ನಾಟಕ ನೋಡಿ ಹೃದಯ ತುಂಬಿ ಬಂತು

ನಿವೇದಿತಾ ಎಚ್

—–

ಇದೀಗ ತಾನೆ ರಾಜ್ಯೋತ್ಸವದ ಆಚರಣೆ ಮುಗಿದಿದೆ, ಕರ್ನಾಟಕ ಎಂಬ ನಾಮಕರಣದ  ಸುವರ್ಣ ಸಂಭ್ರಮ ವರ್ಷಪೂರ್ತಿ ನಡೆಯಲು ತಯಾರಿ ಭರ್ಜರಿಯಾಗಿಯೇ ನಡೆದಿದೆ. ರಾಜ್ಯೋತ್ಸವ ಎಂದ ತಕ್ಷಣ ನವೆಂಬರ್‌ ಬಂದ ತಕ್ಷಣ ನಮ್ಮ ಕನ್ನಡ ಪ್ರೀತಿ ಮುನ್ನೆಲೆಗೆ ಬಂದು ಸಾಕಷ್ಟು ಚರ್ಚೆಗಳಿಗೆ ವೇದಿಕೆ ಒದಗಿಸಲು ಸಿದ್ಧರಾಗಿ ಬಿಡುತ್ತೇವೆ. ಕನ್ನಡ ಅಳಿಯುತ್ತಿದೆ ಎಂಬ ಕೂಗು ಎಂದಿನಂತೆ ಎದ್ದು, ಯುವಜನತೆಯನ್ನು ಟೀಕಿಸಲು ಭರದಿಂದ ಅಂಕಿ ಅಂಶಗಳನ್ನು ಒಟ್ಟುಗೂಡಿಸ ತೊಡಗುತ್ತೇವೆ.

ಆದರೆ ಕನ್ನಡ ಎಂದಿಗೂ ಸಾಯಲಾರದು ಎಂಬ ಸಮಾಧಾನಕರ ಸತ್ಯವನ್ನು, ನಾವು ಹೀಗಳೆಯುವ ಯುವಜನರೇ ಮತ್ತೆ ಮತ್ತೆ  ಸಾಬೀತು ಮಾಡುತ್ತಿದ್ದಾರೆ. ಇತ್ತೀಚೆಗಿನ ಕೆಲವು ರಂಗಪ್ರಯೋಗಗಳನ್ನು ನೋಡಿದಾಗ ಈ ಸತ್ಯದ ಮನವರಿಕೆಯಾಯಿತು.

ಕನ್ನಡ ಅಳಿಯಲು ಸಾಧ್ಯವೇ ಇಲ್ಲ, ಮಕ್ಕಳು ಕನ್ನಡದಿಂದ ವಿಮುಖರಾಗುತ್ತಿದ್ದಾರೆ ಎಂಬ ವಾದ ಅರ್ಧಸತ್ಯವಷ್ಟೇ ಎಂದು ನನಗೆ ಶೇಕಡಾ ನೂರು ಮನವರಿಕೆಯಾದದ್ದು, ನವೆಂಬರ್‌ ಮೂರರಂದು ಮೈಸೂರಿನ ಅರಿವು ಶಾಲೆಯ ಮಕ್ಕಳು ನಡೆಸಿಕೊಟ್ಟ ಪ್ರಯೋಗಗಳನ್ನು ನೋಡಿದ ಮೇಲೆ.

೯ನೇ ತರಗತಿಯ ಮಕ್ಕಳು ಕುಮಾರವ್ಯಾಸ, ಪಂಪ ಮತ್ತು ರನ್ನ ನ ಭಾರತಗಳ ಕೆಲವಷ್ಟು ಪದ್ಯಗಳನ್ನು ಅಭಿನಯದೊಂದಿಗೆ ಪ್ರಸ್ತುತ ಪಡಿಸಿದರೆ, ೧೦ನೆಯ ತರಗತಿ ಮಕ್ಕಳು, ಸಂಸರ ʻವಿಗಡ ವಿಕ್ರಮರಾಯʼ ಕೃತಿಯನ್ನು ಸಶಕ್ತವಾಗಿ ರಂಗದ ಮೇಲೆ ಅಭಿನಯಿಸಿದರು.

ಇಂದು ಮೊಬೈಲ್‌ ಪಾಶಕ್ಕೆ ಸಿಕ್ಕಿರುವ ಮಕ್ಕಳನ್ನು ಅದರಿಂದ ಹೊರತರುವುದು ಎಂತಹಾ ಭಯಂಕರ ಕಷ್ಟದ ಕೆಲಸವೆಂಬುದು ಎಲ್ಲರಿಗೂ ಗೊತ್ತು. ಈಗ ಇಂಗ್ಲಿಷ್‌ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗಂತೂ ಒತ್ತು, ಸುಳಿ, ದೀರ್ಘ, ಒಟ್ರಸುಳಿ ಇರುವ ಕನ್ನಡ ಕಬ್ಬಿಣದ ಕಡಲೆಯಾಗಿಬಿಟ್ಟಿದೆ. ಇಂತಹ ಸನ್ನಿವೇಶದಲ್ಲಿ, ಅರಿವು ಶಾಲೆಯ ಮಕ್ಕಳದು ಶಹಬಾಸ್ ಗಿರಿ ಪಡೆಯುವುವಂತಹ ಉತ್ತಮ ಮತ್ತು ಹೆಮ್ಮೆಯ ಕಾರ್ಯ.

ಹಳೆಗನ್ನಡ ಪದ್ಯಗಳನ್ನು ಸ್ವಲ್ಪವೂ ತಡವರಿಸದೆ, ಅಭಿನಯದೊಂದಿಗೆ ಅವರು ಹೇಳುತ್ತಿದ್ದರೆ, ನಿಜಕ್ಕೂ ಮೈ ರೋಮಾಂಚನವಾಯಿತು. ಸಂಸರ ಕಠಿಣ ಕನ್ನಡವನ್ನು ಸುಲಲಿತವಾಗಿ ಬಳಸುತ್ತಾ, ಅದಕ್ಕೆ ತಕ್ಕುದಾದ ಅಭಿನಯವನ್ನು ಲೀಲಾಜಾಲವಾಗಿ ಮಾಡುತ್ತಿದ್ದ ಮಕ್ಕಳನ್ನು ಕಂಡು ಹೃದಯ ತುಂಬಿಬಂತು.

ಮಕ್ಕಳನ್ನು ಈ ಪ್ರಯೋಗಕ್ಕೆ ಒಡ್ಡಿಕೊಳ್ಳುವಂತೆ ಪ್ರೇರೇಪಿಸಿದವರು, ಅರಿವು ಶಾಲೆಯ ಸಂಸ್ಥಾಪಕ ನಿರ್ದೇಶಕರಾದ ಜನಾರ್ಧನ್‌ ಅವರಿಗೆ ಅಭಿನಂದನೆ ಸಲ್ಲಬೇಕು. ಪುಟ್ಟ ಮಕ್ಕಳನ್ನು ನೂರಾರು ವರ್ಷಗಳ ಹಿಂದಿನ ಭಾಷೆಗೆ ಪಕ್ಕಾಗಿಸಿ, ಆತ್ಮವಿಶ್ವಾಸದಿಂದ ಅವರು ಹಳೆಗನ್ನಡ ಮತ್ತು ಕಠಿಣ ಕನ್ನಡಗಳನ್ನು ಸಹಜಾಭಿನಯದೊಂದಿಗೆ ಆಡಲು ಬೆನ್ನೆಲುಬಾಗಿ ನಿಂತ ಎರಡೂ ರಂಗಪ್ರಯೋಗಗಳ ನಿರ್ದೇಶಕರು, ಯತೀಶ್‌ ಕೊಳ್ಳೇಗಾಲ. ಯತೀಶ್‌ ಅವರಿಗೆ ಅಭಿನಂದನೆಗಳು.

ಮೂರು ನಾಲ್ಕು ಉದಾಹರಣೆಗಳನ್ನು ನಾನು ಕೊಟ್ಟಿದ್ದೇನಷ್ಟೆ. ಆದರೆ ಗಮನಿಸುತ್ತಾ ಬಂದರೆ, ರಂಗಪ್ರಯೋಗಗಳ ಮೂಲಕ, ಕನ್ನಡದ ಮಹತ್ವದ ಕೃತಿಗಳು ರಂಗದ ಮೇಲೆ ಬರುವುದಷ್ಟೇ ಅಲ್ಲ, ಮರು ಓದಿಗೆ ಒಳಪಡುತ್ತಿವೆ. ಬೆಟ್ಟದ ಜೀವ, ಮೂಕಜ್ಜಿಯ ಕನಸುಗಳು, ಪೂಚಂತೇ ಅವರ ಕಥೆಗಳು, ಪರ್ವ, ಕನ್ನಡ ಮಹಾಕಾವ್ಯಗಳು, ಜಾನಪದ ಕಾವ್ಯಗಳು, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಕನ್ನಡವನ್ನು ಬೆಳೆಸಬೇಕಾದರೆ ಬಳಸಬೇಕಷ್ಟೆ. ಇಂತಹಾ ಪ್ರಯೋಗಗಳು ಅದಕ್ಕೆ ಇಂಬು ನೀಡುತ್ತವೆ.

‍ಲೇಖಕರು avadhi

November 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: