗೌರವದಿಂದಲೇ ಮಾತನಾಡಿಸಿ, ಸ್ವಾಮಿಯವರ ಬಳಿಯಿದ್ದ ಅನುಮತಿ ಪತ್ರ ನೋಡಿ ‘ವನ್ಯಜೀವಿ ವಿಭಾಗ ತನ್ನ ವ್ಯಾಪ್ತಿಗೆ ಬರುವದಿಲ್ಲವೆಂತಲೂ, ಅದಕ್ಕೆ ಬೇರೊಬ್ಬ ಅಧಿಕಾರಿಯಿರುವರೆಂತಲೂ’ ಹೇಳಿದರು. ಅಲ್ಲದೇ ಅವರಿಗೆ ಫೋನ್ ಮಾಡಿ, ಅವರಿಲ್ಲದ ಕಾರಣ ಅವರ ಕಚೇರಿಯ ವ್ಯವಸ್ಥಾಪಕರ ಬಳಿಯೂ ಮಾತನಾಡಿದರು. ಅವರ ಪ್ರಕಾರ ನಮ್ಮ ಬಳಿಯಿದ್ದ ಅನುಮತಿ ಪತ್ರದಲ್ಲಿ ನಾಗರಹೊಳೆ ಪ್ರದೇಶದಲ್ಲಿ ಸೈಕಲ್ ಮೂಲಕ ಹೋಗಲು ಅನುಮತಿ ನೀಡಿಲ್ಲ ಎನ್ನುವದಾಗಿತ್ತು. ಏನಾದರಾಗಲೀ ಎಂದು ವನ್ಯಜೀವಿ ವಿಭಾಗದ ವ್ಯವಸ್ಥಾಪಕರ ಬಳಿ ಹೋದೆವು. ಅವರೂ ಕೆಲಸದ ಒತ್ತಡದಲ್ಲಿದ್ದರು. ಸ್ವಾಮಿಯವರ ಬಳಿ’ ನಿಮಗೆ ಅನುಮತಿ ಪತ್ರ ಕೊಟ್ಟವರ ಬಳಿ ಮಾತಾಡಿ’ಎಂದರು. ಸ್ವಾಮಿ ತಮಗೆ ಅನುಮತಿ ಕೊಟ್ಟ ಬೆಂಗಳೂರಿನ ಅರಣ್ಯ ಇಲಾಖೆಯ ಮುಖ್ಯಸ್ಥರಿಗೆ  ಕರೆ ಮಾಡಿ ಇಲ್ಲಿನ ಸಂದಿಗ್ಧ ವಿವರಿಸಿದರು.

ವ್ಯವಸ್ಥಾಪಕರಿಗೆ ಅವರ ಜೊತೆ ಮಾತನಾಡಿಸಲು ಹೋದರೆ ಇವರಿಗೆ ಅದಾಗಲೇ ಬೇರೊಬ್ಬರ ಕರೆ ಬಂದು ಮಾತನಾಡುತ್ತಿದ್ದರು. ವನ್ಯಜೀವಿ ವಿಭಾಗದ ಮುಖ್ಯಾಧಿಕಾರಿ ಬಳಿ ಮಾತನಾಡುವ ಅಂದರೆ ಅವರು ಮೀಟಿಂಗ್ ಎಂದು ಮೈಸೂರಿಗೆ ಹೋಗಿದ್ದರಂತೆ. ತಾಸುಗಟ್ಟಲೆ ಚರ್ಚಿಸಿ, ಒದ್ದಾಡಿದರೂ ‘ನಿಮಗೆ ನಾಗರಹೊಳೆ ನೋಡಲು ನಮ್ಮ ಇಲಾಖೆಯ ವಾಹನ ವ್ಯವಸ್ಥೆ ಮಾಡಬಹುದು. ಸೈಕಲ್‍ನಲ್ಲಿ ದಾಟಿಕೊಂಡು ಹೋಗಲು ಅನುಮತಿ ಸಿಗೋದು ಕಷ್ಟ. ಯಾಕೆಂದರೆ ರೂಲ್ಸೇ ಹಾಗಿದೆ’ ಎನ್ನುವ ಉತ್ತರವೇ ಬರುತ್ತಿತ್ತು. ಸ್ವಾಮಿಯವರ ಬಳಿಯಿದ್ದ ಅನುಮತಿ ಪತ್ರದಲ್ಲೂ ಸ್ಪಷ್ಟವಾಗಿ ಅದರ ಉಲ್ಲೇಖವೂ ಇರಲಿಲ್ಲ.

ಈ ಬ್ಯೂರೋಕ್ರಸಿಯ ಒಂದಿಷ್ಟು ಕರಾಳ ಅನುಭವ ನಮಗಾಗಿತ್ತು. ‘ಸುಮ್ಮನೆ ಮುಚ್ಚಿಕೊಂಡ ವಾಹನದಲ್ಲಿ ಕುಳಿತು ಕಾಡು, ಅಲ್ಲಿನ ಪ್ರಾಣಿಗಳನ್ನೇನು ನೋಡೋದ್ರಿ’ ಎಂದು ಸ್ವಾಮಿ ಬೇಸರದಿಂದ ಹೇಳಿದರು.ಎಷ್ಟೋ ಸಾರಿ ಭೇಟಿಯಾಗಿ, ಇಡೀ ಯಾನದ ಕುರಿತಾದ ಮಾಹಿತಿ ನೀಡಿ ಮನವೊಲಿಸಿ, ಅನುಮತಿ ಪಡೆಯಲು ಹರಸಾಹಸ ಮಾಡಿದ್ದರೂ ಸಣ್ಣದೊಂದು ಐಬನ್ನಿಟ್ಟು ತಮ್ಮ ಬುದ್ದಿ ತೋರಿಸಿದ್ದರು. ‘ಹಾಳಾಗೋಗ್ಲಿ, ಬರ್ರೀ, ಸೀದಾ ಮೈಸೂರಿಗೆ ಹೋಗೋಣ’ ಅಂತಾ ನಮ್ಮ ರೂಟನ್ನು ಹೆಗ್ಗಡದೇವನಕೋಟೆ ಬಿಟ್ಟು ಮೈಸೂರು ಕಡೆ ತಿರುಗಿಸಿದ್ದೆವು.

ಎಲ್ಲರಲ್ಲೂ ತುಂಬಿಕೊಂಡಿದ್ದ ಉತ್ಸಾಹ ಬತ್ತಿಹೋಗಿತ್ತು. ಕಳೆದ ಹದಿನೇಳು ದಿನಗಳಿಂದ ನಿರಂತರವಾಗಿ ಸೈಕಲ್ ತುಳಿಯುತ್ತ ಬಂದ ಸವಾರರಿಗೆ ಈ ಯಾನ ಆದಷ್ಟು ಬೇಗ ಮುಗಿದರೆ ಸಾಕು ಅನ್ನಿಸಿರಲಿಕ್ಕೂ ಸಾಕು; ಯಾಕೆಂದರೆ ಏಕತಾನತೆ ಬಹುಬೇಗ ಬೇಸರ ಹುಟ್ಟಿಸುತ್ತದೆ. ಇನ್ನೊಂದು ದಿನ ಕಳೆದರೆ ಸೈಕಲ್ ಯಾನದ ಕೊನೆ ಎನ್ನುವದು ಖುಷಿ ತರುವಷ್ಟೇ ನಂತರದಲ್ಲಿ ವ್ಯಾಕುಲ ಹುಟ್ಟಿಸುತ್ತದೆ ಎಂದು ಪ್ರಾಯಷಃ ಅವರು ಭಾವಿಸಿರಲಾರರು.

ಹುಣಸೂರಿನಿಂದ ಮೈಸುರಿಗೆ ಹೋಗುವ ಹೆದ್ದಾರಿಯಲ್ಲಿ ಹಾಸನ ಕಡೆಯಿಂದ ಬರುವ ಹೆದ್ದಾರಿಯ ಕ್ರಾಸಿನ ಒಂದು ಹೊಟೆಲ್‍ನಲ್ಲಿ ಮಧ್ಯಾಹ್ನ ಮೂರರ ಸುಮಾರಿಗೆ ಊಟ ಮುಗಿಸಿ ಹೊರಟೆವು. ಅಂತಿಮ ಗೆರೆ ಹತ್ತಿರ ಬರುತ್ತಿದ್ದಂತೆ ಒಂದು ರೀತಿಯ ಆಲಸ್ಯ ಮೈಯಲ್ಲಿ, ಮನಸ್ಸಿನಲ್ಲಿ ಮೂಡತೊಡಗಿತ್ತು. ಇವತ್ತು ಮೈಸೂರು, ನಾಳೆ ತಪ್ಪಿದರೆ ನಾಡಿದ್ದು ಬೆಂಗಳೂರು, ಸುಧೀರ್ಘವಾದ ಪಯಣ ಕೊನೆಯಾಗಿಬಿಡುತ್ತದೆ. ಜಗಜ್ಜಾಹೀರಾಗದಿದ್ದರೂ ಚರಿತ್ರೆಯ ದಾಖಲೆಗಳಲ್ಲಿ ಸೇರಿಕೊಮಡುಬಿಡುತ್ತದೆ. ಇಷ್ಟು ದಿನ ಒಟ್ಟಾಗಿದ್ದವರೆಲ್ಲ ನಾಳೆಯಿಂದ ಎಲ್ಲೆಲ್ಲೋ? ವಿದಾಯದ ಕ್ಷಣ ಹತ್ತಿರವಾದಂತೆಲ್ಲ ಭಾವುಕ ಮನಸ್ಸಿನವರಿಗೆ ತಟ್ಟುವ ವೇದನೆ ಅಪಾರ.

ಮೈಸೂರು ನಗರ ಪ್ರವೇಶಿಸಿ, ಸೈಕಲ್‍ನವರು ಬರಲಿ ಎಂದು ಸ್ವಾಮಿ ಒಂದು ಪಕ್ಕ ಜೀಪ್ ನಿಲ್ಲಿಸಿದರು. ಯಾಕೋ, ಏನೋ ನಮ್ಮಿಬ್ಬರ ನಡುವಿನ ಸಂಭಾಷಣೆಯೂ ಕಡಿಮೆಯಾಗಿತ್ತು. ನಾನು ಸುಮ್ಮನೆ ಎತ್ತಲೋ ನೋಡುತ್ತಿದ್ದೆ. ತುಸು ಮುಂದೆ, ಮನೆಯೊಂದರ ಕಂಪೌಂಡ ಮೇಲೆ ಪುಟ್ಟ ಹಕ್ಕಿಯೊಂದು ಕೂತಿರುವದು ಕಂಡಿತು. ಕಣ್ಣು ಕಿರಿದುಗೊಳಿಸಿ ನೋಡಿದೆ. ವಾಹ್! ಕಿಂಗ್‍ಫಿಶರ್ ಅಲ್ಲಿ ಕೂತಿತ್ತು.

ಸ್ವಾಮಿ ಅದರತ್ತ ತೋರಿಸಿ ಹೇಳಿದೆ. ಅದನ್ನು ನೋಡಿದವರೂ ‘ಅದರ ಫೊಟೊ ತೊಗೊಳ್ರೀ’ ಎಂದರು. ನನ್ನದು ಸಾಧಾರಣ ಡಿಜಿಟಲ್ ಕ್ಯಾಮರಾ. ಅಷ್ಟೊಂದು ದೂರದ ದೃಶ್ಯವನ್ನು ಗ್ರಹಿಸಲಾರದು, ಆದರೂ ಕ್ಲಿಕ್ಕಿಸಿದೆ. ಸ್ವಾಮಿ ನಿಧಾನವಾಗಿ ಆ ಹಕ್ಕಿಯ ಗಮನಕ್ಕೆ ಬಾರದಂತೆ ಜೀಪನ್ನು ಮುಂದೆ ತಂದರು. ನಾನು ಅದರ ಮೇಲೆ ಫೋಕಸ್ ಮಾಡುತ್ತ ಕಾಯುತ್ತಿದ್ದೆ. ಸಾಕಷ್ಟು ಹತ್ತಿರದಲ್ಲಿ ಬಂದ ನಂತರ ಹತ್ತಾರು ಕ್ಲಿಕ್ ಮಾಡಿದೆ. ನಂತರ ಅದರ ಸೌಂದರ್ಯವನ್ನು ಕಣ್ತುಂಬಿಕೊಂಡೆ. ಸ್ವಲ್ಪ ಹೊತ್ತಿನಲ್ಲೇ ಅದು ಪುರ್ರ್ ಎಂದು ಹಾರಿಹೋಯ್ತು.

ನಾವು ಬಂದ ದಾರಿಯಲ್ಲಿ ಏಲ್ಲೂ ಕಾಣಸಿಗದ ಕಿಂಗ್‍ಫಿಶರ್ ಊಹೆಯನ್ನೂ ಮಾಡಲಾಗದ ನಗರದ ನಡುವೆ ಕಾಣಸಿಕ್ಕಿತ್ತು; ಅದೂ ಸೈಕಲ್ ಯಾನದ ಕೊನೆಯ ಹಂತದ ಸಂದರ್ಭದಲ್ಲಿ. ಒಂದು ರೀತಿಯಲ್ಲಿ ನಮಗೆ ಶುಭವಿದಾಯ ಹೇಳುವ ರೀತಿಯಲ್ಲಿ.

ಅಂದಿನ ವಾಸ್ತವ್ಯ ಮೈಸೂರಿನ ‘ಒಡನಾಡಿ’ಯಲ್ಲಿ. ಸ್ಟಾನ್ಲಿ ಮತ್ತು ಪರಮೇಶ್ ಅವರ ಕಠಿಣ ಪರಿಶ್ರಮ, ಸಾಮಾಜಿಕ ಕಾಳಜಿ, ಬದ್ದತೆಗಳ ಪ್ರತೀಕವಾಗಿದ್ದು, ನೂರಾರು ಅನಾಥರಿಗೆ, ಅಸಹಾಯಕರಿಗೆ ಬದುಕನ್ನು ಕಟ್ಟಿಕೊಡಲು ಶ್ರಮಿಸುತ್ತಿರುವ ಸಂಸ್ಥೆ ಅದು. ಸ್ಟಾನ್ಲಿ ಮತ್ತು ಪರಮೇಶ್ ಬಗ್ಗೆ, ಒಡನಾಡಿ ಬಗ್ಗೆ ಕೇಳಿದ್ದೇ ಹೊರತು ನೋಡಿರಲಿಲ್ಲ. ಸ್ವಾಮಿಯವರ ಮೂಲಕ ಅದೂ ಸಾಧ್ಯವಾಯಿತು. ಶಾಲೆ, ಮಕ್ಕಳ ಹಾಸ್ಟೆಲ್‍ಗಳು ಯಾವ ಆಧುನಿಕ ವಸತಿಶಾಲೆಗಳಿಗೂ ಕಡಿಮೆಯಿಲ್ಲದ್ದನ್ನ ಅಲ್ಲಿ ನೋಡಿದೆ. ಒಂದು ಅಪರೂಪದ, ಅದ್ವೀತಿಯವಾದ ಕಾಂiÀರ್i ಅಲ್ಲಿ ನಡೆಯುತ್ತಿರುವದು ಜಗತ್ತಿನ ಭವಿಷ್ಯದ ಬಗ್ಗೆ ಆಶಾದಾಯಕತೆಯನ್ನು ಇಟ್ಟುಕೊಳ್ಳಲು ನೆರವಾಯಿತು.

ರಾತ್ರಿ ಕಳೆದು ಬೆಳಗಾಯಿತು. ಅವತ್ತು ಯಾನಕ್ಕೆ ರಜೆ ಘೋಷಣೆಯಾಯಿತು. ಮೈಸೂರನ್ನು ಸುತ್ತುವವರಿಗೆ ಅನುಮತಿ ದೊರೆಯಿತು. ಸೈಕಲ್ ಸವಾರರೆಲ್ಲ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೋಗುವ, ಪರಿಚಯದವರನ್ನ, ನೆಂಟರನ್ನ ಭೇಟಿಯಾಗುವ ಪ್ಲಾನ್ ಹಾಕುತ್ತಿದ್ದರು. ಒಂದಿಬ್ಬರು ಚಾಮುಂಡಿಬೆಟ್ಟ ಹತ್ತುವ, ಅರಮನೆ ನೋಡುವ ಯೋಜನೆ ರೂಪಿಸುತ್ತಿದ್ದರು. ಅವರೆಲ್ಲ ಇಂದಿಡೀ ಮೈಸೂರು ಸುತ್ತಿ ಮರುದಿನ ಬೆಳಿಗ್ಗೆ ಹೊರಟು, ಸಂಜೆ ಬೆಂಗಳೂರು ತಲುಪಿ ಸೈಕಲ್ ಪಯಣಕ್ಕೆ ಮುಕ್ತಾಯ ಹಾಡಲಿದ್ದರು.

ನಾನು ನಿಧಾನಕ್ಕೆ ನನ್ನ ಬ್ಯಾಗಗಳನ್ನು ಸಿದ್ಧಗೊಳಿಸಿದೆ. ಅವರೆಲ್ಲರನ್ನ ಬಿಟ್ಟುಹೋಗುವದು ನನಗೂ ಖೇದವೆನ್ನಿಸುತ್ತಿತ್ತು. ಇಂದಲ್ಲದಿದ್ದರೂ ನಾಳೆಯಾದರೂ ವಿದಾಯ ಹೇಳಲೇಬೇಕಲ್ಲ.  ಕಳೆದ ಮೂರು ದಿನಗಳ ಕಾಲ ನನ್ನ ಪ್ರೀತಿಯ ಪಶ್ಚಿಮಘಟ್ಟದಲ್ಲಿ, ಕಾಡ ನಡುವಿನಲ್ಲಿ ಕಳೆದ ಕ್ಷಣಗಳು ಮತ್ತೆ ಮತ್ತೆ ಮನಸ್ಸಿನಲ್ಲಿ ಮಗುಚಿಕೊಳ್ಳತೊಡಗಿದ್ದವು. ಆ ನೆನಪುಗಳನ್ನು ಹೊತ್ತು ಆ ಶಹರದಲ್ಲಿ ಅಲೆಯುವ ಮನಸ್ಸು ನನಗಿರಲಿಲ್ಲ. ಬದುಕಿನಲ್ಲಿ ಎಲ್ಲೋ ಒಮ್ಮೆ ಒದಗಬಹುದಾದ ಅವಿಸ್ಮರಣೀಯ ಸಂದರ್ಭವನ್ನು ಪಡೆದುಕೊಂಡ ನಾನು ಅಷ್ಟು ಸುಲಭವಾಗಿ ಅದನ್ನು ಮಸುಕಾಗಿಸಲು ಸಿದ್ಧನಿರಲಿಲ್ಲ. ಆ ಎಲ್ಲ ನೆನಪುಗಳು ನನ್ನೊಳಗೆ ಬೋರ್ಗರೆಯಬೇಕು, ಹೊರಳಿಕೊಳ್ಳಬೇಕು. ಆ ಮೂಲಕ ನಿರಂತರವಾಗಿ ನನ್ನ ಜೀವವಿರುವರೆಗೆ ನನ್ನ ಸ್ಮರಣೆಯಲ್ಲಿರಬೇಕು ಎನ್ನುವ ಅನ್ನಿಸಿಕೆ ಒಳಗಿತ್ತು.

‘ ಏನ್ರೀ, ಹೊರಟೇಬಿಟ್ರಾ, ಬೆಂಗ್ಳೂರವರೆಗೂ ಬರ್ತೀರಾ ಅಂದ್ಕೊಂಡಿದ್ದೆ. ಮಧ್ಯದಲ್ಲೇ ಕಳಚಿಕೊಳ್ತೀದೀರಾ’ ಅಂದರು. ‘ನಾನು ಕಾಡ ನಡುವಿನ ಪಯಣಕ್ಕೆ ಬಂದವನು. ಮನುಷ್ಯರ ನಾಡಿನಲ್ಲಿ ನನಗೆ ಜಾಗ ಇಲ್ಲ. ಮತ್ತು ನನಗೂ ಇಷ್ಟವಿಲ್ಲ’ ಎನ್ನಬೇಕೆಂದವನು ‘ಇಲ್ರೀ, ತುಂಬಾ ಕೆಲಸ ಇದೆ’ ಎಂದೆ. ಸ್ವಾಮಿಗೂ ಅದು ಗೊತ್ತಿತ್ತೇನೋ? ಸುಮ್ಮನೆ ಹಾಗೇ ಕೇಳಿದ್ದರು.

ನಾನು ಹೊರಟಾಗ ನನ್ನೊಂದಿಗೆ ಅಥವಾ ಅವರೊಂದಿಗೆ ನಾನಿದ್ದ, ಮೂರ್ನಾಲ್ಕು ಗೆಳೆಯರು ಹೊರಗಡೆ ತೆರಳಿದ್ದರು. ಸ್ವಾಮಿ, ಬಾಲ ಗಣೇಶ್, ರಜನಿ ನನ್ನನ್ನು ಬಸ್ ನಿಲ್ದಾಣದವರೆಗೆ ಬಿಟ್ಟರು. ನನ್ನೂರ ಕಡೆ ಹೋಗುವ ಬಸ್ ಹತ್ತಿ ಕೂತ ನನಗೆ ಊರು ತಲುಪಿದರೆ ಒಂದು ವೃತ್ತವನ್ನು ಮುಗಿಸಿದ ಹಾಗಾಗುತ್ತಲ್ಲ ಅನ್ನಿಸಿತು. ಎಲ್ಲಿಂದ ಹೊರಟಿದ್ದೇನೋ ಮತ್ತೆ ಅಲ್ಲಿಗೇ ಹೊರಟ ನಾನು ಮನಸ್ಸಿನಲ್ಲಿ ಹೊರಟ ಘಳಿಗೆಯಿಂದ ಈವರೆಗಿನ ಘಟನೆಗಳನ್ನು ಮೆಲುಕು ಹಾಕುತ್ತ ಕುಳಿತೆ. ಬಸ್ಸಿನಲ್ಲಿ ಮತ್ತೆ ಯಾರೂ, ಯಾವುದೂ ತಲೆ ತಿನ್ನಲಿದರಲಿ ಎಂದು ಕೋರಿಕೊಳ್ಳುತ್ತ ಮನಸ್ಸಿನ ಗುಹೆಯೊಳಕ್ಕೆ ಹೊಕ್ಕಿ ಕೂತೆ.

‍ಲೇಖಕರು avadhi

October 25, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  • Gangadhar Kolgi

   ಧನ್ಯವಾದ, ನೀವು ಖುಷಿ ಪಟ್ಟು ಓದಿದ್ದಕ್ಕೆ. ನಾನು ಮೋಹನ್ ಸರ್ ಗೆ ಧನ್ಯವಾದ ಹೇಳ್ತೀನಿ. ನನ್ನ ಅನುಭವಗಳನ್ನು ನಿಮ್ಮಂಥ ಹಲವರ ಜೊತೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಿದ್ದಕ್ಕೆ

   ಪ್ರತಿಕ್ರಿಯೆ
 1. Srikanth

  ಕಾಡಿನಲ್ಲೇ ಕೆಲಸ ಮಾಡುವುದರಿಂದ ಹೇಳುತ್ತಿದ್ದೇನೆ. ನಾಗರಹೊಳೆಯಂತಹ ಕಾಡಿನಲ್ಲಿ ಸೈಕಲ್ ತುಳಿದುಕೊಂಡು ಹೋಗುವುದು ನಿಜಕ್ಕೂ ಅಪಾಯಕಾರಿ. ನೀವು 9 ನೇ ಭಾಗದಲ್ಲಿ ವಿವರಿಸಿದ ಪ್ರಾಣಿ ಕೆಂದಳಿಲು ಅಥವಾ Indian Giant Squirrel. ಇದರ ಬಗ್ಗೆಯೇ ಏನೂ ಗೊತ್ತಿಲ್ಲದ ನಿಮಗೆ ಕಾಡಿನಲ್ಲಿರುವ ಇತರ ಪ್ರಾಣಿಗಳ ಬಗ್ಗೆ ಗೊತ್ತಿರುವುದು ಸಾಧ್ಯವಿಲ್ಲ. ಸುಮ್ಮನೆ ಎಲ್ಲದಕ್ಕೂ ಅರಣ್ಯ ಇಲಾಖೆಯನ್ನು ದೂರಬಾರದು. ನಿಮಗಷ್ಟೇ ಅಲ್ಲದೆ ಬೇರೆ ಯಾರಿಗೂ ನಾಗರಹೊಳೆಯಲ್ಲಿ ಸೈಕಲ್ ತುಳಿಯಲು ಅನುಮತಿ ಇಲ್ಲ. ನಾಗರಹೊಳೆಯಲ್ಲಿ ಲಾಂಟಾನಾ ಪೊದೆಗಳು ಹೆಚ್ಚಾಗಿದ್ದರೂ ಆ ಕಾಡು ಪೋಷಿಸುವ ಜೀವ ವೈವಿಧ್ಯತೆ ಹೆಚ್ಚು. ನಿಮ್ಮ ದೃಷ್ಠಿಯಲ್ಲಿ ಕಾಡು ಎನ್ನಿಸಿಕೊಳ್ಳವ ಪಶ್ಚಿಮಘಟ್ಟಗಳ ಅನೇಕ ಭಾಗಗಳು ಇಂದು ಅತಿಯಾದ ಮಾನವ ಹಸ್ತಕ್ಷೇಪದಿಂದ ಕ್ಷೀಣಿಸುತ್ತಿದೆ. ಅದನ್ನು ಉಳಿಸಲು ಮಾಡುವ ಪ್ರಯತ್ನಗಳಿಗೆ ರಾಜಕಾರಣಿಗಳಿಂದ, ಅವರಿಂದ ಪ್ರೇರಿತರಾದ ಸ್ಥಳೀಯ ಜನರಿಂದಲೇ ವಿರೋಧವಿದೆ. ಕೊನೆಯದಾಗಿ ಒಂದು ಮಾತು. ಕೆಂದಳಿಲನ್ನು ಈಗಲೂ ನಿಲ್ಕುಂದದ ಕಡೆ ನೋಡಬಹುದು. ಅದು ಶಿರಸಿಗೆ ಹತ್ತಿರವಾಗಿಯೇ ಇದೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: