ನಾಗರಾಜ ಎಂ ಹುಡೇದ ಓದಿದ ‘ಜುಟ್ಟಕ್ಕಿ’

ನಾಗರಾಜ ಎಂ ಹುಡೇದ

ಹ.ಸ. ಬ್ಯಾಕೋಡ ಅವರು ಮಕ್ಕಳ ಸಾಹಿತ್ಯದಲ್ಲಿ ನಾಡಿನಾದ್ಯಂತ ಪ್ರಸಿದ್ಧರು. ಈಗಾಗಲೇ ಮಕ್ಕಳಿಗಾಗಿ ಕಥೆ, ಕಾದಂಬರಿ, ಚುಟುಕು, ನಾಟಕಗಳನ್ನು ರಚಿಸಿ ಚಿರಪರಿಚಿತರಾಗಿದ್ದಾರೆ. ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಚಿಣ್ಣರ ಚಂದಿರ ಮತ್ತು ಇತರ ಪ್ರಶಸ್ತಿಗಳು ಸಂದಿವೆ. ಅಲ್ಲದೇ ಅಂತರಾಷ್ಟ್ರೀಯ ಮಟ್ಟದ ವನ್ಯಜೀವಿ ಛಾಯಾಗ್ರಾಹಕರಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಪರಿಸರದ ಸೌಂದರ್ಯ, ಅಲ್ಲಿಯ ಕೌತುಕಗಳು, ಸಂಶೋಧನೆ ಮತ್ತು ವೈಜ್ಞಾನಿಕ ಅಂಶಗಳು ಬ್ಯಾಕೋಡ ಅವರ ಕೃತಿಗಳಲ್ಲಿ ಕಂಡುಬರುತ್ತವೆ.

ಹಾಗಾಗಿಯೇ ಇವರನ್ನು ಮಕ್ಕಳ ತೇಜಸ್ವಿ ಎಂದು ಅಭಿಮಾನದಿಂದ ಕರೆಯಲಾಗುತ್ತದೆ. ಅಧ್ಯಯನ ಪೂರ್ಣವಾದ ವಾಸ್ತವ ಅಂಶಗಳು ಈ ’ಜುಟ್ಟಕ್ಕಿʼ ಕಾದಂಬರಿಯಲ್ಲಿವೆ.

ಇಲ್ಲಿ ಜುಟ್ಟಕ್ಕಿಗಳು, ಅಂಕಣ್ಣಜ್ಜ, ಕುಸುಮಜ್ಜಿ ಮತ್ತು ಮಗು ಅಮೋಘ ಪ್ರಮುಖ ಪಾತ್ರಧಾರಿಗಳು. ಇಡೀ ಕಾದಂಬರಿಯ ತುಂಬ ’ಜುಟ್ಟಕ್ಕಿಗಳʼ ಕುರಿತಾದ ಕುತೂಹಲಭರಿತವಾದ ಅಂಶಗಳಿವೆ. ಕಾದಂಬರಿ ತುಂಬ ’ಜುಟ್ಟಕ್ಕಿಗಳʼಜೀವನ ವೃತ್ತಾಂತವೇ ಇದೆ. ಎ೪ ಅಳತೆಯ ಆಕರ್ಷಕ ಮುಖಪುಟವಿರುವ ಮಕ್ಕಳ ಸಾಹಿತ್ಯದಲ್ಲಿಯೇ ವಿಶಿಷ್ಟವೇನಿಸುತ್ತದೆ. ಒಟ್ಟು ೧೫ ಅಧ್ಯಾಯಗಳಿರುವ ಕೃತಿಯು ಮಕ್ಕಳ ಮನಮುಟ್ಟುವಂತಹ ಸರಳ ವಾಕ್ಯಗಳು ಹಾಗೆಯೇ ಸರಳ ಭಾಷೆಯನ್ನು ಕೂಡ ಹೊಂದಿದೆ.

ಈ ಕಾದಂಬರಿ ಮಲೆನಾಡ ಪ್ರದೇಶದಲ್ಲಿ ಅದೂ ಕೇವಲ ಅಜ್ಜ-ಅಜ್ಜಿ ಇರುವ ಮನೆಯ ಅಂಗಳದಲ್ಲಿಯೇ ಸೃಷ್ಟಿಯಾಗಿದೆ. ದೇವರ ಪೂಜೆಗೆಂದು ಹೂಗಳನ್ನು ಕೀಳಲು ಬರುವ ಅಮೋಘನಿಗೆ ಅಂಕಣ್ಣಜ್ಜ ’ಏಯ್ ಪುಟ್ಟಾ, ಅಂಗಳದಂಚಿನಲ್ಲಿರುವ ಗುಲಾಬಿ ಹೂವಿನ ಗಿಡದಲ್ಲಿನ ಹೂಗಳನ್ನು ಬಿಟ್ಟು ಉಳಿದೆಲ್ಲಾ ಗಿಡಗಳಲ್ಲಿ ಹೂ ಕಿತ್ತುಕೊಂಡು ಹೋಗು.’ ಎಂದು ಹೇಳುವ ಮೂಲಕ ಕಥೆ ಆರಂಭವಾಗುತ್ತದೆ. ’ಗುಲಾಬಿ ಗಿಡದಲ್ಲಿ’ಯಾಕೆ ಹೂ ಕೀಳಬಾರದು ಎಂಬ ಕುತೂಹಲವೇ ಕಾದಂಬರಿಯ ಬೆಳವಣಿಗೆ ಮತ್ತು ಬೆರಗು ಆಗಿದೆ. ಅಂಕಣ್ಣಜ್ಜ ತುಸು ಹೆಚ್ಚೇ ಈ ಜುಟ್ಟಕ್ಕಿಗಳ ಬಗ್ಗೆ ತಿಳಿದುಕೊಂಡಿರುತ್ತಾರೆ. ಆ ಕೆಂಪುಕೆನ್ನೆಯ ಜುಟ್ಟಕ್ಕಿಗಳು ಗೂಡು ಕಟ್ಟುವ ಸಂದರ್ಭವನ್ನು ಕುಸಮಜ್ಜಿಗೆ ಹೇಳುತ್ತಾನೆ. ಆಗಾಗ ಇವರ ಮನೆಗೆ ಬಂದು ಹೋಗುವ ಹುಡುಗ ಅಮೋಘನಿಗೂ ಜುಟ್ಟಕ್ಕಿ ವಿಧಗಳು, ಅವು ಗೂಡು ಕಟ್ಟುವ ರೀತಿ, ವಾಸಿಸುವ ಪ್ರದೇಶ ಮುಂತಾದ ಆಸಕ್ತಿದಾಯಕ ವಿಷಯಗಳನ್ನು ಅಂಕಣ್ಣಜ್ಜನ ಮೂಲಕ ಲೇಖಕರಾದ ಹ.ಸ.ಬ್ಯಾಕೋಡ ಅವರು ಬಹಳ ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ.

ಅಮೋಘ ತುಂಟ ಹುಡುಗ. ಹಾಗಾಗಿ ದಿನಾಲೂ ಹೂವು ಹರಿಯಲು ಬರುವ ಇವನಿಗೆ ಗುಲಾಬಿ ಗಿಡದಲ್ಲಿ ಜುಟ್ಟಕ್ಕಿಗಳು ಗೂಡು ಕಟ್ಟಿವೆ ಹೇಳಿದರೆ ಅವನು ಏನಾದರೂ ಮಾಡಿಬಿಟ್ಟಾನು ಎಂಬ ಭಯದಿಂದ ಹೇಳುವುದಿಲ್ಲ. ಅವನನ್ನು ಕುಳ್ಳರಿಸಿಕೊಂಡು ಕಥೆಯ ಮೂಲಕ ಅದರ ಮೊಟ್ಟೆ, ಗೂಡು ಮುಟ್ಟಿದರೆ ಏನಾಗುತ್ತದೆ ಎಂಬುದನ್ನು ಅವನ ಮನಸ್ಸಿಗೆ ಮುಟ್ಟುವಂತೆ ಹೇಳುತ್ತಾರೆ. ಪಕ್ಷಿಗಳ ಬಗ್ಗೆ ಅವನಿಗೆ ಪ್ರೀತಿ ಉಂಟಾಗುವಂತೆ ಮಾಡಿರುವುದು ಕಾದಂಬರಿಯ ಯಶಸ್ಸಾಗಿದೆ.

ಇನ್ನು ಪಕ್ಷಿಗಳ ವೀಕ್ಷಣೆಗೆ ಬೇಕಾಗುವ ಪ್ರೀತಿ, ತಾಳ್ಮೆ, ನಿಶ್ಯಬ್ದತೆ ಮುಂತಾದ ಅಂಶಗಳ ಕುರಿತು ಎಚ್ಚರಿಕೆಯನ್ನು ಮತ್ತು ಸಮಗ್ರ ಮಾಹಿತಿಯನ್ನು ಕಾದಂಬರಿಯಲ್ಲಿ ತೆರೆದಿಟ್ಟಿದ್ದಾರೆ. ಬ್ಯಾಕೋಡ ಅವರು ಅನುಭವಿ ಲೇಖಕರಾಗಿರುವುದರಿಂದ ಲೀಲಾಜಾಲವಾಗಿ ಎಳ್ಳಷ್ಟೂ ತೊಡಕಿಲ್ಲದೇ ಕಥಾಹಂದರವನ್ನು ಒಪ್ಪ ಓರಣವಾಗಿ ಕಟ್ಟಿಕೊಟ್ಟಿದ್ದಾರೆ.

ದಾಸವಾಳ ಗಿಡದಲ್ಲಿಯೂ ಮತ್ತೆರೆಡು ಪಕ್ಷಿಗಳು ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದವು. ಅವು ಹದಿನೈದು ದಿನಗಳ ನಂತರ ಮರಿಗಳಾಗಿ ಹೊರಬಂದವು. ಒಂದು ಮರಿ ಗೂಡಿನಿಂದ ಹೊರಬಿದ್ದಿತ್ತು. ಅದನ್ನು ನೋಡಿದ ಅಮೋಘ ಎತ್ತಿ ಗೂಡಿನಲ್ಲಿಟ್ಟ. ಆಗ ಹಾರಿ ಬಂದ ತಂದೆ ತಾಯಿ ಬುಲ್ ಬುಲ್ ಹಕ್ಕಿಗಳು ತನ್ನ ಮರಿಗಳಿಗೆ ಗುಟುಕು ನೀಡ ತೊಡಗಿದವು. ಈ ದೃಶ್ಯವನ್ನು ಅಂಕಣ್ಣಜ್ಜ, ಕುಸುಮಜ್ಜಿ ಮತ್ತು ಅಮೋಘ ಸಂತಸದಿಂದ ಕಣ್ತುಂಬಿಕೊಂಡರು. ಹೀಗೆ ಕಾದಂಬರಿ ಮುಕ್ತಾಯವಾಗುತ್ತದೆ.

ಅಜ್ಜಿಯು ಮಾಡುವ ಬಿಸಿಬಿಸಿ ಬಜ್ಜಿ, ಹಪ್ಪಳ, ಸಬ್ಬಕ್ಕಿ ಪಾಯಸಗಳ ರುಚಿಯ ಅನುಭವ ಮತ್ತು ಆನಂದ ಮಕ್ಕಳಿಗಾಗುತ್ತದೆ. ನಮ್ಮ ದೇಶದ ಸುಪ್ರಸಿದ್ಧ ಪಕ್ಷಿಪ್ರೇಮಿ ಸಲೀಂಅಲಿಯವರ ಕುರಿತೂ ಮಾಹಿತಿ ತಿಳಿದುಕೊಳ್ಳುತ್ತಾರೆ. ಪಕ್ಷಿಗಳ ಸ್ವಭಾವ ಅವು ಸೇವಿಸುವ ಕೀಟಗಳು, ಹಣ್ಣುಗಳು ಮತ್ತು ಸಂದರ್ಭ ಇನ್ನೂ ಮುಂತಾದವು ಅಧ್ಯಯನಪೂರ್ಣವಾಗಿರುವುದು ಜ್ಞಾನವನ್ನೂ ಕಟ್ಟಿಕೊಡುತ್ತದೆ. ಸುಮಾರು ಹದಿನೇಳು ಪ್ರಭೇದಗಳನ್ನು ಜುಟ್ಟಕ್ಕಿಗಳಲ್ಲಿ ಗುರುತಿಸಿದ್ದಾರೆ. ಉತ್ತರಭಾರತದಿಂದ ದಕ್ಷಿಣ ಭಾರತಕ್ಕೆ ವಲಸೆ ಬರುವ ರೀತಿ ಮುಂತಾದುವನ್ನು ಕುತೂಹಲ ಮೂಡುವಂತೆ ರಚಿಸಿರುವುದು ಮಕ್ಕಳಿಗೆ ಇಷ್ಟವಾಗುತ್ತದೆ. ಇಲ್ಲಿ ನಮ್ಮ ಮಕ್ಕಳ ಪ್ರತಿನಿಧಿಯಾಗಿರುವ ಅಮೋಘನೂ ನಮ್ಮ ಮಕ್ಕಳಂತೆ ಅಲ್ಲಲ್ಲಿ ಪ್ರಶ್ನೆಗಳನ್ನು ಕೇಳುತ್ತಾ ಅಂಕಣ್ಣಜ್ಜ ಅವುಗಳಿಗೆ ಪಕ್ಷಿತಜ್ಞನಾಗಿ ವಿವರಣೆ ನೀಡುತ್ತಾನೆ.

ವಯಸ್ಸಾದ ಅಜ್ಜ-ಅಜ್ಜಿಯರು ಪಕ್ಷಿಗಳನ್ನು ಮುದ್ದು ಮಕ್ಕಳಂತೆ ಕಾಣುತ್ತಿರುವುದು ಒಂದುಕಡೆಯಾದರೆ, ನಿಸರ್ಗದ ಮಡಿಲಲ್ಲಿ ಇವರೂ ಮಕ್ಕಳಾಗಿರುವುದೂ ಇನ್ನೊಂದು ವಿಶೇಷವೆನಿಸುತ್ತದೆ. ಹೀಗೆ ವಿಭಿನ್ನ ಕಥಾವಸ್ತು ಹೊಂದಿರುವ ’ಜುಟ್ಟಕ್ಕಿ’ಮಕ್ಕಳ ಸಾಹಿತ್ಯದಲ್ಲಿ ಹೊಚ್ಚಹೊಸದಾಗಿದೆ ಎನ್ನಬಹುದು. ಹ.ಸ.ಬ್ಯಾಕೋಡ ಅವರು ವಿಭಿನ್ನ ಆಲೋಚನೆ ಮೂಲಕ ಮಕ್ಕಳಿಗಾಗಿ ವಿಶೇಷ ಕಾಣಿಕೆ ನೀಡಬೇಕೆನ್ನುವ ಹಂಬಲವುಳ್ಳವರು. ಜ್ಞಾನ, ಅಧ್ಯಯನ ಮತ್ತು ಅನುಭವ ಮೇಳೈಸಿದಾಗ ಉತ್ತಮ ಸಾಹಿತ್ಯಕೃತಿ ಮೂಡಿಬರಲು ಸಾಧ್ಯವೆಂಬುದಕ್ಕೆ ಈ ’ಜುಟ್ಟಕ್ಕಿ’ ಕೃತಿಯೇ ಸಾಕ್ಷಿಯಾಗಿದೆ.

ಅತ್ಯಾಕರ್ಷಕವಾದ ಮುಖಪುಟ, ಒಳಪುಟಗಳ ರೇಖಾಚಿತ್ರಗಳು, ವಿನ್ಯಾಸ ಮತ್ತು ಅಚ್ಚುಕಟ್ಟಾದ ಮುದ್ರಣದಿಂದ ಕೃತಿ ನಮ್ಮನ್ನೆಲ್ಲ ಸೂಜಿಗಲ್ಲಿನಂತೆ ಸೆಳೆಯುತ್ತದೆ. ನಾವು ಓದಿ ನಮ್ಮ ಮಕ್ಕಳಿಗೆ ಓದಲು ನೀಡೋಣ. ನಮ್ಮ ಜೊತೆಗೆ ಬದುಕಲು ಹಕ್ಕುಳ್ಳ ಪ್ರಾಣಿ, ಪಕ್ಷಿಗಳ ಮೇಲೆ ಅಗಾಧ ಪ್ರೀತಿಯನ್ನು ನಮ್ಮ ಮಕ್ಕಳೂ ಹೊಂದಲಿ. ಪರಿಸರ ಮತ್ತು ಕಾಡು ನಮ್ಮ ಮುಂದಿನ ಜನಾಂಗವನ್ನು ಕಾಪಾಡಬೇಕಾದರೆ ನಾವು ಅದನ್ನು ಉಳಿಸಬೇಕು ಎಂಬುದನ್ನು ಈ ಕೃತಿ ನಮಗೆ ತಿಳಿಯಪಡಿಸುತ್ತದೆ.

‍ಲೇಖಕರು Admin

November 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: