ನಭಾ ಒಕ್ಕುಂದ
—
ದಿನದಿನವೂ ತಾನಿರುವಲ್ಲಿಯೇ
ಜೀವಗಳು ಬಂದು ಆಹಾರವಾಗಬೇಕೆಂದ
ಆ ಕಾಡು ನಿಯಮವನಿನ್ನು ಮರೆಯುವ
ಅಲ್ಲಿ ಹಸಿವೆಂಬ ಹೆಬ್ಬಾವು ಒಡಲು ನುಂಗುತ್ತಿತ್ತು
ಬೇಟೆಯಾಡದ ಆಲಸ್ಯ, ರಾಜತ್ವದ ಅಹಂಕಾರವಿತ್ತು
ಒಂದು ಪುಟ್ಟ ಮೊಲ ಸಾಕಾಯಿತು
ಹಾದಿಯಲಿ ಹಾಳು ಬಾವಿಯೊಂದು ಒದಗಿತು,
ನೆರಳನ್ನೂ ನೆರಳೆಂದು ತಿಳಿಯಲಾಗದ ಸಿಂಹ
ತನ್ನ ಅಹಮ್ಮಿನ ಪ್ರಪಾತಕೆ ನೆಗೆಯಿತು
ಪ್ರತಿರೋಧದ ಸಣ್ಣ ಪಲುಕಿನಲೂ ಗೆಲುವಾಯಿತು.
ಆ ದೂರದ ಏಳು ಸಮುದ್ರದಾಚೆ
ಹೆಣ್ಣುಬಾಕನಿದ್ದನಂತೊಬ್ಬ
ದಿನಕ್ಕೊಬ್ಬರಂತೆ ಮುಕ್ಕುತ್ತಿದ್ದವ
ಶವವಾಗಬೇಕಿದ್ದ ಶಹಜಾದೆ ಕಥೆ ಹೇಳಿದಳು
ಕಥೆಯಲ್ಲೇ ಅವನ ತೂಗಿದಳು, ಕಥೆಯಾದಳು
ಅನ್ಯಾಯವನು ಕಲೆ ಗೆದ್ದ ಕಥೆಯೊಂದು
ಲೋಕ ಲೋಕಾಂತರಕೆ ಚಾಚಿ, ಕಣ್ಣೊರೆಸಿತು.

ಇಂದಿಲ್ಲಿ,
ತಾಯ ಮಡಿಲು, ತಂದೆಯ ತೋಳು
ಗುರುವಿನ ಬೆರಳು, ಸ್ನೇಹದ ಮುಗುಳು
ಅಧಿಕಾರ ಪೀಠಗಳು, ಮಠ ಮಾನ್ಯಗಳು
ಅನಾಥ ಬಾಲೆಯರ ಪರಚಿ ಗೀರಿ ಹುದುಲಿಗೆಸೆದಿವೆ
ಕಾನೂನು ಸಾಕ್ಷಿ ಹುಡುಕುತ್ತ ಆಕಳಿಸುತ್ತಿದೆ
ಅದಕ್ಕೇ ಮತ್ತೆ, ಮೊಲದ ಜಾಣ್ಮೆ
ಶಹಜಾದೆಯ ಸ್ಥೈರ್ಯ ಮೊಗೆದುಕೊಳ್ಳಬೇಕಿದೆ
ಚರಿತ್ರೆ , ಮರುಕಳಿಸುವುದಲ್ಲ
ಸದಾ ನಡೆಯುತ್ತಿರುವುದು
0 ಪ್ರತಿಕ್ರಿಯೆಗಳು