ಬಸವನಗೌಡ ಹೆಬ್ಬಳಗೆರೆ
**
ಗಳಿಸಿಹರು, ಸಿಕ್ಕಾಪಟ್ಟೆ ಗಳಿಸಿಹರು
ಸಾವಿರ ಸಾಲದು ಲಕ್ಷ ; ಲಕ್ಷ ಸಾಲದು ಕೋಟಿ!
ಕೋಟಿಯೂ ಸಾಲದು ಕೋಟಿ ಕೋಟಿ…!!
ಬೇಕುಗಳಿಗೆ ಬ್ರೇಕು ಹಾಕದೇ,
ಗಳಿಕೆಯೇ ಜೀವನವೆಂದು
ಆಯುಷ್ಯವ ಕಳೆದರು.
ಆದರೂ ಕೂಡ
ನೆಮ್ಮದಿಯ ಅಕೌಂಟಿನಲಿ
ಹಲವರದ್ದು ‘ಜೀರೋ ಬ್ಯಾಲೆನ್ಸ್..’!
ಜೀವನದ ಸಣ್ಣಪುಟ್ಟ ಸಂಗತಿಗಳಲ್ಲೇ
ಖುಷಿ ಕಾಣಲಿಲ್ಲ
ಐಶಾರಾಮಿ ವಸ್ತುಗಳಲ್ಲೇ
ಖುಷಿಯ ಹುಡುಕುತ್ತಾ ಹೊರಟರು
ಆಸೆಗಳಿಗೆ ಕಡಿವಾಣ ಹಾಕಲೇ ಇಲ್ಲ
ದುರಾಸೆಯ ಕೂಪದಲ್ಲಿ ಬಿದ್ದು
ಸಮಯ ವ್ಯಯಿಸಿ
ಗಾಳಿ ಗುದ್ದುವ ಕಾರ್ಯ ಮಾಡಿವಂತವರ
ಖುಷಿಯ ಬ್ಯಾಲೆನ್ಸಿನಲಿ
ಹಲವರದ್ದು ’ಜೀರೋ ಬ್ಯಾಲೆನ್ಸ್’!
ದುಗ್ಗಾಣಿಯ ದಾಹಕ್ಕೆ
ಬಡಬಗ್ಗರೆನ್ನದೇ ಶೋಷಿಸಿ, ಗಳಿಸಿ
ಮಾಡಿದ ಪಾಪ ಶಮನಕ್ಕೆ
‘ಆ ದೇವರು’ ‘ಈ ದೇವರು’
‘ಆ ಯಾತ್ರೆ’ “ಈ ಯಾತ್ರೆ’ಯೆಂದು ಮಾಡಿ
ದೇವರಿಗೆ ಧನ ಕನಕ, ವಜ್ರ ವೈಢೂರ್ಯಗಳ
ದಾನಗೈದು ಹೆಸರು ಕೆತ್ತಿಸಿಕೊಂಡರು
ಇಂತವರು ಭಾವಿಸಿರಬಹುದು
‘ನಮಗೆ ಪುಣ್ಯದ ಕ್ರೆಡಿಟ್ ಆಗಿದೆ’ ಎಂದು(?)
ಅದರೆ
ಕರುಣಾಮಯಿ ದೇವರ ಲೆಕ್ಕದಲ್ಲಿ
ಅವರದ್ದು ‘ಜೀರೋ ಬ್ಯಾಲೆನ್ಸ್’!
ಅಧಿಕಾರ ಇದ್ದಾಗ ಜನರಿಂದ
ಫ್ಲೆಕ್ಸ್ ಹಾಕಿಸಿಕೊಂಡು
ಜೈಕಾರ ಕೂಗಿಸಿಕೊಂಡು
ಬಿರುದಾವಳಿಗಳನು ಹೇಳಿಸಿಕೊಂಡು
‘ಜನಮೆಚ್ಚಿದವ’ ಎಂದು ಕೊಚ್ಚಿಕೊಳ್ಳುತ್ತಿದ್ದ
ವ್ಯಕ್ತಿಯು ಸೋತಾಗಲೇ ಗೊತ್ತಾಗಿದ್ದು
ಜನರ ಆಂತರ್ಯದ ಅಭಿಮಾನದ ಲೆಕ್ಕದಲಿ
ಇವರ ಬಗ್ಗೆ ಇದ್ದಿದ್ದು
ಬರೀ ‘ಜೀರೋ ಬ್ಯಾಲೆನ್ಸ್’!
ಬೆಣ್ಣೆಯಂತಹ ಬಾಯ್ಮಾತಿನಲೇ
ಜನರ ಮನಗೆದ್ದವನ ಹೃದಯವಂತಿಕೆ ಕಷ್ಟಕಾರ್ಪಣ್ಯದಲಿ ಚೂರು ಕರುಣೆ ತೋರಿ
ಸಹಾಯಹಸ್ತ ಚಾಚದವನ ನೋಡಿದಾಗ
ತಿಳಿದದ್ದು,
ಇವನ ಮನದಾಳದ ಮೌಲ್ಯಗಳದ್ದು
ಬರೀ ಜೀರೋ ಬ್ಯಾಲೆನ್ಸ್!
ಹೊರನೋಟಕೆ ಬೆರಗಾಗಿ
ಬಾಹ್ಯ ಸೌಂದರ್ಯಕೆ ಮರುಳಾಗಿ
ಕೈ ಹಿಡಿದು ಬಾಳಲು ನಿರ್ಧರಿಸಿ
ಕರುಳ ಬಳ್ಳಿಯ ಸಂಬಂಧಗಳನು ತ್ಯಜಿಸಿ
ಜೀವನದ ಸಾರವನು ಅನುಭವಿಸ
ಹೊರಟವನಿಗೆ
ಅದು ನಿಸ್ಸಾರವಾದಾಗ ಬಯಸಿ ಬಂದವರಿಂದ
ಪಡೆದ ಪ್ರೀತಿಯಲಿ ಇವನದ್ದು
ಬರೀ ‘ಜೀರೋ ಬ್ಯಾಲೆನ್ಸ್..’!
ಲೆನ್ಸ್ ಹಾಕಿ ಹುಡುಕಿಯೂ
ಪರಿಪೂರ್ಣ ಒಳ್ಳೆಯದು, ಕೆಟ್ಟದ್ದು;
ಒಳ್ಳೆಯವರ, ಕೆಟ್ಟವರ ಸಂಖ್ಯೆಯಲಿ
ಇರಬಹುದು ‘ಜೀರೋ ಬ್ಯಾಲೆನ್ಸ್..’!
ಯಾರನ್ನೋ ಮೆಚ್ಚಿಸಲು
ಸಾಗಿಸುವಂತಾಗದಿರಲಿ ನಮ್ಮ ಬಾಳು
ಅಗ
ಅನುಭವಿಸಬೇಕಾದೀತು ಬರೀ ಗೋಳು..!
ಪುಣ್ಯ ಪಾಪವಷ್ಟೇ ನಮ್ಮ ಪಾಲು
ಬಾಳ ಬಂಡಿಯು ಸರಿಯಾಗಿ ಸಾಗಲು
ಬ್ಯಾಲೆನ್ಸ್ ಬೇಕು;
ಬ್ಯಾಂಕಿನಲ್ಲೂ ಇರಬೇಕು
ನಿಯತ್ತಿನಲಿ ದುಡಿದ ಬ್ಯಾಲೆನ್ಸ್
ದುರ್ಮಾರ್ಗದಲಿ ಕೋಟಿ ಗಳಿಸಿದರೂ
ಅದು ಕೊಡುವುದಿಲ್ಲ
ನೆಮ್ಮದಿ, ಸುಖ ಶಾಂತಿ..!
ಇದಕ್ಕಿಂತ ಎಷ್ಟೋ ಪಾಲು ಮೇಲು
‘ಜೀರೋ ಬ್ಯಾಲೆನ್ಸ್..!
0 ಪ್ರತಿಕ್ರಿಯೆಗಳು