ನವೀನ್ ಸೂರಿಂಜೆ ಕಂಡಂತೆ ‘ಕಾಂತಾರ’

ನವೀನ್ ಸೂರಿಂಜೆ

“ನಾವು ಬಂದದ್ದು ಎಲ್ಲಿಂದ ಅಂತ ಮರೆತು ಬಿಡುವುದು ನಮ್ಮ ಜನರ ದೊಡ್ಡ ಸಮಸ್ಯೆ” ಹೆಚ್ಚುಕಮ್ಮಿ ಇದೇ ಅರ್ಥದ ಡೈಲಾಗ್ ಕಾಂತಾರ ಸಿನೇಮಾದಲ್ಲಿ ಬರುತ್ತದೆ. ಈ ದೊಡ್ಡ ಸಮಸ್ಯೆ ಕಾಂತಾರ ಸಿನೇಮಾ ತಂಡದ ಸಮಸ್ಯೆಯೂ ಹೌದು. ಹಾಗಾಗಿಯೇ ಶೂದ್ರ ಮತ್ತು ದಲಿತ ಸಂಸ್ಕೃತಿಯನ್ನು ಬಿಂಬಿಸಬೇಕಾಗಿದ್ದ ಸಿನೇಮಾದ ಹೆಸರಿನ ಮಧ್ಯೆ ವೈದಿಕರ ಓಂ ಅನ್ನು ಎಳೆದು ತರಲಾಗಿದೆ. ಸಾಲದ್ದಕ್ಕೆ “ದಂತಕತೆ” ಎಂಬ ಸಬ್ ಟೈಟಲ್ ಕೊಡಲಾಗಿದೆ. ದಂತಕತೆ ಎಂದಾಗ ನಮ್ಮ ಕುಟುಂಬದ ದೈವ ಕೋಲದ ದಂತಕತೆ ನೆನಪಾಯಿತು. ಈ ದಂತಕತೆ ಯಾರೋ ಹೇಳಿದ್ದಲ್ಲ. ನಾವೇ ನೋಡಿದ್ದು.

ನಮ್ಮ ಕುಟುಂಬದ ದೈವಗಳಿಗೆ ಬಹುಶಃ ಮೂರು ವರ್ಷದ ಹಿಂದೆ ಕೋಲ ನೀಡಲಾಯಿತು. ನಾನು, ಕಾವ್ಯ, ಗೆಳೆಯರಾದ ಬೈರಪ್ಪ ಹರೀಶ್ ಕುಮಾರ್, ನಿಕಿತಾ ಹರೀಶ್ ಕೋಲ ನೋಡಲು ಬೆಂಗಳೂರಿನಿಂದ ಮಂಗಳೂರಿನ ನನ್ನ ಕುಟುಂಬದ ಮನೆಗೆ ಹೋಗಿದ್ದೆವು. ರಾತ್ರಿ ಕೋಲ ಶುರುವಾಯಿತು. ಹೊಸದಾಗಿ ನಾವು ಕುಟುಂಬಿಕರು ಸೇರಿ ಕಟ್ಟಿಸಿರುವ ದೈವಸ್ಥಾನದೊಳಗೆ ದೈವ ಪ್ರವೇಶ ಮಾಡಬೇಕಿತ್ತು.

ದೈವ ಜೋರು ಕುಣಿದದ್ದೇ ಗುಡಿಯ ಮೇಲೊಮ್ಮೆ ದಿಟ್ಟಿಸಿತು. “ಗುಡಿಯ ಮೇಲಿನ ಕಳಶ ತೆಗೆಯಬೇಕು” ಎಂದು ಕುಟುಂಬದ ಹಿರಿಯರಿಗೆ ದೈವ ಆದೇಶ ನೀಡಿತು.

“ದೈವದ ಗುಡಿಯ ಕಳಶ ತೆಗೆದರೆ ಮತ್ತೆ ಶುದ್ದ ಮಾಡಿ ಬ್ರಹ್ಮಕಲಶ ಮಾಡಬೇಕಾಗುತ್ತದೆ. ಹಾಗಾಗಿ ಕಳಸ ತೆಗೆಯದೇ ಗುಡಿಯನ್ನು ಒಪ್ಪಿಸಿಕೊಳ್ಳಬೇಕು” ಎಂದು ಕುಟುಂಬದ ಹಿರಿಯರು ದೈವವನ್ನು ಪ್ರಾರ್ಥಿಸಿದರು.

ಮತ್ತೆ ಉಗ್ರರೂಪ ತಾಳಿ ಕುಣಿದ ದೈವ “ದೈವಕ್ಕೆಂತ ಕಳಶ ? ತೆಗಿಯಿರಿ. ತೆಗೆದ ಬಳಿಕ ದೈವಸಾನ ಶುದ್ದ ಮಾಡೋಕೆ ಬ್ರಾಹ್ಮಣರು ಬರಬೇಕು ಎಂದು ಹೇಳಿದ್ಯಾರು ? ನನ್ನ ದೈವದ ಸಾನದ ಒಳಗೆ ಬ್ರಾಹ್ಮಣ ಪ್ರವೇಶ ಮಾಡಿದರೆ ಅವನಿಗೆ ಹುಚ್ಚು ಹಿಡಿಸ್ತೇನೆ. ನನ್ನ ಕುಟುಂಬದ ಬಾವಿಯಿಂದ ನೀರು ತಂದು ಚಿಮುಕಿಸಿದರೆ ನನ್ನ ಸಾನ ಶುದ್ದವಾಗುತ್ತದೆ” ಎಂದು ದೈವ ಆದೇಶ ನೀಡಿತ್ತು.

ಇದು ನಿಜವಾದ ದೈವ ಪರಂಪರೆ. ದೈವಕ್ಕೂ ವೈದಿಕ ಆಚರಣೆ, ಸಂಕೇತಗಳಿಗೂ ಸಂಬಂಧವಿಲ್ಲ.
ಸಿನೇಮಾದ ನಿರ್ದೇಶನ ಮಾಡಿರುವ ವೃಷಬ್ ಶೆಟ್ಟಿಯವರು ಕಾಂತಾರ ಸಿನೇಮಾದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ “ಕರಾವಳಿ ಪರಶುರಾಮ ಸೃಷ್ಟಿ” ಎನ್ನುತ್ತಾರೆ ! ಇದು ವೈದಿಕರ ಸುಳ್ಳು ಇತಿಹಾಸ. ಪರಶುರಾಮ ಯಾರೆಂಬುದೇ ಕರಾವಳಿಯ ಜನಪದ ಲೋಕಕ್ಕೆ ಗೊತ್ತಿಲ್ಲ. ಕರಾವಳಿಯ ದೈವಾರಾಧನೆ ಪರಂಪರೆಯಲ್ಲಿ ಪರಶುರಾಮ ಬರುವುದೇ ಇಲ್ಲ. ಹಾಗಾದರೆ ತುಳುನಾಡು ಹೇಗೆ ಸೃಷ್ಟಿಯಾಯಿತು ?
ಹೇಗಾಯಿತು ಎಂದರೆ,
ಆನಿದ ಕಾಲೊಡು…
ಉದಿಯ ಬೆಂದೆರ್ಗೆನಾ ಬೊಲ್ಪುಗು ಸೂರ್ಯ ದೇವೇರು
ಪಡ್ಡಾಯಿ ಬಾನೊಡು ಓಲಗ ಆತೆರು ಚಂದ್ರದೇವೆರು
ಉದಿಪುಗು ಸೂರ್ಯೆ, ಕಂತುಗು ಚಂದ್ರೆ
ತೆಂಕಾಯಿ ಸೆಲಿಯೇಂದ್ರೆ
ಬಡಕಾಯಿ ಬಾಲ್ಯನ ಕುಮಾರೆ
ನಾಲಂದ ಲೋಕೊಡು ನಾಲು ಗುಂಡದೇವೆರು
ಮೂಜಿಂದ ಲೋಕೊಡು ಮೂಜಿತಾನ ಭೂತೊಲು
ಕಲ್ಲುಡು ನಾಗೆ, ಪುಂಚೊಡು ಸರ್ಪೆ
ಸಾರ ಕಲ್ಲ ಅಸುರೆರು, ದೇವೆರೆ ಕಲ್ಲ ಬೆರ್ಮೆರು
ಉದಿಯ ಬೆಂದಿನ ಕಾಲೊಡು…
ಮಿತ್ತನಾವೊಡು ಪನ್ನಗ ಬಾನೊಡು ಜಂಬಿದಾರೆಗೆ ಉದಿತಿಜಿ
ತಿರ್ತಾನ್ನವೊಲಿ ಪನ್ನಗ ಭೂಮಿಡು ಪುಲ್ಲಕುಡಿ ಕೊಡಿತಿಜಿ
ಅಪಗ ಪನ್ಪೆರು ಸ್ವಾಮಿ,
ಬಾನ ಪತ್ತೊಡು, ಭೂಮಿ ತಿರ್ಗಾವೊಡು
ಭೂಮಿ ಪತ್ತೊಡು ಬಾನ ತಿರ್ಗಾವೊಡು
ಬಲಗೈ ತಟ್ಟಿಯೆರು ಸ್ವಾಮಿ ಬಾನ ತಿರ್ಗಾಯೆರು
ಎಡಗೈ ತಟ್ಟಿಯೆರು ಸ್ವಾಮಿ ಭೂಮಿ ತಿರ್ಗಾಯೆರು
ಬಾನ ಮುತ್ತರೆ, ಭೂಮಿ ಬಿತ್ತರೆ
ಬಾನೊಗು ಮುತ್ತರೆ ಭೂಮಿ ತಿರ್ಗುಂಡು
ಜಂಬಿದಾರೆಗೆ ಉದಿತುಂಡು
ಬಾನುಡು ಮೇಲು ಉದಿಯಬೆಂದುಂಡು ತಾಲವೆ ತಂಬವೆ ಪನ್ಪಿನ ತೆಡಿಲು
ಕುಂಕುಮ ಪನಿನೀರ ಬರ್ಸ ಬೂರುಂಡು
ಭೂಮಿಡಿ ಕೊಡಿತುಂಡು ಕದಿಕೆ ಕಡೀರ ದೈ
ಬುಲೆಟ್ಟು ಮೇಲ್ ಉದಿಯ ಬೆಂದುಂಡು ಅತಿಕಾರೆ ಪನ್ಪಿ ಸತ್ಯದ ಬೆಳೆ
ಬಾರೆಡು ಮೇಲ್ ಉದಿಯ ಬೆಂದುಂಡು
ಆದಾಳೆ ಭೋದಾಳೆ ಪನ್ಪಿ ದೈಬಾರೆ
ನಟ್ಟಿನಡಿಗೆಡು ಮೇಲ್ ಉದಿಯ ಬೆಂದುಂಡು
ರಾಜಗಿರಿ ಜಂಪದ್ಪೆ
ಗೋವುಡು ಮೇಲ್ ಉದಿಯ ಬೆಂದುಂಡು ಕಬಲ್ತಿಗೋವು
ಪಣವುಡು ಮೇಲ್ ಉದಿಯ ಬೆಂದುಂಡು
ಇಕ್ಕೇರಿ ಚಕ್ರ ಪಾದೇರಿ ಪಣವು
ಬಂಗಾರುಡು ಮೇಲ್ ಉದಿಯಬೆಂದುಂಡು
ಕುರಿಚಾತ್ ನಾಣ್ಯ ಬಂಗಾರು
ಈತ್ಮಾತ ಉದಿಯ ಬೆಂದಿನ ಕಾಲೊಡು
ದೈವೊಲು ಉದಿಯಬೆಂದಿನ ನಾಡು ಓಲುಂದು ಕೇನ್ನಗಾ..
ಮೂಡಾಯಿ ಘಟ್ಟದ ಮಿತ್ತು… ಕಂಡದ ಬುಲೆ ಬರಿಟ್ಟು…
ಈಚಾನಗರೊಡು, ಕರ್ಮಿನ ಸಾಲೆಡು, ಬೆತ್ತದ ಮಲೆಟ್ಟು..
ಅನಿಕಲ್ಲ ದಂಬೆಲ್ಡು, ಬೇಲೂರ ಪದವುಡು, ಸರೊಳಿದ ಸಂಪುಡು
ನೆಕ್ಕರೆ ಪುದೆಲುಡು, ನೀರಪರಿಪ್ಪುಡು ಉದಿಯ ಬೆಂದುಡುಯೇ…
ಕನ್ನಡದಲ್ಲಿ ಇದರ ಅರ್ಥ
ಅಂದಿನ ಕಾಲದಲ್ಲಿ…
ಬೆಳಕಿಗೆಂದು ಸೂರ್ಯ ದೇವರು ಉದಯವಾದರು
ಬೆಳಕಿಗೆ ಸೂರ್ಯ ದೇವರು
ಪಡುವಣ ಬಾನಲ್ಲಿ ಉದಯವಾಗುತ್ತಾರೆ ಚಂದ್ರ ದೇವರು
ಉದಯಕ್ಕೆ ಸೂರ್ಯ, ಕಂತಿಗೆ ಚಂದ್ರ
ದಕ್ಷಿಣಕ್ಕೆ ಸೆಲಿಯೇಂದ್ರ
ಉತ್ತರಕ್ಕೆ ಬಾಲ್ಯನ ಕುಮಾರ
ನಾಲ್ಕು ದಿಕ್ಕುಗಳಿಗೆ ನಾಲ್ಕು ಗುಂಡದೇವರು
ಮೂರು ಲೋಕದಲ್ಲಿ ಮೂರು ಭೂತ ಸಾನಗಳು
ಕಲ್ಲಿನಲ್ಲಿ ನಾಗ, ಹುತ್ತದಲ್ಲಿ ಸರ್ಪ
ಸಾವಿರ ಕಲ್ಲಿನ ಅಸುರರು
ದೇವರ ಕಲ್ಲಿನ ಬೆರ್ಮೆರು
ಉದ್ಭವವಾದ ಕಾಲದಲ್ಲಿ
ಮೇಲೆ ನೋಡೋಣಾ ಎಂದರೆ ಜಂಬಿ ತಾರೆ ಉದಯವಾಗಲಿಲ್ಲ
ಕೆಳಗೆ ನೋಡೋಣಾ ಎಂದರೆ ಭೂಮಿಯಲ್ಲಿ ಹುಲ್ಲು ಹುಟ್ಟಿಲ್ಲ
ಆಗ ಸ್ವಾಮಿ ಹೇಳಿದರು,
ಭೂಮಿ ಹಿಡಿದು ಆಕಾಶ ತಿರುಗಿಸಬೇಕು
ಆಕಾಶ ಹಿಡಿದು ಭೂಮಿ ತಿರುಗಿಸಬೇಕು
ಬಲಗೈ ತಟ್ಟಿದರು ಸ್ವಾಮಿ, ಆಕಾಶ ತಿರುಗಿಸಿದರು
ಎಡಗೈ ತಟ್ಟಿದರು ಸ್ವಾಮಿ ಭೂಮಿ ತಿರುಗಿಸಿದರು
ಆಕಾಶ ಭೂಮಿಗೆ ಮುತ್ತಲು, ಭೂಮಿ ಎಂಬುದು ಬೀಜ ಬಿತ್ತಲು
ಬಾನಿಗೆ ಮೂರು ಬಾರಿ ಭೂಮಿ ಸುತ್ತಿತು
ಜಂಬಿ ತಾರೆಗೆ ಉದಯವಾಯಿತು
ಬಾನಿನಲ್ಲಿ ಹುಟ್ಟಿಕೊಂಡಿತು ತಾಲವೆ ತಂಬವೆ ಎಂಬ ಸಿಡಿಲು
ಭೂಮಿಗೆ ಬಿತ್ತು ಕುಂಕುಮ ಹನಿಧಾರೆ ಮಳೆ
ಭೂಮಿಯಲ್ಲಿ ಮೊಳೆತು ಹುಟ್ಟಿಕೊಂಡಿತು ಕದಿಕೆ ಎಂಬ ಹುಲ್ಲು
ಬೆಳೆಯಲ್ಲಿ ಮೇಲಾಗಿ ಹುಟ್ಟಿಕೊಂಡಿತು
ಅತಿಕಾರೆ ಎಂಬ ಸತ್ಯದ ಬೆಳೆ
ಬಾಳೆಯಲ್ಲಿ ಚಿಗುರಿತು ಶ್ರೇಷ್ಠ ಬಾಳೆ
‘ಆದಾಳೆ ಬೋದಾಳ’ ಬಾಳೆ ಗಿಡ |
ನಟ್ಟಿಕಾಯಿಯಲಿ ಹುಟ್ಟಿಕೊಂಡಿತು ರಾಜಗಿರಿ ಕೆಂಪು ಹರಿವೆ ಸೊಪ್ಪು
ಗೋವಿನಲ್ಲಿ ಹುಟ್ಟಿಕೊಂಡಿತು ಕಬಲ್ತಿ ದನ
ನಾಣ್ಯದಲ್ಲಿ ಶ್ರೇಷ್ಟವಾಗಿ ಉದಯವಾಯಿತು
ಇಕ್ಕೇರಿ ಚಕ್ರ ಪಾದೇರಿ ನಾಣ್ಯ
ಬಂಗಾರದಲ್ಲಿ ಶ್ರೇಷ್ಟವಾಗಿ ಹುಟ್ಟಿಕೊಂಡಿತು
ಕುರಿಚಾತ್ ನಾಣ್ಯ ಬಂಗಾರ”
ಇಷ್ಟೆಲ್ಲಾ ಹುಟ್ಟಿಕೊಂಡ ನಾಡಿನಲ್ಲಿ ದೈವಗಳು ಉದಯವಾದ ಜಾಗ ಯಾವುದು ? ಅಂತ ಕೇಳಿದರೆ,
ತುಳುನಾಡಿನ ಪೂರ್ವಭಾಗದಲ್ಲಿರುವ ಘಟ್ಟದ ಪ್ರದೇಶದಲ್ಲಿ..
ಗದ್ದೆಯ ಬೆಳೆಗಳ ಬದಿಗಳಲ್ಲಿ
ಈಚಾನಗರದಲ್ಲಿ.. ಕರ್ಮಿನ ಸಾಲೆಯಲ್ಲಿ, ಬಿದಿರ ಮಲೆಗಳಲ್ಲಿ..
ಕಲ್ಲು ಮತ್ತು ಗದ್ದೆಗಳ ಬಿರುಕುಗಳಲ್ಲಿ, ಬೇಲೂರ ಪದವಿನಲ್ಲಿ
ನೆಕ್ಕರೆ ಗಿಡಗಳ ಪೊದೆಗಳಲ್ಲಿ, ನೀರಿನ ಹರಿವಿನಲ್ಲಿ
ನಮ್ಮ ದೈವಗಳು ಉದಯವಾದವು
ಇದರಲ್ಲಿ ಪರಶುರಾಮ ಎಲ್ಲಿದೆ ? ಓಂ ಎಲ್ಲಿದೆ ? ವೈದಿಕ ದೇವರುಗಳು ಎಲ್ಲಿದೆ ? ಪವಾಡ, ಹಿಂಸೆ ಎಲ್ಲಿದೆ ? ತುಳುನಾಡು ಪ್ರಕೃತಿ ವಿಜ್ಞಾನದ ಮೂಲಕ ಉದಯವಾಯಿತು ಎಂಬುದನ್ನು ನಮ್ಮ ಹಿರಿಯರು ಎಷ್ಟು ಸುಂದರವಾಗಿ ಹೇಳಿದ್ದಾರೆ.

‘ನಾವು ಬಂದಿದ್ದು ಎಲ್ಲಿಂದ ಎಂಬುದನ್ನು ಮರೆತು ಬಿಡುವುದು ನಮ್ಮ ಜನರ ದೊಡ್ಡ ಸಮಸ್ಯೆ’ ಎಂಬ ಡೈಲಾಗ್ ಸಿನೇಮಾದಲ್ಲಿ ಇದ್ದಿದ್ದರಿಂದ ಇಷ್ಟು ಹೇಳಬೇಕಾಯಿತು‌.

ಇನ್ನು ಸಿನೇಮಾ ವಿಷಯಕ್ಕೆ ಬರೋಣಾ. ದೈವಗಳು ನಮ್ಮನ್ನು ಕಾಯುತ್ತದೆ ಎಂಬುದು ಕರಾವಳಿಗರ ನಂಬಿಕೆ. ಹಾಗಂತ ದೈವಗಳು ಮೇಲ್ವರ್ಗದ ವಿರುದ್ದ ನಿಂತ ಉದಾಹರಣೆಗಳೇ ಇಲ್ಲ. ಮೇಲ್ವರ್ಗದ ಯಜಮಾನರ ಎದುರು ಕೆಲ ದೈವಗಳು ಮಾತನಾಡುವುದೇ ಇಲ್ಲ. ಉದಾಹರಣೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಎದುರು ಪಂಜುರ್ಲಿ ದೈವವು ಕೇವಲ “ಉದೋ ಪೆರ್ಗಡೇ ಉಧೋ” ಎಂದಷ್ಟೇ ಹೇಳುತ್ತದೆ. ಹಾಗಾಗಿ ಜನರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ದೈವದ ಮೊರೆ ಹೋಗಬೇಕು ಎಂಬುದನ್ನು ಜನರ ತಲೆಗೆ ತುಂಬುವುದೇ ಒಂದು ರಾಜಕೀಯ ಅಜೆಂಡಾ. ದೈವ ಭೂಮಿ ಬಿಟ್ಟು ಕೊಡಲು ಒಪ್ಪಿಲ್ಲ ಅಂದುಕೊಳ್ಳಿ. “ಮಾಯೆರ್ದು ಮದಿಪು ಮಲ್ಲೆ” (ದೈವಕ್ಕಿಂತ ಊರ ಮಾತು ದೊಡ್ಡದು) ಎಂದು ಮಧ್ಯಸ್ಥನೋ, ಊರ ಮುಖ್ಯಸ್ಥನೋ ಹೇಳಿದರೆ ದೈವ ಮರು ಮಾತಾಡುವಂತಿಲ್ಲ. ಊರ ಮುಖ್ಯಸ್ಥನ ಬಾಯಿಯಿಂದಲೋ, ಮುಖ್ಯಸ್ಥನಿಂದ ಸಂಬಳ ಪಡೆಯುವ ಮಧ್ಯಸ್ಥನ ಬಾಯಿಯಿಂದಲೋ ಬರುವ ಮದಿಪು ಯಾರ ಪರವಾಗಿರುತ್ತದೆ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ.

ಕರಾವಳಿಯ ದೈವವೆಂದರೆ ಕ್ರೌರ್ಯವಲ್ಲ. ಶೂದ್ರ-ದಲಿತರ ದೈವ ಸಂಸ್ಕೃತಿಯನ್ನು ಪರಿಚಯಿಸಲು ಅಷ್ಟೊಂದು ಕ್ರೌರ್ಯವನ್ನು ವಿಜೃಂಭಿಸಬೇಕಿರಲಿಲ್ಲ. ಕರಾವಳಿಯ ಕಾಡಂಚಿನಲ್ಲಿ ವಾಸ ಮಾಡುವ ದಲಿತ ಆದಿವಾಸಿ ಕುಟುಂಬಗಳು ಮರಗಳ್ಳತನ ಮಾಡಿದ ಉದಾಹರಣೆಯೂ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಶೂದ್ರ ದಲಿತ ಸಂಸ್ಕೃತಿ, ಆಚರಣೆಗಳೆಂದರೆ ಕ್ರೌರ್ಯದ ಪರಮಾವಧಿ ಎಂದು ಬಿಂಬಿಸುವ ಮೂಲಕ ಯಾರನ್ನು ಮೆಚ್ಚಿಸಲು ಹೊರಟಿದ್ದೀರಿ ? ಕರಾವಳಿಯ ದೈವಾರಾಧನೆಯೆಂದರೆ ಯಾರಿಗೂ ಕೇಡನ್ನು ಬಯಸದ ನಂಬಿದವರನ್ನು “ತಾಯಿಯಂತೆಯೂ, ಮಾವನಂತೆಯೂ ಸಲಹುವ” ದೈವ. “ಪತ್ತಪ್ಪೆ ಜೋಕುಲೆನು ಒಂಜಿ ಪಟ್ಟೆಲ್ಡು ಪಾಡುದು ತಾಂಕುನ ಅಪ್ಪೆ ಲೆಕಂತಿನ ದೈವ ಯಾನ್” (ಹತ್ತು ತಾಯ ಮಕ್ಕಳನ್ನು ಒಂದೇ ಮಡಿಲಲ್ಲಿ ಹಾಕಿಕೊಂಡು ಸಾಕುವ ತಾಯಿಯಂತಹ ದೈವ ನಾನು) ಎಂದು ದೈವ ಜನರಿಗೆ ಭರವಸೆ ನೀಡುತ್ತದೆ.

ವೃಷಬ್ ಶೆಟ್ಟಿಯವರು ದೈವ ಕುಣಿತಕ್ಕಾಗಿ ಭಾರೀ ಅಭ್ಯಾಸ ಮಾಡಿದ್ದಾರೆ. ಅದು ಸುಲಭ ಸಾಧ್ಯವಲ್ಲ.‌ ಆದರೆ ಅವರ ಕಠಿಣ ಪರಿಶ್ರಮ ಯಾರಿಗಾಗಿ ಬಳಕೆಯಾಗಿದೆ ಎಂಬುದೂ ಮುಖ್ಯವಾಗುತ್ತದೆ. ಹಾಗಾಗಿಯೇ ವೃಷಬ್ ಶೆಟ್ಟಿಯವರು ತಾನೇ ಬರೆದಿರುವ ಡೈಲಾಗ್ ನಂತೆ “ತಾನು ಎಲ್ಲಿಂದ ಬಂದೆ ?” ಎಂಬುದನ್ನು ಉದ್ದೇಶಪೂರ್ವಕವಾಗಿ ಮರೆತಂತಿದೆ.

‍ಲೇಖಕರು Admin

October 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: