ನಾಗರಾಜ ಶೆಟ್ಟಿ ಓದಿದ ‘ನಾನಿನ್ನೂ ಅರಿಯಬೇಕಿದ್ದ ನನ್ನಪ್ಪ’

ನಾಗರಾಜ ಶೆಟ್ಟಿ

ಅಪ್ಪನನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ: ʼನಾನಿನ್ನೂ ಅರಿಯಬೇಕಾದ ನನ್ನಪ್ಪʼ

ಶ್ಯಾಮಲಾ ಗುರುಪ್ರಸಾದ್‌ ತಮ್ಮ ತಂದೆ ಜಿ ಕೆ ಗೋವಿಂದ ರಾವ್‌ ಬಗ್ಗೆ ಬರೆದಿರುವ ಪುಸ್ತಕ ʼನಾನಿನ್ನೂ ಅರಿಯಬೇಕಿದ್ದ ನನ್ನಪ್ಪʼ. ಪುಸ್ತಕದ ಶೀರ್ಷಿಕೆ ತುಂಬಾ ಚೆನ್ನಾಗಿದೆ.ಮೊದಲಿಗೆ ಇದು, ಶಿವರಾಮ ಕಾರಂತರ ʼಅಳಿದ ಮೇಲೆʼ ಕಾದಂಬರಿಯನ್ನು ನೆನಪಿಗೆ ತರುತ್ತದೆ. ಯಶವಂತ ಮರಣ ಹೊಂದಿದ ಬಳಿಕ ಅವನ ಸಂಬಂಧಿಕರು, ಪರಿಚಯಸ್ಥರ ಮೂಲಕ ಆತನನ್ನು ಕಟ್ಟಿಕೊಳ್ಳುವ ಪ್ರಯತ್ನವನ್ನು ಕಾರಂತರು ʼಅಳಿದ ಮೇಲೆʼ ಕಾದಂಬರಿಯಲ್ಲಿ ಮಾಡುತ್ತಾರೆ.

ಶ್ಯಾಮಲಾ ಗುರುಪ್ರಸಾದ್‌ ಬೇರೆಯೇ ರೀತಿಯಲ್ಲಿ, ತಂದೆಯ ಹಿನ್ನೆಲೆ, ಓದು, ವಿಚಾರ, ನಟನೆ ಮತ್ತು ಕೌಟುಂಬಿಕ ವರ್ತನೆಗಳ ಮೂಲಕ ಅಪ್ಪನನ್ನು ʼಅರಿಯುವʼ ಪ್ರಯತ್ನವನ್ನು ಮಾಡುತ್ತಾರೆ. 2021 ರಲ್ಲಿ ಜಿ ಕೆ ಗೋವಿಂದರಾವ್‌ ಅಸೌಖ್ಯದ ಕಾರಣದಿಂದ ಹುಬ್ಬಳ್ಳಿಯ ಮಗಳ ಮನೆಯಲ್ಲಿರುತ್ತಾರೆ. ಆಗ ಅವರಿಗೆ 84 ವರ್ಷ ವಯಸ್ಸು. ಆ ವರೆಗೆ ಯಾರಲ್ಲೂ, ಹೆಂಡತಿ, ಮಕ್ಕಳಿಗೂ ಹೇಳಿರದ ಬಾಲ್ಯದ ವಿಷಯವೊಂದನ್ನು ಆ ಸಮಯದಲ್ಲಿ ಅವರು ಹೇಳುತ್ತಾರೆ.

ಅವರಿಗೆ ಏಳು ವರ್ಷವಾಗಿದ್ದಾಗ, ಜಿಕೆಜಿಯವರ ತಾಯಿ, ಅಜ್ಜಿಯ ಕೈಗೆ ಮೊಮ್ಮಗನನ್ನೊಪ್ಪಿಸಿ, ʼಗೋವಿಂದ ಇನ್ನು ಮುಂದೆ ನಿನ್ನ ಹೊಣೆ ಅಂತಂದು ಕಳಿಸಿಬಿಟ್ಟರಮ್ಮಾ” ಎಂದು ಆ ವರೆಗೆ ಮನದಾಳದಲ್ಲಿ ಬಚ್ಚಿಟ್ಟ ನೋವನ್ನು ಬಿಚ್ಚಿಡುತ್ತಾರೆ. ಬಾಲ್ಯದಲ್ಲಿ ಹೆತ್ತವರಿಂದ ದೂರಾಗಿ, ತಾತನ ಮನೆಯಲ್ಲಿ, ಅವಿಭಕ್ತ ಕುಟುಂಬದಲ್ಲಿ ಹತ್ತರೊಟ್ಟಿಗೆ ಹನ್ನೊಂದಾಗಿ, ನೋವು ನಲಿವುಗಳನ್ನು ಅರುಹಲಾರದೆ, ಒಳಗೊಳಗೆ ಕುದಿದ ಜೀವ, ಬಾಳ ಸಂಜೆಯಲ್ಲಿ ದುಗುಡವನ್ನು ಹಂಚಿಕೊಂಡಿದ್ದು ಮಗಳನ್ನು ಚಿಂತನೆಗೆ ಹಚ್ಚುತ್ತದೆ.

ತಾತನ ಅವಿಭಕ್ತ ಕುಟುಂಬದಲ್ಲಿ ಮೊಮ್ಮಗ(ಜಿಕೆಜಿ) ಜಾತಿಯ ವಿರುದ್ಧವಾಗಿ ಬಂಡೆದ್ದರೆ, ಮಗಳು(ಜಿಕೆಜಿ ತಾಯಿ) ತಂದೆಯ ಕುಟುಂಬ ಸಂಪ್ರದಾಯದ ವಿರುದ್ಧ ಬಂಡಾಯವೆದ್ದರು ಎಂದು ಕಹಿಯನ್ನಿಟ್ಟುಕೊಳ್ಳದೆ, ಮನಸ್ಥಿತಿಯನ್ನು ಅರಿಯುವ ಪ್ರಯತ್ನವನ್ನು ಶ್ಯಾಮಲಾ ಮಾಡುತ್ತಾರೆ. ಜಿಕೆಜಿ, ʼನಾಗರಿಕತೆ ಮತ್ತು ಅರಾಜಕತೆʼ ಎನ್ನುವ ಪುಸ್ತಕದ ʼಲಂಕೇಶರ ಅನುವಾದಗಳುʼ ಎನ್ನುವ ಅಧ್ಯಾಯದಲ್ಲಿ, ʼಮಕ್ಕಳಿದ್ದಾಗ ಯಾವುದೋ ಒಂದು ನಮಗರಿವಿಲ್ಲದ ಒಂದು ಅನುಭವವೋ, ಒಂದು ಇಂಪ್ರೆಷನ್ನೊ ಅಥವಾ ಒಂದು ನೋವೋ ಥಟ್ಟಂತ ಒಳಗೆ ಹೋಗಿ ಸುಪ್ತ ಪ್ರಜ್ಞೆಗೆ ಸಿಕ್ಕಿ ಹಾಕಿಕೊಂಡು ಬಿಡುತ್ತದೆ ʼ ಎಂದು ಬರೆಯುತ್ತಾರೆ. ತಮ್ಮ ಪ್ರಜ್ಞೆಯಾಳದಲ್ಲಿ ಬೇರುಬಿಟ್ಟಿದ್ದ ಆಳವಾದ ಭಾವನೆಗಳು ನೆನಪಿನಂಗಳಕ್ಕೆ ಬಾರದಂತೆ ಬಂದೋಬಸ್ತು ಮಾಡಿಕೊಂಡಿದ್ದರೂ, ಸಾಹಿತ್ಯದಲ್ಲಿ ಬೆತ್ತಲಾಗಿ ಬಿಡುವ ಸಾಧ್ಯತೆಗಳಿವೆ ಎನ್ನುವ ಅಂಜಿಕೆಯಿದ್ದರೂ, ಲೇಖನಗಳಲ್ಲಿ ಅವರ ಆತ್ಮ ಶೋಧನೆಯಿರುವುದನ್ನು ಶ್ಯಾಮಲಾ ಗುರುಪ್ರಸಾದ್‌ಗುರುತಿಸುತ್ತಾರೆ. ಹಾಗೆಯೇ ಅವರಿಗೆ ನಾಟಕ, ಬರವಣಿಗೆಯ ಮೂಲಕ ತಮ್ಮೊಳಗಿನ ದ್ವಂದ್ವಗಳನ್ನ , ಘರ್ಷಣೆಗಳ ಮೂಲಕ ಅಭಿವ್ಯಕ್ತಿಸಬೇಕಾದ ತುರ್ತಿತ್ತು. ಸ್ಯಾಮುವೆಲ್‌ ಬೆಕೆಟ್‌ ಕುರಿತು ಬರೆಯುವಾಗಲೂ, ಮೃದು ಮನಸ್ಸಿನ ಕಲಾವಿದನಾದ ಬೆಕೆಟ್‌, ತನ್ನ ನಾಟಕಗಳ ಮುಖಾಂತರ ತಾನು ಅನುಭವಿಸಿದ ದುಃಖ,ದುಗುಡಗಳನ್ನು ಹೊರಗೆಳೆದು ತೋರಿದ್ದರಿಂದ ವಿಷಾದವಾದಿ ಎಂದು ಕರೆಸಿಕೊಂಡಿದ್ದ ಎನ್ನುತ್ತಾರೆ.

ಚಿತ್ರ ಕಲಾವಿದೆಯಾಗಿರುವ ಶ್ಯಾಮಲಾ ಗುರುಪ್ರಸಾದ್‌, ಪ್ರಸಿದ್ಧ ಕಲಾವಿದ ಸಾಲ್ವಡಾರ್‌ ಡಾಲಿಯ ಜೀವನವನ್ನು ಉದಾಹರಿಸುತ್ತಾರೆ; ಚಾರ್ಲ್ಸ್‌ ಬಾದಿಲೇರ್‌ ತನ್ನ ತಾಯಿಯ ಸಂಬಂಧದಲ್ಲಿ ಅನುಭವಿಸಿದ ಕಹಿಯನ್ನು ಹೇಳುತ್ತಾರೆ. ಗಾಂಧಿ, ಜೀಸಸ್‌, ಬಸವಣ್ಣ ಕೂಡಾ ಮನುಷ್ಯ ಕುಲದ ಸ್ಥಿತಿ ಗತಿಯ ಕುರಿತು ವಿಷಾದ ಅನುಭವಿಸಿದವರು. ಶೇಕ್ಸ್‌ಪಿಯರ್‌ ತನ್ನ ಪ್ರೌಢ, ಪಕ್ವ ಜೀವನದಲ್ಲಿ ಬರೆದ ನಾಟಕಗಳೆಲ್ಲವೂ ಮನುಷ್ಯ ಸಂಬಂಧದ ಓರೆಕೋರೆಗಳ ಬಗ್ಗೆಯಾಗಿತ್ತು. ಅವನ ಪಾತ್ರಗಳ ವಿಷಾದ, ಮೌನ, ದುಃಖ, ಪ್ರೇಮ ಎಲ್ಲವೂ ಪ್ರಕೃತಿಯಿಂದ ಪಡೆದ ಸೌಂದರ್ಯದ ಅನುಭೂತಿಗಳಾಗಿದ್ದವು. ʼನಾನು ಮಾನವತಾವಾದಿʼ ಎಂದು ಪ್ರಶ್ನೆಯೊಂದಕ್ಕೆ ಶೇಕ್ಸ್‌ಪಿಯರ್‌ ಉತ್ತರಿಸಿದ್ದನ್ನು ಭಾಷಣವೊಂದರಲ್ಲಿ ಉದ್ಧರಿಸುವ ಜಿ ಕೆ ಗೋವಿಂದ ರಾಯರಿಗೆ ಅಧ್ಯಯನ, ನಟನೆ, ಅಧ್ಯಾಪನ ಎಲ್ಲವೂ ಒಂಟಿತನ, ವಿಷಾದವನ್ನು ಮೀರುವ ಪ್ರಯತ್ನಗಳಂತಿದ್ದವು ಎಂದು ಶ್ಯಾಮಲಾ ವಿಶ್ಲೇಷಿಸುತ್ತಾರೆ.

ಇಲ್ಲಿರುವುದು ಅವರ ದೃಷ್ಟಿಯಲ್ಲಿ ಕಾಣುವ ಅಪ್ಪ. ಅಮ್ಮನ ಭಾವನೆಯಿಂದಲೂ ಅಲ್ಲ, ತಂಗಿಯ ಪ್ರೀತಿಯ ರೂಪದಲ್ಲೂ ಅಲ್ಲ. ಈ ಪುಸ್ತಕಗಳಲ್ಲಿ ಇಡಿಕಿರದ ಘಟನೆಗಳಿಲ್ಲ, ಹೆಚ್ಚು ವ್ಯಕ್ತಿಗಳ ಪ್ರಸ್ತಾಪವೂ ಇಲ್ಲ. ಅಪ್ಪನನ್ನು ಅರ್ಥಮಾಡಿಕೊಳ್ಳಬೇಕಾದ ವ್ಯಕ್ತಿಗಳಿಗೆ, ಘಟನೆಗಳಿಗಷ್ಟೇ ಜಾಗವಿದೆ. ಅಪ್ಪ ಇಲ್ಲವೆನ್ನುವ ನೋವು, ಕಾಲವಾದ ನಂತರದ ಗೌರವ, ಆರಾಧನಾ ಮನೋಭಾವಗಳು ಇಲ್ಲದೆ, ತಪ್ಪು, ಸರಿಗಳ ಗೋಜಿಗೆ ಹೋಗದೆ ಹೇಗಿದ್ದರೋ, ಹಾಗೇ ನೋಡುವ ತಟಸ್ಥ ಮನಸ್ಸಿನಿಂದ ಶ್ಯಾಮಲಾ ಗುರುಪ್ರಸಾದ್‌ಬರೆಯುತ್ತಾರೆ. ಅಪ್ಪನ ಓರೆಕೋರೆಗಳನ್ನೂ ಗಮನಿಸುತ್ತಾರೆ. ಸಿನಿಮಾ ನೋಡಬೇಕಾದರೆ, ಪೇಪರ್‌ನಲ್ಲಿ ಬರೆದು ಉಂಡೆ ಮಾಡಿ ಹೆಂಡತಿ ಕೂತಿದ್ದೆಡೆಗೆ ಎಸೆದು, ಅಭಿಪ್ರಾಯ ಪಡೆಯುವ ಜಿ ಕೆ ಗೋವಿಂದ ರಾವ್, ತಮ್ಮ ಬರವಣಿಗೆಯನ್ನು ಒಂದೇ ಗುಕ್ಕಿಗೆ ಓದಿ, ತಿದ್ದುಪಡಿ ತಿಳಿಸಬೇಕೆಂದು ಹೆಂಡತಿಗೆ ಅಪ್ಪಣೆ ಮಾಡುತ್ತಿದ್ದರು. ಹೆಂಡತಿ ಧಾರಾವಾಹಿಗಳನ್ನು ನೋಡುತ್ತಿರುವಾಗ ತರಲೆ ಮಾಡುವ ಗುಣವೂ ಇತ್ತು.

ಹೆಣ್ಣು ಮಕ್ಕಳಿಗೆ ತಾಯಿಯೆಂದರೆ ಹೆಚ್ಚು ಮಮಕಾರವಿರುವುದು ಸಹಜವೇ. ಅಣ್ಣ ಬಯಸಿದ ಪಾಕ ಇಲ್ಲವೆನ್ನೋದೇ ನನ್ನಮ್ಮನ ನಿಘಂಟಲ್ಲಿ ಇರಲಿಲ್ಲ ಎನ್ನುತ್ತಾರವರು. ಅಮ್ಮನಿಗೆ ಅಭಿನಯವೆಂದರೆ ಪಾತ್ರಗಳಿಗೆ ಶಕ್ತ್ಯಾನುಸಾರ ಜೀವ ತುಂಬುವುದು ಎಂದಾದರೆ, ಅಣ್ಣನಿಗೆ ನಟನೆಗಿಂತಲೂ, ಅದರೊಳಗಿನ ಸಾರ ಹುಡುಕುವುದು, ವ್ಯಕ್ತಿತ್ವ ಶೋಧನೆ ನಡೆಸುವುದು ಮುಖ್ಯವಾಗಿತ್ತು ಎನ್ನುವುದು ಅವರಿಬ್ಬರ ನಟನೆಯ ವಿಮರ್ಶೆಯಂತೆಯೂ ಕಾಣುತ್ತದೆ. ಸಿನಿಮಾದಲ್ಲಿ ಕೆಟ್ಟ ಪಾತ್ರಗಳನ್ನು ಆಯ್ದುಕೊಳ್ಳುತ್ತಿದ್ದುದಕ್ಕೆ ತಕರಾರು,ಬರಹಗಳಲ್ಲಿ ಕ್ಲಿಷ್ಟ ಪದಗಳನ್ನು ಉಪಯೋಗಿಸುವುದಕ್ಕೆ ಆಕ್ಷೇಪಣೆ, ಹೀಗೆ ಕುಟುಂಬದ ಮಾತುಕತೆಗಳೂ ಇಲ್ಲಿ ದಾಖಲಾಗಿವೆ.
ತಮ್ಮ ಭಾಷಣಗಳಲ್ಲಿ, ಹೋರಾಟಗಳಲ್ಲಿ, ಬರಹಗಳಲ್ಲಿ, ಪ್ರಕೃತಿಯಷ್ಟೇ ನಿರ್ಮಲವಾದ ರಾಜಕೀಯ ಪ್ರಜ್ಞೆಯನ್ನು,ಪರಿಶುದ್ಧವಾದ ನಿಜವಾದ ಧರ್ಮವನ್ನು ಅರಸಿದ ಜಿಕೆಜಿಯವರಲ್ಲಿ ವಿಷಾದ, ನಿರಾಸೆ, ಸಿಡಿಮಿಡಿಗಳಿದ್ದವು. ʼಶಾಮೂ ನಾವಂತೂ ಹೋಗುವವರು, ನಿನ್ನ ಮಕ್ಕಳ, ಮೊಮ್ಮಕ್ಕಳ ಭಾರತ ನೆನೆದರೆ ಮನಸ್ಸಿಗೆ ಹಿಂಸೆಯಾಗುತ್ತಮ್ಮಾʼ ಎಂದು ಹುಬ್ಬಳ್ಳಿಯಲ್ಲಿದ್ದಾಗ ಹೇಳುತ್ತಾರೆ.

ʼನಮಗೆ ಓದಲು ಕಲಿಸಿದ್ದಿ. ಪುಸ್ತಕಗಳನ್ನು ಓದುವ, ನೀನು ತೋರಿದ ದಾರಿ ನಮ್ಮದೂ ಆಗುತ್ತದೆʼ ಎಂದು ಶ್ಯಾಮಲಾ ಗುರುಪ್ರಸಾದ್‌ ಅವರನ್ನು ಸಮಾಧಾನ ಪಡಿಸಲು ಯತ್ನಿಸುತ್ತಾರೆ. ಅಧ್ಯಯನವಷ್ಟೇ ಅಲ್ಲ, ವಿಶ್ಲೇಷಣೆ, ವಿಚಾರವಂತಿಕೆಯ ದಾರಿಯನ್ನೂ ಜಿ ಕೆ ಗೋವಿಂದ ರಾಯರಿಂದ ಅವರು ಪಡೆದಿದ್ದಾರೆ ಎನ್ನುವುದಕ್ಕೆ ಈ ಪುಸ್ತಕದಲ್ಲಿ ನಿದರ್ಶನಗಳಿವೆ. 92 ಪುಟಗಳ ಈ ಕಿರು ಪುಸ್ತಕದಲ್ಲಿ ಅನವಶ್ಯಕ ಮಾತುಗಳಿಲ್ಲ. ಅಪ್ಪನ ವ್ಯಕ್ತಿತ್ವದಂತೆಯೇ, ಮಗಳು ಪ್ರಾಮಾಣಿಕವಾಗಿ ಅಪ್ಪನನ್ನು ಅರಿಯುವ ಪ್ರಯತ್ನಮಾಡಿದ್ದಾರೆ. ಜೆ ಕೃಷ್ಣಮೂರ್ತಿ, ʼಸಂಬಂಧಗಳು ನಮ್ಮನ್ನು ನಾವು ಅರಿಯಲು ಇರುವ ಕನ್ನಡಿʼ ಎಂದಂತೆ ಈ ಮೂಲಕ ಶ್ಯಾಮಲಾ ಗುರುಪ್ರಸಾದ್‌ರವರನ್ನೂ ಕೆಲ ಮಟ್ಟಿಗೆ ಅರಿಯಬಹುದು. ಚಿತ್ರ ಕಲಾವಿದೆಯಾಗಿರುವ ಶ್ಯಾಮಲಾ, ಚಿತ್ರಕ್ಕೆ ಆಕರ್ಷಕ ಚೌಕಟ್ಟೊದಗಿಸುವಂತೆ, ಪುಸ್ತಕಕ್ಕೂ ಒಳ್ಳೆಯ ಚೌಕಟ್ಟನ್ನು ನೀಡಿದ್ದಾರೆ. ಅಪ್ಪನ ಬಾಲ್ಯದ ನೆನಪಿನೊಂದಿಗೆ ಆರಂಭವಾಗುವ ಪುಸ್ತಕ, ಅಪ್ಪನ ನೆನಪಿನಲ್ಲಿ ಮನೆಯ ಮುಂಬಾಗಿಲಿನಲ್ಲಿ ನೆಟ್ಟ ಹೂವಿನ ಗಿಡ ಗೋವಿಂದರಾಯರು ಹಂಬಲಿಸುತ್ತಿದ್ದ ಬಹುತ್ವ ಭಾರತದಂತೆ ಅರಳಿ, ನಮ್ಮೆಲ್ಲರಿಗೂ ನೆರಳು, ತಂಪು ನೀಡಲಿ ಎನ್ನುವ ಆಶಯದೊಂದಿಗೆ ಮುಕ್ತಾಯವಾಗುತ್ತದೆ.

ಅಹರ್ನಿಶಿ ʼನಾನಿನ್ನೂ ಅರಿಯಬೇಕಿದ್ದ ನನ್ನಪ್ಪʼನನ್ನು ಕೊಟ್ಟು ಉಪಕಾರ ಮಾಡಿದ್ದಾರೆ.

‍ಲೇಖಕರು avadhi

February 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: