ನರೇಶ ಮಯ್ಯ
**
ಬುದುಕ್ಕನೆದ್ದಿದ್ದೆ ಸರಿರಾತ್ರಿಯೆಂಬೋ ಚೋಜುಗದೊಂದು ಚಣದಲ್ಲಿ
ಉಸುರುತಿತ್ತದು
ಇಂಚಿಂಚೂ
‘ಮಗುವಾಗು
ನಟರಾಜನೊಲಿವ ಜೋಳುಗೆಯ
ಪ್ರಸಾದ ತಾನಾಗೆಂ’ದು
ಭೋರ್ಗರೆಯುತ್ತಲೇ
ಬಿಕ್ಕುತಿತ್ತು
‘ಇಕ್ಕು ಮೊಗೆದಿಕ್ಕು,
ಬಿರುದದಿಕ್ಕೆಂ’ದು ಭೋಳಿಡುತ್ತಿತ್ತು
ಭಾವಸಾಗರದಾಚೆಯದೊಂದು
ನೋಂಪಿಯ ನೆನಸುತ್ತಲೇ
ತಿದ್ದಿ ತೀಡಿ
ತಿತ್ತಿಕ್ಕಿ
ನಾದುತ್ತಲೇ ನುಡಿಯುತಿತ್ತು
ಮಗುವಾಗು
ರಂಗನಾಥನ ಸನ್ನಿಧಿಯೊಳಗಣ
ನಾದದ ನಗುವಾಗೆಂದು
ಉಸುರುತ್ತಲೇ ಇತ್ತು
‘ಅರಸುತ್ತಿದ್ದೇನೆ ನಿನ್ನ ಬರವ,
ಬಹೆಯೋ ಬಾರದಿಹೆಯೋ’
ಶಬರನಾಗಿದ್ದೆನಾಗ,
ತೊಳೆದೆ, ಸುಟ್ಟೆ, ಉಜ್ಜಿದೆ, ಒರಸಿದೆ
ಅಂಗಾಳ ತುಂಬೆಲ್ಲ
ಗಂಜಳವ ಸಿಂಪಡಿಸಿ
ಹಠಾತ್ತಾಗಿಯೇ ಗೈದಿದ್ದೆ ಯಜ್ಞವದ ತಣಿಯುತ್ತಿಲ್ಲವದಸಿವು
‘ಹಸಿವ ಹೂಂಕಾರ
ಹಾರಿ ಹಾರಿ ಏರುತ್ತಲೇ ಇತ್ತು
ಮೋಹದ ಯಾತ್ರೆ ಸಾಗುತ್ತಲೇ ಇತ್ತು’
‘ಬಂದೆಯಾ ಮಗು ಬಂದೆಯ ಗಿರಿಸೀಮೆಯಾಚೆಗಿನ ಹೆಂಬಂಡೆ ತಂದೆಯಾ…’ ರೋದಿಸುತ್ತಲೇ ಇತ್ತು
ರೊಚ್ಚಿಗೆದ್ದು
ಇಲ್ಲವದು ಮೊಲೆ ನನ್ನಲ್ಲಿ
ನಿನಗುಣಿಸೆ
ಮಥನೋನ್ಮಾದದ ಆ ಗಷ್ಟ
ಇಷ್ಟವಷ್ಟೇ ಎಂದಿದ್ದೆ
ಕಷ್ಟದಾ ಯಾನದಲಿ
ಹುರಿದ ಪುಷ್ಷವದೇ
ತಾನಾಗಿದ್ದೆನೆಂಬ
ಭ್ರಾಂತಿರಬಹುದೇನೋ
ಮತ್ತೆ
ಮೆಲ್ಲನೆಚ್ಚರವಾದಾಗ
ರಿಂಗಣಿಸುತ್ತಲೇ ಇತ್ತದು
ಗುಡಿಯ ಸ್ಪೀಕರೊಳಗೆ
‘ಬಂದೆಯಾ ಮಗು ಬಂದೆಯಾ
ಗಿರಿಸೀಮೆಯಾಚೆಗಿನ ಹೆಂಬಂಡೆ ತಂದೆಯಾ..’
ಜ್ಞಾನ ತಾನೊಲಿದಿತ್ತು…
ಅಭಿನಯವೆಂಬೊಂದು ಲೀಲೆ
ಬರಿದೇ ಧ್ಯಾನವೆಂದಷ್ಟೇ ಅಲ್ಲ ಅಂತರಂಗದೊಳಗಣ ಜ್ಯೋತಿರ್ಲಿಂಗದೆದುರು ನಿರತ ನಿರಂತರ ಮಥಿಸೋ
ತಮೋ ತಪಸ್ಸು
ಕಾಲಾಂತರ ಬೆಳಗೋ ದಿವ್ಯ
ದೀಪ್ತಿಯ ತೇಜಸ್ಸು
ಅಭಿನೇತ್ರನೆಂಬೋ
ಮಾಯ್ಕಾರ ತಾನೊಲಿವ
ಭಾವ ರೇತಸ್ಸು
0 ಪ್ರತಿಕ್ರಿಯೆಗಳು