ದತ್ತು ಕುಲಕರ್ಣಿ – ಸಿಡ್ನಿ, ಆಸ್ಟ್ರೇಲಿಯಾ.
**
ಮರಳದಂಡೆಯಲಿ ನಡೆಯುವಾಗ ಮೇಲೆ ರಣಬಿಸಿಲು
ಕೆಳಗೆ ಕಾಲಿಗೆ ಅಂಟಿಕೊಂಡ
ನನ್ನದೇ ಕಪ್ಪು ನೆರಳು
ಹಾಗೆ ಮುಂದುವರೆದರೆ ಬಂದು ಅಪ್ಪುವ ನೀರಿನ ಅಲೆ
ಬಂದು ಹೋಗುವ ಅಲೆಗೂ ನನ್ನ ನೆರಳಿಗೂ ಜಗಳ
ನೀರ ಅಲೆಗೊ ನೆರಳ ನುಂಗಿ ಹಾಕುವ ಉತ್ಸಾಹ
ನೆರಳಿಗೆ ನೀರ ಅಲೆಯ ಮೇಲೆ
ತುಣುಕು ತುಣುಕಾದರೂ ತನ್ನತನ ಉಳಿಸಿಕೊಳ್ಳುವ ತವಕ
ತನ್ನ ಕಪ್ಪು ಬಣ್ಣ ಬಿಟ್ಟುಕೊಡದ ದುಗುಡ
ಆದರೂ ಮುಂದೆ ನಡೆದರೆ
ಮೊಣಕಾಲು ತನಕ ನೀರು
ಚಣ ಮಾಯವಾದ ನೆರಳು ಇಲ್ಲೇ ಇದ್ದೇನೆ ಅಂತ ಮತ್ತೆ ಹಾಜರು
ಹೌದು ಆದರೆ ನನ್ನ ನೆರಳೀಗ ಬಣ್ಣದ ನೀರಬಿಂಬ
ಅಲೆಯೂ ಏರಿಳಿತಗಳಿಲ್ಲದ ಪ್ರಶಾಂತ
ಎರಡರಲ್ಲೂ ಸಮರ ಗೆದ್ದ ಭಾವ
ಬದಲಾವಣೆಯೆ ಜಗತ್ತಿನ ನಿಯಮ ಅನ್ನುವ ನೀರ ಅಲೆ- ನೆರಳು
ಜೀವಂತಿಕೆಯ ತೋರು ಬೆರಳು.
0 Comments