ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ಕಮಲಾಕರ ಕಡವೆ

ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ, ಬೇರಿನ್ನೆಲ್ಲಿಯದೋ, ಇನ್ನೂ ಇಲ್ಲದೇ ಇರುವುದೋ, ಯಾವುದೇ ಆದರೂ, ಆ ಜಗತ್ತಿನಲ್ಲಿ ಕತೆಗೆ ಯೋಗ್ಯ ಚಿತ್ರ, ಪಾತ್ರ, ಘಟನೆಗಳನ್ನು ಎತ್ತಿಕೊಂಡು, ಕೌತುಕ, ಕುತೂಹಲ, ಕಾಣ್ಕೆಗಳ ಚೌಕಟ್ಟಿನಲ್ಲಿ ಇಟ್ಟುಕೊಡುವುದು ಕತೆಗಾರರ ಕೌಶಲ್ಯ.

ಆ ಜಗತ್ತು ಎಷ್ಟೇ ಚಿರಪರಿಚಿತವಿರಲಿ, ಎಷ್ಟೇ ಅಪರಿಚಿತವಿರಲಿ, ವಿಚಿತ್ರವಿರಲಿ, ಗೊತ್ತಿರಲಿ, ಇಲ್ಲದಿರಲಿ, ಅದೊಂದು ನಿಗೂಢ.

ಕತೆಯ ಜಗತ್ತೂ ಓದುಗರ ಜಗತ್ತೇ, ಅದರಲ್ಲಿಯೂ ಅವರ ಓಣಿಯ, ಕಾಲನಿಯ, ಊರಿನ, ಶಹರದ, ನಾಡಿನ, ದೇಶದ ಗುರುತುಗಳೇ ಇದ್ದರೂ, ಕತೆಯನ್ನು ಓದಿದಾಗ ಅವರು ಹೊಕ್ಕುವುದು, ಅಪೇಕ್ಷಿತವಾಗಿದ್ದರೂ/ಇರದಿದ್ದರೂ, ಆವಾಕ್ಕಾಗುವಷ್ಟು ಅನಿರೀಕ್ಷಿತ ತಾಣವನ್ನು. ಅನಿರೀಕ್ಷಿತತೆಯ ಸೃಷ್ಟಿಯೇ ಕತೆಗಾರಿಕೆ.

ಈ ಎಲ್ಲ ವರ್ಣನೆಗಳು ನನ್ನ ವಿಚಾರಗಳೇನಲ್ಲ, ಅವು ನನಗೆ ಹೊಳೆದದ್ದು, ಅವುಗಳನ್ನು ನನಗೆ ಹೊಳೆಯುವಂತೆ ಮಾಡಿದ್ದು, ನರೇಂದ್ರ ಪೈ ಅವರ ಮೂರನೆಯ ಕತಾ ಸಂಕಲನ “ಕನಸುಗಳು ಖಾಸಗಿ”.

ಕನ್ನಡ ಪುಸ್ತಕ ಪ್ರಿಯರಿಗೆ ತುಂಬ ಪ್ರಿಯರಾದ ನರೇಂದ್ರ ಪೈ ತಮ್ಮ ವಿಶಾಲ ಓದು, ವಿಶೇಷ ಒಳನೋಟಗಳು, ಮತ್ತು ಅವುಗಳ ಕ್ರಮಬದ್ಧ ಪ್ರಸ್ತುತಿಗಳಿಂದಾಗಿ ಕನ್ನಡ ವಿಮರ್ಶಾ ಲೋಕದಲ್ಲಿ ವಿಶಿಷ್ಟವಾದ ಧ್ವನಿಯಾಗಿದ್ದಾರೆ. ಅವರು ವಿಮರ್ಶಾ ಬರಹಗಳಲ್ಲಿ ತಮ್ಮ ವಿಶ್ವಾತ್ಮಕ ಓದಿನ ಬಲದಿಂದ ಒಂದು ಬಗೆಯ ತೀವ್ರ‍ ಗ್ರಹಿಕೆಯ, ತುಲನಾತ್ಮಕ ನೋಟ ಒದಗಿಸುವ ಶ್ರೀಮಂತಿಕೆಯ ಮತ್ತು ದೀರ್ಘಕಾಲೀನ ಹಠ ಕಲಿಸಿದ ಖಚಿತ ಅಭಿವ್ಯಕ್ತಿಯ ವಿಶ್ಲೇಷಣಾ ಶೈಲಿಯನ್ನು ರೂಢಿಸಿಕೊಂಡಿದ್ದಾರೆ.

ಕೆಲವರಿಗೆ ತಮ್ಮ ವಿಮರ್ಶಾ ಬರಹಗಳಿಂದ, ಕೆಲವರಿಗೆ ತಮ್ಮ ಕತೆಗಳಿಂದ ಪರಿಚಿತರಾಗಿರುವ ನರೇಂದ್ರ ಪೈ ಸಮಕಾಲೀನ ಕನ್ನಡದ ಗಮನಾರ್ಹ ಲೇಖಕರಲ್ಲಿ ಒಬ್ಬರಾಗಿದ್ದಾರೆ.

ಕತೆಗಾರಿಕೆಯನ್ನು ಒಂದು ಸುಪ್ತ ಪ್ರಕ್ರಿಯೆ ಎನ್ನುವ ನರೇಂದ್ರ ಪೈ ಅವರ “ಕನಸುಗಳು ಖಾಸಗಿ” ಕತಾ ಸಂಕಲನದಲ್ಲಿ ಒಂಬತ್ತು ಕತೆಗಳಿವೆ. ಒಂಬತ್ತು ಪುಟಗಳ “ಕಥೆ ಹುಟ್ಟುವ ಪರಿ” ಎಂಬ ಶೀರ್ಷಿಕೆಯ ಮುನ್ನುಡಿಯಲ್ಲಿ ಅವರು ತಮ್ಮ ಕತೆಗಳು ಬೆಳೆಯಲು ದೊರೆತ ಸಲಹೆಗಳು, ಎದುರಿಸಿದ ನಿರುತ್ಸಾಹಗಳನ್ನು ವಿವರಿಸುತ್ತಾರೆ.

ಹಾಗೆಯೇ, ಅವರ ಕತೆಗಳು ಹೇಗೆ ಆಗುತ್ತವೆ ಎನ್ನುವುದನ್ನು ಉದಾಹರಣೆಯ ಜೊತೆಗೆ ವಿವರಿಸಿ, ತಮ್ಮ ಕತೆಗಳ ಒಳನಡೆಯನ್ನು ವಿವರಿಸಿದ್ದಾರೆ. ಈ ಮುನ್ನುಡಿ ಈ ಸಂಕಲನದಲ್ಲಿರುವ ಅವರ ಕತೆಗಳನ್ನು ಅರ್ಥಮಾಡಿಕೊಳ್ಳಲು ಅವಶ್ಯ ಎಂದೇನೂ ಅವರು ಹೇಳುತ್ತಿಲ್ಲ ಅಥವಾ ಸೂಚಿಸುತ್ತಿಲ್ಲ.

ಆದರೆ, ಒಬ್ಬ ಕತೆಗಾರ ತಾನು ಬರೆದ ಕತೆ ರೂಪುಗೊಂಡಿರುವ ಬಗೆಯನ್ನು ವಿವರಿಸಿದಾಗ ಓದುಗರಿಗೆ ಅದೇ ಒಂದು ಆಕರ್ಷಕ ಕತೆಯಾಗಿ ಬಿಡುತ್ತದೆ. ಸಾಹಿತ್ಯದ ವಿಧ್ಯಾರ್ಥಿಗಳಿಗೆ ಹೊಳಹುಗಳನ್ನು ಕೊಡುತ್ತದೆ.

ಸಂಕಲನದ ಮೊದಲ ಕತೆ “ಕನಸುಗಳು ಖಾಸಗಿ” ಸುದೀರ್ಘ ಕಾಲದ ನಂತರ ಭೇಟಿಯಾಗುವ ಕಾಲೇಜು ಗೆಳೆಯರಿಬ್ಬರ ಕತೆಯಂತೆ ಶುರುವಾಗಿ, ಪಡ್ಡೆ ದಿನಗಳನ್ನು ಮೆಲುಕುವ ಮಧ್ಯವಯಸ್ಕರ ಮರುಹಂಬಲದಂತೆನಿಸುತ್ತ ಸಾಗಿ, ಏಕಾಏಕಿ ನಾಟಕೀಯ ತಿರುವು ಪಡೆದು ಗಂಭೀರವಾಗುತ್ತದೆ.

ಕತೆಗಾರಿಕೆ ಬಗ್ಗೆ ಸ್ಪಷ್ಟತೆ ಉಳ್ಳವರು ಮಾತ್ರ ಮಾಡಬಹುದಾದ ಪ್ರಯೋಗ ನಮಗೆ ಈ ಕತೆಯಲ್ಲಿ ಕಾಣುತ್ತದೆ.

ಈ ಕತೆಯಲ್ಲಿ ಒಟ್ಟೂ ಮೂರು ನಿರೂಪಕರು ಇದ್ದಾರೆ. ಮುಂದೆ ಬರುವ “ಕಥನ ಕುತೂಹಲ ಎಂಬ ಕತೆಯಲ್ಲಿ ಸಹ ವಿವಿಧ ನಿರೂಪಕರಿದ್ದಾರೆ.” ಈ ಮೂರು ನಿರೂಪಕರು ನಿವೇದಿಸುವ ಘಟನಾವಳಿಗಳು ಮತ್ತು ಅವುಗಳ ಹಿಂದಿನ ಭಾವತೀವ್ರತೆಗಳು ಪರಿಚಿತ ಟ್ರ್ಯಾಕನಲ್ಲಿಯೇ ಸಾಗುತ್ತ, ಅಂತ್ಯದಲ್ಲಿ ಮಾತ್ರ ನಾಟಕೀಯ ತಿರುವು ಪಡೆಯುತ್ತದೆ.

ಓದಿದವರು ಒಮ್ಮೆ ನಿಲ್ಲಿಸಿ “ಆಂ” ಅನ್ನುವ ಹಾಗೆ ಮಾಡುವ ಈ ಅನಿರೀಕ್ಷಿತ ತಿರುವು ನಮ್ಮನ್ನು ಕತೆಯೊಳಗಿರುವ ಇತರ ತಿರುವುಗಳನ್ನು ಮನಸ್ಸಿನಲ್ಲಿಯೇ ತಿರುವಿಹಾಕಲು ಪ್ರಚೋದಿಸುತ್ತದೆ.

ಎರಡನೆಯ ಕತೆ “ಕೆಂಪು ಹಾಲು” ಕೂಡ ನಾಟಕೀಯ ತಿರುವಿನ ಕತೆಯೇ. ಆದರೆ, ಈ ಕತೆಯ ಉದ್ದಕ್ಕೂ ಒಂದು ಬಗೆಯ ನಿಗೂಢತೆ ಇದೆ. ಈ ಕತೆ ಮತ್ತೂ “ಕಥನ ಕುತೂಹಲ” ಕತೆಗಳು ನಮಗೆ ತೋರಿಸುವ ಹಾಗೆ, ಕತೆಯ ಕೊನೆ ಎನ್ನುವುದು ಆ ಘಟನೆಗಳನ್ನು ಅರ್ಥೈಸಿಕೊಂಡ ಅರಿವಿನ ಆಯಾಸದಲ್ಲಿ ಬರುವ ಒಂದು ಹಂತವೇ ಹೊರತು ನಿರ್ಣಾಯಕ ಅಂತ್ಯವಲ್ಲ.

ಹಾಗಾಗಿಯೇ ಕತೆಗಾರರು ಸೂಚ್ಯವಾದ ಉಪಸಂಹಾರ ಆಯ್ದುಕೊಂಡಿದ್ದಾರೆ. ಹೆಚ್ಚಿನ ಕತೆಗಳಲ್ಲಿ ಅಂತ್ಯ ಮಾತ್ರವಲ್ಲ ಕತೆಯನ್ನು ಪ್ರತಿನಿಧಿಸುವ ಘಟನೆಗಳನ್ನು ಸಹ ’ಇದು ಹೀಗೆಯೇ’ ಎನ್ನುವ ಬದಲು ಕತೆಗಾರರು ’ಇದು ಹೀಗಾಗಿದ್ದಿರಬಹುದು’ ಎನ್ನುವ ಹಾಗೆ ಸೂಚ್ಯ ವಿವರಗಳಲ್ಲಿ ಕಟ್ಟುತ್ತ ಹೋಗುತ್ತಾರೆ. ಖಚಿತ ಅಂತ್ಯಗಳಿರುವ ಕತೆಗಳಿಲ್ಲ ಎಂದಲ್ಲ.

ಉದಾಹರಣೆಗೆ “ರುಕ್ಕುಮಣಿ” ಕತೆ ನಿರ್ಣಯಾತ್ಮಕ ಅಂತ್ಯವುಳ್ಳದ್ದೇ. ಆದರೆ ಈ ಕತೆಯಲ್ಲಿಯೂ, ಕತೆ ಹೇಳಿದ್ದಕ್ಕಿಂತ ಹೆಚ್ಚಿನದನ್ನೇನೋ ಸೂಚಿಸುತ್ತ, ತೋರಿಸುವ ಕ್ರಿಯೆಯ ಮಿತಿಗಳನ್ನು ಪ್ರತಿಬಿಂಬಿಸುತ್ತದೆ.”ಹಿಂಸಾರೂಪೇಣ” ಕತೆಯ ನಾಯಕ ಶೇಷಗಿರಿಗೆ ಕಿವಿಯಲ್ಲಿ ಯಾರೋ ಪಿಸುಗುಡುವ ಅನುಭವ ಆಗುತ್ತಿರುತ್ತದೆ. ಏನು ಪಿಸುಗುಟ್ಟಿದ್ದಾರೆ ಗೊತ್ತಿಲ್ಲ. ಯಾಕೆ ಗೊತ್ತಿಲ್ಲ. ಈ ’ಗೊತ್ತಿಲ್ಲ’ಗಳ ವಿಶ್ವವೊಂದು ಇಲ್ಲಿನ ಕತೆಗಳಲ್ಲಿ ಮತ್ತೆ ಮತ್ತೆ ತೆರೆದುಕೊಳ್ಳುತ್ತದೆ.

ಅಂದರೆ ಘಟನೆಗಳ ವಿವರ ದಕ್ಕಿದರೂ ಅವುಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಅರಿವಿಗೆ ಬರುವುದಕ್ಕಿಂತ, ಅರಿವಿಗೆ ಹೊರತಾಗಿ ಉಳಿದಿರುವುದೇ ಹೆಚ್ಚು ಹೆಚ್ಚು ವೇದ್ಯವಾಗುತ್ತದೆ. “ಕಥನ ಕುತೂಹಲ” ಕತೆಯಲ್ಲಿ ಘಟನೆಯಲ್ಲಿ ಭಾಗಿಯಾದವರಿಗೂ ಏನಾಯಿತು, ಹೇಗಾಯಿತು ಎನ್ನುವುದು ಸ್ಪಷ್ಟವಾಗಿ ಗೊತ್ತಿಲ್ಲ.

“ಸಾಕ್ಷಿ”ಯ ಮನು, “ರಿಕವರಿಯ” ದುಗ್ಗಪ್ಪ ತಮ್ಮ ಸುತ್ತ ಆಗುತ್ತಿರುವ ಘಟನೆಗಳಲ್ಲಿ ಪಾತ್ರವಹಿಸುತ್ತಿದ್ದರೂ, ಆ ಘಟನೆಗಳ ಆರುಪಾರು ಅವರಿಗಿರುವುದಿಲ್ಲ. ಇಡೀ ಕತೆಯಲ್ಲಿ ಅವರ ಈ ಗೊಂದಲ, ಅವರ ಅಸ್ಪಷ್ಟತೆ, ಸ್ಪಷ್ಟವಾಗಿ ಚಿತ್ರಿತವಾಗುತ್ತದೆ. ಓದುಗರೂ ಸಹ ಸ್ವಲ್ಪ ಅಧೀರರಾಗಿಯೇ ಉಳಿಯುತ್ತಾರೆ.

ಕತೆಯ ಪಾತ್ರ, ವಾತಾವರಣ, ಘಟನೆಗಳನ್ನೆಲ್ಲ ಕತೆಗಾರರು ಬಹಳ ಸ್ಪಷ್ತವಾಗಿ, ಖಚಿತ ಚಿತ್ರಣಗಳಲ್ಲಿ ವರ್ಣಿಸುತ್ತಾರೆ. ಹಾಗಾಗಿಯೇ, ಕತೆಗಾರರು ಯಾವ ಕಡೆ ಬೆರಳು ತೋರುತ್ತಿರುವುದೆಂದು ಓದುಗರಿಗೆ ಸ್ಪಷ್ಟವಾಗಿ ಅರಿವಿಗೆ ಬರುತ್ತದೆ: ಅರಿವಿನ ಮಿತಿಗಳು; ಅರಿವಿನ ಅಸಾಧ್ಯತೆ; ಅಸಾಧ್ಯತೆಯ ಅರಿವು. ಕೊನೆಯ ಕತೆಯ ಶೀರ್ಷಿಕೆಯೇ ಹೇಳುತ್ತದೆ ಈ ದ್ವಂದ್ವವನ್ನು: “ಇದಕ್ಕೆಲ್ಲ ಅರ್ಥ ಎನ್ನುವುದಿಲ್ಲ”.

ಈ ಸಂಕಲನದ ಎಲ್ಲ ಕತೆಗಳಲ್ಲಿಯೂ ಒಬ್ಬರಲ್ಲ ಒಬ್ಬರು ಇದೇ “ಇದಕ್ಕೆಲ್ಲ ಅರ್ಥ ಎನ್ನುವುದಿಲ್ಲ” ಎನ್ನುವ ಅನುಭವ ಪಡೆದವರೇ. ಬಹಳ ಮುತುವರ್ಜಿಯಿಂದ, ಸ್ಪಷ್ಟವಾದ ಶಬ್ದ, ವಾಕ್ಯಗಳಲ್ಲಿ, ಮೂರ್ತ ಚಿತ್ರಗಳ ಮೂಲಕ ಕತೆಗಾರರು ಓದುಗರಿಗೆ ಈ exasperating ಅಸ್ಪಷ್ಟತೆಯ, ಗೊಂದಲದ, ಅರ್ಥಬಾಹ್ಯದ, ಅನುಭವವನ್ನು ಮತ್ತೆ ಮತ್ತೆ ಮಾಡಿಸುತ್ತಾರೆ.

ಕತೆಗಳನ್ನು ಓದುತ್ತ ಹೋದಂತೆ ಇದೊಂದು “ಅಚ್ಚರಿ”ಯ ಪ್ರಕ್ರಿಯೆ ಎನ್ನುವುದು ಗೊತ್ತಾಗುತ್ತದೆ.ಇಲ್ಲಿರುವ ಬಹುಪಾಲು ಕತೆಗಳನ್ನು ಓದುವ ಸುಖ ಇರುವುದೇ ಅವು ಸೃಷ್ಟಿಸುವ ಈ ಅರಿವಿನ ಮಿತಿಯಲ್ಲಿ. ಒಗಟುಗಳ ಹಿಂದೆ ಓಡಿದಷ್ಟೂ ಗೋಜಲಾಗುವ ಒಗಟಿನ ಹಾಗೆ ಕತೆ ನಮ್ಮನ್ನು ಕೌತುಕದಲ್ಲಿ ಮುಳುಗಿಸುತ್ತದೆ.

ನರೇಂದ್ರ ಪೈ ಸೊಗಸಾಗಿ ಕತೆ ಹೇಳುತ್ತಾರೆ. ಸುಲಭವಾಗಿ ಒದಿಸಿಕೊಳ್ಳುವಂತೆ ಸರಳ ಮತ್ತು ಖಚಿತ ಗದ್ಯದಲ್ಲಿ ಅವರು ಬರೆಯುತ್ತಾರೆ. ಇಸ್ತ್ರಿಹಾಕಿದ ಬಟ್ಟೆಯಷ್ಟು ಗರಿಗರಿ ಅವರ ಭಾಷೆ. ಇಡೀ ಪುಸ್ತಕದಲ್ಲಿ ಯಾವ ವಾಕ್ಯವೂ ಓದುಗನನ್ನು ಗೊಂದಲಕ್ಕೆ ತಳ್ಳುವುದಿಲ್ಲ. ಅವರ ಪಾತ್ರಗಳು ನಮ್ಮ ಪಕ್ಕದಲ್ಲಿ ನಿಂತಿರುವವರಷ್ಟೇ ನಿಜ. ಈ ಪಾತ್ರಗಳ ವರ್ತನೆ ಕೂಡ ನಮ್ಮ ಸುತ್ತಮುತ್ತಲಿನವರ ವರ್ತನೆಗಳಷ್ಟು ಸುಸಂಬದ್ಧ.

ಆದರೆ ಈ ಪಾತ್ರಗಳ ಆಂತರ್ಯ ಮಾತ್ರ ನಮ್ಮದೇ ಆಂತರ್ಯದಷ್ಟು  ರಹಸ್ಯಮಯ, ಅಜ್ನಾತ, ಅಪರಿಚಿತ. ಆದ್ದರಿಂದಲೇ ಈ ಕತೆಗಳನ್ನು ಓದುತ್ತ ಓದುತ್ತ ನಿಧಾನ ನಾವು ನರೇಂದ್ರ ಪೈ ಅವರ ಸೃಷ್ಟಿಯ ಅಜ್ನಾತ ಜಗತ್ತಿನಲ್ಲಿ ಅವಸರದಿಂದ ಓಡಾಡುತ್ತೇವೆ. “ಅಯ್ಯೋ ಇದೇನು” ಎಂದು ಬೆರಗಾಗುತ್ತೇವೆ. ಅಂತಹ ಬೆರಗು ಹುಟ್ಟಿಸುವ ಕತೆಗಳಿವೆ “ಕನಸುಗಳು ಖಾಸಗಿ” ಸಂಕಲನದಲ್ಲಿ. ಅಂತಹ ಬೆರಗನ್ನು ಅನುಭವಿಸಲಿಕ್ಕಾಗಿಯೇ ಅಲ್ಲವೇ ನೀವು-ನಾವೆಲ್ಲ ಕತೆಗಳನ್ನು ಓದುವುದು?

‍ಲೇಖಕರು avadhi

October 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. Narendra

  ಸರ್,
  ಒಂದು ಕತೆ, ಕವಿತೆ ಅಥವಾ ಕಾದಂಬರಿಯ ಯಶಸ್ಸು, ಅದಕ್ಕೊದಗುವ ಓದುಗಪ್ರೀತಿ ಕೇವಲ ಬರೆದವನ ಪ್ರತಿಭೆ, ಸಾಮರ್ಥ್ಯದ ಫಲವಾಗಿರುವುದಿಲ್ಲ. ಅದರ ಅರ್ಧ ಪಾಲು ಓದುಗನಿಗೆ ಸಲ್ಲಬೇಕು. ಬರಹಗಾರ ಪ್ರಯತ್ನಿಸುವುದು ತನ್ನ ಅನುಭವಕ್ಕೆ ಅಕ್ಷರ ರೂಪ ಕೊಡುವುದರ ಮೂಲಕ ‘ಕವಿ ಭಾವ ಪ್ರತಿಮಾ ಪುನರ್‌ಸೃಷ್ಟಿ’ಯನ್ನಷ್ಟೇ. ಕವಿ ಭಾವ ಉದ್ದೀಪ್ತವಾಗಬೇಕಿರುವುದು ಓದುಗನಲ್ಲಿ. ಕವಿಭಾವದ ಯಾವತ್ತೂ ಪ್ರತಿಮೆ ಜೀವಂತಗೊಳ್ಳಬೇಕಾದ್ದು ಓದುಗನಲ್ಲಿ. ಪುನರ್‌ಸೃಷ್ಟಿಯ ಎದೆಬಡಿತ, ಉಸಿರಾಟ ಎಲ್ಲವೂ ಅವನೆದೆಯಲ್ಲಿ ತೊಡಗಿದರೆ ಮಾತ್ರ ಜೀವ, ಭಾವ. ಹಾಗಾಗಿ, ನಾನು ಹತ್ತು ಹದಿನೈದು ವರ್ಷಗಳ ಹಿಂದಿನಿಂದ ಬರೆಯುತ್ತ ಬಂದಿದ್ದ ಐದಾರು ಕತೆಗಳು ಚೆನ್ನಾಗಿದ್ದರೆ, ಅವುಗಳನ್ನು ಬಹುತೇಕ ಮರೆತಿರುವ ನನಗಿಂತ ಇವತ್ತು ಓದುತ್ತಿರುವ, ಸ್ಪಂದಿಸುತ್ತಿರುವ ನಿಮ್ಮಂಥವರೇ ಅದಕ್ಕೆ ಕಾರಣ ಸರ್. ಒಮ್ಮೆ ಓದುವುದು, ಒಮ್ಮೆ ಅದರ ಬಗ್ಗೆ ಬರೆಯುವುದೇ ತ್ರಾಸದ ಕೆಲಸ. ನೀವು ಮತ್ತೊಮ್ಮೆ ಅದೆಷ್ಟು ಚೆನ್ನಾಗಿ ಬರೆದಿದ್ದೀರೆಂದರೆ ನಾನಿದಕ್ಕೆಲ್ಲ ಅರ್ಹನೇ ಎಂದು ಪ್ರಶ್ನಿಸಿಕೊಳ್ಳುವಂತಾಯಿತು. ಬರವಣಿಗೆ ಅಷ್ಟೇನೂ ಪ್ರಜ್ಞಾಪೂರ್ವಕ ಮನಸ್ಥಿತಿಯಲ್ಲಿ ನಡೆಯುವುದಿಲ್ಲ. ಹಾಗಾಗಿ ಪ್ರಜ್ಞಾಪೂರ್ವಕ ಅಲ್ಲದ ಮನಸ್ಥಿತಿಯಲ್ಲಿ ಸಿದ್ಧಿಸಿದ್ದಕ್ಕೆ ಅಷ್ಟೇ ಪಾಲು ನಾನು ಬಾಧ್ಯನೂ, ಪಾತ್ರನೂ ಆಗಿರುವುದಿಲ್ಲ. ಭಯ ಸುರುವಾಗಿದೆ ನನಗೆ, ನಿಮ್ಮ ಮಾತುಗಳು ನನ್ನಲ್ಲಿ ಅಹಂ ಮೂಡಿಸದಿದ್ದರೆ ಅಷ್ಟೇ ಸಾಕು!

  ಪ್ರತಿಕ್ರಿಯೆ
 2. T S SHRAVANA KUMARI

  ಚಂದದ ಪುಸ್ತಕ ಪರಿಚಯ. ಕತೆಗಳನ್ನು ಓದುವ ಆಸಕ್ತಿ ಮೂಡಿಸುತ್ತಿದೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: