ನವೀನ ಕೃಷ್ಣ ಭಟ್ ಓದಿದ ʼಅನ್ನದ ಮರʼ

ನವೀನ ಕೃಷ್ಣ ಭಟ್ ಉಪ್ಪಿನಂಗಡಿ

ಸಿಂಹಳ ಭಾಷೆಯಲ್ಲಿ ಹಲಸಿನ ಮರದ ಹೆಸರು ಬಾತ್ ಗಾಸಾ. ಅಂದರೆ ಅನ್ನದ ಮರ! ಜನಸಾಮಾನ್ಯರಿಂದ ಅಲಕ್ಷ್ಯಗೊಂಡಿದ್ದ ಅಥವಾ ಶೋಷಿತಗೊಂಡಿದ್ದ ಹಣ್ಣು ಹಲಸು! ಆದರೂ ಹಲಸು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇತ್ತೀಚೆಗೆ ಹಲವು ಕೈಗಳ ಜೋಡಣೆಯೊಂದಿಗೆ ಹಲಸಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿರುವುದು ಹಲಸಿಗೊಂದು ಮಾನ ಸಿಕ್ಕಂತಾಗಿದೆ! ಹಾಗಾಗಿ ಹಲವರಿಗಾದರೂ ಹಲಸು ಅನ್ನದ ಮರ ಹೌದಲ್ಲವೇ?

ಅಡಿಕೆ ಪತ್ರಿಕೆಯಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ನಾ ಕಾರಂತರ ಇತ್ತೀಚೆಗಿನ ಕೃತಿಯೇ ‘ಅನ್ನದ ಮರ’. ನಾ ಕಾರಂತರ ಕೃಷಿ ಬರೆಹಗಳು ಮನಸೂರೆಗೊಳ್ಳುತ್ತವೆ. ಶ್ರೀಯುತರ ಮಣ್ಣ ಮಾಸು, ನೆಲದ ನಾಡಿ, ಕಾಡು ಮಾವು, ಮಾಂಬಳ, ಕೃಷಿ ಕತೆ-ಕೃಷಿಕರ ಕಥೆ ಮುಂತಾದ ಕೃಷಿಗೆ ಸಂಬಂಧಿಸಿದ ಕೃತಿಗಳು ನನಗೆ ಅಚ್ಚುಮೆಚ್ಚು. ಮಾಹಿತಿಪೂರ್ಣವೂ, ಸತ್ವಪೂರ್ಣವೂ ಆಗಿರುವ ಕಾರಂತರ ಬರೆಹಗಳು ಹೇರಳವಾದ ಅನುಭವದಿಂದ ಕೂಡಿರುತ್ತವೆ.

ಲೇಖನದ ಮೊದಲ ಪ್ಯಾರಾದಲ್ಲಿ ನಾನು ಉಲ್ಲೇಖಿಸಿದ ‘ಹಲವು ಕೈಗಳ’ ಹಲಸಿನ ಯಶೋಗಾಥೆಯೇ ಪ್ರಸ್ತುತ ಕೃತಿಯ ಮುಖ್ಯ ವಿಷಯ. ಹಲಸಿಗೊಂದು ಪ್ರತ್ಯೇಕ ಸ್ಥಾನ, ಮಾನವನ್ನು ನೀಡಿ ಹಲಸಿಗೆ ಆಂದೋಳನದ ಸ್ವರೂಪವನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ಅಡಿಕೆ ಪತ್ರಿಕೆಯ ಶ್ರೀಪಡ್ರೆಯವರು.

ಶ್ರೀಪಡ್ರೆಯವರಿಂದ ಮೊದಲ್ಗೊಂಡು ಹಲಸು ಒಂದು ಉದ್ಯಮವಾಗಿ ಬೆಳೆಯಲು ಕಾರಣೀಕರ್ತರಾದ ಹಲವು ಮಹನೀಯರ ಯಶಸ್ಸಿನ ಕಥನವನ್ನು ಒಳಗೊಂಡಂತಹ ಹೊತ್ತಿಗೆಯಿದು. ಹಲಸಿನ ಬಗೆಗೆ ಜಾಗೃತಿ ಮೂಡಿಸುವಲ್ಲಿ ನಾ ಕಾರಂತರ ಬರೆಹಗಳು ಮುಖ್ಯ ಪಾತ್ರವನ್ನೇ ವಹಿಸಿವೆ. ಅಡಿಕೆ ಪತ್ರಿಕೆ ಸಹಿತ ವಿವಿಧ ಪತ್ರಿಕೆಯಲ್ಲಿ ಬರೆದ ಹಲಸಿನ ಆಂದೋಲನದ ಲೇಖನಗಳೇ ಸಂಕಲನಗೊಂಡು ಈ ಕೃತಿಯಾಗಿದೆ.

‘ಹಾಗಾದೀತು, ಹೀಗಾದೀತು’ ಎನ್ನುವ ಬದಲಾಗಿ, ‘ಹೀಗಾಗಿದೆ. ಪುರಾವೆ ಬೇಕಾದರೆ, ಇದೋ ಇಲ್ಲಿವೆ ಸಂಪರ್ಕ ವಿವರಗಳು’ ಎಂಬ ಮಾಹಿತಿ ಖಜಾನೆ. ಕೃಷಿ ಆಂದೋಲನವೊಂದನ್ನು ಹೇಗೆ ದಾಖಲಿಸಬಹುದು ಎಂಬದಕ್ಕೊಂದು ಮಾದರಿ’ ಎಂದು ಅಡ್ಡೂರು ಕೃಷ್ಣ ರಾವ್ ಅವರು ಮುನ್ನುಡಿಯಲ್ಲಿ ಉಲ್ಲೇಖಿಸಿದ ಮಾತುಗಳು ಅಕ್ಷರಶ: ದಿಟವಾದುದು. ಈ ಕೃತಿಯ ಮೂಲಕ ಹಲಸಿನ ಪ್ರಾಮುಖ್ಯತೆ ಇನ್ನಷ್ಟು ಜನರಿಗೆ ತಲುಪುವುದು ಸತ್ಯ.

ಇಂತಹ ವಿಶಿಷ್ಠ ಪುಸ್ತಕವನ್ನು ಪುತ್ತೂರಿನ ಜ್ಞಾನಗಂಗಾ ಪುಸ್ತಕ ಮಳಿಗೆ ಪ್ರಕಟಿಸಿದೆ. ೧೧೨ ಪುಟದ ಚೊಕ್ಕದಾದ ‘ಅನ್ನದ ಮರ’ದ ಮುದ್ರಣ, ಮುಖಪುಟ, ಗುಣಮಟ್ಟ ತುಂಬಾ ಚೆನ್ನಾಗಿದೆ. ಅಲ್ಲಲ್ಲಿ ಒದಗಿಸಿದ ಚಿತ್ರಗಳು ಲೇಖನಕ್ಕೆ ಪೂರಕವಾಗಿದೆ. ಲೇಖನಗಳಲ್ಲಿ ನಮೂದಿಸಿರುವ ಹಲಸಿನ ವಿವಿಧ ಉತ್ಪನ್ನಗಳ ತಯಾರಿಕೆಯ, ಅಗತ್ಯವಿರುವ ಒಳಸುರಿಗಳ ಬಗೆಗಿನ ಮಾಹಿತಿಗಳು ಪುಸ್ತಕದ ತೂಕವನ್ನು ಇಮ್ಮಡಿಗೊಳಿಸಿದೆ. ಲೇಖಕ ನಾ ಕಾರಂತರಿಗೆ, ಪ್ರಕಟಿಸಿದ ಜ್ಞಾನಗಂಗಾ ಪುಸ್ತಕ ಮಳಿಗೆಯವರಿಗೆ ಅಭಿನಂದನೆಗಳು.

‍ಲೇಖಕರು Admin

January 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: