ನನ್ನ ಕಥೆಯೊಂದು ನಿನ್ನ ಎದೆಯೊಳಗೆ…

ಗೊರೂರು ಶಿವೇಶ್

ಕೆಲವರ್ಷಗಳ ಹಿಂದೆ ರಂಗಕರ್ಮಿ ಹಾಗೂ ಸ್ವತಹ ರಂಗಸಿರಿ ಸಂಸ್ಥಾಪಕರೊಬ್ಬರಾದ ಪಿ ಶಾಡ್ರಾಕ್ ನನ್ನನ್ನು ಭೇಟಿಯಾಗಿ ತಮ್ಮ ತೇರು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕಥೆಗಾರ ರಾಘವೇಂದ್ರ ಪಾಟೀಲರ ಮತ್ತೊಬ್ಬ ಮಾಯಿ ಕಥೆಯನ್ನಾಧರಿಸಿ ತಮ್ಮದೆ ಪರಿಕಲ್ಪನೆಯಲ್ಲಿ ಖ್ಯಾತ ರಂಗಕರ್ಮಿ ಮಹದೇವ ಹಡಪದರವರು ನಾಟಕವನ್ನಾಗಿಸಿ ಈಗ ಎಲ್ಲೆಡೆ ಪ್ರದರ್ಶಿಸುತ್ತಿದ್ದು ಅದು ಸಾಕಷ್ಟು ಜನರ ಮನಸ್ಸನ್ನು ಗೆದ್ದಿ ರುವುದಾಗಿ ತಿಳಿಸಿದರು.

ಒಂದು ಕಥೆ ಯನ್ನು ಅದರ ಪಾತ್ರ ಸನ್ನಿವೇಶ ಕಾಲಘಟ್ಟಕ್ಕೆ ಅನುಗುಣವಾಗಿ ಓದುವ ಒಂದು ಹೊಸ ರೀತಿಯ ಪ್ರಯತ್ನ ಎಂದು ಅವರು ತಿಳಿಸಿ ಕಥೆಯು ಹದಿಹರೆಯದ ಬಾಲೆಯ ಸುತ್ತ ಸುತ್ತುವುದರಿಂದ ವಿದ್ಯಾರ್ಥಿನಿಯರಿಗೆ ಇದು ಹೆಚ್ಚು ಇಷ್ಟವಾಗುವುದು ಆ ಕಾರಣಕ್ಕಾಗಿ ಕಾಲೇಜಿನಲ್ಲಿ ನಾಟಕದ ಪ್ರದರ್ಶನವನ್ನು ಏರ್ಪಡಿಸಲು ಸಹಕಾರ ಕೋರಿದ್ದರು. ಸಮಯಾವಕಾಶದ ಕೊರತೆ ರಾಘವೇಂದ್ರ ಪಾಟೀಲರನ್ನು ಅದುವರೆಗೂ ನಾನು ಹೆಚ್ಚು ಓದಿಕೊಳ್ಳದೆ ಇದ್ದದ್ದು ಓದುಗಬ್ಬದ ಬಗ್ಗೆ ನನಗೆ ಸ್ಪಷ್ಟ ಪರಿಕಲ್ಪನೆ ಇಲ್ಲದೇ ಇದ್ದ ಕಾರಣ ಕಾಲೇಜಿನ  ಮುಖ್ಯಸ್ಥರಿಗೆ  ಆ ನಾಟಕದ ಕುರಿತಾಗಿ ಮನವರಿಕೆ ಮಾಡಿ ಕೊಡಲಾಗದೆ ಕಾಲೇಜಿನಲ್ಲಿ ನಾಟಕ ಪ್ರದರ್ಶನ ಸಾಧ್ಯವಾಗಲಿಲ್ಲ. ಆದರೆ ಅದೇ ದಿನ ಸಂಜೆ ಹಾಸನ ನಗರದ ಸಿ.ಎಸ್. ಐ ಶಾಲಾ ಆವರಣದಲ್ಲಿ ರಂಗಸಿರಿಯ ಆಶ್ರಯದಲ್ಲಿ ಆ ನಾಟಕದ ಪ್ರದರ್ಶನವಾಯಿತು.

ಧಾರವಾಡ ಬೆಳಗಾವಿ ಜಿಲ್ಲೆಯ ಜವಾರಿ ಭಾಷೆಯ ಕನ್ನಡ ಅಧ್ಯಾಪಕ ಪಾಂಡುರಂಗ ಡಿಗಾಸ್ಕರ್, ತನ್ನ ಕಥನ ತಂತ್ರದ ವ್ಯಾಪ್ತಿಯೊಳಗೆ ಎಲ್ಲವನ್ನು ಕಂಡುಕೊಳ್ಳುವ ಲೇಖಕನೂ ಹಾಗೂ ಇಂಗ್ಲೀಷ್ ಅಧ್ಯಾಪಕನು ಆಗಿರುವ  ದಕ್ಷಿಣ ಕರ್ನಾಟಕದ  ಮೂರ್ತಿಗೆ  ತನ್ನೊಳಗೆ  ಆನಂದದ ಅನುಭೂತಿಯನ್ನು ದುಃಖದ ಸುನಾಮಿಯನ್ನು ಬಿಟ್ಟುಹೋದ ಕುಣುಕಾಲ ಹುಡುಗಿಯ ಜೀವನದ ಸಂಗತಿಗಳನ್ನು ಹಂಚಿಕೊಳ್ಳುವುದೇ ನಾಟಕದ ತಿರುಳು. 

ಆರಂಭದಲ್ಲಿ ಹೇಳುತ್ತಿರುವ  ಹಾಗೂ ಕೇಳುತ್ತಿರುವ ಭಿನ್ನ ಮನೋಭಾವದ ಇಬ್ಬರು ವ್ಯಕ್ತಿಗಳು ಕಡೆಯಲ್ಲಿ ಒಂದಾಗುವುದರ ಜೊತೆಗೆ ಪ್ರೇಕ್ಷಕರನ್ನು ಸಮ್ಮೋಹನಗೊಳಿಸಿ ತನ್ನೊಳಗೆ ಒಂದಾಗಿಸಿಕೊಳ್ಳುವ ಗಾಢವಾದ ಅನುಭವವನ್ನು ನಿರ್ದೇಶಿಸಿ ಪಾಂಡುರಂಗ ಡಿಗಾಸ್ಕರ್ ಪಾತ್ರದಲ್ಲಿ ನಟಿಸಿರುವ ಮಹದೇವ ಹಡಪದರವರು ಮತ್ತೊಬ್ಬ ನಟ ಜಗದೀಶ ನೆಗಳೂರು ಮೂಲಕ ಆದಿನ ಕಟ್ಟಿಕೊಟ್ಟಿದ್ದರು. ಕನ್ನಡ  ರಂಗಭೂಮಿಗೆ ಹೊಸತನ ನೀಡುವ ಸರಳ ರಂಗ ಸಜ್ಜಿಕೆಯ ಕಥ ನಿರೂಪಣಾ ವಿಧಾನದಲ್ಲಿ ಹಿಂದಿನ  ಹರಿಕಥೆ ಹಾಗೂ ಅಡುಗೂಲಜ್ಜಿಯರು ಹೇಳುತ್ತಿದ್ದ ಕಥಾ ವಿಧಾನಗಳನ್ನು ಅಳವಡಿಸಿ ಪ್ರೇಕ್ಷಕರಿಗೆ ತಮ್ಮ ಕಣ್ಣೆದುರಿಗೆ  ಕಥೆಯ ಸಾಲುಗಳು ಹಾದುಹೋದಂತೆ ನಿಧಾನವಾಗಿ ಝಾನ್ಸಿರಾಣಿ ಲಕ್ಷ್ಮಿಬಾಯಿ ಯಾ ಲಕ್ಷ್ಮಿ ಎಂಬ ಬಾಲಕಿಯನ್ನು ವೀಕ್ಷಕರ ಎದೆಯಲ್ಲಿ ಪ್ರತಿಷ್ಠಾಪಿಸಿದ್ದರು.

ಮುಂದೆ ಆ ಕಥೆ ಎಷ್ಟು ಕಾಡಲಾರಂಭಿಸಿತ್ತು ಎಂದರೆ ಆ ಮೂಲ ಕಥೆಯನ್ನು ಓದಲೇಬೇಕೆಂದು ಆಕಾಂಕ್ಷೆ ಮೂಡಿತು. ಹಾಸನ ಗ್ರಂಥಾಲಯದಲ್ಲಿ ಹುಡುಕಿದರೂ ಆ ಕೃತಿ ಸಿಗದೇ  ನಂತರ ಅನೇಕ ಕನ್ನಡ ಪುಸ್ತಕ ಮಳಿಗೆಗಳಲ್ಲಿ ಎಡತಾಕಿದರೂ ಸಿಗಲಿಲ್ಲ. ಬದಲಿಗೆ ರಾಘವೇಂದ್ರ ಪಾಟೀಲರ ಮತ್ತೊಂದು ಕೃತಿ ತೇರು ಕೃತಿ ಸಿಕ್ಕು ರಾಘವೇಂದ್ರ ಪಾಟೀಲರ ಬರವಣಿಗೆಯ ದಾಟಿ ದಕ್ಕಿತ್ತು. ಆ ಪ್ರತಿಯನ್ನು ಪಡೆಯಲು ಕೃತಿಕಾರ ರಿಂದ ಹಿಡಿದು ಭಿನ್ನ ಭಿನ್ನ ನೆಲೆಗಳಲ್ಲಿ ಪ್ರಯತ್ನಿಸಿದರೂ ಆ ಸಂದರ್ಭದಲ್ಲಿ ಅದು ಸಿಗಲಿಲ್ಲ. ಮುಂದೊಮ್ಮೆ ಅಕ್ಷರ ಬುಕ್ ಹೌಸ್ ನಲ್ಲಿ ಪುಸ್ತಕಗಳ ತಲಾಶಿ ನಲ್ಲಿದ್ದಾಗ ರಾಘವೇಂದ್ರ  ಪಾಟೀಲರ ಎಷ್ಟು ಕಾಡುತಾವ ಕಬ್ಬಕ್ಕೀ..ಸಿಕ್ಕಿತು. ಕುತೂಹಲಕ್ಕೆಂದು ಪುಟ  ಬಿಡಿಸಿದಾಗ  ಅಲ್ಲಿ ಹುಡುಕುತ್ತಿರುವ ಬಳ್ಳಿ ಕಾಲಿಗೆ ತೊಡರಿದಂತೆ ಮತ್ತೊಬ್ಬ ಮಾಯಿ ನೀಳ್ಗತೆ ಆ ಸಂಕಲನದಲ್ಲಿ ಇತ್ತು.

ಒಂದು ಕಥೆಯ ನಿಜವಾದ ಯಶಸ್ಸು ಅಡಗಿರುವುದು ಸಹೃದಯನ ಮನ ಹೊಕ್ಕು ಅದು ಅಲ್ಲಿ ಪ್ರತಿಷ್ಠಾಪನೆಗೊಂಡಾಗ. ಕಥೆಗಾರ ಚಿತ್ರಿಸಿದ ಪಾತ್ರಗಳ ನಲಿವು-ನೋವು ಸಂಕಟ ವಿಷಾದಗಳು ಓದುಗನ ಎದೆಯಲ್ಲಿ ಪ್ರತಿಧ್ವನಿಸಿದಾಗ. ಇಂಗ್ಲಿಷ್ ಅಧ್ಯಾಪಕನು ಮೂಲತಃ ಕಥೆಗಾರನಾದ ಮೂರ್ತಿ ಕಮರ್ಷಿಯಲ್ ಸಿನಿಮಾ ಧಾರವಾಹಿಗಳ ನಿರ್ದೇಶಕನಂತೆ ತಂತ್ರಗಳ ಮೊರೆ ಹೊಕ್ಕವನು.ಯಾವ ಸಂದರ್ಭಕ್ಕೆ ಯಾವ ಸನ್ನಿವೇಶ  ಸಂಭಾಷಣೆ ಇವುಗಳ ಬಗ್ಗೆ ಚಿಂತಿಸುವವನು. ಮುನ್ನುಡಿ ಬರೆದ ಎಚ್ಚೆಸ್ವಿ ಗುರುತಿಸಿರುವಂತೆ ಅವನಿಗೆ ಜೀವನವು ಕತೆಗಳನ್ನು ಬರೆಯಲು ಒದಗಿಬರುವ ರಾ ಮೆಟೀರಿಯಲ್ ಮಾತ್ರ. ಆತನ ಕಥೆ ಗಳ ಬಗ್ಗೆ ಆತನಿಗೆ ಅತಿಯಾದ ಅಭಿಮಾನವಿಲ್ಲ.” ಅವು ಉಬ್ಬೆಗೆ ಹಾಕಿದ ಕಸುಕು ಕಾಯಿಗಳು ಮಾಗಿ ಹಣ್ಣಾಗುವಂತೆ ಹಣ್ಣಾಗಿ ವಾಸನೆ ಪಡೆಯುವಂತೆ” ಎಂದು ಮೂರ್ತಿ ಹೇಳಿಕೊಳ್ಳುತ್ತಾನೆ. ಆದರೆ ಪಾಂಡುರಂಗ ಡಿ ಗಸ್ಕರ್ ಸ್ಥಳೀಯ ಜೀವನಕ್ರಮ ಸಾಂಸ್ಕೃತಿಕ ನೆಲೆಗಟ್ಟು ಮತ್ತು ಅಲ್ಲಿ ಬಳಸುವ ಜವಾರಿ ಭಾಷೆಯಲ್ಲಿ ಮುಳುಗಿದವನು‌. ಕಥೆ ಬೇರೆ ಜೀವನವೇ ಬೇರೆ ಎಂದು ವಾದಿಸುವನು. ಅನಿರೀಕ್ಷಿತವಾಗಿ ಎದ್ದುಬರುವ ಅನ್ಯರ ಜೀವನದ ವಿಷಾದಗಳನ್ನು ಪರಿಹಾರದ ಪರಿವೆಯಿಲ್ಲದೆ ಅದು ತನ್ನದೇ ಎನ್ನುವಂತೆ ಅನುಭವಿಸುವವನು. ವಿಭಿನ್ನ ಚಿತ್ತವೃತ್ತಿಗಳ ಪ್ರತಿನಿಧಿಗಳು ಮತ್ತು ಅವರ ಎರಡು ಬಗೆಯ ಕಥನಕ್ರಮಗಳು ಮುಖಾಮುಖಿಯು ಈ ಕಥೆಯಲ್ಲಿದೆ. ನಾಟಕದ ಯಶಸ್ಸಿನ ಮೂಲವಾದ ಜವಾರಿ ಭಾಷೆಯ ಝಲಕ್ ಹೀಗಿದೆ.

‘ಇರಲಿ, ಆತು… ಹಾಂ ನಾ ನಾಕ ವರಸ ಊರಾಗಿದ್ದೆ. ನಮ್ಮದು ಹಳೇ ಮನಿ.ಕಾಡುಗಲ್ಲಿನಿಂದ ಕಟ್ಟಿದ ಮೂರು ಮಾರು ದಪ್ಪಗಿನ ಗ್ವಾಡಿಗೋಳ ಮಣ್ಣಿನ ಮನೀ..ಮುಂದಕ ಒಂದು ದೊಡ್ಡ ತಲಬಾಗಲು… ಒಳಗ ಎಲ್ಲಾ ತೆಲೀ ಬಾಗೆನs ದಾಟೂಹಂತ |ಸಣ್ಣ ಸಣ್ಣ ಬಾಗಲಗೋಳು… ದಿಡ್ಡಿ ಬಾಗಲ ಅಂತ ಅನಬಹುದು. ಹೊರ ಗ್ವಾಡಿಗೆ ಬರೇ ಮಳಾ ದೀಡಮಳಾ ಅಗಲದ ಸಣ್ಣ ಸಣ್ಣ ಕಿಡಕಿಗೋಳು… ಮ್ಯಾಗ ಮಣ್ಣಿನಮೇಲಮುದ್ದಿಯ ಮಾಳಿಗಿ… ಬ್ಯಾಸಗೀ ದಿನದ ಮದ್ದಿನದ ವ್ಯಾಳೇದಾಗೂ ತಣ್ಣಗೆಇರತಾವು ಹಿಂತಾ ಮನಿಗೋಳು… ಆದರೆ ನನಗೆ ಮಾತ್ರ ತಣ್ಣಗ ಅನಸತಿದ್ದಿಲ್ಲ. ಕೆಲಸಸಿಗದ ಮನ್ಯಾಗs ಕುಂತು, ಮದ್ದಿನದ ಊಟಾ ಮುಗಿಸಿ… ಮನಿತುಂಬ ನೆಲೀನಿಂತಮಂದ ಬೆಳಕಿನಾಗ, ಬೆಳಕಿಂಡಿಗಳಿಂದ ಇಳದು ಬರತಿದ್ದ ಬಿಸಿಲಿನ ಕಂಬಗೋಳನನೋಡಿಕೊಂತ.. ಹಾಸಿಗೊಂಡು ಮದ್ದಿನದಾಗ ಮಲಗೂದಂದರ ನನಗೆ ಸಾಧ್ಯನಇರಲಿಲ್ಲ… ನಾ ಹಂಗ ಅಲ್ಲಿ ಒಳಗ ಮಲಕೊಂಡರ ಅದನ್ನ ನೋಡುವ ಅಪ್ಪನಮನಸು ಹೆಂಗ ಆಡೀತು! ಛೇ! ಹಾಂಗ ನೋಡಿದರೆ ಪಾಪ ಅಂವ ಭಾಳ ಸಂಪನ್ನಮನಶಾ… ಆ ದಿನದಾಗ ನನಗ ಮನಸಿಗೆ ಚುಚೂಹಂತಾ ಒಂದು ಒಂದು ಮಾತುಸೈತೇ ಮಾತಾಡಿದಂವ ಅಲ್ಲ… …ನಮ್ಮ ಅಂಗಳದ್ದೂ ಒಂದು ಮಜಾ! ಅದರ ದಂಡಿಗೆ ಉದ್ದಕ, ಮುಳ್ಳಕೊರೀಮತ್ತ ಕಳ್ಳಿಯ ಸಾಲಿನ ಬೇಲಿ.

ಆ ಬೇಲಿಯ ನಟ್ಟ ನಡಕ -ತಲಬಾಗಲ ಎದುರಿಗೆ-ಒಂದ ಅಕಬಂದ ಗೇಟು!… ಹಿಂದ ನಮ್ಮ ಅಜ್ಜ ಮುತ್ಯಾಗೋಳು ಪೇಶವೇ ಸೇನಾದಾಗಸುಬೇದಾರರು ಆಗಿದ್ದರಂತ. ನಮ್ಮ ಅಪ್ಪಗ ಅದರ ನೆನಪು ಯಾವಾಗಲೂ ನಿಗಿನಿಗೀಅಂತಿರತಿತ್ತು! ಹಂತಾ ಸುಬೇದಾರ ಮನಿತನದ ಮನಿಯ ತಲಬಾಗಲ ಅಂದರ ಹೆಂಗಇರಬೇಕು! ಸಣ್ಣ ದಿಡ್ಡಿ ಬಾಗಲಾ ಇಟ್ಟರ ಮರ್ಯಾದಿ ಬಂದೀತೂ! ಅದಕ್ಕ ನಮ್ಮಅಪ್ಪ ಕ್ವಾಟೀ ಬಾಗಲಿನಂಥಾ ತಲಬಾಗಲ ಇಡಿಸಿದ್ದ… ಇನ್ನ ತಲಬಾಗಲ ಎದುರಿಗೇಇದ್ದ ಅಂಗಳದ ಗೇಟು ಆಳುದ್ದ ಎತ್ತರಿತ್ತು… ಕಬ್ಬಿಣದ ಸಳಿಗೋಳ ಆ ಗೇಟಿನ್ಯಾಗಕುದರಿ ಹತ್ತಿದ ಸಿಪಾಯಿ ಕತ್ತಿ ಹಿರಕೊಂಡು ಕದನಾ ಮಾಡೂ ಸುಳವು ಇತ್ತು !ಹಿಂತಾ ಅಕಬಂದಾದ ಗೇಟು ಇದ್ದ ಅಂಗಳದ ಬೇಲಿ ಮಾತ್ರ ಜಾಲಿಯ ಮುಳ್ಳಕೊರೀಮತ್ತ ಕಳ್ಳಿಗಳ ಸಾಲಿನದು! ಅದೂ ಹೆಂತಾದ್ದು… ಹೆಸರಿಗೆ ಮಾತ್ರ ಬೇಲಿ! ನೀವು ಅಂಗಳಕ್ಕೆ ಬರಬೇಕೆಂದರ ಗೇಟಿನೊಳಗಿಂದನ ಬರಬೇಕಂತ ಇಲ್ಲ… ಅಂಗಳದಬೇಲಿಯ ಉದ್ದಕ ಎಲ್ಲಿ ಬೇಕಾದಲ್ಲಿ ಒಳಗ ಬರಬಹುದು… ಹಂಗ ಆ ಬೇಲಿಅಂಬುವುದು ಕಿಗ್ಗಳ ಆಗಿತ್ತು… ಎಲ್ಲಿ ಬೇಕಾದಲ್ಲಿ ದನಾ ಕರಾ ನುಗ್ಗಿ ಒಳಗ ಬರಲಿಕ್ಕೆಮುಕ್ತ ಅವಕಾಶ ಇದ್ದ ಆ ಬೇಲಿಯ ನಡಕ ಮಾತ್ರ ಆಳುದ್ದ ಎತ್ತರದ ಗೇಟು!

ಮೂಲತಃ ಕಥೆಯು ಕಥಾ ಹರಿಕಾರ ತಾನು ನಾಲ್ಕು ವಿಭಿನ್ನ ಸನ್ನಿವೇಶದಲ್ಲಿ ಕಂಡ ಲಕ್ಷ್ಮಿಯ ಕಥೆ ಆರಂಭದಲ್ಲಿ ಲೇಖಕನ ಕೋಟೆಯಂಥ ಮನೆಗೆ ಲಗ್ಗೆ ಇಟ್ಟು ಮಾವಿನ ಮರ ಹತ್ತಿ ಕಾಯಿ ಕಿತ್ತು  ಮಾಯವಾಗುವ  ಪೋರಿ,  ಮುಂದೆ  ಶಾಲಾ ವಾಷಿಕೋತ್ಸವದಲ್ಲಿ  ‘ಪಾತರಗಿತ್ತಿ ಪಕ್ಕ’ ಗೀತೆಗೆ ನರ್ತಿಸಿ ಲೇಖಕನ ಎದೆಯೊಳಗೆ ಆನಂದಪುಟಿಸುವ ಆಕೆ  ಮೂರನೇ ಬಾರಿ ಪ್ರೌಢಶಾಲಾ ಹುಡುಗಿ ಖೋ  ಖೋ ಆಟಗಾರ್ತಿಯಾಗಿ ಮೊದಲ ಪಾಳಿಯಲ್ಲಿ ಬೇಗ ಔಟಾದಾಗ ನಿರಾಶೆ, ದುಗುಡಪಟ್ಟರೂ ಎರಡನೆ ಪಾಳಿಯಲ್ಲಿ ತನ್ನ  ಚಾಕಚಕ್ಯತೆಯ ಆಟದಿಂದ  ಕೊನೆಯವರೆಗೂ ಹೊರಳಿ, ಜಿಗಿವ ಉತ್ಸಾಹದ ಚಿಲುಮೆಯ ಹುಡುಗಿ, ಮೂರನೇ ಹಂತದಲ್ಲಿ ಕಾಲೇಜಿನಲ್ಲಿ  ವಿದ್ಯಾರ್ಥಿನಿಯಾಗಿ ಆಧುನಿಕ  ಉಡುಪಿನ ವಿದ್ಯಾಥಿನಿಯರ ಎದುರಿಗೆ ಲಂಗದಾವಣಿ  ಧರಿಸಿದ ಹುಡುಗಿ ಕೊಂಚ ಮಂಕಾಗಿ ಕಂಡರೂ ವಿಭಿನ್ನವಾಗಿ ಕಾಣುವ ಹುಡುಗಿ. ಹೀಗೆ ಪ್ರತಿ ರತಿಯೋ ಕೋಕೋ ಆಟಗಾರ್ತಿಯು ಆಗಬಹುದಾಗಿದ್ದ ಪ್ರತಿಭಾವಂತ ಯುವತಿ ನಿರೂಪಕ ಭೇಟಿಯಾಗುವ  ನಾಲ್ಕನೆಯ ಹಂತದಲ್ಲಿ ಮಾಟ ಮಂತ್ರ ವಶೀಕರಣದ ಮೌಡ್ಯತೆಗೆ ಸಿಲುಕಿ ನೋಡುಗರ ಎದೆ ನಡುಗಿಸುವ ರೂಪವನ್ನು ಕಟ್ಟಿಕೊಡುತ್ತಾ ಮುಕ್ತಾಯವಾಗುತ್ತದೆ.   

ವೀಕ್ಷಕರ ಕಣ್ಣೀಗೆ  ಹೊಸತಂತ್ರದ ಈ  ಕಥೆ ಇರಬೇಡ ತುಂಟತನ, ಕ್ರಿಯಾಶೀಲತೆ, ಕೌಶಲ್ಯ, ಬುದ್ದಿವಂತಿಕೆ, ಚಾತುರ್ಯ ಸಂಗಮವಾದ  8 ರ ಪೋರಿಯೊಂದು ತಂದೆ ತಾಯಿಗಳ ಆಶೋತ್ತರ ಅಭಿಮಾನ, ಅಭಿಪ್ರಾಯಗಳ ಹೇರಿಕೆಯಿಂದ ತನ್ನ ಕನಸುಗಳನ್ನು  ನುಚ್ಚುನೂರಾಗಿಸಿ ಮೌಢ್ಯತೆಗಳಿಗೆ ಬಲಿಯಾಗುವ ದುರಂತದ ಪರಿಯನ್ನು  ಶಬ್ದ ಚಿತ್ರದ ಮೂಲಕ ಕಟ್ಟಿಕೊಡುವ ಪರಿ ಅನನ್ಯವಾಗಿದ್ದು ಕಥೆಯನ್ನು ಕೇಳುತ್ತಾ ಕೇಳುತ್ತಾ ಮೂರ್ತಿಯೂ ಡಿಗಸ್ ಕರ್ನಲ್ಲಿ ಲೀನವಾಗಿ ಅವನಂತೆಯೇ ಅನುಭವಿಸ ತೊಡಗುವ ಭಾವಗೀತಾತ್ಮಕ ಸನ್ನಿವೇಶವು ಬರುತ್ತದೆ  ವಿಭಿನ್ನ ಧ್ವನಿಗಳು ಏಕ ವಾಗುವ ಆ ಸಂದರ್ಭ “ಡಿಗಸ್ಕರ್ ಅಲ್ಲಿನ ಸಂಗತಿಯನ್ನೆಲ್ಲ ಮುಂದುವರಿಸಿದರು… ಆದರೆ ಈಗಅವರು ನನ್ನ ಹೊರಗಡೆಗೆ ಕುಳಿತಿರಲಿಲ್ಲ…! ನನ್ನ ಕಣ್ಣುಗಳ ಮುಂದೆ ಕುಳಿತಿದ್ದಮಿಸ್ಟರ್ ಪಾಂಡುರಂಗ ಸಂಬಾಜಿ ಡಿಗಸ್‌ಕರ್ ಅವರ ಆಕಾರ ಮಂಜು ಮಂಜಾಗಿಕರಗಿಹೋಗಿ, ಅವರು ಅಲ್ಲಿ… ನನ್ನ ಅಂತರಂಗದೊಳಗೆ… ನನ್ನ ಅಂತಃಕರಣದೊಳಗೆ ಪ್ರತಿಷ್ಠಾಪಿತಗೊಂಡರು… ಈಗ ನನ್ನ ಹೊರಗಡೆಯ ಯಾವ ಸದ್ದುಗಳ ಸಂತೆಯೂನನ್ನ ಕಿವಿಯನ್ನು ಹೊಗುತ್ತಿರಲಿಲ್ಲ… ನನ್ನ ಇಡೀ ಶರೀರದ ತುಂಬೆಲ್ಲ ಡಿಗಸ್‌ಕರ್‌ಹೇಳುತ್ತಿದ್ದ ಲಕ್ಷ್ಮಿಯ ಸ್ಥಿತಿಗತಿಯ ಮಾತುಗಳ ತರಂಗಗಳು ತುಂಬಿಕೊಂಡುಬಿಟ್ಟವು…ಊಹೂಂ. ಅಲ್ಲ… ಅಲ್ಲಿ ಒಳಗಡೆ ಡಿಗಸ್‌ರ್ ಎನ್ನುವ ಬೇರೊಬ್ಬ ವ್ಯಕ್ತಿ ಇರಲೇ ಇಲ್ಲ… ಎಲ್ಲಿ ಹೋದರು ಅವರು? ಅಂತಃಕರಣದಲ್ಲಿ ಕರಗಿ ಹೋಗಿರಬಹುದೆ…?ಈಗ ಆ ಧ್ವನಿ ತರಂಗಗಳು ನನ್ನವೇ ಆಗಿದ್ದವು… ನನ್ನ ಅಂತಃಕರಣದೊಳಗೇಉದ್ಭವವಾದವುಗಳು…! ಹಾಂ…ನೋಡಿ… ಆ ಧ್ವನಿಯೂ ಡಿಗಸ್‌ಕರ್ ಅವರದಲ್ಲ!ಕೇಳುತ್ತಿದೆಯಲ್ಲವೇ…? ಹೌದು….ಅದು ನನ್ನದೇ ನನ್ನದೇ ಧ್ವನಿ! …ಬರೀ ಧ್ವನಿಮಾತ್ರವಲ್ಲ. ಅಲ್ಲಿನದನ್ನೆಲ್ಲ ಕಾಣುತ್ತಿರುವವನೂ ನಾನೇ… ಅದು ನನ್ನ ಅಂತರಂಗವೇ…!”

ಓದುಗ ಕೇಳುಗ ಲೇಖಕ ಅಥವಾ ನಿರೂಪಕನ ಭಾವವಾಗಿ ಬಿಡುವ ಈ ಕಥೆ ನಾನು ಓದಿದ ಅತ್ಯುತ್ತಮ ಕತೆಗಳಲ್ಲಿ ಒಂದು. ರಾಘವೇಂದ್ರ  ಪಾಟೀಲರ ಮತ್ತಷ್ಟು ಕಥೆಗಳನ್ನು ಓದಲು ಪ್ರೇರಣೆ ನೀಡಿದೆ ‌ಕಥೆ ಓದಲು ಪ್ರೇರಕರಾದ ಮಹದೇವ ಹಡಪದ ಪರೋಕ್ಷ ಕಾರಣರಾದ ಪಿ ಶಾಡ್ರಾಕ್ ರವರಿಗೆ ಋಣಿ.

‍ಲೇಖಕರು Admin

July 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: