ಜಿ ಎಚ್ ನಾಯಕ ನೆನಪು: ‘ನಾಡಹಬ್ಬದ ಹೆಸರಲ್ಲಿ ದೈವವನ್ನು ಹೇರುವುದು ನ್ಯಾಯವಲ್ಲ’

ಜಿ ಪಿ ಬಸವರಾಜು

(ಸಂದರ್ಶನ ಮತ್ತು ಲೇಖನ)

2010ನೇ ಸಾಲಿನ ಪಂಪ ಪ್ರಶಸ್ತಿಯನ್ನು ಪಡೆದ ಪ್ರೊ. ಜಿ.ಎಚ್.ನಾಯಕ ಪ್ರಾಮಾಣಿಕತೆಗೆ, ದಿಟ್ಟ ನಿಲುವಿಗೆ, ಖಚಿತ ಅಭಿಪ್ರಾಯಕ್ಕೆ ಹೆಸರಾದವರು. ಅವರ ನಿಲುವನ್ನು ಒಪ್ಪದವರೂ ಅವರ ಪ್ರಾಮಾಣಿಕತೆಯನ್ನು ಶಂಕಿಸಲಾರರು. ಅಧ್ಯಾಪಕರಾಗಿ, ಸಂಸ್ಕೃತಿಯ ನಿಜವಾದ ಚಿಂತಕರಾಗಿ, ಕನ್ನಡ ಸಾಹಿತ್ಯದ ಆಳ ಅಗಲಗಳನ್ನು ನಿಖರವಾಗಿ ತಿಳಿದ ವಿಮರ್ಶಕರಾಗಿ, ಅನೇಕ ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಮೀರಾ ನಾಯಕ ಅವರೊಂದಿಗೆ ಮೈಸೂರಿನಲ್ಲಿ ಅರ್ಥಪೂರ್ಣವಾಗಿ ಬದುಕುತ್ತಿರುವವರು ಜಿ.ಎಚ್.ನಾಯಕ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಸೂರ್ವೆಯವರಾದ ಗೋವಿಂದರಾಯ ಹಮ್ಮಣ್ಣ ನಾಯಕ (ಜನನ: 18 ಸೆಪ್ಟೆಂಬರ್ 1935) ಅವರಿಗೆ ವಿ.ಎಂ. ಇನಾಂದಾರ್ ವಿಮರ್ಶೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಜಿ.ಎಸ್.ಶಿವರುದ್ರಪ್ಪ ವಿಮರ್ಶೆ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ ದೊರೆತಿವೆ.
ಅಮೆರಿಕ, ಇಂಗ್ಲೆಂಡ್ ಮತ್ತು ಚೀನಾಗಳಲ್ಲಿ ನಾಯಕರು ಸರ್ಕಾರದ ಅತಿಥಿಯಾಗಿ ಪ್ರವಾಸ ಮಾಡಿದ್ದಾರೆ. ಸಮಕಾಲೀನ, ಅನಿವಾರ್ಯ, ನಿರಪೇಕ್ಷ, ನಿಜದನಿ, ಸಕಾಲಿಕ, ಗುಣಗೌರವ, ಹರಿಶ್ಚಂದ್ರ ಕಾವ್ಯ: ಓದು, ವಿಮರ್ಶೆ, ದಲಿತ ಹೋರಾಟ: ಗಂಭೀರ ಸವಾಲುಗಳು, ಸ್ಥಿತಿಪ್ರಜ್ಞೆ, ಮತ್ತೆ ಮತ್ತೆ ಪಂಪ, ಸಾಹಿತ್ಯ ಸಮೀಕ್ಷೆ, ಉತ್ತರಾರ್ಧ ಪ್ರಕಟವಾಗಿರುವ ವಿಮರ್ಶೆಯ ಕೃತಿಗಳು. ಅಲ್ಲದೆ ಅವರ ಸಮಗ್ರ ಕೃತಿಗಳನ್ನೊಳಗೊಂಡ ‘ಮೌಲ್ಯ ಮಾರ್ಗ’ ಕೂಡ ಪ್ರಕಟವಾಗಿದೆ. ಇವರ ಕೆಲವು ಸಂಪಾದಿತ ಕೃತಿಗಳೂ ಮನ್ನಣೆಗೆ ಪಾತ್ರವಾಗಿವೆ.

ಕರ್ನಾಟಕ ಸರ್ಕಾರ ಕೊಡುತ್ತಿರುವ ಪ್ರಶಸ್ತಿಗಳಲ್ಲಿ ಪಂಪ ಪ್ರಶಸ್ತಿ ಪ್ರಮುಖವಾದ ಪ್ರಶಸ್ತಿ. ಅದಕ್ಕೊಂದು ಘನತೆಯಿದೆ; ಗೌರವವಿದೆ. ಪಂಪ ಪ್ರಶಸ್ತಿ ದೊರೆತವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಕರ್ನಾಟಕದ ಜನ ಪರಿಭಾವಿಸುವ ಕ್ರಮದಲ್ಲಿಯೇ ಈ ಅಂಶಗಳು ಎದ್ದುಕಾಣಿಸುತ್ತವೆ. ಈ ಮಹತ್ವದ ಪ್ರಶಸ್ತಿಯನ್ನು ಆಯ್ಕೆಮಾಡಲು ಪ್ರತಿ ವರ್ಷ ಒಂದು ಪರಿಣತರ ಸಮಿತಿ ಇರುತ್ತದೆ. ಈ ಸಮಿತಿ ಆಯ್ಕೆಮಾಡಿದ ವ್ಯಕ್ತಿಗೆ ಸರ್ಕಾರ ಪಂಪ ಪ್ರಶಸ್ತಿಯನ್ನು ನೀಡಿ ಜನತೆಯ ಗೌರವವನ್ನು ಸೂಚಿಸುತ್ತಿದೆ. ಅನೇಕ ವರ್ಷಗಳಿಂದ ಇದೊಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. 1987ರಲ್ಲಿ ಕರ್ನಾಟಕ ಸರ್ಕಾರ ಈ ಪ್ರಶಸ್ತಿಯನ್ನು ಸ್ಥಾಪಿಸಿತು. ಆಗ ಈ ಪ್ರಶಸ್ತಿಯಲ್ಲಿ ಒಂದು ಲಕ್ಷ ರೂಪಾಯಿ ನಗದು ಹಣವೂ ಸೇರಿತ್ತು. ಮುಂದೆ 2008ರಲ್ಲಿ ಈ ಮೊತ್ತವನ್ನು ಮೂರು ಲಕ್ಷ ರೂಪಾಯಿಗೆ ಹೆಚ್ಚಿಸಲಾಯಿತು. 1996ರ ವರೆಗೆ ಅತ್ಯುತ್ತಮ ಕನ್ನಡ ಕೃತಿಗೆ ಮೀಸಲಾಗಿದ್ದ ಈ ಪ್ರಶಸ್ತಿ, ಮುಂದೆ ತನ್ನ ನಿಯಮವನ್ನು ಬದಲಾಯಿಸಿತು. ಕೃತಿಗಳ ಬದಲು ವ್ಯಕ್ತಿಗಳನ್ನು ಅವರ ಜೀವಮಾನದ ಸಾಧನೆಯ ಆಧಾರದ ಮೇಲೆ ಪರಿಗಣಿಸುವುದು ಆರಂಭವಾಯಿತು. ಪ್ರತಿವರ್ಷವೂ ಈ ಪ್ರಶಸ್ತಿಯನ್ನು ನೀಡುವುದು, ಹಾಗೆಯೇ ಒಂದು ವರ್ಷ ಸೃಜನಶೀಲಕ್ಕೆ, ಮರುವರ್ಷ ಸೃಜನೇತರ ಪ್ರಕಾರಕ್ಕೆ ಪ್ರಶಸ್ತಿ ಸಲ್ಲುತ್ತದೆ.

ಪಂಪ ಪ್ರಶಸ್ತಿಯನ್ನು ಪಡೆದ ಮೊದಲಿಗರು- ಕುವೆಂಪು; ಅವರ ‘ಶ್ರೀರಾಮಾಯಣ ದರ್ಶನಂ’ ಕೃತಿಗೆ ಈ ಪ್ರಶಸ್ತಿ ದೊರಕಿತು. ತೀನಂಶ್ರೀ, ಕಾರಂತ, ಭೂಸ್ನೂರಮಠ, ಪುತಿನ, ಮೂರ್ತಿರಾವ್,  ಅಡಿಗ, ಸೇಡಿಯಾಪು, ಕೆಎಸ್ನ, ಕಲ್ಬುರ್ಗಿ, ಜಿಎಸ್ಎಸ್, ದೇಜಗೌ, ಕಣವಿ, ಎಲ್.ಬಸವರಾಜು, ತೇಜಸ್ವಿ, ಚಿದಾನಂದಮೂರ್ತಿ, ಕಂಬಾರ, ನಾಗೇಗೌಡ, ಭೈರಪ್ಪ, ಆಮೂರ, ಚಿತ್ತಾಲ, ವೆಂಕಟಾಚಲಶಾಸ್ತ್ರಿ ಅವರಿಗೆ ಈ ಗೌರವ ಸಂದಿದೆ. 2010ನೇ ಸಾಲಿಗೆ ಪ್ರೊ. ಜಿ.ಎಚ್.ನಾಯಕ ಮತ್ತು 2011ನೇ ಸಾಲಿಗೆ ಬರಗೂರು ರಾಮಚಂದ್ರಪ್ಪ ಆಯ್ಕೆಯಾದರು. ಬರಗೂರು ಅವರಿಗೆ ಈಗಾಗಲೇ ಪ್ರಶಸ್ತಿ ಪ್ರದಾನವಾಗಿದೆ.

ಆದರೆ ಪ್ರೊ.ನಾಯಕರ ಪಂಪ ಪ್ರಶಸ್ತಿ ಪ್ರದಾನ ವಿವಾದಕ್ಕೆ ಕಾರಣವಾಗಿದೆ. ಈ ವಿವಾದಕ್ಕೆ ಬೇರೇನೂ ಕಾರಣವಾಗದೆ,  ಪ್ರಶಸ್ತಿಯ ವಿತರಣೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಡವಳಿಕೆಯೇ  ಕಾರಣವಾಗುತ್ತಿರುವುದು ಒಂದು ವ್ಯಂಗ್ಯದಂತೆಯೇ ಕಾಣಿಸುತ್ತಿದೆ.ಸಾಹಿತಿಗೆ ಆಯ್ಕೆ ಸಮಿತಿ ತೋರಿಸುವ ಗೌರವವನ್ನು ರಾಜಕಾರಣಿಗಳು ಮತ್ತು ಅಧಿಕಾರಶಾಹಿ ತೋರಿಸುವುದು ಸಾಧ್ಯವಾದರೆ ಇಂಥ ವಿವಾದಗಳಿಗೆ ಎಡೆಯೇ ಇರುವುದಿಲ್ಲ. ಪಂಪ ದೊಡ್ಡವನು, ಪಂಪ ಪ್ರಶಸ್ತಿಯನ್ನು ಪಡೆಯುವವರ ಸಾಧನೆಯೂ ಸಣ್ಣದೇನಲ್ಲ ಎಂಬ ತಿಳುವಳಿಕೆ ಮೂಡಿದರೆ ಸಹಜವಾಗಿಯೇ ಗೌರವವೂ ಹುಟ್ಟುತ್ತದೆ.

ಯಾವ ಪಕ್ಷದ ಸರ್ಕಾರವಾದರೂ ಅಧಿಕಾರ ನಡೆಸಲಿ, ಇಂಥ ತಿಳುವಳಿಕೆಯನ್ನು ನೀಡುವ ಹೊಣೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲಿರುತ್ತದೆ. ಆದರೆ ಅಲ್ಲಿಯೇ ತಿಳುವಳಿಕೆಯ ಅಭಾವ ಉಂಟಾದರೆ, ವಿವಾದಗಳು ಅನಿವಾರ್ಯವಾಗುತ್ತವೆ.ಈಗ ಎದ್ದಿರುವ ವಿವಾದವನ್ನೇ ನೋಡಿ. ವಿಮರ್ಶಕ ಪ್ರೊ.ಜಿ.ಎಚ್.ನಾಯಕರ ಬಗ್ಗೆ ಕನ್ನಡಿಗರು ತೋರಿಸುತ್ತ ಬಂದಿರುವ ಗೌರವ ದೊಡ್ಡದೇ. ಸಾಹಿತ್ಯ ಕ್ಷೇತ್ರದಲ್ಲಿ, ವಿಶೇಷವಾಗಿ ಕನ್ನಡ ವಿಮರ್ಶೆಯ ಕ್ಷೇತ್ರದಲ್ಲಿ ತಮ್ಮ ಆರೋಗ್ಯಕರ ನಿಲುವು, ಗ್ರಹಿಕೆ, ಒಳನೋಟ, ಪ್ರಾಮಾಣಿಕತೆ ಮತ್ತು ದಿಟ್ಟತನಗಳಿಂದ  ಪ್ರೊ. ನಾಯಕರು ಕಳೆದ ಐದಾರು ದಶಕಗಳ ಅವಧಿಯಲ್ಲಿ ಮಾಡಿರುವ ಕೆಲಸ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮಹತ್ವಪೂರ್ಣವಾದದ್ದು.

ನಾಯಕರ ಈ ಕೊಡುಗೆ ಕನ್ನಡ ವಿಮರ್ಶೆಯ ಪರಿಧಿಯನ್ನು ವಿಸ್ತರಿಸಿದೆ ಎಂಬುದರಲ್ಲಿ ಯಾವ ಅನುಮಾನವೂ ಇರಲಾರದು. ನವ್ಯ ವಿಮರ್ಶಕರಾಗಿ ಗುರುತಿಸಲ್ಪಟ್ಟ ನಾಯಕರು, ಕನ್ನಡ ಸಾಹಿತ್ಯ ಪರಂಪರೆಗೆ ಎದುರಾದ ಕ್ರಮ ಬಹಳ ಕುತೂಹಲಕಾರಿಯಾಗಿದೆ. ಕನ್ನಡದ ಆದಿಕವಿ ಪಂಪನನ್ನು ಕುರಿತು ನಾಯಕರು ಬರೆದಿರುವ ಲೇಖನಗಳು ಈ ಮಾತಿಗೆ ಪುರಾವೆ ಒದಗಿಸುತ್ತವೆ. ಪಂಪನನ್ನು ಕುರಿತ ನಾಯಕರ ಲೇಖನಗಳ ಸಂಖ್ಯೆ ಹೆಚ್ಚಿಲ್ಲ. ಆದರೆ ಈ ಲೇಖನಗಳ ಮೂಲಕ ನಾಯಕರು ಎತ್ತಿರುವ ಪ್ರಶ್ನೆಗಳು ಬಹಳ ಬೆಲೆಯುಳ್ಳವು. ಪಂಪನನ್ನು ಈವರೆಗೆ ಗ್ರಹಿಸಿರುವ ವಿಮರ್ಶಾ ಪರಂಪರೆಗೇ ಎದುರಾಗಿ ನಿಂತು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವ ರೀತಿ, ಹೊಸ ಒಳನೋಟಗಳನ್ನು ಕಟ್ಟಿಕೊಟ್ಟಿರುವ ಬಗೆ ನಾಯಕರ ಸಾಮರ್ಥ್ಯ, ಪ್ರತಿಭೆಗಳನ್ನು ತೋರಿಸುತ್ತವೆ. ಇದನ್ನು ಗಣನೆಗೆ ತೆಗೆದುಕೊಂಡೇ ಪ್ರೊ.ಚಂದ್ರಶೇಖರ ಪಾಟೀಲ ಅವರ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿ, ನಾಯಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿತು. ಇದು ಅರ್ಹರಿಗೆ ಸಂದ ಗೌರವ ಎಂದು ಕನ್ನಡ ಸಾಹಿತ್ಯಪ್ರೇಮಿಗಳು ಮೆಚ್ಚಿಕೊಂಡರು. (ವಿಶೇಷ ಎಂದರೆ ತೇಜಸ್ವಿ ಅವರನ್ನು ಪಂಪ ಪ್ರಶಸ್ತಿಗೆ ಆಯ್ಕೆ ಮಾಡಿದ ಸಮಿತಿಯ ಅಧ್ಯಕ್ಷರಾಗಿ ಜಿ.ಎಚ್.ನಾಯಕರು ಕಾರ್ಯನಿರ್ವಹಿಸಿದ್ದರು.)

ಇದೆಲ್ಲವೂ ಸರಿ. ಆದರೆ ಈ ಪ್ರಶಸ್ತಿಯನ್ನು ಗೌರವಯುತವಾಗಿ ವಿತರಿಸುವಲ್ಲಿ ಸರ್ಕಾರ, ವಿಶೇಷವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡವಿದ್ದು ಅನಗತ್ಯ ಗೊಂದಲವನ್ನು ಹುಟ್ಟುಹಾಕಿತು.  ಅಷ್ಟೇ ಅಲ್ಲ, ಯಾವ ಪ್ರಶಸ್ತಿಗೂ ಹಲುಬದೆ, ತಮ್ಮ ಬರಹ, ಬದುಕು, ಮೌಲ್ಯಗಳನ್ನು ಪ್ರಾಮಾಣಿಕ ನೆಲೆಯಲ್ಲಿ ಕಟ್ಟಿಕೊಂಡು ಬಂದಿರುವ ಪ್ರೊ. ನಾಯಕರಿಗೆ ಈ ಪ್ರಶಸ್ತಿ ಸಂತೋಷವನ್ನು ತರುವ ಬದಲು ನೋವನ್ನು ಉಂಟುಮಾಡಿತು.  ಕನ್ನಡ ಸಾಹಿತ್ಯ ಲೋಕದ ಅನೇಕ ಪ್ರಜ್ಞಾವಂತರೂ, ಪ್ರಶಸ್ತಿ ವಿತರಣೆಯಲ್ಲಾದ ಈ ಗೋಜಲು ಸ್ಥಿತಿಯನ್ನು ತೀವ್ರ ಅಸಮಾಧಾನದಿಂದ ನೋಡುವಂತಾಯಿತು. ಮಾಧ್ಯಮಗಳೂ ಈ ಸಂಗತಿಯನ್ನು ಕುರಿತು ಮತ್ತೆ ಮತ್ತೆ ಬರೆದವು. ಸರ್ಕಾರ, ಅದರ ಆಡಳಿತ ಯಂತ್ರ, ಸೂಕ್ಷ್ಮ ಸ್ಪಂದನವನ್ನು ಕಳೆದುಕೊಂಡರೆ ಏನಾಗಬಹುದು ಎಂಬುದನ್ನು ಈ ಪ್ರಶಸ್ತಿ ಪ್ರಕರಣ ಸ್ಪಷ್ಟವಾಗಿ ತೋರಿಸುತ್ತದೆ.

ಆದದ್ದಾದರೂ ಏನು? 2010ನೇ ಸಾಲಿನ ಪ್ರಶಸಿಗೆ ಪ್ರೊ. ನಾಯಕರನ್ನು ಸಮಿತಿ ಆಯ್ಕೆ ಮಾಡಿದ್ದು 2012 ರಲ್ಲಿ. (2012ರ ಮೇ 14 ರಂದು) ಮಾಧ್ಯಮಗಳು ತಕ್ಷಣವೇ ಈ ಸುದ್ದಿಯನ್ನು ಪ್ರಕಟಿಸಿದವು.  ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ನಾಯಕರ ಮಿತ್ರರು, ಸಾಹಿತ್ಯಪ್ರೇಮಿಗಳು, ಬಂಧುಬಳಗದವರು, ಶಿಷ್ಯರು ಹೀಗೆ ನಿತ್ಯವೂ ಹಲವರ ಫೋನುಗಳು ಬರುವುದು ಆರಂಭವಾಯಿತು. ಆದರೆ ಸರ್ಕಾರದಿಂದ ಅಧಿಕೃತ ಮಾಹಿತಿಯೇ ಇಲ್ಲದ ಕಾರಣ (ಈ ಸಂಗತಿ ತಿಳಿದದ್ದು 2012ರ ಜೂನ್ ಕೊನೆಯ ವಾರದಲ್ಲಿ) ನಾಯಕರು ಅನಗತ್ಯ ಮುಜುಗರವನ್ನು ಅನುಭವಿಸಬೇಕಾಯಿತು.  ಈ ವಿಳಂಬದಂತೆಯೇ ಪ್ರಶಸ್ತಿ ಪ್ರದಾನವೂ ಆಮೆ ನಡಿಗೆಯನ್ನೇ ಅನುಸರಿಸಿತು.2012ರ ನವೆಂಬರ್ 1 ರಂದು ಪಂಪನ ಹುಟ್ಟಿದ ಊರು ಅಣ್ಣಿಗೇರಿಯಲ್ಲಿ (ಧಾರವಾಡ ಜಿಲ್ಲೆ) ಸಭಾ ಭವನವೊಂದನ್ನು ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು. ಅಲ್ಲಿಯೇ ಪಂಪ ಪ್ರಶಸ್ತಿಯನ್ನು ಪ್ರದಾನಮಾಡಿದ್ದರೂ, ಅದಕ್ಕೊಂದು ಮಹತ್ವ ಒದಗಿಬರುತ್ತಿತ್ತು.

ಆದರೆ ಅದೇನೂ ಮಾಡದೆ ಸರ್ಕಾರ ದಿವ್ಯ ಮೌನವನ್ನು ವಹಿಸಿತು. ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು, ದಿನಾಂಕವನ್ನು ನಿಗದಿಗೊಳಿಸಿದ ಕೂಡಲೇ ತಿಳಿಸುತ್ತೇವೆ ಎಂದು ಸಂಸ್ಕೃತಿ ಇಲಾಖೆ ನಾಯಕರಿಗೆ ತಿಳಿಸಲು ಇನ್ನೆಷ್ಟೋ ತಿಂಗಳು ಬೇಕಾದವು (2012ರ ನವೆಂಬರ್ 30ರ ಸಂಸ್ಕೃತಿ ಇಲಾಖೆ ಪತ್ರ ಈ ಸಂಗತಿಯನ್ನು ತಿಳಿಸಿತು.) ತಮ್ಮ ತವರು ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಪ್ರಶಸ್ತಿ ಪ್ರದಾನವಾಗುತ್ತದೆಂಬ ಸಮಾಧಾನ ಮತ್ತು ಸಂತೋಷವನ್ನು ನಾಯಕರು ಸಹಜವಾಗಿಯೇ ಅನುಭವಿಸಿದರು. ಆದರೆ ಆ ಸಂತೋಷವೂ ಬಹಳ ಕಾಲ ಉಳಿಯಲಿಲ್ಲ. ಕಾರಣ ಕದಂಬೋತ್ಸವವೇ ನಡೆಯಲಿಲ್ಲ. ಇಂಥ ಸನ್ನಿವೇಶದಲ್ಲಿ ಈ ಗೌರವ ಪ್ರಶಸ್ತಿಯನ್ನು ಪಡೆದ ಸಾಹಿತಿಯ ಮನಃಸ್ಥಿತಿ ಎಂಥದಾಗಿರಬೇಕು? ರಾಜ್ಯ ವಿಧಾನ ಸಭೆಗೆ ಚುನಾವಣೆ ಯಾವುದೇ ಕ್ಷಣದಲ್ಲಿ ಘೋಷಣೆಯಾಗಿಬಿಡಬಹುದು, ತಾನು ಯಾವುದೇ ಕ್ಷಣದಲ್ಲಿ ನಿರ್ಗಮಿಸಬಹುದು ಎಂಬ ಆತಂಕ ಆರಂಭವಾಗುತ್ತಿದ್ದಂತೆಯೇ  ಭಾರತೀಯ ಜನತಾ ಪಕ್ಷದ ಸರ್ಕಾರ ಪ್ರಶಸ್ತಿ ಪ್ರದಾನಕ್ಕೆ ಮುಂದಾಯಿತು.

ಎಲ್ಲ ಪ್ರಶಸ್ತಿಗಳನ್ನೂ ಒಂದೇ ದಿನದಲ್ಲಿ ಮತ್ತು ಒಂದೇ ವೇದಿಕೆಯಲ್ಲಿ ವಿತರಿಸಿ ಮೆರೆಯಬೇಕೆಂದುಕೊಂಡ ಸರ್ಕಾರ ತರಾತುರಿಯಲ್ಲಿ ಈ ಸಮಾರಂಭಕ್ಕೆ ಸೂಚನೆ ನೀಡಿತು. ಯಾವ ಪ್ರಶಸ್ತಿಗೆ ಎಷ್ಟು ಮನ್ನಣೆ, ಯಾರ ಘನತೆ ಎಷ್ಟು ಎತ್ತರದ್ದು ಇತ್ಯಾದಿ ಯಾವ ಅಂಶಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಶಾಲಾ ಮಕ್ಕಳಿಗೆ ಬಹುಮಾನವನ್ನು ವಿತರಿಸುವ ಮಾದರಿಯಲ್ಲಿ ಪ್ರಶಸ್ತಿಗಳನ್ನು ವಿತರಿಸಿ ಕೈತೊಳೆದುಕೊಳ್ಳಲು ಸರ್ಕಾರ ಮುಂದಾಯಿತು. ಅದರಂತೆ 2013ರ ಮಾರ್ಚಿ 21 ರಂದು ಪ್ರಶಸ್ತಿಳನ್ನು ಬೆಂಗಳೂರಿನಲ್ಲಿ ಪ್ರದಾನ ಮಾಡಲು ನಿರ್ಧರಿಸಲಾಯಿತು. ಈ ಮಾಹಿತಿಯನ್ನು ತಿಳಿಸಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಂತಿ ಸಂದೇಶ ನಾಯಕರಿಗೆ ಕಳುಹಿಸಿದ್ದು ಮಾರ್ಚಿ 19ರಂದು; ಅದರ ಮರುದಿನವೇ ಅಧಿಕೃತ ಪತ್ರವೂ ಇಲಾಖೆಯಿಂದ ಬಂತು. ಜೋತೆಗೆ ದೂರವಾಣಿ ಕರೆ. ನಾಳೆಯೇ ಪ್ರಶಸ್ತಿ ವಿತರಣೆ, ಬಂದುಬಿಡಿ ಎನ್ನುವ ಗಡಿಬಿಡಿ.

ಬೇಸರದಿಂದ ನಾಯಕರು ಕೊಟ್ಟ ಉತ್ತರ: ‘ಬಟ್ಟೆಯನ್ನು ಇಸ್ತ್ರಿ ಮಾಡಿಸಿಕೊಳ್ಳುವುದಕ್ಕಾದರೂ ಟೈಂ ಬೇಡವೇ?’ ನಾಯಕರು ಕೊಟ್ಟ ಉತ್ತರ ತಮಾಷೆಯಂತೆ ಕಂಡರೂ, ಅದರಲ್ಲಿ ಘನತೆಯುಳ್ಳ ಲೇಖಕನೊಬ್ಬನ ಸಾತ್ವಿಕ ಕೋಪವಿತ್ತು. ಇದು ಸರ್ಕಾರಕ್ಕಾಗಲೀ, ಅದರ ಆಡಳಿತ ಯಂತ್ರಕ್ಕಾಗಲೀ ತಿಳಿಯುವ ಸಂಭವ ಕಡಿಮೆಯಿತ್ತು. ಯಾಕೆಂದರೆ ಎಲ್ಲರೂ ಸಮಾರಂಭವನ್ನು ನಡೆಸಿಬಿಡುವ ಆತುರದಲ್ಲಿದ್ದರು. ಯಾವ ಲೇಖಕ ಬರಲಿ ಬಿಡಲಿ, ಸಮಾರಂಭವಂತೂ ನಡೆದುಬಿಡಬೇಕೆಂಬ ಹುಂಬತನ ಅಲ್ಲಿತ್ತು. ನೊಂದ ನಾಯಕರು ಆ ಸಮಾರಂಭಕ್ಕೆ ಹೋಗಲಿಲ್ಲ.ಹೊಸ ಸರ್ಕಾರ ಬಂತು. ಸೆಕ್ಯೂಲರ್ ತತ್ವವನ್ನು ಗೌರವಿಸುವ, ಸಮಾಜವಾದಿ ಹಿನ್ನೆಲೆಯಿಂದ ರಾಜಕಾರಣಕ್ಕೆ ಬಂದ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರು. ಕಲಾವಿದೆ ಉಮಾಶ್ರೀ ಅವರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಸ್ತುವಾರಿಯನ್ನು ವಹಿಸಿಕೊಂಡರು. ಆದರೇನು? ಇಲಾಖೆಯ ಗೊಂದಲಗಳು ಮತ್ತೂ ಮುಂದುವರಿದವು.

ಪ್ರೊ. ನಾಯಕರ ಮೊಮ್ಮಗಳ ಮದುವೆಗೆ ಅವರ ಮನೆ ಸುಣ್ಣಬಣ್ಣ ಬಳಿದುಕೊಳ್ಳುತ್ತಿರುವ ಹೊತ್ತಲ್ಲಿ ಮತ್ತು ನಾಯಕರು ಮೈನರ್ ಆಪರೇಷನ್ಗೆ ಒಳಗಾಗಿದ್ದ ಸಂದರ್ಭದಲ್ಲಿ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ನಿಮ್ಮ ಮನೆಗೆ ಬಂದು ಪ್ರಶಸ್ತಿ ವಿತರಣೆ ಮಾಡುತ್ತೇವೆ, ಆಗಬಹುದೇ?’ ಎಂದಿತು. ಅದು ಸಾಧ್ಯವಾಗದ ಸನ್ನಿವೇಶ. ನಾಯಕರು ‘ಸದ್ಯ ಬೇಡ, ನಾಲ್ಕಾರು ದಿನಗಳ ನಂತರವಾದರೆ ಆಗಬಹುದು’ ಎಂದರು. ಮತ್ತೆ ದಿನಗಳು ಸರಿದು ಹೋದವು.ಈಗ ನಾಡಹಬ್ಬ ದಸರಾದಲ್ಲಿಯೇ ನಿಮಗೆ ಪ್ರಶಸ್ತಿ ವಿತರಿಸುತ್ತೇವೆ, ಆಗಬಹುದೇ? ಎನ್ನುವ ಪ್ರಸ್ತಾಪ ಬಂತು. ನಾಡಹಬ್ಬವನ್ನು ತಾತ್ವಿಕ ನೆಲೆಯಲ್ಲಿ ವಿರೋಧಿಸುತ್ತ ಬಂದ ನಾಯಕರು ಅದೇ ಹಬ್ಬದಲ್ಲಿ ಪ್ರಶಸ್ತಿ ಸ್ವೀಕರಿಸುವುದು ಹೇಗೆ ಸಾಧ್ಯ? ಇದನ್ನೇ ನಾಯಕರು ತಿಳಿಸಿದರು. ಸರ್ಕಾರ ಮತ್ತೆ ಮೌನವಾಗಿದೆ.  ಈ ಹಿನ್ನೆಲೆಯಲ್ಲಿ ನಾಯಕರೊಂದಿಗೆ ನಡೆದ ಮಾತುಕತೆ ಇಲ್ಲಿದೆ:

ಪ್ರಶ್ನೆ: ನಿಮ್ಮ ನಿಲುವು ಗೊತ್ತಿದ್ದರೂ ಮತ್ತೆ ಕೇಳುತ್ತಿದ್ದೇನೆ (ಓದುಗರ ದೃಷ್ಟಿಯಿಂದ). ನಾಡಹಬ್ಬವಾದ ಮೈಸೂರು ದಸರಾವನ್ನು ನೀವು ಏಕೆ ವಿರೋಧಿಸುತ್ತಿದ್ದೀರಿ?

ನಾಯಕ: ನನ್ನ ಈ ವಿರೋಧ ಈಗಿನದಲ್ಲ. 1995ರಲ್ಲಿಯೇ ನಾನು ಈ ವಿರೋಧವನ್ನು ವ್ಯಕ್ತಪಡಿಸಿದ್ದೆ. ಮುಂದೆ 1997ರಲ್ಲಿ ‘ದಸರಾ ಮಹೋತ್ಸವ ವಿಚಾರ ಸಂಕಿರಣ’ದಲ್ಲಿ ನನ್ನ ಈ ನಿಲುವನ್ನು ಪ್ರಕಟಿಸಿ ಒಂದು ಟಿಪ್ಪಣಿಯನ್ನೂ ಮಂಡಿಸಿದ್ದೆ. ಈ ಟಿಪ್ಪಣಿಯನ್ನೇ ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲರಿಗೆ 1.8.1997 ರಂದು ಪರಿಶೀಲನೆಗೆಂದು ಕಳುಹಿಸಿದ್ದೆ.ನಾನು ಸಂಸ್ಕೃತಿ/ಪರಂಪರೆ ವೈವಿಧ್ಯಗಳ ವಿರೋಧಿಯಲ್ಲ. ಪರಂಪರೆ ಎಂಬುದು ಎಂದೋ ಆಗಿಹೋಗಿರುವಂಥದಲ್ಲ; ನಿರಂತರವಾಗಿ ಆಗುವ ಪ್ರಕ್ರಿಯೆ. ತನ್ನ ಇರುವಿಕೆಯ ಅರ್ಥಪೂರ್ಣತೆಯನ್ನು ಸಮರ್ಥಿಸಿ  ಕೊಳ್ಳಲಾಗದ ಯಾವ ಒಂದು ಪರಂಪರೆಯೂ ಉಳಿಯಲಾರದು. ನಮ್ಮ ದೇಶ ಸ್ವತಂತ್ರವಾಗಿ ನಾವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಮೇಲೆ ಮಹಾರಾಜರು ಜಂಬೂಸವಾರಿಯಲ್ಲಿ ಹೊರಡುವುದನ್ನು ಸರಕಾರ ನ್ಯಾಯವಾಗಿಯೇ ರದ್ದುಮಾಡಿತು. ಆದರೆ ಮಹಾರಾಜರ ಬದಲು ಹಿಂದೆ (ಅಂದರೆ ರಾಜರ ಕಾಲದಲ್ಲಿ) ಇರದಿದ್ದ ಚಾಮುಂಡೇಶ್ವರಿಯ ಜಂಬೂ ಸವಾರಿಯನ್ನು ಸರಕಾರ ಹೊಸದಾಗಿ ಹುಟ್ಟುಹಾಕಿತು.

ದಸರೆ ಖಾಸಗಿ ವ್ಯಕ್ತಿಗಳ ಅಥವಾ ಒಂದು ಜನಸಮುದಾಯದವರ ಖರ್ಚುವೆಚ್ಚದಲ್ಲಿ ನಡೆಯುವ ಹಬ್ಬವಾಗಿಲ್ಲ. ಸರಕಾರವೇ ಯಜಮಾನಿಕೆ ವಹಿಸಿ ದಸರಾವನ್ನು ನಾಡಿನ ಎಲ್ಲ ಜನತೆಯ ‘ನಾಡಹಬ್ಬ’ ಎಂದು ಘೋಷಿಸಿ ಆಚರಿಸುತ್ತಿದೆ;  ಇದು ಯಾವ ದೈವದ ಹಬ್ಬವೂ ಅಲ್ಲ. ಎಲ್ಲ ನಾಡವರ ನಾಡಹಬ್ಬ. ನಮ್ಮ ಸಂವಿಧಾನದ ಪ್ರಕಾರ ಸರಕಾರ ಯಾವ ಜಾತಿ ಮತಕ್ಕೂ ಸೇರಿದ್ದಲ್ಲ; ಸೇರಿದ್ದಾಗಬಾರದು. ಮತಧರ್ಮ ನಿರಪೇಕ್ಷವಾದ ಸಮಾಜವಾದೀ ಸಮಾಜ ನಿರ್ಮಾಣವು ಧ್ಯೇಯೋದ್ದೇಶವಾಗಿರುವ ಸಂವಿಧಾನದ ವಿಧಿ ವಿಧಾನಗಳಂತೆ ಆಡಳಿತ ನಡೆಸುವುದಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರವಹಿಸಿಕೊಂಡವರು ಯಾವುದೇ ಮತಧರ್ಮದವರ ನಂಬಿಕೆಯ ದೈವವನ್ನು ಮೆರವಣಿಗೆಯಲ್ಲಿ ಮೆರೆಸುವುದು ಸಂವಿಧಾನ ಸಮ್ಮತವಾಗುವುದಿಲ್ಲ; ಜನತೆಗೆ ನೀಡಿದ ವಚನವನ್ನು ಪಾಲಿಸಿದಂತೆಯೂ ಆಗುವುದಿಲ್ಲ.

ಸರಕಾರವೇ ಹುಟ್ಟುಹಾಕಿದ, ಚಾಮುಂಡೇಶ್ವರಿಯನ್ನು ಮೆರವಣಿಗೆಯಲ್ಲಿ ಒಯ್ಯುವ ಈ ಹೊಸ ಸಂಪ್ರದಾಯ ಬಹುಸಂಖ್ಯಾತರ ದೈವವನ್ನು ಮೆರೆಸುವುದಾದ್ದರಿಂದ ಚರ್ಚೆಗೆ, ವಿರೋಧಕ್ಕೆ ಬಹಿರಂಗವಾಗಿ ಗುರಿಯಾಗಿಲ್ಲದಿರಬಹುದು. ಇದರ ಬದಲು ಅಥವಾ ಇದರ ಜೊತೆಗೆ ಅಲ್ಪ ಸಂಖ್ಯಾತರ ದೈವಗಳನ್ನೂ ಜಂಬೂ ಸವಾರಿಯಲ್ಲಿ ಕೊಂಡೊಯ್ದರೆ ಬಹುಸಂಖ್ಯಾತ ಧರ್ಮದ ಸಂಪ್ರದಾಯವಾದಿಗಳ ಪ್ರತಿಕ್ರಿಯೆ ಏನಾಗಿರುತ್ತಿತ್ತು?-ಈ ಪ್ರಶ್ನೆಯನ್ನೂ ತೆರೆದ ಮನಸ್ಸಿನಿಂದ ಕೇಳಿಕೊಳ್ಳುವ ಅಗತ್ಯವಿತ್ತು; ಈಗಲೂ ಇದೆ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ರಾಷ್ಟ್ರೀಯತೆಯ ಹೆಸರಿನಲ್ಲಿ ಭಾರತೀಯರನ್ನೆಲ್ಲ ಒಂದುಗೂಡಿಸುವ ಉದ್ದೇಶದಿಂದ ಗಣೇಶನ ಉತ್ಸವವನ್ನು ರಾಷ್ಟ್ರೀಯ ಉತ್ಸವವೆಂದು ಲೋಕಮಾನ್ಯ ತಿಲಕರು ಹುಟ್ಟುಹಾಕಿದರು. ಕಾಲಕ್ರಮದಲ್ಲಿ ಅದು ಧಾರ್ಮಿಕ ಮೂಲಭೂತವಾದಿಗಳಿಂದ ಆಗಾಗ ಮತೀಯ ಗಲಭೆಗಳಿಗೆ ಕಾರಣವಾಗುತ್ತ ಬಂದದ್ದು, ಈಗಲೂ ಅಂಥ ಭಯ ಉಳಿದೇ ಇರುವುದು ಆಧುನಿಕ ಭಾರತದ ಚರಿತ್ರೆಯ ಭಾಗವಾಗಿ ಹೋಗಿದೆ.

ಮಹಾತ್ಮ ಗಾಂಧಿ ರಾಮರಾಜ್ಯದ ಕಲ್ಪನೆಯನ್ನು ಬಿತ್ತಿದ್ದರು. ಆಗ ಅದು ಉನ್ನತ ಮೌಲ್ಯಗಳನ್ನು ಎತ್ತಿಹಿಡಿಯುವ, ಅವುಗಳ ಬಗ್ಗೆ ಅಚಲ ನಿಷ್ಠೆ ತೋರುವ ಧರ್ಮರಾಜ್ಯ ಕಲ್ಪನೆಯನ್ನು ಪ್ರತಿಪಾದಿಸುವ ಸದಾಶಯ ಉಳ್ಳದ್ದಾಗಿತ್ತು. ಈಗ ಮೂಲಭೂತವಾದಿಗಳ ಕೈಗೆ ಸಿಕ್ಕು ಆ ರಾಮ, ಆ ರಾಮರಾಜ್ಯದ ಕಲ್ಪನೆ ಯಾವ ರೂಪ ತಳೆದಿದೆ, ತಳೆಯುತ್ತಿದೆ ಎಂಬ ಬಗ್ಗೆ ಸ್ವಲ್ಪ ಯೋಚಿಸಬೇಕು.ಚರಿತ್ರೆ ಕಲಿಸಿದ ಇಂಥ ಅಹಿತಕರ ಪಾಠ, ಸೂಚನೆಗಳನ್ನು ಜನತೆ ಮರೆಯಬಾರದು; ಜಾತಿ-ಮತಧರ್ಮ ನಿರಪೇಕ್ಷ (ಸೆಕ್ಯುಲರ್) ಸಮಾಜವಾದೀ ಸಂಸ್ಕೃತಿ ನಿರ್ಮಾಣದ ಹೊಣೆಯಿರುವ ಸರಕಾರ ನಡೆಸುವವರಂತೂ ಮರೆಯಲೇ ಬಾರದು.ವಿವಿಧ ದೇಶಗಳಲ್ಲಿ ಭಾರತ ನಡೆಸುತ್ತ ಬಂದಿರುವ ‘ಭಾರತ ಉತ್ಸವ’ಕ್ಕೆ ಯಾವುದೇ ಮತಧರ್ಮದ ಸೋಂಕು ಇಲ್ಲ. ಕರ್ನಾಟಕ ಸರಕಾರವೇ ಕರಾವಳಿ ಉತ್ಸವ, ಮಲೆನಾಡು ಉತ್ಸವ ಇತ್ಯಾದಿ ಉತ್ಸವಗಳನ್ನು ಯಾವ ಮತಧರ್ಮದ, ಯಾವ ದೈವದ ಸೋಂಕೂ ಇಲ್ಲದಂತೆ ನಡೆಸುತ್ತಿದೆ.

ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೂ ಯಾವುದೇ ಮತಧರ್ಮದ, ದೈವದ ಸೋಂಕೂ ಇಲ್ಲ. ಈ ಎಲ್ಲ ಉತ್ಸವಗಳಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.ಇನ್ನೊಂದು ಅಂಶವನ್ನೂ ನಾವು ಮರೆಯಬಾರದು: ಯಾವುದೇ ಒಂದು ಧರ್ಮದಲ್ಲಿ ನಂಬಿಕೆಯಿಟ್ಟು ನಡೆದುಕೊಳ್ಳುವ ಹಕ್ಕು ಇರುವಂತೆಯೇ, ಯಾವ ಧರ್ಮ, ದೈವದಲ್ಲಿ ನಂಬಿಕೆ ಇಲ್ಲದವರೂ ಈ ದೇಶದಲ್ಲಿ ಸತ್ಪ್ರಜೆಗಳಾಗಿ ಇರುವ ಹಕ್ಕು ಇದೆ. ಅಂಥವರ ಮೇಲೆ ಈ ದೈವದ ಹಬ್ಬವನ್ನು ಹೇರುವುದು ಯಾವ ನ್ಯಾಯ? ಹೀಗೆ ನಂಬಿಕೆ ಇಲ್ಲದವರ ಸಂಖ್ಯೆ ಹೆಚ್ಚಿಲ್ಲದಿರಬಹುದು. ಸಂಖ್ಯೆಯನ್ನು ಪರಿಗಣಿಸಲು ಇದು ಚುನಾವಣೆಯಲ್ಲ. ನಾವು ಒಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ. ದೈವದಲ್ಲಿ ನಂಬಿಕೆ ಇಲ್ಲದವರ ಮೇಲೆ, ನಾಡಹಬ್ಬದ ಹೆಸರಲ್ಲಿ ದೈವವನ್ನು ಹೇರುವುದು ಮಾನವ ಹಕ್ಕುಗಳ ಉಲ್ಲಂಘನೆಯೂ ಆಗುತ್ತದೆ. ಇದನ್ನೂ ಸರ್ಕಾರ ಗಮನಿಸಬೇಕಾಗುತ್ತದೆ.

‍ಲೇಖಕರು G

May 26, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. Ananda Prasad

  ಜಿ. ಎಚ್. ನಾಯಕರ ನಿಲುವು ಅತ್ಯಂತ ಪ್ರಬುದ್ಧ ನಿಲುವು, ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುವ ನಿಲುವು. ಇದನ್ನು ಎಲ್ಲ ಪ್ರಜ್ಞಾವಂತರೂ, ಸಾಹಿತಿಗಳೂ, ಚಿಂತಕರೂ ಬೆಂಬಲಿಸುವುದು ಅಗತ್ಯ. ಇಂಥ ದೃಢ ನಿಲುವಿನ ಸಾಹಿತಿಗಳು, ಚಿಂತಕರು ನಮ್ಮ ದೇಶಕ್ಕೆ ಇಂದು ಬೇಕಾಗಿದ್ದಾರೆ.

  ಪ್ರತಿಕ್ರಿಯೆ
 2. yash

  ಸಂವಿಧಾನದ ವಿಧಿ ವಿಧಾನಗಳಂತೆ ಆಡಳಿತ ನಡೆಸುವುದಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರವಹಿಸಿಕೊಂಡವರು ಯಾವುದೇ ಮತಧರ್ಮದವರ ನಂಬಿಕೆಯ ದೈವವನ್ನು ಮೆರವಣಿಗೆಯಲ್ಲಿ ಮೆರೆಸುವುದು ಸಂವಿಧಾನ ಸಮ್ಮತವಾಗುವುದಿಲ್ಲ; ಜನತೆಗೆ ನೀಡಿದ ವಚನವನ್ನು ಪಾಲಿಸಿದಂತೆಯೂ ಆಗುವುದಿಲ್ಲ. ಇದು ನಿಜ.
  ನಾಯಕರದು ಪ್ರಬುದ್ಧ ನಿಲುವು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: