ಬಿ.ಎ. ವಿವೇಕ ರೈ
**
ಮಾಧ್ಯಮ ತಜ್ಞರಾದ ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ ಅವರ ಹೊಸ ಕೃತಿ ‘ಪತ್ರಿಕೋದ್ಯಮದ ಪಲ್ಲಟಗಳು’.
‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.
ನಾಡಿನ ಹಿರಿಯ ವಿದ್ವಾಂಸರು ಹಾಗೂ ವಿಮರ್ಶಕರಾದ ಬಿ.ಎ. ವಿವೇಕ ರೈ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ.
**
ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ ಅವರು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗವನ್ನು ಕಟ್ಟಿ ಬೆಳೆಸುವುದರ ಜೊತೆಗೆ ಮಾಧ್ಯಮ ಕ್ಷೇತ್ರದ ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಅವುಗಳಿಗೆ ಸ್ಪಂದಿಸುತ್ತಾ ಬಂದವರು. ಮುದ್ರಣ ಮಾಧ್ಯಮದಿಂದ ತೊಡಗಿ ವರ್ತಮಾನ ಕಾಲದ ಡಿಜಿಟಲ್ ಮಾಧ್ಯಮದ ಬಹುರೂಪಿ ಮಾದರಿಗಳನ್ನು ಅಧ್ಯಯನ ಮಾಡುತ್ತಾ ಬಂದವರು. ಈ ದೃಷ್ಟಿಯಿಂದ ಅವರ ಇತ್ತೀಚೆಗಿನ ಕೃತಿ ‘ಪತ್ರಿಕೋದ್ಯಮದ ಪಲ್ಲಟಗಳು'( ಬಹುರೂಪಿ,ಬೆಂಗಳೂರು ,೨೦೨೪) ಮಾಧ್ಯಮ ರಂಗಕ್ಕೆ ಮಹತ್ವದ ಕೊಡುಗೆಯಾಗಿದೆ. 29 ಅಧ್ಯಯನ ಪೂರ್ಣ ಬರಹಗಳಿರುವ ‘ಪತ್ರಿಕೋದ್ಯಮದ ಪಲ್ಲಟಗಳು’ ಸಂಕಲನದ ಬಹುತೇಕ ಬರಹಗಳು ಈಗಾಗಲೇ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೂ ಅವುಗಳನ್ನು ಜೊತೆಜೊತೆಯಾಗಿ ಓದಿದಾಗ ಮಾಧ್ಯಮದ ಬೆಳವಣಿಗೆಯ ಇತಿಹಾಸ ದೊರೆಯುವುದರ ಜೊತೆಗೆ ಸಮಕಾಲೀನ ಸನ್ನಿವೇಶದ ಸಂಕೀರ್ಣ ವಿನ್ಯಾಸಗಳು ಪ್ರಯೋಗಗಳು ಅನಾವರಣ ಆಗುತ್ತವೆ. ಇದರಿಂದಾಗಿ ಮಾಧ್ಯಮ ಶರೀರದ ಅನಾಟಮಿಯ ಪರಿಚಯವಾಗುತ್ತದೆ. ಮಾಧ್ಯಮ ಕ್ಷೇತ್ರದ ಸುಮಾರು ನಾಲ್ಕು ತಲೆಮಾರುಗಳ ಜೊತೆಗೆ ನೇರ ಸಂಬಂಧ ಹೊಂದಿದ ಬಾಲಸುಬ್ರಮಣ್ಯ ಅವರ ಅನುಭವ ಮತ್ತು ಅಧ್ಯಯನದ ಫಲಿತಗಳು ಇಲ್ಲಿನ ಎಲ್ಲಾ ಲೇಖನಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ.
ಹಿರಿಯ ಪತ್ರಕರ್ತ ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ
ಮಾಧ್ಯಮಕ್ಕೆ ಸಂಬಂಧಿಸಿಅಂತೆ ಅವರು ಬಳಸುವ ಅನೇಕ ಕನ್ನಡ ಶಬ್ದಗಳು ನುಡಿಗಟ್ಟುಗಳು ಬಹಳ ಸೊಗಸಾಗಿವೆ. ಗ್ರಂಥದ ಮೊದಲ ಭಾಗದ ಏಳು ಲೇಖನಗಳು ಪತ್ರಿಕೋದ್ಯಮದ ಇತಿಹಾಸಕ್ಕೆ ಹಿಡಿದ ಕನ್ನಡಿಗಳು ಮತ್ತು ತೆರೆದ ಕಿಟಿಕಿಗಳು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಭಾಗವನ್ನು ತೆರೆದು ಬೆಳೆಸಲು ಪ್ರೊ. ನಾಡೀಗ ಕೃಷ್ಣಮೂರ್ತಿ ಅವರು ಪಟ್ಟ ಪರಿಶ್ರಮದ ವಿವರಗಳನ್ನುಅವರ ವಿದ್ಯಾರ್ಥಿಯಾಗಿದ್ದ ಬಾಲಸುಬ್ರಮಣ್ಯ ಕಟ್ಟಿಕೊಟ್ಟ ಕಥನ ಒಂದು ಅಪೂರ್ವ ದಾಖಲೆ. ಅದೇ ರೀತಿ ಭಾರತೀಯ ಪತ್ರಿಕೋದ್ಯಮಕ್ಕೆ ಅಡಿಪಾಯ ಹಾಕಿದ ಅಗಸ್ಟಸ್ ಹಿಕ್ಕಿ, ಕನ್ನಡ ಪತ್ರಿಕೋದ್ಯಮದ ಹರಿಕಾರ ಹರ್ಮನ್ ಮೊಗ್ಲಿಂಗ್ -ಇವರ ಕನಸು, ಕಷ್ಟಗಳು, ಸಾಧನೆಗಳು ಮತ್ತು ಅವು ಪತ್ರಿಕೋದ್ಯಮಕ್ಕೆ ತೆರೆದ ಬಾಗಿಲುಗಳು – ಇವೆಲ್ಲಾ ಪತ್ರಿಕೋದ್ಯಮದ ಬೇರುಗಳ ಶೋಧದ ಅಪೂರ್ವ ಬರಹಗಳು. ಇವುಗಳ ಜೊತೆಗೆಯೇ ಸೇರ್ಪಡೆ ಆಗುವ ಬರಹಗಳು ದೇಶದ ಮೊದಲ ಪತ್ರಿಕೆ ಜೇಮ್ಸ್ ಅಗಸ್ಟಿಸ್ ಹಿಕ್ಕಿ ಸಂಪಾದಿಸಿ ಕಲ್ಕತ್ತಾದಲ್ಲಿ ಪ್ರಕಟಿಸಿದ ಸಾಪ್ತಾಹಿಕ ‘ಬೆಂಗಾಲ್ ಗೆಜೆಟ್ ಆರ್ ಕಲ್ಕತ್ತಾ ಜನರಲ್ ಅಡ್ವರ್ಟೈಸರ್’. ಹಿಕ್ಕಿಯ ಆ ಪತ್ರಿಕೆಯು ಬ್ರಿಟಿಷ್ ದುರಾಡಳಿತದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ಕಲ್ಕತ್ತಾದ ಜನರ ಸಮಸ್ಯೆಗಳ ಬಗ್ಗೆ ಲೇಖನಗಳನನ್ನು ಬರೆಯಲು ಮಾಹಿತಿ ಸಂಗ್ರಹಿಸಿದ ಮತ್ತು ಪ್ರಕಟಿಸಿದ ಸಾಹಸದ ವೃತ್ತಾಂತ ರೋಚಕವಾಗಿದೆ. ಎರಡು ಶತಮಾನ ಕಂಡ ‘ಮುಂಬಯಿ ಸಮಾಚಾರ ಪತ್ರಿಕೆ’, ಅದೇ ರೀತಿ ‘ದಿ ಗಾರ್ಡಿಯನ್’ ಪತ್ರಿಕೆಯ ಹುಟ್ಟು ಮತ್ತು ಎರಡು ಶತಮಾನಗಳ ಸಾಹಸಮಯ ಪ್ರಯಾಣದ ವಿವರಗಳು ಬಹಳ ಸ್ಫುಟವಾಗಿ ಇಲ್ಲಿ ದೊರೆಯುತ್ತವೆ. ಮಾಸಿಕವಾಗಿ ‘ರೀಡರ್ ಡೈಜೆಸ್ಟ್’ ಕೊಟ್ಟ ಹೊಸ ಮಾದರಿ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ, ಕನ್ನಡದ ‘ಕಸ್ತೂರಿ’ ಸಹಿತ, ಜನಪ್ರಿಯವಾದುದರ ಕಥನವಿದೆ.
ಪುಸ್ತಕದ ಎರಡನೆಯ ಭಾಗದಲ್ಲಿ ಮಾಧ್ಯಮದ ಹೊಸ ಆವಿಷ್ಕಾರಗಳ ಅವಲೋಕನವಿದೆ. ಇಲ್ಲಿನ ಲೇಖನಗಳು ಮಾಧ್ಯಮದ ವಿದ್ಯಾರ್ಥಿಗಳಿಗೆ, ನವಮಾಧ್ಯಮಗಳ ಕಲಿಕಾರ್ಥಿಗಳಿಗೆ ಮತ್ತು ಆಸಕ್ತರಿಗೆ ಸಮರ್ಪಕ ಮಾಹಿತಿಯನ್ನು ಸರಳವಾಗಿ ಒದಗಿಸುತ್ತವೆ. ಇಲ್ಲಿನ ಲೇಖನಗಳಲ್ಲಿ ಮಾಹಿತಿ ಮತ್ತು ಮಾರ್ಗದರ್ಶನಗಳ ಸಮ್ಮಿಲನವನ್ನು ಕಾಣಬಹುದು. ಕೃತಕ ಬುದ್ಧಿಮತ್ತೆ, ಪಾಡ್ ಕಾಸ್ಟ್, ಓಟಿಟಿ, ಜಿಪಿಟಿ-2, ಆಡಿಯೋಗಳ ನವಮಾದರಿಗಳು, ಯುಟ್ಯೂಬ್ ಗಳ ಸೃಜನಶೀಲ ಹಾಗೂ ವಾಣಿಜ್ಯ ಲೋಕ -ಹೀಗೆ ಹೊಸಕಾಲದ ಡಿಜಿಟಲ್ ಮಾಧ್ಯಮದ ಮಾಯಾಲೋಕದ ಸೃಷ್ಟಿಗಳ ಪರಿಚಯ ಇಲ್ಲಿ ದೊರೆಯುತ್ತದೆ. ಈ ಬರಹಗಳಲ್ಲಿ ಬಾಲಸುಬ್ರಮಣ್ಯ ಅವರು ಬಹಳ ಸಂಕೀರ್ಣವಾದ ಮಾಧ್ಯಮದ ಪರಿಭಾಷೆಗಳನ್ನು ಕನ್ನಡದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಮನಂಬುಗುವಂತೆ ವಿವರಿಸಿದ್ದಾರೆ. ನವಮಾಧ್ಯಮದ ಹೊಸ ಶೋಧಗಳನ್ನು ಅಧ್ಯಯನ ಮಾಡುವವರಿಗೆ ಕನ್ನಡದಲ್ಲಿನ ಇಲ್ಲಿನ ಬರಹಗಳು ಉತ್ತಮ ಮಾದರಿಗಳಾಗಿವೆ. ಈ ಹೊಸ ಆವಿಷ್ಕಾರಗಳ ಬಗ್ಗೆ ಪರಿಚಯಿಸುವಾಗ ಬಾಲಸುಬ್ರಮಣ್ಯರು ಪರಂಪರಾಗತ ಸಮೂಹ ಮಾಧ್ಯಮಗಳ ಮೇಲೆ ಆಗುತ್ತಿರುವ ಪರಿಣಾಮಗಳನ್ನು ದಾಖಲಿಸಲು ಮರೆಯುವುದಿಲ್ಲ. ಹಾಗೆಯೇ ಪರಂಪರಾಗತ ಮಾಧ್ಯಮಗಳು -ಪತ್ರಿಕೆ, ಟಿವಿ, ಬಾನುಲಿ ಮುಂತಾದುವು -ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಸಹಾನುಭೂತಿಯ ನೋಟವನ್ನು ಹರಿಸುತ್ತಾರೆ.
‘ಡಿಜಿಟಲ್ ಸ್ಪರ್ಧೆ: ಪರಿವರ್ತನೆಯ ಯುಗದಲ್ಲಿ ಬಾನುಲಿ’ ಅಂತಹ ಒಂದು ಒಳ್ಳೆಯ ಲೇಖನ. ಹೊಸಬರು ಬಂದಾಗ ಹಳಬರು ಕಂಗೆಡದೆ ತಮ್ಮ ಇರುವಿಕೆಗೆ ಹೊಸ ಆಯಾಮಗಳನ್ನು ಜೋಡಿಸುವ ಪ್ರಕ್ರಿಯೆ ಕುತೂಹಲಕಾರಿಯಾದುದು. ಪುಸ್ತಕದ ಮೂರನೆಯ ಭಾಗದಲ್ಲಿ ಇರುವ ಎರಡು ಬರಹಗಳು ಮಾಧ್ಯಮದ ಉದ್ಯಮದ ಎರಡು ನಿದರ್ಶನಗಳ ವಿಮರ್ಶೆಗೆ ಮೀಸಲಾಗಿವೆ. ‘ಮಾಹಿತಿ – ಮನರಂಜನೆ ನಿಯಂತ್ರಿಸುವ ಜಾಗತಿಕ ದೈತ್ಯ ಟೆಕ್ ಕಂಪನಿಗಳು’ ಬರಹದಲ್ಲಿ ಗೂಗಲ್, ಫೇಸ್ ಬುಕ್, ಅಮೆಜಾನ್, ಆಪಲ್ ಅಂತಹ ದೈತ್ಯರು ಮಾಹಿತಿ -ಮನರಂಜನೆಗಳಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸುವುದರ ಮೂಲಕ ತಂದೊಡ್ಡುವ ಅಪಾಯದ ಎಚ್ಚರಿಕೆ ಇದೆ. ನಮಗೆ ಅರಿವಿಲ್ಲದಂತೆಯೇ ನಾವು ಇವುಗಳ ನಿಯಂತ್ರಣಕ್ಕೆ ಒಳಗಾಗಿ, ದಾಸರಾಗಿ, ನಮ್ಮ ಚಿಂತನಾ ಶಕ್ತಿಯನ್ನು ಕಳೆದುಕೊಳ್ಳುವ ಅಪಾಯದ ಎಚ್ಚರ ಇಲ್ಲಿ ಸಿಗುತ್ತದೆ. ಇನ್ನೊಂದೆಡೆ ಡಿಸ್ನಿ ಕಂಪನಿ ಸೃಷ್ಟಿಸಿದ ಮನರಂಜನೆಯ ಮಾಯಾಲೋಕದ ಪ್ರಪಂಚವು ಮಕ್ಕಳ ಸಹಿತ ಹೇಗೆ ಮನರಂಜನೆಗೆ ಬೋಧನೆಯ ಸ್ಪರ್ಶವನ್ನು ಕೊಟ್ಟಿದೆ ಎನ್ನುವುದರ ವಿವೇಚನೆ ಇದೆ. ಪ್ರೊ .ಬಾಲಸುಬ್ರಮಣ್ಯ ಅವರ ಪುಸ್ತಕದ ಶೀರ್ಷಿಕೆ – ‘ಪತ್ರಿಕೋದ್ಯಮದ ಪಲ್ಲಟಗಳು’ -ಇದಕ್ಕೆ ಬಹುಮಟ್ಟಿಗೆ ಸರಿಹೊಂದುವ ಹದಿಮೂರು ಲೇಖನಗಳು ಈ ಪುಸ್ತಕದ ನಾಲ್ಕನೆಯ ಭಾಗದಲ್ಲಿ ಇವೆ.
ಕೋವಿಡ್ ಕರಾಳತೆಯನ್ನು ಪತ್ರಿಕೋದ್ಯಮದ ಪಾಲಿನ ಸಂಕಷ್ಟದ ಒಂದು ಜಾಗತಿಕ ಮಹಾಯುದ್ಧ ಎಂದು ಕರೆಯಬಹುದು ಹಾಗಾಗಿಯೇ ಕೋವಿಡ್ ಬಳಿಕದ ಪತ್ರಿಕೋದ್ಯಮದ ಅಧ್ಯಯನವು ಮಾಧ್ಯಮಕ್ಷೇತ್ರದಲ್ಲಿ ಬಹಳ ಮುಖ್ಯವಾದುದು. ‘ಪ್ರಜಾಸತ್ತೆಯ ಬೇರುಗಳನ್ನು ಸಶಕ್ತಗೊಳಿಸುವ ಪತ್ರಿಕೆಗಳು’ ಒಂದು ಸಮಾಜಮುಖಿ ನಿಲುವಿನ ಲೇಖನ. ಅದಕ್ಕೆ ಸಂಬಂಧಿಸಿದ ನಿದರ್ಶನಗಳನ್ನು ಅಲ್ಲಿ ಕೊಟ್ಟಿದ್ದಾರೆ. ‘ಸಾಮಾಜಿಕ ಮಾಧ್ಯಮಗಳ ಜತೆ ಪತ್ರಿಕೋದ್ಯಮದ ಸಂಯೋಗ’ ಒಂದು ಧನಾತ್ಮಕ ಚಿಂತನೆಯ ಲೇಖನ. ಸಾಮಾಜಿಕ ಮಾಧ್ಯಮಗಳು ಪತ್ರಿಕೆಗಳ ಸ್ಪರ್ಧಿಗಳು ಎನ್ನುವ ಆತಂಕವನ್ನು ನಿವಾರಿಸಿ, ಪತ್ರಿಕೆಗಳು ಅವುಗಳ ಜೊತೆಗೆ ಅನುಸಂಧಾನ ನಡೆಸಿ ತಮ್ಮ ಅನನ್ಯತೆಗೆ ಹೊಸರೂಪ ಕೊಟ್ಟ ಕಥನಕ್ಕೆ ಕನ್ನಡದ ಸಹಿತ ಪ್ರಾದೇಶಿಕ ಭಾಷೆಗಳಲ್ಲಿ ಸಾಕಷ್ಟು ನಿದರ್ಶನಗಳು ದೊರೆಯತ್ತವೆ. ‘ಪತ್ರಿಕೋದ್ಯಮದೆದುರು ಬಹುಮಾಧ್ಯಮಗಳ ಸ್ಪರ್ಧೆ’ ಇದಕ್ಕೆ ಪೂರಕವಾದ ಬರಹ. ಇಂತಹ ಸ್ಪರ್ಧೆಯ ಒಳಸುಳಿಗಳ ಸೂಕ್ಷ್ಮಗಳನ್ನು ಇಲ್ಲಿ ಅನಾವರಣ ಮಾಡಲಾಗಿದೆ. ಇವುಗಳ ಸಮುದ್ರಮಥನದ ನಡುವೆ ನಮ್ಮ ದೇಶದ ಪತ್ರಿಕೆಗಳು ಅಮೃತವನ್ನು ಹಂಚುತ್ತಿರುವ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ‘ಪಲ್ಲಟಗೊಳ್ಳುತ್ತಿರುವ ಪತ್ರಿಕೋದ್ಯಮ: ಉಳಿವಿಗೆ ಹೊಸ ಮಾರ್ಗಗಳು’ ಲೇಖನದಲ್ಲಿ ಬಾಲಸುಬ್ರಮಣ್ಯ ಅವರು ತಮ್ಮ ಚಿಂತನೆಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪ್ರಾಯೋಗಿಕ ನೆಲೆಯಲ್ಲಿ ಈ ಲೇಖನಕ್ಕೆ ವಿಶೇಷ ಮಹತ್ವವಿದೆ. ‘ಸುದ್ದಿ ಸೇವೆ: ಹೊಸ ಸಾಧ್ಯತೆಗಳು ಮತ್ತು ಮಾದರಿಗಳು’ ಈ ಲೇಖನಗಳ ಜೊತೆಗೆ ಇಟ್ಟುಕೊಂಡು ಚರ್ಚಿಸಬೇಕಾದ ಟಿಪ್ಪಣಿ.
ಮಾಧ್ಯಮದ ಹಿರಿಯ ಸಂಶೋಧಕರು ಕೊಡಬಹುದಾದ ಮಾದರಿ ಬರಹ ಇದು. ‘ಮಾಧ್ಯಮ ರಂಗ ಮತ್ತು ಮಹಿಳೆಯರ ಪ್ರಾತಿನಿಧ್ಯ’ ಇಲ್ಲಿನ ಒಂದು ಗಮನಾರ್ಹ ಬರಹ. ದೊಡ್ಡಸಂಖ್ಯೆಯಲ್ಲಿ ಮಹಿಳೆಯರು ಓದುಗರಾಗಿ ಇರುವಾಗಲೂ ಮಾಧ್ಯಮರಂಗದಲ್ಲಿ ಅವರ ಪ್ರಾತಿನಿಧ್ಯದ ಕೊರತೆಯ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ. ಸೂಕ್ಷ್ಮ ಸಂವೇದನೆಯ ವಿಮರ್ಶೆಯ ಬರಹ ಇದು. ‘ನಿಯತಕಾಲಿಕೆಗಳ ಬೆಳವಣಿಗೆಗೆ ಸಾಂಘಿಕ ಪ್ರಯತ್ನ’ ಈ ವಿಭಾಗದಲ್ಲಿ ಪ್ರತ್ಯೇಕವಾಗಿ ಚರ್ಚಿತವಾಗಬೇಕಾದ ಬರಹ. ಕೋವಿಡ್ ಪ್ರಭಾವದ ಬಳಿಕ ನಿಯತಕಾಲಿಕೆಗಳು ಮಾಡಿಕೊಂಡ ಬದಲಾವಣೆಗಳ ಪರಿಚಯ ಇಲ್ಲಿ ಸಿಗುತ್ತದೆ. ಮ್ಯಾಗಜಿನ್ ಪೋಸ್ಟ್ ಮತ್ತು ದಾಸ್ತಾನ್ ಹಬ್ ಎಂಬ ಕಲ್ಪನೆಗಳು ನವೀನವಾಗಿವೆ. ಪ್ರೊ. ಎ.ಎಸ್ ಬಾಲಸುಬ್ರಮಣ್ಯ ಅವರ ‘ಪತ್ರಿಕೋದ್ಯಮದ ಪಲ್ಲಟಗಳು’ ಪುಸ್ತಕದ ಲೇಖನಗಳು ಬಹುಮಟ್ಟಿಗೆ ಕಳೆದ ಸುಮಾರು ಐದು ವರ್ಷಗಳ ಒಳಗಿನವು. ಕೋವಿಡ್ ಮತ್ತು ನವ ಡಿಜಿಟಲ್ ಮಾಧ್ಯಮಗಳ ಬಹುರೂಪಗಳ ಆವಿರ್ಭಾವದ ಆತಂಕ ಮತ್ತು ಬೆರಗಿನ ಲೋಕಕ್ಕೆ ಸಂಬಂಧಪಟ್ಟವು. ಪರಂಪರಾಗತ ಮಾಧ್ಯಮಗಳಿಗೆ ಸವಾಲು ಒಡ್ಡಿದ ಕಾಲದವು. ಅವುಗಳು ಎಲ್ಲವನ್ನೂ ಗ್ರಹಿಸಿ ಜೀರ್ಣಿಸಿಕೊಂಡು, ಎಲ್ಲೂ ಭಾವಾವೇಶಕ್ಕೆ ಒಳಗಾಗದೆ, ವ್ಯಂಗ್ಯ ವಿಡಂಬನೆಗಳ ಮೋಹಿನಿಗೆ ವಶವರ್ತಿಯಾಗದೆ, ಮೇಷ್ಟರ ತಾಳ್ಮೆಯಿಂದ, ಸಂಶೋಧಕರ ಸೂಕ್ಷ್ಮತೆಯಿಂದ, ಬರಹಗಾರರ ಎಚ್ಚರದಿಂದ ಬರೆದ ಬರಹಗಳನ್ನು ಸಂರಚನಾತ್ಮಕವಾಗಿ ಜೋಡಿಸಿ ಪ್ರೊ.ಬಾಲಸುಬ್ರಮಣ್ಯ ಅವರು ಈ ಹೊತ್ತಗೆಯನ್ನು ಕನ್ನಡಕ್ಕೆ ಕೊಟ್ಟಿದ್ದಾರೆ.
0 ಪ್ರತಿಕ್ರಿಯೆಗಳು