
ಇಂದಿರಾ ಕೃಷ್ಣಪ್ಪ
ಪತ್ರಕರ್ತೆ ನಳಿನ ಡಿ ಅವರ ಕೃತಿ ಈ ತಿಂಗಳ 14 ರಂದು ಚಿಕ್ಕಮಗಳೂರಿನಲ್ಲಿ ಬಿಡುಗಡೆಯಾಗಲಿದೆ.
ಈ ಕೃತಿಗೆ ಗಾಂಧಿ ಭವನದ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಅವರು ಬರೆದ ಮುನ್ನುಡಿ ಇಲ್ಲಿದೆ-
ತಾನೇ ಬರೆದ ಅಂಕಣ ಬರಹಗಳನ್ನು ಸಂಗ್ರಹಿಸಿ, ಕೃತಿ ರೂಪದಲ್ಲಿ ಪ್ರಕಟಿಸಿರುವ ಶ್ರೀಮತಿ ನಳಿನಾ ಅವರ ಉತ್ಸಾಹ ಮತ್ತು ಚೈತನ್ಯಕ್ಕೆ ಅಪಾರ ಸಂತೋಷವಾಗುತ್ತದೆ. ಅವರ ೧೭ನೇ ಕೃತಿಯಾಗಿ ಇದು ಪ್ರಕಟವಾಗುತ್ತಿದ್ದು, ಇದಕ್ಕೆ ಮುನ್ನುಡಿ ಬರೆಯುವ ಸದಾವಕಾಶ ನನಗೆ ಒದಗಿಸಿರುವುದಕ್ಕೆ ನಳಿನಾ ಅವರಿಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ.
ನಳಿನ ಅವರು ನಿರಂತರವಾಗಿ ಮಾಧ್ಯಮದಲ್ಲಿ ಸಕ್ರಿಯರಾಗಿರುವುದರಿಂದ, ಈ ಕೃತಿಯನ್ನು ತರಲು ಸಾಧ್ಯವಾಗಿದೆ. ಕುಟುಂಬದ ಎಲ್ಲಾ ಹೊಣೆಗಾರಿಕೆಯನ್ನೂ ನಿರ್ವಹಿಸುತ್ತಾ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾ, ಸಾಹಿತ್ಯ ರಚನೆ ಮಾಡುವುದು, ಮಹಿಳೆಯರಿಗೆ ಬಹು ಸವಾಲಿನ ಕಾರ್ಯ. ಅಂತಹ ಬಹು ಸವಾಲಿನ ಕಾರ್ಯವನ್ನು ಸಾಧಿಸುತ್ತಿರುವ ನಳಿನ ಅವರ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಸುಮಾರು ೧೫ ವರ್ಷಗಳಿಂದ ಗೆಳತಿಯಾಗಿ, ಲೇಖಕಿಯಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ ನಳಿನಾ ಅವರನ್ನು ಹತ್ತಿರದಿಂದ ಬಲ್ಲವಳಾಗಿದ್ದೇನೆ.
ಈ ಕೃತಿಯಲ್ಲಿ ೩೨ ಒಟ್ಟು ಅಂಕಣ ಬರಹಗಳನ್ನು ಕ್ರೋಢಿಕರಿಸಿರುತ್ತಾರೆ. ಅವೆಲ್ಲವೂ ವರ್ತಮಾನದಲ್ಲಿ ಸಮಾಜದಲ್ಲಿ ಒಳಗೆ ನಡೆಯುತ್ತಿರುವ ಅನೇಕ ಘಟನಗಳಿಗೆ, ಸವಾಲುಗಳಿಗೆ ಸಂಬಂಧಿಸಿದ್ದು, ನಿರಂತರವಾಗಿ ಪರಿಹಾರಕ್ಕೆ ಪ್ರಯತ್ನಿಸಿರುವ ಪ್ರಶ್ನೆಗಳೇ ಆಗಿವೆ. ಇವುಗಳಲ್ಲಿ ರಾಜಕೀಯ, ಪರಿಸರ, ಮಹಿಳೆ-ಮಕ್ಕಳು, ಸಂಸ್ಕೃತಿ, ಧರ್ಮಾಂಧತೆ, ವೈಚಾರಿಕತೆ, ಸಾಮಾಜಿಕತೆ, ಆರ್ಥಿಕತೆಯಂತಹ ಹಲವು ವಿಚಾರಗಳನ್ನು ಗಂಭೀರವಾಗಿ ಚರ್ಚಿಸಿದ್ದಾರೆ. ಅವರ ಬರಹಗಳಲ್ಲಿ ಇದೇ ಅಂತಿಮ ಸತ್ಯವೆಂದು ಪ್ರತಿಪಾದಿಸದೆ, ಸಾಮಾಜಿಕ ನ್ಯಾಯದ ಅನೇಕ ಪರಿಹಾರದ ಮಾರ್ಗಗಳ ವಿವರಣೆಯನ್ನು ಸಹ ನೀಡಿದ್ದಾರೆ. ಹಾಗೆಯೇ ಸಾಮಾನ್ಯ ಜನಜೀವನದ ಮತ್ತು ಜನಸಾಮಾನ್ಯರ ಅನೇಕ ನಿದರ್ಶನಗಳನ್ನು ಮುಂದಿಟ್ಟಿದ್ದಾರೆ.

ಉದಾಹರಣೆಗೆ ಪುರುಷಾಧಿಪತ್ಯದ ಮನಸ್ಥಿತಿಗಳು, ಬಣ್ಣದ ಮೋಹ, ಹೆಣ್ಣಿನ ದೇಹದ ಹಕ್ಕು, ಹೆಣ್ಣು ಮಕ್ಕಳಿಗೆ ಸೋದರ ಶಕ್ತಿ, ಅರ್ಧನಾರೀಶ್ವರನ ಒಡನಾಡುತ್ತಾ, ಮುಟ್ಟು ತಟ್ಟದೇ ಇವೇ ಮುಂತಾದ ಅಂಕಣ ಬರಹಗಳು ಮಹಿಳೆಯರನ್ನು ಅರ್ಥೈಸಿಕೊಂಡು ನಡೆಸುವ ಪುರುಷ ಸಮಾಜದ ದೃಷ್ಠಿಕೋನವನ್ನು ವಿಶ್ಲೇಷಿಸುತ್ತದೆ. ಹಾಗೆಯೇ
ಭಾರತಾಂಬೆಯ ಸುಪುತ್ರರಲ್ಲಿ ಸಮಾನತೆ ಬೇರೂರಲಿ, ಮೌನ ಮುರಿದು ಮತದಾನ ಮಾಡಿ, ಪ್ರಾಜ್ಞತೆ ಮೆರೆಯಲಿ ಮತದಾರ, ಸೋಲೆಂಬ ಸೋಪಾನ, ದೇಶಪ್ರೇಮವೆಂದರೆ – ಇಂಥಹ ಅಂಕಣಗಳು ಓರ್ವ ಜಬಾಬ್ದಾರಿಯುತ ನಾಗರೀಕನ ಕರ್ತವ್ಯಗಳನ್ನು ತಿಳಿಸಿಕೊಡುತ್ತವೆ.
ಅಂತೆಯೇ ಪ್ರವಾಸಗಳು ಮನವರಳಿಸಲಿ, ಕಾಡಿನೊಳಗಿನ ಕಥೆ, ನೀಲಕುರಿಂಜಿಯ ನಿತ್ಯ ತನನ ಮೊದಲಾದವು ಜನರಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸುತ್ತವೆ.
ಹಿರಿಜೀವಿಗಳಿಗೆ ಪರೀಕ್ಷೆ, ಐಪಿಎಲ್ ನುಂಗುವ ಮನೆಮಠಗಳ ಹೊಣೆ ಯಾರದ್ದು? ಹಿತನುಡಿಗಳು ದಾರಿದೀಪ, Rank ಕಾಲದಲ್ಲಿ, ಸಾಲ್ಮಂಡ್ ನ್ಯಾಯ ಶಾಸ್ತ್ರಜ್ಞನೂ, ಮತ್ತು ಕುಟುಂಬ ಜೀವನದಲ್ಲಿ ಮನೆಯ ಸದಸ್ಯರ ಸಾಮರಸ್ಯ, ಹಿತ ಚಿಂತನೆಯ ಜವಾಬ್ದಾರಿಯನ್ನು ತಿಳಿಸುತ್ತವೆ.
ಇನ್ನುಳಿದ ಅಂಕಣಗಳಾದ ’ಕೃಷ್ಣಂ ವಂದೇ ಜಗದ್ಗುರು, ದೀಪಾವಳಿ ಬೆಳಕಿನ ರಂಗೋಲಿ, ಶಿವಾ ಶಿವಾ ಅಂತ, ಹೆಣ್ಣುಮಕ್ಕಳೆಂದರೆ ದೈವೀ ಸ್ವರೂಪ..’ ಮುಂತಾದವುಗಳು ನಮ್ಮಲ್ಲಿ ಆಚರಣೆಯಲ್ಲಿರುವ, ಅನೇಕ ಹಬ್ಬ ಹರಿದಿನಗಳಲ್ಲಿ ಅನುಸರಿಸುತ್ತಿರುವ ಸಾಂಪ್ರದಾಯಿಕತೆ, ವಿವೇಚನೆ ಮತ್ತು ವರ್ತಮಾನದ ತಲ್ಲಣಗಳ ಕಡೆ ಕೈತೋರುತ್ತಾ ಬದಲಾವಣೆಗಳನ್ನು ಸೂಚಿಸುವ ದಿಕ್ಸೂಚಿಯಂತಿವೆ.

ಹೀಗೆ ನಳಿನ ಅವರ ದೃಷ್ಠಿಕೋನ ಕುಟುಂಬ, ಸಮಾಜ ಮತ್ತು ಪ್ರಭುತ್ವಗಳ ಕಡೆ ಹರಿಯುತ್ತಾ, ಇರುವ ಲೋಪದೋಷಗಳನ್ನು ಎತ್ತಿ ತೋರಿಸುತ್ತಾ, ಪರಿವರ್ತನೆ ತರಬಹುದಾದ ಮಾರ್ಗಗಳನ್ನು ಹಿತಮಿತವಾಗಿ ಧ್ವನಿಸುತ್ತವೆ. ಇವರ ಬರಹಗಳು ಸ್ನೇಹಿತೆಯ ಸವಿನುಡಿಗಳಂತೆ ಓದಿಸಿಕೊಂಡು ಹೋಗುತ್ತವೆ. ಮಹಿಳೆಯರ ಅನೇಕ ಸಮಸ್ಯೆಗಳನ್ನು ಹೇಳುತ್ತಾ , ಅವರಿಂದಲೇ ಆಗುವ ಅನೇಕ ಸಂಕಷ್ಠಗಳನ್ನು ತಿಳಿಸಿಕೊಡುತ್ತಾರೆ. ಇಲ್ಲಿ ಮಹಿಳೆಯರು ಸಹ ತಮ್ಮಿಂದಾಗಬಹುದಾದ ತಪ್ಪುಗಳ ಕಡೆಗೂ ಗಮನ ಹರಿಸಬಹುದಾಗಿದೆ. ಅಂತೆಯೇ ಸಮಾನತೆ, ಪ್ರಜಾಪ್ರಭುತ್ವ, ಸಂವಿಧಾನದ ಅಶಯಗಳು, ಪ್ರಜೆಗಳ ಕರ್ತವ್ಯಗಳನ್ನು ಮತ್ತು ನ್ಯಾಯಪರತೆಯನ್ನು ನಮ್ಮ ನಡೆನುಡಿಗಳಲ್ಲಿ ಅಳವಡಿಸಿಕೊಳ್ಳುವುದನ್ನು ಮೃದು ಮಧುರ ನುಡಿಗಳಲ್ಲಿ ಹೇಳಿದ್ದಾರೆ.
ಈ ಅಂಕಣಗಳನ್ನು ಓದುವಾಗ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪು ತಿ ನರಸಿಂಹಾಚಾರ್, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮೊದಲಾದ ಹಿರಿಯ ಸಾಹಿತಿಗಳ ಬರಹಗಳಲ್ಲಿರುವ ಜನಸಾಮಾನ್ಯರ ಭಾಷೆ, ಆಡುನುಡಿಯಲ್ಲಿ ಹೇಳುವ ಶೈಲಿಯನ್ನು ಗಮನಿಸಬಹುದಾಗಿದೆ.
ಗಾಢವಾಗಿ ಗಮನಿಸಿದಾಗ, ವರ್ತಮಾನದ ಪ್ರಶ್ನೆಗಳು, ಸಮಸ್ಯೆಗಳು ಮತ್ತು ತೀವ್ರತೆಗಳು ಅಧಿಕವಾಗುತ್ತಿರುವ ಈ ಹೊತ್ತಿನಲ್ಲಿ ಮಹಿಳಾ ಹಕ್ಕುಗಳು, ಸಮಾನತೆ, ಜಾತ್ಯಾತೀತತೆ ಮತ್ತು ಸಂವಿಧಾನದ ಅರಿವಿನ ದೃಷ್ಟಿಕೋನದಿಂದ ವಿಷಯಗಳನ್ನು, ಘಟಿಸಿದ ಅನೇಕ ಘಾತಕ ಘಟನೆಗಳ, ಸಂತ್ರಸ್ತರ ದೃಷ್ಠಿಯಿಂದ ಕಾಣುವ, ಒಳನೋಟದಿಂದ ಬರೆಯುವಂತಾಗಲಿ ಎಂದು ಆಶಿಸುತ್ತೇನೆ.
ಇವರ ಬರಹಗಳು ಸಮಾಜಕ್ಕೆ ದಾರಿದೀಪದಂತಿರುವುದರಿಂದ, ಓದುಗರ ದೃಷ್ಠಿಕೋನಗಳಿಗೆ ಹೊಸ ಹೊಳಹನ್ನು ತರುತ್ತವೆ. ಆದ್ದರಿಂದ ಈ ಕೃತಿಯ ಲೋಕಾರ್ಪಣೆ ಹಲವರಿಗೆ ಆಶಾದೀಪದಂತಿರುವುದರಿಂದ ನಳಿನ ಅವರಿಗೆ ಈ ಸಂದರ್ಭದಲ್ಲಿ ಶುಭ ಕೋರುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃತಿರತ್ನಗಳನ್ನು ಬರೆಯುವಂತಾಗಲಿ ಎಂದು ಹಾರೈಸುತ್ತೇನೆ.
0 ಪ್ರತಿಕ್ರಿಯೆಗಳು