ನವೀನ್ ಹಳೆಮನೆ ನೋಡಿದ ‘ಶೇರ್ನಿ’

ನವೀನ್ ಹಳೆಮನೆ

ವಿಷ ತಯಾರಿಸುವುದು ಕೇಕ್ ತಯಾರಿಸುವಷ್ಟೇ ಮಜವಾಗಿರುತ್ತದೆ. ಆದರೆ ಜನ ವಿಷ ತಯಾರಿಸಲು ಬಯಸುತ್ತಾರೆ. – ಮಾರ್ಗರೆಟ್ ಆಟ್ವುಡ್

ತನ್ನ ಅತಿ ಸಿನಿಮೀಕರಿಸದ ವಾಸ್ತವಿಕ ದೃಶ್ಯಗಳ ಸಂಯೋಜನೆಯಿಂದ ಇಷ್ಟವಾಗುವ ಚಿತ್ರ ಶೇರ್ನಿ. ನರಭಕ್ಷಕ ಎನಿಸಿಕೊಂಡಿರುವ ಒಂದು ಹುಲಿಯನ್ನು ಹಿಡಿಯುವ ಅಥವಾ ಕೊಲ್ಲುವ ವಸ್ತುವನ್ನು ಈ ಚಿತ್ರ ಹೊಂದಿದೆ. ಕಥೆಯ ಕೇಂದ್ರ ಸ್ಥಾನದಲ್ಲಿ ವಿದ್ಯಾ ವಿನ್ಸೆಂಟ್ ಎಂಬ ಅರಣ್ಯಾಧಿಕಾರಿ ಇದ್ದಾರೆ. ಇಲ್ಲಿರುವ ಪಾತ್ರಗಳನ್ನು ಹೀಗೆ ವಿಂಗಡಿಸಬಹುದು.

೧. ಹುಲಿಯನ್ನು ಅದರ ಮರಿಗಳನ್ನು ಕುತೂಹಲದಿಂದ ಗಮನಿಸಿ, ಅದನ್ನು ಸುರಕ್ಷಿತವಾಗಿ ಬೇರೆಡೆಗೆ ಕಳುಹಿಸುವುದು. ಅದು ನರಭಕ್ಷಕ ಹುಲಿಯೇ ಎಂದು ಪ್ರಾಮಾಣಿಕವಾಗಿ ಪರೀಕ್ಷಿಸ ಬಲ್ಲವರು. ಇಲ್ಲಿ ಬಹುತೇಕ ಮಹಿಳೆಯರೇ ಇರುವುದು ಗಣನೀಯ.
೨. ಹುಲಿಯನ್ನು ಆದಷ್ಟು ಬೇಗ ಹುಡುಕಿ ಅದನ್ನು ಹೊಡೆದುರುಳಿಸಿ ಈ ಸಮಸ್ಯೆಯನ್ನು ಬಗೆಹರಿಸಬಹುದು ಎಂದುಕೊಳ್ಳುವ ಗಂಡಸರ ಗುಂಪು. ಇದರಲ್ಲಿ ರಾಜಕಾರಣಿಗಳು, ಅವರ ಚೇಲಾಗಳು, ಬಫೂನ್ ಗಳಂತಹ ಮೇಲಧಿಕಾರಿಗಳು, ಬೇಟೆಯ ಮಜಾ ಪಡೆಯುವ ಹುಚ್ಚು ಬೇಟೆಗಾರ, ಮುಂತಾದವರು ಇದ್ದಾರೆ.
೩. ಯಾವ ಪ್ರಾಣಿಗೆ ಸಿಕ್ಕಿ ಯಾರು ಪ್ರಾಣಕಳೆದುಕೊಂಡರೂ ಅದರಿಂದ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿರುವ ಇಬ್ಬರು ರಾಜಕಾರಣಿಗಳು ಮತ್ತು ಅವರ ಚಮಚಾಗಳು
೪. ಹೊಟ್ಟೆಪಾಡಿಗೆ ಹೊಲಗದ್ದೆಗಳಿಗೆ ಕಾಡಿಗೆ ಹೋಗಲೇ ಬೇಕಾಗಿರುವ ಅನಿವಾರ್ಯತೆ ಇರುವ ಮುಗ್ಧ ಹಳ್ಳಿಯ ಜನ. ಇವರನ್ನು ಯಾರು ಬೇಕಾದರೂ ಏನು ಬೇಕಾದರೂ ಹೇಳಿ ನಂಬಿಸಬಹುದು.

ಈ ಚಿತ್ರದ ಆರಂಭದಲ್ಲಿ ಒಂದು ದೃಶ್ಯವಿದೆ. ಪರಿಸರ ಕಾಳಜಿ ಇರುವ, ಜ್ಞಾನವಿರುವ ನೂರಾನಿ ಎಂಬ ಪ್ರಾಣಿಶಾಸ್ತ್ರದ ಪ್ರೊಫೆಸರ್ ಇಲ್ಲಿಗೆ ಬಂದಾಗ ಒಂದು ವಿಶೇಷ ಅನುಮತಿ ಪಡೆದು ಹಳ್ಳಿಯ ಜನಗಳ ಮುಂದೆ ಹುಲಿ ಮತ್ತು ಮನುಷ್ಯನ ನಡುವೆ ಸಂಘರ್ಷಕ್ಕೆ ಆಸ್ಪದ ಕೊಡದಂತೆ ನಮ್ಮ ಪಾಡಿಗೆ ನಾವಿದ್ದರೆ ಅದರ ಪಾಡಿಗೆ ಅದಿರುತ್ತದೆ.

ಈ ಸಹ ಜೀವನವನ್ನೇ ನಾವು ಅರ್ಥ ಮಾಡಿಕೊಳ್ಳಬೇಕಿರುವುದು. ಹುಲಿ ಇದ್ದರೆ ಕಾಡು, ಕಾಡಿದ್ದರೆ ಮಳೆ, ಮಳೆ ಇದ್ದರೆ ಜನ… ಇದೆಲ್ಲವನ್ನೂ ಒಂದು ಕಿರು ನಾಟಕದ ರೂಪದಲ್ಲಿ ಪ್ರದರ್ಶಿಸಿ ಜನರಿಗೆ ಪರಿಸರದ ಪಾಠವನ್ನು ಹೇಳುತ್ತಿರುತ್ತಾನೆ. ಅದೇ ವೇದಿಕೆಗೆ ಇದ್ದಕ್ಕಿದ್ದಂತೆ ನುಗ್ಗಿದ ರಾಜಕಾರಣಿ ಮತ್ತು ಅವನ ಚಮಚಾಗಳ ಗುಂಪು, ಈ ನರಭಕ್ಷಕ ಹುಲಿಯನ್ನು ಕೊಂದು ನಿಮ್ಮೆಲ್ಲರ ಸಮಸ್ಯೆಗಳನ್ನು ನಾವು ಪರಿಹರಿಸುತ್ತೇವೆ. ನನಗೆ ಓಟು ಹಾಕಿ. ಎಂದು ಹೇಳಿ ಗದ್ದಲವೆಬ್ಬಿಸುತ್ತಾರೆ.

ಈ ದೃಶ್ಯ ಇಡೀ ಚಿತ್ರದ ಧಾಟಿಯನ್ನು, ಸಮಾಜದ ದುಷ್ಟವಾಸ್ತವವನ್ನು ತಿಳಿಸುತ್ತದೆ. ಕಾಳಜಿ ಮತ್ತು ಜ್ಞಾನ ಇರುವ ಕೆಳ ಹಂತದ ಸಿಬ್ಬಂದಿ… ಮೂರ್ಖತನದಿಂದ ಅವರ ಬಾಯಿ ಮುಚ್ಚಿಸಿ, ರಾಜಕಾರಣಿಗಳ ತಾಳಕ್ಕೆ ಕುಣಿಯುತ್ತಾ ಕಚೇರಿಯಲ್ಲೇ ಹೋಮ ಮಾಡಿ, ಪಾರ್ಟಿಗಳಲ್ಲಿ ‘ಒ ಲಡಕಿ ಆಂಖ್ ಮಾರೇ’ ಎಂದು ಕುಣಿಯುತ್ತಾ, ಪ್ರಾಣಿಗಳ ಮಿಮಿಕ್ರಿ ಮಾಡುತ್ತಾ ಕಾಲ ಕಳೆಯುವ ಬನ್ಸಾಲ್ ರೀತಿಯ ಮೇಲಧಿಕಾರಿ. ಕೆಳಮಟ್ಟದ ಸಿಬ್ಬಂದಿಗಳ ಪರಿಶ್ರಮವನ್ನು ನೀರಿನಲ್ಲಿ ಹೋಮ ಮಾಡಿದಂತೆ ಮಾಡುವ ಬಫೂನ್ ಗಳಂಥ ಮೇಲಧಿಕಾರಿಗಳು ಬಹುಶಃ ಎಲ್ಲಾ ಇಲಾಖೆಗಳಲ್ಲೂ ಇರುತ್ತಾರೆ ಅನಿಸಿಬಿಡುತ್ತದೆ.

ಹುಲಿ ಕಂಡ ತಕ್ಷಣ ಹೊಡೆದುರುಳಿಸುವ ಬೇಟೆಗಾರ ಸತ್ತು ಬಿದ್ದ ಹುಲಿಯನ್ನು ನೋಡಿ What a beauty! ಎನ್ನುವುದು; ಹುಲಿಯ ಮರಿಗಳು ಕಂಡಿವೆ ಎಂದು ಗೊತ್ತಾದಾಗ ತಾನು ಸಿದ್ಧಪಡಿಸಿಕೊಂಡ ರಾಜೀನಾಮೆ ಪತ್ರವನ್ನು ಹರಿದು ಹಾಕಿ ಮರಿಗಳನ್ನು ನೋಡಿ ಉಳಿಸಲು ಹೊರಡುವುದು, ಅವನ್ನು ಕಣ್ತುಂಬಿಕೊಂಡು ಸಮಾಧಾನದ ನಿಟ್ಟುಸಿರು ಬಿಡುವುದು… ಎರಡು ವೈರುಧ್ಯಗಳನ್ನು ಇಲ್ಲಿ ಮುಖಾಮುಖಿ ಮಾಡಲಾಗಿದೆ.

ನಾಯಕಿಯ ಗಂಡ, ತಾಯಿ, ಅತ್ತೆ ಇವರ ಮಾಮೂಲಿ ಧಾಟಿಯ ಆಲೋಚನೆಗಳನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ. ಭೂಮಿಯ ಒಡಲನ್ನು ಕೊರೆದು ಗಣಿಗಾರಿಕೆ ಮಾಡಿರುವುದು ಹೆಣ್ಣು ಮತ್ತು ಹುಲಿ ಎರಡಕ್ಕೂ ಒಂದು dead end ನಂತೆ ತೋರುತ್ತದೆ. ಹುಲಿಯನ್ನು ಕೊಲ್ಲುವುದು ಮತ್ತು ಹುಲಿಯನ್ನು ಕಾಪಾಡುವುದು ಎರಡೂ ನಾಜೂಕಿನ ಕೆಲಸಗಳೇ. ಆದರೆ ಕೊಂದು ಸಂಭ್ರಮಿಸುವ ಹೇಡಿಗಳೇ ಹೆಚ್ಚು ಇದ್ದಾರೆ ಎಂಬುದು ನೋಡುಗರಿಗೆ ಮನವರಿಕೆ ಆಗುತ್ತದೆ. ಪ್ರಾಣಿಗಳನ್ನು ಕಾಪಾಡುವ ಹುದ್ದೆಯಿಂದ ಸತ್ತ ಪ್ರಾಣಿಗಳ ಬೊಂಬೆಗಳನ್ನು ನೋಡಿಕೊಳ್ಳುವ ಹುದ್ದೆಗೆ ನಾಯಕಿಯನ್ನು ಎತ್ತಂಗಡಿ ಮಾಡಿರುವುದು ವಾಸ್ತವತೆಗೆ ಕೊಟ್ಟ ಒಂದು ಅಂತಿಮ ಸ್ಪರ್ಶ. ಅನಾಯಾಸವಾಗಿ ಒಂದು ಸಾಕ್ಷ್ಯಚಿತ್ರ ಆಗಬಹುದಾದ ವಸ್ತುವನ್ನು ಸಿನಿಮೀಯ ಮಾಡಿರುವ ಅಂಶಗಳು ಕಡಿಮೆಯೇ ಇವೆ.

‍ಲೇಖಕರು Avadhi

June 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. km vasundhara

    ಉತ್ತಮ ರೀತಿಯ ಸಿನೆಮಾ ವಿಶ್ಲೇಷಣೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: