ನಾನು ಕಂಡಂತೆ, ನನಗೆ ಕಂಡಷ್ಟು..

ಮಾಲತಿ ಶಶಿಧರ್

ಚಿತ್ರಗಳು: ನಿರ್ಮಲ

**

ಕಾವ್ಯವೇ ಹಾಗೆ ನೀವು ಕಂಡಂತೆ ರೂಪುಗೊಳ್ಳುತ್ತದೆ
ನೀವು ಕಂಡಷ್ಟು ವಿಶಾಲವಾಗುತ್ತದೆ.

ಕಾವ್ಯ ಬರೀ ಪೆನ್ನು ಪುಸ್ತಕಗಳಲ್ಲಿಲ್ಲ ಅದು ಪ್ರತಿ ವ್ಯಕ್ತಿಯ ಭಾವದಲ್ಲಿರುತ್ತದೆ. ಅವನು ಕಂಡಂತೆ ಆಕಾರ ಪಡೆಯುತ್ತದೆ ಮತ್ತು ಅವನು ಕಂಡಷ್ಟು ಕಾಣುತ್ತಲೇ ಇರುತ್ತದೆ. ಅದಕ್ಕೆ ಸಾಕ್ಷಿ ಅಕ್ಷರ ಬರೆಯಲೂ ಬಾರದ ಜನರಿಂದಲೇ ಹುಟ್ಟಿಕೊಂಡ ಜನಪದ ಸಾಹಿತ್ಯ ಮತ್ತು ಅದನ್ನು ನಮಗೆ ನೀಡಿದ ಚಾಮರಾಜನಗರ ಜಿಲ್ಲೆಯ ಪೂರ್ವಜರು.

ಯಾವ ಕವಿತೆಯೂ ಶ್ರೇಷ್ಠವಲ್ಲ ಯಾವ ಕವಿತೆಯೂ ಕನಿಷ್ಠವಲ್ಲ. ಪ್ರತಿ ಕವಿತೆಯೂ ವಿಶೇಷವೇ. ಅಂತಹ ಪ್ರತಿ ಶ್ರೇಷ್ಠ ಕವಿತೆಯೂ ಜನರೆಡೆಗೆ ತಲುಪಲಿ ಎನ್ನುವ ಅಭಿಲಾಷೆಯಿಂದ ಈ ಸುಂದರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ರಂಗಮಂಡಲ ಬೆಂಗಳೂರು ಮತ್ತು ರಂಗವಾಹಿನಿ ಚಾಮರಾಜನಗರ ಇವರು ಆಯೋಜಿಸಿದ ‘ಕಾವ್ಯ ಸಂಸ್ಕೃತಿ ಯಾನ’ ದ ಘೋಷಣೆಯೇ ‘ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು, ಜನಸಾಮಾನ್ಯರ ದನಿಯಾಗಲಿ ಕಾವ್ಯ’.

ಜನರೆಡೆಗೆ ಕಾವ್ಯ-ಪ್ರಥಮ ಕವಿಗೋಷ್ಠಿ

ಪ್ರತಿ ಜಿಲ್ಲೆ ಹಾಗೂ ಹೊರನಾಡ ಕನ್ನಡ ಪ್ರದೇಶಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿ ತಿಂಗಳ ಮೂರನೇ ಭಾನುವಾರ ಕವಿಗೋಷ್ಠಿ ಆಯೋಜಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಕಾರ್ಯಕ್ರಮ ಅಂದುಕೊಂಡಂತೆಯೇ ಯಶಸ್ವಿಯಾಯಿತು. ಜನಪದ ಕಾವ್ಯವೇ ಇಂದಿನ ಕಾರ್ಯಕ್ರಮದ ಕೇಂದ್ರಬಿಂದುವೆಂದರೆ ತಪ್ಪಾಗಲಾರದು. ಕಾರ್ಯಕ್ರಮದ ಆರಂಭ ಮತ್ತು ಅಂತ್ಯಗಳೆರಡರಲ್ಲೂ ಮಲೆ ಮಹದೇಶ್ವರಸ್ವಾಮಿ, ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿಯ ಗೀತೆಗಳದ್ದೇ ಕಾರುಬಾರು. ಕಾರ್ಯಕ್ರಮದುದ್ದಕ್ಕೂ ನೀಲಗಾರರು ಹಾಡಿದ ಜನಪದ ಹಾಡುಗಳು ಜನಪದ ಕಲೆಗಳ ತವರೂರಿನ ಕಾವ್ಯ ಸಂಪತ್ತಿಗೆ ಸಾಕ್ಷಿಯಾದವು.

ಕಾರ್ಯಕ್ರಮದ ಉದ್ಘಾಟನೆಯನ್ನು ಅತಿಥಿಗಳಿಂದ ನೀಲಗಾರರ ಜೋಳಿಗೆಗೆ ರಾಗಿ ಮತ್ತು ಉಪಧಾನ್ಯಗಳನ್ನು ಭಿಕ್ಷೆ ನೀಡುವ ಮೂಲಕ ಮಾಡಿದ್ದು ವಿಶೇಷ ಮತ್ತು ವಿಭಿನ್ನ.

ಹಿಂದುಳಿದ ಜಿಲ್ಲೆ ಎಂಬ ಅಪವಾದವನ್ನ ಮೆಟ್ಟಿ ನಿಂತ ಮಂಟೇಸ್ವಾಮಿ ಸಿದ್ದಪ್ಪಾಜಿ ಗೀತೆಗಳು ಜಿಲ್ಲೆಯ ಸಿರಿತನವನ್ನ , ಶ್ರೀಮಂತಿಕೆಯನ್ನ ಉಪಸ್ಥಿತರಿದ್ದ ಎಲ್ಲರಿಗೂ ಮತ್ತೊಮ್ಮೆ ಪರಿಚಯಿಸಿತು.

ಕಾರ್ಯಕ್ರಮದ ಉದ್ಘಾಟಕರಾದ ಎಲ್ ಏನ್ ಮುಕುಂದರಾಜುರವರು ಮಾತನಾಡುತ್ತಾ “ಕವಿತೆಯೆಂದರೆ ಪ್ರಜಾಪ್ರಭುತ್ವ, ಕವಿತೆಯೆಂದರೆ ಸಂವಿಧಾನ, ಕವಿತೆಯೆಂದರೆ ಸೌಹಾರ್ದತೆ” ಎಂಬುದನ್ನ ನೆರೆದಿದ್ದ ಯುವಕವಿಗಳಿಗೆ ತಿಳಿಸಿಕೊಟ್ಟರು.

*ಗುರುವಿನ ಗುಲಾಮನಾಗುವುದಲ್ಲ ಗುರುವಿನ ಸರಿಸಮನವಾಗುವ ತನಕ ದೊರೆಯದಣ್ಣ ಮುಕುತಿ” ಎಂದು ಹೇಳಿದ ಮಾತು ಗುರುಪೂರ್ಣಿಮೆಯಾದ ಇಂದು ಹೆಚ್ಚು ವಿಶೇಷತೆ ಪಡೆದುಕೊಂಡಿತ್ತು.

ಕಾರ್ಯಕ್ರಮವನ್ನ ಉದ್ದೇಶಿಸಿ ಚಾಮರಾಜನಗರದ ರಂಗಕರ್ಮಿಗಳಾದ ಕೆ ವೆಂಕಟರಾಜುರವರು ಮಾತನಾಡಿದರು. ಡಾ ಬಿ ಆರ್ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರಾದ ವೆಂಕಟರಮಣಸ್ವಾಮಿ(ಪಾಪು) ರವರು ಕಾರ್ಯಕ್ರಮವನ್ನು ಕುರಿತು ಮಾತನಾಡಿದರು. ಕವಿಗಳಾದ ಅನಿಲ್ ಕುಮಾರ್ ಹೊಸೂರು ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಸಂದೇಶ ವಾಚನ ಮಾಡಿದರು.

ಇಡೀ ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಹಿರಿಯ ಸಾಹಿತಿಗಳು, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಮೂಡ್ನಾಕೂಡು ಚಿನ್ನಸ್ವಾಮಿಯವರು ಅಧ್ಯಕ್ಷೀಯ ಭಾಷಣ ಮಾಡುತ್ತಾ “ಕಾವ್ಯವೆಂಬುದು ಒಂದು ಧರ್ಮ ಇಡೀ ಮನುಕುಲವೇ ಈ ಧರ್ಮಕ್ಕೆ ಧರ್ಮಾಂತರವಾಗಬೇಕು ಆಗಷ್ಟೇ ಮನುಷ್ಯ ಎಲ್ಲಾ ಧರ್ಮಗಳಿಂದ ತಪ್ಪಿಸಿಕೊಳ್ಳಬಹುದು“ ಎಂಬ ಟಿ ಎಸ್ ಏಲಿಯಟ್ ರವರ ಸಾಲುಗಳನ್ನು ಮೆಲುಕು ಹಾಕುತ್ತಾ ಸತ್ಯ ಮತ್ತು ಸೌಹಾರ್ದ ಅಭಿವ್ಯಕ್ತಿಯೇ ಕಾವ್ಯ ಎಂಬುದನ್ನೂ ನಗರದ ಕವಿಗಳ ಗಮನಕ್ಕೆ ತಂದರು.

ಕವಿಗೋಷ್ಟಿಯಲ್ಲಿ ಐವತ್ತಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದು ಕವಿಗೋಷ್ಠಿಯಲ್ಲಿ ಬಹುತೇಕ ಬಂಡಾಯದ ಕವಿತೆಗಳು, ದಲಿತ ಸಾಹಿತ್ಯ ಕವಿತೆಗಳು, ಚಾಮರಾಜನಗರ ದೇಸಿಯ ಕಾವ್ಯವೇ ಹೊರಬಂದವು.

ನಂತರದ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಂಗೀತಾ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ ಕಪ್ಪಣ್ಣನವರು “ಮಲೆ ಮಹದೇಶ್ವರ , ಮಂಟೇಸ್ವಾಮಿ,ಸಿದ್ದಪ್ಪಾಜಿ, ಸಂಚಿಹೊನ್ನಮ್ಮ,ಮುಪ್ಪಿನ ಷಡಕ್ಷರಿ, ಜಿ ಪಿ ರಾಜರತ್ನಂ, ಸಂಸ ಈ ಕಾಲಮಾನದ ಸಾಹಿತ್ಯ ಕಂಡ ಗಡಿಜಿಲ್ಲೆ ಚಾಮರಾಜನಗರ“ ಎಂಬುದನ್ನು ತಿಳಿಸಿದರು.
ಜಿಲ್ಲೆಯ ಜನಪದ ಸಾಹಿತ್ಯದ ಬಗ್ಗೆ ಹೆಚ್ಚು ಚರ್ಚೆ ಮತ್ತು ಅವುಗಳ ಮಹತ್ವ ದೇಶದಾದ್ಯಂತ ಪಸರಿಸದೆ ಇರಲು ಕಾರಣಗಳನ್ನು ಸಹ ಸಂವಾದದಲ್ಲಿ ಚರ್ಚಿಸಲಾಯಿತು.
ಮಹಿಳಾ ಕವಿಗಳು ಕವಿಗೋಷ್ಠಿ ಸಂವಾದದಲ್ಲಿ ಭಾಗವಹಿಸಿದ್ದು ವಿಶೇಷ. ಡಾ.ರಾಜಕುಮಾರ್ ರವರೂ ಸಹ ಸಂವಾದದ ವಿಷಯವಾದದ್ದು ಹೆಮ್ಮೆಯ ವಿಷಯ.

ಕಾರ್ಯಕ್ರಮದ ಸಂಚಾಲಕರಾದ ಮಲ್ಲಿಕಾರ್ಜುನ ಮಹಾಮನೆ, ಸಿ ಎಂ ನರಸಿಂಹಮೂರ್ತಿ ಮತ್ತು ಸ್ವಾಮಿ ಪೊನ್ನಾಚಿ ಇವರ ಶ್ರಮಕ್ಕೆ ಸಿಕ್ಕ ಪ್ರತಿಫಲವೇ ಇಂದಿನ ಕಾರ್ಯಕ್ರಮದ ಯಶಸ್ಸು ಅಂದರೆ ತಪ್ಪಾಗಲಾರದು.

‍ಲೇಖಕರು avadhi

July 22, 2024

ನಿಮಗೆ ಇವೂ ಇಷ್ಟವಾಗಬಹುದು…

‘ವೀರಲೋಕ’ದಿಂದ ಉತ್ತರಪರ್ವ

‘ವೀರಲೋಕ’ದಿಂದ ಉತ್ತರಪರ್ವ

ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ....

ಬೆಂಬಿಡದ ದಾಹ

ಬೆಂಬಿಡದ ದಾಹ

** ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು,...

ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This