ನಾಗರಾಜ್ ಹರಪನಹಳ್ಳಿ
ನೀನು ಪರಿಚಯವಾದುದು ಬಹುವಚನದಿಂದ
ನಂತರ ಒಂದೊಂದೇ ಹೆಜ್ಜೆ
ತಿಂಗಳು ತಿಂಗಳು ಉರುಳಲು
ಗೆಳೆತನ ಬಂಧುತ್ವವಾಗಿ
ತದ ನಂತರ ಅಪ್ತವಾಗಿ
ಏಕವಚನವಾದುದು ಸೋಜಿಗ
ಮೊದಲು ಸ್ವಾಗತ ಪೀಠಿಕೆ ಪ್ರಸ್ತಾವನೆ ಮುಗಿದ ಮೇಲೆ ಕವಿ ಪರಿಚಯ
ನಂತರ ಕಾವ್ಯ ವಾಚನ
ವಿಮರ್ಶೆ, ಅರ್ಥವ್ಯಾಖ್ಯಾನ
ಕಠಿಣಪದಗಳ ಅರ್ಥ ಬಿಡಿಸಲಾಗಿ
ಅಡಿ ಟಿಪ್ಪಣಿ, ಸಂದರ್ಭ ಸ್ವಾರಸ್ಯ ದಾಟಿದವು
ಕತೆ ಬೆಳೆದು ಕಾದಂಬರಿಯಾಗಿ ಬೆಳೆಯಿತು ಬದುಕು

ಬಾಹ್ಯ ಸಾಕ್ಷ್ಯಗಳ ನಾಶವೂ ಆಯಿತು
ಆದರೆ ಆರೋಪಿಗಳು
ಕಾಲದ ಜಠರಕ್ಕೆ ಸಿಕ್ಕಿ ಗೊಬ್ಬರವಾಗಿದ್ದರು
ನಾವು ಮಾತ್ರ
ಏಕವಚನದಿಂದ ಮೌನಕ್ಕೆ
ಪಿಸುಮಾತಿಗೆ ಆಗಾಗ ಜಾರುತ್ತೇವೆ;
ಮೌನದಿಂದ ಪ್ರೇಮಕ್ಕೆ ಹೊಸ ಭಾಷ್ಯ ಬರೆಯುತ್ತಲೇ ಇದ್ದೇವೆ
ನಾನು ನಿನಗೆ ಏಕವಚನ
ನೀನು ನನಗೆ ವಚನ
ಪ್ರತಿ ಹುಣ್ಣಿಮೆ ನಮಗಾಗಿ ಬರುತ್ತದೆ
ಮುಂಗಾರು ಪುಟಿದೆದ್ದು ಕುಣಿಯುತ್ತಲೇ
ಇರುತ್ತದೆ
0 ಪ್ರತಿಕ್ರಿಯೆಗಳು