ನರೇಂದ್ರ ರೈ ದೇರ್ಲರ ಹೊಸ ಕನಸಿನ ಪಯಣ ಆರಂಭ

ಖ್ಯಾತ ಕೃಷಿ ಬರಹಗಾರ ನರೇಂದ್ರ ರೈ ದೇರ್ಲ ಅವರು ತಮ್ಮ ಕನಸು ಪ್ರಕಾಶನದ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ರಾಜ್ಯದ ಒಂದಷ್ಟು ಪ್ರಯೋಗಶೀಲ, ನೆಲಪರ, ಸುಸ್ಥಿರ ರೈತರ ಬಗ್ಗೆ ಪುಸ್ತಕ ಬರೆದು ಪ್ರಕಟಿಸಲು ಮುಂದಾಗಿದ್ದಾರೆ. ಈ ಸರಣಿಯ ಮೊದಲ ಕೃತಿಯೇ ‘ನಂದನವನ-ಒಂದು ತೋಟದ ಕಥೆʼ.

ಈ ಕೃತಿಗೆ ಮತ್ತೊಬ್ಬ ಕೃಷಿ ಬರಹಗಾರ ಶಿವರಾಂ ಪೈಲೂರು ಬರೆದ ಮುನ್ನುಡಿ ಇಲ್ಲಿದೆ.

ಸೃಜನಶೀಲ ಮನಸ್ಸಿನ ಸಾತ್ವಿಕ ಛಲ

ಶಿವರಾಂ ಪೈಲೂರು

‘ಹಣ್ಣಿನ ಗಿಡಗಳ ವೈವಿಧ್ಯವಾಗಲೀ ಉದ್ಯಾನ ವಿನ್ಯಾಸವಾಗಲೀ, ಇತರೆಡೆ ಇರುವ ಹಾಗೆ ನನ್ನಲ್ಲಿರಬಾರದು; ಇಲ್ಲಿರುವುದು ಕೂಡ ಇಂದು ಇದ್ದ ಹಾಗೆಯೇ ನಾಳೆಯೂ ಇರಬಾರದು.’ ಇದು ಕುರಿಯಾಜೆ ಅವರ ಸಾತ್ವಿಕ ಛಲ. ಅವರಿಗೆ ಅವರೇ ಹಾಕಿಕೊಂಡ ಸವಾಲು.

ಇಷ್ಟು ಆಯಿತಲ್ಲ; ಇನ್ನು ಸಾಕು ಎಂಬ ಸಮಾಧಾನವಿಲ್ಲ. ಅತ್ಯುತ್ತಮವಾದುದು ಇನ್ನಷ್ಟೆ ಆಗಬೇಕಿದೆ ಎಂಬ ಹಪಹಪಿಕೆ. ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಅವರದು ಭಿನ್ನ ದಾರಿಯ ಪಯಣ. ಹಣ್ಣಿನ ಗಿಡಗಳ ಉತ್ಕಟ ಪ್ರೇಮಿ. ಹೂದೋಟ ವಿನ್ಯಾಸ ಜೀವದುಸಿರು. ಪರಿಶ್ರಮದ ದುಡಿಮೆ. ಸದಾ ಹೊಸತಿನತ್ತ ನೋಟ; ಕೃಷಿ ಬದುಕಿನಲ್ಲಿ ನವನವೀನ ಪ್ರಯೋಗ.

ಅವರು ನರ್ಸರಿಗಳ ವಿಶ್ವಕೋಶ. ಕೇರಳದ ಮೂಲೆಮೂಲೆಯಿಂದ ಹಿಡಿದು ಕರ್ನಾಟಕದ ಉದ್ದಗಲ ಓಡಾಡಿ ಪುಣೆಯಾಚೆಗಿನವರೆಗೂ ವ್ಯಾಪಿಸಿರುವ ಸಸ್ಯಶೋಧ. ಕುತೂಹಲದ ಕಂಗಳಿಂದ ದೇಶದಾಚೆಗೂ ಪ್ರಯಾಣ.

ಸಾವಿರಾರು ರೂಪಾಯಿ ತೆತ್ತು ಗಿಡ ತಂದರೂ ಅದನ್ನು ಒಂದಷ್ಟು ಸಮಯ ಹಾಗೆಯೇ ಪೋಷಿಸಿ ಅದು ಆ ಪರಿಸರಕ್ಕೆ ಒಗ್ಗುತ್ತದೆ ಎಂಬುದು ಖಾತ್ರಿಯಾದ ಬಳಿಕವಷ್ಟೆ ಹೊಂಡದಲ್ಲಿ ನೆಡುವುದು ಅವರ ವಿಶಿಷ್ಟ ಕ್ರಮ. ಕೊಟ್ಟಿಗೆಯ ಗೋಡೆ ತುಂಬ ತಾವು ನೆಟ್ಟಿರುವ ಹಣ್ಣಿನ ಗಿಡಗಳ ಹೆಸರುಗಳು. ಪ್ರತಿಯೊಂದು ಗಿಡದ ಬಗ್ಗೆಯೂ ತುಟಿಯಂಚಿನಲ್ಲೆ ಸವಿವರ ಮಾಹಿತಿ.

ತಿರುಮಲೇಶ್ವರ ಭಟ್-ಪಾವನ ದಂಪತಿಯ ಆದರದ ಆತಿಥ್ಯ ಹಲವು ಬಾರಿ ಪಡೆದಿದ್ದೇನೆ. ಮನೆಯಂಗಳದಷ್ಟೇ ಶುಭ್ರ-ಸುಂದರ ಮನದಂಗಳ ಕೂಡ. ಮೌನದ ಮಾಧುರ್ಯ ಅನುಭವಿಸಲು ಕುರಿಯಾಜೆಗೇ ಹೋಗಬೇಕು. ಅವರು ಕಟ್ಟಿಕೊಂಡ ಸ್ನೇಹವಲಯ ಬಹುದೊಡ್ಡದು.

ಕೃಷಿಕ-ಪತ್ರಕರ್ತ-ಸಾಹಿತಿ, ಆತ್ಮೀಯ ಡಾ. ನರೇಂದ್ರ ರೈ ದೇರ್ಲ ಅವರ ಬರವಣಿಗೆಯಲ್ಲಿ ಯಾವತ್ತೂ ಜೀವ-ಭಾವದ ಹದ ಪಾಕವಿರುತ್ತದೆ. ಸೂಕ್ಷ್ಮನೋಟದ ಅವರ ಲೇಖನಗಳನ್ನು ಓದುವುದೇ ಒಂದು ಹಿತಾನುಭವ. ಈ ಹೊತ್ತಗೆಯಲ್ಲಿ ಅವರು ‘ನಂದನವನ’ವನ್ನು ಬಹಳ ಚೆಂದಕೆ ಸಾಕ್ಷಾತ್ಕರಿಸಿದ್ದಾರೆ.

ಪ್ರಕಾಶಕರ ಮಾತು

ಈ ದೇಶದ ಎಲ್ಲೆಡೆ ರಾಜಕಾರಣಿಗಳ, ಸ್ವಾತಂತ್ರ್ಯ ಹೋರಾಟಗಾರರ, ಸಮಾಜ ಸುಧಾರಕರ, ಕವಿ-ಕಲಾವಿದರ, ಸಮಾಜವಿಜ್ಞಾನಿಗಳ, ಶಿಕ್ಷಕ ಸಾಧಕರ ಸಾವಿರಾರು ಪ್ರತಿಮೆಗಳನ್ನು ಅಲ್ಲಲ್ಲಿ ನಿಲ್ಲಿಸಿ ಗೌರವಿಸಲಾಗುತ್ತದೆ. ಈ ಮೇಲಿನವರೆಲ್ಲ ಸೇರಿ ಈ ದೇಶದ ಪ್ರತಿಯೊಬ್ಬರ ಹೊಟ್ಟೆ ತುಂಬುವ ರೈತರ ಒಂದೇ ಒಂದು ಪ್ರತಿಮೆಯನ್ನು ನೀವು ಎಲ್ಲಾದರೂ ನೋಡಿದ್ದೀರಾ? ಎಷ್ಟು ಜನ ರೈತರ ಯಶೋಗಾಥೆ ಭಾರತದ ಚರಿತ್ರೆಯ ಪುಟ ಸೇರಿದೆ? ತಿನ್ನುವ ಅನ್ನ ಹೇಗೆ ಎಲ್ಲಿಂದ ಯಾರಿಂದ ಹುಟ್ಟುತ್ತದೆ? ಅದಕ್ಕೆ ಅಂಟಿಕೊಂಡ ಶ್ರಮ, ಬೆವರಿನ ಕತೆ ಎಷ್ಟು ಮಂದಿಗೆ ಗೊತ್ತಿದೆ? ರೈತರ ಕಥಾನಕ ಮಕ್ಕಳ ಶಾಲಾಪಠ್ಯಕ್ಕೆ ಯಾಕೆ ಇನ್ನೂ ಸೇರಿಲ್ಲ? ಇಂಥ ಪ್ರಶ್ನೆ, ಹಿನ್ನೆಲೆಗಳನ್ನಿಟ್ಟುಕೊಂಡು ಕನಸು ಪ್ರಕಾಶನ ಈ ರಾಜ್ಯದ ಒಂದಷ್ಟು ಪ್ರಯೋಗಶೀಲ, ನೆಲಪರ, ಸುಸ್ಥಿರ ರೈತರ ಬಗ್ಗೆ ಪುಸ್ತಕ ಬರೆದು ಪ್ರಕಟಿಸಲು ಮುಂದಾಗಿದೆ.

ಈ ಸರಣಿಯ ಕನಸು ಪ್ರಕಾಶನದ ಮೊದಲ ಕೃತಿಯೇ ‘ನಂದನವನ-ಒಂದು ತೋಟದ ಕಥೆʼ. ಮುಂದಿನ ದಿನಗಳಲ್ಲಿ ಮತ್ತಷ್ಟು ರೈತರನ್ನು ಅಗೆದು ಬಗೆದು ಬರೆದು ನಿಮ್ಮ ಮುಂದಿಡಲು ನಾವು ಸಿದ್ಧರಾಗಿದ್ದೇವೆ. ನಾವು ತಿನ್ನುವ ಅನ್ನದ ಬೇರು ಮುಟ್ಟುವ ನಮ್ಮ ರೈತಪರ, ಜೀವಪರ ಯೋಜನೆಯನ್ನು ನೀವು ಬೆಂಬಲಿಸುವಿರಿ ಎಂಬ ನಂಬಿಕೆ ನಮ್ಮದು.

‍ಲೇಖಕರು Admin

October 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: