ಸರೋಜಿನಿ ಪಡಸಲಗಿ
“ಭುಸ್” ಅಂತ ಹಾಲು ಉಕ್ಕಿದಾಗಲೇ ಎಚ್ಚರ! ಗ್ಯಾಸ್ ಮೇಲೆ ಹಾಲಿಟ್ಟದ್ದನ್ನು ಮರೆಯೋ ಅಷ್ಟು ಗಾಢ ಯೋಚನೆಯೊಳಗ ಮುಳುಗಿದ್ದನೇನ ಅನಕೋತ ನೋಡ್ತೀನಿ, ಗ್ಯಾಸ್ ಆರಿ ಹೋಗೇದ! ಧಡಬಡಿಸಿ ಅದನ್ನ ಬಂದ್ ಮಾಡಿ ಈ ಕಡೆ ನೋಡೂದ್ರಾಗ ನದಿಗತೆ ಹಾಲ ಹರದಾವ! ನೋಡಿ ತಲಿಕೆಟ್ಟ ಹೋತು. “ಇದೊಂದ ಕೆಲಸ ಕಡಿಮಿ ಆಗಿತ್ತ ನೋಡ. ಇನ್ನ ಇದನೆಲ್ಲಾ ಸ್ವಚ್ಛ ಮಾಡಬೇಕು. ಕರ್ಮ ನಂದು” ಅಂತ ಗೊಣಗಾಡಕೋತ ಹಾಲ ಉಕ್ಕಿ ವಿರೂಪ ಆಗಿದ್ದ ಪಾತ್ರೇಲಿ ಧಪ್ ಅಂತ ಕುಕ್ಕಿ, ಒಂದು ಅರಿವಿ ಎಳಕೊಂಡ ಬಂದು ಬಿದ್ದ ಹಾಲೆಲ್ಲಾ ಒರಸಿ, ತೊಳದ ಸ್ವಚ್ಛ ಮಾಡಿ ಹೊರಗ ಬಂದು ಸೋಫಾದ ಮ್ಯಾಲ ಗಪ್ಪ ಕೂತೆ.
ಯಾಕೋ ಮುಂಜಾನೆ ತಂಗೆವ್ವ ಬಂದು ಪಲ್ಲ್ಯಾ ಕೊಟ್ಟು ಹೋದಾಗಿಂದ ತಲಿ ಅಂಬೂದು ಒಂದ ನಮೂನಿ ಅಗದೀ ಥೇಟ್ ಮಸರ ಗಡಿಗಿ ಹಂಗ ಆಗಿ ಬಿಟ್ಟಿತ್ತ ಆಕಿ ಮಾತ ಕೇಳಿ. ತಂಗೆವ್ವ ಏನ ಕಲತಾಕಿ ಅಲ್ಲ. ತಲಿ ಮ್ಯಾಲ ಪಲ್ಲ್ಯಾದ ಬುಟ್ಟಿ ಹೊತಗೊಂಡ, ʻಪಲ್ಲ್ಯಾ ಬೇ ಯವ್ವಾʼ ಅಂತ ಒದರಿಕೋತ ತರಕಾರಿ ಮಾರಿ ಹೋಗಾಕಿ. ಖರೆ ಆಕಿ ಮಾತು ಆಕಿ ಪಲ್ಲೇದ ಬುಟ್ಟಿ ಹಂಗs ತುಂಬ ಮಾತು; ಬಲೆ ಒಜ್ಜಾ ಮಾತು, ಅಂದ್ರ ತೂಕದ ಮಾತು ಅಂತಾರಲಾ ಹಂಗ. ಒಂದ ಮಾತಿನ್ಯಾಗ ಇಡೀ ಲೋಕಾನs ತೋರಿಸಿ ಹೋಗಿ ಬಿಡ್ತಿದ್ಲು ಆಕಿ. ಒಮ್ಮೊಮ್ಮೆ ನಕ್ಕು ಸುಮ್ಮನಾಗಿ ಬಿಡ್ತಿದ್ದೆ. ಒಮ್ಮೊಮ್ಮೆ ಬಲೆ ಮರ್ಮದ ಮಾತ ಅನಿಸೂದ ಏನು, ಹಂಗs ಇರ್ತಿದ್ದು, ಹೀಂಗ ಒಂದಿನಾ ಅಲ್ಲಾ ವಾರಗಟ್ಟಲೆ ತಲ್ಯಾಗ ಘುಮಸ್ತಿದ್ದು.
ಈ ಹೊತ್ತ ಹಂಗs ಆತು. ದಿನಧಾಂಗ ಬಂದ್ಲು, ಅಗದಿ ತನ್ನ ನಕ್ಕಿ ವ್ಯಾಳ್ಯಾಕ್ಕ. ತಾಜಾ ತಾಜಾ ಪಲ್ಲ್ಯಾ ತೂಗಿ ಎಲ್ಲಾ ನನ್ನ ಬುಟ್ಟಿಗೆ ಹಾಕಿದ್ಲು. ದಿನದ ಹಂಗ ಗಡಿಬಿಡಿ – ವತಾವತಿ ಮಾಡದ ಉಸ್ ಅಂತ ಸುಮ್ಮನ ಕೂತಳು. ನಂಗ ಆಶ್ಚರ್ಯ ಆತು. ಆಕಿ ಮಾರಿ ನೋಡ್ದೆ. ಮಾರಿ ಅಂಬೂದು ಒಣಗಿದ ಬದನಿಕಾಯಿ ಆಗಿತ್ತು. “ಯಾಕ ತಂಗೆವ್ವಾ, ಹಿಂಗ್ಯಾಕ ಇದ್ದೀ? ಆರಾಮ ಅದ ಇಲ್ಲೋ?” ಅಂತ ಕೇಳ್ದೆ. “ಇಲ್ಲs ಯವ್ವಾ, ಯಾಕೋ ಅಷ್ಟ ಬೇಶ ಅನಸವಲ್ತ ಬೇ. ತಲಿ ಒಂದ ಠಣಾ ಠಣಾ ಹೊಡ್ಯಾಕ್ಹತ್ತೇತಿ” ಅಂದ್ಲು. “ನಿಂದ್ರ ತಂಗೆವ್ವಾ, ಒಂದ ನಿಮಿಷ ನಿಂದ್ರ. ಒಂದ ಅರ್ಧಾ ಕಪ್ ಚಹಾ ಮಾಡಕೊಂಡ ಬರ್ತೀನಿ. ಅಷ್ಟ ಬಿಸಿಬಿಸಿ ಚಹಾ ಕುಡದ್ರ ಒಂಚೂರ ಹಗರ ಆಗ್ತದ” ಅಂತ ಹೊರಟೆ. ಅದಕ್ಕ ಆಕಿ, “ಬ್ಯಾಡ ಬಿಡು ಯವ್ವಾ. ನಿಂದs ದುಡತ ನಿಂಗ ರಗಡ ಇರತೈತಿ. ಅದರಾಗ ಮತ್ತ ನಂದೊಂದ ಲಿಗಾಡ ಯಾಕs ತಾಯಿ ನಿಂಗ. ನಿನಗರ ʻದಣದೀ, ಗಳಿಗಿ ಕೂಡʼ ಅನ್ನಾವ್ರ ಯಾರ ಅದಾರ ಹೇಳು. ನಮ್ಮ ಗಸೂರ ಜನ್ಮಾನ ಇಷ್ಟ ತಗಿ” ಅಂದು, “ಒಂದ ಗುಳಿಗಿ ಕೊಡ ಯವ್ವಾ. ಅಷ್ಟ ನೀರ ಕೊಡು. ಗುಳಿಗಿ ನುಂಗಿದ್ನೆಂದ್ರ ಕಮ್ಮಾದೀತ ಬಿಡ ಯವ್ವಾ” ಅಂದ್ಲು. “ಯಾಕ ತಂಗೆವ್ವಾ ಹಿಂಗ್ಯಾಕ. ಒಂಚೂರ ಆರಾಮ ಮಾಡಬೇಕಿಲ್ಲೋ? ಮತ್ತ ಬುಟ್ಟಿ ಯಾಕ ಹೊತಗೊಂಡ ಬಂದಿ? ಇನ್ನ ತಿರಗಾಡಿ ಮಾರಿಕೊಂಡ ಹೋಗೂದ್ರಾಗ ಹಂಣಾಗಿ ಹೋಗ್ತೀವಾ” ಅಂದೆ. “ಯವ್ವಾ, ಈ ಹೆಣ್ಣ ಜನಮಾ ಅದನೆಲ್ಲಾ ಬೇಡಿ ಬಂದತಿ ಅಂತೀ? ನಾ ಆರಾಮ ಮಾಡ್ತೀನ ಅಂದ್ರ ಹೆಂಗ ನಡದೀತ ಹೇಳು. ಇಷ್ಟೆಲ್ಲಾ ಕಾಯಿಪಲ್ಯ, ತೊಪ್ಪಲಪಲ್ಯಾ ಬಾಡೂಕಿಂತಾ ಮೊದಲ ಮಾರಿಕೊಂಡ ಹೋಗಿ ಮತ್ತs ರೊಟ್ಟಿ ಬಡೀಬೇಕ ನೋಡ. ನಾವ ಬೇಡಿ ಬಂದಿರೂದ ಅಷ್ಟs ಯವ್ವಾ. ಅಲ್ಲಿ ಹೊರಗ ಕಟ್ಹಾಕಹತ್ತಿದ್ರೂ, ʻನಿಂದ್ರ, ಗಂಡಾ – ಮಕ್ಕಳಿಗೆ ಅಷ್ಟ ನಾಕ ರೊಟ್ಟಿ ಬಡದಿಟ್ಟ ಬರತೀನʼ ಅನೂ ಜಲಮವಾ ನಮದು. ನಂದು ಅನೂದ ಏನ ಐತಿ ಹೇಳು. ಏನ ಮಾಡತಿ ತಗಿ” ಅಂದ್ಲು. ಗುಳಿಗಿ ನುಂಗಿ, ಚಹಾ ಕುಡದು ಬುಟ್ಟಿ ಹೊತಗೊಂಡ ಮತ್ತ ʻಪಲ್ಲ್ಯಾ ಬೇ ಯವ್ವಾ’ ಅಂತ ಒದರಿಕೋತ ಹೋದ್ಲು ತಂಗೆವ್ವಾ.
![](https://avadhimag.in/wp-content/uploads/2020/03/she-art.jpg?x24322)
ತಂಗೆವ್ವ ಹೋದ್ಲು ಖರೆ. ಆಕಿ ಮಾತು ಅಲ್ಲೇ ಉಳಿದು ನನ್ನ ಸುತ್ತಮುತ್ತ ಕುಣಿಲಿಕ್ಹತ್ತು. ತಿವದ ತಿವದ ನನಗ ʻಏನಂತಿ ನೀನು? ನಿನ್ನ ಅಂಬೋಣ ಏನು?ʼ ಅಂತ ರಾಗಾ ಸುರು ಮಾಡಿದ್ವು. ಏನ ಹೇಳಲಿ ನಾ? ಆಕಿ ಮಾತು ಶಂಭರ್ ಟಕ್ಕೆ ಖರೇನs ಅದ. ಬರೇ ಖರೇ ಏನ ಬಂತು, ಆ ಒಂದ ಮಾತಿನ್ಯಾಗ ಆಕಿ ಹೆಣ್ಣ ಅಂದ್ರ ಏನು ಅಂಬೂದರ ಸಂಪೂರ್ಣ ದರ್ಶನ ಮಾಡಿಸಿ ಬಿಟ್ಲು. ಆಕಿ ಲೋಕ ಅಂದ್ರ ಏನು ಅಂಬೂದನ್ನ ಯಥಾವತ್ ತೋರಿಸಿದ್ಲು. ಈಗ ನಾವು ಕಲಿತು, ಕೆಲಸಾ ಮಾಡಿ ಗಂಡಸ ಅಷ್ಟೇ ಯಾಕೆ ನಾವೂ ಸ್ವತಂತ್ರ ಇದ್ದೀವಿ, ನಮ್ಮದ ಅನೂ ಜೀವನಾ ಬೇರೆನ ಅನಾವ್ರ ಸುದ್ಧಾ ಒಮ್ಮೆ ಬಿಟ್ಟು ಮತ್ತೊಮ್ಮೆ ವಿಚಾರ ಮಾಡಿ ನೋಡಬೇಕು ಅನೂ ಅಂಥಾ ಮಾತದು. ಹೌದು ಆ ಮ್ಯಾಲಿನಾಂವಾ ಹೆಣ್ಣಿನ ಘಡಣನ ಹಂಗ ಮಾಡ್ಯಾನ ಅಂಬೂದರ ಕಲ್ಪನಾ ಅಗದಿ ಸ್ಟಷ್ಟ ಬರತದ ಆ ಒಂದೇ ಮಾತಿನ್ಯಾಗ. ಆಕಿ ತಾಯಿ ಇರಲಿ, ಬಿಡಲಿ. ಆದರ ಮಾತೃತ್ವದ ಪರಿಪೂರ್ಣತಾ ಪ್ರತಿ ಹೆಣ್ಣಿನ್ಯಾಗೂ ಅದ. ಆ ಆರ್ದೃ, ಸ್ನಿಗ್ಧತಾದ ಝರಿ, ಕರಳ ತುಂಬಿ ಭೋರ್ಗರೆದು ಹಾರೋ ಮಾರ್ದವಪೂರ್ಣ ಭಾವನೆಗಳ ಜಲಪಾತನs ಹೆಣ್ಣು. ಅದs ಆ ಅಬಲೆ ಅನಿಸಿಕೊಳ್ಳೋ ಹೆಣ್ಣನ್ನ ಕಲ್ಪನಾಕ್ಕೂ ನಿಲುಕದಷ್ಟು ಗಟ್ಟಿ ಮಾಡಿರೋದು. ಅಂತನs ಯಾರ ಹಿಡತಕ್ಕೂ ಸಿಗದ ಆ ಕಾಲನ್ನs ಹಿಡದ ನಿಲಸು ಧಾಡಸಪಣ ಅದ ಆಕಿಯೊಳಗ. ಆ ಜವರಾಯ ಮುಂದ ಬಂದ ನಿಂತು ನಡಿ ಅಂದ್ರ, ಆಕಿ ಅಂವಗ “ನಿಂದೇನೋ ಈ ವತಾವತಿ? ನಿಂದ್ರು. ನನ್ನ ಗಂಡಾ – ಮಕ್ಳಿಗೆ ನಾಕ ರೊಟ್ಟಿ ಬಡದ ಇಟ್ಟ ಬರ್ತೀನಿ” ಅಂತ ಅನೂದಕೂ ಏನ ಹಿಂದ ಮುಂದ ನೋಡಾಕ್ಯಲ್ಲ. ಮತ್ತ ಸಾಧಿಸಿದ್ರ ಹಂಗೇ ಮಾಡಿನೂ ಬಿಡಾಕಿ. ಈ ದಿಟ್ಟ ಗಡಸತನಾ ಯಾವ ಜೀವದಾಗರೆ ಸಂದಿ, ಸಂದಿ ಕೆದಕಿ ಹುಡಕಿದ್ರರೇ ಸಿಕ್ಕೀತೇನು!? ಸಾಧ್ಯನೇ ಇಲ್ಲ.
ಈ ಗಟ್ಟಿತನಾ ಇರೂದು ಆಕೆಯ ನಿರಪೇಕ್ಷ, ಅನಿರ್ವಚನೀಯ ಮಮತಾ ಒಳಗ. ಈ ಇಂಥಾದೇ ಅಂತ ಹೇಳಲಿಕ್ಕಾಗದ ಆಕಿ ತನ್ನತನಾ ಆಕಿನ್ನ ಗಟ್ಟಿ ಮಾಡಿದಷ್ಟೇ ಮೆತ್ತಗೆ, ನಾಜೂಕನೂ ಮಾಡೇದ. ಆಕಿ ಕರುಳು ಚುರಕ್ ಅಂತದ ಇನ್ನೊಬ್ರು, ಅದರಾಗೂ ತನ್ನ ಕರಳಿನ ಚೂರ ನಳ್ಳಿದ್ರ. ತನ್ನ ಜೀವ ಹೋಗಲಿಕ್ಹತ್ತಿದ್ರೂ ಅದರ ದರಕಾರ ಇಲ್ಲದs ಚಡಪಡಿಸಿಕೋತ ಧಾವಸ್ತದ ಆಕೀ ಜೀವ. ಅದೇನ ಯಾರ ಹೇಳಿ ಮಾಡಸೂದ ಅಲ್ಲ, ಅದು ಆಕಿ ಮೂಲಗುಣಾ. ಅದರ ಹೆಸರೇ ಹೆಣ್ಣು. ಅದ್ಕೇ ಹಿಂದಿ ಕವಿ ಓಂ ವ್ಯಾಸ್ ಹೇಳ್ತಾರ – “ಮಾ ಪೂಜಾ ಕಿ ಥಾಲಿ ಹೈ” ಅಂತ. ಅದೊಂದು ಪವಿತ್ರತಾ ತುಂಬಿದ್ದು ಆಕಿ ಆ ಧಡಪಡತನಾ. ಕಿಮ್ಮತ್ತ ಕಟ್ಟಲಿಕ್ಕೆ ಶಕ್ಯನs ಇಲ್ಲದಷ್ಟ ಅಮೂಲ್ಯ ಅದು. ಬಹುಶಃ ಅದಕನ ಏನೋ, ಆಕಿ ಆ ದುಡತಕ್ಕ ಯಾವ ಪಗಾರ ಇಲ್ಲಾ, ಸೂಟಿ ಇಲ್ಲಾ, ಹೊತ್ತು – ವ್ಯಾಳ್ಯಾದ ಬಂಧ ಇಲ್ಲಾ. ಆಕಿ ಕೆಲಸದ ಆ ಧರತಿದು ಇನ್ನೊಬ್ಬರಿಗೆ ಕಲ್ಪನಾ ಸುದ್ಧಾ ಬರಧಂಗ ನಿಭಾಯಿಸು ಆಕಿ ರೀತೀನ ಆಕಿ ಏನ ಅನೂದನ ಹೇಳ್ತದ. ಅದನ ತಿಳಕೋಳು ತಿಳುವಳಿಕೆ ಬೇಕು. ಅದ ಬಿಟ್ಟು, “ನಿಮಗೇನು, ಊಟಾ ಮಾಡಿ ಸಂಜೀತನಕಾ ಆರಾಮ ನಿದ್ದಿ ಮಾಡ್ತೀರಿ. ಬ್ಯಾರೆ ಏನದ” ಅಂತ ಅನೂ ಮಂದೀನ ಭಾಳ. ಅವರ ತಿಳವಳಿಕಿ ಚಕ್ಷು ತಗೀಬೇಕಾದ್ರ ಪುಣ್ಯಾ ಜಾಡ ಬೇಕು. ಅವರಿಗೆ ಹೆಣ್ಣಂದ್ರ ಏನು ಅಂತ ಗೊತ್ತಿರೋದs ಅಷ್ಟೇನೋ ಏನೋ!
ಇದ ಒಂದ ಥರಾ ಆದ್ರ ಕೆಲಸಕ್ಕ ಹೋಗೂ ಹುಡಗ್ಯಾರದರs ಏನು – ತಡಾ ಆದ್ರೂ ಧಡಪಡಿಸಿ ಬಂದು ಮತ್ತ ಅಡಿಗಿ ಮನಿಗೆ ಹೋಗs ಬೇಕಲಾ! ಒಂದಿನಾ ಈ ಸ್ವಿಗಿ, ಝೋಮ್ಯಾಟೋ ಆದೀತು, ಎರಡ ದಿನಾ ಆದೀತು. ದಿನಕ್ಕ ಆಗೂದಲ್ಲ ಅದು.
ದುಡದ ತರೂ ಗಂಡಸರಿಗೆ ಒಂದು ನಿಗದಿತ ವಯಕ್ಕ ರಿಟೈರ್‌ಮೆಂಟ್ ಅಂತ ಇರತದ. ಆದ್ರ ಹೆಣ್ಣು ಎಲ್ಲಾ ಬಿಟಗೊಟ್ಟ ಕಣ್ಮುಚ್ಚಿ ಮ್ಯಾಲ ಹೋದಮ್ಯಾಲನ ನಿವೃತ್ತಿ, ಅದೂ ಈ ಜನ್ಮದ ಪೂರ್ತೆ. ಈಗ ಹೆಣ್ಮಕ್ಕಳೂ ಹೊರಗ ದುಡದ್ರೂ ಭಾಳೇನ ಫರಕ ಬೀಳೂದಿಲ್ಲ. ಬ್ಯಾಡಾ, ಒಂಚೂರ ಕೆಲಸದ ಬೋಝಾ ಕಡಿಮಿ ಆದೀತು ಅಷ್ಟೇ. ರಿಟೈರ್ ಆದ್ರನೂ ಮನಿ ಜವಾಬ್ದಾರಿ ಹೆಂಗದನೋ ಹಂಗs ಇರ್ತದ. ಬಹುಶಃ ಆ ಮ್ಯಾಲಿನಾಂವಗೂ ಗೊತ್ತದ, ಪಕ್ಕಾ ಖಾತ್ರಿ ಅದ – ಹೆಣ್ಣಿಗೂ ನಿವೃತ್ತಿ ಘೋಷಣಾ ಮಾಡಿದ್ರ, ಪೂರಾ ಪ್ರಕೃತಿಗೂ ನಿವೃತ್ತಿ ಘೋಷಣಾ ಮಾಡಬೇಕಾಗ್ತದ ಅಂತ. ಬರೀ ಅವಲಕ್ಕಿ – ಉಪ್ಪಿಟ್ಟಿನ ಮಾತs ಇರತಾವ ಹೆಂಗಸರದು ಅನ್ನಾವ್ರಿಗೆ ಆ ಅವಲಕ್ಕಿ – ಉಪ್ಪಿಟ್ಟು ಬಿಟ್ಟು ಒಂತಾಸ ಇರು ಅನಬೇಕು. ಒಂತಾಸ ಊಟ ತಡಾ ಆದ್ರ ನಡಿಯೂದಿಲ್ಲ. ಒಳಗ – ಹೊರಗ ಓಡಾಡ್ತಾರ; ಹಂಗಿರತದ ಪರಿಸ್ಥಿತಿ.
ಹಂಗ ನೋಡಿದ್ರ ಹೊಟ್ಟಿ ಕಟ್ಟಲಿಕ್ಕೆ ಗಟ್ಟಿ ಹೆಣ್ಣೇ. ಹೊಟ್ಟಿ ತುಂಬಿದಾವ್ರಿಗೆ ಹಸದಾವ್ರ ಹಸಿವಿನ ಕಲ್ಪನಾ ಇರೂದಿಲ್ಲ. ಅದಕs ಆಕಿ ತಾ ಮೊದಲ ಎಂದೂ ಉಣ್ಣೂದಿಲ್ಲ. ಎಲ್ಲಾರಿಗೂ ಹೊಟ್ಟಿ ತುಂಬ ಊಟಾ ಮಾಡಿಸಿ ಆ ಸಂತೃಪ್ತಿಲೆ ಹೊಟ್ಟಿ ತುಂಬಿಧಾಂಗ ಆದ ಮ್ಯಾಲನ ತಾ ತುತ್ತ ಎತ್ತೂದು, ಅದೂ ಒಂಥರಾ ಭಿಡೇದ್ಲೇನ ಏನೋ ಅನಸ್ತದ ಖರೇನ. ಈ ಊಟಾ – ತಿನಸದ್ದು ಒಂದಾತು. ಹೀಂಗನ ಪ್ರತಿಯೊಂದ ಮಾಮಲಾದಾಗ ಆಕಿದು ಸಂಪೂರ್ಣ ಕೈ ಇರಲಿಕ್ಕೇ ಬೇಕು. ಬರೀ ಅಡಿಗಿ ಮಾಡಿಡೂದಿಲ್ಲಾ ಆಕಿ, ಅದರ ಜೋಡಿ ಮನ್ಯಾಗಿನಾವರಿಗೆಲ್ಲಾ ಒಂದ ಪದ್ದತಿ, ಶಿಸ್ತು, ವಳಣದಾರ ಜೀವನ ಕಲಿಸಿ, ಅವರನ್ನೆಲ್ಲಾ ರೂಪಿಸಿ ಒಂದ ಛಂದ ಮನೀನೂ ಮಾಡ್ತಾಳ. ಒಂಚೂರೂ ಉಸಲ ವಡೀದ, ಮನಿ ಒಳಗಿನ ಯಾವ ಐಬು, ಕೊರತೆ ಹೊರಗ ಬಿಡಧಂಗ ಎಲ್ಲಾ ಗುಂಡ ಮಾಡಿ ಸಂಭಾಳಸೂ ಸಹನತಾ ಆಕಿ. ಖರೆ ತಪ್ಪಿ ಸುದ್ದಾ ನಾ ಇಷ್ಟ ಮಾಡ್ದೆ ಅಷ್ಟ ಮಾಡ್ದೆ ಅನೂದಿಲ್ಲಾ. ಆಕಿ ರಕ್ತದಾಗs ಬಂದ ಬಿಟ್ಟದ ಅದು. ಅಗದಿ ಸಹಜ ಅದು ಅನಸ್ತದ ಹೊರತು ಅದರಾಗೇನ ಹೆಚ್ಚಗಾರಿಕಿ ಕಾಣಸೂದಿಲ್ಲ ಆಕಿಗೆ. ಇದನ್ನೆಲ್ಲಾ ಏನಂತ ಹೇಳೂದು, ಹೆಂಗ ಹೇಳೂದು ಗೊತ್ತಿಲ್ಲ. ಹೇಳಿದ್ರನೂ ತಿಳ್ಕೊಳ್ಳು ತಾಕತ್ತು, ಸೂಕ್ಷ್ಮತೆ ಇದ್ದೀತು ಅಂತ ಅನಬಹುದೇನೋ ಗೊತ್ತಿಲ್ಲ. ಇದು ಸಾಮಾನ್ಯವಾಗಿ ನಡಿಯೂ ವಿಚಾರ. ಅಲ್ಲೆ ಇಲ್ಲೆ ಅಪವಾದ ಇರತಾವ ಅಂಬೂದನ್ನ ಇಲ್ಲಾ ಅನಲಿಕ್ಕ ಬರಾಂಗಿಲ್ಲ.
ಹಿಂಗs ತಂಗೆವ್ವನ ವಿಚಾರದಾಗ ಮುಳಗಿ ಮೈಮರತ ಕೂತಾಕಿಗೆ ನೂರಾ ಎಂಟು ಹಳವಂಡ. ಖರೇನ ಹೆಣ್ಣಿಗೆ ತನ್ನದ ಅನೂದ ಏನದ? ಎಷ್ಟ ಸುಧಾರಣಾ ಆಗೇದ, ಬದಲಾವಣೆ ಆಗೇದ ಅಂದ್ರನೂ ಎಲ್ಲಿದ್ದೀವ ಅಲ್ಲೇ ಇದ್ದೀವೆನೋ ಅನಸ್ತದ, ಬದಲಾದ ರೂಪ, ಆಕಾರದ ಜೋಡಿ. ಎಷ್ಟ ಸರಳ ಹೇಳಿದ್ಲಲಾ ತಂಗೆವ್ವ! ಗಂಡ ಮಾಡಿದ ತಪ್ಪಿನ ಜವಾಬ್ದಾರಿ ಆಕೀದೇ ಅಂದ್ರ ಹೆಂಡತಿ, ಹೆಣ್ಣಿಂದೇ. ಅವರು ಮಾಡಿದ ಪ್ರತಿ ಕರ್ಮದ ಫಲಾ ಅನಭೋಗಸೂದು ಆಕಿ ಕರ್ಮ ಅಂತ!
ಯಾಕೋ ಮಹಾಭಾರತದ ಕುಂತಿ, ಮಾದ್ರಿ, ಗಾಂಧಾರಿ, ದ್ರೌಪದಿ ಸಾಲ ಸಾಲ ಹಿಡದು ಮೆರವಣಿಗಿ ಬಂಧಂಗ ಆತು. ದೊಡ್ಡ ದೊಡ್ಡ ರಾಜವಂಶಸ್ಥರು, ರಾಣಿ – ಮಹಾರಾಣೀರು. ಖರೇ ಏನಾತ ಅವರ ಜನ್ಮ! ಅವರವರ ಗಂಡಂದ್ರು ಮಾಡಿದ ಅನಾಹುತದ ಫಲಾ ಅನಭೋಗಿಸಿದಾವ್ರ ಅವರು! ಒಂದs ಉದಾಹರಣಾ ಅಂದ್ರ ದ್ರೌಪದಿ ರಜಸ್ವಲೆ, ಏಕವಸ್ತ್ರಧಾರಿಣಿ ಆಗಿದ್ದಾಕಿನ ದುಃಶಾಸನ ರಾಜಸಭಾಕ್ಕ ಎಳಕೊಂಡ ಬಂದಾ – ಆಕಿ ಗಂಡಂದ್ರು ಪಗಡಿ ಆಡಿ ಸೋತ್ರಲಾ ಅದಕ್ಕ. ಅಷ್ಟs ಅಲ್ಲಾ ಧಡಧಡೀತ ಒಬ್ರಲ್ಲಾ, ಐದು ಮಂದಿ ಗಂಡಂದ್ರು ಎದುರಿಗೇನs ಪಾಂಡವರ ಪಟ್ಟದ ಮಹಾರಾಣಿ, ಪಾಂಚಾಲ ರಾಜಕುಮಾರಿ ತಮ್ಮ ದಾಸಿ ಅಂದ್ರು, ಸಭಾದೊಳಗ ದುಃಶಾಸನ ಆಕಿ ಸೀರಿ ಸೆಳದಾ. ಏನ ಮಾಡಿದ್ರು ಗಂಡಂದ್ರು? ನಾವು ಧರ್ಮಿಷ್ಠರು ಅಂತ ಮಾರಿ ಕೆಳಗ ಹಾಕೊಂಡ ಕೂತ್ರು. ಹೆಂಡತಿ ಮಾನ ರಕ್ಷಣಾ ಮಾಡೂದು ಅಧರ್ಮ ಅಲ್ಲಾ ಅಂತ ಆ ಧರ್ಮರಾಯಗ ಗೊತ್ತಾಗಲಿಲ್ಲ ಏನು ಅಂತೀನಿ. ಕಡೀಕ ತನ್ನ ಮಾನದ ಪರಿವಿ ಬಿಟ್ಟು ಎರಡೂ ಕೈ ಮ್ಯಾಲ ಮಾಡಿ ಕೃಷ್ಣನ್ನ ಕರದಾಗ ಬಂದು ಆಕಿ ಮಾನಾ ಉಳಿಸಿದಾ ಕೃಷ್ಣ. ದುರ್ಯೋಧನನ ಹೆಂಡತಿ ಭಾನುಮತಿ ಸ್ಥಿತಿನೂ ಏನ ಬ್ಯಾರೆ ಇರಲಿಲ್ಲ ಅಂಥಾ ಗಂಡನ ಕೈಯಾಗ ಸಿಕ್ಕು.
ಹೆಂತೆಂತಾವ್ರನ್ನೂ ಬಿಟ್ಟಿಲ್ಲ ಈ ಹೀನಸ್ಥಿತಿ. ರಾಮಾಯಣಕ್ಕ ಹೋದ್ರ ರಾಮ ತನ್ನ ದೊಡ್ಡಸ್ತನ ಉಳಿಸಿಕೊಳ್ಳು ಸಲುವಾಗಿ ಹೆಂಡತಿ ಚಾರಿತ್ರ್ಯದ ವಧಾ ಮಾಡ್ಲಿಕ್ಕೆ ಹಿಂದಮುಂದ ನೋಡ್ಲಿಲ್ಲಾ. ಆಕಿ ಮರ್ಯಾದಿ ತಗದು ತುಂಬು ಬಸಿರಿನ್ನ ಅಡವಿಗೆ ಅಟ್ಟಿ ತಾ ಮರ್ಯಾದಾ ಪುರುಷೋತ್ತಮ ಆದ. ಪೂತನಿ ಗಂಡಾ – ಮಕ್ಕಳ ಸಲುವಾಗಿ ರಾಕ್ಷಸಿಕಿಂತ ಅತೂತ ಆದ್ಲು! ಇನ್ನ ಇದಕ್ಕಿಂತಾ ಹೆಚ್ಚ ಏನ ಹೇಳೂದು ಅನಿಸ್ತು ಒಂದ ಗಳಿಗಿ. ಆ ಎಲ್ಲಾರ ವಂಶಸ್ಥರು ಇಂದೂ ನೋಡ್ಲಿಕ್ಕ ಸಿಗ್ತಾರ ಅನೂದ ಅಪರೂಪ ಏನಲ್ಲ. “ಅರ್ಧಾ ಸಂಸಾರ ಆದ ಮ್ಯಾಲ ಸುದ್ದಾ ಹೆಂಡತಿ ಚಾರಿತ್ರ್ಯದ ಬಗ್ಗೆ ಅಪನಂಬಿಕೆ ತೋರಿಸಿ ರಾಮನ ಕಿತ್ತೆ ತೀಡೂ ಗಂಡಂದ್ರೇನ ಕಡಿಮಿ ಇಲ್ಲ ಯವ್ವಾ. ಮತ್ತ ಎಲ್ಲಾ ನುಂಗಿ ಹಂಗs ಹೊಂಡತೇತವಾ ಜನಮ. ಏನ ಮಾಡಹಂಗ ಅದೀವ ಹೇಳ ಯವ್ವಾ. ಬಿಟ್ಟ ಬಾಳೇವಕ್ಕs ಎರವ ಆಗಬೇಕ ಅಷ್ಟs ನೋಡ. ಯಾರಿಗೇನ ಅನಾಂಗಿಲ್ಲಾ ಆಡಾಂಗಿಲ್ಲ. ಎಲ್ಲಾ ನಮ್ಮಾವರs, ಎಲ್ಲಾ ನಮ್ಮದಲಾ ಯವ್ವಾ. ನುಂಗೂದ ನೋಡ, ಹೊರಗ ಬಿಡದ” ಅಂತ ತಂಗೆವ್ವ ಅನೂದ ಅಗದೀ ಬರೋಬ್ಬರಿ ಮತ್ತ ವಾಸ್ತವಿಕ ಮಾತು.
ತಂಗೆವ್ವ ಹೇಳಿದ್ದು ಅಪ್ಪಟ ಸತ್ಯ ಅನಸ್ತದ. ಆಯುಷ್ಯ ಪೂರಾ ಇನ್ನೊಬ್ರ ಸಲುವಾಗಿನs ಜೀವಾ ತೇಯೂದೇ ಹೆಣ್ಣ ಜನ್ಮನೋ ಏನೋ! ಹೆಣ್ಣೇ ಹೆಣ್ಣನ್ನ ಹಿಂಡಿ ಹಿಪ್ಪಿ ಮಾಡಿದ್ರನೂ ಬಾಯ್ಮುಚ್ಕೊಂಡಿರ ಬೇಕಾಗ್ತತಿ ಯವ್ವಾ ಮನಿ ಶಾಂತ ಇರೂ ಸಲುವಾಗಿ ಅಂತ ತಂಗೆವ್ವ ಹೇಳಿದ್ದು ಅಗದಿ ಖರೆ. ತನ್ನ ಸಲುವಾಗಿ ಅಲ್ಲದಿದ್ರೂ ಗಂಡಾ – ಮಕ್ಕಳಿಗೆ ತ್ರಾಸ ಆಗಬಾರದು ಅನೂದ ಒಂದ ಇರ್ತದಲಾ.
ಯಾಕ ಹಿಂಗ ಇದ್ದೀತು ಇದು? ಸಿಗಲೇ ಇಲ್ಲ ಆ ಪ್ರಶ್ನೆಗೆ ಉತ್ತರ. “ಈಗ ಕಲತ ಹುಡಿಗ್ಯಾರು ತಕರಾರು ಮಾಡ್ತಾರ. ಸಿಡದ ನಿಂದ್ರಲಿಕ್ಕ ಭಾಳ ಹೊತ್ತ ಬ್ಯಾಡ ಯವ್ವಾ. ಆದರ ಅದರ ಕಿಮ್ಮತ್ತು ಪೂರಾ ಬಾಳ್ವೆನ ನೋಡ ಬೇ. ಯಾ ಹೆಣ್ಣು ಕರಳ ಹರಕೊಂಡ ಬರತಾಳು ಹೇಳ. ಹೆಣ್ಣಿನ ಜನ್ಮಕ್ಕ ಹೇಳಿಸಿದ್ದಲ್ಲ ತಗಿ ಯವ್ವಾ ಅದು. ಒಂದ ಮನಿ ಮುಂದಕ ಬರಬೇಕಾದ್ರ ಒಂದ ಹೆಣ್ಣಿನ ಸಹನಶೀಲತಾ, ಪೋಕ್ತತನಾ, ಖಂಬೀರತನಾ ಅದರ ಹಿಂದ ಬೇಕs ಬೇಕ ಯವ್ವಾ. ನಂದು ಅನೂದ ಮರತ ನಿಂತಾಗ ಆದೀತ ನೋಡ ಅದು. ಈಗೀನ ಮಂದಿಗಿ ಇದು ಆಶಾಡೋ ಮಾತ ಅನಸಿ ನಕ್ಕಾರು. ಖರೆ ಇದು ಸೂರ್ಯಾನ ಬೆಳಕಿನಷ್ಟs ಸತ್ಯುಳ್ಳ ಮಾತ ಯವ್ವಾ”. ಇದನ್ನ ನೋಡೇ ಹೇಳಿರಬೇಕು – ಪ್ರತಿ ಯಶಸ್ವಿ ಗಂಡಿನ ಹಿಂದೆ ಒಬ್ಬ ಹೆಣ್ಣು ಇರ್ತಾಳೆ ಅಂತ ಅನಸಿದ್ರ ಅಗಾಧ ಅಲ್ಲ. ತಂಗೆವ್ವ ಅದೆಷ್ಟರೇ ಈ ಬದುಕನ್ನ ಕೆದಕಿ, ಕೆದರಿ ನೋಡ್ಯಾಳ ಅನಿಸ್ತು. ಏನ ಆಗಲಿ ಇಷ್ಟ ಮಾತ್ರ ಖರೆ – ತಂಗೆವ್ವನ ಮಾತು ಕಿವಿ ತುಂಬ, ತಲಿ ತುಂಬ!
ಗಡಿಯಾರ ಹನ್ನೆರಡ ಗಂಟೆ ಬಡೀತು. ಗಡಬಡಿಸಿ ಎದ್ದೆ. ಇನ್ನೂ ಅಡಿಗಿ ಸುರೂನs ಮಾಡಿದ್ದಿಲ್ಲ! ಈsಗ ಊಟಕ್ಕ ತಡಾ ಆತು ಅಂತ ಗಡಿಬಿಡಿ ಸುರು ಆಗ್ತದ ಅನಕೋತ ಎದ್ದೆ.
ʻನಂದ ಅನೂದ ಏನದ?ʼ ಮನಸು ಮತ್ತ ಮತ್ತ ಅದೇ ಮಾತು – ಅದೇ ತಂಗೆವ್ವನ ಮಾತನ್ನೇ ಉಸಿರಿತು.
ಬದುಕು ಅಂದ್ರ ಇಷ್ಟsನ ದೇವರೇ!
0 Comments