ಗಡಿಯೂರಿನ ರಾಜ್ಯೋತ್ಸವ …ಒಂದು ನೆನಪು.
ಶೋಭಾ ಹಿರೇಕೈ ಕಂಡ್ರಾಜಿ.
………………………………………………………..
ಕನ್ನಡದ ನೆಲಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ಇಂದಿಗೆ ಐದು ದಶಕಗಳು ಪೂರೈಸಿದ ಸಂದರ್ಭ, ಕರ್ನಾಟಕ ಭಾವ ತೀವ್ರತೆ ಯಲ್ಲಿ ರಂಗೇರಿದೆ. ರಂಗೋಲಿಗಳು ಬಾವುಟಗಳು, ಭಾಷಣಗಳು, ಗೀತಗಾಯನಗಳು…. ಮೆರವಣಿಗೆಗಳು ಅಬ್ಬಾ ಎಷ್ಡೊಂದು ಭಾಷಾ ಭಕ್ತಿ. ಕನ್ನಡಕ್ಕೆಷ್ಟೊಂದು ಶಕ್ತಿ. ನಾನು ಸಹ ಭಾವ ಪರವಶಳಾಗಿದ್ದೇನೆ. ಕನ್ನಡದ ಗೀತೆಯನ್ನು ನಿನ್ನೆಯಿಂದಲೇ ಗುನುಗುತಿದ್ದೇನೆ.
ಈ ನಡುವೆ ನಾನು ಮೊದಲು ವೃತ್ತಿ ಗೆಂದು ಸೇರಿದ ಆ ಮರಾಠಿ ಊರು ಯಾಕೋ.. ಮತ್ತೆ ಮತ್ತೆ ನೆನಪಾಗುತ್ತಿದೆ.
ಶಿಕ್ಷಕರ ಆಯ್ಕೆಗೆ ಸಿಇಟಿ ಬಂತು. ಯಾವ ಜಿಲ್ಲೆಯಲ್ಲಿ ಹೆಚ್ಚಿಗೆ ಶಿಕ್ಷಕರನ್ನು ತುಂಬಿಕೊಳ್ಳಲಾಗುತ್ತದೋ ಆ ಜಿಲ್ಲೆಗೆ ಅರ್ಜಿ ತುಂಬಿದವರು ನಾವು. ಅಂತೆಯೇ ಬೆಳಗಾವಿ ಆಯ್ದುಕೊಂಡು, ನಕಾಶೆ ಹಿಡಿದು ನೋಡಿ ಖಾನಾಪುರ ಹತ್ತಿರವೆಂದು ತಿಳಿದು ಮೊದಲ ಆದ್ಯತೆಯಲ್ಲಿ ಆ ತಾಲೂಕಿಗೆ ಟಿಕ್ ಮಾರ್ಕ್ ಮಾಡಿ ಮರಾಠಿ ಶಾಲೆಗೆ ಕನ್ನಡ ಶಿಕ್ಷಕರಾಗಿ ಸಿಕ್ಕಿಕೊಂಡವರು ನನ್ನಂತೆ ಉತ್ತರ ಕನ್ನಡದವರು ಹತ್ತರಿಂದ ಹನ್ನೆರಡು ಶಿಕ್ಷಕರಿದ್ದೆವು.
ಚಿಕ್ಲಾ, ಚೊರ್ಲಾ, ಜಾಂಬೋಟಿ, ಕಾಲ್ಮನಿ, ಬೆಟ್ನಾ, ಕನಕುಂಬಿ, ಪಾರುವಾಡ… ಹೀಗೆ ಊರ ಹೆಸರೇ ಕೇಳಿ ತಲೆ ತಿರುಗಿದಂತಾಗಿ , ಯಾವುದಾದರೂ ಇರ್ಲಿ ಎಂದು ಒಂದು ಹೆಸರನ್ನು ಆಯ್ಕೆ ಮಾಡಿಕೊಂಡರೆ ಆ ಊರು ಕರ್ನಾಟಕ ಮತ್ತು ಗೋವಾ ಗಡಿಯಂಚಿನದಾಗಿತ್ತು. ನಾನು ಹತ್ತಿರ ಇದ್ದ ಎಲ್ಲಾ ಊರು ಬಿಟ್ಟು ಮಲಪ್ರಭೆಯ ಹುಟ್ಟೂರು ಕನಕುಂಬಿಯ ದಾಟಿ ಚಿಗುಳೆ ಎಂಬ ಕನ್ನಡ ನೆಲದ ಅಪ್ಪಟ ಮರಾಠಿ ಊರಿಗೆ ಹೋಗಿ ನಿಂತಿದ್ದೆ. ಮಕ್ಕಳೆಲ್ಲ ‘ಕನ್ನಡ ಬಾಯಿ ಆಯ್ಲೆ , ಆಯ್ಲೆ’ ಎಂದು ಖುಷಿಯಲ್ಲಿ ಬೊಬ್ಬೆ ಹೊಡಿವಾಗ ನಾನು ಕನ್ನಡದ ಹೇಳ ಹೆಸರೇ ಇಲ್ಲದಂತಾದ ಆ ಶಾಲೆ ನೋಡಿ ಕಂಗಾಲಾಗಿ ಬಾಯ್ ಬಾಯ್ ಬಿಟ್ಟಿದ್ದೆ.
ಇದ್ದ ಎಪ್ಪತ್ತೋ ಎಪ್ಪತ್ತೆರಡು ಮನೆ… ಕನ್ನಡ ಬರುವುದೆಂದರೆ ಒಬ್ಬನೇ ಒಬ್ಬ ಸೈನ್ಯದಿಂದ ನಿವೃತ್ತಿ ಹೊಂದಿದ ಅಜ್ಜನಿಗೆ ಮಾತ್ರ. ಅವನು ಸೈನ್ಯ ದಿಂದ ಬಂದ ಮೇಲೆ ಬೆಳಗಾವಿ, ಕಿತ್ತೂರು, ಬೈಲ್ಹೊಂಗಲದಲ್ಲಿ ಬೇರೆ ಬೇರೆ ಕೆಲಸ ಮಾಡಿದ್ದರಿಂದ ಕನ್ನಡ ಕಲಿತಿದ್ದನಂತೆ. ಆ ಊರಲ್ಲಿ ಒಂದೇ ಒಂದು ಅಂಗಡಿಯಿತ್ತು. ಆ ಅಂಗಡಿ ನಡೆಸುವ ಇಬ್ಬರೂ ಅಣ್ಣಂದಿರಿಗೆ ಅಲ್ಪ ಸ್ವಲ್ಲ ಕನ್ನಡ ಬರುತಿತ್ತು.. ಅದೂ ಅವರಿಗೆ ವ್ಯಾವಹಾರಿಕ ಚಾಣಾಕ್ಷತೆಯಿಂದ ಬಂದಿದ್ದು. ಉಳಿದಂತೆ ಕನ್ನಡದ ಗಂಧಗಾಳಿ ಆ ಊರಲ್ಲಿ ಇಲ್ಲ. ನಾನು ಕನ್ನಡ ಶಿಕ್ಷಕಿಯಾಗಿ ಹೋಗಿದ್ದೇನೆ. ಆದರೆ ಕನ್ನಡ ಕಲಿಸುವ ಮೊದಲು ಮರಾಠಿ ಕಲಿಯಬೇಕಿತ್ತು!

ಮರಾಠಿಯೆಂದರೆ ಮರಾಠಿಯೂ ಆಗಿರಲಿಲ್ಲ. ಗೋವಾದ ಕೊಂಕಣಿ ಗಾಳಿ ಬೀಸಿ ಕೊಂಕಣಿ ಮಿಶ್ರಿತ ಮರಾಠಿ ಅವರದ್ದು. ಅದರಲ್ಲೂ ವಯಸ್ಸಾದ ಅಜ್ಜಿಯರಂತೂ ಭಾಷೆ ಬರದ ನನ್ನನ್ನು ಬೇರೆ ಲೋಕದ ಪ್ರಾಣಿ ಎಂಬಂತೆ ನೋಡಿ.. ಕಾರವಾರದವರಲ್ವಾ ನೀವು? ಕೊಂಕಣಿ ಬರ್ಲೆ ಬೇಕು ನಿಮಗೆ ಎಂದು ಮಾರುದ್ದ ಎಳೆದೆಳೆದು ಹೇಳುವ ಅವರ ಮರಾಠಿ ಸ್ವರವನ್ನು ಸ್ವಲ್ಪ ಹಿಂದಿ ಮಾತಾಡುತಿದ್ದ ನಾನು ಅರ್ಥ ಮಾಡಿಕೊಳ್ಳುತ್ತಿದ್ದೆ. ‘ಇಲ್ಲ ಅಜ್ಜಿ ಕೊಂಕಣಿ ಬರಲ್ಲ ನಾನು ಕಾರವಾರ ಕರಾವಳಿಯವಳಲ್ಲ . ಪಕ್ಕಾ ಮಲ್ನಾಡವಳು’ ಅಂತ ಕನ್ನಡದಲ್ಲಿ ಹೇಳಿದೆನೋ… ಅವರಿಗಂತೂ ತಲೆಬುಡ ಅರ್ಥ ಆಗದೆ ನನ್ನ ಮಿಕಿ ಮಿಕಿ ನೋಡುತಿದ್ದರು ನನ್ನ. ಅಂತೂ ಒಂದೆರಡು ದಿನ ಪಡಬಾರದ ಪರಿಪಾಟಲು ಪಟ್ಟು ಅಂತೂ ಕನ್ನಡ ಬಲ್ಲ ಮಿಲ್ಟ್ರಿ ಅಜ್ಜನ ಮನೆಯಲ್ಲೇ ಬಾಡಿಗೆ ಮನೆ ಮಾಡಲು ಊರವರೆಲ್ಲಾ ಮುಂದಾಗಿ , ಅಲ್ಲೇ ನನ್ನ ವಾಸ್ತವ್ಯವಾದ ಮೇಲೆಯೇ ,… ಜಾತ್ರೆಯಲ್ಲಿ ಕಳೆದು ಹೋದ ಮಗುವಿಗೆ ಮರಳಿ ತಾಯಿ ಸಿಕ್ಕಂತಾಗಿತ್ತು.
ಆಗ ಈಗಿನಂತೆ ಸ್ಮಾರ್ಟ್ ಫೋನ್ ನಮ್ಮ ಬಳಿ ಬಂದಿರಲಿಲ್ಲ. ಫೋನ್ ಇದ್ದಿದ್ದರೂ ಅದು ವ್ಯಾಪ್ತಿ ಪ್ರದೇಶದ ಹೊರಗೆ ಇರುತಿತ್ತು ಬಿಡಿ. ಟಿವಿ ಹಚ್ಚಿದರೂ ಅಲ್ಲಿ ಕನ್ನಡ ಚಾನಲ್ ಇಲ್ಲ. ರೇಡಿಯೋದಲ್ಲೂ ಅದೇ ಮರಾಠಿ. ಆಗ ನನ್ನ ಸಂಗಾತಿ ಪುಟ್ಟ ಟೇಪ್ ರೆಕಾರ್ಡ್ ರ್ ಒಂದೇ…ಮತ್ತೊಂದಿಷ್ಟು ಲೈಬ್ರರಿಯಲ್ಲಿ ಒಯ್ದ ಪುಸ್ತಕಗಳು. ಸಂಜೆ ಡ್ಯೂ ಟಿ ಮುಗಿಸಿ ಬಂದ ಮೇಲೆ ಅಜ್ಜ ಒಂದಿಷ್ಟು ಮಿಲ್ಟರಿ ಕತೆ ಹೇಳೋನು. ಅದು ಅರೆಬರೆ ಕನ್ನಡ ಹಿಂದಿ ಮರಾಠಿ ಸಮ್ಮಿಳಿತ ಭಾಷೆ. ಅದನ್ನು ಅರ್ಥ ಮಾಡಿಕೊಂಡು ಅದರಲ್ಲೇ ನನ್ನ ತಾಯ್ನುಡಿ ಕೇಳಿ ಧನ್ಯಳಾಗಬೇಕು. ಮತ್ತೂ ಭಾಷೆಯಿಲ್ಲದೆ ಕಾಡುವ ತಬ್ಬಲಿತನವನ್ನೂ ಮರೆಯಬೇಕಿತ್ತು.
ಹೋಗಿ ಎರಡು ತಿಂಗಳು ಹೇಗ್ಹೇಗೋ ಕಳೆದವು. ತಂದೆ ತಾಯಿ, ಊರು ಬಿಟ್ಟು ದೂರದ ಊರಲ್ಲಿ ಏಕಾಂಗಿತನ, ಜೊತೆಗೆ ಭಾಷೆಯೂ ಇಲ್ಲದೆ ಕಾಡುವ ಅನಾಥತನ ದಲ್ಲಿ ಈ ನೌಕರಿಯೇ ಬೇಡ ಎಂದು ಅದೆಷ್ಟೋ ಸಲ ಅನ್ನಿಸಿತ್ತು… ಅಷ್ಟರಲ್ಲಿ ನವಂಬರ್ ತಿಂಗಳು ಬಂದೇ ಬಿಟ್ಟಿತ್ತು. ನನಗೆ ಕನ್ನಡ ಹಾಡು ಕಲಿಸುವ ಉಮೇದು, ಜೊತೆಗೊಂದಿಷ್ಡು ಕನ್ನಡ ಗೀತೆಗೆ ಡಾನ್ಸ್ ಸಹ ತಯಾರಿ ಮಾಡಿದ್ದೆ ಹೇಗೂ ನನ್ನ ಬಳಿಯೇ ಟೇಪ್ ರೆಕಾರ್ಡರ್ ಇತ್ತು. ಒಂದು ರವಿವಾರ ಖಾನಾಪುರಕ್ಕೆ ಕನ್ನಡ ಗೀತೆಗಳ ಕ್ಯಾಸೆಟ್ ತರಲೆಂದೇ ಹೋದೆ. ಅಲ್ಲೂ ಸಹ ಕನ್ನಡ ಅಪರೂಪ. ಅಂತೂ ಹುಡುಕಿ ತಂದು ಕನ್ನಡ ಹಾಡು, ಕೋಲಾಟ , ಡಾನ್ಸ್ ಗೆಲ್ಲಾ ಮಕ್ಕಳು ತಯಾರಾದರು. ನನಗಂತೂ ಹೇಳತೀರದ ಸಂಭ್ರಮ. ಬರೀ ಮರಾಠಿ ಸ್ವರ ಕೇಳುತಿದ್ದ ಶಾಲೆಯಲ್ಲಿ ಕನ್ನಡದ ಸ್ವರ! ಖುಷಿಯಲ್ಲದೆ ಮತ್ತೇನು ಈ ಜೀವಕ್ಕೆ.
ಅದಕ್ಕೆ ಶಾಲಾ ಮುಖ್ಯ ಶಿಕ್ಷಕರ ಸಹಾಯವೂ ದೊರೆತಿದ್ದರಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವದ ತಯಾರಿ. ನಾಳೆಯಿನ್ನೇನು ಮರಾಠಿ ಶಾಲೆಯಲ್ಲಿ ಕನ್ನಡದ ಮೊಳಗು ಎಂದು ಉಬ್ಬಿದ ಪುಗ್ಗಿಯಾಗಿ ಗಾಳಿಯಲ್ಲೆ ತೇಲುತಿದ್ದ ನನಗೆ ಮುಖ್ಯ ಶಿಕ್ಷಕರು ಬಂದು, ‘ಬಾಯಿ ನಾಳೆ ರಾಜ್ಯೋತ್ಸವ ಮಾಡಬಾರದಂತೆ,’ ಕಾಳಾ ದಿವಸ್ ‘ ಆಚರಿಸಬೇಕಂತೆ . ಇಲ್ಲೆಲ್ಲ ವಾತಾವರಣ ಬಾಳಾ ಬಿಸಿ ಆಗೇದ, ಸಮಿತೇರು ಅದನ್ನೇ ಹೇಳ್ಲಿಕ್ಕ್ ಹತ್ಯಾರ. ಕಾರ್ಯಕ್ರಮ ಏನ್ ಮಾಡೂದು ಬ್ಯಾಡ್ರಿ .ಅಂತ ಹೇಳಿ ರಾಜ್ಯೋತ್ಸವ ಆಚರಣೆ ಬೇಡ ಅನ್ನೋ ತೀರ್ಮಾನಕ್ಕೆ ಬಂದೇ ಬಿಟ್ಟಿದ್ದರು. ಉಬ್ಬಿದ ಪುಗ್ಗಿಗೆ ಒಮ್ಮೆ ಪಿನ್ನು ಚುಚ್ಚಿದಂತಾಗಿ ಏರಿದ ಉತ್ಸಾಹ, ಉಮೇದು ಎಲ್ಲ ಜರ್ರನೆ ಜರಿದು ಮರಾಠಿ ಊರಲ್ಲಿ ನಾನು ಮಾತ್ರ ಅಲ್ಲ ನನ್ನೊಂದಿಗೆ ಕನ್ನಡ ಕೂಡಾ ಅನಾಥವಾದಂತೆನಿಸಿತ್ತು.
ಆ ಭಾವುಕ ಕ್ಷಣ ನೆನಪಾದರೆ ಈಗಲೂ ಕಣ್ಣಂಚು ತೇವಗೊಳ್ಳುತ್ತದೆ. ಅಲ್ಲಿ ಗಡಿಯೂರಲ್ಲಿ ಇಂದಿನ ರಾಜ್ಯೋತ್ಸವ ಅದ್ಧೂರಿಯಾಗಿ ನಡೆಯಲಿ… ಕನ್ನಡದ ಕಹಳೆಯ ದನಿ ಆಕಾಶದೆತ್ತರಕ್ಕೆ ಮೊಳಗಲಿ ಎಂದು ಮನಸ್ಸು ಹಾರೈಸುತ್ತದೆ.
0 ಪ್ರತಿಕ್ರಿಯೆಗಳು