ರಾ ಬಂದೋಳ್
**
ಯಾರಾದರೂ ಹೊಸಬರು ಪರಿಚಯವಾದಾಗ, ಅವರ ಜೊತೆ ಊಟಕ್ಕೆ ಹೋದಾಗ, ನಾನು ನಾನ್ ವೆಜ್ ತಿನ್ನುವುದಿಲ್ಲವೆಂದು ಹೇಳಿದರೆ ನಂಬುತ್ತಲೇ ಇರಲಿಲ್ಲ, ಈಗಲೂ ಅಷ್ಟೆ. ‘ಏನಾದರೂ ನಾನ್ ವೆಜ್ ಆರ್ಡರ್ ಮಾಡು, ಸುಳ್ಳು ಹೇಳಬೇಡ, ನಿನ್ನನ್ನು ನೋಡಿದರೆ ಹಾಗೆ ಅನ್ನಿಸುವುದಿಲ್ಲ’ ಅನ್ನುತ್ತಾರೆ. ಮೊದಮೊದಲು ಬೇಜಾರು, ಆಶ್ಚರ್ಯ ಇತ್ಯಾದಿ ಇತ್ಯಾದಿಯೆಲ್ಲಾ ಆಗುತ್ತಿತ್ತು. ಕಂಪೆನಿಯಲ್ಲಿ ಗಾಲಾ ಇದ್ದಾಗ ನಾನು ಕುಡಿಯುದಿಲ್ಲವೆಂದರೆ ಯಾರೂ ನಂಬುತ್ತಲೇ ಇರಲಿಲ್ಲ. ಆಮೇಲಾಮೇಲೆ ಇಂತಹುದೇ ಮುಖ ನೋಡಿ ನಿರ್ಧರಿಸುವ ವಿಚಾರಗಳು ವಿಷಯಗಳು
ಅಭ್ಯಾಸವಾಯಿತು. ಆಮೇಲಾಮೇಲೆ ಜೋರು ನಗು ಬರುತ್ತಿತ್ತು. ಈಗೀಗ ಕೇವಲ ಮುಗುಳುನಗೆ. ನಾನು ಯಾವುದೇ ಶಾಪಿಂಗ್ ಮಾಲ್, ಬಿಗ್ ಬ್ರ್ಯಾಂಡ್ ನ ಯಾವುದೇ ವಸ್ತುಗಳ ಶೋ ರೂಮ್ ಗೆ ಏನನ್ನಾದರೂ ಕೊಳ್ಳಲು ಹೋದಾಗ, ಬಹಳಷ್ಟು-ಬಹಳಷ್ಟು ಬಾರಿ ನನ್ನನ್ನು ಆ ಶಾಪಿಂಗ್ ಮಾಲ್ ನಲ್ಲೇ ಕೆಲಸ ಮಾಡುವವನೆಂದು ತಿಳಿದು ಬೇರೆ ಗ್ರಾಹಕರು ನನ್ನನ್ನು ಸಹಾಯಕ್ಕೆ ಕೇಳುತ್ತಿದ್ದರು. ದೇವಸ್ಥಾನದ ಹೊರಗೆ ಚಪ್ಪಲಿ ಸ್ಟ್ಯಾಂಡ್ ನಲ್ಲಿ ಚಪ್ಪಲಿ ಬಿಡಲು ಹೋದರೆ ನಾನೇ ಚಪ್ಪಲಿ ಕಾಯುವವ ಎಂದುಕೊಳ್ಳುತ್ತಿದ್ದರು. ರಸ್ತೆ ಬದಿಯ ಪಾನಿಪೂರಿ, ಗೋಬಿ ಮಂಚೂರಿ ಅಂಗಡಿಗಳಿಗೆ ತಿನ್ನಲು ಹೋದರೆ ನಾನು ಅದೇ ಅಂಗಡಿಯವನು ಅಂದುಕೊಳ್ಳುತ್ತಿದ್ದರು.
CIARI ಅಂಡಮಾನ್
ನಾನು ICAR (Indian Council of Agricultural Research) -ARS (Agriculture Research Service) ನ ವಿಜ್ಞಾನಿಯಾಗಿ ಆಯ್ಕೆಯಾಗಿ, ನಂತರ ಅಂಡಮಾನ್ ನ CIARI (Central Island Agricultural Research Institute) ಗೆ placement ಆಗಿ ಅಲ್ಲಿಗೆ ಮೊದಲ ಬಾರಿ ಹೋದಾಗ, ಆಫೀಸ್ ನಿಂದ ಏರ್ ಪೋರ್ಟ್ ಗೆ ನಮ್ಮನ್ನು ಪಿಕ್ ಮಾಡಲು ಡ್ರೈವರ್ ನನ್ನು ಕಳುಹಿಸಿದ್ದರು. ನಾವು ಒಟ್ಟು ಮೂರು ಜನ ವಿಜ್ಞಾನಿಗಳು ಒಮ್ಮೆಯೇ ಬಂದಿದ್ದೆವು. ಡ್ರೈವರ್ ಬಂದವನೇ ನನ್ನ ಜೊತೆ ಇದ್ದ ಇಬ್ಬರು ವಿಜ್ಞಾನಿಗಳಿಗೆ ನಮಸ್ಕರಿಸಿದ. ನಾನು ಪಕ್ಕದಲ್ಲೇ ಇದ್ದರೂ ಇನ್ನೊಬ್ಬ ವಿಜ್ಞಾನಿಗೆ ಹುಡುಕುತ್ತಿದ್ದ. ಇಬ್ಬರು ವಿಜ್ಞಾನಿಗಳು ಜೀಪ್ ಹತ್ತಿದರು. ನಾನೂ ಹತ್ತಿದೆ. ಡ್ರೈವರ್ ಆಶ್ಚರ್ಯದಿಂದ ಅರಗಿಸಿಕೊಳ್ಳಲಾರದೆ ಜೀಪ್ ಶುರು ಮಾಡಿ instituteಗೆ ಕರೆದೊಯ್ದ. Institute ನಲ್ಲಿ ನಮ್ಮ ಎಲ್ಲ ಹೊಸ ವಿಜ್ಞಾನಿಗಳ, ಹೊಸ ವೈಜ್ಞಾನಿಕ ಪ್ರಾಜೆಕ್ಟ್ ಗಳ ಪ್ರಸಂಟೇಶನ್ ಇತ್ತು. ಅದು ಮುಗಿದಾಗ ನನ್ನ ಪ್ರಸಂಟೇಶನ್ ಕೇಳಿ ಬಹಳಷ್ಟು ವಿಜ್ಞಾನಿಗಳು ಆಶ್ಚರ್ಯಚಕಿತರಾದರು. ಕೆಲವು ಹಿರಿಯ ವಿಜ್ಞಾನಿಗಳು ನನ್ನ ಹತ್ತಿರ ಬಂದು “ನಿನ್ನನ್ನು ನೋಡಿದರೆ ನೀನು ಇಷ್ಟೊಂದು ಚೆನ್ನಾಗಿ ಪ್ರಸೆಂಟ್ ಮಾಡುತ್ತೀಯ ಎಂದು ಅನ್ನಿಸುವುದೇ ಇಲ್ಲ, ಪ್ರಸಂಟೇಶನ್ ತುಂಬಾ ಆಸಕ್ತಿದಾಯಕ ಹಾಗು ಪರಿಣಾಮಕಾರಿಯಾಗಿತ್ತು” ಎಂದು ಹೊಗಳಿದರು.
ನನ್ನ ಹಿರಿಯ ಗೆಳೆಯನೊಬ್ಬ ಬರೆದ ನಾಟಕ ರಂಗಶಂಕರದಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ನಾನು ಅಲ್ಲಿಗೆ ಹೋಗಿದ್ದೆ. ನಾಟಕ ಪ್ರದರ್ಶನ ಮುಗಿದ ಮೇಲೆ ಶಾಲೆಯ ಹಿರಿಯ-ಕಿರಿಯ ಸಹವರ್ತಿಗಳೆಲ್ಲಾ ಸೇರಿದೆವು. ಹತ್ತಿರದ ಜ್ಯೂಸ್ ಶಾಪ್ ಗೆ ಹೋದೆವು. ಅಲ್ಲಿದ್ದ ಹಿರಿಯ ಸಹವರ್ತಿಯೊಬ್ಬಳ ಭಾವಿ ಗಂಡ (ಅಥವಾ ಹೊಸದಾಗಿ ಮದುವೆಯಾಗಿತ್ತಿರಬೇಕು ಸರಿಯಾಗಿ ನೆನೆಪಿಲ್ಲ) ಅಲ್ಲಿಗೆ ಬಂದ. ಆಕೆ ಅಲ್ಲಿದ್ದ ಎಲ್ಲರನ್ನೂ ಪರಿಚಯಿಸಿದಳು ನನ್ನನ್ನು ಹೊರತುಪಡಿಸಿ. ಥೇಟು ಇದೇ ಥರದ ಘಟನೆಗಳು ಬಹಳಷ್ಟು ಬಹಳಷ್ಟು ಆಗಿವೆ. ನನ್ನದೇ ಹತ್ತಿರದ ಗೆಳೆಯರಿಂದಲೂ ಆಗಿವೆ. ನನಗೆ ಅದರ ಅವಶ್ಯಕತೆ ಇತ್ತಾ? ಈ ಘಟನೆ ನಡೆದಾಗ ಇರಲಿಲ್ಲ. ಈಗಂತೂ ಇಲ್ಲವೇ ಇಲ್ಲ. ಆದರೆ ಪ್ರಾಮಾಣಿಕವಾಗಿ ಹೇಳುತ್ತೇನೆ ನನ್ನ ಯೌವನದ ಶುರುವಿನ ದಿನಗಳಲ್ಲಿ, ಕಾಲೇಜು ದಿನಗಳಲ್ಲಿ ಆ ಅವಶ್ಯಕತೆ ಇತ್ತು. ಈ ತರಹದ ಘಟನೆಗಳಾದ ಒಳಗೇ ಬಹಳ ನೊಂದುಕೊಳ್ಳುತ್ತಿದ್ದೆ.
ನಾನು ಪ್ರಸ್ತುತ ಕೆಲಸ ಮಾಡುವ ಕಂಪೆನಿಯವರು ನನ್ನನ್ನು ಇಂಡೋನೇಶಿಯಾ ಕಳುಹಿಸುವವರಿದ್ದರು. ನಾನು ಇನ್ನೇನು ಕೆಲವು ದಿನಗಳಲ್ಲಿ ಇಂಡೋನೇಶಿಯಾ ಹೋಗುವವನಿದ್ದೆ, immigration ವಿಚಾರಿವಾಗಿ ನನ್ನ ಹಿರಿಯ ಸಹೋದ್ಯೋಗಿಯ ಜೊತೆ ಮಾತುಕತೆ ನಡೆಯುತ್ತಿರುವಾಗ, “ನಿಮ್ಮನ್ನು ನೋಡಿದರೆ, ನಿಮ್ಮ ಬ್ಯಾಗ್ ಚೆಕ್ ಮಾಡಲೇಬೇಕು ಅಂತ ಅನಿಸುತ್ತೆ ಅವರಿಗೆ” ಎನ್ನುತ್ತಾಜೋರಾಗಿ ನಕ್ಕರು, ನಾನು ಮುಗುಳುನಕ್ಕೆ. ನಾನು ಊರಲ್ಲಿ ಮನೆ ಕಟ್ಟುವವನಿದ್ದೆ. ನನ್ನ ತೀರಾ ಹತ್ತಿರದ ಗೆಳೆಯನೊಬ್ಬನ ಹತ್ತಿರ ಹೇಳಿದೆ. ಅವನು ಒಬ್ಬ ಬಿಲ್ಡರ್ ಹತ್ತಿರ ಕರೆದುಕೊಂಡು ಹೋದ. ಅವನು ಬರುವ ಕೆಲವು ಕ್ಷಣಗಳ ಮುಂಚೆ “ಇವನು ಒಳ್ಳೆಯ ಬಿಲ್ಡರ್, ತುಂಬಾ ದೊಡ್ಡ ಪ್ರಾಜೆಕ್ಟ್ ಮಾಡಿದಾನೆ. ಇವಾಗ ಡ್ರೈವರ್ ಕರ್ಕೊಂಡು ಇನ್ನೋವಾದಲ್ಲಿ ಬಾರ್ತಾನೆ ನೋಡು. ನೋಡಿದ್ರೆ ಆ ಥರಾ ಅನ್ಸೋದೇ ಇಲ್ಲಾ, ನಿನ್ ಥರಾನೆ!” ಅಂದ.
ನನ್ನ ಶಾಲಾದಿನಗಳಲ್ಲಿ ಒಬ್ಬ ಪಿ.ಇ. ಟೀಚರ್ (ದೈಹಿಕ ಶಿಕ್ಷಣದ ಶಿಕ್ಷಕ) ಇದ್ದರು. ನಾನು ಯಾವುದೇ ಆಟದ ತಂಡಗಳಲ್ಲೂ ಇರಲಿಲ್ಲ. ನನಗೆ ಯಾವುದೇ ಆಟಗಳಲ್ಲಿ ಆಸಕ್ತಿಯೂ ಇರಲಿಲ್ಲ. ಅವರದು-ನನ್ನದು ಮಾತುಕತೆ, ಮುಖಾಮುಖಿ ತೀರಾ ಕಡಿಮೆ. ಆದರೂ ನಾನು ಎಲ್ಲಾದರೂ ಕಂಡರೆ “ನಿನ್ನನ್ನು ನೋಡಿದರೆ ನನಗೆ ಹೊಡೆಯಬೇಕು ಅನಿಸುತ್ತದೆ” ಅನ್ನುತ್ತಿದ್ದರು. ಹಲವು ಬಾರಿ ನನ್ನ ನೋಡಿದೊಡನೆ ಹೊಡೆಯಲು ಬರುತ್ತಿದ್ದರು, ಕೆಲ ಬಾರಿ ಹೊಡೆದದ್ದೂ ಇದೆ. ಒಂದು ಘಟನೆ ಹೇಳಲೇಬೇಕು. ಆದರೆ ಅದಕ್ಕೆ ನನ್ನ ಬಗ್ಗೆ ಸಂಕ್ಷಿಪ್ತವಾಗಿ ಹೇಳಬೇಕು. ಕೆಲವು ಕಡೆ ಆತ್ಮರತಿ ಅನಿಸಿದರೆ ಕ್ಷಮೆ ಇರಲಿ. ನಾನು ನಾಲ್ಕನೇ ತರಗತಿವರೆಗೆ ನಮ್ಮೂರ ಶಾಲೆಯಲ್ಲಿ ಓದಿದ್ದು ನಂತರ ಸರ್ಕಾರಿ ವಸತಿ ಶಾಲೆಯಲ್ಲಿ ಹತ್ತನೇ ತರಗತಿವರೆಗೆ ಓದಿ, ಆಗಿನ ಕಾಲಕ್ಕೆ ಒಳ್ಳೆಯ ಅಂಕ ಪಡೆದೆ, ಆಗಿನ ಕಾಲದ ಒಳ್ಳೆಯ ಕಾಲೇಜಿನಲ್ಲಿ ಪಿ.ಯು.ಸಿ. ಓದಿದೆ, ಅಲ್ಲೂ ಒಳ್ಳೆಯ ಅಂಕ ಪಡೆದೆ, ಎಂಜಿನೀರಿಂಗ್ ಸೇರಿದೆ, ಅದನ್ನು ಬಿಟ್ಟೆ, ನಂತರ ಮೆಡಿಕಲ್ ಸೇರಿದೆ, ಅದನ್ನೂ ಬಿಟ್ಟೆ, ನಂತರ ಬಿ.ಎಸ್ಸಿ (ಕೃಷಿ) ಮಾಡಿದೆ, ಅನುವಂಶೀಯತೆ ಮತ್ತು ತಳಿ ವಿಜ್ಞಾನದಲ್ಲಿ (Genetics and Plant Breeding) – ಎಮ್.ಎಸ್ಸಿ ಮತ್ತು ಪಿಹೆಚ್. ಡಿ. ಮಾಡಿದೆ. ಬಹಳ ಒಳ್ಳೆಯ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿದೆ. ARS (Agriculture Research Service) ಪರೀಕ್ಷೆ ಪಾಸ್ ಮಾಡಿ, ಭಾರತ ಸರ್ಕಾರದ ಭಾಗವಾದ ICAR (Indian Council of Agricultural of Research) ನಲ್ಲಿ ವಿಜ್ಞಾನಿಯಾಗಿ ಅಂಡಮಾನ್ ನಲ್ಲಿ ಕೆಲಸ ಮಾಡಿದೆ.
ಮತ್ತೆ ಖಾಸಗಿ ಕಂಪೆನಿಗೆ ಮರಳಿದೆ. ನಂತರ ಸ್ವಂತ ಕಂಪೆನಿ ಮಾಡಲು ಹೋಗಿ ಕೈ ಸುಟ್ಟುಕೊಂಡೆ. ಇದೆಲ್ಲದರ ಮಧ್ಯೆದಲ್ಲಿ ವಿಚಿತ್ರ ರೋಗದಿಂದ ಬಳಲಿ ವಾಪಾಸ್ಸು ಬಂದೆ. (ಈ ಪ್ಯಾರಾದ ಮೊದಲ ಪದದಿಂದ ಹೇಳಿದ, ನಾನು ಮಾಡಿರುವ ಎಲ್ಲವೂ ದೈವದ, ಗುರುಗಳ, ತಂದೆ ತಾಯಿಯ ಕೃಪೆ). ಇದರಲ್ಲಿ ಹೇಳಿದ ಹಲವು-ಕೆಲವು ವಿಚಾರಗಳು, ನಮ್ಮೂರಲ್ಲಿ ಹಲವು ಕೆಲವರಿಗೆ ಗೊತ್ತಿತ್ತು. ಆದರೆ ನನ್ನನ್ನು ನಮ್ಮೂರಲ್ಲಿ ನೋಡಿದವರು ಕಡಿಮೆ. ಬಹಳಷ್ಟು ಜನರಿಗೆ ಇವನು ಯಾರಿರಬಹುದು, ಹೇಗಿರಬಹುದು ಎಂಬ ಕುತೂಹಲ. ಒಮ್ಮೆ ನಾನು ಹಾಗು ನನ್ನ ಚಿಕ್ಕ ತಂಗಿ, ಹೀಗೆಯೇ ಬೀದಿಯೊಂದರಲ್ಲಿ ನಡೆದು ಹೋಗುವಾಗ, ಕೆಲ ಹುಡುಗರು ನನ್ನನ್ನು ನೋಡಿ ಹೀಗೆ ಮಾತಾಡಿಕೊಳ್ಳುತ್ತಿದ್ದರೆಂದು ಹೇಳಿದಳು.
“ಯಾರೋ ಇವನು?”
“ಇವನಾ!? ಬಂದೋಳರ ಉಮೇಶಣ್ಣನ ಮಗ!”
“ಇವನೇನಾ ಬಂದೋಳರ ಉಮೇಶಣ್ಣನ ಮಗ!? ನಾನು ಬಂದೋಳರ ಉಮೇಶಣ್ಣನ ಮಗ ಅಂದ್ರೆ ಹೆಂಗೋ ಇರ್ತಾನೆ ಅನ್ಕೊಂಡಿದ್ದೆ! ಇವನೇನೋ ಹಿಂಗಿದಾನೆ! ಕರ್ರಗೆ ಬೇರೆ ಇದಾನೆ?”
ನಾನು ಹಾಗು ನನ್ನ ತಂಗಿಯರು ಇದನ್ನು ಹೇಳಿಕೊಂಡು ಜೋರು ನಕ್ಕಿದ್ದೆವು. ನನಗೆ ಸಂಬಂಧವೇ ಪಡದ ಹಾಗು ಪಡುವ ಎಷ್ಟೊಂದು ಜನ, ನನ್ನ ಮುಖ ನೋಡಿ, ನಾನು ಹಾಕುವ ಬಟ್ಟೆ, ಶೂ, ಚಪ್ಪಲಿ, ನಾ ನಿರುವ ಮನೆ, ನನ್ನ ವಿಧ್ಯಾರ್ಹತೆ, ನನ್ನ ಜಾತಿ, ನನ್ನ ಊರು, ನನ್ನ ವ್ಯಕ್ತಿತ್ವ, ನನ್ನ ಅಭ್ಯಾಸ, ನನ್ನ ಹವ್ಯಾಸ, ತೀರಾ ಖಾಸಗಿ ವಿಚಾರಗಳು, ಪ್ರೀತಿ, ಪ್ರೇಮ, ಪ್ರಣಯ, ಇತ್ಯಾದಿ, ಇತ್ಯಾದಿ, ನಾನು ಹೇಳುವ ಮುಂಚೇಯೇ ತಾವೇ ನಿರ್ಧರಿಸಿದ್ದಾರೆ. ಕೇಳಿ ಅವಶ್ಯಕತೆಯಿಲ್ಲದಷ್ಟು ಆಶ್ಚರ್ಯಪಟ್ಟವರಿದ್ದಾರೆ. ನಾನು ಜೋರಾಗಿ ನಕ್ಕಿದ್ದೇನೆ. ನನ್ನ ಹೃದಯಕ್ಕೆ ಸ್ಪಷ್ಠವಾಗಿ ಕೇಳುವಷ್ಟು. ಬಹಳಷ್ಟು ಜನ ಹೇಳಿದವರು ನನಗೆ ಮರೆತೇ ಹೋಗಿದ್ದಾರೆ. ಆದರೆ ನಾನು ನಕ್ಕದ್ದು ನನಗೆ ನೆನಪಿದೆ. ಹೃದಯ ಕಂಪಿಸಿದ್ದು ನೆನೆಪಿದೆ. ಆದರೆ ಮುಗುಳುನಗುವುದು ಅಭ್ಯಾಸವಾದ ಮೇಲೆ ಘಟನೆಗಳೂ ನೆನಪಿನಲ್ಲಿ ಉಳಿಯುತ್ತಿಲ್ಲ. “ಬೇಜಾರು, ಆಶ್ಚರ್ಯ ಇತ್ಯಾದಿ ಇತ್ಯಾದಿ ಜೋರು ನಗು ಮುಗುಳುನಗೆ”.
ಪ್ರತಿಯೊಬ್ಬರ ಅನುಭವವು ವಿಭಿನ್ನವಾಗಿರುತ್ತದೆ, ಮತ್ತು ನೀವು ಹಂಚಿಕೊಂಡಿರುವ ಈ ಘಟನೆ ಕೂಡ ಬಹಳ ಬಹುಮಾನಾರ್ಹವಾಗಿದೆ. ಇಂತಹ ಅನುಭವಗಳು ಇತರರ ಅನುಭವಗಳೊಂದಿಗೆ ಹೋಲಿಸುತ್ತವೆ ಮತ್ತು ಎಲ್ಲರ ಜೀವನದಲ್ಲಿ ಬೆದರುತ್ತದೆ, ಆದರೆ ಪ್ರತಿಯೊಬ್ಬ ವ್ಯಕ್ತಿಯು ತಮ್ಮದೇ ಆದ ವಿಶಿಷ್ಟ ಹಾದಿಯನ್ನು ಅನುಸರಿಸುತ್ತಾರೆ. ನಿಮ್ಮ ಅನುಭವವು ನಿಜವಾಗಿಯೂ ಉತ್ತಮ ಮತ್ತು ಅರ್ಥಪೂರ್ಣವಾಗಿದೆ.
ನಿಜವಾಗಲೂ ಜನ ಹೀಗೆಯೇ! ಸೂಕ್ಷ್ಮತೆ ಇರುವವರು ಕಡಿಮೆ. ಇದಕ್ಕೆ ಔಷಧೀಯೇ ಇಲ್ಲ! ಇದನ್ನು ಮೀರಿ ನಿಮ್ಮ ಹಾಗೆ ಬದುಕಬೇಕು ಅಷ್ಟೇ!
It became so easy for everyone to judge but Its a person bravery to go through and Achieve bigger things!! very interesting and real felt writing ! Appreciate your Achievements , Great Work!!