ಸಂಯುಕ್ತಾ ಪುಲಿಗಲ್
**
ನಾಗಶ್ರೀ ಬುಕ್ ಹೌಸ್ ಎಂಬ ಬಹು ಮೆಚ್ಚಿನ ಸ್ಥಳ ಇಂದು ನೆನಪಿನ ಪುಟಗಳಲ್ಲಿ ಸೇರಿ ಇತಿಹಾಸವಾಗುತ್ತಿದೆ. ಇಂದು ಸ್ವಲ್ಪ ಸಮಯವಿದೆ ಏನು ಮಾಡೋಣ ಎಂದು ಪೂರ್ತಿ ಆಲೋಚಿಸುವಷ್ಟರಲ್ಲೇ ನಮ್ಮ ಪ್ರಯಾಣ ನಾಗಶ್ರೀಯತ್ತ ಸಾಗುತ್ತಿತ್ತು. ಜಯನಗರ ಶಾಪಿಂಗ್ ಕಾಂಪ್ಲೆಕ್ಸಿನ ಗಿಜಿಗುಡುವ ಜನಜಂಗುಳಿಯ ನಡುವೆ ಕಂಡೂ ಕಾಣದಂತೆ ಇದ್ದ ಈ ತಾಣ, ಸಂತೆಯ ನಡುವಿನ ಸಂತನಂತೆ ಇತ್ತು. ಆಟೋಮ್ಯಾಟಿಕ್ ಆಗಿ ಮುಚ್ಚಿ ತೆರೆಯುವ ಆ ಬಾಗಿಲಿನ ಆಚೆ ಬದಿಗೆ ಹೊಕ್ಕರೆ ಸಾಕು ಅಲ್ಲಿನ ಪ್ರಪಂಚವೇ ಬೇರೆ. ಇದ್ದ ಸಣ್ಣ ಸ್ಥಳದಲ್ಲಿ ಅದೆಷ್ಟು ಅದ್ಭುತ ಪುಸ್ತಕ ರತ್ನಗಳಿದ್ದವು. ಅಪರೂಪದ ಪುಸ್ತಕಗಳ ರಾಶಿಯೊಂದಿಗಿನ ಬೋನಸ್ ಎಂದರೆ ವೆಂಕಟೇಸ್ ಸರ್ ಮತ್ತು ಪ್ರಸಾದ್ ಸರ್ ಅವರ ಒಡನಾಟ.
ಪ್ರತಿ ಬಾರಿ ಆಪ್ಯಾಯವಾಗಿ ಬರಮಾಡಿಕೊಂಡು, ಆತ್ಮೀಯವಾಗಿ ಮಾತನಾಡಿಸಿ ಕಳುಹಿಸಿಕೊಡುತ್ತಿದ್ದರು. ನಮ್ಮಿಬ್ಬರ ಜೊತೆಗಿನ ಸ್ನೇಹದ ಸವಿಯನ್ನು ಮಗಳು ಸುರಗಿಗೂ ಹಂಚುತ್ತಿದ್ದರು. ಅವಳಿಗೂ ಈ ಸ್ಥಳ ಮೆಚ್ಚಿನದಾಗಿ ಹೋಗಿತ್ತು. ನಾಗಶ್ರೀಯೊಂದಿಗಿನ ಸವಿನೆನಪುಗಳು:
1. ಪರ್ವತದಲ್ಲಿ ಪವಾಡ ಪುಸ್ತಕ ಓದಿ ಪ್ರಸಾದ್ ಸರ್ ಒಂದು ಸುದೀರ್ಘ ಮೆಚ್ಚುಗೆ ಪತ್ರ ಬರೆದಿದ್ದರು. ವೆಂಕಟೇಶ್ ಸರ್ ಮೆಚ್ಚುಗೆ ವ್ಯಕ್ತ ಪಡಿಸಿ ಪುಸ್ತಕವನ್ನು ಇತರರಿಗೆ ಕೊಟ್ಟು ಓದಿಸಿದ್ದರು.
2. ಒಮ್ಮೆ ಕೆಲವು ಪುಸ್ತಕಗಳನ್ನು ಕೊಳ್ಳಲು ಆರಿಸಿ ಅವನ್ನು ಮೇಜಿನ ಮೇಲೆ ಇಟ್ಟಿದ್ದಾಗ, ಅಲ್ಲಿಗೆ ಬಂದ ಜಿ.ಕೆ.ಗೋವಿಂದರಾವ್ ಸರ್ ಆ ಪುಸ್ತಕಗಳನ್ನು ನೋಡಿ ಅದರೊಂದಿಗೆ ಒಂದು ಮಾಂಟೋ ಪುಸ್ತಕವನ್ನು ಸೇರಿಸಿ ಉಡುಗೊರೆಯಾಗಿ ಕೊಡಿಸಿದ್ದರು.
3. ಕೆಲವು ಘಂಟೆಗಳು ಅಲ್ಲಿಯೇ ಸಮಯ ಕಳೆದರೂ ಸ್ವಲ್ಪವೂ ಬೇಸರಿಸಿಕೊಳ್ಳದೆ, ಪುಸ್ತಕಗಳ ಬಗ್ಗೆ, ಓದಿನ ಬಗ್ಗೆ, ಇಂದಿನ ಓದುಗರ ಬಗ್ಗೆ ಮಾತನಾಡುತ್ತ, ಸಮಾಧಾನವಾಗಿ ಇರುತ್ತಿದ್ದರು. ಒಳ್ಳೆಯ ಪುಸ್ತಕಗಳನ್ನು ಸೂಚಿಸುತ್ತಿದ್ದರು.
4. ಇತ್ತೀಚೆಗಂತೂ ಮಗಳೊಂದಿಗೆ ಭೇಟಿ ನೀಡಿದಾಗ, ಅವರಿಗೆ ಹೊಸ ಸಂಭ್ರಮ. ಅವಳನ್ನು ಆರೈಕೆ ಮಾಡುವುದು, ಉಡುಗೊರೆ ಕೊಡುವುದು, ಪುಸ್ತಕಗಳನ್ನು ಸೂಚಿಸುವುದು ಎಲ್ಲವೂ ನಡೆದಿತ್ತು.
ಇಷ್ಟು ಕಾಲ ಪುಸ್ತಕ ಪ್ರಿಯರನ್ನು ಪರೋಕ್ಷವಾಗಿ ಪೋಷಿಸುತ್ತಿದ್ದ ಈ ಇಬ್ಬರು ಸಹೋದರರು ಮತ್ತು ನಾಗಶ್ರೀಗೆ ಧನ್ಯವಾದಗಳು. ಯು ವಿಲ್ ಬಿ ಮಿಸ್ಡ್ ಫಾರೆವರ್. ಸ್ವಲ್ಪ ಕಾಲ ಮುನ್ನವೇ ನಿವೃತ್ತಿ ಪಡೆದ ಪ್ರಸಾದ್ ಸರ್ ಹಾಗೂ ಇದೀಗ ನಿವೃತ್ತಿಯ ಜೀವನಕ್ಕೆ ಕಾಲಿಡುತ್ತಿರುವ ವೆಂಕಟೇಶ್ ಸರ್ ಇಬ್ಬರಿಗೂ ಪ್ರೀತಿಯ ಶುಭ ಹಾರೈಕೆಗಳು.
0 Comments