ರಾಜೇಶ್ವರಿ ಹುಲ್ಲೇನಹಳ್ಳಿ
——
ಸೆಪ್ಟೆಂಬರ್ ಐದು ಶಿಕ್ಷಕರ ದಿನಾಚರಣೆ. ಶಿಕ್ಷಕರ ದಿನಾಚರಣೆ ಎಂದೊಡನೆ ನನಗಂತೂ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜೊತೆ ಜೊತೆಗೆ, ಬಾಲ್ಯದಿಂದಲೂ ಅಂದರೆ “ಶಿಶುವಿಹಾರದಿಂದ ಕಾಲೇಜಿನವರೆಗೂ” , “ಅ ಅಕ್ಷರದಿಂದ ಪದವಿ ಪಡೆಯುವವರೆಗೂ” ಕಲಿಸಿದಂತಹ ನನ್ನೆಲ್ಲ ಶಿಕ್ಷಕರ ನೆನಪು ತಂತಾನೆ ನುಗ್ಗಿ ಬರುತ್ತದೆ. ಅಂತೆಯೇ ನನ್ನ ಐದನೇ ವರ್ಷದಿಂದ ನನ್ನೆದೆಗೆ ಅಕ್ಷರದ ಬೀಜವನ್ನು ಬಿತ್ತಿ ಬೆಳೆಸಿದ ನನ್ನೆಲ್ಲ ಶಿಕ್ಷಕರುಗಳ ನೆನಪನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಬಯಸಿರುವೆ.
ಹಾಸನದ ಜ್ಯೂಬಿಲಿ ಮೈದಾನದಲ್ಲಿರುವ ಡಿಸ್ಟ್ರಿಕ್ಟ್ ಲೈಬ್ರೆರಿಯಿಂದ ತುಸು ಮುಂದಿನ ಒಂದು ಬಿಲ್ಡಿಂಗ್ನಲ್ಲಿದ್ದ ಶಿಶು ವಿಹಾರದಲ್ಲಿ ನನ್ನ ವಿದ್ಯಾಭ್ಯಾಸಕ್ಕೆ ಮೊದಲ ಪಾದಾರ್ಪಣೆ.
(ಈಗಿನ ಶಾಸ್ತಾಸ್ ಪಬ್ಲಿಕ್ ಸ್ಕೂಲ್ ಕಟ್ಟಡ). ಅಂದಿನ ಜ್ಯೂಬ್ಲಿ ಮೈದಾನವೇ ಇಂದು ಕಲಾಭವನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನ, ಶಾಸ್ತಾಸ್ ಪಬ್ಲಿಕ್ ಸ್ಕೂಲ್, ಕೆಂಪುಚಲುವಾಜಮ್ಮಣ್ಣಿ ಸಮಾಜ. ಶಿಶುವಿಹಾರದಲ್ಲಿ ಕಲಿಯುವಾಗಿನ ನನ್ನ ಮೊಟ್ಟ ಮೊದಲ ಶಿಕ್ಷಕಿ ಮಂಜುಳ ಮೇಡಂ. ಕುಳ್ಳಗೆ ಬೆಳ್ಳಗೆ ಗುಂಗುರು ಕೂದಲಿನವರು . ಇನ್ನು ತುಸು ವಯಸ್ಸಾದ ರಂಗಮ್ಮ ಮತ್ತು ಗಂಗಮ್ಮ ಎಂಬ ಇಬ್ಬರು ಆಯಾಗಳಿದ್ದರು. ಅವರುಗಳ ಮುಖ ಅವರ ಹಣೆಯ ಮೇಲಿದ್ದ ಕುಂಕುಮ ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ. ರಂಗಮ್ಮ ಶಾಂತ ಸ್ವಭಾವದ ನಗು ಮೊಗದವರಾದರೆ. ಗಂಗಮ್ಮ ತುಸು ಸಿಡುಕು ಮೋರೆಯವರು!.
ನಮ್ಮ ಬಾಲ್ಯದಲ್ಲಿ ಈಗಿನಂತೆ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಆಟೋಗಳಾಲೀ, ವ್ಯಾನ್ಗಳಾಗಲೀ, ಸ್ಕೂಲ್ ಬಸ್ ಗಳಾಗಲೀ ಇರಲಿಲ್ಲ! ಶಿಶುವಿಹಾರ ಸಹ ದೂರವಿರದ ಕಾರಣ ಅಲ್ಲಿಯೇ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಆಯಾಗಳಾದ
ರಂಗಮ್ಮ ಮತ್ತು ಗಂಗಮ್ಮ ಪ್ರತಿ ದಿನ ಬೆಳಗ್ಗೆ ಸುಮಾರು ಹತ್ತು ಗಂಟೆಯೊಳಗೆ ಬೀದಿಯ ಮನೆ ಮನೆಗಳಿಗೆ ಬಂದು ಮಕ್ಕಳನ್ನು ಕುರಿ ಮರಿಗಳನ್ನು ಕರೆದುಕೊಂಡು ಹೋಗುವಂತೆ ಕರೆದುಕೊಂಡು ಹೋಗುತ್ತಿದ್ದರು. ಅದೆಷ್ಟೋ ಮಕ್ಕಳು ಶಿಶುವಿಹಾರ ತಲುಪಿದರೂ ಅಳುತ್ತಲೇ ಇರುತ್ತಿದ್ದರು. ಕೆಲವು ಹಠ ಮಾಡುವ ಮಕ್ಕಳನ್ನು ಎತ್ತಿಕೊಂಡು ಇಲ್ಲವೇ ಕೈ ಹಿಡಿದು ಎಳೆದು ಕೊಂಡೇ ಬರುತ್ತಿದ್ದರು. ದಾರಿಯುದ್ದಕ್ಕೂ ಮಕ್ಕಳ ಅಳುವಿನ ಆಲಾಪ ನಡೆಯುತ್ತಲೇ ಇರುತ್ತಿತ್ತು ಇನ್ನು ಒಬ್ಬರನ್ನು ನೋಡಿ ಮತ್ತೊಬ್ಬರು ರಾಗ ಎಳೆಯುತ್ತಾ ಅಳುವ ಸಾಮೂಹಿಕ ಸನ್ನಿ ಬೇರೆ! ನಮ್ಮ ಶಿಶು ವಿಹಾರದಲ್ಲಿ ಹಠಮಾಡಿ ಅಳುತ್ತಿದ್ದ ಮಕ್ಕಳನ್ನು ಮರದ ಆಟಿಕೆಗಳನ್ನು ಇಟ್ಟಿದ್ದ ಒಂದು ರೂಮಿನಲ್ಲಿ ಕೂಡಿ ಹಾಕುತ್ತಿದ್ದರು. ನನ್ನನ್ನು ಕೂಡ ಒಮ್ಮೆ ಆ ಕೊಠಡಿಯಲ್ಲಿ ಕೂಡಿ ಹಾಕಿದ್ದು ನೆನಪಿದೆ . ಅದು ಶಿಕ್ಷೆಯೋ, ಅಥವಾ ಆಟಿಕೆಗಳನ್ನು ನೋಡಿ ಅಳು ಮರೆಯಲಿ ಎಂಬ ಕಾರಣವೋ ಗೊತ್ತಿಲ್ಲ. ಆಟದ ಸಾಮಾನುಗಳನ್ನು ನೋಡಿ ನನ್ನ ಅಳು ಮಂಗಮಾಯ!.ನಾನಂತೂ ಮರದ ಕುದುರೆಯೇರಿ ಆಡಿದ್ದೇ ಆಡಿದ್ದು!.
ಸುಮಾರು ವರ್ಷಗಳ ಹಿಂದೆ ಅನಿರೀಕ್ಷಿತವಾಗಿ ಶಿಶು ವಿಹಾರದ ಮಂಜುಳ ಮೇಡಂ ಸಿಕ್ಕಾಗ ಅವರಿಗೆ ವಂದಿಸಿ, ನನ್ನ ಪರಿಚಯವನ್ನು ಹೇಳಿದೆ. ಆದರೆ ಅವರಿಗೆ ನನ್ನ ಗುರುತು ಸಿಗಲಿಲ್ಲ ಏಕೆಂದರೆ ಅವರು ನನ್ನನ್ನು ನೋಡಿದ್ದು ನಾನು ಐದು ವರ್ಷದ ಪುಟ್ಟ ಮಗುವಾಗಿದ್ದಾಗ. ಬೆಳೆದಿರುವ ನನ್ನನ್ನೀಗ ಅವರು ಗುರುತಿಸುವುದಾದರೂ ಹೇಗೆ? . ಮಕ್ಕಳು ನಾವು ದೊಡ್ಡವರನ್ನು ನೆನಪಿಟ್ಟುಕೊಳ್ಳ ಬಹುದು. ಆದರೆ ನಾವು ಪುಟ್ಟ ಮಕ್ಕಳಿದ್ದಾಗ ನೋಡಿದ್ದ ನಮ್ಮನ್ನು, ಬೆಳೆದ ಮೇಲೆ ಅವರು ಗುರುತಿಸಲು ಸಾಧ್ಯವೇ? ಕೆಲ ವರ್ಷಗಳ ಹಿಂದೆ ಅವರನ್ನು ಕಂಡಾಗ ತುಂಬಾ ಸಂತೋಷವೆನಿಸಿತು.

ಶಿಶುವಿಹಾರದಿಂದ ಪ್ರಾಥಮಿಕ, ಮಾಧ್ಯಮಿಕ ಶಾಲೆಯಾದ ವಾಣಿ ವಿಲಾಸ, ನಮ್ಮ ಮನೆಗೇ ಬಂದು ಓಣಿಯ ಮಕ್ಕಳಿಗೆಲ್ಲ ಶನಿವಾರ ಮತ್ತು ಭಾನುವಾರ ಮನೆ ಪಾಠ ಹೇಳಿಕೊಡುತ್ತಿದ್ದ ಕಡ್ಳೆ ಕಾಯಿ ಮೇಷ್ಟ್ರು , ಹೈಸ್ಕೂಲಿನ ಸಂತ ಫಿಲೋಮಿನಾ ಶಾಲೆ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಟೀಚರ್, AVKಕಾಲೇಜು ಹಾಗೂ ಮಹಿಳಾ ಪಾಲಿಟೆಕ್ನಿಕ್ (ಡಿಪ್ಲೊಮಾ) ವರೆಗೂ ಕಲಿಸಿದ ಬಹಳಷ್ಟು ಶಿಕ್ಷಕರು, ಉಪಾಧ್ಯಾಯರು, ಉಪನ್ಯಾಸಕರುಗಳು, ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾದಲ್ಲಿ ಹಿಂದಿ ಪದವಿ ಯವರೆಗೆ ಬೋಧಿಸಿದ ನಾಗರತ್ನ ಮೇಡಂ , ಹಾಗೇ ಎರಡು ತಿಂಗಳು ಸಂಗೀತ ಕಲಿಸಿದ ನಮ್ಮ ನೆರೆ ಮನೆಯ ಸಂಗೀತ ಮೇಡಂ, ಕೆಲವು ತಿಂಗಳು ಟೈಲರಿಂಗ್ ಕಲಿಸಿದ ಅಕ್ಕನ ಬಳಗದ ಟೈಲರಿಂಗ್ ಟೀಚರ್, ಎಲ್ಲರೂ ನೆನಪಿಗೆ ಬಂದು ಅವರ ಮುಖಗಳು ಅವರು ಕಲಿಸುತ್ತಿದ್ದ ಪಾಠ ಹಾಗೂ ಕಲಿಸುತ್ತಿದ್ದ ಶೈಲಿ ಎಲ್ಲದರ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತವೆ.
ಶಿಶುವಿಹಾರದ ನಂತರ ನಿಜವಾದ ಜನ್ಮ ದಿನಾಂಕವನ್ನು ಕೊಡದೆ, ಕುಂಡಲಿ ಜೋಯಿಸರಿಗೆ ಒಂದೋ ಎರಡೋ ರೂಪಾಯಿ ನೀಡಿ ಹೆಚ್ಚು ವಯಸ್ಸು ಬರೆಸಿದ ಸುಳ್ಳು ಜಾತಕ ಕೊಟ್ಟು ನೇರವಾಗಿ ಅಲ್ಲೇ ಹತ್ತಿರದ ವಾಣಿವಿಲಾಸ ಪ್ರಾಥಮಿಕ ಶಾಲೆಗೆ ಒಂದನೇ ತರಗತಿಗೆ ದಾಖಲಾತಿ. ಪ್ರಾಥಮಿಕ ಶಾಲೆಯಲ್ಲಿ ಬಿಳಿ ಪಂಚೆ ಬಿಳಿ ಅಂಗಿ ತೊಟ್ಟು ನೊಸಲಿಗೆ ವಿಭೂತಿ ಧರಿಸಿಕೊಂಡು, ಒಂದು ಬಟ್ಟೆಯ ಬ್ಯಾಗ್ ಹಿಡಿದು ಬರುತ್ತಿದ್ದ ಬಸಪ್ಪ ಮೇಷ್ಟ್ರು, ಅವರು ಮಗ್ಗಿ ಹೇಳಿಕೊಡುತ್ತಿದ್ದ ರೀತಿ, ಪದ್ಯಗಳನ್ನು ಹೇಳುತ್ತಿದ್ದ ಪರಿ ಹಾಗೇ ನಾಲ್ಕನೆಯ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿದ್ದ ಒಂದು ಪಾಠ ” ನಾಳೆ ನಾನೂ ಡಾಕ್ಟರ್ ಆಗುವೆ” ಎಂಬ ನಾಟಕವನ್ನು ನಮ್ಮಗಳಿಂದ ತರಗತಿಯೊಳಗೇ ಯಾವುದೇ ಮೇಕಪ್ ಮತ್ತು ವಿಶೇಷ ಉಡುಗೆ ತೊಡುಗೆಗಳಿಲ್ಲದೆ ಪಾತ್ರಧಾರಿಗಳನ್ನಾಗಿಸಿ ನಾಟಕ ಮಾಡಿಸಿದ್ನಾಗ ನಾನೂ ಒಂದು ದಿನ ಡಾಕ್ಟರ್ (ಪಾತ್ರ)ಆಗಿದ್ದೆ!. ಪಕ್ಕದ ಸೆಕ್ಷನ್ ಕ್ಲಾಸ್ ಟೀಚರ್ ರಮಾದೇವಿ ಮೇಡಂ ಪಾಠ ಮಾಡುತ್ತಿದ್ದ ಕಂಚಿನ ಕಂಠ ಅವರ ಉಚ್ಚಾರಣೆ . ಅವರ ನಡಿಗೆಯಲ್ಲಿದ್ದ ದಿಟ್ಟತನ , ಅವರು ಕೈಯಲ್ಲಿ ಹಿಡಿದು ಬರುತ್ತಿದ್ದ ಪಾರದರ್ಶಕ ಚಿತ್ರದ ಗಾಜಿನ ಹಿಡಿಯ ಛತ್ರಿ ಸೀರೆಯ ಮೇಲೆ ಧರಿಸುತ್ತಿದ್ದ ಸ್ವೆಟರ್, ಹಾಕುತ್ತಿದ್ದ ಗಟ್ಟಿ ಹೆಜ್ಜೆ ಅವರ ಧ್ವನಿ ,ಮೂಗಿನ ನತ್ತು ಕಿವಿಯಲ್ಲಿದ್ದ ಬಾತಿನ ಓಲೆ ಕೂಡ ನೆನಪಿದೆ. ಅವರು ನಮಗೆ ಪಾಠ ಮಾಡಿದ್ದು ಕಡಿಮೆಯೆ. ಆಗೆಲ್ಲ ಒಂದರಿಂದ ನಾಲ್ಕರವರೆಗಿನ ಒಂದೊಂದು ವಿಭಾಗಕ್ಕೆ ಒಬ್ಬರೇ ಟೀಚರು, ಮೇಷ್ಟ್ರು. ನಮ್ಮ ವಿಭಾಗಕ್ಕೆ ಬಸಪ್ಪ ಮೇಷ್ಟ್ರಾದ್ರೆ ಇವರು ಪಕ್ಕದ ವಿಭಾಗಕ್ಕೆ ಟೀಚರ್.
ವಾಣಿ ವಿಲಾಸ ಪ್ರೈಮರಿ ಸ್ಕೂಲ್ ಮುಗಿದ ಮೇಲೆ ಪಕ್ಕದಲ್ಲೇ ಇದ್ದ ಅದೇ ವಾಣಿವಿಲಾಸ ಮಿಡಲ್ ಸ್ಕೂಲ್ . ಅಲ್ಲಿನ ಟೀಚರು ಮೇಷ್ಟ್ರುಗಳು ಸಾಲು ಸಾಲು. ರಾಮಚಂದ್ರಪ್ಪ ಮೇಷ್ಟ್ರು, ಪುಟ್ಟಯ್ಯ ಮತ್ತು ಗಿಡ್ಡೇಗೌಡರು ಎಂಬ ಮೂರು ಜನ ಹೆಡ್ಮೇಷ್ಟ್ರುಗಳನ್ನು ಒಬ್ಬರಾದ ಮೇಲೊಬ್ಬರಂತೆ ಕಂಡಿದ್ದೆ. ನಿವೃತ್ತಿ ನಂತರ ಪುಟ್ಟಯ್ಯ ಮೇಷ್ಟ್ರು ಕುವೆಂಪು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಹಸಿರು ಭುಮಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಸಹ ಕೆಲಸ ನಿರ್ವಹಿಸಿದ್ದು 87 ಈ ಇಳಿ ವಯಸ್ಸಿನಲ್ಲೂ ಪರಿಸರ ಉಳಿಸುವ ನಿಟ್ಟಿನಲ್ಲಿ ಯುವಕರನ್ನೂ ನಾಚಿಸುವಂತಹ ಉತ್ಸಾಹದಲ್ಲಿ ನಿಸ್ವಾರ್ಥ ಸೇವೆಗೈಯ್ಯುತ್ತಿದ್ದಾರೆ ಎಂದರೆ ಅಂತಹ ಗುರುಗಳಿಂದ ಪಾಠ ಕಲಿತ ನಾವೇ ಧನ್ಯರು!. ಅವರು ನಮ್ಮ ಶಾಲೆಯಲ್ಲಿದ್ದಾಗ ಶಾಲೆಯ ಒಂದು ಕಾರ್ಯಕ್ರಮದಲ್ಲಿ ಹಾಡಿದ “ಜಲಲ ಜಲಲ ಜಲ ಧಾರೆ “. ಎಂಬ ಹಾಡು ಇನ್ನೂ ನನ್ನ ಕಿವಿಯಲ್ಲಿದೆ. ಒಮ್ಮೆ ಅವರು ನಿವೃತ್ತಿ ನಂತರ ಕೆಲಸ ನಿರ್ವಹಿಸುತ್ತಿದ್ದ ಶಾಲೆಗೆ ಯಾವುದೋ ಮಗುವನ್ನು ಅಡ್ಮಿಷನ್ ಮಾಡಿಸಲು ಹೋದಾಗ ಅವರನ್ನು ಮಾತನಾಡಿಸಿ ಪರಿಚಯ ಹೇಳಿ ನಮಿಸಿದೆ.
ಇಂಗ್ಲೀಷ್ ಪಾಠ ಮಾಡುತ್ತಿದ್ದ ಲಿಲ್ಲಿ ದೇವಿ ಪುತ್ರಿ ಟೀಚರ್ ಅಬ್ಬಾ! ಅವರ ಅಕ್ಷರ ಅದೆಷ್ಟು ದುಂಡಗಿತ್ತು! ಅವರ ಪಾಠ ಕೂಡ ಚಂದ. Slim ಆದ ಉದ್ದನೆಯ ಜಡೆಯವರು. ಇನ್ನು ಪುಟ್ಟ ತಾಯಮ್ಮ, ಸೌಭಾಗ್ಯಮ್ಮ,ಸಣ್ಣಮ್ಮ ನಾಗಮಣಿ , ಲಲಿತಮ್ಮ, ಜಯಮ್ಮ, ಗಿರಿಜಮ್ಮ, ದೇವದಾನಮ್ಮ , ಲಕ್ಷ್ಮಿದೇವಮ್ಮ, ಸೌಮಿತ್ರಿ ಟೀಚರು, ಸಿದ್ದಾಚಾರ್ ಮೇಷ್ಟ್ರು. ಪಂಚೆ ಜುಬ್ಬ ಶಲ್ಯ ಧರಿಸಿ ಹಣೆಗೆ ಕುಂಕುಮವಿಟ್ಟು ಬರುತ್ತಿದ್ದ ಸಂಗೀತದ ನಂಜಪ್ಪ ಮೇಷ್ಟ್ರು. ಎಲ್ಲರೂ ಗುರುಗಳು ಎನ್ನವ ಪದಕ್ಕೆ ಅನ್ವರ್ಥರಾಗಿದ್ದರು. ಹಾಗೇ ಸಮಾಜ ಪಾಠ ಹಾಗೂ ಕ್ರಾಫ್ಟ್ ಕಲಿಸುತ್ತಿದ್ದ ಅತ್ಯಂತ ಶಿಸ್ತಿನ ಹಾಗೂ ಕೋಪಿಷ್ಟ ( ನನಗಲ್ಲ, ಸರಿಯಾಗಿ ಓದದವರ ಬಗ್ಗೆ) ಗುರುಗಳಾದ ಪುಟ್ಟ ತಾಯಮ್ಮ ಟೀಚರು ವರುಷದ ಹಿಂದೆ ದೈವಾಧೀನರಾಗಿದ್ದು ದುಖಃ ತರಿಸಿತು. ನಮ್ಮ ಏರಿಯಾದಲ್ಲೇ ಇದ್ದರೂ ಅವರು ಹಾಸಿಗೆ ಹಿಡಿದಾಗ ಕೊರೋನಾ ಹಾವಳಿಯಿಂದಾಗಿ ಅವರ ಆರೋಗ್ಯ ದೃಷ್ಟಿಯಿಂದ , ಹೋಗಿ ನೋಡಲಾಗಲಿಲ್ಲವೆಂಬ ಕೊರಗು ಕಾಡುತ್ತಿದೆ. ತುಂಬಾ ಹಿಂದೆ ಒಂದೆರಡು ಬಾರಿ ಮನೆಗೆ ಹೋಗಿ ಮಾತನಾಡಿಸಿ ಬಂದಿದ್ದೆ. ಅಂತಿಮ ದರ್ಶನಕ್ಕೆ ಹೋದಾಗ ನಿಜವಾಗಿ ಎದೆ ಭಾರವಾಗಿ ಕಂಬನಿದುಂಬಿ ನಮಸ್ಕರಿಸಿದೆ . ಅವರು ಅಸ್ವಸ್ಥರಾದಾಗ ನೋಡಿ ಮಾತನಾಡಿಸಲು ಆಗದಂತೆ ಮಾಡಿದ ಪಾಪಿ ಕೊರೋನಾವನ್ನು ಶಿಪಿಸಿದೆ!.
ಹಾಗೇ ಮೊನ್ನೆ ಸೌಭಾಗ್ಯಮ್ಮ ಟೀಚರಿಗೆ ಫೋನ್ ಮಾಡಿ ಉಭಯ ಕುಶಲೋಪರಿಯ ನಂತರ ನನಗೆ ನೆನಪಿದ್ದ ಎಲ್ಲ ಟೀಚರ್ ಗಳ ಹೆಸರನ್ನು ಹೇಳಿ ಸಂಗೀತ ಮೇಷ್ಟ್ರ ಹೆಸರು ನೆನಪಿಲ್ಲ ಎಂದಾಗ, ಅವರು ಅಚ್ಚರಿಯಿಂದ ಅವರೆಲ್ಲರ ಹೆಸರುಗಳು ನೆನಪಿದೆಯಾ ನಿನಗೆ! ? ಎಂದು ನಾನು ಮರೆತಿದ್ದ ಮೂವರ ಹೆಸರನ್ನು ನೆನಪಿಸಿದರು. ಶಾಲಾದಿನಗಳಲ್ಲಿ ನನಗೆ Memory test ಮತ್ತೆ Smelling test ನಲ್ಲಿ ಯಾವಾಗಲೂ ಬಹುಮಾನ ಬರುತ್ತಿದ್ದುದು ನೆನಪಾಯ್ತು. ಈಗ ಇಲ್ಲ ಬಿಡಿ!.
ಹೈಸ್ಕೂಲು ಸಂತ ಫಿಲೋಮಿನಾ ಶಾಲೆಯ ಟೀಚರುಗಳೆಂದರೆ, ಸಿಸ್ಟರ್ ಅಂಬ್ರೋಸಿಯಾ , ರೀಟಾ ಸಿಸ್ಟರ್, ಅಡಲ್ಫಾ , ಒಲಿಂಪಿಯಾ, ಐಡಿಯಾ, ಸಮಾಜ ಪಾಠ ಕಲಿಸುತ್ತಿದ್ದ ಸೋನಾಬಾಯಿ ಟೀಚರ್, ವಿಜ್ಞಾನದ ಐರಿನ್ ಟೀಚರ್, ಕನ್ನಡ ಮತ್ತು ಹಿಂದಿ ಕಲಿಸುತ್ತಿದ್ದ, ರಾಧಾಮಣಿ ಟೀಚರ್, ಅವರು ವರ್ಗಾವಣೆಯಾದ ಮೇಲೆ ಬಂದ ಅಮೃತಾ ಟೀಚರ್, ಇಂಗ್ಲೀಷ್ ಕಲಿಸುತ್ತಿದ್ದ ಮೇರಿ ನಕ್ಷತ್ರ ಟೀಚರ್, ತಂಗಮ್ಮ ಚಾಕೂ, ವಿಜ್ಞಾನ ಕಲಿಸುತ್ತಿದ್ದ ಸತ್ಯನಾರಾಯಣ ಸರ್ ಗಣಿತದ ಜಯರಾಮ್ ಸರ್, ಮಾಧು ಮಾಸ್ಟ್ರು , ಹಾಗೂ P.T ಮೇಷ್ಟ್ರಾದ ಮಂಗಳೂರಿನ ರವಿರಾಜ ಶೆಟ್ಟಿ ಸರ್. ಒಮ್ಮೆ P.T period ನಲ್ಲಿ ಆಟವಾಡದೇ ತರಗತಿಯಲ್ಲೇ ಕುಳಿತು ಹೋಂ ವರ್ಕ್ ಮಾಡುತ್ತಿದ್ದಾಗ ಬೈಸಿಕೊಂಡದ್ದಿದೆ. ಬಹುಷಃ ಆಗ ಸ್ವಲ್ಪ ಆಟ ಆಡಿದ್ದಿದ್ದರೆ ತುಸು ಉದ್ದವಾಗುತ್ತಿದ್ದೆನೇನೋ ಎನಿಸುತ್ತಿದೆ!
1977 ನಾನಾಗ ಒಂಬತ್ತನೆಯ ತರಗತಿ. ಕನ್ನಡ ಪುಸ್ತಕದಲ್ಲಿದ್ದ ವಿ. ಸೀತಾ ರಾಮಯ್ಯನವರ “ಮುಗಿಲುಗಳು” ಪಾಠದಲ್ಲಿ ಕವಿಯ ಕಲ್ಪನೆಯನ್ನು ವಿವರಿಸಿದ ಕನ್ನಡ ಟೀಚರ್ ರಾಧಾಮಣಿಯವರು ದಸರೆ ರಜೆಯಲ್ಲಿ “ಮುಗಿಲುಗಳ” ಕುರಿತು ಕವಿತೆ ಬರೆದು ತರಲು ಹೇಳಿದ್ದರು. ಅಕ್ಟೋಬರ್ 22 ಕ್ಕೆ ರಜೆ ಕಳೆದು ಶಾಲೆಗೆ ಹೋದಾಗ ಎಲ್ಲರನ್ನೂ ಬರೆದ ಕವಿತೆ ಓದಿ ಎಂದರೆ ಯಾರದೂ ಉಸಿರೇ ಇಲ್ಲ! ಯಾರು ಬರೆದಿರಲಿಲ್ಲ . ಎಲ್ಲರೂ ರಜೆಯನ್ನು ಮಜವಾಗಿ ಕಳೆದು ಬಂದಿದ್ದೆವು! ಅಂದು ಶಾಲೆಯಿಂದ ಬಂದೊಡನೆ ಸಂಜೆ ಮುಗಿಲು ನೋಡಿದ್ದೇ ನೋಡಿದ್ದು! ಮನೆಗೆ ಹೋಗಿ ಕೂಡಲೇ “ನಾ ಕಂಡ ಮುಗಿಲು” ಎಂಬ ಕವಿತೆಯ ಸೃಷ್ಟಿ ಆಗಿಯೇ ಬಿಟ್ಟಿತು. ಅದೇ ನನ್ನ ಮೊಟ್ಟ ಮೊದಲ ಕವಿತೆ ಅಂದೇ ನನ್ನ ಸಾಹಿತ್ಯ ಪಯಣದ ಮೊದಲ ಹೆಜ್ಜೆ. ನನ್ನ ಬರವಣಿಗೆಗೆ ಬುನಾದಿ. ಅದು ನನ್ನ ಕನ್ನಡ ಟೀಚರ್ ರಾಧಾಮಣಿ ಯವರಿಂದ!. ಅವರಿಗಿದೋ ನನ್ನ ನಮನಗಳು.
ಇನ್ನು AVK ಕಾಲೇಜಿನಲ್ಲಿ Principal ಸತ್ಯನಾರಾಯಣ ಶೆಟ್ಟರು, PUC ಮೊದಲ ವರ್ಷದಲ್ಲಿ Arts. ವಿಭಾಗದಲ್ಲಿ ಸೀಟ್ ಸಿಗದೆ CBZS ನಲ್ಲಿದ್ದಾಗ Botanyಯ ಕಪಿಲಾ ಮಿಸ್, Chemistryಯ ದೊಡ್ಡ ಸುಬ್ಬಲಕ್ಷ್ಮಿ ಮಿಸ್ (ಆಗ ಇಬ್ಬರು ಸುಬ್ಬಲಕ್ಷ್ಮಿ ಮಿಸ್ ಇದ್ದು, ಒಬ್ಬರು ಎತ್ತರ ಮತ್ತೊಬ್ಬರು ತೀರಾ ಗಿಡ್ಡ ಆದ್ದರಿಂದ Students ಎಲ್ಲಾ ಹಾಗೇ ಕರೆಯುತ್ತಿದ್ದರು.) ನಾನು PUC. ಇದ್ದಾಗಲೇ ಅವರ ಮದುವೆ ಆಯ್ತು. ಅದು ಜೇಬರ ಸರ್ ಜೊತೆಗೆ ಎಂದು ಇತ್ತೀಚೆಗೆ ತಿಳಿಯಿತು. Zoologyಯ ಉಷಾ ಕೃಷ್ಣಮೂರ್ತಿ, ಇಂಗ್ಲೀಷ್ ಭಾಷಾ ತರಗತಿ ತೆಗೆದುಕೊಳ್ಳುತ್ತಿದ್ದ ಶಮ್ಶಾದ್ ಮಿಸ್, ಲಲ್ಲು ಮಿಸ್, ಬೆಳ್ಳಗಿದ್ದ ಇಂದಿರಾ ಮಿಸ್ , ತುಸು ಎಣ್ಣೆಗೆಂಪಿನ ಇಂದಿರಾ ಮಿಸ್ , ಹಿಂದಿಯ ಶಾರದಾಂಭಾ ಮಿಸ್ , ನಂತರ ಕಲಾ ವಿಭಾಗಕ್ಕೆ ವರ್ಗಾಯಿಸಿಕೊಂಡಾಗ Economics ನ ಯಶೋದಮ್ಮ ಸಾಂಭಯ್ಯ , Sociology ಯ ಶೈಲಜಾ ಡೇವಿಡ್ ಕಾರ್ಕಡ, ಶಿವ ಕುಮಾರಿ, ಪೊಲಿಟಿಕಲ್ ಸೈನ್ಸ್ ನ ಪ್ರಫುಲ್ಲಾ ಮಿಸ್. History ಯ , ಶಿವಾಮೃತ ಮಿಸ್, ಶಶಿಕಲಾ ಮುನಿಯಪ್ಪ (ಸ್ವಲ್ಪ ಸಮಯ) ನಾಗರಾಜಯ್ಯ, ಜಯರಾಮಯ್ಯ , ಹಿಂದಿಯ ಶಾರದಾಂಬಾ ಮಿಸ್.
ನನ್ನದು Second Language ಹಿಂದಿ . ಒಂದು ದಿನ ಹಿಂದಿ ಮಿಸ್ ಬರದ ಕಾರಣ ಸುಮ್ಮನೆ Second Language ಕನ್ನಡ ತೆಗೆದುಕೊಂಡ ಗೆಳತಿಯರೊಂದಿಗೆ ಕನ್ನಡದ ಪದ್ಮಾ ಮಿಸ್ ತರಗತಿಗೆ ಹೋಗಿ ಕುಳಿತೆ. ಬೆಲ್ ಆಗುವವರೆಗೂ ಭಯವಿತ್ತು. ನಾನು ಕನ್ನಡ ಸ್ಟೂಡೆಂಟ್ ಅಲ್ಲವೆಂದು ಗೊತ್ತಾಗಿ ಬಿಡುವುದೇನೋ ಎಂದು! ಸಧ್ಯ ಹಾಗಾಲಿಲ್ಲ!. ಅವರ ಕನ್ನಡ ಪಾಠ ಸೊಗಸಾಗಿತ್ತು. ಹಾಗೇ ಶಮ್ಶಾದ್ ಮಿಸ್ ನ ಇಂಗ್ಲೀಷ್ ಪಾಠ , ಅವರ ಇಂಗ್ಲೀಷ್ ಉಚ್ಚಾ ರಣೆ ಕೇಳುವುದೇ ಒಂದು ಅದ್ಭುತ! ಆದರೆ ಒಮ್ಮೆ ತರಗತಿಯಲ್ಲಿ ಆದ ಘಟನೆ ಮರೆಯುವಂತೆಯೇ ಇಲ್ಲ ಈಗಲೂ ಭಯ ಪಡುವಂತಾಗುತ್ತದೆ ಅಬ್ಬಾ! ಅದರ ಕುರಿತು ಬರೆದರೆ ಒಂದು ಲೇಖನವೇ ಆದೀತು! ಅದರ ವಿವರ ಮತ್ತೊಮ್ಮೆ. ಅವರಂತೂ ಬೆಂಕಿಯ ಚೂರು!
ಪದವಿ ಮುಗಿಸಿ ಡಿಪ್ಲೊಮಾ ಓದುವಾಗಿನ ಮಹಿಳಾ ಪಾಲಿಟೆಕ್ನಿಕ್ ನ ಪ್ರಿನ್ಸಪಾಲರಾಗಿ Accountancy ಕಲಿಸುತ್ತಿದ್ದ ಸೋಮಶೇಖರಯ್ಯ ಸರ್, ರಾಮಕೃಷ್ಣಯ್ಯ , ವಿಜಯ್ ಕುಮಾರ್ ಸರ್. ಫ್ರಭಾಕರ್ ಸರ್, ನಾಗರಾಜ್ ಸರ್ ಲಲಿತಮ್ಮ ಮಿಸ್ ಅರೆಕಾಲಿಕ ಉಪನ್ಯಾಸಕರಾಗಿ ಬರುತ್ತಿದ್ದ ಅಡ್ವೊಕೇಟ್ H.M. ವಿಶ್ವನಾಥ್ ಸರ್, ಬಾಲರಾಜು ಸರ್ , ನಶಿಪುಡಿ ಸರ್ ಹೀಗೆ ಎಲ್ಲರೂ ನೆನಪಿನಲ್ಲಿರುವರು. ಪ್ರಭಾಕರ್ ಸರ್ ಗೆ ಒಮ್ಮೆ ಏಪ್ರಿಲ್ ಫೂಲ್ ಮಾಡಿದ ಘಟನೆಯ ಕುರಿತು ಬರೆದ ಲೇಖನ ಮಂಗಳ ಪತ್ರಿಕೆಯಲ್ಲಿ ಪ್ರಕಟವಾಯ್ತು. ಅಡ್ವೊಕೇಟ್ H.M. ವಿಶ್ವನಾಥ್ ಸರ್, ಸಾಹಿತ್ಯಾಸಕ್ತರು ಕೂಡ. ನನ್ನ ಕವಿತೆಗಳನ್ನು ಓದಿ ಅಭಿಪ್ರಾಯ ಹಾಗೂ ಸಲಹೆ ನೀಡುತ್ತಿದ್ದರು ಅವರು ಬರೆದ ಕಥೆ ಕವಿತೆಗಳನ್ನು ನಮಗೆ ನೀಡುತ್ತಿದ್ದರು. ಡಿಪ್ಲೊಮಾ Final year Result ಬಂದೊಡನೆ ಕಾಲೇಜಿನಲ್ಲಿ ಖಾಲಿ ಇದ್ದ ಉಪನ್ಯಾಸಕ ಹುದ್ದೆಗೆ ಅರೆಕಾಲಿಕವಾಗಿ ಸೇವೆ ಸಲ್ಲುಸಲು ಕೂಡಲೇ ಅರ್ಜಿ ಕೊಡಲು ಸಲಹೆಯಿತ್ತು ನಾನೂ ಉಪನ್ಯಾಸಕಿಯಾಗಲು ಸಲಹೆ ನೀಡಿದ ನಮ್ಮ Commercial Practice ವಿಭಾಗದ Short Hand Lecturer ನಾಗರಾಜ್ ಸರ್ ಕೂಡ ಸ್ಮರಣೀಯರು..
ಬಹುಷಃ ಸಹಸ್ರಾರು ಮಕ್ಕಳಿಗೆ ಬೋಧಿಸಿದ ಗುರುಗಳಿಗೆ ಎಲ್ಲಾ ವಿದ್ಯಾರ್ಥಿಗಳ ನೆನಪಿಲ್ಲದಿದ್ದರೂ, ಕೆಲವೇ ಕೆಲವು ವಿದ್ಯಾರ್ಥಿಗಳು ನೆನಪಿನಲ್ಲಿ ಉಳಿದಿರುತ್ತಾರೆ. ಅವರ ಬುದ್ಧಿವಂತಿಕೆಯಿಂದಲೋ ಇಲ್ಲವೇ ತುಂಟಾಟದಿಂದಲೋ ಗೊತ್ತಿಲ್ಲ! . ಬಹುತೇಕ ವಿದ್ಯಾರ್ಥಿಗಳಿಗೆ ಬಾಲ್ಯದಿಂದ ತಮಗೆ ಪಾಠ ಕಲಿಸಿದ ಎಲ್ಲ ಗುರುಗಳು ನೆನೆಪಿನಲ್ಲಿರುತ್ತಾರೆ. ನನಗಂತೂ ಬಹಳಷ್ಟು ಗುರುಗಳ ಮುಖ ಅವರು ಪಾಠ ಮಾಡುತ್ತಿದ್ದ ಶೈಲಿ, ಇಂದಿಗೂ ನೆನಪಿದೆ. ನಮ್ಮ ಕಾಲದಲ್ಲಿ ಶಿಕ್ಷಕರುಗಳ ಬಗ್ಗೆ ಅಪಾರ ಭಯ ಭಕ್ತಿ ಇತ್ತು. ಗುರುಗಳಿಗೆ ಕೂಡ ಶಿಷ್ಯರ ಮೇಲೆ ಪ್ರೀತಿ ಅಭಿಮಾನವಿರುತ್ತಿತ್ತು. ಆದರೆ ಈಗಿನ ಸಂಗತಿ ತಿಳಿದಿಲ್ಲ!
ನನ್ನ ವಿದ್ಯಾಭ್ಯಾಸದ ಹಾದಿಯಲ್ಲಿ ಸುಮಾರು ಅರವತ್ತರಿಂದ ಎಪ್ಪತ್ತು ಶಿಕ್ಷಕ, ಶಿಕ್ಷಕಿಯರಿಂದ ಕಲಿತ ಪಾಠ, ದೊರೆತ ಹಿತನುಡಿಗಳಿಂದ ಪ್ರಭಾವಿತರಾಗಿ, ವೃತ್ತಿ, ಪ್ರವೃತ್ತಿಯಲ್ಲಿ ಅಳವಡಿಸಿಕೊಂಡು ನಡೆಯುತ್ತಿರುವಾಗ ಅವರನ್ನೆಲ್ಲ ಸ್ಮರಿಸುವುದೇ ಒಂದು ವಿಶಿಷ್ಟ ಅನುಭೂತಿ!.
ಶಿಕ್ಷಕ ವೃತ್ತಿ ಎಂದರೆ ಅದೊಂದು ಅತ್ಯಂತ ಅಮೂಲ್ಯವಾದ ವೃತ್ತಿ .ಜಗತ್ತಿನ ಎಷ್ಟೋ ವೃತ್ತಿಗಳಲ್ಲಿ ಶ್ರೇಷ್ಠ ಹಾಗೂ ಕೃತಜ್ಞಾಪೂರ್ವಕವಾದ ವೃತ್ತಿಯೆಂದರೆ ಅದು ಶಿಕ್ಷಕ ವೃತ್ತಿ ಎನ್ನುವುದು ನನ್ನ ಅಭಿಪ್ರಾಯ. ಏಕೆಂದರೆ ಜಗತ್ತಿನ ಎಲ್ಲರನ್ನೂ ಸೃಷ್ಟಿಸುವವನು ಶಿಕ್ಷಕ ತಾನೇ!?. ಒಬ್ಬ ವ್ಯಕ್ತಿಯನ್ನು ಸಮಾಜಕ್ಕೆ ಉತ್ತಮ ಪ್ರಜೆಯಾಗಿಸುವಲ್ಲಿ ಶಿಕ್ಷಕನ ಪಾತ್ರ ಬಲು ದೊಡ್ಡದು . ನಾನು ಕೂಡ ಮೂರು ವರ್ಷಗಳು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದು ನನ್ನ ವೃತ್ತಿ ಬದುಕಿನ ಸುವರ್ಣ ಸಮಯ ಹಾಗೂ ಪುಣ್ಯವೆಂದೇ ಭಾವಿಸುತ್ತೇನೆ. ಒಬ್ಬ ವ್ಯಕ್ತಿಯನ್ನು ಸಮಾಜಕ್ಕೆ ಉತ್ತಮ ಪ್ರಜೆಯಾಗಿಸುವಲ್ಲಿ ಶಿಕ್ಷಕನ ಪಾತ್ರ ಬಲು ದೊಡ್ಡದು . ಯಾವುದೇ ಒಬ್ಬ ವ್ಯಕ್ತಿ ತನಗೆ ವಿದ್ಯೆ ಕಲಿಸಿದ ಗುರುಗಳನ್ನು ಮರೆಯುವುದಿಲ್ಲ. ಸಾಧನೆಗೈದ ಶಿಷ್ಯರಷ್ಟೇ ಅಲ್ಲ, ಬದುಕಿನಲ್ಲಿ ತಪ್ಪು ಹಾದಿ ಹಿಡಿದ ಶಿಷ್ಯರು ಕೂಡ ಗುರುಗಳನ್ನು ಸ್ಮರಿಸುತ್ತಾರೆ ಹೇಗೆಂದರೆ ಒಬ್ಬ ಸಾಧಕ ತನ್ನ ಸಾಧನೆಗೆ ಕೆಲವು ಗುರುಗಳ ಕೊಡುಗೆಯಿದೆಯೆಂದು ಬಗೆದರೆ, ಒಬ್ಬ ಸಮಾಜ ಕಂಟಕನಾದವ ಕೂಡ ನನ್ನ ಗುರುಗಳು ಹೇಳಿದ ಸನ್ ಮಾರ್ಗ ದಲ್ಲಿ ನೆಡೆದಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲವೆಂದು ಪಶ್ಚಾತ್ತಾಪದಿಂದ ಗುರುಗಳನ್ನು ಸ್ಮರಿಸುತ್ತಾನೆ. ಇಂತಹ ಸ್ಥಾನವನ್ನು ಪಡೆದಿರುವ ಶಿಕ್ಷಕ ವೃತ್ತಿಗೆ ಮತ್ತು ಎಲ್ಲ ಶಿಕ್ಷಕರಿಗೆ ನಮಿಸುವೆ.
ಒಬ್ಬರ ಸಾತ್ವಿಕ ಗುಣ, ಮತ್ತೊಬ್ಬರ ದಿಟ್ಟತನ, ಇನ್ನೊಬ್ಬರ ಸ್ನೇಹಪರ ಗುಣ, ಹಲವರ ಪ್ರೀತಿ, ಕಾಳಜಿ, ಅಭಿಮಾನ, ಅವರ ನಡೆ ನುಡಿ ಶಿಸ್ತು, ಉಡುಗೆ ತೊಡುಗೆ , ಜ್ಞಾನ, ನಗು ಮೊಗ , ಸಲಹೆ, ಸಹಕಾರ, , ಅವರ ಉಚ್ಛಾರಣೆ, ಕಲಿಸುತ್ತಿದ್ದ ಪಾಠದಲ್ಲಿ ನಾವು ಸಂಪೂರ್ಣ ತಲ್ಲೀನರಾಗುವಂತೆ ಮಾಡುತ್ತಿದ್ದ ಪರಿ, ಅವರ ಬದುಕಿನ ಶೈಲಿ, ನನ್ನ ಬದುಕಿಗೆ, ವೃತ್ತಿಗೆ, ಪೃವೃತ್ತಿಗೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ನನ್ನೊಳಗೆ ಅವರನ್ನು ಕಂಡುಕೊಳ್ಳುವಂತಹ ಪ್ರಭಾವವನ್ನು ಬೀರಿ, ಸಮಾಜದಲ್ಲಿ ಉತ್ತಮ ಪ್ರಜೆಯಾಗಿಸಿದ ನಾನು ಹೆಸರಿಸಿರುವ, ಇಲ್ಲವೆ ಮರೆತಿರುವ ನನ್ನೆಲ್ಲ ಗುರುವೃಂದಕ್ಕೆ ಇದೋ ನನ್ನ ಸಾಷ್ಟಾಂಗ ನಮಸ್ಕಾರಗಳು. ನಾನು ಹೆಸರಿಸಿರುವ ಬಹಳಷ್ಟು ಶಿಕ್ಷಕರಲ್ಲಿ ಹಲವರು ಜೀವಂತವಾಗಿಲ್ಲದಿರಬಹುದು, ಅವರಿಗೂ ನನ್ನ ನಮನಗಳು. ಶಿಕ್ಷಕರಾಗಿ ಸಹಸ್ರಾರು ಮಕ್ಕಳಿಗೆ ಶಿಕ್ಷಣ ನೀಡಿದ ನೀವು ಪುಣ್ಯವಂತರೇ ಸರಿ. ನಿಮ್ಮಂತಹ ಶಿಕ್ಷಕರಿಂದ ಶಿಕ್ಷಣ ಪಡೆದ ನಾವೂ ಧನ್ಯರು!. ತಮಗೆಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳೊಂದಿಗೆ ಮತ್ತೊಮ್ಮೆ ನನ್ನ ನಮನ.
0 ಪ್ರತಿಕ್ರಿಯೆಗಳು