ನಂದಿನಿ ಹೆದ್ದುರ್ಗ
—-
‘ಮಳೆ ಬಂತಾ’
ಮಾತಿನ ಆರಂಭಕ್ಕೆ ಎಲ್ಲರೂ
ಬಳಸುವ ಮಾಮೂಲಿ
ಪ್ರಶ್ನೆಯನ್ನೇ ಕೇಳುವುದು ನಾವು
ನಾನೊಂದು ಕೊಂಕು
ನುಡಿಯಲಿ ಎನ್ನುವ ಬೆಟ್ಟದಷ್ಟು
ಆಸೆಯಲ್ಲಿರುವ ಅವನು
ನೀನಿದ್ದ ಕಡೆ ಮಳೆ ಬೆಳೆ
ಕ್ಷೇಮ ಸೌಖ್ಯಗಳು
ಇರಲೇಬೇಕಲ್ಲವೆ ಎನ್ನಲಿ
ಎನ್ನುವ ನಿರೀಕ್ಷೆಯಲ್ಲಿ ನಾನು
ಮಾತು ಮುಂದುವರೆಸುತ್ತೇವೆ
ಮಗಳು…ಮಗ…ಕ್ಷೇಮ..ಸೌಖ್ಯ
ಈ ನಡುವೆ ಹೊಸದಾಗಿ
ಕಲಿತಿರುವ ಕಿವಿ ತುರಿಸಿಕೊಳ್ಳುವ
ಚಾಳಿಯನ್ನು ಮತ್ತೆಮತ್ತೆ ಮಾಡಿ
ಕಿರಿಕಿರಿ ಹುಟ್ಟಿಸುತ್ತಾನೆ ಅವನು
ನಿಷ್ಠೆಯ ಕುರಿತು
ಭಾಷಣ ಮಾಡುತ್ತಲೇ ವಂಚಿಸಿ
ಸದ್ಯ ಅಂಟಿಕೊಂಡಿರುವ
ಅವಳ ಕುರಿತು ತುಟಿತುದಿಯಲ್ಲಿ
ಕುಂತ ಪ್ರಶ್ನೆಯೊಂದನ್ನು
ಹಾಗೇ ನುಂಗುತ್ತೇನೆ ನಾನು
ಅವನ ರೆಪ್ಪೆಗಳು
ಬಾಗಿರುವುದು ನನಗಿಷ್ಟ ಅಂತಲೂ
ನನ್ನ ಬೈತಲೆಗೆ ಎದುರಾದ
ಒಂದೆಳೆ ಹೆರಳನ್ನು ಸರಿಸುವುದಕ್ಕೆ
ಅವನಿಗಾಸೆ ಅಂತಲೂ
ಹೇಳಿಕೊಳ್ಳದೆ
ನಮ್ಮ ವಿದಾಯದ ನುಡಿಗಳು
ಮುಂದಿನ ನಡೆಗಾಗಿ ತಾಲೀಮು ನಡೆಸುತ್ತವೆ
ಇಷ್ಟವಾಯಿತು