ಪ್ರೊ. ಜಿ.ಎಚ್. ನಾಯಕ
ಆಯಾಮ
(ಕನ್ನಡ ಸಾಹಿತ್ಯಾಸಕ್ತರಲ್ಲಿ ಜಿ ಎಚ್ ನಾಯಕ್ ಗೊತ್ತಿಲ್ಲ ಎನ್ನುವವರಿಲ್ಲ. ಜಿ ಎಚ್ ಕೇವಲ ವಿಮರ್ಶಕರಲ್ಲ, ವಿಮರ್ಶೆಯ ಗುರು. ಕೇವಲ ಸಾಹಿತಿಯಲ್ಲ, ಅವರು ಕನ್ನಡ ಸಂಸ್ಕೃತಿಯ ಧೀಮಂತ ವಕ್ತಾರ. ಬದುಕಿ ಬರೆದ, ಅಂದಂತೆ ನಡೆದುಕೊಂಡ ಒಂದು ಸಾತ್ವಿಕ ತೇಜಸ್ಸು. ಜಿ ಎಚ್ ನಾಯಕರೇ ಬೇರೆ. ಅವರಂತೆ ಬದುಕಿದವರು ಬೇರೆ ಇಲ್ಲ. ಕುವೆಂಪು, ತೇಜಸ್ವಿಯಂತೆ ಕರ್ನಾಟಕದ ಒಂದು ಸಾಂಸ್ಕೃತಿಕ ಮಹಾಮಾದರಿ. ಅವರ ಬರಹ ಕರ್ನಾಟಕದ ’ನಿಜದನಿ’. ಅವರು ಕನ್ನಡ ಸಂಸ್ಕೃತಿಯ ಸತ್ವದ ಸಂಕೇತ. ಜಿ ಎಚ್ ಆಯಾಮ ಪರಿವಾರದ ಅತ್ಯಂತ ಆಪ್ತ ಮನಸ್ಸು. ನಮ್ಮ ಪ್ರಯತ್ನ-ಭರವಸೆಯ ಆಧಾರ ಸ್ಥಂಭ. ಅವರ ಪ್ರೀತಿ ನಮ್ಮನ್ನು ಸದಾ ಬೆಳಗಲಿ. ಜಿ ಎಚ್ ನಾಯಕರು ತಮ್ಮ ಆತ್ಮೀಯ ಮಿತ್ರ ಪೂರ್ಣಚಂದ್ರ ತೇಜಸ್ವಿಯವರ ನಿಧನಾನಂತರ ಈ ಲೇಖನದ ಮೂಲಕ ತಮ್ಮೊಳಗಿನ ತೇಜಸ್ವಿಯವರ ನೆನಪುಗಳನ್ನು ಹಂಚಿಕೊಂಡಿದ್ದರು.
ಮೊನ್ನೆ, ೨೦೧೦ ರ ಆಗಸ್ಟ್ ಕೊನೆಯ ವಾರದಲ್ಲಿ ಮೈಸೂರಿನಲ್ಲಿ ಅವರಿಗೆ ಪ್ರತಿಷ್ಟಿತ ಶಿವರಾಮ ಕಾರಂತ ಪ್ರಶಸ್ತಿ ಸಂದಿದೆ. ಆ ಸಂತೋಷದ ಸಲುವಾಗಿ ಆಯಾಮದ ಓದುಗರಿಗಾಗಿ ಅವರ ಈ ಬರಹ)೧೯೯೭ `ಶ್ರೀ ರಾಮಾಯಣ ದರ್ಶನಂ’ ದ ಹಸ್ತಪ್ರತಿಯನ್ನು ಕರ್ನಾಟಕ ಸರ್ಕಾರ ಪ್ರಕಟಿಸುವುದಕ್ಕೆ ತೇಜಸ್ವಿ ಅವರ ಆತ್ಮೀಯ ಮಿತ್ರ ಪ್ರೊ.ಬಿ.ಎನ್.ಶ್ರೀರಾಮ ಅವರ ನೆರವು ಪಡೆಯುತ್ತಿದ್ದರು. ಏಕೊ ಅವರಿಗೆ ಸ್ನೇಹಿತನಾದ ನನ್ನ ನೆರವೂ ಬೇಕೆನಿಸಿತು; ತಾವಾಗಿ ಕರೆದರು. ಆಗ ನಾನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕನಾಗಿದ್ದೆ. ಮೂಡಿಗೆರೆಯ ಅವರ ತೋಟದ ಮನೆಯಲ್ಲಿ ನಾನೂ ಅವರ ಜೊತೆ ತಿಂಗಳ ಕಾಲ ದುಡಿದೆ. ಟಿಪ್ಪಣಿ ಭಾಗವನ್ನು ನಾನು ಸಿದ್ಧಪಡಿಸಿಕೊಟ್ಟೆ. ತೇಜಸ್ವಿ ದಿನಕ್ಕೆ ಹದಿನೇಳು ಹದಿನೆಂಟು ತಾಸು ಹಗಲು ರಾತ್ರಿ ಒಂದೇ ಸಮನೆ ಕಂಪ್ಯೂಟರ್ ಮೇಲೆ ಹಸ್ತಪ್ರತಿ ಮುದ್ರಣದಲ್ಲಿ ತೊಡಗಿರುತ್ತಿದ್ದರು. ಕೆಲಸ ಇಂಥ ದಿನಾಂಕದೊಳಗೆ ಮುಗಿಸಬೇಕೆಂಬ ಗಡುವು ಬೇರೆ ಹಾಕಿಕೊಂಡಿದ್ದರು. ಸ್ವಂತ ಬರವಣಿಗೆಯ ಬೇರೆ ಕೆಲಸಕ್ಕೆ ಜಿಗಿಯಲು ಅವರು ತುದಿಗಾಲ ಮೇಲೆ ನಿಂತಿದ್ದರು. ನಿಗದಿತ ಅವಧಿಯೊಳಗೆ ಮುಗಿಸಲು ನಾವೂ ಟೊಂಕಕಟ್ಟಿಯೊ ಮೈಬಗ್ಗಿಸಿಯೊ ದುಡಿಯಬೇಕಾಗಿತ್ತು. ಶ್ರೀರಾಮ ಶಿಸ್ತಿನ ಕೆಲಸಗಾರ; ದುಡಿಮೆಗೆ ಜಗ್ಗದ ಬಂಟ. ಅವರೂ ಹಗಲು ರಾತ್ರಿ ಎನ್ನದೆ ಕೆಲಸದಲ್ಲಿಯೆ ತೊಡಗಿರುತ್ತಿದ್ದರು. ದಿನಕ್ಕೆ ೧೫-೧೬ ತಾಸಾದರೂ ಕೆಲಸ ಮಾಡುತ್ತಿದ್ದರು. ನನಗೊ ೧೨-೧೩ ತಾಸಿಗಿಂತ ಹೆಚ್ಚು ಕೆಲಸ ಮಾಡುವುದಕ್ಕೆ ಸಾಕುಬೇಕಾಗುತ್ತಿತ್ತು. ಹೆಜ್ಜೆ ಹೆಜ್ಜೆಗೂ ತೇಜಸ್ವಿಗೆ ಶ್ರೀರಾಮ ಬೇಕಾದಂತೆ ನನಗೂ ಬೇಕಾಗುತ್ತಿದ್ದರು. ಇಬ್ಬರು ಗಂಡಂದಿರ ಕಾಟ ಅಂತಾರಲ್ಲಾ ಅಂಥ ಅಡಕತ್ರಿಗೆ ಸಿಕ್ಕಿದಂಥ ಸ್ಥಿತಿಯಲ್ಲಿ ಶ್ರೀರಾಮ ಕೆಲಸ ಮಾಡಬೇಕಾಗಿತ್ತು. ಅವರ ವ್ಯವಹಾರ ವಿವೇಕ ಉನ್ನತ ಮಟ್ಟದ್ದು. ಏನೇ ಅನುಮಾನ ಬಂದರೂ ಅವರನ್ನು ಕೇಳಿ, ಚರ್ಚಿಸಿ ತೇಜಸ್ವಿ ಮುಂದುವರಿಯುತ್ತಿದ್ದರು. ಸರಿಯಾದ ಗ್ರಹಿಕೆಯಿಂದ ಸರಿ ತಪ್ಪುಗಳ ಬಗ್ಗೆ ನಿಖರವಾಗಿ ಸ್ವಪ್ರಶಂಸೆಯಿಲ್ಲದೆ, ಸ್ವಪ್ರತಿಷ್ಠೆ ಮೆರೆಸದೆ ತಿಳಿಸುವ ವ್ಯಕ್ತಿ ಶ್ರೀರಾಮ. ತೇಜಸ್ವಿ ಇಲ್ಲದೆ ಶ್ರೀರಾಮನನ್ನು ಕಲ್ಪಿಸಿಕೊಳ್ಳುವುದಕ್ಕೆ ನನಗೆ ಸಂಕಟವಾಗುತ್ತಿದೆ. ಶ್ರೀರಾಮ ತೇಜಸ್ವಿಗೆ ಅಂಥ ದೀರ್ಘಕಾಲದ ಆತ್ಮಸಖ. ತಾಸುಗಳ ಲೆಕ್ಕವಿಲ್ಲದೆ ಮಲಗಿ ಓದುವ ಅಭ್ಯಾಸವಿದ್ದ ನನಗೆ ಅಷ್ಟು ಹೊತ್ತು ಕುಳಿತು ಕೆಲಸ ಮಾಡುವುದು ಹಿಂಸೆ ಅನಿಸುತ್ತಿತ್ತು. ತೇಜಸ್ವಿಯಂಥ ದೈತ್ಯ ದುಡಿಮೆಗಾರನಿಗೆ ನನ್ನ ಕೆಲಸದ ವೇಗ ಆಮೆ ನಡಿಗೆ ಅನಿಸಿರಬೇಕು. ಟಿಪ್ಪಣಿಯಾಗಿರಲಿ, ಲೇಖನವಾಗಿರಲಿ ಯಾವುದನ್ನು ಮಾಡಿದರೂ ನನ್ನ ಯೋಗ್ಯತೆಯ ಮಿತಿಯಲ್ಲಿಯೇ ಆದರೂ ಸರಿಯಾಗಿ, ಸಮರ್ಪಕವಾಗಿ ಮಾಡಬೇಕು ಎಂಬ ಜಾಯಮಾನದವನು ನಾನು. ತೀರ್ಮಾನದ ವಿಷಯದಲ್ಲಿ ದುಡುಕುವವನಲ್ಲ. ಅದರಿಂದಾಗಿ ನನ್ನ ಕೆಲಸದ ಗುಣಮಟ್ಟದಲ್ಲಿ ಹೆಚ್ಚಿನ ಕೊರತೆ ಕಾಣದಿದ್ದರೂ ನನ್ನ ಕೆಲಸದ ಪ್ರಮಾಣ ಕಡಿಮೆ ಆಗುತ್ತಿತ್ತು. ಅವರ ನಿರೀಕ್ಷೆಯ ವೇಗದಲ್ಲಿ ಸಾಗುತ್ತಿರಲಿಲ್ಲ. ನನ್ನನ್ನು ಮಿತ್ರನಾಗಿ ಮಾತ್ರ ನೋಡದೆ ಮನೆಗೆ ಬಂದ ಗೌರವ ಅತಿಥಿಯಾಗಿಯೂ ತೇಜಸ್ವಿ, ರಾಜೇಶ್ವರಿ ನೋಡಿಕೊಳ್ಳುತ್ತಿದ್ದರು. `ಶ್ರೀರಾಮ್, ಎಂಥ ಶೋಂಬೇರಿ ರೀ ನೀವು? ಕೆಲಸ ಸಾಗುತ್ತಿಲ್ಲವಲ್ರೀ, ಒಳ್ಳೆ ಒಡ್ಡರ ಬಂಡಿ ವ್ಯವಹಾರ ಆಯ್ತಲ್ರೀ’ ಎಂದು ಸ್ನೇಹದ ಸಲುಗೆಯಲ್ಲಿ ಆಗೀಗ ಕೆಲಸಕ್ಕೆ ಚುರುಕು ತರಲೆಂದು ತೇಜಸ್ವಿ ದಬಾಯಿಸಿದಾಗ ಆ ಮಾತಿನಿಂದ ನನಗೇ ಚುರುಕು ಮುಟ್ಟಿಸಿದಂತಾಗುತ್ತಿತ್ತು. ನಾನು ತುಸು `ನರ್ವಸ್’ ಆಗುತ್ತಿದ್ದೆ. ಕೆಲಸದಲ್ಲಿ ಮಗ್ನವಾಗಿದ್ದಾಗ ಊಟ, ತಿಂಡಿಗೆ ನಿಗದಿತ ವೇಳಾಪಟ್ಟಿ ಇಲ್ಲದಂತೆ ತೇಜಸ್ವಿ ದುಡಿಯುತ್ತಿದ್ದರು. ಅವರನ್ನು ಊಟ, ತಿಂಡಿಗೆ ಎಬ್ಬಿಸುವುದಕ್ಕೆ ರಾಜೇಶ್ವರಿಯವರು ಒಂದು ಉಪಾಯ ಕಂಡುಕೊಂಡಿದ್ದರು. `ನಾಯಕರಿಗೆ ತಡವಾಗುತ್ತೆ ಕಣ್ರೀ’ ಎಂದು ಅವರು ಹೇಳಿದರೆ ತೇಜಸ್ವಿ ಮರುಮಾತಾಡದೆ ಎದ್ದು ಬರುತ್ತಿದ್ದರು. ತೇಜಸ್ವಿಯವರ ಆತ್ಮೀಯ ವಲಯಕ್ಕೆ ನಾನು ಬಂದ ಕಾಲದಿಂದಲೂ – ೧೯೬೨ರ ಸುಮಾರಿನಿಂದಲೂ ಆತ್ಮೀಯ ಸ್ನೇಹದ ಸಲುಗೆಯ ಜೊತೆಗೆ ಘನತೆ ಗೌರವದ ಸ್ಪರ್ಶ ತಪ್ಪದಂತೆ ಸ್ನೇಹ-ಗೌರವ ಕಸಿಗೊಳಿಸಿದಂಥ ಒಂದು ಅಪರೂಪದ ಬಗೆಯ ರುಚಿ ವಿಶೇಷ ಸಂಬಂಧದಲ್ಲಿ ನನ್ನೊಡನೆ ಒಡನಾಡುತ್ತಿದ್ದರು. ಅಂಥ ಉಲ್ಲಾಸ, ಆನಂದ ನೀಡುವಂಥ ಸ್ನೇಹ ಸಂಬಂಧದ ಅನುಭವವನ್ನು ನಾನು ಬೇರೆ ಯಾರಿಂದಲೂ ಪಡೆದಿಲ್ಲ. ಅದು ನಾನು ತೇಜಸ್ವಿಯಿಂದ ಪಡೆದ ಹೋಲಿಕೆ ಇಲ್ಲದ ಸ್ನೇಹದ ಸೌಭಾಗ್ಯ.
ನನ್ನ ಪಾಲಿನ ಕೆಲಸ ಮುಗಿಸಿ ಮೈಸೂರಿಗೆ ತಿರುಗಿ ಬರುವಾಗ, ‘ತೇಜಸ್ವಿ, ನಿಮಗೂ ಅರವತ್ತಾಗುತ್ತಾ ಬಂತು. ಈ ರೀತಿ ದೈತ್ಯನಂತೆ ಕೆಲಸ ಮಾಡುವುದನ್ನು ದೇಹ ಸಹಿಸಬೇಕಲ್ಲಾ; ಸಂಕಲ್ಪ ಬಲಕ್ಕೇ ಎಲ್ಲವನ್ನೂ ನಿಭಾಯಿಸುವುದಕ್ಕೆ ಆಗುವುದಿಲ್ಲ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ಇರಲಿ’ ಎಂದೆ. ಅದಕ್ಕೆ ತೇಜಸ್ವಿ, ‘ಮಾರಾಯರಾ, ನಾಲ್ಕು ಜನ್ಮದಲ್ಲಿ ನನ್ನಿಂದ ಮಾಡಿ ಮುಗಿಸುವುದಕ್ಕೆ ಆಗದಷ್ಟು ಕೆಲಸಗಳು, ಯೋಜನೆಗಳು ನನ್ನ ತಲೆಯಲ್ಲಿ ಗೆಜ್ಜೆ ಕಟ್ಟಿ ದಿಮಿದಿಮಿ ಕುಣಿಯುತ್ತಾ ಇವೆ. ನಿನಗೆ ಇಷ್ಟು ವರ್ಷ ಆಯುಷ್ಯ ಮಾರಾಯ, ಎಂದು ಯಾರು ನಮಗೆ ಹೇಳಿ ಕಳಿಸಿದ್ದಾರೆ? ಎಷ್ಟು ಆಗುತ್ತೊ ಅಷ್ಟನ್ನು ಮಾಡ್ತಾ ಹೋಗೋದಷ್ಟೇ’ ಅಂದರು. ಆಗ ನಾನು, ‘ನಿಮಗೆ, ನಿಮ್ಮ ಸಾಧನೆಗೆ ಬರುವ ಪ್ರಶಸ್ತಿ, ಸನ್ಮಾನಕ್ಕಿಂತ ದೊಡ್ಡ ಪ್ರಶಸ್ತಿ, ಸನ್ಮಾನ ರಾಜೇಶ್ವರಿಯವರಿಗೆ ಸಲ್ಲಬೇಕು ಕಣ್ರೀ. ಅವರಿಗೆ, ಅವರ ತಾಳ್ಮೆಗೆ ನಮಸ್ಕಾರ’ ಎಂದೆ. ತೇಜಸ್ವಿ ನಸು ನಕ್ಕರು. ಪ್ರತಿ ಮಾತನಾಡಲಿಲ್ಲ. ನಮ್ಮ ಕೆಲಸ ಮುಗಿಯುವುದಕ್ಕೆ ಇನ್ನೆರಡೊ ಮೂರೊ ದಿನ ಬೇಕಿತ್ತು. ನನ್ನ ಮಿತ್ರರಾದ ಡಾ.ಹಿ.ಶಿ.ರಾಮಚಂದ್ರೇಗೌಡರ ಹೆಂಡತಿ ನಾಗರತ್ನ ಕುಮಾರಿ ಮೈಸೂರಿಂದ ಮೂಡಿಗೆರೆಗೆ ಬಂದರು. ರಾಜೇಶ್ವರಿ, ನಾಗರತ್ನ ಇಬ್ಬರೂ ಮೊದಲೇ ನಿಶ್ಚಯಿಸಿಕೊಂಡಿದ್ದಂತೆ ಕೆ.ವಿ.ಸುಬ್ಬಣ್ಣನವರ ನೀನಾಸಂನ ಸಂಸ್ಕೃತಿ ಶಿಬಿರಕ್ಕೆ ಹೆಗ್ಗೋಡಿಗೆ ಹೊರಟರು. ತೇಜಸ್ವಿ, ಶ್ರೀರಾಮ ಅವರಿಗೇ ಅವರ ಹೊಟ್ಟೆ, ನನ್ನ ಹೊಟ್ಟೆ ಯೋಗಕ್ಷೇಮ ನೋಡಿಕೊಳ್ಳುವ ಹೊಣೆ ಬಿತ್ತು. ಕೆಲಸದಲ್ಲಿ ಲೋಕ ಮರೆತವರಂತೆ ತಲ್ಲೀನರಾಗಿರುತ್ತಿದ್ದ ತೇಜಸ್ವಿ, ಶ್ರೀರಾಮ ಹನ್ನೆರಡೂವರೆ ಒಂದು ಘಂಟೆ ಹೊತ್ತಿಗೆ, ನನಗೆ ಊಟಕ್ಕೆ ತಡವಾಗುತ್ತದೆ ಎಂದು, ಮಾಡುತ್ತಿದ್ದ ಕೆಲಸ ನಿಲ್ಲಿಸಿ ಮೊದಲೇ ತಂದಿಟ್ಟದ್ದೊ, ಸ್ಕೂಟರಿನಲ್ಲಿ ಹತ್ತಿರದ ಮೂಡಿಗೆರೆ ಪೇಟೆಗೆ ಹೋಗಿ ಆಗಲೇ ತಂದೊ, ಮಾಂಸದ ಬಿರಿಯಾನಿಯನ್ನು `ಮುಖ್ಯ ಐಟಂ’ ಆಗಿ ಮಾಡಿ ಅದ್ಯಾವ ಮಾಯೆಯಲ್ಲೊ, ಅದೆಂಥ ಕೌಶಲದಲ್ಲೊ ಒಂದೇ ಒಂದು ತಾಸು, ಹೆಚ್ಚೆಂದರೆ ಇನ್ನು ಹದಿನೈದು ನಿಮಿಷದೊಳಗೆ ದಡಬಡ ದಡಬಡ ಅಡುಗೆ ಸಿದ್ಧಪಡಿಸುತ್ತಿದ್ದರು. ಈ ಭೀಮ, ಈ ನಳ ಇಬ್ಬರೂ ಕೂಡಿ ಅಡುಗೆ ಮಾಡುವ ಪರಿ ನೋಡುವಂತಿತ್ತು. ಊಟದ ಮೇಜಿನ ಮೇಲೆ ಹಬೆ ಎದ್ದು ಹಬ್ಬುತ್ತಿರುವಂಥ ಬಿಸಿಬಿಸಿ ರುಚಿ ರುಚಿಯಾದ ರಾಶಿ ರಾಶಿ ಬಿರಿಯಾನಿ, ಮತ್ತೆ ಅದೂ ಇದೂ ವ್ಯಂಜನಗಳನ್ನು ಜೊತೆಗೂಡಿಸಿಕೊಂಡು, ಬೇರೆಲ್ಲವನ್ನು ಮರೆತು ಊಟ ಮಾಡುತ್ತಿದ್ದಾಗಿನ ಅಮಿತ ಉತ್ಸಾಹ, ಅಡುಗೆ ಮಾಡುತ್ತಿರುವಾಗಿನಿಂದ ಊಟ ಮುಗಿಸಿ ಪಾತ್ರೆ ಪಗಡಿ, ಒಲೆ ಸುತ್ತಮುತ್ತ ಸ್ವಚ್ಛಗೊಳಿಸುತ್ತಿದ್ದಾಗಲೆಲ್ಲ ತೇಜಸ್ವಿ ಮತ್ತು ಶ್ರೀರಾಮರ ನಡುವೆ ಜುಗಲ್ಬಂದಿ ಥರದಲ್ಲಿ ನಡೆಯುತ್ತಿದ್ದ ಸಂವಾದ ಸ್ವಾರಸ್ಯ, ಉಕ್ಕುತ್ತಿದ್ದ ಹಾಸ್ಯ, ನಗೆಮೊರೆತ – ಇವೆಲ್ಲ ಯಾವುದೋ ಗಂಭೀರ ನಾಟಕದ ನಡುವೆ ಬರುವ ಅಡುಗೆ-ಊಟದ ಪ್ರಹಸನ ರೂಪದ ದೃಶ್ಯವೊಂದನ್ನು ನಾವು ಮೂವರೂ ಸೇರಿ ಅಭಿನಯಿಸುತ್ತಿದ್ದೇವೇನೊ, ನನ್ನದು ಮುಖ್ಯ ಅತಿಥಿಯ ಪಾತ್ರವೇನೊ ಎಂಬಂತೆ ನನಗೆ ಅನಿಸುತ್ತಿತ್ತು.
೨೦೦೭ರ ಏಪ್ರಿಲ್ ೫ ರಂದು ಮಧ್ಯಾಹ್ನ ತೇಜಸ್ವಿ ಬಿರಿಯಾನಿ ಊಟ ತೃಪ್ತಿಯಾಗುವಂತೆ ಉಂಡು ಎದ್ದು ಕೈಬಾಯಿ ತೊಳೆಯಲು ಹೋದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಕ್ಷಣಾರ್ಧದಲ್ಲಿ ಇಲ್ಲವಾದರೆಂಬ ಆಘಾತಕರ ಸುದ್ದಿ ಬಂತು. ಸುದ್ದಿ ಕೇಳಿದಾಗ, ಉಕ್ಕಿ ಬಂದ ದುಃಖದ ಜೊತೆ ಜೊತೆಗೇ, ಅವರೊಂದಿಗಿನ ನನ್ನ ಬೇರೆ ನೂರು ನೆನಪುಗಳಿದ್ದರೂ ಎಲ್ಲಾ ನೆನಪುಗಳನ್ನೂ ಹಿಂದೆ ನೂಕಿ ನುಗ್ಗಿ ಧುತ್ತೆಂದು ನನ್ನ ಕಣ್ಣಮುಂದೆ ಬಂದು `ಶ್ರೀ ರಾಮಾಯಣ ದರ್ಶನಂ’ ಹಸ್ತಪ್ರತಿಯನ್ನು ಮುದ್ರಣಕ್ಕೆ ಸಿದ್ಧಗೊಳಿಸುತ್ತಿದ್ದಾಗಿನ ಅನುಭವ; ಅದರಲ್ಲಿಯೂ ರಾಜೇಶ್ವರಿ ಮನೆಯಲ್ಲಿಲ್ಲದ ಆ ಕೊನೆಯ ಎರಡು ದಿನಗಳ ತೇಜಸ್ವಿ, ಶ್ರೀರಾಮರ ಬಿರಿಯಾನಿ ಅಡುಗೆ-ಊಟದ ಪ್ರಹಸನ ಪ್ರಸಂಗ, ಆಮೇಲೆ ನಾನು ಮೂಡಿಗೆರೆಗೆ ಹೋಗಿಯೇ ಇರಲಿಲ್ಲ. ಸುದ್ದಿ ಕೇಳಿದ್ದೇ ತಡ ನನ್ನ ಮಗಳು ಕೀರ್ತಿ, ಅಳಿಯ ಮದನ ಮೂಡಿಗೆರೆಗೆ ಹೊರಡಲು ತೀರ್ಮಾನಿಸಿದರು. ತೇಜಸ್ವಿ ಅಂದರೆ ಅವರಿಗೂ ಎಲ್ಲಿಲ್ಲದ ಪ್ರೀತಿ, ಅಭಿಮಾನ, ಗೌರವ. ತೇಜಸ್ವಿಯವರಿಗೆ ತೀವ್ರ ಹೃದಯಾಘಾತ ಆಗಿದೆ ಎಂಬ ಸುದ್ದಿ ತಿಳಿಸಲು ಶ್ರೀರಾಮ್ ನಮ್ಮ ಮನೆಗೆ ಫೋನ್ ಮಾಡಿದಾಗ ನಾನೇ ಎತ್ತಿಕೊಂಡಿದ್ದೆ. ನನ್ನ ದನಿ ಕೇಳಿದವರೇ ನನ್ನ ಆರೋಗ್ಯ ಸ್ಥಿತಿಯ ಹಿನ್ನೆಲೆಯ ಕಾರಣದಿಂದಾಗಿ ವಿಷಯ ಏನೆಂದು ನನಗೆ ಸುಳಿವನ್ನೂ ಕೊಡದೆ, `ಸ್ವಲ್ಪ ಮೀರಾಗೆ ಕೊಡಿ’ ಎಂದವರು ಮೀರಾಗೆ ವಿಷಯ ತಿಳಿಸಿ, ಅವರು ಮೂಡಿಗೆರೆಗೆ ಹೊರಟಿದ್ದಾಗಿ ಹೇಳಿ ನನಗೆ ನಿಧಾನವಾಗಿ ವಿಷಯ ತಿಳಿಸಿ ಎಂದಿದ್ದರಂತೆ. `ನೀವು ಬರ್ತೀರಾ’ ಎಂದು ನನ್ನನ್ನು ಕೇಳುವುದಕ್ಕೆ ನನ್ನ ಆರೋಗ್ಯದ ಸ್ಥಿತಿ ಬಲ್ಲ ಕೀರ್ತಿ, ಮದನರಿಗೆ ಧೈರ್ಯ ಬರಲಿಲ್ಲ. ನನಗೆ ಏನಾದರಾಗಲಿ ನಾನೂ ಹೋಗಲೇ ಬೇಕು. ಹೋಗದೆ ಇದ್ದರೆ ನಾನಿರುವಷ್ಟು ಕಾಲ ನಾನು ಕೊರಗುವುದು ತಪ್ಪುವಂತಿಲ್ಲ ಎಂದು ನನಗೆ ತೀವ್ರವಾಗಿ ಅನಿಸಿ ನಾನೂ ಅವರ ಜೊತೆಗೆ ಮೂಡಿಗೆರೆಗೆ ಹೊರಟು ನಿಂತೆ. ನನ್ನ ಮೊಮ್ಮಗಳು ಚಕಿತಾಗೆ ಪರೀಕ್ಷೆ ನಡೆಯುತ್ತಿತ್ತು. ನನ್ನ ಹೆಂಡತಿ ಮೀರಾಗೆ ಹೊರಡಲಿಕ್ಕೆ ಸಾಧ್ಯವೇ ಆಗದಂಥ ಬೇರೊಂದು ಕಾರಣವೂ ಇತ್ತು. ಅವಳು ಅಸಹಾಯಕಳಾಗಿದ್ದಳು. ಅದರಿಂದಾಗಿ ತುಂಬಾ ಚಡಪಡಿಸುತ್ತಿದ್ದಳು. ದಾರಿಯುದ್ದಕ್ಕೂ ನೆನಪುಗಳು ಒಂದಾದ ಮೇಲೆ ಒಂದು, ಒಂದರ ಜೊತೆಗೇ ಇನ್ನೊಂದು ಗಿಜಿಗಿಜಿಗೊಂಡು ನುಗ್ಗಿ ನುಗ್ಗಿ ಬಂದು ನನ್ನನ್ನು ಒಳಗೇ ಗುದ್ದಿ ಗುದ್ದಿ ಹಣ್ಣು ಮಾಡುತ್ತಲೇ ಇದ್ದವು. ೧೯೫೪-೫೫ರಲ್ಲಿ ನಾನು, ತೇಜಸ್ವಿ ಯುವರಾಜ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಜ್ಯೂನಿಯರ್ ಇಂಟರ್ನಲ್ಲಿ ಓದುತ್ತಿದ್ದೆವು. ತೇಜಸ್ವಿ ವಿಜ್ಞಾನ ವಿಷಯಗಳ ವಿದ್ಯಾರ್ಥಿ, ನಾನು ಕಲಾ ವಿಭಾಗದ ವಿದ್ಯಾರ್ಥಿ. ತೇಜಸ್ವಿಯವರ ತಂದೆ ಪ್ರೊ.ಕೆ.ವಿ.ಪುಟ್ಟಪ್ಪನವರು (ಕುವೆಂಪು) ಪಕ್ಕದ ಮಹಾರಾಜ ಕಾಲೇಜಿನಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರೂ ಮುಖ್ಯಸ್ಥರೂ ಆಗಿದ್ದರು. ಮಹಾಕವಿ ಕೀರ್ತಿಯ ಪ್ರಭಾವಳಿಯೂ ಇದ್ದ ಕುವೆಂಪು `ಕೀರ್ತಿಶನಿ ತೊಲಗಾಚೆ’ ಎಂದು ಹೇಳುತ್ತಿದ್ದರೂ ಯಶೋಲಕ್ಷ್ಮಿಯ ವಲ್ಲಭ ಎಂಬಂತಾಗಿಬಿಟ್ಟಿದ್ದರು. ಅಂಥ ಅನ್ಯಾದೃಶ ವ್ಯಕ್ತಿತ್ವದ ಪ್ರಭಾವಳಿಯ ಮಹಿಮಾವಂತ ತಂದೆಯ ಮಗ ಎಂಬ ಕಾರಣದಿಂದಾಗಿ ತೇಜಸ್ವಿ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾರೆ ಎಂಬುದೇ ಒಂದು ವಿಶೇಷ ಸುದ್ದಿಯಾಗಿತ್ತು. ನನಗೆ ಅವರನ್ನು ನೋಡಬೇಕೆಂಬ ಆಸೆ ಇತ್ತು. ಆದರೆ ನೋಡುವ ಅವಕಾಶ ಕೂಡಿ ಬಂದಿರಲಿಲ್ಲ. ಅದಕ್ಕೆ ಕಾರಣವಿತ್ತು. ಸ್ಥಳಾವಕಾಶದ ಕೊರತೆಯಿಂದಾಗಿ ನಮಗೆ ತರಗತಿಗಳು ಎಲ್ಲೆಲ್ಲಿಯೊ – ಕ್ರಾಫರ್ಡ್ ಭವನದ ಕೊಠಡಿಗಳಲ್ಲಿ ಕೂಡ – ಯಾವ ಯಾವಾಗಲೊ ನಡೆಯುತ್ತಿದ್ದವು. ಆ ವಿವರ ಇಲ್ಲಿ ಬೇಡ. ೧೯೫೫ರ ಮಾರ್ಚ್ ತಿಂಗಳ ಕೊನೆಯವಾರದ ಒಂದು ದಿನ; ಜ್ಯೂನಿಯರ್ ಇಂಟರ್ ಪರೀಕ್ಷೆ ಅದೇ ದಿನ ಮುಗಿದಿದ್ದವು. ಅದು ಪಬ್ಲಿಕ್ ಪರೀಕ್ಷೆಯಾಗಿರಲಿಲ್ಲ; ಕಾಲೇಜು ಪರೀಕ್ಷೆಯಾಗಿತ್ತು. ಕೊನೆಯ ವಿಷಯದ ಪರೀಕ್ಷೆ ಆಗತಾನೆ ಮುಗಿದಿತ್ತು. ಕಾಲೇಜಿನನ ಆಡಳಿತ ಕಚೇರಿಯವರು `ಫೀಸ್’ ವಿಷಯವಾಗಿಯೊ ಏನೊ ನಾನೂ ಸೇರಿದಂತೆ ಕೆಲವು ವಿದ್ಯಾರ್ಥಿಗಳು ಕಚೇರಿಯ ಮುಖ್ಯ ಗುಮಾಸ್ತೆಯನ್ನು ನೋಡಬೇಕೆಂದು ನೋಟೀಸ್ ಬೋರ್ಡ್ನಲ್ಲಿ ಪ್ರಕಟಸಿದ್ದರು. ನಾನು ಕಚೇರಿ ಕಡೆ ಹೋಗಲು ಕಾಲೇಜಿನ ಮಹಡಿ ಮೆಟ್ಟಿಲುಗಳನ್ನು ಹತ್ತಿ ಹತ್ತಿ ಹೋಗುತ್ತಿದ್ದೆ. ಮಹಡಿಯ ಮೇಲುಗಡೆಯಿಂದ ಇಬ್ಬರು ಹುಡುಗರು ಮೆಟ್ಟಿಲುಗಳನ್ನು ಇಳಿದು ಬರುತ್ತಿದ್ದರು. ಅವರಲ್ಲಿ ಒಬ್ಬ ಕೈಯಲ್ಲಿದ್ದ ಪ್ರಶ್ನೆ ಪತ್ರಿಕೆಯನ್ನು ಎರಡೂ ಕೈಗಳಿಂದ ಮಡಚಿ ಮಡಚಿ ಸುರಳಿ ಮಾಡಿ, ನಡುವೆ ಬಾಯಿಹಾಕಿ ಕಚ್ಚಿ ಕಚ್ಚಿ ತುಂಡು ಮಾಡಿ, ಹರಿದು `ಸೀಬಯ್ಯನ ಅಜ್ಜೀ ತಲೇ’ ಎಂದು ಎರಡೂ ಕೈಗಳನ್ನು ಮೇಲೆತ್ತಿ ದೊಡ್ಡ ದನಿಯಲ್ಲಿ ಕೂಗುತ್ತಾ ಕೆಳಗಿನ ಮೆಟ್ಟಿಲುಗಳ ಮೇಲೆ ಎಸೆದುಬಿಟ್ಟು ಸಂಭ್ರಮಿಸಿದ. ನನ್ನ ಜೊತೆಯಲ್ಲಿಯೇ ಇದ್ದ ನನ್ನ ಸಹಪಾಠಿ, ಅವರು ಕೆ.ವಿ.ಪುಟ್ಟಪ್ಪನವರ ಮಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಎಂದು ನನಗೆ ಕೇಳಿಸುವಂತೆ ಪಿಸುಗುಟ್ಟಿದ. `ಕೋಗಿಲೆಯ ಮರಿಯೆಂದು ಕೈತುಡುಕಿದರೆ ಕಾಗೆ ಮರಿ ಕೂಗಿದವೊಲಾಯ್ತು.’ ನಾನು ಅವಾಕ್ಕಾದೆ. ನಾನು ನೋಡಬೇಕೆಂದು ಹಂಬಲಿಸುತ್ತಿದ್ದ ಪೂರ್ಣಚಂದ್ರ ತೇಜಸ್ವಿಯವರನ್ನು ಈ `ಹನುಮನ ಅವತಾರ’ದಲ್ಲಿ ನೋಡುವಂತಾಗಿತ್ತು. ಆಗ ನನಗಾದ ನಿರಾಶೆ ಅಷ್ಟಿಷ್ಟಲ್ಲ. ನಾನು ದಿಗ್ಭ್ರಾಂತ, ಜೊತೆಗೆ ಕುಪಿತ ಮನಃಸ್ಥಿತಿಯಲ್ಲಿ, ಹತ್ತಿ ನಿಂತಿದ್ದ ಮೆಟ್ಟಿಲ ಮೇಲೆಯೆ ತೇಜಸ್ವಿ ಕೆಳಗಿಳಿದು ಹೋಗುವವರೆಗೂ ನಿಂತೇ ಇದ್ದೆ. ನಾನು ಯಾರು ಎಂದು ಗೊತ್ತೇ ಇಲ್ಲದ ಅವರು ಒಮ್ಮೆ ನನ್ನತ್ತ ನೋಡಿದಂತೆ ಮಾಡಿ `ಕ್ಯಾರೇ’ ಅನ್ನದೆ ಕೆಳಗಿಳಿದು ಹೊರಟು ಹೋದರು. ಬೇರೆ ರಾಜ್ಯದಿಂದ ಬಂದವನು ಎಂಬ ಕಾರಣಕ್ಕೆ ಪ್ರಿನ್ಸಿಪಾಲ್ ಡಾ.ಎಲ್. ಸೀಬಯ್ಯನವರು ನನ್ನ ಪ್ರಥಮ ದರ್ಜೆಗೆ ಸ್ಟಾಂಡರ್ಡ್ ಇದೆ ಎಂಬುದೇನು ಖಾತ್ರಿ? ಇತ್ಯಾದಿ ಅಸಂಬದ್ಧ ಮಾತುಗಳನ್ನಾಡಿ ಸಲ್ಲದ ರೀತಿಯಲ್ಲಿ ನಡೆದುಕೊಂಡು ನನಗೆ ಸೀಟು ಕೊಡಲು ಅತಿಯಾಗಿ ಸತಾಯಿಸಿದ್ದರು. ನಾನು ಕಣ್ಣೀರಿಡುವಂತೆ ಮಾಡಿದ್ದರು. ಆ ವಿವರ ಇಲ್ಲಿ ಬೇಡ. ಆ ಹಿನ್ನೆಲೆಯಿಂದಾಗಿ ಡಾ.ಸೀಬಯ್ಯನವರನ್ನು ತೇಜಸ್ವಿ ಲಘುವಾಗಿ ಅಂದ ಬಗ್ಗೆ ವೈಯಕ್ತಿಕವಾಗಿ ನನಗೇನೂ ಬೇಸರವಾಗಿರಲಿಲ್ಲ. ನಾನು ಅವರ ಬಗ್ಗೆ ಹೇಳಲಾಗದ್ದನ್ನು ತೇಜಸ್ವಿ ಹೇಳಿದ್ದರು. ಡಾ.ಸೀಬಯ್ಯನವರ ಬಗ್ಗೆ ಹಾಗೆ ಹೇಳುವುದಕ್ಕೆ ತೇಜಸ್ವಿಗೆ ಬೇರೆ ಏನು ಕಾರಣವಿತ್ತೊ ಗೊತ್ತಿಲ್ಲ. ಆದರೂ ವಿದ್ಯಾರ್ಥಿಯಾದವನಿಗೆ ಅಂಥ ವರ್ತನೆ ಭೂಷಣವಾಗಿರಲಿಲ್ಲ. ಒಂದಲ್ಲ ಎರಡಲ್ಲ, ನಾನು ಪಟ್ಟ ಮತ್ತು ಪಡುತ್ತಿದ್ದ ಪಾಡುಗಳ ನಡುವೆಯೂ ನಾನು ಪದವೀಧರನಾಗಲೇಬೇಕೆಂಬ ಛಲದಿಂದ ಕಷ್ಟಪಟ್ಟು ಓದುತ್ತಿದ್ದ ನನಗೆ ದೊಡ್ಡವರ ಮಗ ತೇಜಸ್ವಿಯ ಈ ಹೊಣೆಗೇಡಿ ವರ್ತನೆ ಕಂಡು ಸಿಟ್ಟು ಬಂದಿತ್ತು. ತೇಜಸ್ವಿ ಆ ವರ್ಷದ ಪರೀಕ್ಷೆಯಲ್ಲಿ ಫೇಲ್ ಆದರು. ಮುಂದೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್ ಆರ್ಟ್ಸ್ ಓದಿದರು. ಅದೇ ತೇಜಸ್ವಿ ಮುಂದೆ ನನ್ನ ಕಣ್ಣೆದುರೇ ನಾನು ನೋಡುತ್ತ ನೋಡುತ್ತ ಇರುವಂತೆಯೇ ಸಾಹಿತಿಯಾಗಿ, ಚಿಂತಕನಾಗಿ, ಸಾಂಸ್ಕೃತಿಕ ವ್ಯಕ್ತಿತ್ವವಾಗಿ, ವೈಯಕ್ತಿಕವಾಗಿ ನನ್ನ ಸ್ನೇಹದ ಶಿಖರವಾಗಿ ಬೆಳೆದ ಅದ್ಭುತಕ್ಕೆ ಬೆರಗಾಗುವಂತಾಯಿತು.
ತೇಜಸ್ವಿ ಜನ್ನಾಪುರದ ಸಮೀಪದ ಒಳಕಾಡಿನಲ್ಲಿ ಕಾಫಿ ತೋಟ ಮಾಡುತ್ತಿದ್ದ ಮೊದಲ ದಿನಗಳು. ನನ್ನ ಪರಿಚಿತರೊಬ್ಬರು ಮೂಡಿಗೆರೆ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ಶಾಲೆಯ ಸಮಾರಂಭವೊಂದಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ ಕರೆದಿದ್ದರು. ಹೋಗಿ ಭಾಷಣ ಮುಗಿಸಿ ತಿರುಗಿ ಹೊರಡಲು ಸಜ್ಜಾದರೂ ನನಗೆ ಅಲ್ಲಿಗೆ ಬಂದು ಹೋದದ್ದಕ್ಕೆಂದು ಒಂದು ಪೈಸೆಯನ್ನೂ ಕೊಡುವ ಸೂಚನೆ ಕಾಣಿಸಲಿಲ್ಲ. ಕೇಳುವುದು ಹೇಗೆ? ನಾನು ಅಲ್ಲಿಂದ ನೇರ ನಮ್ಮ ಊರು ಅಂಕೋಲೆಗೆ ಹೋಗುವವನಿದ್ದೆ. ಪ್ಯಾಂಟ್ ಜೇಬಿಗೆ ತಿರುಗಿ ತಿರುಗಿ ಕೈಹಾಕಿ ಒಳಕೈಯಲ್ಲೇ ಇದ್ದಷ್ಟು ಹಣವನ್ನು ಮುಟ್ಟಿ ಮುಟ್ಟಿ ಎಷ್ಟಿದೆ ಎಂದು ತಿರುಗಿ ಲೆಕ್ಕ ಮಾಡಿಕೊಂಡೆ. ಎಷ್ಟು ಸಲ ಲೆಕ್ಕ ಮಾಡಿದರೂ ಹಾಗೂ ಹೀಗೂ ಕೇವಲ ಬಸ್ ಟಿಕೆಟ್ ಮಟ್ಟಿಗೆ ಸಾಕಾಗವಷ್ಟು ಹಣ ಮಾತ್ರ ಇದೆ ಎಂಬುದು ಮನವರಿಕೆ ಆಯಿತು. ದಾರಿಯಲ್ಲಿ ಚಹಕ್ಕೊ ಊಟಕ್ಕೊ ಎಂದು ಒಂದು ಪೈಸೆ ಖರ್ಚು ಮಾಡಿದರೂ ಊರು ತಲುಪುವುದು ಕಷ್ಟ ಅನಿಸಿತು. ಆ ಕಾಲದಲ್ಲಿ ಊರ ಕಡೆಯ ಎಷ್ಟೋ ಹುಡುಗರನ್ನು ಮೈಸೂರಿಗೆ ಕರೆದು ತಂದು ಓದಿಸುತ್ತಿದ್ದೆ; ಓದಿಗೆ ಸಹಾಯ ಮಾಡುತ್ತಿದ್ದೆ. ಹಾಗಾಗಿ ನನ್ನ ಕೈಯಲ್ಲಿ ಕಾಸು ನಿಲ್ಲುತ್ತಲೇ ಇರಲಿಲ್ಲ. ನಾನು ತಲೆತುಂಬ ಆದರ್ಶದ ಕನಸು ತುಂಬಿಕೊಂಡಿದ್ದ ಕಾಲವದು. ಬಸ್ ನಿಲ್ದಾಣದವರೆಗೆ ಜೊತೆಗೇ ಬಂದರೂ ಆ ಶಿಕ್ಷಕರು ಹಣದ ಬಗ್ಗೆ ಚಕಾರ ಎತ್ತಲಿಲ್ಲ ತಬ್ಬಿಬ್ಬಾದೆ. ತೇಜಸ್ವಿಯವರ ನೆನಪಾಯಿತು. ಅಲ್ಲೆಲ್ಲೊ ಸಮೀಪದಲ್ಲೇ ಅವರ ತೋಟ ಇದೆ ಎಂದು ಗೊತ್ತಿತ್ತು. ಎಲ್ಲಿ ಸಮೀಪ ಎಂದರೆ ಎಷ್ಟು ದೂರ ಎಂಬ ಬಗ್ಗೆ ನನಗೆ ಅಂದಾಜಿರಲಿಲ್ಲ. ಅದಾದರೂ ಗೊತ್ತಿದ್ದರೆ ಚೆನ್ನಾಗಿತ್ತಲ್ಲಾ ಎಂದು ಒಳಗೊಳಗೇ ಅಂದುಕೊಂಡು ಅಸಹಾಯಕನಂತಾದೆ. ತೇಜಸ್ವಿ ತೋಟಕ್ಕೆ ಹೋಗಬೇಕು, ಅವರ ಜೊತೆಯಲ್ಲಿ ಒಂದು ದಿನವನ್ನಾದರೂ ಕಳೆಯಬೇಕು ಎಂಬ ಯೋಚನೆ, ಯೋಜನೆ ಹಾಕಿಕೊಂಡು ಬಂದಿರಲಿಲ್ಲ. ನಾನು ಊರಿಗೆ ಬೇಗ ಹೋಗಿ ತಲುಪಬೇಕಾದ ಅರ್ಜೆಂಟೂ ಇತ್ತು. ಏನು ಮಾಡುವುದು, ಯಾರನ್ನು ಕೇಳುವುದು ಎಂದು ಗೊತ್ತಾಗದೆ ಆ ಶಿಕ್ಷಕರನ್ನೇ ಕೇಳಿದೆ. ಅವರಿಗೂ ತೋಟ ಇಲ್ಲೆಲ್ಲೊ ಸಮೀಪದಲ್ಲೇ ಇದೆ ಎಂಬಷ್ಟು ಮಾತ್ರ ಗೊತ್ತಿತ್ತು; ಎಲ್ಲಿ ಎಂಬುದು ಗೊತ್ತಿರಲಿಲ್ಲ. ಬಸ್ ನಿಲ್ದಾಣ ಸಮೀಪಿಸುತ್ತಿದ್ದಂತೆ ಮಳೆ ಹನಿ ಬೀಳತೊಡಗಿತು. ಅವಸರವಸರವಾಗಿ ಬಸ್ ನಿಲ್ದಾಣ ಸೇರಿಕೊಳ್ಳಲು ತುರುಸಿನ ಹೆಜ್ಜೆ ಹಾಕುತ್ತ ನಾವು ಧಾವಿಸುತ್ತಿದ್ದರೆ ನೆನೆದವರ ಮನದಲ್ಲಿ ಎಂಬಂತೆ ತೇಜಸ್ವಿಯವರು ನಮ್ಮ ಎದುರೇ ಸ್ಕೂಟರಿನಲ್ಲಿ ಬರುತ್ತಿದ್ದದ್ದು ಕಂಡಿತು. ಮಳೆ ಬೀಳುತ್ತಿದ್ದದ್ದರಿಂದ ವೇಗ ಕಡಮೆ ಮಾಡಿದ್ದ ಅವರಿಗೂ ನಾನು ಹೇಗೊ ಕಣ್ಣಿಗೆ ಬಿದ್ದಿದ್ದೆ. ಇಬ್ಬರಿಗೂ ಆಶ್ಚರ್ಯ. ಸ್ಕೂಟರ್ ನಿಲ್ಲಿಸಿ, ಆ ಮಳೆಯಲ್ಲೇ, `ಏನ್ ಮಾರಾಯ್ರಾ ಇಲ್ಲಿ? ಎಲ್ಲಿಗೆ ಬಂದಿದ್ರೀ? ಎಲ್ಲಿಗೆ ಹೋಗ್ತೀರಿ?’ ಎಂದು ಪ್ರಶ್ನೆ ಕೇಳುತ್ತಿದ್ದವರು ನನ್ನ ಉತ್ತರಕ್ಕಾಗಿ ಕಾಯದೆ, `ಬನ್ರೀ ನನ್ನ ಜೊತೆಲಿ, ತೋಟ ತೋರಿಸ್ತೀನಿ, ಒಂದೆರಡು ದಿನ ಇದ್ದು ಹೋದ್ರಾಯ್ತು’ ಎಂದು ಹೇಳುತ್ತ ಹೇಳುತ್ತ ಸ್ಕೂಟರ್ ಮೇಲೆ ಹತ್ತಿಸಿಕೊಂಡೇ ಬಿಟ್ಟರು. ಆಗೊಂದು ಈಗೊಂದು ಹನಿ ಬೀಳುತ್ತಿದ್ದ ಮಳೆಗೆ `ಕೇರ್’ ಮಾಡದೆ ನನ್ನನ್ನೂ ಕರಕೊಂಡು ಹೊರಟೇಬಿಟ್ಟರು. ನನಗೆ ಹಾಯೆನಿಸಿತು. ನನ್ನ ತೋಟಕ್ಕಲ್ಲ ಕಣ್ರೀ. ನನ್ನ ಫ್ರೆಂಡ್ ವಾಸು ಅವರ ಭೂತನ ಕಾಡು ತೋಟಕ್ಕೆ ಕಣ್ರೀ. ನಿಮಗೊಂದು ಸರ್ಪ್ರೈಸ್ ಕೊಡ್ತೀನಿ’ ಇತ್ಯಾದಿ ಖುಷಿ ಉಕ್ಕುವಂಥ ಮಾತುಗಳನ್ನಾಡುತ್ತಾ ಹೋದರು. ಭೂತನ ಕಾಡು ಎಸ್ಟೇಟ್ನಲ್ಲಿದ್ದ ರಾಜೇಶ್ವರಿಯವರನ್ನು ಕರೆದು, ನನಗೆ ಪರಿಚಯಿಸಿ `ನಾನು ಮದುವೆಯಾಗುವ ಹುಡುಗಿ’ ಅಂದರು. ಬರುವಾಗ ದಾರಿಯಲ್ಲಿ ಹೇಳಿದಂತೆ ಒಳ್ಳೇ ಸರ್ಪ್ರೈಸ್ ನ್ನೇ ಕೊಟ್ಟರು. ರಾಜೇಶ್ವರಿಯವರನ್ನು ನೋಡಿದ ನೆನಪೇನೊ ನನಗೆ ಮಿಂಚಿದಂತಾಯಿತು. ಸರಿಯಾಗಿ ನೆನಪಾಗಲಿಲ್ಲ. ನಾನು ಮಹಾರಾಜ ಕಾಲೇಜಿನಲ್ಲಿ ಕನ್ನಡ ಆನರ್ಸ್, ಎಂ.ಎ. ಓದುತ್ತಿರುವಾಗಲೇ ಕಂಡ ನೆನಪಾಯಿತು. ಸ್ವಲ್ಪ ಜೂನಿಯರ್ ಆಗಿದ್ದರೊ ಏನೊ! ರಾಜೇಶ್ವರಿ ಫಿಲಾಸಫಿ ಎಂ.ಎ ಮಾಡಿದವರು. ತೇಜಸ್ವಿ ಬಂದೂಕು ಎತ್ತಿಕೊಂಡರು. ‘ಪ್ಯಾಂಟ್ ಕಳಚಿ ಪಂಚೆ ಉಟ್ಟುಕೊಳ್ರೀ. ಈ ತೋಟ ತೋರಿಸ್ತೇನೆ ಬನ್ರೀ’ ಎಂದರು. ಅವರು ಮಂಡಿವರೆಗೆ ಮಡಚಿಕೊಂಡ ಒರಟು ಒರಟಾದ ಪ್ಯಾಂಟ್ ತೊಟ್ಟಿದ್ದರು. ಮದುವೆ ಆಗುವ ಹುಡುಗಿ ಬರುವಾಗಲೂ, ಬಂದಾಗಲೂ ಸ್ವಲ್ಪ ಶೋಕಿ ಲುಕ್ ಕೊಡಬೇಕು ಎಂಬ ಉಮೇದು ಕಾಣಿಸಲಿಲ್ಲ. ತೋಟದಲ್ಲಿ ಸುತ್ತಾಡಿಸಿದರು. ಎಲ್ಲೊ ತೀರ ಹತ್ತಿರವಲ್ಲದ ಒಂದು ಮರದ ಮೇಲೆ ಕಾಡುಕೋಳಿಯೊಂದು ಕೂತಿದ್ದು ಕಂಡರು. ಗುಂಡು ಹಾರಿಸಿದರು, ‘ಬಿತ್ತು ಕಣ್ರೀ’ ಎಂದರು. ಬಿತ್ತು ಎಂದ ಕೋಳಿ ಹುಡುಕೋಣ ಎಂದರೆ ಸಾಧ್ಯವೇ ಆಗದ ರೀತಿಯಲ್ಲಿ ಅದೇನು ಮಳೆಯೊ, ಎಲ್ಲಿತ್ತೊ ಧೋ ಧೋ ಎಂದು ಬಿರುಸು ಭರಾಟೆಯಲ್ಲಿ ಇದ್ದಕ್ಕಿದ್ದಂತೆ ಸುರಿಯತೊಡಗಿತು. ‘ಮಳೆ ಏನ್ಮಾಡ್ತದೆ ಬನ್ರೀ. ಇಲ್ಲೆಲ್ಲೊ ಬಿದ್ದಿದೆ ಹುಡುಕೋಣ, ಎಂದವರು ಅಲ್ಲಿ ಇಲ್ಲಿ ತೇಜಸ್ವಿ ಎಲ್ಲಾ ಕಡೆಗೂ ಆ ಕಾಫಿ ತೋಟದ ಒಳಗೆ ಹುಡುಕಿಯೇ ಹುಡುಕಿದರು. ಈಡು ತಾಗಿತ್ತೊ ಇಲ್ಲವೊ ಎಂದು ನಾನು ಹೇಳಿದ್ದಕ್ಕೆ ‘ಯೇ… ನಾನು ಈಡು ಹೊಡೆದರೆ ಅದೂ ಬೀಳಬೇಕು, ಅದರಪ್ಪನೂ ಬೀಳಬೇಕು, ನೀವಿಲ್ಲೇ ಮರದ ಕೆಳಗೆ ನಿಂತಿರಿ, ನಾನು ಹುಡುಕ್ತೇನೆ’ ಎಂದವರು ಮತ್ತೆ ಹುಡುಕಿದರು. ಕೊನೆಗೂ ಕೋಳಿ ಪತ್ತೆಯಾಗಲಿಲ್ಲ. ಥತ್ ಇದರ…’ ಎಂದು ಅದನ್ನೂ ಅದರಪ್ಪನನ್ನೂ ಬೈದರು. ಮೈಯೆಲ್ಲಾ ಒದ್ದೆ ಮಾಡಿಕೊಂಡು ಮನೆಗೆ ತಿರುಗಿ ಬಂದರೆ, ನೋಡ್ತೇನೆ, ನನ್ನ ಕಾಲುಗಳ ಮೇಲೆ ಅಲ್ಲಿ ಇಲ್ಲಿ ಇಂಬಳಗಳು ರಕ್ತ ಹೀರುತ್ತಾ ಊದಿಕೊಂಡು ಉನ್ಮತ್ತವಾಗಿವೆ. ತೆಗೆದಷ್ಟೂ ರಕ್ತದೋಕುಳಿ. ಹೊಸ ಅನುಭವ. ಗಾಬರಿಯಾದೆ, ಗಲಿಬಿಲಿಗೊಂಡೆ. ತೇಜಸ್ವಿಯವರೇ ಇಂಬಳಗಳನ್ನೆಲ್ಲ ಒಂದೊಂದಾಗಿ ತೆಗೆದು ಬಿಸಾಕಿ ಸುಣ್ಣವನ್ನೊ ಏನೊ ಒಳಗಿಂದ ತರಿಸಿ ಮೆತ್ತಿದರು. ರಕ್ತ ಹರಿಯುವುದು ಕಡಮೆ ಆಯ್ತು. ನನ್ನ ಪಂಚೆ ರಕ್ತಮಯವಾಗಿತ್ತು. ಗೊತ್ತಿಲ್ಲದವರ ಮನೆಯಲ್ಲಿ ಹೊಸದಾಗಿ ಮುಟ್ಟಾದ ಹುಡುಗಿ ಹಾಗೆ ನಾನು ನಾಚಿ ನೀರಾಗಿ ಹೋಗಿದ್ದೆ. ತಂದದ್ದೇ ಒಂದು ಪಂಚೆ, ಒಂದು ಪ್ಯಾಂಟು, ಎರಡು ಷರಟು. ಸ್ನಾನ ಮಾಡಿ ಪ್ಯಾಂಟು ಹಾಕಿಕೊಂಡೆ ಷರಟು ಬದಲಿಸಿದೆ. ಪಂಚೆ ಒಗೆಸಿದರೂ ರಕ್ತದ ಕಲೆಗಳು ಪೂರ್ತಿ ಹೋಗಿರಲಿಲ್ಲ. ಕಾಡುಕೋಳಿ ಊಟ ಅಲ್ಲದಿದ್ದರೂ ರಾಜೇಶ್ವರಿಯವರ ಮನೆಯಲ್ಲಿ ಊರ ಕೋಳಿ ಊಟದ ಆತಿಥ್ಯ ದೊರೆತಿತ್ತು. ಸಂಜೆ ಆಗುವುದರೊಳಗೇ ತೇಜಸ್ವಿಯವರ ‘ಚಿತ್ರಕೂಟ’ ತೋಟಕ್ಕೆ ಕರೆದುಕೊಂಡು ಹೋದರು. ‘ಚಿತ್ರಕೂಟ’ ಎಂದು ಹೆಸರು ಕೊಟ್ಟವರು ಕುವೆಂಪು. ಯಾಕೊ ತೋಟಕ್ಕೆ ಯಾವ ಹೆಸರಿಡುವುದೆಂದು ನನ್ನನ್ನು ತೇಜಸ್ವಿ ಕೇಳಿದ್ದರು. ನಾನು ‘ಶ್ರೀ ರಾಮಾಯಣದರ್ಶನಂ’ದ ಹಿನ್ನೆಲೆಯ ಕಲ್ಪನೆಯಲ್ಲಿ ‘ಕಿಷ್ಕಿಂಧೆ’ ಎಂದು ಸೂಚಿಸಿದ್ದೆ. ಕುವೆಂಪು ‘ಚಿತ್ರಕೂಟ’ ಎಂದು ಹೇಳಿದರು ಕಣ್ರೀ. ಅದನ್ನೇ ಇಡುತ್ತೇನೆ ಅಂದಾಗ ಅದ್ಭುತವಾಗಿದೆ ಎಂದು ನಾನು ಹೇಳಿದ್ದೂ ನೆನಪಿದೆ. ಈಗಿನ ತೋಟಕ್ಕೆ ‘ಶೇಷಶಾಯಿ’ ಎಂದು ಹೆಸರಿಟ್ಟಿದ್ದರೊ, ಇಡಬೇಕೆಂದಿದ್ದರೊ ಆ ಹಂತದಲ್ಲೂ ಹೆಸರ ಬಗ್ಗೆ ನನ್ನ ಅಭಿಪ್ರಾಯ ಕೇಳಿದ್ದರು. ‘ಸರಿಯಿಲ್ಲ ಕಣ್ರೀ’ ಎಂದು ನಾನು ಹೇಳಿದ್ದೆ. ಆ ಹೆಸರು ಕೆಲಕಾಲ ಚಾಲ್ತಿಯಲ್ಲಿದ್ದು ಕಾಲ ಕ್ರಮದಲ್ಲಿ ಬದಲಾಯಿತು. ‘ನಿರುತ್ತರ’ ಆಮೇಲಿಟ್ಟ ಹೆಸರು. ಚಿತ್ರಕೂಟ ತಲುಪಿದಾಗ ಸಂಜೆ ಐದು ಐದೂವರೆ ಗಂಟೆ. ಬಂದವರೆ ಸ್ವಲ್ಪವೂ ತಡಮಾಡದೆ ಬಂದೂಕು ಕೈಗೆತ್ತಿಕೊಂಡರು. ‘ಬನ್ರೀ ತೋಟ ತೋರಿಸ್ತೇನೆ’ ಅಂದರು. ಎಪ್ಪತ್ತೈದು ಎಕರೆ ವಿಸ್ತೀರ್ಣದ ತೋಟ. ಆಗ ತೋಟ ಎಂಬಂತೇನೂ ಇರಲಿಲ್ಲ. ಅದೊಂದು ದಟ್ಟ ಕಡೇ ಆಗಿತ್ತು. ಕಾಡುಕುರಿ, ಕಾಡಹಂದಿಗಳೆಲ್ಲ ಓಡಾಡಿಕೊಂಡಿದ್ದ ಕಾಡುಗಿತ್ತು. ಆ ಕಾಡನ್ನು ಕಡಿದು, ಸವರಿ ಕಾಫಿ ತೋಟ ಮಾಡುವ ಸಾಹಸದಲ್ಲಿ ತೇಜಸ್ವಿ ತೊಡಗಿದ್ದ ಕಾಲ. ಅಷ್ಟೊ ಇಷ್ಟೊ ಕೆಲಸ ನಡೆದಿತ್ತು; ನಡೆಯುತ್ತಾ ಇತ್ತು. ಹತ್ತು ಎಕರೆಯಷ್ಟೊ ಎಷ್ಟೊ ಭತ್ತದ ಗದ್ದೆ ಮಾಡಿದ್ದರು. ಅಲ್ಲಿಗೆ ಕರೆದುಕೊಂಡು ಹೋದರು. ಪೈರು ಸೊಂಪಾಗಿ ಬೆಳೆದಿತ್ತು. ಭತ್ತದ ತುಂಬು ತೆನೆಗಳ ಚೆಂದ ನೋಡುವಂತಿತ್ತು. ಸಂಜೆ ನಿಧಾನವಾಗಿ ಇಳಿಯುತ್ತಿತ್ತು. ‘ನಾಯಕರೇ, ಮೇಲೆ ನೋಡ್ರೀ’ ಅಂದರು. ನಾನು ಮೇಲೆ ನೋಡಿದೆ. ಹಾರುವ ಹಕ್ಕಿಗಳ ಸಾಲು. ಹಕ್ಕಿಗಳು ಸಂಜೆ ಹೊತ್ತು ಹಾಗೆ ಸಾಲುಗಟ್ಟಿ ಹಾರಿ ಹೋಗುವುದನ್ನು ನೋಡುವುದರಲ್ಲಿ ನನಗೆ ವಿಶೇಷವೇನೂ ಕಾಣಿಸಲಿಲ್ಲ. ನೂರೆಂಟು ಸಲ ನೋಡಿದ್ದಂಥದೇ ದೃಶ್ಯ. ತೇಜಸ್ವಿಯವರು, ‘ನಾಯಕರೆ, ಮೇಲೆ ದೃಷ್ಟಿ ನೆಟ್ಟು ನೋಡ್ತಾ ಇರಿ. ನಾನು ರೆಡಿ ಅಂದ ಕೂಡಲೆ ಆ ಸಾಲಿನಲ್ಲಿ ಎಷ್ಟನೇ ನಂಬರಿನ ಹಕ್ಕಿ ಎಂದು ನಂಬರ್ ಮಾತ್ರ ಗಟ್ಟಿ ದನಿಯಲ್ಲಿ ಹೇಳಿ. ಆ ಹಕ್ಕಿ ಮೇಲಿನ ಕಣ್ಣು ತೆಗೆಯದೆ ನೋಡ್ತಾ ಇರಿ. ಮಜಾ ತೋರಿಸ್ತೇನೆ’ ಎಂದರು. ನಾನು ಹಾಗೇ ಅವರು ‘ರೆಡಿ’ ಅಂದಾಗ ನಾಲ್ಕೊ ಐದೊ ಯಾವುದೋ ಒಂದು ನಂಬರ್ ಘೋಷಿಸಿ ಆ ಹಕ್ಕಿಯ ಮೇಲೆಯೇ ಕಣ್ಣುನಟ್ಟು ನಿಂತಿದ್ದೆ. ‘ರೆಡಿ’ ಎಂದು ಹೇಳುವ ಮೊದಲೇ ಬಂದೂಕಿನ ಗುರಿ ಹಿಡಿದು ನಿಂತಿದ್ದ ತೇಜಸ್ವಿ ಗುಂಡು ಹಾರಿಸಿದರು. ಅದೇ ನಂಬರಿನ ಹಕ್ಕಿ ಧೊಪ್ ಎಂದು ಬಿತ್ತು. ನಾನು ತೇಜಸ್ವಿಯವರ ಪಾರ್ಥ ಸಾಹಸಕ್ಕೆ ಬೆರಗಾದೆ. ತಿನ್ನುವುದಲ್ಲ, ಏನಲ್ಲ ಈ ಹಕ್ಕಿಯನ್ನೇಕೆ ಹೊಡೆದರು, ಎಂದು ವಿಸ್ಮಿತನಾಗಿ ಯೋಚಿಸಿದೆ. ತುಂಟತನ ತೇಜಸ್ವಿಯ ವ್ಯಕ್ತಿತ್ವದಲ್ಲಿಯೆ ಒಳನೆಯ್ಗೆಗೊಂಡ ಗುಣವಾಗಿತ್ತು. ಅದೇನೊ ನನಗೆ ಗೊತ್ತಿತ್ತು. ಆದರೂ ಅದೇ, ಅಷ್ಟೇ ಕಾರಣ ಅನಿಸಲಿಲ್ಲ. ತಿರುಗಿ ಮನೆ ಕಡೆ ಹೊರಟಾಗ, ‘ಆ ಕಾಡುಕೋಳಿ ಬಡ್ಡೀ ಮಗಂದು ಬಿದ್ದು ಸತ್ತು ಹೋಗಿದೆ ಕಣ್ರೀ. ಗುರಿ ಬಿದ್ದೆ ಇರ್ತದೆ. ಹಾಗೆಲ್ಲ ಗುರಿ ತಪ್ಪುವುದಿಲ್ಲ. ನರಿಗೊ ಪರಿಗೊ ಯಾವುದಕ್ಕೊ ಪಲಾವಾಗಿ ಬಿಟ್ಟಿರುತ್ತದೆ’ ಎಂದರು. ತೇಜಸ್ವಿ ಈ ಗುರಿ ಸಾಹಸ ಪ್ರದರ್ಶನವನ್ನು ಸುಮ್ಮನೆ ಮಾಡಿದ್ದಲ್ಲ. ಕಾಡುಕೋಳಿಗೆ ಗುರಿ ಬಿದ್ದಿರಲಿಲ್ಲವೇನೊ ಎಂದು ನಾನು ಅನುಮಾನಿಸಿದ್ದೆನಲ್ಲಾ ಅದಕ್ಕೇ ಅವರ ಗುರಿ ಕೌಶಲದ ಸಮರ್ಥನೆಯನ್ನು ಪರೋಕ್ಷವಾಗಿ ನನಗೆ ಮಾಡಿ ತೋರಿಸಿದರೇನೊ ಅನಿಸಿತು. ಹಾಗೇ ಕೇಳಿದೆ. ನಸುನಕ್ಕರು. ಕೆಟ್ಟ ಬೈಗುಳ ಪದ ಬಳಸಿ ಮತ್ತೆ ಆ ಕಾಡುಕೋಳಿಯನ್ನು ಬೈದರು. ನನಗೆ ನನ್ನ ಊಹೆ ದೃಢವಾಯಿತು. ಎರಡು ದಿನವಾದರೂ ಇದ್ದು ಹೋಗಿ ಎಂದು ತೇಜಸ್ವಿ ನನಗೆ ಒತ್ತಾಯ ಮಾಡಿದರು. ನಾನು ಮಾರನೆ ಬೆಳಿಗ್ಗೇ ಹೊರಟು ನಿಂತೆ. ನನ್ನ ಹಣದ ಸಮಸ್ಯೆ ಹೇಳಿದಾಗ ಎಷ್ಟು ಬೇಕು ಕೇಳಿದರು. ನಾನು ಹೇಳಿದಷ್ಟು ಕೊಟ್ಟರು. ಸ್ಕೂಟರ್ ಮೇಲೆ ಕರೆದುಕೊಂಡು ಹೋಗಿ ಬಸ್ ಹತ್ತಿಸಿ ಹೋದರು.ನಮ್ಮ ವರ್ತನೆಗಳು ಕೆಲವೊಮ್ಮೆ ನಮಗೇ ಸರಿಯೋ ತಪ್ಪೊ ಎಂದು ಮನವರಿಕೆಯಾಗದಂತೆ ನಡೆದು ಹೋಗಿರುತ್ತವೆ. ತೇಜಸ್ವಿಯವರೊಡನೆ ಒಮ್ಮೆ ಅವರು ನಮ್ಮ ಮನೆಗೆ ಬಂದಿದ್ದಾಗ ಮಾತಿನ ಮಧ್ಯೆ ಅಂಥ ಒಂದು ವಿಷಯ ಪ್ರಸ್ತಾಪಿಸಿದೆ.ನಾಯಕರೆ, ಆ ವಿಷಯ ಮರೆತುಬಿಡಿ. ನಿಮ್ಮ ನಿಲುವು ಸರಿಯಾಗಿಯೇ ಇದೆ. ಈ ಸರಿಯೋ ತಪ್ಪೊ ಅಂತ ಹೀಗೆ ಅಳೆದು ಸುರಿಯೋ ಈ ರೋಗ ನಿಮ್ಮ ನವ್ಯದ್ದು. ನವ್ಯ ಸಾಹಿತ್ಯ ನೋಡಿ. ಹಿಂದೆ ಆಗಿ ಹೋದದ್ದನ್ನೇ ಮನಸಿನಿಂದ ಅಗೆದು ತೆಗೆದು ಮಹಜರ್ ಮಾಡುವ ಡಿಟೆಕ್ಟಿವ್ ಬುದ್ಧಿಯ ಕೆಲಸ. ನವ್ಯದವರ ಕಥೆ, ಕಾದಂಬರಿ ತುಂಬಾ ಮನಸ್ಸಿನೊಳಗೆ ಹೂತು ಹೋದ ನೆನಪಿನ ಹೆಣದ ಗಬ್ಬು ವಾಸನೆ. ದ್ವಂದ್ವ ಅದೂ ಇದೂ ಎಂದುಕೊಂಡು ಪೇಚಾಡುವ, ಯಾವೊಂದು ನಿಲುವನ್ನೊ ನಿರ್ಧಾರವನ್ನೊ ತಳೆಯಲಾಗದ ಅತಂತ್ರ ವ್ಯವಹಾರ. (ಆಗ ತಾನೆ ಎರಡು ಮೂರು ವರ್ಷಗಳಿಂದ ತೇಜಸ್ವಿ ನವ್ಯದ ರೀತಿಗೆ ಭಿನ್ನವಾದ ಬಗೆಯ ಬರವಣಿಗೆಗೆ ತೊಡಗಿದ್ದ ಕಾಲವಾಗಿತ್ತು. ‘ಅಬಚೂರಿನ ಪೋಸ್ಟಾಫೀಸ್’ ಕಥಾಸಂಕಲನವೂ ಪ್ರಕಟವಾಗಿತ್ತು.) ‘ನೋಡಿ, ಆಗಿ ಹೋಗಿದ್ದಕ್ಕಿಂತ ಮುಂದೆ ಆಗಬೇಕಾದದ್ದರ ಬಗ್ಗೆ ಸರಿಯಾಗಿ ಯೋಚಿಸಬೇಕು; ಮಾಡಬೇಕು. ಆಗಿ ಹೋದದ್ದರ ಬಗ್ಗೆ ಸರಿ, ತಪ್ಪು ಅಂತ ಹೆಚ್ಚಿಗೆ ಯೋಚಿಸುವವರಿಗೆ ಕ್ರಮೇಣ spontaneity ನೇ ಹೊರಟು ಹೋಗಿ ಬಿಡುತ್ತದೆ. creativity ಕ್ರಿಯಾಶೀಲತೆಯೂ ಕಡಿಮೆಯಾಗುತ್ತದೆ. ವಿಕ್ರಮಾದಿತ್ಯನ ಹಾಗೆ ಯಾವಾಗಲೂ ಬೆನ್ನ ಮೇಲೆ ಭೂತ ಹೊತ್ತುಕೊಂಡು ಓಡಾಡಬಾರದ್ರೀ, ಇದ್ಯಾವ ಮಹಾ ವಿಷಯ ಎಂದು ತಲೆ ಕೆಡಿಸಿಕೊಂಡಿದ್ದೀರಿ? ಎಂಥೆಂಥದೋ ಎದುರಿಸಿದ್ದೀರಿ? ಆಯ್ತಪ್ಪ, ಒಂದೊಮ್ಮೆ ತಪ್ಪೇ ಆಯ್ತು ಅಂತ ಇಟ್ಕೊಳ್ಳಿ ತಪ್ಪೇ ಮಾಡದಿದ್ದವ ಮನುಷ್ಯನೇನ್ರೀ? ಅಂದರು. ಮೀರಾ ಮಧ್ಯೆ ಬಂದು ಆ ವಿಷಯದಲ್ಲಿ ಏನೊ ಹೇಳಿದಳು. ಅದಕ್ಕೆ ತೇಜಸ್ವಿ, ‘ಈ ವಿಷಯದಲ್ಲಿ ಮೀರಾ ಅವರ attitude ಸರಿಯಾಗಿದೆ ಅನಿಸ್ತದೆ. ಮೀರಾ spontaneous ಆಗಿ ನಡೆದುಕೊಳ್ಳುತ್ತಾರೆ. ಹ್ಯಾಪ್ಮೋರೆ ಹಾಕಿಕೊಂಡಿದ್ದೊ, philosophical mood ನಲ್ಲಿದ್ದದ್ದೊ ನೋಡಿಯೇ ಇಲ್ಲ ಕಣ್ರೀ. It is very healthy, you see. Accept life and face it as it is and as it comes. ಮೀರಾ. ನೀವೇ ಸರಿ ಕಣ್ರೀ’ ಅಂದರು. ಮೀರಾ ಗಂಗೋತ್ರಿ ಶಾಲೆಯಲ್ಲಿ ಶಿಕ್ಷಕಿಯಾದ ಮೇಲೆ ತೇಜಸ್ವಿ, ರಾಜೇಶ್ವರಿ ಅವರು, ತೀರಿಹೋದ ನಮ್ಮ ಮಗಳು ಪ್ರೀತಿಯದೇ ವಯಸ್ಸಿನ ಅವರ ಹಿರಿಯ ಮಗಳು ಸುಸ್ಮಿತಾಳನ್ನು ನಮ್ಮ ಮನೆಯಲ್ಲಿ ಓದಲು ಬಿಟ್ಟರು. ನನ್ನ ಮತ್ತು ಮೀರಾಳ ಮೇಲಿನ ವಿಶ್ವಾಸ ರಾಜೇಶ್ವರಿ ತೇಜಸ್ವಿ ಇಬ್ಬರಿಗೂ ಎಷ್ಟಿತ್ತು ಎಂಬುದು ಸಹ ಅದರಿಂದ ಸುಸ್ಪಷ್ಟವಾಗಿತ್ತು. ಜೀವನವನ್ನು ಎದುರಿಸುವ ಮೀರಾಳ ಮನೋಭಾವದ ಬಗ್ಗೆ ತೇಜಸ್ವಿ ಆ ದಿನ ಆಡಿದ್ದ ಮಾತುಗಳನ್ನು ಆಗ ನಾನು, ಮೀರಾ ಕೃತಜ್ಞತೆಯಿಂದ ನೆನೆಸಿಕೊಂಡಿದ್ದೆವು. ಯಾವುದೋ ಅಷ್ಟೇನೂ ಮಹತ್ತದ್ದಲ್ಲದ ಮಾತು ಪ್ರಸ್ತಾಪಕ್ಕೆ ಬಂದಾಗ ತೇಜಸ್ವಿ ಆಡಿದ್ದ ಆ ಮಾತುಗಳು ಮತ್ತೆ ಮತ್ತೆ ಈಗ ನೆನಪಾಗುತ್ತಿವೆ. ಸುಸ್ಮಿತಾ ನಮ್ಮ ಮನೆಯಲ್ಲಿದ್ದು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ಒಮ್ಮೆ ತೇಜಸ್ವಿ, ರಾಜೇಶ್ವರಿ, ಅವರ ಮಕ್ಕಳು, ನಾನು ನನ್ನ ಹೆಂಡತಿ ಮೀರಾ, ಮಗಳು ಕೀರ್ತಿ ಗೋವಾಕ್ಕೆ ಹೋಗಿದ್ದೆವು. ನಾವು ಹೋಗಿದ್ದೆವು ಎಂಬುದು ಸರಿಯಲ್ಲ. ತೇಜಸ್ವಿ, ರಾಜೇಶ್ವರಿ ನಮ್ಮನ್ನು ಅವರ ಜೊತೆಗೆ ಕರೆದುಕೊಂಡು ಹೋಗಿದ್ದರು. ಸುಸ್ಮಿತಾ ನಮ್ಮ ಮನೆಯಲ್ಲಿ ಇದ್ದಷ್ಟೂ ಕಾಲ ತೇಜಸ್ವಿ, ರಾಜೇಶ್ವರಿ ಇಬ್ಬರೂ ಯಾರಿಗೂ ಮಾದರಿ ಎಂಬಂಥ ದೊಡ್ಡತನದಲ್ಲಿ ನಮ್ಮ ಮೇಲೆ ಪೂರ್ಣ ನಂಬಿಕೆ ಇಟ್ಟು ನಡೆದುಕೊಂಡಿದ್ದರು. ಅದು ನಮ್ಮ ಜೀವನದಲ್ಲಿ ನಾವು ಪಡೆದ ಅಮೂಲ್ಯ `ಶೀಲ ಶಿಫಾರಸು ಪತ್ರ’ character certificate – ಎಂಬಂತ್ತಿತ್ತು. ಮೈಸೂರಿನಿಂದ ರಾತ್ರಿ ಬಸ್ಸು ಗುರುಮೂರ್ತಿ ಟ್ರಾವಲ್ಸ್ನಲ್ಲಿ ಹೊರಟು ನಾವು ಶಿವಮೊಗ್ಗದಲ್ಲಿ ಇಳಿಯುತ್ತಿದ್ದಂತೆ ಬೆಳಗಿನ ನಾಲ್ಕು ಘಂಟೆಯ ರಾತ್ರಿಯಲ್ಲಿ ತೇಜಸ್ವಿ ಬಸ್ ನಿಲ್ದಾಣದಲ್ಲಿ ಕಾದು ನಿಂತಿದ್ದರು. ಅವರ ಸೋದರಮಾವ ಶಿವಮೊಗ್ಗೆಯ ಬಲು ಪ್ರತಿಷ್ಠಿತರಾಗಿದ್ದ ದೇವಂಗಿ ರತ್ನಾಕರ ಅವರ ಮನೆಗೆ ಕರೆದುಕೊಂಡು ಹೋದರು. ಆ ಇಳಿ-ರಾತ್ರಿಯಲ್ಲಿ ನಾವು ಇದ್ದಷ್ಟೇ ಹೊತ್ತಿನಲ್ಲಿ ನಮ್ಮ ಸ್ನಾನಾದಿಗಳಿಗೆಲ್ಲ ರತ್ನಾಕರ ಅವರು ವಿಶೇಷ ಲಕ್ಷ್ಯ ವಹಿಸಿದ ರೀತಿ, ಆತಿಥ್ಯ ನೀಡಿದ ರೀತಿ ಎಂದೂ ಮರೆಯುವಂಥದಲ್ಲ. ಹಂಡೆ ಒಲೆಗೆ ಅವರೇ ಸ್ವತಃ ಸೌದೆ ದೂಡಿ ಬೆಂಕಿ ಮಾಡಿ ನೀರು ಕಾಯಿಸಿದ್ದರು, ಸ್ನಾನಕ್ಕೆ ನೀರನ್ನು ಬೆರೆಸಿಕೊಟ್ಟದ್ದು ಎಲ್ಲಾ ನೆನಪಾದರೆ ಕೃತಜ್ಞತೆ, ಗೌರವ ಭಾವ ಮನಸ್ಸನ್ನು ತುಂಬುತ್ತದೆ.
ಬೆಳಿಗ್ಗೆ ಸೂರ್ಯೋದಯದ ಮೊದಲೇ ತೇಜಸ್ವಿಯವರು ಅವರ ಕಾರಿನಲ್ಲಿ ನಮ್ಮನ್ನು ಕರೆದುಕೊಂಡು ಹೊರಟರು. ಸಾಗರದ ಕಡೆ ಕಾರು ಚಲಿಸುತ್ತಿದ್ದಾಗ ಬೆಳಗಾಗಿ ಬೆಳಕು ಹರಿಯುತ್ತಿದ್ದಂತೆ ಚೋರೆಹಕ್ಕಿಗಳು (ಹೊರಸನ ಹಕ್ಕಿಗಳು) ಗುಂಪು ಗುಂಪಾಗಿ ಟಾರು ರಸ್ತೆಯ ಮೇಲೆ ಕುಳಿತಿರುತ್ತಿದ್ದವು. ಕಾರು ಹತ್ತಿರ ಬರುವವರೆಗೆ ಕುಳಿತಿದ್ದು ಒಮ್ಮೆಲೇ ಹಾರಿಹೋಗುತ್ತಿದ್ದವು. ಈ ಆಟ ನೋಡುವುದಕ್ಕೆ ಚೆನ್ನಾಗಿತ್ತು. `ನೋಡ್ರೀ, ಪ್ರಕೃತಿ ಚಮತ್ಕಾರ. ಕಾರು ಇಷ್ಟು ವೇಗದಲ್ಲಿ ಬರುತ್ತಿದ್ದರೂ ಕೂತಿದ್ದು ಹತ್ತಿರಕ್ಕೆ ಬಂದ ಮೇಲೆ ಒಮ್ಮೆಲೇ ಹಾರಿ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳುತ್ತಾವಲ್ರೀ’ ಎಂದು ಪಕ್ಕದಲ್ಲಿ ಕೂತಿದ್ದ ನಾನು ಉದ್ಗಾರ ತೆಗೆಯುತ್ತ ಹೋಗುತ್ತಿದ್ದೆ. ತೇಜಸ್ವಿ ಎಪ್ಪತ್ತೊ ಎಂಬತ್ತೊ ಎಷ್ಟೊ ಕಿ.ಮೀ. ವೇಗದಿಂದ ಹೋಗುತ್ತಿದ್ದವರು ಒಂದಷ್ಟು ದೂರದಲ್ಲಿ ಚೋರೆಹಕ್ಕಿಗಳ ಗುಂಪು ಕಂಡೊಡನೆ ಇದ್ದಕ್ಕಿದ್ದಂತೆ ಕಾರಿನ ವೇಗವನ್ನು ಹೆಚ್ಚಿಸಿದರು. ತೊಂಬತ್ತೊ ನೂರೊ ಕಿ.ಮೀಟರ್ಗಿಂತ ಹೆಚ್ಚು ವೇಗದಲ್ಲಿ ಇತ್ತೇನೊ! ಹಕ್ಕಿಗಳ ಗುಂಪು ತಪ್ಪಿಸಿಕೊಳ್ಳಲು ಭರ್ ಅಂತ ಹಾರಿದವು. ಆ ವೇಗದಲ್ಲಿ ತಕ್ಷಣ ನಿಲ್ಲಿಸದೆ ಒಂದಷ್ಟು ದೂರ ಹೋದವರು, ವೇಗ ಕಡಿಮೆ ಮಾಡಿ, ಹಿಂದಕ್ಕೆ ಕಾರನ್ನು ಭರ್ರನೆ ತಂದು ಹಕ್ಕಿಗಳ ಗುಂಪು ಹಾರಿದ್ದಲ್ಲಿ ತಂದು ನಿಲ್ಲಿಸಿದರು ಇಳಿದರು. ನಮಗೆ ತೇಜಸ್ವಿಯ ಈ ಚಾಲನಾವೈಖರಿ ವಿಚಿತ್ರವಾಗಿ ಕಾಣಿಸಿತು. “ನಾಯಕರೆ, ಇಳೀರಿ ಕೆಳಗೆ ಏನೊ ತೋರಿಸ್ತೇನೆ” ಅಂದರು. ಇಳಿದೆ. ನೋಡುತ್ತೇನೆ: ಒಂದು ಹಕ್ಕಿ ಕಾರಿನ ಚಕ್ರಕ್ಕೆ ಸಿಕ್ಕಿ ಅಪ್ಪಚ್ಚಿಯಾಗಿ ಹೋಗಿ ಟಾರು ರಸ್ತೆಗೆ ಮೆತ್ತಿಕೊಂಡಂತೆ ಆಗಿ ಬಿಟ್ಟಿತ್ತು. ಒಂದು ಮಿತಿಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಕಾರು ಬಂದರೆ ಚೋರೆ ಹಕ್ಕಿಯಿಂದ ತಪ್ಪಿಸಿಕೊಳ್ಳುವುದಕ್ಕಾಗುವುದಿಲ್ಲ. ಅದನ್ನು ನೋಡೇ ಬಿಡೋಣ ಎಂದು ಇದ್ದಕ್ಕಿದ್ದಂತೆ ಕಾರಿನ ವೇಗ ಹೆಚ್ಚಿಸಿದೆ ಕಣ್ರೀ. ಪಾಪ, ನೋಡಿ ಸತ್ತೇ ಹೋಯ್ತು ಅಂದರು. ಕೆಲವು ವರ್ಷ ತೇಜಸ್ವಿ ಅವರಿಗೆ ಮೀನು ಹಿಡಿಯುವುದರಲ್ಲಿ ಎಲ್ಲಿಲ್ಲದ ಉತ್ಸಾಹ ಇತ್ತು. ಗೋವಾಕ್ಕೆ ನಾವು ಹೋದ ಸಂದರ್ಭದಲ್ಲಿ sophisticated ಗಾಳದ ಕೋಲುಗಳನ್ನು, ಬಲೆಗಳನ್ನು ತೇಜಸ್ವಿ ಕಾರವಾರದಲ್ಲಿ, ಗೋವಾದಲ್ಲಿ ಹುಡುಕಿಕೊಂಡು ಎಲ್ಲೆಲ್ಲೊ ಅಲೆದದ್ದು ನೆನಪಿಗೆ ಬರುತ್ತಿದೆ. ಬೇರೆ ಸಂದರ್ಭದಲ್ಲಿ ರಘು ಜೊತೆಯಲ್ಲಿ ನಮ್ಮೂರು ಅಂಕೋಲೆಗೆ ಬಂದಿದ್ದರು. ಗಂಗಾವಳಿ ನದಿ ಸಮುದ್ರ ಸೇರುವ ಜಾಗದಲ್ಲಿ, ಬೇಲೇಕೇರಿಯ ಸಮುದ್ರದ ಬೇಲೆಗೆ ಹತ್ತಿರದಲ್ಲೇ ಇರುವ ಬಂಡೆಯೊಂದರ ಮೇಲೆ ಋಷಿ, ಮುನಿಗಳ ಏಕಾಗ್ರತೆಯಲ್ಲಿ ತೇಜಸ್ವಿ ಮೀನು ಹಿಡಿಯಲು ಗಾಳ ಹಾಕಿ ಕುಳಿತು ಘಂಟೆಗಟ್ಟಲೆ ಲೋಕದ ಪರಿವೆ ಇಲ್ಲದವರಂತೆ ಕುಳಿತಿದ್ದ ದೃಶ್ಯಗಳು ಕಣ್ಣುಮುಂದೆ ಬರುತ್ತಿವೆ. ಒಂದು ಸಲ ಮೈಸೂರಿನ ಲಿಂಗಾಂಬುಧಿ ಕೆರೆಯಲ್ಲಿ ಮೀನು ಹಿಡಿಯಲು ತೇಜಸ್ವಿ ಹೊರಟರು. ಅವರ ಜೊತೆ ರಾಮದಾಸ್, ನಾನು ಮತ್ತು ತೇಜಸ್ವಿಯವರ ಸ್ನೇಹಿತರು ಡಾ.ಶಾಮಸುಂದರ್ ಇದ್ದೆವು. ಆ ಕೆರೆಯ ದಡದ ಮೇಲೆ ಚಿಕ್ಕಗೂಡಿನಂಥ ಗುಡಿಸಲಲ್ಲಿ ಡೆನ್ಮಾರ್ಕ್ ನವನೊಬ್ಬನಿದ್ದ. ಅವನೊ ಮೀನು ಹಿಡಿಯುವಾಟದ ಮರುಳ. ಅವನು ಈ ದೇಶದವಳೊಬ್ಬಳನ್ನು ಮದುವೆಯಾಗಿದ್ದ. ಅವಳೊಂದಿಗೆ ಸಂಸಾರ ಮಾಡಿಕೊಂಡು ಇಲ್ಲೇ ಇದ್ದ. ಅವನ ಹೆಂಡತಿ ಆಗ ತುಂಬು ಬಸುರಿ. ತೇಜಸ್ವಿಗೆ ಆ ಮಾರಾಯನ ಪರಿಚಯವೊ ಸ್ನೇಹವೊ ಹೇಗೆ ಆಗಿತ್ತೊ, ಯಾವಾಗ ಆಗಿತ್ತೊ? ಕೆರೆ ಹತ್ತಿರ ಹೋದಾಗ ಆ ಮನುಷ್ಯ ಅಲ್ಲೇ ಇದ್ದ. ತುಂಬು ಅಂದರೆ ಇಂದೊ ನಾಳೆಯೊ ಹೆರಿಗೆ ಆಗಬಹುದು ಎಂಬಂಥ ಬಸುರಿ ಹೆಂಡತಿಯನ್ನು ಬಿಟ್ಟು ಅವನು ಎಲ್ಲೊ ಹೋಗುವ ಹಾಗೆ ಇರಲಿಲ್ಲ. ತೇಜಸ್ವಿಗೆ ಬಲೆ ಕೊಟ್ಟ. ಆ ಕೆರೆಯ ಮೀನುಗಳ ಕಾಂಟ್ರಾಕ್ಟ್ ಅವನೇ ಹಿಡಿದಿದ್ದನೊ ಏನೊ! ತೇಜಸ್ವಿ, ರಾಮದಾಸ್ ಅಂಡರ್ವೆರ್ ಚಡ್ಡಿಯಲ್ಲಿ ಕೆರೆಗೆ ಇಳಿದು ಬಲೆ ಹಾಕಿ ಮೀನು ಹಿಡಿಯುತ್ತಿದ್ದರೆ, ನಾನು ಡಾ.ಶಾಮಸುಂದರ್ ದಡದ ಮೇಲೆಯೇ ನಿಂತು ನೋಡುತ್ತಿದ್ದೆವು. ತೇಜಸ್ವಿ, ರಾಮದಾಸ್ ಬಲೆ ಹಾಕಿ ಹಿಡಿದ ಮೀನುಗಳಿಗೆ ಬಿಳಿಬಿಳೀ ಹೊಳೆಯುತ್ತಿದ ಹಿಣಿಜುಗಳಿದ್ದುವು. ನೋಡುವುದೇ ಕಣ್ಣಿಗೊಂದು ಹಬ್ಬ ಎಂಬಂತಿದ್ದವು. ಅಂಗೈ ಅಗಲದ ಮಾಂಸಲ ಮೀನುಗಳು. ನಮ್ಮ ಮನೆಗೆ ತಂದೆವು. ಮೀರಾ ಮೀನು ಅಡುಗೆಯಲ್ಲಿ ಪರಿಣಿತಳು. ರಾಮದಾಸ್ ಅವರ ಅಮ್ಮ ಮಂಜಮ್ಮನವರನ್ನು ಮೀರಾ ಸಹಾಯಕ್ಕೆ ಕರೆಸಿಕೊಂಡಳು. ಇಂಥದೇನೊ ಅಂದರೆ ಅಮ್ಮನಿಗೂ ಎಲ್ಲಿಲ್ಲದ ಹುರುಪು, ಉತ್ಸಾಹ. ಅಮ್ಮ ಮೀನುಗಳನ್ನು ಸ್ವಚ್ಛ ಮಾಡಿಕೊಟ್ಟರು. ಮೀರಾ ಮಸಾಲೆ ಹಾಕುವ, ಅರೆಯುವ ಕೆಲಸದಲ್ಲಿ ತೊಡಗಿದಳು. ಬೇಗ ಬೇಗ ಅಡಿಗೆ ತಯಾರಿಸಿದರು. ಡಾ.ಶಾಮಸುಂದರ ಮೀನುಗಳನ್ನು ಹಿಡಿದಾದ ಮೇಲೆ ನಿಲ್ಲದೆ ಹೊರಟು ಹೋಗಿದ್ದರು. ಇನ್ನೇನು ಅಡುಗೆ ಮುಗಿಯುತ್ತಿದೆ ಎಂಬ ಹೊತ್ತಿಗೆ, ನಮ್ಮೊಡನೆ ಹರಟೆ, ನಗುವಿನ ಅಬ್ಬರದಲ್ಲಿ ಮುಳುಗಿದ್ದ ತೇಜಸ್ವಿಯವರ ತಲೆಗೆ ಏನೋ ಹೊಳೆಯಿತು. ಅವರ ಮೈಸೂರು ಮನೆ `ಉದಯರವಿ’ಗೆ ಹೊರಡುತ್ತೇನೆ ಎಂದರು. ಇನ್ನೇನು ಊಟ ಮಾಡುವ ಹೊತ್ತಾಯಿತು. ಊಟ ಮಾಡಿಕೊಂಡು ಹೋಗಿರಿ ಎಂದರೂ ಕೇಳದೆ, `ಮಾರಾಯರೆ ಈ ಹೊತ್ತೇ ಮಾಡಿ ಮುಗಿಸಬೇಕಾದ ಅರ್ಜೆಂಟ್ ಕೆಲಸ ಒಂದು ಮುಗಿಸಲೇ ಬೇಕು. ಮರೆತೇ ಬಿಟ್ಟಿದ್ದೆ. ಊಟಗೀಟ ಅಂತ ನಿಂತರೆ ನನ್ನ ಕಥೆ ಮುಗಿದೇ ಹೋಯ್ತು’ ಎಂದು ಹೇಳಿ ಹೊರಟೇ ಬಿಟ್ಟರು. ಅಂಥ, ಬಾಯಲ್ಲಿ ನೀರೂರಿಸುವಂಥ ಮೀನಿನ ಅಡುಗೆ. ಅವರೇ ಇಷ್ಟಪಟ್ಟು ಹಿಡಿದು ತಂದ ಮೀನಿನ ಅಡುಗೆ ಸಂಭ್ರಮಿಸಿ ಊಟ ಮಾಡಬಹುದಾದಂಥ ಅದರ ಅಡುಗೆಯ ಸಿದ್ಧತೆ ನಡೆದಿದ್ದಾಗ ಊಟ ಮಾಡುವುದು ಮುಖ್ಯವಲ್ಲ, ಅದೇ ದಿನ ಮಾಡಲೇಬೇಕೆಂದುಕೊಂಡಿದ್ದ ಕೆಲಸ ಮಾಡಿ ಮುಗಿಸುವುದು ಮುಖ್ಯ ಎಂದು ಹೇಳಿ ತೇಜಸ್ವಿ ಹೊರಟು ಹೋದರು. ಮನೆಯಲ್ಲಾದರೂ ಊಟ ಮಾಡಲೇಬೇಕಲ್ಲಾ ಅಂದರೂ ಕೇಳಿಸಿಕೊಳ್ಳಲಿಲ್ಲ. ಈ ಅದ್ಭುತ ಪ್ರತಿಭಾವಂತನ ಅಂಥ ವರ್ತನೆ ಒಂದು ಬಗೆಯ ವಿಕ್ಷಿಪ್ತತೆ ಎನ್ನಬೇಕೊ? ಪ್ರತಿಭಾ ವಿಲಾಸ ಎನ್ನಬೇಕೊ? ಅದರ ಸ್ವರೂಪ ಸೂಕ್ಷ್ಮ ಅವರಿಗೆ ಹತ್ತಿರದವರೆಂದುಕೊಂಡಿದ್ದವರಿಗೂ ಪೂರ್ತಿ ಅರ್ಥವಾಗದಂಥ ನಿಗೂಢವಾಗಿಯೇ ಕೊನೆಯವರೆಗೂ ಉಳಿದಿತ್ತು. ಶ್ರೀ ರಾಮಾಯಣ ದರ್ಶನಂ’ದ ಹಸ್ತಪ್ರತಿ ಮುದ್ರಣಕ್ಕೆ ಸಿದ್ಧಪಡಿಸುವುದಕ್ಕೆಂದು ಹೋದ ಸಂದರ್ಭದಲ್ಲಿಯೇ ಒಮ್ಮೆ ತೇಜಸ್ವಿಯವರೊಂದಿಗೆ ಅವರ ತೋಟದ ಗೇಟಿನ ಕಡೆ ಹೋಗುತ್ತಿರುವಾಗ ನೋಡಿ, ಕಾಡುಹಂದಿ ನೆಲಕೆದರಿ ಹೋದ ಜಾಗ ಎಂದು ನನಗೆ ತೋರಿಸಿ, ‘ಬಡ್ಡೀ ಮಗಂದು ಟೊಣೆಯ ಹಂದೀ ಕಣ್ರೀ. ಇಲ್ಲೇ ಎಲ್ಲೋ ಇದೆಯೊ, ಬಂದು ಉರುಳಾಡಿ ಹೊರಟು ಹೋಗಿದೆಯೊ! ಒಂದು ಕಾಲದಲ್ಲಿ ಕಾಡಹಂದಿ ಅಂದರೆ ಎಷ್ಟು ಕೆ.ಜಿ. ಮಾಂಸ ಎಂದಷ್ಟೇ ಕಣ್ಣಿಗೆ ಕಾಣಿಸ್ತಿತ್ತಲ್ರೀ; ಕೈಯಲ್ಲಿ ಕೋವಿ ಇದ್ದರೆ ಅದನ್ನು ಬಲಿ ಹಾಕಬೇಕು ಅಂತ ಕೈ ಕುಣೀತಿತ್ತು. ಮಾರಾಯ್ರಾ, ಕಾಡಿನ ಪ್ರಾಣಿಗಳನ್ನು ಅವುಗಳ natural ಪರಿಸರದಲ್ಲಿ ನೋಡುವುದೇ ಒಂದು beauty. Nature is the supreme judge. One should not violate its judgement, you see. (ನಿಸರ್ಗವೇ ಪರಮ ನ್ಯಾಯಾಧೀಶ. ನಾವು ಅದರ ತೀರ್ಮಾನವನ್ನು ಉಲ್ಲಂಘಿಸಬಾರದು ಕಣ್ರೀ). ಪರಿಸರದ ನಾಶ ಆಯ್ತು ಅಂದರೆ ಇನ್ನು ಯಾವುದೂ ಉಳಿಯುವುದಿಲ್ಲ. ಸರ್ವನಾಶವೇ ಗತಿ’. ‘ಪರಿಸರದ ಕಥೆ’ ಎಂಬ ಅನನ್ಯ ರೀತಿಯ ಕೃತಿ ಬರೆದ ತೇಜಸ್ವಿ ಒಂದಷ್ಟು ಹೊತ್ತು ಪರಿಸರ ಪಾವಿತ್ರ್ಯ ಉಳಿಸಬೇಕಾದ ಬಗ್ಗೆ ಮಾತನಾಡಿದರು.]]>
ಅದ್ಭುತ ಅನುಭವಗಳು.