ನಾದಾ ‘ಗೆರೆ’

‘ಗೆರೆ’ ಮೀರುವ ಸಾಹಸದೊಳಗೆ…’ನಾದಾ’

ಸಂತೋಷ್ ಅನಂತಪುರ

ಕೂಡು ಕುಟು೦ಬವಿರಲಿ, ನ್ಯೂಕ್ಲಿಯರ್ ಕುಟು೦ಬವಿರಲಿ-ಅಲ್ಲೆಲ್ಲಾ ಹೆಣ್ಣು ತುಳಿತಕ್ಕೊಳಗಾಗಿದ್ದಾಳೆ. ಆಗುತ್ತಲೇ ಇದ್ದಾಳೆ. ಅದೂ ತನ್ನವರು ಎಂದೆನಿಸಿಕೊಂಡವರಿಂದ! ಯಾಕೆ ಹೀಗೆ? ಎಂಬ ಪ್ರಶ್ನೆ ಕಾಡಿದರೂ ಉತ್ತರ ಮಾತ್ರ ಹೊರಡುವುದಿಲ್ಲ. ಒಳಗಿನ ನಿಜದ ಉತ್ತರವನ್ನು ಬಿಟ್ಟು ಕೊಳ್ಳುವುದಿಲ್ಲವಲ್ಲ! ಹೆಣ್ಣಿಗೆ ಆಕೆಯದ್ದೇ ಆದ ಪ್ರಪಂಚವಿದೆ. ಅವಳ ಕ್ಯಾನ್ವಾಸ್ ಬಲು ದೊಡ್ಡದು. ಬಹು ವಿಸ್ತಾರದ ನೆಲೆಗಟ್ಟನ್ನು ಹೊಂದಿರುವ ಮಹಿಳೆ ಕಾಲಾನುಕಾಲಕ್ಕೆ ರೂಪುಗೊಳ್ಳುತ್ತಾ ಹೋಗುವ ಬಗೆ ನಿಜಕ್ಕೂ ಅಚ್ಚರಿಯನ್ನು ಹುಟ್ಟಿಸುತ್ತದೆ.

ಪ್ರಕೃತಿ-ಪುರುಷರ ಸಂಯೋಗದಲ್ಲಿ ಪ್ರಕೃತಿಗೆ ಇರುವಷ್ಟು ಸಹನೆ, ಶಾಂತತೆ, ತನ್ನನ್ನು ತಾನು ತೇಯ್ದು ಬಂಧಗಳನ್ನು ಬೆಳಗುವ ಗುಣ ಪುರುಷನಲ್ಲಿರುವುದಿಲ್ಲ. ಬಂಧವನ್ನು ಪೋಣಿಸುವ, ಮುರಿದ ನಂಟನ್ನು ಅಂಟಿಸುವ ನಾಜೂಕಿನ ಕಾರ್ಯ ಈಕೆಯದ್ದು.

ಒಂದು ಬಂಧ ಏನೆಂದು ತಿಳಿಯಲ್ಪಡುವುದು, ಅರಿಯಲ್ಪಡುವುದು, ಬೆಸೆಯಲ್ಪಡುವುದು ತಾಯಿಯ ತೋರು ಬೆರಳಿನಿಂದ. ಆಕೆ ಹೇಳಿದರೆ ಇದೆ. ಇಲ್ಲವಾದರೆ ಇಲ್ಲ. ಅಂತಹ ಶಕ್ತಿಯುತ ವಾಸ್ತವ ಎಲ್ಲಾ ಕಾಲದ್ದೂ. ಬಂಧಗಳೆಂಬ ಸೌಧವು ಬೆಳೆದು ಗಟ್ಟಿಯಾಗಿ ನಿಂತಿದ್ದರೆ ಅದಕ್ಕೆ ಆಕೆ ಹಾಕಿದ ಅಡಿಪಾಯವೇ ಕಾರಣವಾಗಿರುತ್ತದೆ. ಹೆಣ್ಣಿನ ಹಲವು ಪಾತ್ರಗಳಲ್ಲಿ ಮುಖ್ಯವಾದದ್ದು ಅಮ್ಮನ ಪಾತ್ರ. ಅದರ ತುಡಿತ, ತಹತಹ – ಹೆಂಡತಿಯ ಪಾತ್ರ ಹೆಂಡತಿಯಾಗಿ ಶೋಷಣೆಗೆ ಒಳಪಡುವುದು ಹಾಗೂ ಆಕೆಯ ಇತರ ಭಾವ ಜಗತ್ತಿನೊಳಗೆ.. ಹೀಗೆ ಉಸಿರೇರಿಳಿಯುವ ತನಕದ ಯಾನದಲ್ಲಿ ಪ್ರತಿಯೊಂದು ಪಾತ್ರದಲ್ಲೂ ಶೋಷಿಸಲ್ಪಡುತ್ತಾ ಸಾಗುವ ಹೆಣ್ಣಿನ ಜನ್ಮದ ತಳಮಳವನ್ನು ಹಿಡಿದಿಟ್ಟ ಕಾದಂಬರಿ -‘ಗೆರೆ’.

ಆಧುನಿಕ ಜಗತ್ತಿಗೆ ಮಹಿಳೆ ಹೊರಳಿಕೊಂಡಿದ್ದರೂ ಹಲವಾರು ಶೋಷಿತ ಪ್ರಕರಣಗಳನ್ನು ಇಂದಿಗೂ ಕಾಣುತ್ತೇವೆ. ಹಾಗಿದ್ದೂ ಕಾಲದ ಜೊತೆ ಹೆಜ್ಜೆ ಹಾಕುವ ಗುಣವನ್ನು ಸಮಾಜ ಅಪ್ಪಿಕೊಂಡಿರುವುದಿಲ್ಲ. ಅತಿ ಆಸೆಯು ಅಂದದ ಬದುಕನ್ನು ಹೇಗೆ ಕುಲಗೆಡಿಸುತ್ತದೆ – ‘ಮಹೇಶ’ನ ಪಾತ್ರವು ಹೇಳುತ್ತದೆ. ತಾನು ತಾನಾಗಿರಲು ಬಿಡದ ಸಂಪತ್ತು ಇನ್ನೇನೋ ಆಗಿಸಿ ಬಿಡುವ ಅಪಾಯವನ್ನು ಇಲ್ಲಿ ಕಾಣಬಹುದು. ಐಶ್ವರ್ಯದಿಂದಾಗಿ ಬಾಂಧವ್ಯಗಳು ಕಮರಿ ಹೋಗುವುದನ್ನೂ ನೋಡಬಹುದು. ಹೆಸರಿಗೆ ತಕ್ಕಂತೆ ‘ಕನಕ’ಳನ್ನು ಕನಕವು ಮುತ್ತಿದರೂ; ಭಾವ ತೀವ್ರತೆಯಿಲ್ಲದ, ಬಾಂಧವ್ಯದ ಸೊಗಸನ್ನು ಕೊಡದ ಸಂಪತ್ತನ್ನು ನೆನೆದವಳಿಗೆ- ಮಹೇಶನ ಮಾಸ್ತರಿಕೆಯ ಕೆಲಸವೇ ಚೆನ್ನಾಗಿತ್ತು ಎಂದೆನಿಸಿ ಬಿಡುತ್ತದೆ.

ಕಷ್ಟಗಳ ನಡುವೆಯೂ ಇಷ್ಟಗಳು ಸತ್ತಿರುವುದಿಲ್ಲವಲ್ಲ. ಹಾಗಾಗಿ ‘ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ’ವು ಪುಟಗಳನ್ನು ತಿರುವಿದಂತೆಲ್ಲ ಆಪ್ತವಾಗಿ ಬಿಡುತ್ತವೆ. ಬದಲಾದ ಜಗತ್ತಿನೊಳಗೆ ಆಧುನಿಕತೆಯ ಸ್ಪರ್ಶವು ಹೆಚ್ಛೇ ಆಗಿ, ದಿನವನ್ನು ಸರಳವಾಗಿಸುವ ಸೌಲಭ್ಯಗಳು ಮನೆ ತುಂಬಾ ಹರಡಿದ್ದರೂ- ಮನ ತುಂಬಾ ಇರುವ ಸಂಕಟಗಳಿಗೆ ಕೊರತೆಯೇ ಇಲ್ಲ. ಇದನ್ನು ಕಾಲದ ಮಹಿಮೆ ಹೇಳಬೇಕೋ? ಆಯಾ ಜನ್ಮದ ದುರ್ವಿಧಿ ಎನ್ನಬೇಕೋ? ಹುಚ್ಚು ಸಂಶಯವು ಹೊಮ್ಮಿಸುವ ಕಿಚ್ಚು, ಆ ಕಿಚ್ಚು ಹೊತ್ತಿಸುವ ಉರಿಯು ಎಲ್ಲವನ್ನೂ ನಾಶ ಮಾಡಬಲ್ಲದು. ಆತ್ಮ ಬಂಧವನ್ನು ಸಾರ ಸಗಟಾಗಿ ತಿರಸ್ಕರಿಸಿ ತಾತ್ಸಾರ ಮಾಡುವುದು -ನಡೆದು ಬಂದ ಹಾದಿಯ ಅರಿವಿಲ್ಲದೆ ಇರುವಾಗ ಎನ್ನುವ ಚಿತ್ರಣ ‘ಗೆರೆ’ ಕಾದಂಬರಿಯಲ್ಲಿದೆ.

ಕಾದಂಬರಿಯ ಉದ್ದಕ್ಕೂ ಅಳಿದ ಬಾಳನ್ನು ಮೇಲೆತ್ತಿ ಕಟ್ಟಲು ‘ಕನಕ’ ಪಾತ್ರವು ಗಟ್ಟಿಯಾಗಿ ನಿಂತು ಬಿಡುತ್ತದೆ. ಆದರೆ ಸೆರಗನ್ನು ಬೀಸಿಕೊಂಡು ಬಂದಾಗ- ಸೆರಗಲ್ಲಿ ಭದ್ರವಾಗಿ ಕಟ್ಟಿಕೊಂಡು ಬೆಳಕ ಹಾದಿ ತೋರಿ ಬೆಳೆಸಿದವಳು ಸಸಾರವಾಗಿ ಬಿಡುತ್ತಾಳೆ. ಕಾಲದ ಆಟಕ್ಕೆ ಏನೆನ್ನಬೇಕು? ಅದಕ್ಕೆ ಕನಕಳೂ ಹೊರತಾಗಿರುವುದಿಲ್ಲ. ಅಸಹಾಯಕತೆಯನ್ನು ದಾಳವಾಗಿಸುವ ಮಂದಿ ನಮ್ಮ ಸುತ್ತಮುತ್ತಲೇ ಇರುತ್ತಾರೆ. ಅದು ಗಮನಕ್ಕೆ ಬಂದಿರುವುದಿಲ್ಲವಷ್ಟೆ.

ನಿತ್ಯದ ಬಾಳಲ್ಲಿ ಬಂದು ಹೋಗಿ ಮಾಡುತ್ತಿರುವ ಹಲವು ಬಂಧಗಳು ನಮ್ಮ ಕಲ್ಪನೆಗಳನ್ನೇ ಉಲ್ಟಾ ಮಾಡುವುದಿದೆ. ಏನೋ ಅಂದುಕೊಂಡಿರುತ್ತೇವೆ. ಆದರೆ ಅದು ಇನ್ನೇನೋ ಆಗಿ- ಹೀಗೂ ಇದೆಯೇ?! ಎಂಬ ಅಚ್ಚರಿಯ ಪ್ರಶ್ನೆ ನಮ್ಮನ್ನು ಕಾಡುತ್ತಿರುತ್ತದೆ. ಅಂತಹ ಒಂದು ಪಾತ್ರ ‘ಮಹೇಂದರ್’ ನದ್ದು. ಒಳ್ಳೆಯವರೆನಿಸುವ ಕೆಟ್ಟವರು-ಕೆಟ್ಟವರೆನಿಸಿಕೊಳ್ಳುವ ಒಳ್ಳೆಯವರು. ಯಾರು ಹಿತವರು? ಎಂಬ ತೊಯ್ದಾಟ ಬದುಕನ್ನು ಹೈರಾಣಾಗಿಸಿ ಬಿಡುವುದುಂಟು.

ಒಂಭತ್ತು ತಿಂಗಳು ಬಸಿರ ಚೀಲದೊಳಗೆ ಕಾಪಿಟ್ಟು, ರೆಕ್ಕೆ ಬಲಿತ ಮೇಲೂ -‘ಮಗನೇ ಜಾಗೃತೆ…’-ಹೇಳುತ್ತಾ ಮಕ್ಕಳ ಸದಾಶಯವನ್ನೇ ಬಯಸುವ ಅಮ್ಮಂದಿರ ಭಾಗ್ಯ ಎಲ್ಲರದ್ದೂ. ಆದರೆ ಒಳ್ಳೆಯ ಮಗನ ಭಾಗ್ಯ? ಕೆಟ್ಟ ಮಗನಿರಬಹುದು. ಆದರೆ ಕೆಟ್ಟ ತಾಯಿ ಇರಲಾರಳು ಎನ್ನುವುದು ಸಾರ್ವಕಾಲಿಕ ಸತ್ಯ. ಅಮ್ಮನ ಪಾತ್ರದ ಹೆಣ್ಣಿನ ಕುರಿತಂತೆ ನಮ್ಮ ಸ್ಪಂದನೆಯೇನು? ಎಂಬ ಪ್ರಶ್ನೆಯು ಆತ್ಮ ವಿಮರ್ಶೆಗೆ ದಾರಿ ಮಾಡಿಕೊಡುವ ಕಾದಂಬರಿ – ‘ಗೆರೆ’.

ಬಹಳ ಸರಳ ಎನಿಸುವ ‘ಗೆರೆ’ ಕಾದಂಬರಿಯ ಕಥಾವಸ್ತು ಸಾರ್ವಕಾಲಿಕವಾದದ್ದು. ಅಷ್ಟೇ ಸೂಕ್ಷ್ಮವೂ ಕೂಡ. ಸುಳುವಾಗಿ ನಾಟುವ ಬಂಧಗಳ ‘ಗೆರೆ’ಯನ್ನು ಎಲ್ಲಿ? ಹೇಗೆ? ಯಾವಾಗ? ಎಳೆಯಬೇಕು ಎನ್ನುವ ಕುರಿತಾಗಿ ಮತ್ತೆಮತ್ತೆ ಚಿಂತಿಸುವಂತೆ ಮಾಡುತ್ತದೆ. ‘ಕನಕ’ಳಂತಹ ಹಲವು ಬಂಧಗಳು ‘ಗಡಿ-ರೇಖೆ-ಗೆರೆ’ಗಳನ್ನು ದಾಟಿ ಇನ್ನೂ ರಂಗು ಮಾಸದೆ ಜೊತೆಗಿವೆ.

ಲಂಬಗೆರೆ, ಗಿಡ್ಡಗೆರೆ, ಸೀದಾಸಾದಾ ಗೆರೆ, ಅಂಕುಡೊಂಕಿನ ಗೆರೆ, ಬಣ್ಣದ ಗೆರೆ, ಬಣ್ಣ ಕಳಕೊಂಡ ಗೆರೆ, ಜೀವ ಭಾವದ ಗೆರೆ, ಜೀವವನ್ನು ತಲ್ಲಣಿಸುವ ಗೆರೆ, ನೇರಗೆರೆ, ವಕ್ರಗೆರೆ, ಕೆರೆಕೆರೆದು ಮೂಡಿದ ಗೆರೆ, ಅಳಿವ ಗೆರೆ, ಅಳಿಯದುಳಿಯುವ ಗೆರೆ.. ಬಾಳಿನುದ್ದಕ್ಕೂ ಜತೆಗಿರುತ್ತವೆ. ನಾವು-ನೀವೂ ಹಲವಾರು ಗೆರೆಗಳನ್ನು ಎಳೆದಿರುತ್ತೇವೆ. ಇವು ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ…? ಬದುಕಿನಲ್ಲಿ ನಾವೆಳೆಯುವ, ಅನ್ಯರಿಂದ ಎಳೆಯಲ್ಪಡುವ ಗೆರೆಗಳು ಜೀವನದ ಹಲವು ಆಯಾಮಗಳನ್ನು ತೋರಿಸಿಕೊಡುವ ಸಾಮರ್ಥ್ಯ ಇರುವಂತವು.

ಮಗನಿಂದ ಅನುಭವಿಸಬಾರದ ಕಷ್ಟವನ್ನು ಅನುಭವಿಸಿ, ನೋಡುವ ಕಣ್ಣುಗಳಿಗೆ ನಿಸ್ಸಾರ ಎನಿಸಿಕೊಂಡರೂ.. ತಾಯಿ ಅಂದರೆ ಏನೆಂಬುದನ್ನು ಕಾದಂಬರಿಯ ಕೊನೆಯ ಸಾಲು – ‘ಚಾ ಕುಡಿ ಮಗನೆ. ಬಿಸಿ ಇದೆ. ಆರಿಸಿ ಕೊಡ್ಲಾ..?’- ಆರ್ದ್ರವಾಗಿಸುವುದರ ಜೊತೆಗೆ ನಮ್ಮನ್ನು ತಿದ್ದಿಕೊಳ್ಳಲಿರುವ ಸಾಲಾಗಿಯೂ ಜೀವ ತಳೆದು ನಿಂತು ಬಿಡುತ್ತದೆ. ಅದೆಷ್ಟು ಅರ್ಥಗಳಿವೆ ಆ ಸಾಲಿನಲ್ಲಿ – ಯೋಚಿಸಿ.

ಕಡಲಿನುದ್ದಕ್ಕೂ ಹಬ್ಬಿದ ತೀರದಲ್ಲಿ ಹೆಜ್ಜೆ ಹಾಕುತ್ತ ಹೋಗುವಾಗ ವ್ಯತ್ಯಸ್ತ ಸಂಸ್ಕೃತಿಗಳ ಒಳ ಹೊರಗನ್ನು ಉಸಿರಾಡುತ್ತ ಸಾಗುತ್ತಿರುತ್ತೇವೆ. ತೆರೆದಿಟ್ಟುಕೊಳ್ಳುವ ಮನಸ್ಥಿತಿ ಇದ್ದರೆ ಅಂತಹ ತಿಳಿವು ಸಲೀಸಾಗಿ ನಮ್ಮೊಳಗೆ ಇಳಿದು ಬಿಡುತ್ತವೆ. ಅಂತಹ ಸಾಧ್ಯತೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದವರು ನಾ.ದಾಮೋದರ ಶೆಟ್ಟಿ- ‘ದಾಮು’ ‘ನಾದಾ’ ‘ಮೇಷ್ಟ್ರು’ ಎನ್.ಡಿ’ ಎಂಬ ಕೂಗಿನಿಂದ ಬಂಧವನ್ನು ಕಟ್ಟಿಕೊಂಡ ಇವರದ್ದು ಬಹುಮುಖ ಪ್ರತಿಭೆ.

ಹಲವು ಮಲೆಯಾಳಂ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ- ‘ಕೊಚ್ಚರೇತಿ’, ‘ತ್ರಿಕೊಟ್ಟೂರ್ ನೀಳ್ಗತೆಗಳು’- ನನಗೆ ಬಹಳ ಇಷ್ಟವಾದ ಅನುವಾದ ಕೃತಿಗಳು. ಈ ಕೃತಿಗಳಲ್ಲಿ ಮಲೆಯಾಳಂ ಮಣ್ಣಿನ ಸೊಗಡನ್ನು ಇದ್ದ ಹಾಗೆಯೇ ಕನ್ನಡಕ್ಕೆ ಹೊರಳಿಸಿದ್ದಾರೆ. ಅಲ್ಲಿನ ಅಷ್ಟೂ ‘ಮಣಂ’, ಸುಗಂಧಂ– ‘ಖುಷ್ಬೂ’ಗಳನ್ನು ಹೊತ್ತು ತಂದದ್ದಲ್ಲದೆ; ನೆಲದ ಸಂಸ್ಕೃತಿಯ ಗಾಢತೆಯು ಒಂದಿನಿತೂ ಮಾಸದಂತೆ, ಕಳೆದೂ ಹೋಗದಂತೆ ನೋಡಿಕೊಂಡು ಕನ್ನಡದ ಮನಸ್ಸುಗಳ ಮೇಲೆ ಆ ಗಂಧವನ್ನು ತೇಲಿ ಬಿಟ್ಟಿದ್ದಾರೆ. ಬಹು ಸಂಸ್ಕೃತಿಗಳ ಪರಿಚಯವಿರುವ ಕನ್ನಡದ ಓದುಗರನ್ನು ಈ ಕೃತಿಗಳು ಗಾಢವಾಗಿ ತಟ್ಟಿಯೂ ಇವೆ.

‍ಲೇಖಕರು Avadhi

April 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Dr. Meenakshi Ramachandra

    ಅವಧಿಯನ್ನು ಓದುವುದೇ ಸಾಹಿತ್ಯಲೋಕದೊಳಗೊಂದು ಸುಂದರ ಪಯಣದಂತೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: