‘ನಾಟ್ಯ-ಯೋಗ’ ಕಟ್ಟಿಕೊಂಡು

ಕಲ್ಲಪ್ಪ ಪೂಜೇರ

ಬೆಳಗಾಮ್ ಜಿಲ್ಲೆಯ ರಾಮದುರ್ಗದ ಸಾಲೇಪೂರದವರು. ಬೆಂಗಳೂರು ವಿವಿಯಿಂದ ನಾಟಕದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂ ಪದವಿಗಳನ್ನು ಪಡೆದುಕೊಂಡು ಕಳೆದ ಒಂದೂವರೆ ದಶಕದಿಂದ ಸಕ್ರಿಯ ರಂಗಭೂಮಿಯಲ್ಲಿದ್ದಾರೆ. ‘ನಾಟ್ಯ-ಯೋಗ’ ಎಂಬ ಅರೆ ವೃತ್ತಿತಂಡ ಕಟ್ಟಿಕೊಂಡು ರಂಗಕಾಯಕದಲ್ಲಿ ಮುನ್ನಡೆದಿದ್ದಾರೆ.

ಜೋಗಿ, ಜಂಗಮ , ಬೈರಾಗಿಯಂತೆ
ಸುತ್ತಿ ಸುಳಿದು ಹತ್ತಿ ಇಳಿದು
ಕಟ್ಟಿದ್ದೇನೆ ನಾನೂ ಒಂದು ತಂಡವನ್ನು
ನಾಲಿಗೆಗೆ ಬಣ್ಣ ಹಚ್ಚುವವರ ಕಣ್ಣ ಬಿಚ್ಚಿ.
ಹೊರಟಿದೆ ನಮ್ಮ ಬಂಡಿ ಮುಖಕ್ಕೆ ಬಣ್ಣ ಹಚ್ಚಿ

ಐದು ವರ್ಷದ ಹಿಂದಿನ ಮಾತು ನಮ್ಮ ತಂಡ ಬಳ್ಳಾರಿ ಜಿಲ್ಲೆಯ ಆಂಧ್ರದ ಗಡಿ ಭಾಗದ ಗುಡಿಹಳ್ಳಿ ಎಂಬಲ್ಲಿ ಕಾಲಿಟ್ಟ ದಿನ. ಮುಸ್ಸಂಜೆ ಸಮಯ ಪಡ್ಡೆ ಹುಡುಗರ ಗುಂಪು ಪೋಲಿ ಮಾತುಗಳಲ್ಲಿ ನಮ್ಮನ್ನ ಅಣಕಿಸುತ್ತಾ ಕುಹಕ ನಗೆಗಳನ್ನು ನಗುತ್ತಾ ಬೀಡಿ ಹಚ್ಚಿದ ದೃಶ್ಯಗಳು ಸುಮ್ಮನೆ ಸರಿದು ಹೋಗುತ್ತವೆ.

ವೇದಿಕೆಗೆ ಬೆಳಕಿನ ವಿನ್ಯಾಸ ಮಾಡುವಾಗ ನಾನು 14 ಅಡಿ ಎತ್ತರದ ಏಣಿಯ ಮೇಲಿದ್ದೆ. ಉಳಿದ ರಂಗ ಸ್ನೇಹಿತರು ರಂಗಸಜ್ಜಿಕೆಯಲ್ಲಿ ತೊಡಗಿದ್ದರು. ಮಹಿಳಾ ಕಲಾವಿದರು ಪ್ರಸಾಧನದ ಸಾಮಾನುಗಳನ್ನು ವೇಷಭೂಷಣದ ಬಟ್ಟೆಯನ್ನು ಧೂಳು ತುಂಬಿದ ಮುರುಕಲು ಕೊಠಡಿಯೊಂದರಲ್ಲಿ ವ್ಯವಸ್ಥಿತವಾಗಿ ಜೋಡಿಸುತ್ತಿದ್ದರು. ಆಗತಾನೆ ನಿಧಾನವಾಗಿ ಜನಸಂದಣಿಯಾಗ ತೊಡಗಿತ್ತು. ಪುಂಡರ ಗುಂಪಿನಿಂದ ಹಿರಿಯನೊಬ್ಬನ ಧ್ವನಿ ಕೇಳಿಬಂತು “ಹೋಯ್ ಹೋಯ್ ಜೋಕರ್ ಚಿಮಣಾ ಕಹಾ ಹೈ ಚಿಮಣಾ.” ದೂರದಿಂದ ಬಂದ ನಮ್ಮ ವಾಹನ ದಣಿದಿತ್ತು. ಹತ್ತಿರದಲ್ಲಿದ್ದ ಕಲಾವಿದರು ಮುಖ ಮುಖ ನೋಡಿಕೊಂಡೆವು.

ನಮ್ಮ ಮ್ಯಾನೇಜರ್ ನಮ್ಮನ್ನೆಲ್ಲ ತಾಳ್ಮೆಯಿಂದ ನೋಡಿ ಕಣ್ಸನ್ನೇ ಮಾಡಿದ. ನಾವು ಮತ್ತೆ ಕಾಯಕ ಚಕ್ರವನ್ನು ತಿರುಗಿಸ ತೊಡಗಿದೆವು. ಅಷ್ಟರಲ್ಲಿ “ಅಣ್ಣಾ ಕಿಟಕಿಯಲ್ಲಿ ಯಾವನೋ ಬಂದು ಬಟ್ಟೆ ಜಗ್ಗಿದ” ಅಂತ ಸಹ ಕಲಾವಿದೆ ಹೋರಗೆ ಬಂದಳು. ಪುಂಡರ ಗುಂಪುಗಳು ಒಂದಾಗಲು ಶುರುಮಾಡಿದವು. ಆ ಊರಿನ ಹಿರಿಯರು ನಾವು ಹಿರಿಯರೇ ಅಲ್ಲ ನಿಮ್ಮ ಕುಚೇಷ್ಟೆಗಳು ಚೆಂದ ನಮಗೆ ಎಂಬಂತೆ ವರ್ತಿಸುತ್ತಿದ್ದರು . ನಮ್ಮ ತಂಡದ ಮ್ಯಾನೇಜರ್ ಅದರ ಬಗ್ಗೆ ವಿಚಾರಿಸ ತೊಡಗಲ ಹತ್ತಿದರು. ಅಷ್ಟರಲ್ಲಿ ಮತ್ತೊಂದು ಧ್ವನಿ ಅದೇ ಗುಂಪಿನಿಂದ “ಹಾದರಗಿತ್ತೇರು ಬಂದಿಲ್ಲೇನ ಪಾ……..” ಹೇಗಾಗಬೇಡ ನಮಗೆ ?

ತಾಳ್ಮೆ ಕಳೆದುಕೊಂಡಿದ್ದ ನಾನು ಕೈಯಲ್ಲಿದ್ದ ಫಾರ್ ಲೈಟ್ ಒಂದನ್ನು ಏಣಿಯ ಮೇಲಿನಿಂದಲೇ ಅವನತ್ತ ಬೀಸಿದೆ. ತಲೆಗೆ ಬಡಿದು ರಕ್ತ ಸೋರತೊಡಗಿತು. ಅವರ ಹತ್ತಾರು ಜನರ ಐದಾರು ಗುಂಪುಗಳು ನಮ್ಮ ಮೇಲೆರಗಿದವು. ಆಗ ನಾನಿನ್ನೂ ಚಿಗುರು ಮೀಸೆಯ ಕಲಾವಿದ. ಬೆರಳ ತುದಿಯಲ್ಲೇ ಉತ್ಸಾಹ, ಹುರುಪು, ಹಸಿವು, ಸಿಟ್ಟುಗಳು ತುಂಬಿ ತುಳುಕುವ ವಯಸ್ಸದು.

ಆ ಊರಿನವ ನಮ್ಮ ತಂಡದ ಮಹಿಳೆಯೊಬ್ಬಳ ಕೈಹಿಡಿದು ಎಳೆಯ ಹತ್ತಿದ್ದ. ಹತ್ತಿರವಿದ್ದ ಸ್ಕ್ರೂ ಡ್ರೈವರ್ ನಿಂದ ಅವನ ಕೈಗೆ ಚುಚ್ಚಿದೆ ಜಗಳ ಹತ್ತಿ ಉರಿಯತೊಡಗಿತು. ಮಧ್ಯಾಹ್ನದಿಂದ ಆಯೋಜಕ ಪತ್ತೆ ಇರಲಿಲ್ಲ. ನಮ್ಮನ್ನೆಲ್ಲಾ ಗುಂಪು ಗುಂಪಾಗಿ ಸೇರಿ ಹೊಡೆಯತೊಡಗಿದ್ದರು. ಆ ಕ್ಷಣ ನನ್ನೊಳಗೆ ಸುಮ್ಮನೆ ಓಡತೊಡಗಿದವು ಕೆಲವು ಆಲೋಚನೆಗಳು. “ಹೀಗೆ ಆಗುವುದಾದರೆ ನಮ್ಮನ್ನು ನಂಬಿ ಬಂದ ಹೆಣ್ಣು ಮಕ್ಕಳ ಪಾಡೇನು.?  ನಾನೂ ರಂಗತಂಡ ಕಟ್ಟಬೇಕೆಂಬ ಕನಸಿನ ಗತಿಯೇನು.? ರಂಗತಂಡಗಳ ಹಣೆಬರಹ ಇದೇನಾ ?”  ಎಂಬಿತ್ಯಾದಿ ವಿಚಾರಗಳು ಬೀಳುತ್ತಿದ್ದ ಹೊಡೆತಗಳಿಗಿಂತ ಗಾಢವಾಗಿದ್ದವು. ಅಷ್ಟರಲ್ಲೇ ಎಚ್ಚೆತ್ತುಕೊಂಡ ಊರಿನ ಕೆಲ ಪ್ರಮುಖರು ತಮ್ಮವರಿಗೂ…. ಹಾಗೂ ನಮ್ಮವರಿಗೂ….. ಸಮಜಾಯಿಸಿಗಳನ್ನು ನೀಡುತ್ತಾ ಗದ್ದಲಕ್ಕೆ ಚೂರು ವಿರಾಮ ನೀಡಿದರು. ಹೊಟ್ಟ್ಯಾಗಿನ್ ಸಿಟ್ ರಟ್ಟಿಗಿ ಬಂದ್ ಕಣ್ ಮುಚ್ಚಿ ಕಣ್ ತಗ್ಯದ್ರಾಗ ಗಂಟುಮೂಟಿ ಕಟ್ಟಿ ಹೊರಟ್ ಬಿಟ್ವಿ.

ಅದೇ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಸಮೀಪದ “ತೂಲಹಳ್ಳಿ” ಎಂಬ ಊರಿನ ಜನ ನಮ್ಮನ್ನು ಸತ್ಕರಿಸಿದ ರೀತಿಯನ್ನು ನೆನೆಸಿಕೊಂಡರೆ ಕಣ್ಣು ತುಂಬಿ ಬರುತ್ತೆ. ಯುಗಾದಿ ಹಬ್ಬಕ್ಕೆ ಎಲ್ಲರಿಗೂ ಹೊಸ ಪಂಚೆ, ಅಂಗಿ, ಸೀರೆ, ವಸ್ತ್ರ ನೀಡಿ ಪ್ರತಿಯೊಬ್ಬ ಕಲಾವಿದರನ್ನು ಒಂದೊಂದು ಮನೆಗೆ ಕರೆದುಕೊಂಡು ಹೋಗಿ ಎಣ್ಣೆಸ್ನಾನ ಮಾಡಿಸಿ ಮನೆಯ ಮಕ್ಕಳ ಹಾಗೆ ಪ್ರೀತಿಸಿದ ಜೀವಗಳ ಋಣ ತೀರಿಸಲು ಸಾಧ್ಯವೇ…..? ಹೆತ್ತ ತಂದೆ-ತಾಯಿಯರನ್ನೆ ಹಬ್ಬದ ದಿನದಂದು ಮರೆಸಿದ ಊರದು.

ಇಂತಹ ನೂರಾರು ಅನುಭವಗಳು ದಕ್ಕಿದ್ದರೂ… ರಂಗತಂಡ ಕಟ್ಟಲು ಏನೋ ಒಂದು ರೀತಿಯ ಭಯ. ಏಕೆಂದರೆ ಅದೊಂದು ರಕ್ತ ಸಂಬಂಧವಲ್ಲದ ಬದುಕಿನ ಕನಸು ಹೊತ್ತು ಬರುವ ಕಲಾಜೀವಿಗಳ,  ಹಲವಾರು ನಿರೀಕ್ಷೆಯನ್ನು ಒಳಗೊಂಡವರ, ಔಪಚಾರಿಕ ಬದುಕಿನ ರೀತಿ-ರಿವಾಜುಗಳನ್ನೊಳಗೊಂಡ ಕುಟುಂಬ ವ್ಯವಸ್ಥೆ ಶಿಸ್ತು, ತಾಳ್ಮೆ ,ಪ್ರೀತಿ, ಕಲಿಕೆ, ಸ್ಪಂದನೆ, ತ್ಯಾಗ, ಒಲವು, ಬಯಲು ಅದರ ಸ್ತರಗಳು. ದೀಪ ಬೆಳಗಲು ಎಣ್ಣೆ, ಬತ್ತಿ, ಹಣತೆ, ಗಾಳಿ, ಬೆಂಕಿ ಹೇಗೆ ಮುಖ್ಯವೋ ರಂಗತಂಡ ಉಳಿಯಲು ಅದನ್ನು ಕಟ್ಟುವ ಮನಸ್ಸುಗಳು ಅಷ್ಟೇ ಮುಖ್ಯ. ಅಂತಹ ಮನಸುಗಳೇ ಸೇರಿ ಒಂದು ಚಿಕ್ಕ ರಂಗತಂಡವನ್ನು ಕಟ್ಟಿಕೊಂಡೆವು. ಅದೆ “ನಾಟ್ಯಯೋಗ”.  

ಪ್ರತಿವರ್ಷ ಒಂದು ನಾಟಕವನ್ನು ಕಟ್ಟಿಕೊಂಡು ನಲವತ್ತರಿಂದ ಐವತ್ತು ಪ್ರದರ್ಶನಗಳನ್ನು ರಾಜ್ಯದಾದ್ಯಂತ ನೀಡಿ ಬಂದ ಆದಾಯವನ್ನು ಎಲ್ಲರೂ ಸಮನಾಗಿ ಹಂಚಿ ತಿನ್ನುವ ನಿಯಮದೊಳಗೆ ಈ ನಮ್ಮ ಪುಟ್ಟ ರಂಗತಂಡ ಇಂದಿಗೂ ದೀಪ ಬೆಳಗುತ್ತಿದೆ. ಬೆಳಕಿನ ಅವಶ್ಯಕತೆ ಕಣ್ಣು ಇದ್ದವರಿಗೆ ಮಾತ್ರ, ಎಂಬಂತೆ ನಾಟಕಗಳು ಪ್ರೇಕ್ಷಕರಿಗಾಗಿ ಮಾತ್ರ. ಆದರೆ ಮುಂದುವರಿದ ಆಧುನಿಕತೆ, ತಂತ್ರಜ್ಞಾನ, ಸಮತ್ತುಂಗದ ನಾಗರಿಕತೆಯು  ಕಲೆ-ಸಂಸ್ಕೃತಿಯನ್ನ ಹೇಳಹೊರಟಿರುವ ಚಿಕ್ಕಪುಟ್ಟ ರಂಗತಂಡಗಳ ಕಡೆಗೆ ನೋಡದೆ ಇರುವುದು ವಿಷಾದದ ಸಂಗತಿ.

ಕಳೆದ ವರ್ಷ ಮಂಜುನಾಯ್ಕ ಚಳ್ಳೂರು ಅವರ ರಚನೆಯ “ಫ್ಹೂ……” ಎಂಬ ನಾಟಕವನ್ನು ಬೆಂಗಳೂರಿನ ಯುವ ರಂಗನಿರ್ದೇಶಕ ಸಿದ್ಧಾರ್ಥ ಮಾಧ್ಯಮಿಕ ನಮಗೆ ಕಟ್ಟಿಕೊಟ್ಟಿದ್ದರು. ಕರ್ನಾಟಕದ ವೃತ್ತಿರಂಗಭೂಮಿ, ಹವ್ಯಾಸಿ ಹಾಗೂ ಆಧುನಿಕ ರಂಗಭೂಮಿಗೆ ಪೋಷಣೆ ನೀಡುತ್ತಾ ಬಂದಿರುವುದರಲ್ಲಿ ಮಠಗಳ ಪಾತ್ರ ದೊಡ್ಡದು. ಅದರಲ್ಲಿಯೂ ಬಸವಾದಿ ಶಿವಶರಣರ ನಾಟಕಗಳಿದ್ದರಂತೂ ರಂಗ ತಂಡಕ್ಕೆ ಹಲವಾರು ಪ್ರದರ್ಶನಗಳು ಸಿಗುತ್ತವೆ. ಈ ಬಾರಿ ನಮ್ಮ ತಂಡದ ನಾಟಕ ಅಂತರಂಗದ ಸಂಘರ್ಷಗಳ ಕುರಿತು ಹೇಳುವುದು ಆಗಿತ್ತು. ಹೀಗಾಗಿ ಮಠಗಳ ಸಹಕಾರ ಕಡಿಮೆಯಾದವು. ಜೊತೆಗೆ ಆ ಸಂದರ್ಭದಲ್ಲಿ ನಕಲಿ ರಂಗತಂಡಗಳ ಪರಿಶೋಧನೆ ಶುರುವಾಗಿ ಆಯೋಜಕರಿಗೆ ಬರಬೇಕಾದ ಸಹಾಯಧನ ತಡೆಹಿಡಿಯಲ್ಪಟ್ಟಿತ್ತು. ಹೀಗಾಗಿ ನಾಟಕವನ್ನು ಆಯೋಜಿಸಲು ತುಂಬಾ ಜನ ಹಿಂದೆಸರಿದರು.

ಕಳೆದ ವರ್ಷದ ತಿರುಗಾಟದ ಒಂದು ಸಂದರ್ಭ ಹೀಗಿತ್ತು. ಬಾಗಲಕೋಟೆ ಜಿಲ್ಲೆ ಬಾದಾಮಿ ಹತ್ತಿರದ ಊರೊಂದರಲ್ಲಿ ಆಯೋಜನೆಯಾಗಿದ್ದ ನಾಟಕ ಪ್ರದರ್ಶನದ ದಿನ ಮಧ್ಯಾಹ್ನದ ಸಮಯಕ್ಕೆ ರದ್ದಾಯಿತು. ನಾವು ಆ ಊರಿಗೆ ಹೋದಾಗ ನಾಟಕವನ್ನು ಆಯೋಜಿಸಿದವರು ಅಲ್ಲಿಂದ ಕಾಲ್ಕಿತ್ತಿದ್ದರು. ನಮಗೆ ಅಲ್ಲಿ ರಾತ್ರಿ ಉಳಿಯಲು ಅವಕಾಶ ದೊರೆಯಲಿಲ್ಲ. ನಾವು ಬಾದಾಮಿ ಹತ್ತಿರದಿಂದ ಶಿವಯೋಗ ಮಂದಿರಕ್ಕೆ ಬರುವ ಹೊತ್ತಿಗೆ ರಾತ್ರಿಯಾಗಿತ್ತು, ಉಳಿದುಕೊಳ್ಳಲು ಎಲ್ಲಿಯೂ ಅವಕಾಶ  ಸಿಗಲಿಲ್ಲ. ಶಿವಯೋಗ ಮಂದಿರದ ದೇವಸ್ಥಾನದ ಗರ್ಭಗುಡಿಯಲ್ಲಿ ಮಹಿಳೆಯರನ್ನು ಮಲಗಿಸಿ ನಾವು ಹೊರಗಿನ ಆಲದ ಮರದ ಕೆಳಗೆ ನಿದ್ದೆ ಬಂದವರ ಹಾಗೆ ಮಲಗಿದ್ದೆವು.

ಕಳೆದ 9 ವರ್ಷದ ತಿರುಗಾಟದ ಅನುಭವದಲ್ಲಿ ಒಂದು ಪ್ರದರ್ಶನಕ್ಕೆ 30000 ಹಣ ಸಿಕ್ಕಿದ್ದೂ ಇದೆ, ಮೂರು ಸಾವಿರ ಹಣ ಸಿಕ್ಕಿದ್ದೂ ಇದೆ. ಕೆಲವೊಮ್ಮೆ ಎಲ್ಲಿಯೂ ಪ್ರದರ್ಶನಕ್ಕೆ ಅವಕಾಶ ಸಿಗದೇ ಇದ್ದಾಗ ರಾತ್ರಿ ಊಟಕ್ಕಾಗಿ ಕೂಡ ನಾವು ಪ್ರದರ್ಶನವನ್ನು ನೀಡಬೇಕಾದ ಸಂದರ್ಭ ಬಂದೊದಗಿದೆ. ಆಧುನಿಕ ರಂಗಭೂಮಿಯ ರಂಗಪ್ರಯೋಗಗಳು ತನ್ನ ಮಜಲುಗಳನ್ನು, ಪ್ರದರ್ಶನದ ಅಸ್ತಿತ್ವವನ್ನು ಪ್ರದರ್ಶನದ ಸಿದ್ಧಾಂತವನ್ನು, ನಾಟಕದ ಆಶಯವನ್ನು, ಬದಲಾಯಿಸಿಕೊಂಡಿದ್ದರ ಪರಿಣಾಮ ನಟ, ಕಲಾವಿದರ ತಂಡ, ಅದನ್ನು ನಿರ್ವಹಿಸಿಕೊಂಡು ಹೋಗುತ್ತಿರುವ ಜವಾಬ್ದಾರಿಯ ವ್ಯಕ್ತಿ ಎಲ್ಲರೂ ಆ ಊರಿನ ಸಂಸ್ಕೃತಿ, ಭಾಷೆ, ಸಂಸ್ಕಾರ, ಅಲ್ಲಿಯ ಜಾನಪದದ ಸೊಗಡನ್ನು ಅರ್ಥಮಾಡಿಕೊಂಡು ಅವರೊಂದಿಗೆ ಪ್ರತಿಸ್ಪಂದಿಸುತ್ತಾ ಹೋಗಬೇಕಾಗುತ್ತದೆ.

ರಂಗತಂಡವನ್ನು ಕಟ್ಟಬೇಕಾದವನ ರೆಕ್ಕೆ ಗಟ್ಟಿಯಾಗಿರಬೇಕಾಗುತ್ತದೆ. ಗಾಳಿ ಬೀಸಿದಾಗ, ಮಳೆ ಸುರಿದಾಗ, ಬದುಕಿನ ಕನಸು ಹೊತ್ತು ಬಂದವರ ಜೀವಗಳನ್ನು ತನ್ನ ರೆಕ್ಕೆಯಿಂದ ಮುಚ್ಚಿ ಬೆಚ್ಚಗಿರಿಸಲು. ಕೆಲವೊಮ್ಮೆ ಹೀಗೂ ಆಗಿದೆ ನನಗೆ ಪುಕ್ಕಗಳಿರದ ನನ್ನ ರೆಕ್ಕೆಗೆ ಅವರೇ ಗರಿಗಳಾಗಿ ನನ್ನನ್ನು ಹೊತ್ತು ಹಾರಿ ದಡ ಸೇರಿಸಿದ್ದೂ ಇದೆ .

ರಂಗ ತಂಡ ಕಟ್ಟಿಕೊಂಡು ಹೋಗುವವನ ಕೈ-ಬಾಯಿ ಕಚ್ಚೆ ಶುದ್ಧವಾಗಿರಬೇಕು. ಬೇಂದ್ರೆ ಅಜ್ಜ ಹೇಳೊ ಹಂಗೆ ಸಮಾಜ ಕೆಟ್ರ ನಾಟಕದವರಿಂದ ಬದಲಾಯಿಸಬಹುದು ನಾಟಕದವರ ಕೆಟ್ರ….. ?

‍ಲೇಖಕರು Avadhi

December 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: