ನಮ್ಮ ಮನೆ ಪಂಪ್ ಕಂಟ್ರೋಲರ್

ಮುಕುಂದ ರಾ ಗಜೇಂದ್ರಗಡ

ನಮ್ಮ ಮನಿ ಇಕಡೆ ಡುಪ್ಲೈನು ಅಲ್ಲಾ ಮಾನೊಪ್ಲೈನೂ ಅಲ್ಲ. ಎರಡು ಮನೆ ಕೂಡಿಸಿ ಒಂದು ಮನೆ ಮಾಡಿವಿ. ಕೆಳಗಿನ ಫ಼್ಲೋರ್ ಒಳಗ ಹಾಲ್, ಒಂದು ಬೆಡ್ ರೂಂ ಮತ್ತ ಸ್ಟೋರ್ ರೂಂ. ಮ್ಯಾಲಿನ ಫ಼್ಲೋರನಾಗ ಎರಡು ಬೆಡ್ ರೂಂ, ಡೈನಿಂಗ್ ಕಮ್ ಕಿಚನ್, ದೇವರ ಮನಿ ಮತ್ತ್ ಎಲ್ಲಾ. ಇದರಾಗ ಒಂದು ಬೆಡ್ ರೂಂ ಹೆಸರಿಗೆ ಅಷ್ಟೇ. ಅದು, ಹಾಲ್, ಟಿವಿ ರೂಂ, ನನ್ನ ಸ್ಟಡಿ ರೂಂ ಎಲ್ಲಾ. ಅಡಿಗಿಮನಿ ಮ್ಯಾಲ ಇರೊದರಿಂದ ನಾವು ಭಾಳ ವೇಳ್ಯಾ ಮ್ಯಾಲಿನ ಮನ್ಯಾಗೇ ಇರತೀವಿ. ಹಿಂಗಾಗಿ, ಕೆಲಸಲ ನಾವು ಕೆಳಗಿನ ಮನಿಗೇ ತಿಂಗಳಾಂಗಟ್ಟಲೇ ಹೋಗೋದೆ ಇಲ್ಲ.

ಇನ್ನ, ನಮಗ ಭಾಳ ಗುರುತಿರುವವರು, ಡೈರೆಕ್ಟ್ ಆಗಿ ಮ್ಯಾಲಿನ ಮನೀಗೆ ಬರತಾರ, ಸ್ವಲ್ಪ ಗುರುತಿರುವವರು ಮೀನಾಮೇಷಾ ಮಾಡಿ ಮ್ಯಾಲೆ ಬರತಾರ. ಇನ್ನ ಉಳಿದವರು ಗೇಟ್ ಬಾರಸತಾರ. ಅವಾಗ ನಾವೇಹೋಗಿ ಮ್ಯಾಲೆ ಕರಿದುಕೊಂಡು ಬರತೀವಿ. ಇದರಾಗ ನಮ್ಮ ಸ್ವಾರ್ಥನೂ ಅದ. ಕೆಳಗಿನ ಮನ್ಯಾಗ ಗೆಸ್ಟಮಂದಿನ ಕೂಡುಸಿದರ, ಅವರಿಗೆ ಕೊಡೋ ಫಳಾರ-ಕಾಫಿ ಎಲ್ಲಾ ಮ್ಯಾಲಿಂದೇ ಬರಬೇಕು. ನನ್ನ ಹೆಂಡತಿ ಎಲ್ಲಾ ಮಾಡತಾಳ ಆಮ್ಯಾಲೆ ಬಂದವರು ಹೋದಮ್ಯಾಲೆ ನನಗ ಬೈತಾಳ. ನೀವೇನು ಕೆಳಗ ಸುಮ್ಮ ನೋಡಕೋತ ಕುತಬಿಡತೀರಿ, ಫಳಾರ-ಕಾಫಿ ನೀರು ಎಲ್ಲಾ ನಾನೇ ತರಬೇಕು.

ನಾಕೈದು ಸಲ ಕೆಳಗ-ಮ್ಯಾಲೆ ಒಡಾಡಬೇಕು, ನನಗ ಮದತ ಮಾಡಂಗೇ ಇಲ್ಲ? ಹಿಂಗ ಬೈಸಿಕೊಳ್ಳೋದು ಬ್ಯಾಡ ಅಂತ ಮನಿಗ್ ಬರೋರನೆಲ್ಲಾ ಮ್ಯಾಲಿನ ಮನೀಗೇ ಕರಿಯಿಸಿ ಬಿಡತೀನಿ. ಹಂಗ ಮಾಡಿ ಇಕಿಗೆ ‘ಮ್ಯಾಲೆ ಕೆಳಗ – ಕೆಳಗ ಮ್ಯಾಲೆ’ ಒಡಾಡುವುದನ್ನ ತಪ್ಪಸತ್ತೀನಿ. ನನ್ನಕಿ ರಾಮದೇವ ಬಾಬನ ಭಕ್ತೆ. ಅವರು ಹೇಳ್ಯಾರ ಮ್ಯಾಲೆ ಕೆಳಗ ಒಡಾಡಿದ್ರ ಹೊಟ್ಟಿ ಕರಗತದ ಅಂತ. ಇಕಿ ಅದಕ್ಕರೆ ದಿನಾಲು ನಾಲ್ಕು-ಐದು ಸರೆ ಮ್ಯಾಲೆ ಕೆಳಗ ಒಡಾಡತಾಳ ಆದ್ರ ಇನ್ನೂ ಹೊಟ್ಟಿ ಕರಗಿಲ್ಲ. ಇವಾ ಈ ‘ಮ್ಯಾಲೆ ಕೆಳಗ’ ಒಡಾಡುವುದನ್ನ ಯ್ಯಾಕ ಹೇಳಲಿಕ್ಕೆ ಹಾತ್ಯಾನ ಅಂತ ನಿಮಗ ಸಂಶಯ ಬಂದಿರಬಹುದು. ಆದ್ರ ನಾನು ಆ ಸಂಶಯನ್ನ ಆಮ್ಯಾಲೆ ನಿವಾರಣಸ್ತಿನಿ ಇಲ್ಲದಿದ್ರ ಮಜಾನೇ ಹೋಗತದ.

ಇರಲಿ ಈಗ ಇವತ್ತಿನ ವಿಷಯಕ್ಕ ಬರೋಣ.

ಒಂದು ದಿನ ಮುಂಜಾನೆ ನಾ ಪೇಪರ್ ಓದಕೋತ ನನ್ನ ಖೋಲ್ಯಾಗ ಕುತ್ತಿದ್ದೆ. ಆವಗ ಇಕಿ ಬನಿಯನ ತುಂಡಕ್ಕ ಕೈ ಒರಸಕೋತ ಬಂದ್ಲು. ನಮ್ಮಾಕಿಗೆ ಈ ಬನಿಯನ್ ತುಂಡುಗಳಮ್ಯಾಲೆ ಭಾಳ ಪ್ರೀತಿ. ಬನಿಯನ್ನಾಗ ಎಲ್ಲಾರೆ ಒಂದು ಸಣ್ಣ ತೂತು ಬಿದ್ದರಸಾಕು ಆ ಬನಿಯನನ್ನ ಡಿಸೆಕ್ಟಮಾಡಿ ಅಡಗಿಕಟ್ಟಿ ಒರಸಲಿಕ್ಕೆ ಉಪಯೋಗಿಸುತ್ತಾಳ. ನಮಗೊ ಆ ಬನಿಯನ್ ಇನ್ನೂ ಎರಡು ತಿಂಗಳು ಬರತ್ತಿತ್ತು, ಈಗ ೨೦೦ ರೂಪಾಯಿಗೆ ಕಲ್ಲುಬಿತ್ತು. ನಾ ರಗಡಸಲ ಹೇಳಿದ್ದೆ, ನಮ್ಮ ಮನಿಹತ್ರ ಇರೋ ಭಾಷ್ಯಂ ಸರ್ಕಲ್ ಒಳಗ ಸಣ್ಣು ಸಣ್ಣು ಟಾವೆಲ್ ಮಾರತಿರತಾರ, ಅವನ್ನ ತಂದುಕೊಡತೀನಿ ಬನಿಯನ್ ಉಪಯೋಗಿಸಬ್ಯಾಡ.

ಆ ಟಾವೆಲ್ ೧೦೦ ರೂಪಾಯಿಗೆ ೪ ರಿಂದ ಸುರುಮಾಡಿ ಕಡಿಕೆ ೧೦೦ ರೂಪಾಯಿಗೆ ೮ ಕೊಡತಾರ. ಆದ್ರ ಅಕಿ ಪ್ರಕಾರ ಅಡಗಿಕಟ್ಟಿ ಒರಸಲಿಕ್ಕೆ ಬನಿಯನ್ನೇ ಬೆಸ್ಟ. ಆ ಬನಿಯನ್ ತುಂಡಕ್ಕ ಕೈ ಒರಸಕೋತ ಹೇಳಿದ್ಲು, ನಾವು ಹಿಂಗ ಮಾಡಿದ್ರ ಹ್ಯಾಂಗ? ಬಾಜುಕಿನ ಮನಿಯವರೂ ಮುಂದಿನ ಮನಿಯವರೂ ಮಾಡಸ್ಯಾರ, ನಾವೂ ಮಾಡಿಸೋಣ. ನಾನೂ ವಿಚಾರ ಮಾಡದೆ, ಆ ಇಬ್ಬರೂ ತಮ್ಮ ಮಕ್ಕಳ ಲಗ್ನದ ತಯಾರಿಗಾಗಿ ಮನಿಗೆ ಸುಣ್ಣ ಬಣ್ಣ ಮಾಡಸ್ಯಾರ, ನಮ್ಮ ಮನಿಗೆ ಹೋದ ವರ್ಷನೇ ಮಾಡಿಸಿದ್ವಿ. ಅಲ್ಲ, ಇನ್ನೂ ಒಂದು ವರ್ಷಾಅಗಿಲ್ಲ, ಮತ್ಯಾಕ ಸುಣ್ಣಾ ಬಣ್ಣಾ ಮಾಡಸಬೇಕು? ಅಂತ ಕೇಳಿದೆ. ನನ್ನ ಮಾತನ್ನ ನೀವು ಎಂದೂ ಪೂರ್ಣ ಕೇಳಸಕೋಳ್ಳೊದಿಲ್ಲಾ. ನನ್ನ ಮಾತಂದ್ರ ನಿಮಗ್ ಯ್ಯಾವಾಗಲೂ ಮಜಾನೆ, ನನ್ನ ಮಾತಿಗೆ ಕಿಮ್ಮತ್ತ್ ಕೊಡಂಗಿಲ್ಲ ಅಂತ ಸಿಟ್ಟಿಗೆದ್ದಳು. ಅಲ್ಲವ್ವ, ಕಿಮ್ಮತ್ತ್ ಕೊಟ್ಟದ್ದಕ್ಕೆ ದಿನಾಲೂ ಊಟಾಸಿಗಲಿಕ್ಕೆ ಹತ್ತದ, ಇಲ್ಲದಿದ್ದರ್ ಉಪಾಸಾನೇ ಇರಬೇಕಾಗತಿತ್ತು. ಈಗ ಹೇಳು, ಯಾವದನ್ನ ಹ್ಯಾಂಗ ಮಾಡಬೇಕು ಅಂತ.

ನೋಡ್ರಿ, ದಿನಾಲು ನಾನೇ ಮ್ಯಾಲೆ ಕೆಳಗ ಒಡಾಡಕೋತ್ತ ಸಂಪ್ ಇಂದ ನೀರನ್ನ ಮ್ಯಾಲಿನ ಟ್ಯಾಂಕಿಗೆ ತುಂಬತೀನಿ. ನೀವು ಎಂದೂ ಆ ಕೆಲಸ ಮಾಡಿಲ್ಲ ಮತ್ತ ನಿಮಗ ಮಾಡಲಿಕ್ಕೆ ಬರಂಗೂಇಲ್ಲ. ಪಿಟಿಶನ್ ಮತ್ತು ಜಡ್ಜಮೆಂಟ್ ಒಟ್ಟಿಗೆ ಆಯಿತು. ಅಲ್ಲಾ ಅದರಾಗ ಏನದ? ಪಂಪ್ ಸ್ವಿಚ್ಛ್ ಹಾಕಿದ್ರ ನೀರು ತಾನಾಗೆ ಮ್ಯಾಲೆ ಹೊಗತಾವ. ನೀವು ಅಷ್ಟರೆ ಮಾಡತಿರೇನು? ನಾನೇ ಬಡಕೋಬೇಕು ಎಲ್ಲಾದಕ್ಕು. ಇರಲಿ ಬಿಡವ್ವಾ, ಈಗ ನೀ ಎನು ಹೇಳಲಿಕ್ಕೆಹತ್ತಿ ಅದರೆ ಹೇಳು.

ನೋಡ್ರಿ, ಬಾಜುಕಿನ ಮನಿಯವರು ಮತ್ತ ಮುಂದಿನ ಮನಿಯವರು ಪಂಪ್ ಗೆ ಕಂಟ್ರೋಲ್ ಕುಡಿಸ್ಯಾರ ಅದು ಆಟೊಮ್ಯಾಟಿಕಕ್ಕಾಗಿ ಮ್ಯಾಲಿನ ಟ್ಯಾಂಕ್ ಖಾಲಿ ಆದ ಕೂಡ್ಲೆ ಸುರು ಆಗತದ, ನಾವು ಹಾಕಿಸೋಣ. ನನಗ ಒಂದು ಕೆಲಸಾ ಮತ್ತ ಮ್ಯಾಲೆ ಕೆಳಗ ಒಡಾಡೋದು ತಪ್ಪತದ. ಅಲ್ಲಾ ನೀ ಮ್ಯಾಲೆ ಕೆಳಗ ಒಡಾಡದಿದ್ದರ ನಿನ್ನ ಆ ರಾಮದೇವ ಬಾಬಾ ಬೈತಾನ. ನನ್ನ ಮಾತಂದ್ರ ನಿಮಗ ಬರೇ ಚಾಷ್ಟಿನೆ, ಒಟ್ಟಿನೋಳಗ ಕಂಟ್ರೋಲ್ ಹಾಕಸ್ತೀರೋ ಇಲ್ಲೊ ಅಷ್ಟ ಹೇಳರಿ.

ನಾನು ಬಾಜುಕಿನ ರಮೇಶಗ ಮತ್ತ ಎದುರಿನ ಮುರಾರಿಗೆ ಕೇಳಿ ಹಾಕಸ್ತೀನಿ. ಐಽಽ ಅವರಿಗೇನು ಕೇಳೋದು, ಇವತ್ತಿನ ಪೇಪರ್ ಜೋಡಿ ಈ ಪಾಂಪ್ಲೇಟ್ ಕೊಟ್ಟಾರ ನೋಡ್ರಿ, ೫೯೯೯ ರೂಪಾಯಿಗೆ ಎಲ್ಲಾ ಆಗಬಿಡತದ ಅಂತ ಹೇಳಕೋತ ಒಂದು ಹಸಿರು ಬಣ್ಣದ ಸಣ್ಣ ಕಾಗದಾಕೊಟ್ಟಳು. ಒಂದು ಕಡೆ ತಮಿಳಲ್ಲೆ ಬರದಿತ್ತು ಇನ್ನೋಂದು ಕಡೆ ಕನ್ನಡದ ಲಿಪಿ ಇತ್ತು. ಆ ಕನ್ನಡವನ್ನ ಓದಲಿಕ್ಕೆ ಆ ನಮ್ಮ ಕನ್ನಡಾಂಬೆಯೇ ಬರಬೇಕು. ಅದೇನೆ ಇರಲಿ, ನನ್ನ ಕಣ್ಣಿಗೆ ಒಂದು ಎದ್ದುಕಾಣಿಸಿತು. ಅದೇನಂದ್ರ, ೫೯೯೯ ರೂಪಾಯಿ ಅಂತ ಬರದು ಬ್ರಾಕೆಟ್ ನಲ್ಲಿ ನೆಗೋಶಿಯೆಬಲ್ ಬರಿದಿದ್ರು.

ನಡಿ, ನನಗೂ ಟೈಂ ಪಾಸ್, ಚೌಕಸಿನೂ ಮಾಡಿಧಾಂಗ ಆಗತದ ಅಂತ ಅನ್ನುಕೊಂಡು ಆ ಪೇಪರಒಳಗ ಕೊಟ್ಟ ನಂಬರಗೆ ಫೋನ್ ಮಾಡದೆ. ಭಾಳೊತ್ತ ರಿಂಗಾಗಿ ಕಡಿಕೆ ‘ನೀವು ಯಾವ ವ್ಯಕ್ತಿಯನ್ನು ಸಂರ್ಪಕಿಸಿಲು ಪ್ರಯತ್ನ ಪಡುತ್ತಿರುವಿರೊ ಆ ವ್ಯಕ್ತಿ ನಿಮ್ಮ ಕರೆಯನ್ನು ಸ್ವೀಕರಿಸುತ್ತಿಲ್ಲಾ’ ಅಂತ ಒಬ್ಬ ಹೆಂಗಸು ರಾಗವಾಗಿ ಹೇಳಿದಳು. ಎನೋ ಬಿಜ಼ಿ ಇರಬೇಕು, ಎಲ್ಲಾರು ನಂಹಾಂಗೆ ಪಾಂಪ್ಲೇಟ್ ನೋಡಿ ಅವರಿಗೆ ಫೋನ್ ಮಾಡತಿರಬೇಕು ಅಂತ ಒಂದು ಜನರಲೈಜ್ಡ ಸ್ಟೆಟಮೆಂಟ ಒಗದ್ಲು. ಇನ್ನೊಂದು ಹದಿನೈದು ಮಿನಿಟ್ ಬಿಟ್ಟು ಮತ್ತ ಮಾಡ್ರಿ ಅಂತ ಹೇಳಿ ಅಡಿಗಿಮನಿಗೆ ಹೋದಳು.

ನನ್ನ ಹೆಂಡತಿ ಜನರಲೈಜ್ಡ ಸ್ಟೆಟಮೆಂಟ್ ಮಾಡೊದ್ರವಳಗ ಮಶಹೂರ್. ಕೆಲವು ವಿಷಯಗಳು ನಿಮಗ್ ಗೊತ್ತಿರಂಗಿಲ್ಲಾ, ಅಕಿಗೆ ಗೊತ್ತಿರತದ. ಇಗ ನೀವೆ ಹೇಳ್ರಿ ಚಾಲುಕ್ಯ ಸರ್ಕಲ್ ಕಡಿಯಿಂದ ಗೋಲ್ಫ್ ಗ್ರೌಂಡಕಡಿಗೆ ಹೋಗೊ ಎಲ್ಲಾ ಎಲ್ಲೋ-ಬೋರ್ಡ ಕ್ಯಾಬಗಳು ಏರ್ ಪೋರ್ಟಗೇ ಹೋಗತಾವ. ಇದು ನಿಮಗ ಗೋತ್ತದ ಏನು?, ಇಲ್ಲಾ, ಹೌದಲ್ಲೋ?  ನಿಮಗ್ಯಾಕ ಆ ಪೋಲಿಸ್ ಕಮಿಷನರಗೂ ಗೊತ್ತಿಲ್ಲ, ಅಷ್ಟ್ಯಾಕ, ಆ ಸರ್ಕಲನಾಗ ೧೦ ವರುಷದಿಂದ ಕೆಲಸ ಮಾಡತಿರೋ ಪೋಲಿಸ್ ಕಾಂಸ್ಟೇಬಲಗೂ ಗೊತ್ತಿಲ್ಲ. ಹಿಂಗ ಅಕಿದು  ಜನರಲೈಜ್ಡ ಸ್ಟೆಟಮೆಂಟಗಳು ಭಾಳ ಅವ. ಇಲ್ಲೇ ಹೇಳಲಿಕ್ಕೆ ಸುರುಮಾಡಿದ್ರ ಸಂಪು-ಪಂಪು-ಕಂಟ್ರೋಲರ್ ಮ್ಯಾಲಿನ ಕಂಟ್ರೋಲ್ ತಪ್ಪತದ. ಅದನ್ನ ಇನ್ನೋಂದು ದಿನ ಹೇಳತೀನಿ.

ಅದೇನೋ ಹೇಳತಾರಲ್ಲ, ಬಾಸ್ ಆದೇಶ ಮತ್ತು ಹೆಂಡತಿ ಮಾತು ಶಿರಸಾ ಪಾಲಿಸಬೇಕು ಅಂತ, ಹಾಂಗಾಗಿ ಹದಿನೈದು ಮಿನಿಟುಬಿಟ್ಟು ಮತ್ತ ಫೋನು ಮಾಡಿದೆ. ಒಂದು ಐದಾರು ಸಲ ರಿಂಗಾದಮ್ಯಾಲೆ ಅಕಡಿಂದ ಧ್ವನಿ ಬಂತು. ನಾ ಟೈಮ್ ವೆಸ್ಟ ಮಾಡದೆ ಕೇಳಿದೆ, ನಮ್ಮ ಮನಿಗೆ ಕಂಟ್ರೋಲರ್ ಹಾಕಿಸಬೇಕು ಎಂದು ಬರತೀರಾ? ಆಯಿತು ಶ್ವಾಮಿ, ನಾಳಿಕು ಬರತೇವೆ. ನನಗ ಗೊತ್ತಾಯಿತು, ಇವಾ ಒಬ್ಬ ಸಾಬಣ್ಣ ಅಂತ. ಹೆಸರು ಕೇಳಿದೆ, ನಜ಼ೀರ್ ಅಂದಾ. ನಾ ವ್ಯಾಪರಕ್ಕ ಮುಂದುವರಿದೆ.

ನಿಮ್ಮದು ರೇಟ್ ಏನು? ಶ್ವಾಮಿ ಆ ಪಂಪಲೆಟ್ ಅಲ್ಲಿ ಹಾಕಿದಿವಲ್ವಾ ಅದೇ ರೇಟ್. ಅಲ್ಲಾ ನಜ಼ೀರಣ್ಣ, ನೀವು ನೆಗೋಶಿಯೆಬಲ್ ಅಂತ ಬರದೀರ ನೋಡಿ ನಮಗೆ ೪೯೯೯ ರೂಪಾಯಿಗೆ ಮಾಡಿ ಕೊಡಬೇಕು ಅಂತ ಡಿಮಾಂಡ ಇಟ್ಟೆ. ಹೌದು ಶ್ವಾಮಿ ನಂದು ನೆಗೋಶಿಯೆಬಲ್ಲೇ. ನಿಮ್ದುಕು ಟ್ಯಾಂಕ್ ಏಷ್ಟನೇ ಫ಼್ಲೋರಲ್ಲಿ ಇದೆ? ಏರಡನೇ ಫ಼್ಲೋರ್ ನಜ಼ೀರಣ್ಣ. ಹಂಗಾದ್ರೆ ನಿಮ್ದುಕು ರೇಟ್ ೭೦೦೦ ಆಗತ್ತೆ. ಒಂದು ರೂಪಾಯಿ ಕಡಿಮೇನೆ ಕೊಡಿ ಪರವಾನೈ.

ಏಲಾ ನನ್ ಮಗನ್, ರೊಕ್ಕ ಕಡಿಮಿ ಮಾಡು ಅಂದ್ರ ಹೆಚ್ಚು ಮಾಡಲಿಕ್ಕೆ ಹತ್ತಿ. ಆದ್ರೂ ಸಂಯಮ ಕಳಿದುಕೊಳ್ಳದೆ ಕೇಳಿದೆ, ಸಾಬಣ್ಣ ನೆಗೋಶಿಯೆಬಲ್ ಅಂದ್ರ ಚೌಕಾಸಿ ಮಾಡಿ ರೊಕ್ಕ ಕಡಿಮಿ ಮಾಡೊದು, ನೀನು ಹೆಚ್ಚು ಮಾಡಲಿಕ್ಕೆಹತ್ತಿಯಲ್ಲ? ಅದು ಹಾಗಲ್ಲ ಶ್ವಾಮಿ, ಒಬ್ಬರದು ಫಸ್ಟ ಇನ್ನೋಬ್ಬರದು ಸೆಕೆಂಡ್ ಮತ್ತೋಬ್ಬರದು ಹತ್ತನೇ ಫ್ಲೋರಲ್ಲಿ ಟ್ಯಾಂಕ ಇರತ್ತೆ. ಎಲ್ಲರಿಗೂ ಒಂದೇ ರೇಟ್ ಹ್ಯಾಗೆ ಸಾಧ್ಯ? ಅಲ್ಲವಾ ಶ್ವಾಮಿ? ಇವನು ನನಗ ಶ್ವಾಮಿ ಶ್ವಾಮಿ ಅಂತ ಕರೆದರ ಯ್ಯಾವದೋ ಶ್ವಾನಕ್ಕ ಕರಧಾಂಗ ಅನಸಲಿಕ್ಕ ಹತ್ತಿದು. ನನ್ನ ಹೆಸರು ಹೇಳಿದ್ರ ಅದನ್ನೂ ಎಲ್ಲಿ ತಿರುವಿ ಮುರುವಿ ಮಾಡಿ ಕೆಡಸ್ತಾನೋ ಅನ್ನೋ ಅಂಜಿಕಿ ಇಂದ ಶ್ವಾಮಿ ಅಂತ ಕರಿಸಿಕೊಳ್ಳೊದ್ದಕ್ಕ ಒಪ್ಪಿಕೊಂಡೆ.

ಇವನ ಬಾಯ್ಯಾಗ ನನ್ನ ಹೆಸರು ಮುಕುಂದ ಹೋಗಿ ಮುಗಿಂದ ಮುಗಿಂದ ಅಂತ ಆಗಿಬಿಡತದ ಅಂತ ಅಂಜಿಕಿ. ನನಗ ಮುಗಿಂದ ಅಂತ ಕರದು ನನ್ನ ಶ್ವಾಸಕೋಶದೊಳಗ ಇರೋ ಸಿಂಬಳಎಲ್ಲಾ ಹೊರಗ್ ತಗದ್ ಬಿಡತಾನ.  ಹಾಗಾದ್ರೆ ಸಾಬಣ್ಣ, ನೀವು ಪೇಪರ್ ಜೋಡಿ ಕೊಟ್ಟ ಪಾಂಪ್ಲೇಟ್ ರೇಟ್ ಯ್ಯಾವುದಕ್ಕ? ಶ್ವಾಮಿ ಅದು ಫ಼ಸ್ಟ ಫ಼್ಲೋರಗೆ ಮತ್ತೆ ಸಂಪು ಮತ್ತು ಟ್ಯಾಂಕು ಏರಡೂ ದೈನೆ ಯಾ ಬಾಹೆ ಇರಬೇಕು. ನೋಡಿ ಶ್ವಾಮಿ, ಸಂಪು ದೈನೆ ಮತ್ತೆ ಟ್ಯಾಂಕ್ ಬಾಹೆ ಇದ್ದರೆ ನಾವು ಅಷ್ಟು ಉದ್ದಾ ಲೈನ್ ಎಳಿಬೇಕು, ಅಲ್ಲವಾ ಶ್ವಾಮಿ? ಇವನು ತನ್ನ ಪ್ರತಿಯೊಂದು ಸ್ಟೆಟಮೆಂಟಗೆ ‘ಅಲ್ಲವಾ ಶ್ವಾಮಿ ಅಲ್ಲವಾ ಶ್ವಾಮಿ’ ಅಂತ ಕೇಳಿ ನನ್ನಿಂದ ಹು ಅನಸಕೋತಿದ್ದ. ಬೇಡಬಿಡು ಸಾಬಣ್ಣ, ೭೦೦೦ ನಮಗ ಕೊಡಲಿಕ್ಕೆ ಆಗಂಗಿಲ್ಲ, ನಮಗೆ ಕಂಟ್ರೋಲರ್ ಬೇಡ.

ಹಾಗಲ್ಲ ಶ್ವಾಮಿ, ೫೦೦೦ ತುಂಬಾ ಕಮ್ ಆಯಿತು, ೫೭೫೦ ಕೊಟ್ಟುಬಿಡಿ ನಾಳಿಕು ಹಾಕಿಬಿಡತೀನಿ. ಬೇಡ ಸಾಬಣ್ಣಾ, ನಿಂದು ರೇಟ್ ಜಾಸ್ತಿ ಆಯಿತು. ನಮಗೆ ಬೇಡಾ. ಅಧ್ಯಂಗೆ ಶ್ವಾಮಿ, ನಂದುಕು ಇದು ಬೋಣಿ, ನಾ ವ್ಯಾಪಾರಾ ಛೋಡಾಕೋ ನೈ. ಅವನೇ ಮುಂದುವರಿದು ಹೇಳಿದ ಶ್ವಾಮಿ, ನಂದುಕು ಬೇಡಾ, ನಿಂದುಕು ಬೇಡಾ ೫೫೦೦ ಮಾಡಿಬಿಡಿ. ಆಯಿತು ನಾಳೆ ಬೇಗ ಬಂದು ಕೆಲಸ ಮಾಡಬಿಡು. ಶ್ವಾಮಿ ನಂದುಕು ಆಧಾ ಘಂಟಾ ಕಾಮ್, ಬೆಳಿಗ್ಗೆ ೧೦ ಘ್ಂಟೆಗೆ ಬಂದು ೧೧ಕ್ಕೆ ನಿಂದು ಖತಮ ಮಾಡತೇನೆ.

ಸಾಬಣ್ಣ, ನನಗ ಬಿಸ್ಮಿಲ್ಲಾ ಮಾಡಬೇಡ, ಕಾಮ್ ಖತಂ ಮಾಡು ಅಂತ ನಾ ಉತ್ತರ ಪ್ರದೇಶದಲ್ಲಿದ್ದಾಗ ಕಲಿತ ಹಿಂದಿ ಜ್ಞಾನ ತೋರ್ಪಡಿಸಿದೆ. ಈ ಸಾಬಣ್ಣನಿಗೆ ಅರ್ಧ ಘಂಟೆಯೊಳಗೆ ಮುವತ್ತು ಮಿನಿಟ ಇವೆ ಅಂತನೂ ಗೊತ್ತಿಲ್ಲವೇನೊ. ೧೦ರಿಂದ ೧೧ರ ವರೆಗೆ ಆಧಾ ಘಂಟಾ ಅಂತ ಅಂದು ಬಿಟ್ಟಾ. ಏನೇ ಆಗಲಿ, ಕೆಲಸ ಸರಿಯಾಗೆ ಮಾಡಿದ್ರೆ ಸಾಕು. ಶ್ವಾಮಿ ನಿಂದುಕು ಅಡ್ರೆಸ್ ಮತ್ತೆ ಲೊಕೆಶನ್ ನನಗೆ ವಾಟ್ಸಪ್ ಮಾಡಿಬಿಡಿ, ನಾಳಿ ಠೀಕ್ ದಸಕೊ ಬಂದಬಿಡತೀವಿ.  

ನನ್ನ ಹೆಂಡತಿಗೆ ವಿಷಯ ತಿಳಿಸಿ, ೫೦೦ ರೂಪಾಯಿ ಕಡಿಮೆ ಮಾಡಿದೀನಿ ಅಂತ ಹೇಳಿ, ಕಾಫಿ ಗಿಟ್ಟಸೋಣ ಅಂತ ಅಡಿಗೆಮನಿಕಡಿ ಹೆಜ್ಜಿ ಹಾಕದೆ. ವಿಷಯಾಹೇಳಿದಮ್ಯಾಲೆ ನನ್ನ ಹೆಂಡತಿ ಏನ್ ಹೇಳಬೇಕು, ಐಽಽ ನೀವೇನು ಕಡಿಮಿ ಮಾಡಿದ್ರಿ, ಅದರ ಕಿಮ್ಮತ್ತೇ ಅಷ್ಟ್ ಅದ. ಬಾಜುಕಿನವರೆಲ್ಲಾ ಅಷ್ಟಕ್ಕೇ ಹಾಕಸ್ಯಾರ. ಅಗಾಳೆ ಪಲ್ಯಾ ಕೊಳ್ಳಲಿಕ್ಕೆ ಕೆಳಗ ಹೋದಾಗ ಬಾಜುಕಿನಕಿನೂ ಬಂದಿದ್ಲು, ಅಕಿನೂ ೫೫೦೦ರೇ ಹೇಳಿದ್ಲು. ಹಿಂಗ ಛೀಮಾರಿ ಹಾಕಿಸಿಕೊಂಡಮ್ಯಾಲೆ ಕಾಫಿ ಕೇಳೊದು ಬ್ಯಾಡ ಅಂತ ಡಿಸೈಡ್ ಮಾಡಿ, ನನ್ನ ಖೋಲಿಗೆ ಬಂದೆ. ಹಾಂಗ ನನ್ನ ಹೆಂಡತಿ ಒಳ್ಳ್ಯಾಕಿ ಇದ್ದಾಳ, ನನ್ನ ಹಿಂದೆ ಕಾಫಿ ತಂದು ಕೊಟ್ಟಳು.

ರಾತ್ರಿ ಮಲಗೊಕಿಂತ ಮದಲ್ ನನ್ನಾಕಿ ಹೇಳಿದ್ಲು, ನಾಳೆ ಲಗೂಗೆ ಎದ್ದು, ಸ್ನಾನಾ ಪೂಜಾ ಮಾಡ್ರಿ. ಅನ್ನಾ ಉಳದದ, ವಗ್ಗರಣಿ ಅನ್ನಾ ಮಾಡಿಕೊಡತೀನಿ. ಹತ್  ಅನ್ನೋಅಷ್ಟರೋಳಗ ತಯ್ಯಾರಾಗ್ರಿ. ಬಂದವರ ಜೋಡಿ ಮ್ಯಾಲೆ ಕೆಳಗ ಒಡಾಡಕೋತ ದೇಖರಿಕಿ ಮಾಡ್ರಿ ಅಂತ ಆಣತಿ ಮಾಡಿದ್ಲು.    

ನಾ ನನ್ನ ಲಗ್ನಕ್ಕೂ ಇಷ್ತು ಟೈಮಶೀರ್ ತಯ್ಯಾರ ಆಗಿದ್ದಿಲ್ಲ. ಮರುದಿನ ನನ್ನಕಿ ಹೇಳಧಾಂಗ ಲಗೂನೆ ತಯ್ಯಾರಾಗಿ, ಸೌವ್ವಾ ಒಂಬತ್ತಕ್ಕ ವಗ್ಗರಣಿ ಅನ್ನ ತಿಂದು, ಡೈಯಾಬೆಟಿಸ್ ಗುಳಗಿ ನುಂಗಿ,  ಕೈಯಾಗ ಪೇಪರ್ ಹಿಡದಕೊಂಡು ಸಾಬಣ್ಣನ ಬರುವಿಕೆಗೆ ಕಾಯಿಕೋತ ಕುತೆ.  ಪೇಪರ್ ಓದಿಮುಗುಸೋದ್ರಾಗ ಸೌವ್ವಾ ಹತ್ತಾಯಿತು. ಸಾಬಣ್ಣನ ಸುದ್ದಿ ಇಲ್ಲ. ಇರಲಿ ಬಿಡು ಬರ್ತಾನ ಅಂತ ನನಗ ನಾನೇ ಸಮಾಧಾನ ಮಾಡಿಕೊಂಡು ವಾಟ್ಸ್ ಅಪ್ ನೋಡಲಿಕ್ಕೆ ಸುರುಮಾಡದೆ. ಪೌಣೆ ಹನ್ನೋಂದಾಯಿತು ಏನೂ ಸುದ್ದಿಇಲ್ಲ. ಅಷ್ಟೋತಕ್ಕ ನನ್ನಾಕಿ  ಬಂದು, ಇನ್ನು ಈ ಮಂದಿ ಬರಲಿಲ್ಲಲ್ಲ? ಹಿಂಥವರೆಲ್ಲಾ ಹಿಂಗೆ ಅಂತ ತನ್ನ ಬ್ರಾಂಡೆಡ್ ಜನರಲೈಸ್ಡ ಸ್ಟೇಟಮೆಂಟ್ ಕೊಟ್ಲು. ಈ ವೇಳ್ಯಾಕ್ಕ ಟ್ರಾಫಿಕ್ ಭಾಳ ಇರತದ, ಬರ್ತಾರ ತೋಗೊ, ಅಂತ ಅಕಿಗೆ ಸಮಾಧಾನ ಮಾಡದೆ.

ಹನ್ನೋಂದುವರಿ ಆದರನೂ ಸಾಬಣ್ಣ ಪತ್ತೆಇಲ್ಲ. ಇಕಿ ಮತ್ತ ಅಡಿಗಿಮನಿಕಡೆಇಂದ ಬಂದ್ಲು. ಬರಲಿಲ್ಲಲರಿ ಈ ಮಂದಿ ಇನ್ನೂಽಽ? ಫೋನರೆ ಮಾಡಬಾರದ? ನಾ ಹೇಳಿದ್ರೆ ಮಾಡಬೇಕೆನು, ನೀವೆ ತಿಳಿದುಕೊಂಡು ಮಾಡಬೇಕು, ಸುಮ್ಮಗ ಆ ಮೊಬೈಲ್ ಕೈಯಾಗ ಹಿಡಿದುಕೊಂಡು ಕುತಿರತೀರಿ. ನನ್ನ ತಲೀಗೂ ಬಂದಿತ್ತು ಫೋನ್ ಮಾಡಬೇಕಂತ  ಅದ್ರ ‘ಬಾಲ್ ಇಜ಼್ ಇನ್ ಹಿಸ್ ಕೋರ್ಟ’ ಅಂತ ಸುಮ್ಮ ಇದ್ದೆ. ಈಗ ಮಾಡಲೇಬೇಕು ನಿರ್ವಾಹವಿಲ್ಲ, ಆರ್ಡರ್ ಆಗೇದ. ಫೋನಮಾಡಿದೆ, ಅದೇ ಗೋಳು. ‘ಯ್ಯಾವ ಕರೆಯನ್ನು ಸ್ವೀಕರಿಸುತ್ತಿಲ್ಲ’ ಅಂತ ಉಲುಯಿತು.

ಮತ್ತ ಹದಿನೈದು ಮಿನಿಟ್ ಬಿಟ್ಟು ಫೋನು ಮಾಡಿದೆ. ಸಾಬಣ್ಣ ರಿಸಿವ್ ಮಾಡಿದ. ಏನ್ ಸಾಬಣ್ಣ, ಠೀಕ ಹತ್ತಗಂಟೆಗೆ ಬರತೀನಿ ಅಂದಿದ್ದರಿ, ಹನ್ನೇರಡಾಯಿತು ಇನ್ನೂ ಬಂದಿಲ್ಲ? ಏನು ಸಮಾಚಾರ? ಅಂತ ದಬಾಯಿಸಿದೆ. ಶ್ವಾಮಿ, ನಂದುಕು ಗಾಡಿ ಎರಡು ಪೈಯ್ಯಾ ಪಂಚರ್ ಆಗಬುಟೈತೆ. ಪಂಚರಹಾಕಿಸಿಕೋಂಡು ನಾಳಿಕು ಬರತೆವೆ. ಅಲ್ಲಯ್ಯ ಬೆಂಗಳೂರಾಂಥ ಊರಾಗ ಒಂದು ಪಂಚರ ತಗಿಲಿಕ್ಕೆ ೨೪ ತಾಸುಬೇಕಾ? ನೂರಾರು ದುಕಾನ ಇವೆ, ಮಾಡಿಸಿಕೋಂಡು ಬರಬಾರ್ದಾ? ಅದು ಅಂಘೆ ನೈ ಶ್ವಾಮಿ, ನಮ್ಮದುಕು ಭೈಯ್ಯಾ ಅಂದ್ರೆ, ಹಮಾರಾ ಅಬ್ಬಾಕಾ ಮೊದಲನೇ ಬೀಬಿಕಾ ಬಡಾ ಲಡಕಾ. ಇವತ್ತು  ಅವಂದು ಶಾಪ್ ಕ್ಲೋಜ್ ಅದಕ್ಕೆ ಶ್ವಾಮಿ, ಅಲ್ಲಾ ಕಸಮ್, ನಾಳೆಗೆ ಬರತೇವೆ.

ಇನ್ನ ಇವನಕೂಡಿ ಮಾತಾಡೊದು ಉಪಯೋಗವಿಲ್ಲ ಅಂತ ತಿಳಿದು, ನೋಡು ಸಾಬಣ್ಣಾ, ಸುಮ್ಮಗೆ ಅಲ್ಲಾ ಕಸಮ್ ಅನಬೇಡ. ನೀವು ಹೀಗೆ ಅಲ್ಲಾನ ಹೆಸರು ತೊಗೊಂಡು ಕೆಲಸಮಾಡಲ್ಲಾ, ಅದಕ್ಕೆ ನಿಮ್ಮ ಆ ಅಲ್ಲಾ ನೀವು ದಿನಕ್ಕ್ ಐದುಸಲ ಕರದ್ರೂ ಬರಂಗಿಲ್ಲ. ಹಾಗಲ್ಲ, ಶ್ವಾಮಿ, ನೋಡತಾ ಇರಿ ನಾಳೆಕು ಠೀಕ ದಸ್ ಬಜೆ ನಿಮದುಕು ಮನೆಯಲ್ಲಿ ಇರತೇವೆ.  ಫೋನ್ ಇಟ್ಟೆ. ಈ (ಶುಭ?) ಸಮಾಚಾರವನ್ನ ನನ್ನ ಹೆಂಡತಿಗೆ ತಿಳಸಲಿಕ್ಕೆ ಅಡಿಗಿ ಮನೀಗೆ ಹೋದೆ. ನೊಡವ್ವಾ, ಇವತ್ತೂನು ನೀನು ನಿನ್ನ ರಾಮದೇವ್ ಬಾಬಾ ಹೇಳಿದಾಂಗ ಮ್ಯಾಲೆ ಕೆಳಗ ಓಡಾಡಬೇಕಾಗತದ, ಪಂಪ್ ಅವರು ಇವತ್ತ ಬರಂಗಿಲ್ಲ. ಈ ಮಂದಿ ಯ್ಯಾವಾಗಲೂ ಹಿಂಽಗೆ ಹೇಳಿದ್ ದಿವಸ್ ಬರಾಂಗೇಇಲ್ಲ. ನಾಳ್ಯೂ ಬರಲಿಲ್ಲಾಂದ್ರ ಅವನನ್ನ ಬಿಟ್ಟು ಬ್ಯಾರೆಅವರಿಗೇ ಹೇಳೋಣ ಅಂತ ತೀರ್ಪು ಕೊಟ್ಟಳು.  

ಮರುದಿವಸನೂ ಮುಹೂರ್ಥಕ್ಕ ಸರಿಯಾಗೆ ಲಗ್ನದ ವರ ತಯ್ಯಾರಾಧಾಂಗ ಠೀಕ ಹತ್ತಕ್ಕ ತಯ್ಯಾರಾಗಿ ಬ್ರೇಕಫಾಸ್ಟ ಮುಗಿಸಿ, ಡೈಯಾಬೆಟಿಸ್ ಗುಳುಗಿ ನುಂಗಿ, ಸಾಬಣ್ಣನ ಸಲುವಾಗಿ ಕಾಯಿಕೊತ ಕುತೆ. ಸವ್ವಾ ಹತ್ತಕ ಸಾಬಣ್ಣಾನ ಫೋನ್ ಬಂತು. ರಿಸೀವ್ ಮಾಡಿ ಹಲೋ ಸಾಬಣ್ಣ, ಎಲ್ಲಿದ್ದಿರಾ? ಅಂತ ಕೇಳಿದೆ. ಶ್ವಾಮಿ ಸ್ವಲ್ಪ ಮಾಫ್ ಮಾಡಬೇಕು, ಇವತ್ತು ಬರಕ್ಕಾಗಲ್ಲಾ, ಇವತ್ತು ನಂದುಕ್ಕೆ ನಮಾಜ಼್ಗೆ ಹೋಗಭೇಕು. ಆಜ ಜುಮ್ಮಾಅಂತ ಭೂಲ್ ಗಯಾಥಾ. ಅಲ್ಲಾ ಸಾಬಣ್ಣಾ, ಅರ್ಧಾ ಗಂಟೆ ಕೆಲಸ ಅಂತಿಯಾ ನಮಾಜ್ ಮುಗಿಸಿಕೊಂಡು ಬಾ. ವೈಸಾನೈ ಶ್ವಾಮಿ, ನಂದುಕು ಹೋಪಲೇಸಪಾಳ್ಯಾದಿಂದ (ಓಬಳೇಶ್ವರನಪಾಳ್ಯ ಇವನ ಬಾಯಾಲ್ಲಿ ಹೋಪಲೇಸಪಾಳ್ಯ ಆಗಿತ್ತು) ನಿಂದುಕು ಮನೇಗೆ ದೀಢ ಗಂಟೆ ಆಗತದೆ, ನಾವು ಕೆಲಸಾ ಮಾಡಕ್ಕೆ ಶುರು ಮಾಡದ್ರೆ ಕತ್ತಲಾಗತದೆ. ಅದಕ್ಕೆ ಶ್ವಾಮಿ ನಾಳೆ ಸಬೇರೆಕು ಆತಾ ಶ್ವಾಮಿ, ಅಲ್ಲಾ ಕಸಮ್.

ಅಲ್ಲಾ ಸಾಬಣ್ಣಾ, ಅಲ್ಲಾ ಕಸಮ್, ಮುಲ್ಲಾ ಕಸಮ್ ಅಂತ ಹೇಳಿ ಅಲ್ಲಾಗೆ ಅಪಮಾನ ಮಾಡಬೇಡ. ನೀ ಕಸಮ್ ಉಳಿಸಿಕೊಳ್ಳಲ್ಲ. ನಾಳೆ ಠೀಕ ಹತ್ತು ಗಂಟೆಗೆ ಬರದಿದ್ದರೆ, ಆರ್ಡರ್ ಕ್ಯಾನಸಲ್. ನಹಿ ಶ್ವಾಮಿ, ಹಮಾರಾ ವಾದಾ, ನಾಳೆಕು ಜರೂರ ಬರತೀವಿ ಅಂತ ಹೇಳಿ ಫೋನ್ ಕಟ್ ಮಾಡ್ದ. ನನ್ನಕಿ ಬಾಜೂಕೆ ನಿಂತಿದ್ಲು, ಬಿಟ್ಟುಬಿಡ್ರಿ ಇವಗ, ಬ್ಯಾರೆ ಅವರಿಗೆ ಫೋನ್ ಮಾಡ್ರಿ. ಬ್ಯಾರೆ ಅವರೂನು ಎರಡು ದಿನಾ ತೊಗೊಳ್ಳವ್ರೆ. ಇವಾ ನಾಳೆ ಮಾಡಕೊಡತಾನ್ ಬಿಡು ಅಂತ ಸಮಾಧಾನಮಾಡಿದೆ. ಆದ್ರೂ ಆಕಿಗೆ ಸಮಾಧಾನ ಆಗಲಿಲ್ಲ. ಆಕಿಗೆ ಪರಿಸ್ಥಿತಿ ಬಾಯಾಂದು ಬಿಸಿ ತುಪ್ಪ ಇದ್ದಾಂಗ ಆಗಿತ್ತು, ನಾ ಅಕಿ ಹೇಳಿದ್ದವನ ಕಡೇನೆ ವ್ಯಾಪಾರ ನಡಿಸಿನಿ. ಅದಕ್ಕ ಸ್ವಲ್ಪ ಗಪ್ಪ ಇದ್ದಾಳ. ಖರೆ ಹೇಳಬೇಕಂದ್ರ ನನಗ ಈ ಸಾಬಣ್ಣನ ಮ್ಯಾಲೆ ‘ನಂದುಕೆ ಪ್ಯಾರಗೆ ಆಗಬುಟೈತೆ’ ಆಯಿತು. ಅವಂದು ಮಲತಾಯಿ ಮಗನ ಅಂಗಡಿಗೆ ವ್ಯಾಪಾರ ಆಗಬೇಕಂತ ಮತ್ತ ನಮಾಜ್ ತಪ್ಪಬಾರದು ಅಂತ ತನ್ನ ವ್ಯಾಪಾರನ್ನೇ ಮುಂದಕ್ಕ ಹಾಕ್ದ. ನನ್ನಾಕಿದು ಮ್ಯಾಲೆ ಕೆಳಗ ಒಡಾಡೋದು ಮತ್ತೋಂದು ದಿವಸ ಮುಂದವರಿಯಿತು.

ಮರುದಿವಸ ಕರೆಕ್ಟಾಗೆ ೧೦ಕ್ಕ ಸಾಬಣ್ಣ ಬಂದ, ಜೋಡಿ ಒಬ್ಬ ಸಣ್ಣ ಹುಡುಗನ್ನ ಕರದುಕೊಂಡು ಬಂದಿದ್ದ. ಯಾರು ಸಾಬಣ್ಣ ಇವನು ಅಂತ ಕೇಳಿದೆ. ನಂದುಕು ಬೇಟಾ ಶ್ವಾಮಿ. ಅಲ್ಲಯ್ಯ, ಇವಾ ಸಾಲಿಗೆ ಹೊಗಬೇಕು, ನೀ ಅವನಗ ಕೆಲಸಕ್ಕ ಕರೆದುಕೋಂಡು ಬಂದಿದೀಯ? ನೈ ಶ್ವಾಮಿ, ಸಬೇರೆಕು ಶಾಮಕೋ ಎರಡು ಸಲ ಮಸಜಿದ್ ಹೊಗತಾನೆ, ಅಲ್ಲಿ ನಮ್ಮ ಮುಲ್ಲಾ ಇವಂಗೆ ಪಾಠಾ ಹೇಳಿಕೊಡತಾರೆ. ನಾನು ಇವನ್ನ ಮುಲ್ಲಾ ಮಾಡತೀನಿ ಶ್ವಾಮಿ. ಅಬ್ಬಾ, ಏನು ನಿಶ್ಚಯ!! ನಾ ಆ ಹುಡಗನಿಗೆ ಹೆಸರು ಎನು ಅಂತ ಕೇಳಿದೆ. ಅವನು ಮಾತಾಡಲೇಇಲ್ಲ.

ಸಾಬಣ್ಣಾನೆ ಹೇಳಿದ: ಅಬ್ದುಲ್ಲಾ ಅಂತ ಶ್ವಾಮಿ, ನಾವು ಅವನ್ಗೆ ಮುನ್ನಾ ಅಂತ ಕರಿತಿವೆ. ಅವನು ಅದೇ ತನ್ನ ಹೆಸರು ಅಂತ ಅಂದುಕೊಂಡು ಬಿಟ್ಟಿದ್ದಾನೆ. ಸಾಬಣ್ಣ ಮುನ್ನಾನ ಜೊತೆ ಕಂಟ್ರೋಲರ್ ಫಿಕ್ಸ ಮಾಡಿದಾ. ಎಲ್ಲಾಕೂಡಿ ಎರಡು ತಾಸು ಹಿಡಿತು. ನಾ ರೊಕ್ಕ ಕೊಟ್ಟೆ ನನ್ನ ಹೆಂಡತಿ ಮುನ್ನಾಗ ಮೈಸೂರ ಪಾಕ, ಮಿಕ್ಚರ ಅಂತ ಏನೇನೂ ಕೊಟ್ಟಲು. ಸಾಬಣ್ಣ ನನ್ನ ಹೆಂಡತಿಗೆ ಕಂಟ್ರೋಲರ್ ಹ್ಯಾಂಗ ಆಪರೇಟ್ ಮಾಡಬೇಕು ಅಂತ ಎರಡೆರಡು ಸಲ ತೋರಿಸಿಕೊಟ್ಟ. ನನ್ನ ಹೆಂಡತಿ ಮಾರಿಮ್ಯಾಲೆ ಮಂದಹಾಸ ಮೂಡಿತು. ಆಪರೇಶನ್ ಸಕ್ಸಸಫ಼ುಲ್.

ಹಿಂಗೆ ದಿನಗಳು ಕಳಿದವು. ನನ್ನ ಹೆಂಡತಿಗೆ ದಿನಾಲೂ ಪಂಪ್ ಚಾಲು ಆಯಿತೋ ಇಲ್ಲವೋ ಅಂತ ಲಕ್ಷ ಇಡೋದೆ ಒಂದು ಕೆಲಸವಾಯಿತು. ನಡು ನಡುವೆ ಮರತಬಿಡಕ್ಕಿ. ಇವತ್ತ ಪಂಪ್ ಮುಂಜಾನೆ ಶುರು ಆಗಿತ್ತೇನು? ಅಂತ ನನಗ ಕೇಳಕ್ಕಿ, ಮತ್ತ ತನ್ನಷ್ಟಕ್ಕ ತಾನೇ, ನಿಮಗರೆ ಎಲ್ಲಿ ಲಕ್ಷ, ನೀವಾಯಿತು ನಿಮ್ಮ ಆ ಕಂಪೂಟರ್ ಆಯಿತು, ಮನಿಕಡಿಗೆ ಲಕ್ಷೇ ಇರಂಗಿಲ್ಲ ಅಂತ ಬೈಯಕ್ಕಿ. ಅಲ್ಲ, ಆ ಮೂರು ಲೈಟ್ ಹತ್ತಿದ್ದರ ತುಂಬೇದ ಅಂತ ಅಷ್ಟು ನೋಡಬಿಡು. ಹೇಳಿದ್ದೇ ತಪ್ಪಾಯಿತು, ನೀವು ನಿಮ್ಮ ಕಂಪೂಟರ್ ಮುಂದಿಂದ ಎದ್ದು ನೋಡಬಾರದೇನು? ಎಲ್ಲಾ ನಾನೇ ಮಾಡಬೇಕೆನು?

ಮತ್ತೋಮ್ಮೆ ಸಹಸ್ರನಾಮ. ಕೆಳಗಹೋಗಿ ನೊಡಕೊಂಡು ಬಂದ್ಲು. ಮುಂಜಾನೆ ಹತ್ತಿತ್ತಂತ ಕಾಣಸ್ತದ, ಎಲ್ಲಾ ಲೈಟ್ ಆನ್ ಅವ. ಅದಕ್ಕೇ ಹೇಳೋದು, ಮನಿಕಡೆ ಲಕ್ಷ ಇಡ್ರಿ ಅಂತ. ಎಲ್ಲಾದಕ್ಕೂ ನಾನೆ ‘ಮ್ಯಾಲೆ-ಕೆಳಗ’ ಒಡಾಡಬೇಕು. ಇನ್ನೋಂದು ಸಲ, ಇವತ್ತ ಮನಿಗೆ ಪೌಣೆ ಮಂದಿ ಬರೋರ ಇದ್ದಾರ, ಸ್ನಾನ-ಸಂಡಾಸಕ್ಕೆ ನೀರು ಭಾಳ ಖರ್ಚು ಆಗತಾವ, ನಳಾನೂ ಬಂದದ, ನಾ ‘ಕೆಳಗ ಹೋಗಿ’ ಪಂಪ್ ಚಾಲು ಮಾಡತೀನಿ. ಮತ್ತೋಂದು ಸಲ, ಇವತ್ತ ಚಾದರ ಅಬ್ರ್ಹಾಭಾಳವಗದೀನಿ, ವಾಶಿಂಗ್ ಮಶಿನೂ ಭಾಳ ನೀರು ತೊಗೊತದ, ಟ್ಯಾಂಕ್ ಎಲ್ಲಾ ಖಾಲಿ ಆಗಿರತದ ನಾ ‘ಕೆಳಗ ಹೋಗಿ’ ಪಂಪ್ ಚಾಲು ಮಾಡತೀನಿ.

ಹಿಂಗೆ ದಿನಾಲೂ ಏನಾರೆ ಒಂದು ಕಾರಣಹೇಳಿ ‘ಕೆಳಗ ಹೋಗಿ’ ಪಂಪ್ ಚಾಲು ಮಾಡತೀದ್ಲು. ಒಟ್ಟನಾಗ ಇಕಿದು ‘ಕೆಳಗ-ಮ್ಯಾಲೆ’ ಒಡಾಡೋದು ತಪ್ಪಲಿಲ್ಲ. ಅದನ್ನ ನೋಡಿ ನನಗ ಆ ಸಾಬಣ್ಣಗ ರೊಕ್ಕಕೊಟ್ಟು ಕಂಟ್ರೋಲರ್ ಹಾಕಿಸ್ಸಿ ತಪ್ಪು ಮಾಡಬಿಟ್ಟೆ ಅಂತ ಅನಸಲಿಕ್ಕೆ ಹತ್ತೇದ. ನಿಮ್ಮ ಮನಿಯಾಕಿ ನಿಮಗ ಈ ಸಂಪು-ಪಂಪು-ಕಂಟ್ರೋಲರ್ ಅಂತ ಏನಾರೆ ಹೇಳಿದ್ರ, ನನ್ನ ಅನುಭವ ಅವರಿಗೆ ತಿಳಿಸಿ ರೊಕ್ಕಾ ಉಳಸಕೊಳ್ಳರಿ, ಅದು ಮೀರಿ ಕಂಟ್ರೋಲರ್ ಹಾಕಿಸಿದ್ರ, ನಿಮಗೆ ದೇವರು ಒಳ್ಳೆದು ಮಾಡಲಿ.

ಹಾ, ನಿಮಗೇನಾದ್ರ ನಮ್ಮ ಸಾಬಣ್ಣನ ಫೋನ ನಂಬರ್ ಬೇಕಾದ್ರ ಕೇಳ್ರಿ, ತಿಳಸತೀನಿ.

‍ಲೇಖಕರು Avadhi

June 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: