ನಡೆ ನುಡಿ ಒಂದಾಗುವುದೇ ಸೌರ್ಹಾದತೆ….

ಮೇಟಿ ಮಲ್ಲಿಕಾರ್ಜುನ 

ಯಾವುದೇ ಒಂದು ಸಾಮಾನ್ಯ ಪದಕೋಶವನ್ನು ನಿಗಾವಹಿಸಿ ನೋಡಿದರೆ, ಸೌಹಾರ್ದ (ನಾ) ಎಂಬ ಪದಕ್ಕೆ ಸಹೃದಯತೆ, ಸೌಜನ್ಯ ಮೊದಲಾದ ತಿರುಳುಗಳು ದೊರೆಯುತ್ತವೆ. ಸಾಮರಸ್ಯ (ನಾ) ಪದಕ್ಕೆ ಹೊಂದಾಣಿಕೆ, ಚೆನ್ನಾಗಿ ಬೆರೆಯುವುದು ಎಂಬೆಲ್ಲ ಅರ್ಥಗಳನ್ನು ಕೊಡಲಾಗಿದೆ. ಅಂದರೆ ಜನಸಾಮಾನ್ಯರ ದೈನಂದಿನ ಮಾತುಕತೆ ಇಲ್ಲವೇ ಸಂವಹನದಲ್ಲಿ ಈ ಎರಡೂ ಪದಗಳಿಗೆ ಡಿಕ್ಸನರಿಯಲ್ಲಿ ಪ್ರಾಪ್ತವಾಗಿರುವ ಈ ಅರ್ಥಗಳೇ ಬಳಸಲ್ಪಡುತ್ತವೆ. ಕೂಡಿಬಾಳು ಅಥವಾ ಪರಸ್ಪರ ಅರಿತುಕೊಂಡು ಬಾಳುವುದು ಎನ್ನುವ ಅರ್ಥವುಳ್ಳ ಈ ಪದಗಳನ್ನು ನಮ್ಮ ಬದುಕಿನಲ್ಲಿ ಬಳಸುವುದೆಂದರೆ, ನಮ್ಮ ಬದುಕಿನ ದಾರಿಯೇ ಇಂತಹ ನಡೆಗಳಿಂದ ಕೂಡಿವೆ ಎಂದಾಯಿತು.

ನುಡಿ ಮತ್ತು ನಡೆಗಳ ನಡುವಣ ಹೊಂದಾಣಿಕೆಯೇ ನಮ್ಮೊಳಗೆ ಬೆರೆತು ಬಾಳುವ ಮನಸ್ಥಿತಿ ನೆಲೆಗೊಂಡ ಬಗೆಯನ್ನು ಸೂಚಿಸುತ್ತದೆ. ಅಂದರೆ ಪರಸ್ಪರ ವಿರೋಧಗಳಿಲ್ಲದೆ ಹೊಂದಿಕೊಂಡು ಹೋಗುವಿಕೆಯೇ ಸೌಹಾರ್ದ ಹಾಗೂ ಸಾಮರಸ್ಯ ಪದಗಳ ಖಚಿತವಾದ ತಿರುಳಾಗಿದೆ. ಲೋಕದ ನುಡಿಗಳಲ್ಲಿ ಏರ್ಪಡುವ ಸಂಧಿ ಕ್ರಿಯೆಯ ಸ್ವರೂಪವನ್ನು ಗಮನಿಸಿದರೆ, ಸೌಹಾರ್ದ ಅಥವಾ ಸಾಮರಸ್ಯ ಪದಗಳ ನಿಚ್ಚಳವಾದ ತಿರುಳು ಏನಿರಬಹುದು ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಉದಾ.ಗೆ “ಎರಡುಂ ಪಲವುಂ ವರ್ಣಂ ಪರಸ್ಪರ ಕೂಡುವಂದಮದು ವಲಂ” ಎಂದು ಕೇಶಿರಾಜ ತನ್ನ ಮಹತ್ವದ ಕೃತಿ ಶಬ್ದಮಣಿದರ್ಪಣದಲ್ಲಿ ಈ ಸಂಧಿ ಪ್ರಕ್ರಿಯೆಯನ್ನು ಕುರಿತು ಅತ್ಯಂತ ಮಾರ್ಮಿಕವಾಗಿ ಬಣ್ಣಿಸಿರುವುದನ್ನು ಮನಗಾಣಬಹುದು.

ಭಾಷೆಯೊಳಗೆ ಏರ್ಪಡುವ ರಾಚನಿಕ ಇಲ್ಲವೇ ಸುಸಂಬದ್ಧತೆಯನ್ನು ನೇರವಾಗಿ ಇನ್ನೂ ಕೆಲವು ರಾಚನಿಕ ವಿನ್ಯಾಸಗಳನ್ನು ಬಳಸಿಕೊಂಡು ವಿವರಿಸಬಹುದು. ಅಂದರೆ ಎರಡು ವಿಭಿನ್ನ ಪದಗಳು ಇಲ್ಲವೇ ಪ್ರತ್ಯಯಗಳು ಸೇರಿದಾಗ (ಉದಾ.ಗೆ ಬಾನು+ಉಲಿ = ಬಾನುಲಿ, ಮನೆ+ತನ = ಮನೆತನ) ಬೇರೊಂದು ಭಾಷಿಕ ರೂಪಕ್ಕೆ ಕಾರಣ ಆಗುತ್ತವೆ. ಆ ಮೂಲಕ ತಮ್ಮ ಪ್ರತ್ಯೇಕ ಅಸ್ಮಿತೆಯನ್ನು ಕಳೆದುಕೊಂಡು ಬೇರೊಂದು ಅಸ್ಮಿತೆಗೆ ಕಾರಣ ಆಗುತ್ತವೆ.

ಈ ಅಸ್ಮಿತೆ ಬಹುಳತೆಯ ರೂಪಕವಾಗುತ್ತದೆ. ಇದೊಂದು ಅನ್ಯೋನ್ಯತೆಯ ಪ್ರತೀಕವೇ ಎಂದು ಹೇಳಬಹುದು. ಆದರೆ ಸಮೂಹಗಳ ನಡುವಣ ಹೊಂದಾಣಿಕೆಯಲ್ಲಿ ತಮ್ಮ ಅಸ್ಮಿತೆಯನ್ನು ತ್ಯಾಗ ಮಾಡಿ ಬೆರೆಯುವ ಅಗತ್ಯವಿರುವುದಿಲ್ಲ. ಬದಲಾಗಿ ತಮ್ಮ ಸ್ವಂತಿಕೆಯ ಹಿರಿಮೆಯ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಭಾಷಿಕ, ರಾಜಕೀಯ ಹಾಗೂ ಮಾನಸಿಕ ಸಾಮರಸ್ಯವನ್ನು ಹೊಂದಬೇಕಾಗುತ್ತದೆ. ಈ ಹೊಂದಾಣಿಕೆಯ ಚಹರೆಗಳು ನಮ್ಮ ನಡೆ ಮತ್ತು ನುಡಿಗಳಲ್ಲಿ ಪ್ರಕಟಗೊಳ್ಳಬೇಕು.

ವಿಭಿನ್ನ ಲೋಕದೃಷ್ಟಿಗಳ ನಡುವೆ ಸಹಿಷ್ಣುತೆ ಎಂಬುದು ಪರಸ್ಪರ ನಂಬಿಕೆ, ಒಪ್ಪಿಗೆಗಳನ್ನು ಸ್ಥಾಪಿಸುವ ವಿಧಾನ ಆಗಿರುತ್ತದೆ. ಈ ಪ್ರಕ್ರಿಯೆಯು ಯಾವುದೇ ವೈವಿಧ್ಯತೆಗಳಿಂದ ಕೂಡಿದ ಪರಿಸರದಲ್ಲಿ, ಧರ್ಮ ಮತ್ತು ಪ್ರಜಾಪ್ರಭುತ್ವಗಳ ನಡುವೆ ಸಹಬಾಳ್ವೆಯನ್ನು ನೆಲೆಗೊಳಿಸುವ ಬಗೆಯಾಗಿರುತ್ತದೆ. ಇದು ಸಹಜವಾಗಿಯೇ ಬಹುಭಾಷಿಕ ಇಲ್ಲವೇ ಬಹುಸಾಂಸ್ಕೃತಿಕ ಹಾಗೂ ಸಮಾನತೆಗಳ ನಡುವೆ ಸಾಮಾರಸ್ಯವನ್ನು ಏರ್ಪಡಿಸುವುದಕ್ಕೆ ದಾರಿ ಮಾಡಿಕೊಡುತ್ತದೆ. ದಿಟ, ಸಹಿಷ್ಣುತೆ ಎಂಬ ಪರಿಕಲ್ಪನೆಯನ್ನು ನಾವು ಅತ್ಯಂತ ಸಂಕುಚಿತವಾಗಿಯೇ ಬಳಸುತ್ತ ಬಂದಿದ್ದೇವೆ. ಅಂದರೆ ಇದು ಕೇವಲ ಧಾರ್ಮಿಕತೆ ಅಥವಾ ಧರ್ಮಕ್ಕೆ ಮಾತ್ರ ಸೀಮಿತವಾಗಿ ಬಳಕೆಯಾಗುತ್ತದೆ. ಇದು ಕೇವಲ ಆದರ್ಶದ ಕಲ್ಪನೆಯಾಗಿ, ಆಚರಣೆಯ ಹಂಗನ್ನು ತೊರೆದು ಅಗತ್ಯ ಬಿದ್ದಾಗೆಲ್ಲ ಜಪಿಸುವ ಮಂತ್ರವಾಗಿದೆ.

ಸಮೂಹಗಳ ನುಡಿಯಲ್ಲಿ ಸೌರ್ಹಾದತೆ, ಸಾಮರಸ್ಯ ಹಾಗೂ ಸಹಬಾಳ್ವೆ ಎಂಬಂತಹ ಪದಗಳು ವಿಫುಲವಾಗಿ ವ್ಯಕ್ತವಾಗುತ್ತವೆ ಆದರೆ ಜನರ ನಡೆಗಳಲ್ಲಿ ಇವುಗಳ ಪರಿಣಾಮ ಮಾತ್ರ ಗೈರು ಆಗಿರುತ್ತದೆ. ನಡೆ ನುಡಿಗಳ ನಡುವಣ ಕಂದಕ ಇನ್ನಷ್ಟು ಬಿಗಡಾಯಿಸುವುದಕ್ಕೆ ಇದು ನೆರವಾಗುತ್ತದೆ. ಜಾತಿ, ಧರ್ಮಗಳ ನಡುವಣ ಪ್ರತ್ಯೇಕ ಭಾವ ಇಮ್ಮಡಿಸುತ್ತದೆ. ಭಾರತದ ಸನ್ನಿವೇಶಕ್ಕೆ ವ್ಯತಿರಿಕ್ತವಾಗಿ ಯುರೋಪಿನ ಸಂದರ್ಭದಲ್ಲಿ ಧಾರ್ಮಿಕ ಸಹಿಷ್ಣುತೆ ಎಂಬುದು ಒಂದು ಕಾನೂನು ಪರಿಕಲ್ಪನೆಯಾಗಿ ನೆಲೆಗೊಂಡಿದೆ.

ಜನರು ಕಾನೂನಿನಲ್ಲಿ ಅಪಾರ ನಂಬಿಕೆಯನ್ನು ಬೆಳೆಸಿಕೊಳ್ಳಲು ಈ ನಿಲುವು ಒತ್ತಾಸೆಯಾಗಿದೆ. ಈ ಕಾನೂನು ಪ್ರೇರಿತ ಸಹಿಷ್ಣುತೆಯು ಪ್ರಭುತ್ವದ ಒಂದು ಅಸ್ತ್ರವಾಗಿ ಬಳಕೆಗೊಳ್ಳುತ್ತದೆ. ಅಂದರೆ ಕಾನೂನಿನ ಪ್ರಕಾರ ಧಾರ್ಮಿಕ ಸಹಿಷ್ಣುತೆ ಇಲ್ಲವೇ ಸಮುದಾಯಗಳ ನಡುವಣ ಸಾಮರಸ್ಯ ಜನರಲ್ಲಿ ಕಡ್ಡಾಯವಾಗಿ ಒಡಮೂಡಬೇಕು ಎನ್ನುವುದು ನಿಶ್ಚಿತ. ಆದರೆ ಸಮೂಹಗಳ ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ಜನಾಂಗೀಯ ಧ್ವೇಷ ಹಾಗೂ ಆ ಕುರಿತ ಅಪಕಲ್ಪನೆಗಳು ಮಾತ್ರ ನಿರಂತರವಾಗಿ ಅಂತಸ್ಥಗೊಂಡಿರುತ್ತವೆ. 

ಅಂತರಂಗ ಮತ್ತು ಬಹಿರಂಗಳ  ನಡುವಣ ಕಂದಕಗಳನ್ನು ಅಳಿಸುವ ವೈಚಾರಿಕತೆ ಜನ ಸಾಮಾನ್ಯರ ದೈನಂದಿನ ಬದುಕಿನ ವಿವೇಕ ಆಗದೇ ಹೋದರೆ ಸೌರ್ಹಾದತೆ ಅಥವಾ ಸಾಮರಸ್ಯ ಅನ್ನುವುದು ಕೇವಲ ನಿರರ್ಥಕವಾಗಿ ಜಪಿಸುವ ಮಂತ್ರವಾಗುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯ, ವೈವಿಧ್ಯತೆಯಲ್ಲಿ ಏಕತೆ ಎಂಬಂತಹ ಪರಿಕಲ್ಪನೆಗಳು ಇವತ್ತು ಇಂತಹ ನಿರರ್ಥಕ ಪದಗಳಾಗಿವೆ ಹೊರತು ನಡೆಗಳಾಗಿಲ್ಲ. 

ಸಾಮಾನ್ಯವಾಗಿ ಈ ಸಹಿಷ್ಣುತೆಯನ್ನು ಮನುಷ್ಯ ವರ್ತನೆಯ ರೂಪವನ್ನಾಗಿ ಮಾತ್ರ ಕಾಣಲಾಗುತ್ತದೆ. ನಮ್ಮ ಗ್ರಹಿಕೆಯಲ್ಲಿ ಅನ್ಯ ಜಾತಿ, ಧರ್ಮಗಳ ಬಗೆಗಿನ ಅಸಹನೆ, ದ್ವೇಷ ಹಾಗೂ ಭೇದಭಾವವನ್ನು ತೊಡೆದು ಹಾಕದೇ, ಕೇವಲ ರಾಜಕೀಯ ಸರಿತನವನ್ನು ಮಾತ್ರ ಪ್ರದರ್ಶಿಸಲು, ಇಂತಹ ಸಹಿಷ್ಣುತೆಯ ಸೋಗನ್ನು ಹಾಕಲಾಗುತ್ತದೆ. ಈ ನಡೆಯ ಹಿಂದೆ ಹಲವು ಬಗೆಯ ಒಳ ಉದ್ದೇಶಗಳು ಕ್ರಿಯಾಶೀಲವಾಗಿರುತ್ತವೆ. ಅಂದರೆ ಸಹಿಷ್ಣುತೆ ಎನ್ನುವುದು ತಾಳಿಕೆಯ ಗುಣ ಇಲ್ಲವೇ ಸಹಿಸುವ ಗುಣದಿಂದ ಭಿನ್ನವಾಗಿರುತ್ತದೆ ಮತ್ತು ಇದೊಂದು ‘ರಾಜಕೀಯ ಮೌಲ್ಯವಾಗಿ’ ರೂಪಾಂತರ ಹೊಂದಿರುತ್ತದೆ.

ಯಾವಾಗ ಇನ್ನೊಬ್ಬರ ಆಚಾರ, ವಿಚಾರ, ನುಡಿ, ಪ್ರದೇಶ, ಲಿಂಗ ಹಾಗೂ ಸಂಸ್ಕೃತಿ ಬೇರೆಯಾಗಿರುತ್ತದೆಯೋ ಆವಾಗ ಅದನ್ನು ತಾಳಿಕೊಳ್ಳುವುದು ನಮ್ಮ ಸಾಮಾಜಿಕ ಮೌಲ್ಯವೂ ಮತ್ತು ನಡೆಯೂ ಆಗಬೇಕು. ಆದರೆ ಇದೊಂದು ಕೇವಲ ರಾಜಕೀಯ ಮೌಲ್ಯವಾದಾಗ, ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆಯೋ, ಅವುಗಳು ಎಲ್ಲವನ್ನೂ ನಾವು ಇವತ್ತು ನೋಡುತ್ತಿದ್ದೇವೆ. ಇವುಗಳ ಪರಿಣಾಮವನ್ನು ಅನುಭವಿಸುತ್ತಿದ್ದೇವೆ.

ಒಂದು ಸಂವಿಧಾನದ ಅಡಿಯಲ್ಲಿ ಬದುಕುವ ಪ್ರತಿಯೊಂದು ಸಮುದಾಯವು ಕೆಲವು ಸಮಾನ ತತ್ವ ಹಾಗೂ ಸತ್ಯದ ವಿನ್ಯಾಸಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅಂದರೆ, ಜಾತಿ, ಮತ ಹಾಗೂ ಧರ್ಮ ಎನ್ನುವ ವಿನ್ಯಾಸಗಳು ಬೇರೆ ಬೇರೆ ಆಗಿದ್ದರೂ, ಅವುಗಳ ನಡುವಣ ಸಾಮಾಜಿಕ, ಸಾಂಸ್ಕೃತಿಕ ನೆಲೆಗಳು ಒಂದೇ ರಾಚನಿಕತೆಯನ್ನು ಹೊಂದಿರುತ್ತವೆ ಎಂಬ ವಾಸ್ತವವನ್ನು ಒಪ್ಪಿಕೊಳ್ಳುವುದು ಅಗತ್ಯ. ಹಾಗಾಗಿ ಸಹಿಷ್ಣುತೆ ಅನ್ನುವುದನ್ನು ಕೇವಲ ಉದಾರ ರಾಜಕೀಯ-ಸಾಂಸ್ಕೃತಿಕ ಮೂಲಮಂತ್ರವಾಗಿ ನೆಲೆಗೊಂಡಿದೆ. ಅಂದರೆ, ಸಹಿಷ್ಣುತೆ ಎಂಬ ಕಲ್ಪನೆ ನಾಗರಿಕ ಮೌಲ್ಯವನ್ನು ಹೋಲುವ ಬಗೆಯಾಗಿರುವುದಿಲ್ಲ. ಬದಲಾಗಿ ಸಹಕಾರ ಮತ್ತು ರಾಜಿ ಮಾಡಿಕೊಳ್ಳುವ ನಿಲುವುಗಳಿಗೆ ಸಹಿಷ್ಣುತೆಯನ್ನು ಸೀಮಿತಗೊಳಿಸಲಾಗಿದೆ. ಇಂತಹ ಸಂಕುಚಿತ ಭಾವನೆಯನ್ನು ಸಹಿಷ್ಣುತೆ ಎನ್ನಲಾಗದು. ಏಕೆಂದರೆ ಸಹಿಷ್ಣುತೆ ಎನ್ನುವುದು ಅನುಸಂಧಾನದ ಮಾದರಿಯಾಗಿದೆ.

ಒಂದು ಸಮುದಾಯದ ಸತ್ಯದ ಕಲ್ಪನೆ ಮತ್ತೊಂದು ಸಮುದಾಯದ ಕಲ್ಪನೆಯ ಜೊತೆಗೆ ಹೊಂದಾಣಿಕೆಯಾದರೆ ಅದನ್ನು ಸಮುದಾಯಗಳ ನಡುವಣ ಅನುಸಂಧಾನದ ಮಾದರಿ ಎನ್ನಬಹುದು. ಭಿನ್ನ ಧರ್ಮಗಳು ಮತ್ತು ಸಂಸ್ಕೃತಿಗಳ ನಡುವೆ ಅನುಸಂಧಾನ ಏರ್ಪಡದಿದ್ದರೆ, ಅದು ಸಂಘರ್ಷಕ್ಕೆ ದಾರಿಮಾಡಿ ಕೊಡುತ್ತದೆ. ಇವತ್ತು ಸಮೂಹಗಳ ನಡುವೆ ಏರ್ಪಟ್ಟಿರುವ ನಂಟಸ್ತಿಕೆ ಕೇವಲ ಸಂಘರ್ಷ, ಅಸೂಹೆ ಹಾಗೂ ದ್ವೇಷದಿಂದ ಕೂಡಿದ ಬಗೆಯಾಗಿದೆ. ಹಾಗಾಗಿಯೇ ಸಹಿಷ್ಣುತೆ ಇಲ್ಲವೇ ಸೌರ್ಹಾದತೆಯನ್ನು ನೆಲೆಗೊಳಿಸುವ ಹಂಬಲ ತೀವ್ರಗೊಳ್ಳುತ್ತಿದೆ.

ಈ ಬಗೆಯ ಹಂಬಲವನ್ನು ಚರಿತ್ರೆಯ ಉದ್ದಕ್ಕೂ ನೋಡುತ್ತೇವೆ. ಅಂದರೆ ಎಲ್ಲ ಕಾಲದಲ್ಲಿಯೂ ಹಿಂಸೆ, ಶೋಷಣೆ, ಅಸ್ಪೃಶ್ಯತೆ, ಧರ್ಮಾಂಧತೆ ಮೊದಲಾದ ನಿಲುವುಗಳೇ ಪ್ರಾಬಲ್ಯವನ್ನು ಪಡೆದಿವೆ. ಬುದ್ಧ, ಮಹಾವೀರ ಮೊದಲಾದ ಸಾತ್ವಿಕರ ಕಾಲದಿಂದಲೂ ನಾವು ಅಹಿಂಸೆಯನ್ನು ಜಪಿಸುತ್ತಲೇ ಬಂದಿದ್ದೇವೆ. ಅಂದರೇನಾಯ್ತು ಹಿಂಸೆಯ ಪ್ರಾಬಲ್ಯವೇ ಎಲ್ಲ ಕಾಲದಲ್ಲಿಯೂ ಸ್ಥಿರವಾಗಿರುತ್ತದೆ ಎಂಬ ವಾಸ್ತವವನ್ನು ಸಾಬೀತುಪಡಿಸಿದಂತಾಯಿತು. 

ಮಾನವ ಚರಿತ್ರೆಯನ್ನು ಪರಿಶೀಲಿಸಿ ನೋಡಿದರೆ ಹಲವು ಅಚ್ಚರಿಯ ಸಂಗತಿಗಳು ನಮ್ಮ ಗಮನಕ್ಕೆ ಬರುತ್ತವೆ. ಅಂದರೆ ಹಿಂಸೆ, ಅಸಹಿಷ್ಣುತೆ, ಅಸ್ಪೃಶ್ಯತೆ ಮೊದಲಾದ ಮನೋಧರ್ಮಗಳು ಮಾನವ ಸಂಕುಲದ ಸ್ಥಾಯಿಭಾವಗಳಾಗಿವೆ. ಹಾಗಾಗಿ ಅಹಿಂಸೆ, ಸಹಿಷ್ಣುತೆ, ಸ್ಪೃಶ್ಯತೆಗಳನ್ನು ಪಡೆಯುವ ತುಡಿತ ನಮ್ಮನ್ನು ನಿರಂತರವಾಗಿ ಕಾಡುತ್ತಿದೆ. ಅಷ್ಟೆ ಅಲ್ಲದೇ ಈ ಮೌಲ್ಯಗಳೇ ನಮ್ಮನ್ನು ನಾಗರಿಕಗೊಳಿಸುವ ಹಾಗೂ ಸಾಂಸ್ಕೃತಿಕ ಚಹರೆಗಳನ್ನು ನೆಲೆಗೊಳಿಸುವ ವಿದ್ಯಮಾನಗಳಾಗಿವೆ. ಜೀವಪರ ಚಿಂತಿಸುವ ಚಿಂತಕರು, ಸಂತರು, ಜ್ಞಾನಿಗಳು, ತತ್ವಶಾಸ್ತ್ರಜ್ಞರು ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ರಾಜಕೀಯ ನೇತಾರರು ಈ ಮೌಲ್ಯಗಳನ್ನು ನೆಲೆಗೊಳಿಸುವ ದಿಕ್ಕನಲ್ಲಿ ತಮ್ಮ ಬದುಕಿನುದ್ದಕ್ಕೂ ಹೋರಾಟಗಳನ್ನು ಮಾಡಿದ್ದಾರೆ.

ಬದುಕಿನ ಸಂಕೀರ್ಣತೆಯನ್ನು ಅರಿಯುವ ಪ್ರಕ್ರಿಯೆಯಲ್ಲಿ ನಮ್ಮನ್ನು ಹೆಚ್ಚು ಬಾಧಿಸುವ ಸಾಮಾಜಿಕ, ರಾಜಕೀಯ ಸಂಗತಿಗಳೆಂದರೆ, ಜಾತಿ, ಧರ್ಮ, ಲಿಂಗದಂತಹ ವಿನ್ಯಾಸಗಳಾಗಿವೆ. ಈ ವಿನ್ಯಾಸಗಳನ್ನು ಅಸ್ತ್ರಗಳನ್ನಾಗಿ ಬಳಸಿಕೊಂಡು ಸಮೂಹಗಳಲ್ಲಿ ಹಲವು ಬಗೆಯ ಅಸಮಾನತೆಗಳು ಬೇರೂರಿಸಲು ಸಾಧ್ಯವಾಗಿದೆ. ಮೇಲ್ನೋಟಕ್ಕೆ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಅಸಮಾನತೆಗಳಿಗೆ ಕಾರಣಗಳು ಆರ್ಥಿಕ ನೆಲೆಯಿಂದ ಕೂಡಿದವು ಅನ್ನುವಂತಹದು ನಿಚ್ಚಳವಾಗಿ ಕಾಣುತ್ತದೆ.

ದಿಟ, ಈ ಆರ್ಥಿಕ ಪ್ರಶ್ನೆಗಳನ್ನು ನಿರಾಕರಿಸಲು ಆಗುವುದಿಲ್ಲ ಆದರೆ ನೇರವಾಗಿ ಆರ್ಥಿಕ ಮೂಲದಿಂದ ಕೂಡಿರುವ ಪ್ರಶ್ನೆಗಳೇ ಇವತ್ತು ನಾವು ಎದುರಿಸುತ್ತಿರುವ ಎಲ್ಲ ಬಗೆಯ ಅಸಮಾನತೆಗೆ ಕಾರಣವಾಗದೇ, ಜಾತಿ, ಧರ್ಮ ಹಾಗೂ ಲಿಂಗದಂತಹ ವಿನ್ಯಾಸಗಳು ಹುಟ್ಟು ಹಾಕಿರುವ ಹುನ್ನಾರಗಳು ಕಾರಣವಾಗಿವೆ. ಸಾಮಾಜಿಕ ಬೆಳವಣಿಗೆ, ಸಾಂಸ್ಕೃತಿಕ ಹೊಂದಾಣಿಕೆ, ಧಾರ್ಮಿಕ ಸಹಿಷ್ಣುತೆ ಹಾಗೂ ಭಾಷಿಕ ಸೌರ್ಹಾದತೆಗಳು ನೆಲೆಗೊಳ್ಳಲು, ನಾವು ಈಗಾಗಲೇ ಒಪ್ಪಿ ಅನುಸರಿಸಿಕೊಂಡು ಬಂದಿರುವ ಸಾಮಾಜಿಕ ಸಂಸ್ಥೆಗಳನ್ನು ಮರು ವಿನ್ಯಾಸಗೊಳಿಸುವ ಜರೂರಿದೆ.

ವರ್ಣಾಶ್ರಮ ಪದ್ಧತಿ, ಧಾರ್ಮಿಕ ನಿಲುವುಗಳು, ಧಾರ್ಮಿಕ ಶಾಸ್ತ್ರಗಳು, ಆಹಾರ ಪದ್ಧತಿ, ಉಡಿಗೆ ತೊಡಿಗೆ, ವಸಾಹತುಶಾಹಿ ಪ್ರಭಾವ ಮತ್ತು ಪರಿಣಾಮಗಳ ಕಾರಣದಿಂದ ನಮ್ಮೊಳಗಿನ ಬಿರುಕುಗಳನ್ನು ಅಳಿಸಿ ಹಾಕಬೇಕಿದೆ. ಈ ನಡೆಯನ್ನು ಸಹಜವಾಗಿ ಆಗುಮಾಡಲು ಸಾಧ್ಯವಿಲ್ಲ. ಅಂದರೆ ಕೇವಲ ದರ್ಗಾ ಮತ್ತು ಮಂದಿರಗಳ ನಡುವೆ ಏರ್ಪಟ್ಟಿರುವ ಸಾಮಾನ್ಯ ರೂಢಿಗಳನ್ನು ಸಹಿಷ್ಣುತೆಯ ಚಹರೆಗಳನ್ನಾಗಿ ಬಿಂಬಿಸಲಾಗಿದೆ. ಮೇಲ್ನೋಟಕ್ಕೆ ಇದು ವಾಸ್ತವ ಅನ್ನಿಸುತ್ತದೆ ಆದರೆ ಇದುವೇ ದಿಟವಲ್ಲ. ಕಲಬುರ್ಗಿ, ತಿಂಥಣಿ, ಶಿರಹಟ್ಟಿ ಮೊದಲಾದ ಜಾಗಗಳು ಸೌರ್ಹಾದತೆಗೆ ಹೆಸರುವಾಸಿ ಆಗಿರುತ್ತವೆ. ಇದೊಂದು ಬಗೆಯಲ್ಲಿ ಒಂದು ತಿಳಿಗೊಳವಿದ್ದಂತೆ. ಅಂದರೆ ತಿಳಿಗೊಳಕ್ಕೆ ಕಲ್ಲು ಎಸೆದರೆ, ಆಳದಲ್ಲಿ ಮಡುಗಟ್ಟಿದ ಕೆಸರು ಇಡೀ ತಿಳಿಗೊಳವನ್ನು ರಾಡಿ ಮಾಡುತ್ತದೆ.

ಸೌರ್ಹಾದತೆಗೆ ರೂಪಕವನ್ನಾಗಿ ಉಲ್ಲೇಖಿಸುವ ಪ್ರತಿ ಜಾಗವೂ ಇಂತಹದೇ ತಿಳಿಗೊಳವಿದ್ದಂತೆ. ಧರ್ಮಾಂಧತೆಯ ಕಲ್ಲನ್ನು ಎಸೆದಾಗ, ಈ ತಿಳಿಗೊಳಗಳೂ ರಾಡಿಗೊಳ್ಳುತ್ತವೆ. ಮೇಲ್ನೋಟಕ್ಕೆ ಸೌರ್ಹಾದತೆಯನ್ನು ಮೆರೆಯುವ ಪ್ರತಿ ಜಾಗದ ಅಡಿಯಲ್ಲಿ ಧರ್ಮಾಂಧತೆಯ ಕೆಸರು ಅಂತಸ್ಥಗೊಂಡಿರುತ್ತದೆ ಎನ್ನುವ ವಾಸ್ತವವನ್ನು ಮರೆಮಾಚುವಂತಿಲ್ಲ. ಭಾರತದುದ್ದಕ್ಕೂ ಸಾಕಷ್ಟು ಘಟನೆಗಳು ಇಂತಹ ರಾಡಿಗೊಳಿಸಿದ್ದನ್ನು ನೋಡಿದ್ದೇವೆ ಮತ್ತು ಈಗಲೂ ನೋಡುತ್ತಿದ್ದೇವೆ.

ಬಹುಭಾಷಿಕ ಮತ್ತು ಬಹುಸಾಂಸ್ಕೃತಿಕ ಸನ್ನಿವೇಶದಲ್ಲಿ ಕೂಡಿ ಬಾಳುವ ಪ್ರತಿಯೊಂದು ಸಮುದಾಯವು ತನ್ನೊಂದಿಗೆ ಬಾಳುವ ಮತ್ತೊಂದು ಜಾತಿ-ಧರ್ಮದ ಸಮುದಾಯವನ್ನು ಅನುಭೂತಿಯಿಂದ ನಡೆಸಿಕೊಳ್ಳುವ ಜರೂರಿದೆ. ಅಂದರೆ ನಾವು ಬೇರೆ ಬೇರೆ ಸರಿ ಆದರೆ ಒಂದಾಗಿ ಬದುಕುತ್ತಿದ್ದೇವೆ ಎನ್ನುವ ಎಚ್ಚರ ಮತ್ತು ವಿವೇಕ ನಮ್ಮ ನಡೆ-ನುಡಿಗಳಲ್ಲಿ ಬೆರೆತು, ನಮ್ಮ ಬದುಕಿನ ಧ್ಯೇಯವೇ ಹೀಗೆ ಸೌರ್ಹಾದತೆ ಮತ್ತು ಸಾಮರಸ್ಯದಿಂದ ಕೂಡಿರುತ್ತದೆ ಎನ್ನುವ ವೈಚಾರಿಕತೆ ನಮ್ಮದಾಗಬೇಕು. ಈ ವಿನ್ಯಾಸವನ್ನೇ ಪ್ರಜಾಪ್ರಭುತ್ವ ಎನ್ನುವುದು.

ತಾಳಿಕೆಯ ಗುಣವೇ ಪ್ರಜಾಪ್ರಭುತ್ವದ ಮೂಲ ಮಂತ್ರ. ಪ್ರಜಾಪ್ರಭುತ್ವವಾದಿಗಳು ಆಗೋಣ ಮತ್ತು ಸೌರ್ಹಾದತೆಯಿಂದ ಬದುಕೋಣ ಎನ್ನುವುದೇ ನಮ್ಮ ನಂಬಿಕೆಯ ಜಗತ್ತಾಗಿ ರೂಪುಗೊಳ್ಳಬೇಕು. ಇಂತಹದೊಂದು ನಂಬಿಕೆಯ ಜಗತ್ತನ್ನು ರೂಪಿಸುವ ಹೊಣೆಗಾರಿಕೆ ನಮಗೆಲ್ಲರಿಗೂ ಸೇರಿದ್ದು ಎಂಬ ವಾಸ್ತವವನ್ನು ನಾವು ಯಾವತ್ತಿಗೂ ಮರೆಯುವಂತಿಲ್ಲ. 

‍ಲೇಖಕರು Admin

May 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: