ನಾನು ಎಲ್ಲೆ ಹೋದರೂ ಆ ನೆನಪುಗಳ ಮಡಿಲನ್ನು ಬಿಟ್ಟು ಬದುಕಲಾರೆ..

ಪೂರ್ಣಿಮಾ ಹೆಗಡೆ

**

ಆ ನಾಲ್ಕು ಜನರ ಕೈಗಳು ನನ್ನ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸುತ್ತಿವೆ, ಚೀರಬೇಕು ಎಂದರೆ ಧ್ವನಿಯೇ ಬರುತ್ತಿಲ್ಲ, ಆ ಕೈಗಳನ್ನು ತೆಗೆದು ಹಾಕೋಣವೆಂದರೆ ನನ್ನ ಶಕ್ತಿಯನ್ನೆಲ್ಲ ಅವರಲ್ಲೇ ಒಬ್ಬರು ಹೀರುತ್ತಿರುವಂತೆ ಭಾಸವಾಗುತ್ತಿದೆ. ಏನೂ ಮಾಡಲಾಗದ ಅಸಹಾಯಕ ಸ್ಥಿತಿ. ಅಚ್ಚರಿಯೆಂದರೆ ನಾಲ್ಕು ಜನರ ಮುಖದಲ್ಲಿ ಮಗುವಿನ ಮುಗ್ಧತೆ ಬೆಳದಿಂಗಳಂತೆ ಹರಡಿತ್ತು. ಆದರೆ ಅವರೆಲ್ಲರ ಆ ತಣ್ಣನೆಯ ನಗು ಹೃದಯದಲ್ಲಿ ಭಯವನ್ನು ಹುಟ್ಟಿಸುತ್ತಿತ್ತು. ಕ್ರೌರ್ಯವನ್ನು ಎಲ್ಲೆಡೆ ಚೆಲ್ಲಾಡಲು ಬರುತ್ತಿರುವಂತೆ ಅನಿಸುತ್ತಿತ್ತು. ಸಹಾಯಕ್ಕಾಗಿ ಯಾರಾದರೂ ಬರುವರೋ ಎಂದು ನೋಡಿದರೆ ಯಾರಿದ್ದಾರೆ, ದೂರದೂರಕ್ಕೂ ಆ ರಾತ್ರಿ ಕತ್ತಲೆಯನ್ನು ಹೊದ್ದು ಮಲಗಿದೆ. ಕೊನೆಗೂ ಯಾರೋ ಬಾಗಿಲ ಬಳಿ ಬಂದಂತೆ, ಬಾಗಿಲು ತೆರೆದಂತೆ ಸದ್ದಾಯಿತು. ಯಾರು ಎಂದು ಬಾಗಿಲ ಬಳಿ ನೋಡಿದರೆ ಮಗ. ಅಯ್ಯೊ ಇವರೆನಾದರೂ ಮಗನನ್ನು ನೋಡಿ ಅವನನ್ನು ಹಿಡಿದುಕೊಂಡುಬಿಟ್ಟರೆ ಎಂಬ ಭಯದಿಂದ ಇದ್ದ ಬಲವನ್ನೆಲ್ಲ ಉಪಯೋಗಿಸಿ ಆ ನಾಲ್ಕು ಜನರನ್ನು ತಳ್ಳಿದಾಗ ಆ ಮೂಲೆಗೆ ಹೋಗಿ ಬಿದ್ದರು. ಇನ್ನೇನು ನಾನು ಎದ್ದು ಹೋಗಬೇಕು ಅನ್ನುವಷ್ಟರಲ್ಲಿ ಅವರೆಲ್ಲ ಗಹಗಹಿಸುತ್ತಾ ಮಗನ ಬಳಿ ಸಾಗುತ್ತಿದ್ದರು. ಗಗನ ಎಂದು ಚೀರುತ್ತಾ ಎದ್ದ ಕುಳಿತರೆ ಸುತ್ತಲೂ ಕತ್ತಲು. ಸಾವರಿಸಿಕೊಂಡು ಸುತ್ತಲೂ ನೋಡಿದಾಗ ಮಂಚದ ಮೇಲಿರುವುದು ಗಮನಕ್ಕೆ ಬಂತು. “ಓ ಎಂಥಹ ಭಯಂಕರ ಕನಸು!” ಎಂದು ನನ್ನಷ್ಟಕ್ಕೆ ನಾನೆ ಗುನುಗಿಕೊಂಡು ಮತ್ತೆ ಮಲುಗಲು ಅನುವಾಗಿದ್ದೇನೊ ಹೌದು.

ಮಧ್ಯರಾತ್ರಿಯ ಸಮಯ. ಭೂಮಿಯೇ ಬಾಯಿ ತೆರೆಯಿತೋ ಎಂಬಂತಹ ಗುಡುಗಿನ ಸದ್ದಿಗೆ ಬೆಚ್ಚಿ ಮತ್ತೆ ಎದ್ದು ಕುಳಿತೆ. ತೆರೆದೆ ಇದ್ದ ಕಿಟಕಿಯಿಂದ ಸುಯ್ಯ ಎಂದು ಬರುತ್ತಿದ್ದ ಗಾಳಿ ವಿಚಿತ್ರವಾದ ಧ್ವನಿಯೊಂದಿಗೆ ಮಳೆ ನೀರನ್ನು ತಂದು ಸಿಂಪಡಿಸುತ್ತಿತ್ತು. ಸುತ್ತಲೂ ಅಮಾವಾಸ್ಯೆಯ ಕರಿಗತ್ತಲೆ. ಮಿಂಚಿನ ಬೆಳಕಿನಲ್ಲಿ ಕಾಣುವ ಒಂದೊಂದು ವಸ್ತುವೂ ವಿಚಿತ್ರವಾದ ಆಕಾರ ಹೊಂದಿ ವಿಕಾರವಾಗಿ ಕಾಣುತ್ತಿತ್ತು. ರಾಮಪ್ಪನನ್ನುಕೂಗೋಣವೆಂದರೆ ಕೆಳಗಿನ ಕೋಣೆಯಲ್ಲಿ ಮಲಗಿದ ಆತನಿಗೆ ಕೇಳುವುದೂ ಇಲ್ಲ. ಪಾಪ ವಯಸ್ಸಾಯಿತು, ಅವನನ್ನು ಏಕೆ ಎಬ್ಬಿಸುವುದು. ಲೈಟ್ ಹಾಕೋಣ ಎಂದರೆ ಮಳೆ ಗಾಳಿಯ ಆರ್ಭಟಕ್ಕೆ ವಿದ್ಯುತ್ ಸ್ತಬ್ಧವಾಗಿತ್ತು. ಮೊಬೈಲ್ ಕೂಡಾ ಚಾರ್ಜ್ ಇಲ್ಲದೇ ಮಕಾಡೆ ಮಲಗಿತ್ತು. ಕೆಳಗಿನ ರೂಮಿನ ಬಾಗಿಲು ಗಾಳಿಯ ಹೊಡೆತಕ್ಕೆ ಬಡಿದುಕೊಳ್ಳುವ ಸದ್ದು, ಅದರೊಂದಿಗೆ ಗಾಳಿಘಂಟೆಯ ಸದ್ದು ಚಿಕ್ಕಂದಿನಿಂದ ಕೇಳಿದ ಭೂತ ಪ್ರೇತಗಳ ಕಥೆಗಳ ನೆನಪನ್ನು ತರುತ್ತಿತ್ತು. ಪಕ್ಕದ ಮನೆಯ ಶಂಕರ ಚಿಕ್ಕಪ್ಪ ಅಂತಹ ಕಥೆಗಳನ್ನು ಹೇಳುವುದರಲ್ಲಿ ನಿಸ್ಸಿಮನಾಗಿದ್ದ. ಭಯವಾದರೂ ಒಬ್ಬರನೊಬ್ಬರು ತಬ್ಬಿ ಹಿಡಿದು ಅವನ ಕಥೆಯನ್ನು ಕಣ್ಣು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದೆವು. ಮನೆಯ ಹತ್ತಿರದ ಸಂಪಿಗೆ ಮರದಲ್ಲಿ ಸಂಜೆಯಾದೊಡನೆ ಬರುವ ಭೂತಗಳು ರಾತ್ರಿಯಾಗುತ್ತಿದ್ದಂತೆ ತಮ್ಮ ಚೇಷ್ಟೆಗಳನ್ನ ಪ್ರಾರಂಭಿಸುತ್ತಿದ್ದ ಕಥೆಗಳನ್ನು ಅವನ ಬಾಯಲ್ಲಿ ಕೇಳುವುದೇ ನಮಗೆಲ್ಲಾ ಒಂದು ರೀತಿಯ ಸೊಗಸಾಗಿತ್ತು.

ರಾತ್ರಿಯಾಗುತ್ತಿದ್ದಂತೆ ಯಾರದ್ದಾದರೂ ಮನೆಯ ಬಳಿ ತೆರಳಿ ಯಾವುದೋ ಹೆಸರು ಹೇಳಿ ಕೂಗುವುದು. ಆ ಹೆಸರಿನವರು “ಓ” ಎಂದರೆ ಅವರ ದೇಹದಲ್ಲಿ ಸೇರಿಬಿಡುವುದು. ಒಮ್ಮೆ ಹೀಗಾಯಿತಂತೆ, ಶಂಕರ ಚಿಕ್ಕಪ್ಪ ಒಂದು ಸಲ ಪೇಟೆಯಿಂದ ತಿರುಗಿ ಬರುವಾಗ ರಾತ್ರಿ ಆಗಿತ್ತಂತೆ. ಯಾರೋ ಆತನ ಹೆಸರು ಕರೆದಂತೆ ಕೇಳಿಸಿತಂತೆ, ಇದು ಭೂತ ಚೇಷ್ಟೆ ಎಂದು ಅರಿವಾಗಿ ವೇಗವಾಗಿ ಸೈಕಲ್ ತುಳಿಯಲು, ಹಿಂದೆ ಒಬ್ಬರು ಕುಳಿತಂತೆ ಭಾಸವಾಯಿತಂತೆ. ಆಗ ದೇವರ ಸ್ತುತಿ ಮಾಡಲು ಹಾರಿ ಹೋಗಿತ್ತಂತೆ. ಇನ್ನೊಮ್ಮೆ ಯಾರ ಬಳಿಯೋ ಎಲೆ ಅಡಿಕೆಗೆ ಬೇಡಿಕೆಯಿಟ್ಟ ಹೆಂಗಸೊಬ್ಬಳ ಕೈ ಎಲ್ಲಾ ತೂತಾಗಿತ್ತಂತೆ. ಒಂದೊಮ್ಮೆ ಭೂತದ ಕಥೆಗಳು ಖಾಲಿಯಾದರೆ ಸಂಪಿಗೆ ಮರದ ಅನತಿ ದೂರದಲ್ಲಿದ್ದ ಚೌಡಿಯ ಕಥೆಗಳು ಇದ್ದವು . ಚೌಡಿ ತೋಟಕ್ಕೆ ಬಂದ ಕಳ್ಳರನ್ನು ಓಡಿಸುತ್ತಿತ್ತಂತೆ, ಬೆಳಗಿನ ಜಾವ ಕಾಲಿನ ಒರೆಗಿನ ಕೂದಲನ್ನು ಬಿಟ್ಟುಕೊಂಡು ಎದುರು ಮನೆಯ ಕಟ್ಟೆಯ ಮೇಲೆ ಕೂತಿರುತ್ತಿತಂತೆ. ಹೀಗೆ ತರೇಹವಾರಿ ಕಥೆಗಳು ಅವನ ಬತ್ತಳಿಕೆಯಲ್ಲಿ ನಮ್ಮನ್ನು ರಂಜಿಸಲು ಇದ್ದವು. ನಮ್ಮ ಬಾಲ್ಯದ ಎಲ್ಲಾ ಕಥೆಗಳೂ ಸಂಪಿಗೆ ಮರದ ಸುತ್ತಲೇ ಗಿರಕಿ ಹೊಡೆಯುತ್ತಿದ್ದುದು ನೆನಪಾಗಿ ನನಗೂ ಸಂಪಿಗೆ ಮರಕ್ಕೂ ಎನೋ ಅವಿನಾಭಾವ
ಸಂಬಂಧವಿದೆ ಎಂದೆನಿಸಿತು. ನಾನು ಇಂದು ಇರುವ ಮನಸ್ಥಿತಿಗೆ ಏಕೊ ಆ ಎಲ್ಲಾ ಭಯ ಹುಟ್ಟಿಸುವ ಕಥೆಗಳೆ ಒಂದೊಂದಾಗಿ ನೆನಪಾಗಿ
ಕಾಡಲು ಪ್ರಾರಂಭಿಸಿದವು. ಸಂಜೆ ಅಷ್ಟೇ ಅದೇ ಸಂಪಿಗೆ ಮರದ ಹೂಗಳನ್ನು ತಂದು ಕೋಣೆಯಲ್ಲಿ ಇಟ್ಟಿದ್ದು ನೆನಪಾದಂತೆ ಅದರ ಘಮ ಮತ್ತಷ್ಟು ಕೋಣೆಯನ್ನು ಆವರಿಸಿದಂತಾಗಿ, ಯಾಕೋ ಹೋಗಿ ಕಿಡಕಿಯ ಬಾಗಿಲು ಹಾಕಲು ಭಯವಾಗತೊಡಗಿತು.

ಅವಳು ಇಂತದ್ದೇ ಒಂದು ಮಳೆಗಾಲದಲ್ಲಿ ಅಲ್ಲವೇ ಈ ಮನೆಗೆ ಕಾಲಿಟ್ಟಿದ್ದು. ಇಂತಹ ಕಥೆಗಳನ್ನು ಅವಳಿಗೆ ಹೇಳುವಾಗ ಕಣ್ಣರಳಿಸಿ ಕೇಳುತ್ತಿದ್ದಳು. ಅವಳಿದ್ದಾಗ ನಂದನವನದಂತಿತ್ತು ನಮ್ಮ ಮನೆ. ಒಂದು ಕಾಲದಲ್ಲಿ ಚಿಕ್ಕಜ್ಜ, ದೊಡ್ಡಜ್ಜ ಹೀಗೆ ದೊಡ್ಡ ಕುಟುಂಬವೇ ಬಾಳಿದ ದೊಡ್ಡ ಅರಮನೆಯಂತಹ ಮನೆ. ಎಷ್ಟೊಂದು ಜನ, ಎಷ್ಟೊಂದು ಆಳುಕಾಳುಗಳು. ನಮ್ಮ ಮಕ್ಕಳ ಸೈನ್ಯದಿಂದ ಅರ್ಧ ಮನೆ ತುಂಬಿತ್ತು. ಎಷ್ಟು ಬಗೆಯ ತಿಂಡಿ ತಿನಿಸುಗಳು. ಆ ಗುಡ್ಡ ಬೆಟ್ಟ,ಅಲ್ಲಿ ಸಿಗುತ್ತಿದ್ದ ತರೆವಾರಿ ಹಣ್ಣುಗಳು. ಬೇಸಿಗೆ ಬಂತೆಂದರೆ ನದಿ ಸ್ನಾನ.ವಿವಿಧ ಹಬ್ಬ, ಹರಿದಿನಗಳ ಸಂಭ್ರಮ,ಸಡಗರ . ಹಬ್ಬಗಳಲ್ಲಿ ಮಾತ್ರ ಮಾಡುತ್ತಿದ್ದ ವಿವಿಧ ಖಾದ್ಯಗಳು. ಆ ಖಾದ್ಯಗಳಿಗಾಗಿಯೇ ನಾವೆಲ್ಲ ಹಬ್ಬಗಳಿಗೆ ಕಾಯುತ್ತಿದ್ದದ್ದು. ಹೀಗೆ ನೂರಾರು ಭಾವ ಬಂಧಗಳ ತೊಟ್ಟಿಲಿನಲ್ಲಿ ನಮ್ಮ ಬಾಲ್ಯ ಈ ಊರು ಹಾಗೂ ಈ ಮನೆಯಲ್ಲಿ ಸಮೃದ್ಧವಾಗಿ ಕಳೆದಿತ್ತು. ಈಗಲೂ ಆ ನೆನಪುಗಳು ಬೆಚ್ಚನೆಯ ಜೋಲಿಯಂತೆ ತಬ್ಬಿ ಜೋಗುಳ ಹಾಡುತ್ತವೆ. ಒಂದು ಕಾಲದಲ್ಲಿ ಊರಿನಲ್ಲಿ ತುಂಬಾ ಪ್ರತಿಷ್ಠಿತ ಕುಟುಂಬ ನಮ್ಮ ಮನೆ. ಊರಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಜಾತ್ರೆ, ಹಬ್ಬ ಎಲ್ಲವೂ ಅಜ್ಜನ ಮಾತಿನಂತೆ ನಡೆಯುತ್ತಿತ್ತು. ಅಜ್ಜನ ನಂತರ ಅಪ್ಪ ಹೀಗೆ ಖುಷಿಯಿಂದ ಬಾಳಿ ಬೆಳಗಿದ ಕೂಡು ಕುಟುಂಬ . ಕಾಲ ಕ್ರಮೇಣ ಚಿಕ್ಕದಾಗುತ್ತಾ ಚಿಕ್ಕದಾಗುತ್ತಾ ಒಬ್ಬೊಬ್ಬರೇ ಬದುಕುವ ಪರಿಸ್ಥಿತಿ ನಿರ್ಮಾಣವಾಯಿತು. ಅಪ್ಪ ವ್ಯಾಪಾರ ವ್ಯವಹಾರ ಎಂದು ತಿರುಗಾಡುವಾಗ ಅಮ್ಮ ಇಲ್ಲಿ ಒಬ್ಬಳೇ ತನ್ನ ಇಳಿ ಸಂಜೆಯನ್ನು ಕಳೆಯುತ್ತಾ ಉಸಿರು ಚೆಲ್ಲಿದಳು. ಅವಳ ನಂತರ ವ್ಯಾಪಾರ ವ್ಯವಹಾರವನ್ನು ಬಿಟ್ಟು ಹೆಚ್ಚು ಅಂತರ್ಮುಖಿಯಾದ ಅಪ್ಪ ತುಂಬಾ ಸಮಯ ಅಮ್ಮನಿರದ ಮನೆಯಲ್ಲಿ ಜೀವಿಸಲು ಆಗದೆ ಜೀವನ ತೈದ ಮನೆಯ ಹೆಬ್ಬಾಗಿಲಿನಲ್ಲಿ ಜೀವ ಬಿಟ್ಟ.

ಈಗ ಬಹುಷಃ ನನ್ನ ಸರದಿ, ಒಂಟಿಯಾಗಿ ಜೀವನದ ಸಂಜೆಯ ಬಂಡಿಯನ್ನು ಎಳೆಯುವುದು ಬಹುಷಃ ಮನೆತನದ ಬಳುವಳಿ ನನಗೆ. ಗಾಯದ ಮೇಲೆ ಬರೆ ಏಳೆದಂತೆ ಒಂಟಿತನದ ನೋವಿಗೆ ಉಪ್ಪು ಸುರಿದಂತೆ ಈಗ ಈ ಸಮಸ್ಯೆ ಜೊತೆಯಾಗಿದೆ! ಏನೇನೋ ಯೋಚನೆಗಳು, ಕನಸೋ ನಿಜವೂ ಒಂದೂ ತಿಳಿಯದ ಸ್ಥಿತಿ. ನಿದ್ರೆಯೋ ಅಥವಾ ನಿದ್ರೆಯ ಮಂಪರೋ! ಗೊಂದಲಕ್ಕೀಡಾದ ಮನಸ್ಸಿನ ಕಾಟ ತಪ್ಪಿಸಿಕೊಂಡು ಈ ಎಲ್ಲ ಯೋಚನೆಗಳ ಹಾವಳಿಯಲ್ಲಿ ಯಾವಾಗ ನಿದ್ರಾ ದೇವಿಯ ತೆಕ್ಕೆ ಸೇರಿದೆನೋ ತಿಳಿಯದು. ಬೆಳಿಗ್ಗೆ ಅಡುಗೆಯ ರಾಮಪ್ಪ ಬಂದು ಎಬ್ಬಿಸಿದಾಗಲೇ ಎಚ್ಚರವಾದದ್ದು. ಆಗಲೇ ಟಣ್ ಟಣ್ ಎನ್ನುತ್ತಾ ಮೂರು ಮುಳ್ಳಿನಿಂದ ಕಾಲವನ್ನು ಹಿಂದೂಡುವ ಹಳೇ ಕಾಲದ ಗಡಿಯಾರ ಒಂಬತ್ತು ಬಾರಿ ಜಂಭದಿಂದ ಹೊಡೆದು ಕೊಳ್ಳುತ್ತಿತ್ತು. ಗಡಿಯಾರದ ಸದ್ದು ಕಿವಿಗೆ ಬಿದ್ದಾಗಲೇ ನೆನಪಾಗಿದ್ದು ಊರಲ್ಲಿ ಇದ್ದೇನೆ ನಾನು ಎಂದು. ನಿನ್ನೆ ಮಧ್ಯಾಹ್ನವೂ ಹೀಗೆ ಭೂರಿ ಭೋಜನ ಮಾಡಿ ಊರಲ್ಲಿ ಇದ್ದೇನೆ ಎಂಬ ಅಪ್ಯಾಯಮಾನ ಭಾವವನ್ನು ಹೊದ್ದು ಒಂದೆರಡು ಗಳಿಗೆ ಕಣ್ಣು ಮುಚ್ಚಿದ್ದಷ್ಟೆ, ಒಟ್ಟೊಟ್ಟಿಗೆ ಹತ್ತು ಹನ್ನೆರಡು ಇಮೇಲ್ ನೋಟಿಫಿಕೇಶನ್ಗಳ ಸದ್ದು ಆ ಸವಿ ನಿದ್ದೆಗೆ ನೀರನ್ನು ಸಿಂಪಡಿಸಿತ್ತು. ಒಮ್ಮೆಲೆ ವಿವಿಧ ಅಪರಿಚಿತ ಇಮೇಲ್ ಐಡಿಗಳಿಂದ ಬಂದಿರುವ ನೋಟಿಫಿಕೇಶನ್ಗಳನ್ನು ಅಲ್ಲೇ ಎಕ್ಸ್ಪಾಂಡ್ ಮಾಡಿ ಅರೆತೆರೆದ ಕಣ್ಣುಗಳಿಂದ ನೋಡಿದಾಗ ಎಲ್ಲಾ ಇಮೇಲ್ಗಳಲ್ಲೂ ಹ್ಯಾಕ್ಡ್ ಎನ್ನುವ ಶಬ್ದ ಕಂಡುಬಂದಾಗ ನಿದ್ದೆಯ ಅಮಲೆಲ್ಲ ಇಳಿದು ಒಂದು ಕ್ಷಣ ದಂಗಾಗಿದ್ದೆ.

ಎಲ್ಲಾ ಆಂಟಿವೈರಸ್ ಸಾಫ್ಟ್ವೇರ್ ಗಳು ಮೊಬೈಲ್ ನಲ್ಲಿ ಅಪ್ಡೇಟ್ ಆಗಿವೆ ಮತ್ತೇಕೆ ಯೋಚನೆ ಎಂದು ಸಾಫ್ಟ್ವೇರ್ ಕಂಪೆನಿಯಲ್ಲಿ ತನ್ನ ಅರ್ಧ ಜೀವನವನ್ನು ತೈದ ನನ್ನ ಮೆದುಳು ,ಮನಸ್ಸು ಬುದ್ದಿವಾದ ಹೇಳಿದಾಗ ಎನೋ ಸ್ಪಾಮ್ ಇರಬೇಕು, ಆಮೇಲೆ ನೋಡಿದರೆ ಆಯಿತು ಎಂದು ಮತ್ತೆ ಮಧ್ಯಾಹ್ನದ ಸುಖ ನಿದ್ದೆಯ ಬಾಗಿಲನ್ನು ತಟ್ಟಿದ್ದೆ . ಆ ಬಾಗಿಲು ಇನ್ನೇನು ತೆರೆಯುತ್ತದೆ ಅನ್ನುವಷ್ಟರಲ್ಲಿ ಮತ್ತೆ ನೋಟಿಫಿಕೇಶನ್ಗಳ ಕಹಳೆ ಮೊಳಗಿತ್ತು. ಯಾಕೋ ಆಗ ಅಲಕ್ಷ್ಯಮಾಡಲು ಮನಸ್ಸಾಗಲಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ನಿಧಾನವಾಗಿ ಎದ್ದು ಕುಳಿತು ಓದಿದಾಗಲೇ ತಿಳಿದಿದ್ದು ನನ್ನ ಖಾಸಗಿ ಲಾಪಟಾಪ್ ಮಾಲ್‌ವೇರ್‌ ಅಟ್ಯಾಕರ್ಸ್ ಅಟ್ಯಾಕ್ ಗೆ ಒಳಗಾಗಿದೆ ಹಾಗೂ ಅದರಲ್ಲಿ ಇರುವ ಎಲ್ಲಾ ಡೇಟಾ ಅವರ ಕೈ ಸೇರಿದೆ ಎಂಬ ಅರಗಿಸಿಕೊಳ್ಳಲಾಗದ ಸತ್ಯ. “ಅಯ್ಯೋ ಭಗವಂತಾ, ಈಗೇನು ಮಾಡುವುದು !” ಎಂಬ ಚಿತ್ಕಾರ ಹೆದರಿ ಒಣಗಿದ ಗಂಟಲಿನಿಂದ ಹೊರಬರಲು ಒದ್ದಾಡುತ್ತಿತ್ತು. ಕೈಕಾಲು ಅದರುವಂತಾಗಿತ್ತು. ಸ್ವಲ್ಪ ನೀರು ಕುಡಿದು ಸುಧಾರಿಸಿಕೊಂಡು ಮುಂದಿನ ಇಮೇಲ್ ನಲ್ಲಿ ಏನಿದೆ ಎಂದು ಭಯದಿಂದಲೇ ನೋಡಿದರೆ ಆ ಎಲ್ಲಾ ಡೇಟಾ ಕೈ ಸೇರಲು ಬಿಟ್ ಕಾಯಿನ್ ಬೇಡಿಕೆ ಇತ್ತು. ಒಂದೊಮ್ಮೆ ಆ ಬೇಡಿಕೆ ಈಡೆರಿಸದೇ ಹೋದರೆ ಎಲ್ಲಾ ಡೇಟಾ ನಾಶಮಾಡುತ್ತೇವೆ , ಎನ್ನುವ ಬೆದರಿಕೆಗೆ ಒಮ್ಮೆಲೇ ಮೈ ಬೆವರಿ ಉಸಿರು ಗಟ್ಟಿದಂತಾಗಿತ್ತು. ನಿಂತ ಭೂಮಿ ಕರುಣೆಯನ್ನು ಗಾಳಿಗೆ ತೂರಿ ಬಾಯಿಬಿಟ್ಟಂತೆ ಭಾಸವಾಗಿತ್ತು. ಏನಾಗುತ್ತಿದೆ ಎಂದು ತಿಳಿಯಲಾಗದಂಥಹ ಅಯೋಮಯ ಸ್ಥಿತಿ. ಈಗಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಎಲ್ಲ ಆಂಟಿವೈರಸ್ ನವೀಕರಣಗೊಂಡಿದ್ದರೂ ಹೇಗೆ ಈ ದಾಳಿಯಾಯಿತು ? ಏನಾಗಿದೆ, ಏನಾಗುತ್ತಿದೆ ಎಂಬ ಪ್ರಶ್ನೆಗಳು ದುಗುಡಗೊಂಡ ಮನಸ್ಸನ್ನು ಆವರಿಸಿ ಗೊಂದಲದ ಗೂಡನ್ನಾಗಿಸಿತ್ತು.

ಊರಿನಲ್ಲಿ ಎಲ್ಲಾ ಹಳೆಯ ಗೆಳೆಯರು ಸೇರಿ ಶಾಲೆಯ ಜೀರ್ಣೊದ್ಧಾರ ಮಾಡಬೇಕು ಎಂದು ನಿರ್ಧರಿಸಿ ಅದರ ನೀಲನಕಾಶೆ ಸಿದ್ಧಪಡಿಸುವ ಯೋಜನೆಯ ಅಂಗವಾಗಿ ಊರಿಗೆ ಬಂದ ನಾನು ಈಗ ಉಂಟಾದ ಸಮಸ್ಯೆಯಿಂದ ಆ ಕೆಲಸಕ್ಕೂ ಹೋಗಲಾಗದೇ ಇತ್ತ ಈ ಸಮಸ್ಯೆಗೆ ಪರಿಹಾರವೂ ದಕ್ಕದೇ ಚಡಪಡಿಸುವಂತಾಯಿತು. ಎಷ್ಟು ಯೋಚಿಸಿದರೂ ಉತ್ತರ ಮಾತ್ರ ಬಿಸಿಲುಗುದುರೆಯ ಹಾಗೆ ಓಡುತ್ತಿತ್ತು. ನಮ್ಮ ಈ ವೈ ಯಕ್ತಿಕ ಲಾಪಟಾಪ್ ನಲ್ಲಿ ಮಾಳವಿಕಾ ಅವನ ಫೋಟೋಗಳನ್ನು ತುಂಬಾ ಪ್ರೀತಿಯಿಂದ ಪೇರಿಸಿಇಟ್ಟಿದ್ದಳು,ಅವಳು ಇರುವಾಗ ಒಂದು ದಿನವೂ ಬೇರೆ ಕೆಲಸಕ್ಕೆ ಆ ಲಾಪ್ಟಾಪ್ ಬಳಸುವಂತಿರಲಿಲ್ಲ. ಅವನ ಮೊದಲ ನಗು, ಮೊದಲು ಅಂಬೆಗಾಲು ಇಟ್ಟಿದ್ದು, ಮೊದಲು ಕುಳಿತಿದ್ದು, ನಡೆಯಲು ಪ್ರಾರಂಭಿಸಿದ್ದು, ಸೈಕಲ್ ಕಲಿತಿದ್ದು, ಮೊದಲು ಶಾಲೆ ಮೆಟ್ಟಿಲು ಏರಿದ್ದು ಹೀಗೆ ಎಲ್ಲಾ ಅವನ ಮೊದಲುಗಳನ್ನ ದಾಖಲಿಸುವುದು ಮಾಳವಿಕಾಳ ಮೆಚ್ಚಿನ ಹವ್ಯಾಸವಾಗಿತ್ತು. ಆ ಎಲ್ಲ ಪುಟ್ಟ ಪುಟ್ಟ ಖುಶಿಗಳ ಕಣಜ ಆ ಲಾಪ್ಟಾಪ್. ಅವಳ ಅಗಲಿಕೆಯ ನಂತರವೂ ಅಂತಹ ಬದಲಾವಣೆಗಳೇನೂ ಆಗಿರಲಿಲ್ಲ. ಈಗೀಗ ಲಿಂಕ್ಡಿನ ವೆಬ್ಸೈಟ್ ನೋಡಲು, ಈ-ಪೇಪರ್ ಓದಲು ಮಾತ್ರ ಉಪಯೋಗಿಸುತ್ತಿದ್ದೆ. ಹೀಗಿರುವಾಗ ಈ ರೀತಿಯ ದಾಳಿಯ ಸಾಧ್ಯತೆಯ ಬಗ್ಗೆ ಅನುಮಾನ ಉಂಟಾಯಿತು. ಬ್ರೌಸರ್ ಹಿಸ್ಟರಿಯಿಂದ ಏನಾದರೂ ತಿಳಿಯಬಹುದೇ ಎಂಬ ಯೋಚನೆ ಬಂದು ನೋಡಿದರೆ, ಒಂದೈದು ದಿನದ ಹಿಂದೆ ಲಿಂಕ್ಡಿನ ವೆಬಸೈಟ್ ಮಾತ್ರ ನೋಡಿರುವ ಸಂಗತಿ ತೋರಿಸುತ್ತಿತ್ತು. ಜಾಬ್ ಸರ್ಚ್ ಮಾಡುವ ಆ ವೆಬ್ಸೈಟ್ ನಲ್ಲಿ ಹೇಗೆ ಈ ಮಾಲ್‌ವೇರ್ ಅಟ್ಯಾಕ್ ಆಗಲು ಸಾಧ್ಯ ಎಂಬ ಪ್ರಶ್ನೆ ಎದುರಾಯಿತು. ಏನಾದರೂ ಡೌನ್ಲೋಡ್ ಮಾಡಿದ್ದೇನೆಯೆ ಎಂದು ಯೋಚಿಸುವಾಗ ಮೊನ್ನೆ ನಡೆದ ಘಟನೆ ನೆನಪಿಗೆ ಬಂತು.

ನಮ್ಮ ಕಂಪೆನಿಯ ಒಂದು ಟೀಮ್ ಗೆ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಿದ್ದರಿಂದ ಯಾರಿಗಾದರೂ ಅವಶ್ಯಕತೆ ಇರುವವರಿಗೆ ನೆರವಾಗಲಿ ಎಂದು ಒಂದು ವಾರದ ಹಿಂದೆ ಆ ಕೆಲಸದ ಕುರಿತು ಲಿಂಕ್ಡಿನ ವೆಬ್ಸೈಟ್ ನಲ್ಲಿ ಪೊಸ್ಟ್ ಮಾಡಿದಾಗ, ಒಬ್ಬ ಅಪರಿಚಿತ ಅಭ್ಯರ್ಥಿ ನನ್ನ ಕೆಲಸ ಖಾಲಿ ಇದೆ ಎಂಬ ಆ ಪೋಸ್ಟ್ ಗೆ “ನಮ್ಮ ಕಂಪೆನಿಯಲ್ಲಿ ನಡೆದ ಸಾಮೂಹಿಕ ಲೇಅಫ್ ನಲ್ಲಿ ನಾನು ನನ್ನ ಕೆಲಸವನ್ನು ಕಳೆದುಕೊಂಡಿದ್ದೇನೆ. ವಯಸ್ಸಾದ ತಂದೆ ತಾಯಿ,ಅನಾರೋಗ್ಯ ಪೀಡಿತ ಅಕ್ಕನನ್ನು ನೋಡಿಕೊಳ್ಳುವ ಹೊಣೆ ನನ್ನ ಮೇಲಿದೆ. ನಾಲ್ಕು ತಿಂಗಳಿಂದ ಕೆಲಸವಿಲ್ಲದೇ ಜೀವನವೇ ಬೇಸರವಾಗಿದೆ. ನನಗಾಗಿ ಅಲ್ಲವಾದರೂ ನನ್ನ ವಯಸ್ಸಾದ ತಂದೆತಾಯಿ, ವಿಕಲಾಂಗ ಅಕ್ಕನ ಮೇಲೆ ದಯೆತೋರಿ ನನ್ನ ಮನವಿಯನ್ನು ಅಲಕ್ಷ್ಯ ಮಾಡದೇ ಸಣ್ಣ ಕೆಲಸವನ್ನಾದರೂ ನೀಡಿ” ಎಂದು ಪ್ರತಿಕ್ರಿಯಿಸಿದ್ದ . ಅದನ್ನು ಓದಿದಾಗ ನನಗೆ ನನ್ನ ಬಾಲ್ಯದ ಆತ್ಮೀಯ ಸ್ನೇಹಿತ ಬಡತನಲ್ಲಿ ಬೆಳೆದು ಅವನ ದೊಡ್ಡ ಕುಟುಂಬದ ನಿರ್ವಹಣೆಗೆ ಪಟ್ಟ ಪಾಡು ಕಣ್ಣ ಮುಂದೆ ಸುಳಿಯಿತು. ಅಕ್ಕ,ತಂಗಿಯರ ಮದುವೆಗೆ ಮಾಡಿದ ಸಾಲ ತೀರಿಸಲು, ವೃದ್ಧ ತಂದೆ ತಾಯಿಯರ ಆರೋಗ್ಯ ಸಮಸ್ಯೆಗಳಿಂದ ಮದುವೆಯೆ ಆಗದೆ ಹಾಗೆಯೇ ಉಳಿದಿದ್ದ. ಕನಸುಗಾರನಾಗಿದ್ದ ಆತನ ನೂರಾರು ಕನಸುಗಳು ಬಹುಷಃ ಆತನ ಕನಸಿನ ಅರಮನೆಯಲ್ಲೇ ಮರಣಹೊಂದಿರಬೇಕು.

ಹಣವಿಲ್ಲದೇ ಬದುಕುವುದು ಇಂದಿನ ದಿನದಲ್ಲಿ ಸಾಧ್ಯವೇ? ಹಿಂದಿನ ವರ್ಷ ಕಂಪೆನಿಯ ಸ್ನೇಹಿತ ಇದೇ ರೀತಿಯಲ್ಲಿ ಕೆಲಸ ಕಳೆದುಕೊಂಡಾಗ ಅವನು ಪಟ್ಟ ಪಾಡು ಒಂದೆರಡೆ? ಅನಾರೋಗ್ಯದ ಮಗಳಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಕೊಡಿಸಲಾಗದೇ ಅವಳನ್ನು ಕಳೆದುಕೊಂಡಿದ್ದ. ಆ ನೋವನ್ನು ಸಹಿಸಲಾಗದೇ ಮನನೊಂದು ಆತ್ಮಹತ್ಯೆಯ ದಾರಿ ಹಿಡಿದಿದ್ದ. ಗಂಡ,ಮಗು ಇಬ್ಬರನ್ನು ಏಕಕಾಲಕ್ಕೆ ಕಳೆದುಕೊಂಡು ಆತನ ಹೆಂಡತಿ ನಿಶ್ಚಲವಾಗಿ ಭಾವರಹಿತವಾಗಿ ಕುಳಿತಿದ್ದ ದೃಶ್ಯ ನೆನಪಾಗಿ ಮನ ಕುಲುಕಿದಂತಾಯಿತು. ಆ ಅಭ್ಯರ್ಥಿಯ ಸ್ಥಿತಿಯು ಇದಕ್ಕಿಂತ ಭಿನ್ನವಾಗಿರಲಾರದು ಎಂದೆನಿಸಿ ಆತನ ಬಗ್ಗೆ ಕನಿಕರವೆನಿಸಿ ಅವನಿಗೆ ಹೇಗಾದರೂ ಸಹಾಯ ಮಾಡಲೇ ಬೇಕು ಎಂದು ಅವನ ರೆಸ್ಯುಮ್ ಅನ್ನು ಕಳಿಸುವಂತೆ ಕೋರಿದಾಗ, ಆತ ಅದನ್ನು ಮೆಸ್ಸೆಂಜರ್ ನಲ್ಲಿ ಕಳುಹಿಸಿದ್ದ. ಅದನ್ನು ನೋಡಿದ ತಕ್ಷಣ ಆ ನಾಲ್ಕು ಜೀವಗಳ ಕಣ್ಣು ನನ್ನನ್ನು ದೈನ್ಯತೆಯಿಂದ,ಭರವಸೆಯಿಂದ ನೋಡುತ್ತಿವೆಯೇನೋ ಎಂದೆನಿಸಿ ಭಾವೋದ್ವೇಗಕ್ಕೋಳಗಾಗಿ ಅಂದೇ ಡೌನ್ಲೋಡ್ ಮಾಡಿದ್ದೆ ಎನ್ನುವುದು ನೆನಪಾಯಿತು. ಅದೇ ಸಮಯಕ್ಕೆ ಸರಿಯಾಗಿ ಊರಿನ ಗೆಳೆಯನ ಫೋನ್ ಕಾಲ್ ಬಂದಿದ್ದರಿಂದ ಆಂಟಿವೈರಸ್ ಸಾಪ್ಟ್ವೇರ್ ಅಲರ್ಟ್, ಮಾಡಿದ್ದನ್ನು ಕಡೆಗಣಿಸಿದ್ದೆ. ಊರಿಗೆ ಬರುವ ತರಾತುರಿಯಲ್ಲಿ ಈ ಘಟನೆಯನ್ನು ಮರೆತೂ ಬಿಟ್ಟಿದ್ದೆ. ಆದರೂ ಇದರಿಂದ ಹೀಗಾಗಿರುವ ಸಾಧ್ಯತೆಯ ಬಗ್ಗೆ ಅನುಮಾನವಾಯಿತು.

ಏನೇ ಆಗಲಿ ಒಮ್ಮೆ ಕಂಪನಿಯಲ್ಲಿ ಕೆಲಸ ಮಾಡುವ ಗೆಳೆಯ ಕರ್ಣನಿಗೆ ತಿಳಿಸಿ ಸಲಹೆ ಕೇಳುವುದು ಉತ್ತಮ ಎಂದು ಒತ್ತಡದ ಬೇಗುದಿ ತಾಳಲಾರದ ಮನಸ್ಸು ಸಲಹೆ ನೀಡಿತ್ತು. ಮೂರನೆಯ ರಿಂಗ್ ಆಗುತ್ತಲೇ ಕಾಲ್ ರಿಸೀವ್ ಮಾಡಿದ ಕರ್ಣನ ಔಪಚಾರಿಕ ಮಾತುಗಳನ್ನು ಬೇಧಿಸಿ ನನ್ನ ಸಮಸ್ಯೆಯನ್ನು ಅವನ ಮುಂದೆ ಇರಿಸಿದ್ದೆ. “ಏನೋ ನೀನು, ಆಂಟಿವೈರಸ್ ಸ್ಕ್ಯಾನ್ ಮಾಡದೆ ಡೌನ್ಲೋಡ್ ಹೇಗೆ ಮಾಡ್ದೆ? ಎಲ್ಲರಿಗೂ ಸಲಹೆ ಕೊಡುತ್ತಿದ್ದ ನೀನೆ ಹೀಗೆ ಮಾಡಿದರೆ ಹೇಗೆ? ಈಗೀಗ ಈ ರೀತಿಯ ರೆಸ್ಯೂಮ್ ನೆಪದಲ್ಲಿ ತುಂಬಾ ಅಟ್ಯಾಕ್ಗಳು ನಡೆಯುತ್ತಿವೆ.” ಎಂದ ಅವನ ಆ ಮಾತು ನನ್ನ ಕಿವಿಗೆ ಕಾದ ಸೀಸದಂತೆ ಭಾಸವಾಯಿತು. ಅವನ ಉಳಿದ ಯಾವ ಮಾತುಗಳೂ ಕಿವಿಗೆ ಬೀಳುತ್ತಲೇ ಇಲ್ಲವೇನೋ ಎಂಬಂತೆ ಅಲ್ಲೇ ಕುಸಿದು ಕುಳಿತಿದ್ದೆ. ಅವನು ಮತ್ತೊಮ್ಮೆ ಕಾಲ್ ಮಾಡಿ ಎನಾದರೂ ಪರಿಹಾರ ಹುಡುಕೋಣ ಅನ್ನುವ ಆತನ ಸಮಾಧಾನದ ಮಾತು ಕಿವಿಗೆ ಮಾತ್ರ ತಲುಪಿತು, ಸಹಾಯ ಮಾಡುವುದಕ್ಕೂ ಹಿಂಜರಿಯುವ ಪರಿಸ್ಥಿತಿ ಬಂದಿತಲ್ಲ ಎಂದು ಮನಸ್ಸು ವೇದನೆಯಿಂದ ನರಳುತ್ತಿತ್ತು. ಮಾಳವಿಕಾ ಹಾಗೂ ಕೀರ್ತನಾರ ಅಗಲಿಕೆಯವರೆಗಿನ ಬದುಕಿನ ಎಲ್ಲಾ ಮಜಲುಗಳನ್ನು ಇಷ್ಟು ಕಾಲ ಜೋಪಾನವಾಗಿ ಕಾಪಿಟ್ಟುಕೊಂಡು ಬಂದಿರುವ ಕಣಜ ಆ ಲಾಪ್ಟಾಪ್. ಅದಕ್ಕೆ ಬೆಂಕಿ ಇಟ್ಟಂತೆ ಆಯಿತಲ್ಲ. ಇದನ್ನು ಮಾಳವಿಕಾ ಮೇಲಿನಿಂದ ನೋಡುತ್ತಿದ್ದರೆ ಆಕೆಯ ಓಡಲು ಸಂಕಟ ಪಡದೇ ಉಳಿದೀತೆ? ನಮ್ಮ ಖುಷಿಗಳನ್ನು ದುಪ್ಪಟ್ಟು ಮಾಡಿದ್ದ ಕೀರ್ತನಳಿಗೂ ಇದನ್ನು ಅರಗಿಸಿಕೊಳ್ಳಲು ಸಾಧ್ಯವಿದೆಯೆ?

ಇಂತದ್ದೇ ಒಂದು ಮಳೆಗಾಲದಲ್ಲಿ ಅವಳು ನಮ್ಮ ಮನೆಗೆ, ನಮ್ಮ ಬಾಳಿಗೆ ಕಾಲಿಟ್ಟಿದ್ದು. ಹೆಚ್ಚಿನ ಓದಿಗಾಗಿ ವಿದೇಶಕ್ಕೆ ತೆರಳಲು ಬಯಸಿದ್ದ ಮಗ ತೆರಳುವ ಮುನ್ನ ಹಳ್ಳಿಯ ಮನೆಯಲ್ಲಿ ಸ್ವಲ್ಪ ದಿನ ಕಾಲ ಕಳೆಯಲು ಬಯಸಿದ್ದರಿಂದ ಊರಿಗೆ ಬಂದಿದ್ದೆವು. ಮಗನ ಕನಸು ಅವನನ್ನು ಬಿಟ್ಟಿರಲು ಆಗದ ನಮಗೆ ಘಾಸಿಯನ್ನೇನೋ ಮಾಡಿತ್ತು ಆದರೆ ಅವನ ಕನಸು ,ಖುಷಿಯೇ ಮೊದಲ ಸ್ಥಾನ ಪಡೆದುಕೊಂಡು ಅವನ ನಿರ್ಧಾರವನ್ನು ಒಪ್ಪಿಕೊಳ್ಳುವಂತೆ ಮಾಡಿತ್ತು. ಆ ರಾತ್ರಿ ಪಟ್ಟಣದಿಂದ ಟ್ರಿಪ್ ಗಾಗಿ ಬಂದ ಒಂದು ಗುಂಪು ಜೋರಾದ ಮಳೆ ಗಾಳಿಯಿಂದ ದಾರಿ ತಪ್ಪಿಸಿಕೊಂಡು ನಮ್ಮ ಈ ಹಳ್ಳಿಯ ಮನೆಗೆ ಆಶ್ರಯ ಕೇಳಿ ಬಂದಿದ್ದರು. ಅವರಲ್ಲಿ ನಗುಮುಗದ ಸ್ನಿಗ್ಧ ಸುಂದರಿ ಕೀರ್ತನ ನಮ್ಮ ಮಗನ ಮನಸ್ಸನ್ನು ಸೂರೆಗೊಂಡವಳು. ರೀಲ್ಸ್ ಮಾಡುತ್ತಾ ನಮ್ಮ ಗಗನನ ಜೀವನಕ್ಕೆ ರಿಯಲ್ ಆಗಿ ಬಂದು ಎಷ್ಟೋ ಖುಷಿಗಳನ್ನ ನಮ್ಮ ಮಡಿಲಿಗೆ ಹಾಕಿ ಹೋದವಳು. ಸೊಸೆಯ ಜಾಗಕ್ಕೆ ಬಂದು ಮಗಳ ಪ್ರೀತಿ ಕೊಟ್ಟವಳು. ಯಾವಾಗಲೂ ನಗು ನಗುತ್ತ ಇರುತ್ತಿದ್ದ ಅವಳಿಗೆ ಸಂಪಿಗೆ ಹೂವು ಅಂದರೆ ತುಂಬಾ ಇಷ್ಟ. ಅವರು ಅಂದು ಸಂಜೆ ದಾರಿ ತಪ್ಪಿದಾಗ ಮಳೆಯಲ್ಲಿ ರಕ್ಷಣೆ ಪಡೆಯಲು ಈ ಸಂಪಿಗೆ ಮರವನ್ನೇ ಆಶ್ರಯಿಸಿದ್ದರು. ಸಂಪಿಗೆಯ ಹಾಗೆ ಇರುವಷ್ಟು ದಿನ ಘಮ ಬಿರುತ್ತ ನಗುತ್ತ ಇರಬೇಕು ಎನ್ನುವುದು ಅವಳ ನಿಲುವು ಆಗಿತ್ತು.

ನಮ್ಮ ದೇಶದಲ್ಲಿ ಭಾಂದವ್ಯಗಳ ಘಮ ಇದೆ, ಅದಿಲ್ಲದೇ ಜೀವನ ಬರಡು ಎಂಬ ಅವಳ ಯೋಚನೆಗಳ ಫಲವೇ ಗಗನ ವಿದೇಶದ ಆಲೋಚನೆ ಬಿಟ್ಟು ಇಲ್ಲೆ ನಮ್ಮೊಂದಿಗೆ ಇರುವಂತಾಗಿದ್ದು. ಆದರೆ ಯಾವುದೂ ಹೆಚ್ಚು ಕಾಲ ಉಳಿಯಲಿಲ್ಲ, ಈ ನೆನಪುಗಳನ್ನು ಬಿಟ್ಟು.ಆದರೆ ಈಗ ಎಷ್ಟೋ ವರ್ಷಗಳಿಂದ ಜತನದಿಂದ ಕಾಪಿಟ್ಟುಕೊಂಡು ಬಂದ ಆ ಸಂಭ್ರಮಗಳನ್ನ ಒಂದು ವೈರಸ್ ನುಂಗಿ ಹಾಕಲು ಹವಣಿಸುತ್ತಿತ್ತು. ಛೇ ಎಂಥಾ ಕೆಲಸ ಮಾಡಿದೆ ನಾನು. ಯಾವಾಗಲೂ ಆ ಲಾಪ್ಟಾಪ್ ಬಳಸದ ನಾನು ಈಗೇಕೆ ಬಳಸಿದೆ? ಎಚ್ಚರಿಕೆ ಇಲ್ಲದೇ ಎಂತಹ ಕೆಲಸ ಮಾಡಿದೆ. ಈಗ ಬಿಟ್ ಕಾಯಿನ್ ಅನ್ನು ನಾನು ಹೇಗೆ ವ್ಯವಸ್ಥೆ ಮಾಡಲಿ? ಅಷ್ಟೊಂದು ಹಣವೂ ನನ್ನ ಬಳಿ ಇಲ್ಲ, ಇಂತಹ ಅಜಾಗರೂಕ ಕೆಲಸ ಮಾಡಿ, ಅದೂ ಈ ವಯಸ್ಸಿನಲ್ಲಿ ಮಗನನ್ನು ಹಣ ಕೇಳುವುದೇ! ಅಲ್ಲದೇ ಅವರು ಎಲ್ಲಾ ಡೆಟಾ ಕೊಡದೆ ಇನ್ನೂ ಬೇರೆ ಬೇರೆ ರೀತಿಯಲ್ಲಿ ಸತಾಯಿಸಿದರೇ? ಮಗನಿಗೆ ಮುಖ ಹೇಗೆ ತೋರಿಸಲಿ, ಇಷ್ಟೆಲ್ಲಾ ಓದಿ,ಪ್ರ ತಿಷ್ಠಿತ ಕಂಪೆನಿಯಲ್ಲಿ ಒಳ್ಳೆಯ ಹುದ್ದೆಯಲ್ಲಿರುವ ನನ್ನಿಂದ ಹೀಗಾದದ್ದು ಅವನಿಗೆ ಇದು ಎಂತಹ ಬೇಜವಾಬ್ದಾರಿ ನಡೆ ಎಂದು ಅನ್ನಿಸದೇ ಇರುವುದೇ ? ಏಕೋ ಇದನ್ನೆಲ್ಲಾ ನಿಭಾಯಿಸಲಾರೆ ಅನಿಸಿತು . ವಯಸ್ಸು ಮಾಗುತ್ತಾ ಮಾಗುತ್ತಾ ಒಂದು ರೀತಿಯ ಭಯವೂ ಅದರ ಜೊತೆಗೆ ಜೊತೆಯಾಗುವುದೋ ಎಂಬ ಅನುಮಾನ ಕಾಡಿತು. ಒಂದು ದೊಡ್ಡ ಸುಳಿಯಲ್ಲಿ ಸಿಲುಕಿ ಹೊರಬರಲಾರದೇ ಉಸಿರುಗಟ್ಟುತ್ತಿರುವಂತ ಅನುಭವ.

ಏನಾದರೂ ಆಗಲಿ ಮಗನಿಗೆ ಕಾಲ್ ಮಾಡಿ ಪರಿಹಾರ ಕೇಳುವುದು ಒಳಿತು ಎಂದು ಮನಸ್ಸು ಸೂಚಿಸಿತು. ರಿಸರ್ಚ್ ಗಾಗಿ ವಿದೇಶಕ್ಕೆ ತೆರಳಿ ಅಲ್ಲೇ ಇರಲು ಬಯಸಿದ ಮಗನನ್ನು ಬಯಸಿದಾಗಲೆಲ್ಲ ಸಂಪರ್ಕಿಸಲು ಸಾಧ್ಯವೇ? ಹಾಗಾಗಿ ರಾತ್ರಿಯವರೆಗೆ ಈ ಚಡಪಡಿಕೆಯನ್ನೇ ಹೊದ್ದು ಕಾಯಬೇಕಾಯಿತು. ಕೊನೆಗೂ ಕಾಲ್ ಮಾಡಿ ತಿಳಿಸಿದಾಗ “ಆ ಫೋಟೋಗಳನ್ನು ಬಿಟ್ಟುಬಿಡಿ ಅಪ್ಪ, ನಮ್ಮ ಮನಸ್ಸಿನಲ್ಲಿ ಆ ನೆನಪುಗಳು ಅಚ್ಚಾಗಿವೆ. ಈಗಾಗಲೆ ಕರೋನಾ ಎಂಬ ವೈರಸ್ ಅವರಿಬ್ಬರನ್ನು ನುಂಗಿ ನಮ್ಮ ಸುಂದರವಾಗಿದ್ದ ಜಗತ್ತನ್ನು ನಲುಗಿಸಿದೆ, ಈಗ ಈ ವೈರಸ್, ಅ ವರ ನೆನಪುಗಳನ್ನು ಕಬಳಿಸಲು ಪ್ರಯತ್ನಿಸುತ್ತಿದೆ. ಅವರೇ ಇಲ್ಲದ ಮೇಲೆ ಏನಿದ್ದರೆ ಏನು? ಅವರೇ ಇಲ್ಲದೇ ಬದುಕುತ್ತಿರುವ ನಮಗೆ ಅವರ ನೆನಪುಗಳ ದಾಖಲಾತಿ ಇಲ್ಲದೆಯೂ ಬದುಕಲು ಆಗದೇ? ನೀವು ಆಗಲಾದರೂ ಆ ನೆನಪುಗಳ ನೋವಿನಿಂದ ಹೊರಬಂದು ಬದುಕಬಹುದು.” ಎಂದು ಕಾಲ್ ಕಟ್ ಮಾಡಿದಾಗ ನೋವಿಗೊಂದು ಹೆಗಲು ಅಂಗಡಿಯಲ್ಲಿ ಸಿಗುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಅನಿಸುತ್ತಿತ್ತು. ಎಲ್ಲಾ ಬಾಗಿಲುಗಳೂ ಮುಚ್ಚಿದ ಭಾವದಿಂದ ಮನಸ್ಸು ಕಂಪಿಸಿತು. ಅಮ್ಮನ ಮಡಿಲಲ್ಲಿ ಮುಖ ಮುಚ್ಚಿ ಜೋರಾಗಿ ಅಳಬೇಕು ಅನಿಸುತ್ತಿತ್ತು. ಮಗ ಬೇಡ ಎಂದರೂ ಇದನ್ನು ಇಲ್ಲಿಗೆ ಬಿಡಲು ಮನಸ್ಸಾಗದೇ ಗೆಳೆಯನ ಸಲಹೆಯಂತೆ ಸೈಬರ್ ಸೆಕ್ಯುರಿಟಿಗೆ ರಿಪೊರ್ಟ್ ಮಾಡಿಯೂ ಆಗಿತ್ತು. ಆದರೆ ಯಾವ ಪರಿಹಾರವೂ ಸಿಗದೆ ಒಂದು ವಾರವೇ ಕಳೆದುಹೋಗಿತ್ತು. ಅದೇ ತಳಮಳ, ಅದೇ ಇಮೇಲ್ಗಳು, ಅದದೇ ಫೋನ್ ಕಾಲ್ಗಳು, ಸಲಹೆಗಳು, ಅದೇ ಕಾಡುವ ಕನಸುಗಳಿಂದ ಜೀವ, ಜೀವನ ಹೈರಾಣ ಆಗಿತ್ತು.

ರಾತ್ರಿಯಾಯಿತು ಊಟ ಮಾಡಿ ಬನ್ನಿ ಎಂಬ ರಾಮಪ್ಪನ ಧ್ವನಿ ರಾತ್ರಿ ಹಗಲಿನ ಪರಿವೆಯೆ ಇಲ್ಲದೇ ಬದುಕುತ್ತಿರುವ ನನ್ನನ್ನು ಈ ಜಗತ್ತಿಗೆ ತಂದು ನಿಲ್ಲಿಸಿತು. ವಿದ್ಯುತ್ ಇಲ್ಲದೇ ಹಚ್ಚಿಟ್ಟಿದ್ದ ಆ ಒಂದು ದೀಪವೂ ಮೈ ಸವರಿ ಹೋಗುತ್ತಿದ್ದ ಗಾಳಿಯ ಆಕರ್ಷಣೆಗೆ ಒಳಗಾದಂತೆ ಓಲಾಡುತ್ತಿತ್ತು. ನನಗೆ ಇಷ್ಟವಾದ ಮಾವಿನಕಾಯಿಯ ಗೊಜ್ಜು ಇಂದು ರುಚಿ ಕಳೆದುಕೊಂಡಂತೆ ಅನಿಸುತ್ತಿತ್ತು. ಊಟದ ಶಾಸ್ತ್ರ ಮಾಡಿ ಮಹಡಿಗೆ ಬಂದರೆ ರಾತ್ರಿ ಬೀಳುವ ಕೆಟ್ಟ ಕನಸಿನ ನೆನಪಾಗಿ ಭಯವಾಗತೊಡಗಿತು. ಮಲಗುವುದೇ ಬೇಡ ಆಗ ಹೇಗೆ ಕನಸು ಬೀಳುತ್ತದೆ ಎಂದು ಮನಸ್ಸು ತರ್ಕದಲ್ಲಿ ತೊಡಗಿತ್ತು. ಬಳಲಿದ ದೇಹ ಯಾವ ಯೋಚನೆಗೂ ಸೊಪ್ಪು ಹಾಕದೆ ನಿದ್ರೆಗೆ ಜಾರಿತ್ತು. ಆ ನಾಲ್ಕು ಜನರೂ ಗಹಗಹಿಸಿ ನಗುತ್ತಾ ಮಗನ ಬಳಿಗೆ ಧಾವಿಸುತ್ತಿದ್ದರು. ನನಗೆ ಏಳಲೂ ಆಗುತ್ತಿಲ್ಲ. ಕೂಗಲೂ ಆಗುತ್ತಿಲ್ಲ , ಮಗನಿಗೆ ಅವರೇನಾದರೂ ಮಾಡಿಬಿಟ್ಟರೆ ಎಂಬ ಭಯದಿಂದ ಕಣ್ಣು ಮಂಜಾಯಿತು, ಯಾಕೋ ಬಂದೆ ಮಗನೇ ಎಂದು ಮನಸ್ಸು ಚೀರುತ್ತಿತ್ತು.

ಇದ್ಯಾವುದರ ಪರಿವೆಯೆ ಇಲ್ಲದಂತೆ ಅವನು ನನ್ನ ಬಳಿ ಬಂದು ನನ್ನ ಕೈ ಹಿಡಿದು ಮಾತನಾಡುತ್ತಲೇ ಇದ್ದ “ನಿಮಗೆ ನೆನಪಿದೆಯೆ ಅಪ್ಪಾ? ನಿಮ್ಮ ಬಾಲ್ಯದ ಕಾಲದ ಯಾವ ಫೋಟೋಗಳೂ ನಿಮ್ಮ ಬಳಿ ಇರಲಿಲ್ಲ, ನಿಮ್ಮ ಹಿರಿಯರು, ಆತ್ಮೀಯರು ಆ ಬಾಲ್ಯದ ಘಟನೆಗಳನ್ನು, ನಿಮ್ಮದೇ ಕಥೆಯನ್ನು ನಿಮಗೆ ರಸವತ್ತಾಗಿ ಹೇಳುವಾಗ ಆಗುತ್ತಿದ್ದ ಆನಂದದ ಅನುಭೂತಿ ಹೀಗೆ ತಂತ್ರಜ್ಞಾನ ಬಳಸಿ ಒಬ್ಬರೇ ಕುಳಿತು ನೋಡುವಾಗ ಆಗುವ ಆನಂದಕ್ಕೆ ಸರಿಸಾಟಿ ಆಗಲು ಸಾಧ್ಯವೇ? ತಂತ್ರಜ್ಞಾನ ಎಷ್ಟೇ ಮುಂದುವರೆದರೂ ನಮ್ಮ ಮನಸ್ಸು ಅರಳಲು, ನಲಿಯಲು ಪ್ರೀತಿ ಸ್ನೇಹದ ಬೆಚ್ಚಗಿನ ಮಡಿಲೇ ಬೇಕು ಅಲ್ಲವೇ! ಹೃದಯವನ್ನೇ ಯಾರೊ ಕಿತ್ತು ಬಿಸಾಡಿದ ನೋವಿನಿಂದ ಪಾರಾಗಲು ನಾನು ದೇಶ ಬಿಟ್ಟು ಬಂದೆ. ಆದರೆ ನನಗೆ ಈಗ ಅರಿವಾಗಿದೆ, ನಾನು ಎಲ್ಲೆ ಹೋದರೂ ಆ ನೆನಪುಗಳ ಮಡಿಲನ್ನು ಬಿಟ್ಟು ನಾನು ಬದುಕಲಾರೆ. ನಮ್ಮ ಮನೆಯಲ್ಲಿ, ನಮ್ಮ ಮನದಲ್ಲಿ ಅವರ ನೆನಪುಗಳು ಉಸಿರಾಡುತ್ತಿವೆ, ಇನ್ಯಾವುದೋ ದೇಶದಲ್ಲಿ ಇದ್ದು ಅವಕ್ಕೆ ಉಸಿರುಗಟ್ಟಿಸಲಾರೆ. ನಾವಿಬ್ಬರೂ ಸೇರಿ ಆ ನೆನಪುಗಳನ್ನು ನಮ್ಮ ಉಸಿರಿರುವವರೆಗೂ ಹಸಿರಾಗಿಸಿ ಇಡೊಣ ಅಪ್ಪಾ.” ಅವನು ಹೇಳುತ್ತಲೇ ಇದ್ದ, ಎಲ್ಲೆಲ್ಲೋ ಸುತ್ತಾಡಿ ಗಾಳಿ ತನ್ನೊಂದಿಗೆ ಸಂಪಿಗೆಯ ಘಮವನ್ನು ಹೊತ್ತು ತಂದಿತ್ತು, ಕೋಣೆಯ ತುಂಬೆಲ್ಲಾ ಸಂಪಿಗೆಯ ಘಮವೇ ಆವರಿಸಿತ್ತು. ಕನಸೋ ನನಸೋ ಏನೂ ಅರಿಯದ ಅಯೋಮಯ ಸ್ಥಿತಿಯಲ್ಲಿ ಸಂಪಿಗೆಯ ಘಮ ಮೂಗಿನ ನರ ನಾಡಿಗಳ ಮೂಲಕ ಹಾದು ಹೃದಯದ ನಾಳಗಳಲ್ಲಿ ಸಂಚರಿಸಿ ಮನಸ್ಸಿಗೆ ಮುದ ನೀಡುತ್ತಿತ್ತು.

‍ಲೇಖಕರು Admin MM

May 23, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: