ಕೆ ಸತ್ಯನಾರಾಯಣ ಕಂಡಂತೆ ‘ಅಂದದ ಹೆಣ್ಣಿನ ನಾಚಿಕೆ’

ನಮ್ಮ ಶಿಕ್ಷಕಿ ನಿರ್ಮಲಾ ಮೇಡಂ

ಕೆ ಸತ್ಯನಾರಾಯಣ

ಖಾಸಗಿ ಬದುಕು, ಕೌಟಂಬಿಕ ಜೀವನ ಇವರಿಗೆ ಇಲ್ಲವೇ ಇಲ್ಲ ಎನ್ನುವಷ್ಟು ಜವಾಬ್ದಾರಿಗಳು, ಸ್ವಭಾವ ಸಹಜವಾದ ವೈವಿಧ್ಯಮಯ ಆಸಕ್ತಿಗಳು-ಇವೆನ್ನಲ್ಲಾ ನಿರ್ವಹಿಸುತ್ತಿರುವ ಗೆಳೆಯರಾದ ಶ್ರೀಧರ ಮೂರ್ತಿಯವರ ಈ ಪುಸ್ತಕಕ್ಕೆ ಮುನ್ನುಡಿ ಬರೆಯಲು ಹೊರಟಿರುವ ನಾನು ಎದುರಿಸ ಬೇಕಾದ ಮೊದಲ ಸವಾಲೆಂದರೆ ಈ ಪುಸ್ತಕ ಯಾವ ಸ್ವರೂಪದ್ದು, ಯಾವ ಪ್ರಕಾರಕ್ಕೆ ಸೇರಿದ್ದು ಎಂಬ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುವುದು.

ಚಲನಚಿತ್ರ ಲೋಕದ ವಿದ್ಯಮಾನಗಳನ್ನು ಕುರಿತ ಪ್ರಬಂಧ/ಲೇಖನಗಳ ಸಂಗ್ರಹ ಎಂದು ಓದ ಬೇಕೋ, ಪ್ರಬಂಧ ಸ್ವರೂಪದ ಕನ್ನಡ ಚಲನಚಿತ್ರ ಲೋಕದ ಚರಿತ್ರೆಯೆಂದು ಓದ ಬೇಕೋ ಇಲ್ಲ ಲೇಖಕರ ವಿಭಿನ್ನ ಆಸಕ್ತಿಗಳ ಆತ್ಮಚರಿತ್ರೆಯೆಂದು ಓದ ಬೇಕೋ, ಇಲ್ಲ, ಇವೆಲ್ಲವನ್ನೂ ಮಿಶ್ರಣ ಮಾಡಿ ಲೇಖಕರು ನಡೆಸಿರುವ ಸಂಸ್ಕೃತಿ ಚಿಂತನೆಯ ಲಹರಿಯೆಂದು ಭಾವಿಸ ಬೇಕೋ, ಈ ಪ್ರಶ್ನೆಗಳಿಗೆ ನಿರ್ದಿಷ್ಟ ಉತ್ತರ ಕೊನೆಗೂ ನನಗೆ ಸಿಗಲಿಲ್ಲ.

ಪ್ರತಿಯೊಬ್ಬ ಓದುಗರಿಗೂ ಹೀಗೆ ಆಗುತ್ತದೆಂಬ ಭಾವನೆ ನನ್ನದು. ಮತ್ತು ಹಾಗೆ ಆದಾಗಲೇ ಓದುವ ಸಂತೋಷ ಹೆಚ್ಚಿನದು. ಇಷ್ಟು ಮಾತ್ರವಲ್ಲ ಇಲ್ಲಿಯ ಲೇಖನಗಳ ಮರ್ಮವನ್ನು ಹಿಡಿದು ಪ್ರತಿಯೊಬ್ಬ ಓದುಗನು ಪುಸ್ತಕದಲ್ಲಿ ಅಡಕವಾಗಿರುವ ಪರಿಕಲ್ಪನೆಗಳು ಮತ್ತು ವಿದ್ಯಮಾನಗಳ ಸುತ್ತ ಮುತ್ತ ತನ್ನದೇ ನೆನಪುಗಳ ಮೂಲಕ ಇನ್ನೊಂದು ಪುಸ್ತಕವನ್ನು ಕಟ್ಟಿಕೊಳ್ಳುತ್ತಾನೆ. ಎರಡು ಮೂರು ತಲೆಮಾರುಗಳ ಓದುಗರಿಗೂ ಹೀಗೇ ಆಗುತ್ತದೆ. ಕನ್ನಡ ಚಲನಚಿತ್ರ ಲೋಕ ನಮ್ಮೆಲ್ಲರ ಭಾವನಾತ್ಮಕ ಬೆಳವಣಿಗೆಯ ಅವಿಭಾಜ್ಯ ಅಂಗವೇ ಆಗಿರುವುದರಿಂದ ಈ ರೀತಿಯ Connect ( ಸಂಬ೦ಧ) ಸಾಧ್ಯವಾಗುತ್ತದೆ. ಇಂತಹ ಸಂಬ೦ಧಗಳನ್ನು ಉದ್ದೀಪಿಸುವ ಲೇಖಕರ ಬಗ್ಗೆ ಕೃತಜ್ಞತೆ ಮೂಡುತ್ತದೆ.

ಚಲನಚಿತ್ರ ಲೋಕದ ಪರಿಕಲ್ಪನೆ, ವಿದ್ಯಮಾನ ಇತಿಹಾಸವನ್ನು ಪರಿಶೀಲಿಸುವ ಲೇಖಕರು ಸಾಹಿತ್ಯಿಕ ಚಿಂತನೆ/ವಿಮರ್ಶೆಯ ಪರಿಕರಗಳನ್ನು ಬಳಸಿಕೊಳ್ಳುತ್ತಾರೆ. ಎಲ್ಲೆಲ್ಲೋ, ಎಂದೆ೦ದೋ ಚೆಲ್ಲಿ ಹೋಗಿರುವ ಘಟನೆ, ಅನುಭವಗಳನ್ನು ಒಂದು ಕೇಂದ್ರಕ್ಕೆ ತರುವುದು ಇಂತಹ ಒಂದು ವಿಧಾನ. ಆಕರ್ಷಕವಾಗಿ ಕಾಣುವ, ಮೇಲುನೋಟಕ್ಕೆ ಲಭ್ಯವಾಗುವ ಸಂಗತಿಗಳಿ೦ದಾಚೆಗೂ ಇರುವ ಸಂಗತಿಗಳನ್ನು ಗಮನಿಸುವುದು ಇನ್ನೊಂದು ವಿಧಾನ. ಕೃತಿಯಲ್ಲಿ ಬರುವ ಈ ಎರಡು ವಾಕ್ಯಗಳನ್ನು ಗಮನಿಸಿ
‘ಇಂತಹ ಕುತೂಹಲಕರ ಕಥೆಗಳನ್ನು ಈ ಲೇಖನದಲ್ಲಿ ಜೋಡಿಸಲು ಪ್ರಯತ್ನಿಸಿದ್ದೇನೆ’

‘ಸಿನಿಮಾ ಎಂದರೆ ಬಣ್ಣದ ಲೋಕ ಅನ್ನೋದು ಎಲ್ಲರ ನಂಬಿಕೆ. ಆದರೆ ಈ ರಂಗುರ೦ಗಿನ ಲೋಕದಲ್ಲಿ ಶುದ್ಧವಾದ ಮಾನವೀಯತೆ ಇರುವವರು ಹಿಂದೆಯೂ ಇದ್ದಾರೆ, ಇಂದಿಗೂ ಇದ್ದಾರೆ, ಆದರೆ ಅವರ ಕುರಿತು ಇತಿಹಾಸ ಕಡೆಗಣ್ಣ ನೋಟ ಕೂಡ ಬೀರದೆ ಮುಂದೆ ಸಾಗುತ್ತದೆ. ಗಾಸಿಪ್ ಮತ್ತು ಗ್ಲ್ಯಾಮರ್ ಹಿಂದೆ ಬಿದ್ದವರಿಗೆ ಇಂತಹ ದಾಖಲಾತಿ ಮುಖ್ಯವಾಗುವುದಿಲ್ಲ. ಆದರೆ ಅಂತಹವರ ಬಗ್ಗೆ ಬರೆಯದೇ ಹೋದರೆ ಇತಿಹಾಸದ ಪ್ರಮುಖ ಭಾಗವನ್ನು ನಾವು ನಿರ್ಲಕ್ಷಿಸಿದಂತೆ ಆಗುತ್ತದೆ’

ಚಿತ್ರರಂಗದ ಬಗ್ಗೆ ಬರೆಯುವಾಗ ಓದುಗರಿಗೆ ಎಷ್ಟು ರೋಚಕತೆ ನೀಡ ಬಹುದು ಎಂಬ ಕಡೆಗೇ ಬಹುಪಾಲು ಲೇಖಕರ ಗಮನವಿರುತ್ತದೆ. ಆದರೆ ಶ್ರೀಧರ ಮೂರ್ತಿಯವರ ಉದ್ದೇಶ GLAMAROUS ಲೋಕವನ್ನು DEGLMAURSE ಮಾಡುವುದು. ಹೀಗೆ ಮಾಡುವುದರ ಹಿಂದೆ ಶ್ರೀಧರ ಮೂರ್ತಿಯವರ ವ್ಯಕ್ತಿತ್ವ, ಸ್ವಭಾವ ಕೂಡ ಕೆಲಸ ಮಾಡಿದಂತಿದೆ. ತನ್ನ ವ್ಯಕ್ತಿತ್ವವನ್ನು ಮುಂದೆ ಮಾಡಿ ಕೊಳ್ಳುವ, ಪ್ರತಿಷ್ಟಾಪಿಸುವ ತನ್ನ ಸುತ್ತಲೇ ಒಂದು ಅಧಿಕಾರ-ಪ್ರಭಾವದ ವಲಯವನ್ನು ಪ್ರಜ್ಞಾಪೂರ್ವಕವಾಗಿ ಕಟ್ಟಿ ಕೊಳ್ಳುವ ಹೊಸ ತಲೆಮಾರಿನ ಬಹುಪಾಲು ಪತ್ರಕರ್ತರ ಸ್ವಭಾವ-ಸ್ವರೂಪವನ್ನು ನಾನು ಶ್ರೀಧರ ಮೂರ್ತಿಯವರಲ್ಲಿ ಕಂಡಿಲ್ಲ. ದಾಢಸೀ ವ್ಯಕ್ತಿತ್ವ ಅವರದಲ್ಲ. ಇಂತಹ ಸ್ವಭಾವದ ಕನ್ನಡ ಪತ್ರಿಕಾಲೋಕದ ಉತ್ತಮ ಮಾದರಿಗಳೆಂದರೆ ಹಿಂದಿನ ತಲೆಮಾರಿನ ಈಶ್ವರಯ್ಯ, ಜಿ.ಎಸ್.ಸದಾಶಿವ, ಜಿ.ಎನ್.ರಂಗನಾಥ ರಾವ್ ಇಂತಹವರು. ಇನ್ನು ಒಂದು ಅಂಶವನ್ನು ಇಲ್ಲಿ ಪ್ರಸ್ತಾಪಿಸ ಬೇಕು ಚಿತ್ರರಂಗದ ಒಳ ಪ್ರಪಂಚದ ದೀರ್ಘಕಾಲದ ಅನುಭವವಿದ್ದರೂ ಶ್ರೀಧರ ಮೂರ್ತಿ ಹೊರಗಿನವರಂತೆಯೇ ವಸ್ತುನಿಷ್ಠ ಮಾಧ್ಯಮದ ವಿದ್ಯಾರ್ಥಿಯಂತೆಯೇ ಬರೆಯುತ್ತಾರೆ. ಇಲ್ಲೆಲ್ಲ ಅವರು ಕೇವಲ ಪತ್ರಕರ್ತರು ಇತಿಹಾಸಕಾರರು ಮಾತ್ರವಲ್ಲ; ಸಾಹಿತ್ಯ ವಿಮರ್ಶಕ ಧೋರಣೆ -ವ್ಯಕ್ತಿತ್ವವನ್ನು ಉಳ್ಳವರು.

ಸಂಕಲನದ ಶೀರ್ಷಿಕಾ ಬರಹವನ್ನು ಗಮನಿಸೋಣ ಈ ಬರಹದ ಜೊತೆ ಜೊತೆಗೇ ಶ್ರೀಮತಿ ಎನಿಸಿ ಮತಿ ನೀಗುವೆಯಾ, ಭಾಮೆಯ ನೋಡಲು ತಾ ಬಂದ ಬರಹಗಳನ್ನು ಕೂಡ ಗಮನಿಸ ಬೇಕು. (ಒಂದು ಬರಹದ ಆಶಯ, ಧ್ವನಿ ಮುಂದೆ ಇನ್ನೊಂದು ಅಥವಾ ಮತ್ತೊಂದು ಬರಹದಲ್ಲಿ ವಿಕಾಸಗೊಳ್ಳುತ್ತಾ ಪೂರ್ಣವಾಗುವುದು ಇಲ್ಲಿಯ ಬರಹಗಳ ವಿನ್ಯಾಸ) ನಾಚಿಕೆಯನ್ನು ಹೆಣ್ಣು ದೃಶ್ಯ ಮಾಧ್ಯಮದಲ್ಲಿ ಹೇಗೆ ಅಭಿವ್ಯಕ್ತಿಗೊಳಿಸ ಬಹುದು ಎಂಬುದು ಇಲ್ಲಿನ ಚರ್ಚೆ. ಪಂಪನ ಉಲ್ಲೇಖದಿಂದ ಪ್ರಾರಂಭವಾಗುವ ಈ ಬರಹ ಪ್ರತಿಭಾವಂತ ಕಲಾವಿದೆ ಲಕ್ಷ್ಮಿಯವರ ಪ್ರಯೋಗ-ಪ್ರಯತ್ನಗಳಲ್ಲಿ ಫಲ ನೀಡಿದ್ದನ್ನು ಪ್ರಸ್ತಾಪಿಸುತ್ತದೆ. ಈ ಎಲ್ಲಾ ಪ್ರಯೋಗ-ಪ್ರಯತ್ನಗಳಲ್ಲಿ ಒಂದು ರೀತಿಯ ಮುನಿಸಿನಿಂದಲೇ ಭಾಗವಹಿಸುವ ಲಕ್ಷ್ಮಿ ನಾಚಿಕೆಯ ಇನ್ನೊಂದು ಭಾಗವಾದ ಹುಸಿ ಮುನಿಸನ್ನು ದೃಶ್ಯಕ್ಕೆ ಅಭಿನಯಿಸಲು ತಯರಾಗುವಾಗ ಓದುಗರಿಗೆ ಕಾಣಿಸುವಂತೆ ಶ್ರೀಧರ ಮೂರ್ತಿ ಬರೆಯುತ್ತಾರೆ. ನಾಚಿಕೆ ಒಂದು ಸಾಮಾಜಿಕ ಮೌಲ್ಯ, ಸಾಂಸ್ಕೃತಿಕ ಮೌಲ್ಯವಾಗಿ ಉಳಿದಿದೆಯೇ, ಆಧುನಿಕ ಕಾಲದ ಶೃಂಗಾರದ ಭಾಗವಾಗಿದೆಯೆ ಎಂದು ಓದುಗರಲ್ಲಿ ಮೂಡುವ ಪ್ರಶ್ನೆಗೆ ಲೇಖಕರ ಉತ್ತರ: ಇಂದು ಕೂಡ ಹೆಣ್ಣು ತನ್ನ ಅಂತರ೦ಗದ ನಾಚಿಕೆಯನ್ನು ಕಳೆದು ಕೊಂಡಿಲ್ಲ. ಕೆ.ಎಸ್.ನರಸಿಂಹ ಸ್ವಾಮಿಯವರ ಕಾವ್ಯಲೋಕವನ್ನು ಮತ್ತೆ ನಾವು ವಾಸ್ತವದಲ್ಲಿ ಕಾಣ ಬಹುದೆ? ನಮ್ಮ ಸಾಂಸಾರಿಕ ಜೀವನದ ಎಳೆಗಳಲ್ಲಿಯೇ ಕೆ.ಎಸ್.ನ ಭಾವಲೋಕ ಸೂಚಿಸುವ ಎಳೆಗಳು ಇನ್ನು ಉಳಿದು ಕೊಂಡಿದೆಯೆ ಎಂಬ ಪ್ರಶ್ನೆ ಈ ಲೇಖನವನ್ನು ಓದುವಾಗ ನನ್ನಲ್ಲಿ ಮೂಡಿತು. ಈಗ ಚಲನಚಿತ್ರ ಮಾಧ್ಯಮ ಕಲೆಯ ಸ್ವರೂಪವನ್ನು ಕಳೆದು ಕೊಂಡು ಉದ್ಯಮವಾಗಿ, ವೃತ್ತಿಯಾಗಿ ಮಾರ್ಪಾಟುಗೊಂಡಿದೆ. IINTIMACY  COUNSELLOR ಈಗ ಹಾಲಿವುಡ್, ಬಾಲಿವುಡ್ ಭಾಗ. ಆತ್ಮೀಯ, ಖಾಸಗಿ ದೃಶ್ಯಗಳಲ್ಲಿ ಎಷ್ಟು ಭಾಗವಹಿಸ ಬೇಕು, ನಟ-ನಟಿಯರ ನಿರೀಕ್ಷೆ ಎಷ್ಟಿರ ಬೇಕು ಎಂಬುದನ್ನು ಈಗ COUNSELLOR ಗಳು ನಿರ್ದೇಶಿಸುವ ಈಚಿನ ವಿದ್ಯಮಾನ ಈ ಲೇಖನ ಓದುವಾಗ ಓದುಗರನ್ನು ಕಾಡುತ್ತದೆ. ಇದನ್ನೆಲ್ಲಾ ಚರ್ಚಿಸುವಾಗ ಲೇಖಕರು ಎಷ್ಟೊಂದು ಕಲಾವಿದರು, ಚಿತ್ರ ಸಾಹಿತಿಗಳು, ಛಾಯಾಗ್ರಾಹಕರ ಉದಾಹರಣೆಗಳನ್ನು ಒಟ್ಟಿಗೆ ಜೋಡಿಸಿದ್ದಾರೆ ಎಂಬುದನ್ನು ಗಮನಿಸ ಬೇಕು.

ಈ ಪರಿಕಲ್ಪನೆಯ ಜೊತೆ ನೇರವಾಗಿ ಅಲ್ಲದಿದ್ದರೂ ಸಾಂಸ್ಕೃತಿಕವಾಗಿ ತಳಕು ಹಾಕಿ ಕೊಂಡಿರುವ ‘ಶ್ರೀಮತಿ ಎನಿಸಿ ಮತಿ ನೀಗುವೆಯಾ’ ಮತ್ತು ‘ಭಾಮೆಯ ನೋಡಲು ತಾ ಬಂದಾ’ ಪ್ರಬಂಧಗಳನ್ನು ಗಮನಿಸ ಬೇಕು. ‘ಶ್ರೀಮತಿ’ ಪ್ರಬಂಧದಲ್ಲಿ ಲೇಖಕರು ಜನಪ್ರಿಯ, ಕಲಾತ್ಮಕ ಚಿತ್ರಗಳು, ಕಲಾವಿದರು, ನಿರ್ದೇಶಕರು ಎಲ್ಲರ ಉದಾಹರಣೆಗಳನ್ನು ಒಟ್ಟಿಗೆ ತಂದು, ಹೆಣ್ಣಿನ ಬಗ್ಗೆ, ಶೀಲದ ಬಗ್ಗೆ, ದಾಂಪತ್ಯ ಸುಖದ ಬಗ್ಗೆ ನಮ್ಮೆಲ್ಲರ ಕಲ್ಪನೆ-ವಿಚಾರ ಎಷ್ಟು ಸಾಂಪ್ರದಾಯಿಕವಾಗಿದೆ, ತೆಳುವಾಗಿದೆ ಎಂಬುದನ್ನು ತೋರಿಸುತ್ತಾರೆ. ಇದೆಲ್ಲವನ್ನು ಸಾಬೀತು ಮಾಡುತ್ತಿರುವುದು ಸ್ತ್ರೀ ಕಲಾವಿದರು/ಪಾತ್ರಗಳು ಎಂಬುದು ಇನ್ನೊಂದು ವ್ಯಂಗ್ಯ. ‘ಭಾಮೆಯ..’ ಪ್ರಬಂಧ ಚಿತ್ರರಂಗದೊಳಗೆ ನಡೆಯುವ ವಿವಾಹಗಳನ್ನು ಪರಿಚಯಿಸಿ ಕಲಾವಿದರ ನೈಜ ಬದುಕಿನಲ್ಲಿ ನಡೆಯುವ ಘಟನೆಗಳನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಈ ಬರಹದಲ್ಲಿನ ಮೆಲುದನಿಯ ಹಾಸ್ಯ ಕೂಡ ಗಮನಾರ್ಹವಾದದ್ದು. (ಟಿ.ಜಿ.ಲಿಂಗಪ್ಪನವರ ವಧುಪರೀಕ್ಷೆಯ ಸಂದರ್ಭ)

ಬರವಣಿಗೆ ಮಾಡುವವರಿಗೆ ತೀವ್ರವಾದ ಸಾಂಸ್ಕೃತಿಕ ಕಾಳಜಿಯೆಂಬುದು ಮನಸ್ಸಿನ ಆಳದಲ್ಲಿದ್ದರೆ ಎಲ್ಲಾ ಬರಹಗಳು ಒಂದಕ್ಕೊ೦ದು ತೆಕ್ಕೆ ಹಾಕಿ ಕೊಂಡು ಇರುತ್ತವಷ್ಟೆ. ಇಲ್ಲಿಯ ಬರಹಗಳನ್ನು ಓದುವಾಗ ಈ ರೀತಿಯ ಭಾವನೆ ಓದುಗರಿಗೆ ಪದೇ ಪದೇ ಬರುತ್ತದೆ. ‘ಪ್ರೇಮವಿದೆ ಮನದಿ ನಗುತ ನಲಿವ ಹೂವಾಗಿ’ ಲೇಖನದಲ್ಲಿ ಬರುವ ಮೆಲ್ಲುಸಿರೀ ಸವಿಗಾನ ಹಾಡಿನ ವಿಶ್ಲೇಷಣೆ ಓದುಗರನ್ನು ಮತ್ತೆ ಶೀರ್ಷಿಕೆಯ ಪ್ರಬಂಧದ ಕಡೆಗೇ ಒಯ್ಯುತ್ತದೆ. ಜಾಗತೀಕರಣದ ನಂತರದ ದಿನಗಳಲ್ಲಿ ಲೈಂಗಿಕತೆ ಎನ್ನುವುದು ಒಂದು ಆಕರ್ಷಣೆಯಾಗಿ ಉಳಿದಿಲ್ಲ. ಹಾಗೆಯೇ ನಾಚಿಕೆಯೆಂಬ ಪರಿಕಲ್ಪನೆಯೂ ನಮ್ಮ ಜೀವನದಿಂದ ಮರೆಯಾಗಿದೆ ಎಂಬ ಎರಡೂ ರೀತಿಯ ತಿಳುವಳಿಕೆಯೂ ಲೇಖಕರಿಗೆ ಇರುವುದರಿಂದ ಮುಂದೆ ಉಲ್ಲೇಖಿಸಿರುವಂತಹ ಸಾಲುಗಳು ಮೂಡಿ ಬರುತ್ತವೆ.

‘ಒಂದು ಕಾಲದಲ್ಲಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಪ್ರಮಾಣದ ವೀಕ್ಷಕರನ್ನು ನೀಡುತ್ತಾ ಇದ್ದುದು ಮಧ್ಯಮ ವರ್ಗ. ಈಗ ಮಧ್ಯಮ ವರ್ಗದ ಸ್ವರೂಪ ಬದಲಾಗಿದೆ. ಅದು ಅನೇಕ ಕಾರಣಗಳಿಂದ ಕನ್ನಡ ಚಿತ್ರರಂಗದಿ೦ದ ದೂರವಾಗಿದೆ. ಒಂದು ಕಾಲದಲ್ಲಿ ನವಿರಾದ ಶೃಂಗಾರ ದೃಶ್ಯಗಳು ರೂಪುಗೊಳ್ಳಾತ್ತಾ ಇದ್ದದ್ದೇ ಮಧ್ಯಮ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿ ಇರಿಸಿ. ಈಗ ಮಧ್ಯಮ ವರ್ಗ ಹೇಗಿದ್ದರೂ ದೂರವಾಗಿದೆ ಎನ್ನುವ ಹುಂಬತನದಲ್ಲಿ ವಿಕೃತಿಯ ದಾರಿಯನ್ನು ಚಿತ್ರರಂಗ ಹಿಡಿದಿದೆ.’ (ಈ ಸಾಲುಗಳನ್ನು ಓದುವಾಗ ದೃಶ್ಯ ಮಾಧ್ಯಮದಲ್ಲಿ ಸಾಹಸ, ಅಪರಾಧಗಳನ್ನು ಹಿಂದಿನ ಚಿತ್ರಗಳಲ್ಲಿ ತೋರಿಸುತ್ತಿದ್ದ ರೀತಿಗೂ ಈಚಿನ ದಿನಗಳಲ್ಲಿ ಅದನ್ನು ವಿಜೃಭಿಸುತ್ತಿರುವ ರೀತಿಗೂ ಇರುವ ವ್ಯತ್ಯಾಸ ನೆನಪಿಗೆ ಬಂತು. ಮುಂದಿನ ದಿನಗಳಲ್ಲಿ ಶ್ರೀಧರ ಮೂರ್ತಿ ಈ ವಿದ್ಯಮಾನವನ್ನು ಕುರಿತು ಕೂಡ ವಿಶ್ಲೇಷಿಸ ಬಹುದು. ಖಳನಟರಾಗಿ ಪ್ರಸಿದ್ಧರಾಗಿ ಅನಿವಾರ್ಯತೆಯಿಂದ ಮಾನಭಂಗದ ದೃಶ್ಯಗಳಲ್ಲಿ ಅಭಿನಯಿಸಿದ್ದ ವಜ್ರಮುನಿಯವರ ಮನಸ್ಸಿನ ತಳಮಳವನ್ನು ವಿಷಾದದಿಂದ ಗುರುತಿಸುವ ಶ್ರೀಧರ ಮೂರ್ತಿ ದೃಶ್ಯ ಮಾಧ್ಯಮದಲ್ಲಿ ಹಿಂಸೆಯ ಮಂಡನೆಯ ಸ್ವರೂಪ ಬದಲಾಯಿಸಿರುವುದನ್ನು ಕುರಿತು ಮುಂದೆ ಬರೆಯುವ ಸೂಚನೆ ನೀಡಿದ್ದಾರೆ) ಇಂತಹ ಪರಿಕಲ್ಪನೆಗಳ ಸುತ್ತಲೇ ಇರುವ ಇನ್ನೊಂದು ಬರಹವಾದ ‘ತನುವು ಮನವು ಇಂದು ನಿಂದಾಗಿದೆ’ ಯಲ್ಲಿ ಬರುವ ಈ ಸಾಲುಗಳನ್ನು ಕೂಡ ಗಮನಿಸ ಬೇಕು. ‘ಇದುವರೆಗೆ ನಡೆದ ರಿಯಾಲಿಟಿ ಶೋಗಳಲ್ಲಿ ಕಪ್ಪು ಬಣ್ಣದ, ಉಬ್ಬು ಹಲ್ಲಿನ, ಗೂನು ಬೆನ್ನಿನ ಒಬ್ಬಳೇ ಒಬ್ಬ ಗಾಯಕಿ ಗೆದ್ದಿಲ್ಲದಿರುವುದು ಕೇವಲ ಆಕಸ್ಮಿಕವಲ್ಲ’

ಒಳ್ಳೆಯ ಬರವಣಿಗೆ ಯಾವ ಪ್ರಕಾರದಲ್ಲೇ ಇರಲಿ, ಬದಲಾಗುತ್ತಿರುವ, ಕಳೆದು ಹೋಗುತ್ತಿರುವ ಒಂದು ಜೀವನ ಶೈಲಿಯನ್ನು, ಬದುಕುವ ವಿಧಾನವನ್ನು ತಟ್ಟನೆ ಗುರುತಿಸಿ ಬಿಡುತ್ತದೆ. ಚಿತ್ರರಂಗದ ಬದುಕಿನ ಕುರಿತು ಬರೆಯುತ್ತಿದ್ದರೂ ಆ ಮೂಲಕ ನಮ್ಮ ಕೌಟಂಬಿಕ, ಸಾಮಾಜಿಕ ಜೀವನದಲ್ಲಾಗಿರುವ ಬದಲಾವಣೆಗಳನ್ನು ಕಳೆದು ಹೋಗುತ್ತಿರುವ ಸೌಂಧರ್ಯ ಮತ್ತು ಮೌಲ್ಯಗಳನ್ನು ಕುರಿತೇ ಬರೆಯುತ್ತಿದ್ದಾರೆ ಎಂಬುದನ್ನು ಗಮನಿಸ ಬೇಕು. ಇಂತಹ ಬರಹಗಳಲ್ಲಿ ನಾಸ್ಟೇಲ್ಜಿಯಾ ಇಲ್ಲ. ಹಿಂದಿನದೆಲ್ಲಾ ಮತ್ತೆ ಮರುಕಳಿಸ ಬೇಕೆಂಬ ಹಂಬಲವೂ ಇಲ್ಲ. ಇತಿಹಾಸವನ್ನು ವಸ್ತುನಿಷ್ಟವಾಗಿ ಗಮನಿಸುವ ಸಂಸ್ಕೃತಿ ವಿದ್ಯಾರ್ಥಿಯೊಬ್ಬನ ವಿಷಾದ ಮತ್ತು ಅಸಹಾಯಕತೆ ಇದೆ.

ಚಿತ್ರರಂಗದ ಕುರಿತು ಯೋಚಿಸುವಾಗ ನಾವೆಲ್ಲಾ ಈ ಮಾಧ್ಯಮ ಬೀರುವ ಸಾಮಾಜಿಕ ಪರಿಣಾಮದ ಬಗ್ಗೆಯೇ ಯೋಚಿಸುತ್ತೇವೆ. ಆದರೆ ಈ ಪ್ರಕಾರದಲ್ಲಿ ದಿನ ನಿತ್ಯ ದುಡಿಯುವವರ ಜೀವನ ಲಯ ಹೇಗಿರುತ್ತದೆ ಎಂಬುದನ್ನು ನಾವು ಗಮನಿಸುವುದಿಲ್ಲ. ಆ ಲೋಕದಲ್ಲೂ ಒಂದು ಸಾಧಾರಣತೆಯ, ಮಾನವೀಯತೆಯ ನಡೆ, ಏಳು ಬೀಳುಗಳು ಇದ್ದೇ ಇರುತ್ತವೆ. ಹಾಗಲ್ಲದಿದ್ದರೆ ಅದು ಕಲೆಯಾಗುವುದೇ ಇಲ್ಲ. ಈ ಸಂಕಲನದ ಬಹುಪಾಲು ಬರಹಗಳು ಇಂತಹ ಲಯವನ್ನು ಗುರುತಿಸುತ್ತವೆ. ‘ಆಡಿಸುವಾತನ ಕೈ ಚಳಕದಲಿ’ ಪ್ರಬಂಧ ಚಿತ್ರ ನಿರ್ಮಾಣದ ಪ್ರತಿ ಹಂತದಲ್ಲಿಯೂ ಇರುವ ಅನಿಶ್ಚಿತತೆಯ ಕಡೆ ನಮ್ಮ ಗಮನ ಸೆಳೆಯುತ್ತಾರೆ. ಈ ಅನಿಶ್ಚಿತತೆಯನ್ನು ಕೆಲವರು ವೃತ್ತಿಪರವಾಗಿ ಎದುರಿಸುತ್ತಾರೆ, ಇನ್ನು ಕೆಲವರು ತತ್ತರಿಸಿ ಹೋಗುತ್ತಾರೆ, ಇನ್ನು ಕೆಲವರು ಸುಮ್ಮನೆ ತಹ ತಹ ಪಡುತ್ತಾರೆ. ಸಿಪಾಯಿರಾಮು ಚಿತ್ರತಂಡ, ಎಂ.ಪಿ.ಶ೦ಕರ್, ದ್ವಾರಕೀಶ್ ಇವರೆಲ್ಲರ ಪಡಿಪಾಟಲು ನಾವು ನಮ್ಮ ನಿತ್ಯ ಜೀವನದಲ್ಲಿ ಎದುರಿಸುವಂತೆಯೇ ಇದೆ. ಈ ವೃತ್ತಿ ಜೀವನದ ಅನಿಶ್ಚತತೆಯ ಸ್ವರೂಪ ‘ಸಾವು ತನ್ನ ತಣ್ಣನೆಯ ಕೈ ಸವರಿದಾಗ’ ‘ಹೇಳಿ ಹೋಗಬಹುದಿತ್ತೇ ಕಾರಣ’ ಈ ಬರಹಗಳನ್ನು ‘ಆಡಿಸುವಾತನ’ ಪ್ರಬಂಧದ ಜೊತೆ ಓದಿದಾಗ ಚಿತ್ರಲೋಕದ ವ್ಯಾಪಾರಗಳನ್ನು ಮನುಷ್ಯ ಲೋಕದ ವ್ಯಾಪಾರಗಳು-ನಡಾವಳಿಗಳ ಜೊತೆ ಸಾಮಾನ್ಯೀಕರಿಸುವ, ಸಾಧಾರಣೀಕರಿಸುವ ಪ್ರಯತ್ನವಿದೆ. ವೃತ್ತಿಯಲ್ಲಿ ತೊಡಗಿರುವವರು ಇದನ್ನೆಲ್ಲಾ ಹೇಗೆ ನೋಡುತ್ತಾರೋ ಗೊತ್ತಿಲ್ಲ ಸಂವೇದನಾಶೀಲ ಲೇಖಕನೊಬ್ಬನ ಮನಸ್ಸು ಮತ್ತು ಕಣ್ಣು ಮಾತ್ರ ಈ ರೀತಿ ಕಾಣುತ್ತದೆ ಮತ್ತು ಕಾಣಿಸುತ್ತದೆ.

ಶ್ರೀಧರ ಮೂರ್ತಿ ತಮ್ಮ ಬರಹದಲ್ಲಿ ನೇರವಾಗಿ ಪ್ರಸ್ತಾಪಿಸಿದೆ ಆದರೆ ಮತ್ತೆ ಮತ್ತೆ ನಮ್ಮ ಗಮನಕ್ಕೆ ತರುವ ಇನ್ನೊಂದು ಮುಖ್ಯವಾದ ಅಂಶದ ಕಡೆ ನಮ್ಮ ಗಮನ ಸೆಳೆಯುತ್ತಾರೆ. ಚಿತ್ರರಂಗ ಒಂದು ಉದ್ಯಮ ಮತ್ತು ವ್ಯಾಪಾರವಾಗುವ ಮೊದಲು ಒಂದೇ ಕುಟುಂಬದವರ೦ತೆ ಸಮುದಾಯದ ರೀತಿಯಲ್ಲಿ ಕೆಲಸ ಮಾಡುತ್ತಿತ್ತು. ಚಿತ್ರೀಕರಣ ಮಾತ್ರವಲ್ಲ ಊಟ, ವಸತಿ, ಚಿತ್ರದ ಬೆಳವಣಿಗೆ ಎಲ್ಲಾ ಹಂತದಲ್ಲಿಯೂ ಹೊಂದಾಣಿಕೆ ಎನ್ನುವುದು ಇತ್ತು. ಹೀಗಾಗಿ ಕಲಾವಿದರು ಸಮಾಜದ ಒಂದು ಭಾಗವಾಗುವುದು ಸುಲಭವಾಗಿ ಸಾಧ್ಯವಿತ್ತು. ಕಲಾವಿದರು ಎಷ್ಟೇ ಪ್ರತಿಭಾಶಾಲಿಗಳಾಗಿದ್ದರೂ ಜನಪ್ರಿಯರಾಗಿದ್ದರೂ ಹೀಗೆ ಕುಟುಂಬದ ಕಲ್ಪನೆಗೆ ಹತ್ತಿರವಾಗಿದ್ದರಿಂದಲೇ ‘ವಹಿಸಿದ ಪಾತ್ರ ತೀರಿದ ಬಳಿಕ’ವೂ ಇನ್ನೂ ಪಾತ್ರದೊಡನೆ ತನ್ಮಯರಾಗಿ ಬಿಡುತ್ತಿದ್ದರು. ಈ ಸ್ತರದ ತನ್ಮಯತೆಯಿಂದಾಗಿ ಕಲಾವಿದ ಹೊರ ಬರದಾದ ಎನ್ನುವುದು ಆತನ ತಾದಾತ್ಮ್ಯ ವನ್ನು ಸೂಚಿಸುತ್ತದೆ. ಶ್ರೀಧರ ಮೂರ್ತಿ ಈ ತಾದಾತ್ಮ್ಯವನ್ನು ಗೌರವಿಸುತ್ತಾರೆ. ಆದರೆ ಇದರಿಂದ ಮೂಡುವ ದುರಂತವನ್ನೂ ಕೂಡ ಗಮನಿಸುತ್ತಾರೆ.

ಶಾಸ್ತ್ರೀಯ ಸಂಗೀತ, ಅಧ್ಯಾತ್ಮ, ಸಾಹಿತ್ಯಿಕ ಬರವಣಿಗೆಗೆ ಬಂದಾಗ ಶ್ರೀಧರ ಮೂರ್ತಿ ಕಲಾತ್ಮಕತೆ, ಪ್ರಯೋಗಶೀಲತೆ ಕಡೆಗೆ ಒಲಿದವರು. ಹೀಗಿದ್ದೂ ಜನಪ್ರಿಯ ಚಿತ್ರರಂಗದ ಸಾಧನೆ, ಪ್ರಸ್ತುತತೆ, ಅನನ್ಯತೆ ಬಗ್ಗೆ ಅವರಿಗೆ ಇರುವ ಗೌರವ ವಿಶೇಷವಾದದ್ದೇ. ಇದರಲ್ಲಿ ವಿರೋಧಾಭಾಸವೇನಿಲ್ಲ. ಮೇಲ್ನೋಟಕ್ಕೆ ವೈರುಧ್ಯ ಸಂಗತಿಗಳೆ೦ದು ಕಾಣುವ ಈ ಸ್ತರಗಳನ್ನು ಪರಸ್ಪರ ಗೌರವದಿಂದ ನೋಡುತ್ತಿರುವುದರಿಂದಲೇ ಲೇಖಕರಿಗೆ ಈ ರೀತಿಯ ಸಂಸ್ಕೃತಿ ಚಿಂತನೆ ಸಾಧ್ಯವಾಗಿದೆ. ಬರೆದು ಜೀವಿಸ ಬಹುದೆ, ಹಾಡು ಹುಟ್ಟಲೂ ಒಂದು ಸಮಯ ಬೇಕೆ, ಹಕ್ಕಿ ಹಾಡಿಗೆ ಹಾಕಿದ ರಾಗ ಯಾವುದು ಹೇಳು ಈ ರೀತಿಯ ಬರಹಗಳು ಜನಪ್ರಿಯವೆಂದು ನಾವು ಪರಿಗಣಿಸಿರುವ ಸ್ತರದಲ್ಲೇ ಇರುವ ಗಂಭೀರ ಹುಡುಕಾಟ, ಪ್ರಯೋಗಶೀಲತೆ, ಕಾಳಜಿಗಳನ್ನು ಓದುಗರಿಗೆ ಮನದಟ್ಟು ಮಾಡಿ ಕೊಡುತ್ತದೆ. ಈಚಿನ ಚಿಂತನೆಯ ಪ್ರಕಾರ ನಾವೆಲ್ಲರೂ ಒಂದು ಕಾಲಮಾನದ ಭಾವ ವಿನ್ಯಾಸ ಮತ್ತು ಅನುಭವ ವಿನ್ಯಾಸವನ್ನು ಅರ್ಥ ಮಾಡಿ ಕೊಳ್ಳ ಬೇಕಾದರೆ ಕಲಾತ್ಮಕ ಪ್ರಯೋಗಶೀಲ ಸಂಸ್ಕೃತಿಯ ಸ್ತರಗಳನ್ನು ಮಾತ್ರ ಗಮನಿಸಿದೆ ಜನಪ್ರಿಯ ಸಂಸ್ಕೃತಿ-ಅಭಿವ್ಯಕ್ತಿ ಸ್ತರಗಳನ್ನು ಕೂಡ ಗಂಭೀರವಾಗಿ ಅಕಾಡಮಿಕ್ ಆಗಿ ಗಮನಿಸ ಬೇಕಾಗುತ್ತದೆ. ಸೋಗಿನ ಬುದ್ದಿಜೀವಿಗಳು ಸುಳ್ಳು ಸುಳ್ಳೇ ಹಬ್ಬಿಸಿರುವ ಈ ಕೃತಕ ವಿಭಜನೆಯನ್ನು ಶ್ರೀಧರ ಮೂರ್ತಿ ಮಾನ್ಯ ಮಾಡಿದಿರುವುದು ನನಗೆ ತುಂಬಾ ಸಂತೋಷ ನೀಡಿತು. ನನ್ನ ಬರವಣಿಗೆಯಲ್ಲಿ ನಾನು ಹೀಗೆಲ್ಲಾ ಮಾಡುತ್ತಿದ್ದೇನೆ ಎಂದು ಎಲ್ಲೂ ಹೇಳಿ ಕೊಳ್ಳದ ಲೇಖಕರ ರೀತಿ ಕೂಡ ಗೌರವ ಮೂಡಿಸಿತು.

ವೃತ್ತಿಯ ಕಾರಣವಾಗಿ ಶ್ರೀಧರ ಮೂರ್ತಿ ಜನಪ್ರಿಯ ಚಲನಚಿತ್ರ ಜಗತ್ತಿನ ಒಳಗಿರುವವರು. ಹಾಗೆ ಒಳಗೆ ಇದ್ದೂ ಹೊರಗಿನವರಂತೆ ನೋಡ ಬಲ್ಲರು. ಇದರಿಂದ ಓದುಗರಾದ ನಮಗೆಲ್ಲಾ ಲಾಭವೇ ಸರಿ. ಆದರೆ ಚಿತ್ರರಂಗದ ಒಳಗೇ ಇರುವವರು ಈ ಬರವಣಿಗೆಗಳನ್ನು ಯಾವ ರೀತಿ ನೋಡ ಬಲ್ಲರು ಎಂಬುದು ಕುತೂಹಲಕರ. ನನಗೆ ಒಂದು ಆಸೆ ಇದೆ. ಶ್ರೀಧರ ಮೂರ್ತಿಯವರ ಬರವಣಿಗೆಯಿಂದ ಪ್ರೇರಣೆ ಪಡೆದು ಅವರಲ್ಲಿ ಕೆಲವರಾದರೂ ಇಂತಹ ಇನ್ನೂ ಕೆಲವು ಪುಸ್ತಕಗಳನ್ನು ರಚಿಸಬಹುದು. ಅದಕ್ಕಾಗಿ ನಾವೆಲ್ಲಾ ಕಾಯೋಣ.

ತಮ್ಮ ಆಸಕ್ತಿಯ ಎಲ್ಲಾ ವಲಯಗಳನ್ನು ಒಟ್ಟಿಗೆ ತೊಡಗಿಸಿ ಕೊಂಡು ಇಂತಹದೊ೦ದು ವಿಶಿಷ್ಟ ಕೃತಿ ರಚಿಸಿ ನಾವು ಇದುವರೆಗೂ ಪಡೆಯದೆ ಇರುವ ಚಿತ್ರರಂಗದ ಅನುಭವಗಳನ್ನು ಮತ್ತೊಮ್ಮೆ ಹೊಸ ಕಣ್ಣಿನಿಂದ ನೋಡಿ ಕೊಳ್ಳುವ ಒಂದು ಅವಕಾಶ ನೀಡಿದ ಗೆಳೆಯರಾದ ಶ್ರೀಧರ ಮೂರ್ತಿಯವರಿಗೆ ಅಭಿನಂದನೆಗಳು.

‍ಲೇಖಕರು Admin

August 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: