ನಾನನುಭವಿಸಿದ ಸುಖದ ಮಧುರತೆ ಅಂಥದ್ದಾಗಿತ್ತು!

ದಿನೇಶ್ ಕುಕ್ಕುಜಡ್ಕ

**

ಕಾವ್ಯದ ಸಾಲೊಂದು ಮೆಲುವಾಗಿ ಎದೆ ಹೊಕ್ಕಿ ಕೂರುವ ಕ್ಷಣದ ಅನುಭೂತಿ ದಕ್ಕಬೇಕಾದರೆ ಅಷ್ಟು ಉನ್ನತವಾದ ಮನೋಭೂಮಿಕೆಯನ್ನೂ, ಆ ಮೂಲಕ ಒಂದು ರೀತಿಯ ಯೋಗ್ಯತೆಯನ್ನೂ ಗಳಿಸಬೇಕು ನಮ್ಮ ಎದೆಯ ಗೂಡುಗಳು! ಕಾವ್ಯ ಅಂತಲ್ಲ; ಒಂದು ಮಾತು, ಒಂದು ನಗು, ಒಂದು ಹಾಡು, ಒಂದು ನದಿ ಹರಿವು. ನಾನೆಂಬ ಯೋಗ್ಯನೊಳಗಿನ ಅಧಿಕಾರಯುತ ಅನುಭಾವಿಯ ಚಲನೆ ಅದರದ್ದು. ಒಂದು ಪಾತ್ರವು ಪಾತ್ರಧಾರಿಯ ಒಳಹೂತು ತಾನೇ ಅವನು ಅಥವಾ ಅವಳಾಗುವ ಚೆಲುವು ಅಂಥಾದ್ದು. ಜೊತೆಗೆ ಹಲವು ಪಾತ್ರಗಳ ಮಿಸುಕಾಟಗಳನ್ನು ಒಂದು ಹೂಹಗುರ ಬೆಳಕಿನ ಹೊನಲ ಡೇರೆಯೊಳಗೆ ಹಿಡಿದು ಹೆಣೆಯುವ ದಿಗ್ದರ್ಶಕನ ಅನುಭವ ಮತ್ತು ಯೋಗ್ಯತೆಯೂ ಅಷ್ಟೇ ಚೆಲುವಿನದ್ದು!

ಮೊನ್ನೆ ‘ನಿರ್ದಿಗಂತ’ ತಂಡದ ‘ಮಂಟೇಸ್ವಾಮಿ ಕಾವ್ಯ ಪ್ರಯೋಗ‘ವನ್ನು ಎದೆಗಿಳಿಸಿಕೊಂಡ ನಂತರ ನಾನನುಭವಿಸಿದ ಸುಖದ ಮಧುರತೆ ಅಂಥದ್ದಾಗಿತ್ತು! ಸುಮಾರು ಒಂದೂಕಾಲು ತಾಸು ನಾನನುಭವಿಸಿದ ಪ್ರತೀ ಮಾತು, ಪ್ರತೀ ಕಬ್ಬದ ಸಾಲು, ನಟರ ಪ್ರತೀ ಚಲನೆ, ಆ ಲೆಕ್ಕಾಚಾರದ ಬೆಳಕಿನ ವಿವರ, ಇಷ್ಟೂ ಹೆಚ್ಚಿಲ್ಲ; ಇಷ್ಟೂ ಕಮ್ಮಿಯಿಲ್ಲವೆಂಬಂತೆ! ‘ರುಚಿಗೆ ತಕ್ಕಷ್ಟು ಉಪ್ಪು’ ಎಂಬ ರೀತಿ ಕಡು ಜಿಪುಣತನದ ಲೆಕ್ಕದಲ್ಲಿ ಎಲ್ಲ ಸಂಗತಿಗಳನ್ನೂ ಹೊಯ್ದು ನೇರ್ಪುಗೊಳಿಸಿದವರು, ಈ ದೃಶ್ಯ ಪ್ರಯೋಗದ ನಿರ್ದೇಶಕರಾದ ಡಾ. ಶ್ರೀಪಾದ ಭಟ್ ಅವರು.

ಹೇಳಿಕೇಳಿ ಮಂಟೇಸ್ವಾಮಿ ಜಡ್ಡುಗಟ್ಟಿದ ಸಮಾಜ ವ್ಯವಸ್ಥೆಯೊಳಗಿನ ಬಂಡಾಯದ ಅಧಿಕಾರಯುತ ಧ್ವನಿ. ಹನ್ನೆರಡನೇ ಶತಮಾನದ ಬಸವಣ್ಣ , ಹದಿನಾರನೇ ಶತಮಾನದ ‘ಧರಗೆ ದೊಡ್ಡವರ’ ಮೂಲಕ ಈ ಇಪ್ಪತ್ತೊಂದನೇ ಶತಮಾನದ ನಮ್ಮ ನಿಮ್ಮಗಳ ದೊರಗು ಸಿದ್ಧಾಂತದ ತುದಿ ನೆತ್ತಿಗೆ ಸುತ್ತಿಗೆಯೆತ್ತಿ ಬಡಿಯುವ ಅಖಂಡ ಸುಧಾರಣಾ ಪ್ರಜ್ಞೆಯಾಗಿ ವ್ಯಕ್ತಗೊಳ್ಳುವುದಿದೆಯಲ್ಲ. ಅದು ಎಲ್ಲಾ ಕಾಲಕ್ಕೂ ಪ್ರಸ್ತುತವೆನಿಸುವ ನಿಜದ ಸೂಜಿಮೊನೆಯ ಇರವು. ‘ಅಣ್ಣ’ನೆಂಬುವುದೊಂದು ಅರಿವು. ಎಲ್ಲಾ ಕಾಲದ ಹೊದಿಕೆಯ ಮೇಲೂ ಆಯಾಯ ಕಾಲಧರ್ಮದ ಕೊಡುಗೆಯೋ ಎಂಬಂತೆ ಒಂದಷ್ಟು ಜಿಡ್ಡು ದೊರಗುಗಳು, ಕೊಳೆ ಕೂರಣಗಳು ಬಂದು ಕೂರುವುದು ಸಹಜವೇ ಹೌದಾದರೂ, ಆಗ್ಗಿಂದಾಗ್ಗೆ ನಡೆಯುವ ಸುಧಾರಣಾ ಪ್ರಜ್ಞೆಯ ಮೂಲಕ ಅವುಗಳನ್ನು ನಿವಾರಿಸುವುದೂ ಅದೇ ಕಾಲಧರ್ಮವೇ! ‘ಮಂಟೇಸ್ವಾಮಿ’ ಅಂಥದೊಂದು ಕಾಲಧರ್ಮದ ಅಭಿವ್ಯಕ್ತಿ.

ಎಲ್ಲ ಮೌಲ್ಯಗಳನ್ನೂ ಕಳಕೊಂಡು ದುಗುಡಗೊಂಡ ವ್ಯವಸ್ಥೆಯ ಸಾರ್ವತ್ರಿಕ ಧ್ಯಾನಕ್ಕೆ ದಕ್ಕಬಹುದಾದ ವ್ಯಕ್ತರೂಪಕ! ಕನ್ನಡ ನೆಲದಲ್ಲಿ, ಅದರಲ್ಲೂ ಮುಖ್ಯವಾಗಿ ಮಂಡ್ಯ ಹಳೆಮೈಸೂರು ಭಾಗಗಳಲ್ಲಿ ಅತ್ಯಂತ ಜನಪ್ರಿಯವಾಗಿ ಜನಪದೀಯವಾಗಿ ಉಳಿದು ಬೆಳೆದು ಬಂದ ಈ ಕಾವ್ಯದ ಸಾಲುಗಳು ಎಂಥ ಹೃದಯಸ್ಪರ್ಶಿ! ಇರುವ ಅಷ್ಟನ್ನೂ ಅಚ್ಚುಕಟ್ಟಾಗಿ ಸಂಗ್ರಹಿಸಿ, ಸಂಕಲಿಸಿ ಅಷ್ಟೂ ಹೆಚ್ಚಾಗದಂತೆ ಇಷ್ಟೂ ಕಮ್ಮಿಯಾಗದಂತೆ ಹೊಲಿದು ಪಾತ್ರಧಾರಿಗಳ ಆಳಕ್ಕೆ ಇಳಿಸಿ ದುಡಿಸಿಕೊಂಡ, ಈ ಪ್ರಯೋಗದ ನಿರ್ದೇಶಕ ಡಾ. ಶ್ರೀಪಾದ ಭಟ್ಟರಿಗೆ ನನ್ನದೊಂದು ವೈಯಕ್ತಿಕ ಸಲಾಮು. ನಾನು ನೋಡಿರುವುದು ಈ ನಾಟಕದ ಮೂರನೇ ಪ್ರಯೋಗ. ಮೊನ್ನೆ- ರಕ್ಷಿದಿಯ ಹಳ್ಳಿ ಥೇಟರಿನಲ್ಲಿ ನಡೆದ ರಂಗಶಿಬಿರದಲ್ಲಿ. ನಾಟಕದ ‘ಧರೆಗೆ ದೊಡ್ಡವರು’ ಪಾತ್ರ ನಿರ್ವಹಿಸಿದ ಮೇಡಂ ಶಲೋಂ ಸನ್ನುತ ಅವರ ಅಭಿನಯವಂತೂ ಅತ್ಯಂತ ಮನೋಜ್ಞವಾದುದಾಗಿತ್ತು! ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದ ಪ್ರತೀ ಸನ್ನಿವೇಶಕ್ಕೆ -ತಕ್ಕುದಾದ ರೀತಿಯಲ್ಲಿ ಆಂಗಿಕ ವಾಚಿಕ- ಶಬ್ದ ಶಾರೀರಗಳನ್ನು ಚಕ್ಕಚಕ್ಕನೆ ನೇರ್ಪುಗೊಳಿಸುತ್ತ, ಒಮ್ಮೆ ಅಣ್ಣ ಬಸವನೂ, ಮಗದೊಮ್ಮೆ ನೀಲಾಂಬಿಕೆಯೂ, ಮರುಕ್ಷಣವೇ ಕಟ್ಟಿಗೆ ಮಾದಪ್ಪನೂ, ಇನ್ನೊಮ್ಮೆ ಶುಂಠ ಹುಸಿ ಶರಣನೂ ಆಗಿ ಪಾತ್ರಾಂತರವಾಗಿ ಬಿಡುತ್ತಿದ್ದ ರೀತಿಯಿದೆಯಲ್ಲ, ಅದು ಪ್ರೇಕ್ಷಕರನ್ನು ಒಂಭತ್ತು ಶತಮಾನಗಳಷ್ಟು ಹಿಂದಕ್ಕೆ; ನೇರ ‘ಅನುಭಾವ’ ಮಂಟಪದೊಳಕ್ಕೇ ಎತ್ತಿ ಕೂರಿಸಿತ್ತು!

ಕಾವ್ಯದ ಮೂಲ ಸ್ರೋತವೆನ್ನಿಸುವ ‘ಧರೆಗೆ ದೊಡ್ಡವರು’ ಪಾತ್ರವನ್ನೂ ಕ್ಷಣ ಮಾತ್ರದಲ್ಲೇ ಕಟೆದು ನಿಲ್ಲಿಸಿ ನೋಡುಗರನ್ನು ಒಂದೂಕಾಲು ತಾಸುಗಳ ಕಾಲ ಹಿಡಿದಿಟ್ಟ ಅಭಿನಯದ ಜೊತೆಗೆ ಅದ್ಭುತ ಕಂಠ ಶಾರೀರವನ್ನೂ ಹೊಂದಿರುವುದು. ಮೇಡಂ ಶಲೋಂ ಸನ್ನುತ ಅವರೊಳಗೆ ಕಲೆಯೆಂಬ ಸಂಗತಿಯೊಂದು ಇಳಿದು ಎಷ್ಟು ಗಟ್ಟಿ ಎರಕವಾಗಿದೆಯೆಂಬುವುದಕ್ಕೆ ಸಾಕ್ಷಿ. ಇನ್ನು ಸಂಗೀತದ ಜೊತೆಜೊತೆಗೇ ಸಹಪಾತ್ರ ನಿರ್ವಹಣೆಯನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ ಅನುಷ್ ಶೆಟ್ಟಿ, ಮುನ್ನ ಮೈಸೂರು ಹಾಗೂ ರೋಹಿತ್ ಶ್ರೀಧರ ಅವರುಗಳ ಅತ್ಯಂತ ನಿಖರ ರಂಗಸಾಥಿಯೂ ಅತೀ ಅಮೋಘವಾಗಿತ್ತು. ಹೇಳಿದೆನಲ್ಲ, ತುಸುವೂ ಹೆಚ್ಚಲ್ಲದ, ರವಷ್ಟೂ ಕಮ್ಮಿಯಿಲ್ಲದ ಬೆಳಕಿನ ಸಂಯೋಜನೆಯಿತ್ತೆಂದು? ಅದರ ಹೊಣೆ ಹೊತ್ತವರು ಶ್ರೀ ಗಣೇಶ್ ಭೀಮನ ಕೋಣೆ.

ಶ್ರೀರಂಗಪಟ್ಟಣ ಸಮೀಪದ ಕೆ. ಶೆಟ್ಟಿಹಳ್ಳಿಯ ಲೋಕಪಾವನಿ ನದಿ ತಟದಲ್ಲಿರುವ ‘ನಿರ್ದಿಗಂತ’ ಅವರೇ ಹೇಳಿಕೊಂಡಂತೆ ಒಂದು ರಂಗ ಕಾವಿನ ಪೊಟರೆ! ಅದಾಗಿ, ಈ ಪ್ರಯೋಗದ ಪಾತ್ರಧಾರಿಗಳು ಅಕಡೆಮಿಕ್ ನಾಟಕ ಶಾಲೆಯ ಉತ್ಪನ್ನಗಳಲ್ಲವಾದರೂ ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡಿರುವ ಅವರುಗಳು ಈ ಸಾಂಸ್ಕೃತಿಕ ಹಕ್ಕಿಗೂಡಿನ ಪೋಷಕ ಪ್ರತಿನಿಧಿತ್ವವನ್ನು ಹೊತ್ತು ನಾಡಿನಾದ್ಯಂತ ಸಂಚರಿಸುವ ಪಣ ತೊಟ್ಟಿರುವುದು ನಮ್ಮಂಥ ಪ್ರೇಕ್ಷಕರ ಭಾಗ್ಯ. ಅವರಿಗೆ ಹ್ಯಾಟ್ಸಾಫ್! ನಿರ್ದೇಶಕ ಡಾ. ಶ್ರೀಪಾದ ಭಟ್ಟರಿಗೆ ಮತ್ತೊಮ್ಮೆ ಅಭಿನಂದನೆಗಳು -ಈ ಅದ್ಭುತ ಪ್ರಯೋಗದ ಕರ್ತೃತ್ವದ ಹೊಣೆ ಹೊತ್ತಿರುವುದಕ್ಕೆ. ಆಯಸ್ಸಿನ ಪ್ರತೀ ಗಳಿಗೆಗಳನ್ನು ಅಮೂಲ್ಯವೆಂಬಂತೆ ಕಾಣುವ ಯಾರೇ ಆದರೂ ನಿಮ್ಮ ಒಂದೂ ಕಾಲು ತಾಸುಗಳನ್ನು ನಿಸ್ಸಂಶಯವಾಗಿ ಈ ನಾಟಕಕ್ಕಾಗಿ ಎತ್ತಿಡಬಹುದು.

‍ಲೇಖಕರು Admin MM

May 11, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: