ನಳಿನ ಡಿ
ಲಜ್ಜೆ ಇಲ್ಲ ನಿನಗೆ,
ಮುನಿಸು ಬಂದೆಂಬ ಖಬರೂ ಕಾಣೆ,
ಎಲ್ಲರನೂ ಒಂದೇ ಏಟಿಗೆ ನಿನ್ನ ತೆಕ್ಕೆಗೆ ಎಳೆದರೆ,
ಅಳಿದು ಉರುಳುವವು,
ಸುಗಂಧ ಲೇಪಿತ, ಷಡ್ರಸಗಳನೂ ಉಂಡು,
ದಿವಿನಾಗಿ ತೇಗಿದ,
ಹಸಿವಿನಿಂದ ಬಳಲಿ, ಬಿಕ್ಷೆಯಿಕ್ಕುವವರಿಗೆ ಅಲೆದವರು
ಮುರುಕು ಚೋಪಡಿಯ ಚೋಮನೂ,
ಭವ್ಯ ಅರಮನೆಯ
ರಾಜನೂ,
ದಾನವಿತ್ತವನೂ,
ಪಡೆದು ಕೃತಾರ್ಥನಾಗಿ ಕೈಯೆತ್ತಿ ಮುಗಿದವನೂ,
ಕಾಡನ್ನೂ ನೆಲಸಮ ಮಾಡಿದ ಮೀಸೆ ಮಲ್ಲನೂ,
ನೂರಾರು ಬಡವರ ಮನೆ ದೀವಿಗೆ ಹಚ್ಚಿದವನೂ,
ತಲೆಕಡಿದುರುಳಿಸಲು, ಮೌನದ ಸಾವಾಗಲೂ,
ಇದೊಂದು ಸೆಳೆತ!
ಬಿಂಕ ಬಿನ್ನಾಣ,
ಕಾಮನ ಬಣ್ಣ,
ಯೌವನದ ಹುರುಪು,
ವೃದ್ಧಾಪ್ಯದ ಅರಿವು,
ದುಡಿದಿದ್ದ ನೆರಳು,
ಮೆರೆದಿದ್ದ ಅಮಲು,
ಎಲ್ಲಾ ಬಿಟ್ಟು ಹತ್ತಲೇಬೇಕು,
ನೀನು ತಂದ ಟ್ರೈನು…
ಸಾವಿರ ಪ್ರಶ್ನೆ ಎಸೆ,
ಕಣ್ಣಿರ ಕೋಡಿ ಬೀಳಿಸು,
ಎಲ್ಲಾ ದೇವರ ನೆನೆ,
ನಿನಗಿಲ್ಲ ಎಣೆ,
ಎಲ್ಲಾದೇವರಾಣೆ…
ಒಮ್ಮೆ ಅಪ್ಪಿಕೊಂಡರೆ,
ಬಿಟ್ಟುಕೊಡಲು ಪ್ರೇಯಸಿಯಲ್ಲ,
ತಲೆಸವರಿ ಬಿಡಲು ತಾಯ ಕರುಳಲ್ಲ,
ಜಗಜಟ್ಟಿಯ ಪಟ್ಟು,
ನೀ ಹೊಕ್ಕಳು ಹೊಕ್ಕರೆ ಬಿಡುಗಡೆಯಿಲ್ಲ
ಉಸಿರು ಬಿಟ್ಟು,
ಸಾವುಗಾರ,
ಮಟ್ಟಗಾರ,
ಅರ್ಮಗೆಡ್ಡಾನ್ ನೀ,
ಸೈತಾನನೂ ನಿನ್ನ ಅಸ್ತ್ರ,
ಮೊದಲು ಅವನು ಮುಳುಗಿಸೆ,
ನೀ ಎಗರಿಸಿ ಎಳೆಯಲು ಸರಾಗ,
ಭೂಮಿ, ಆಕಾಶ, ವ್ಯೂಮದೆಲ್ಲೆಡೆ
ನಿನ್ನ ಪರಾಕ್ರಮಕಿಲ್ಲ ಎಣೆ,
ನೀನಿದ್ದ ಕಡೆ ನನಗಿಲ್ಲ ಅಡೆತಡೆ
‘ಸಾವು’
ಚೆನ್ನಾಗಿದೆ
ಸೊಗಸಾಗಿದೆ ನಳಿನಾ, ಆಪ್ತಭಾವದ ಬರೆಹ.