ನಂದಿನಿ ಹೆದ್ದುರ್ಗ
ಒಂದು ಹದವಿರದ ಮಳೆ
ಬಿದ್ದು
ಬಿಸಿಲು ಇಣುಕಿದ ವೇಳೆ
ದಿಕ್ಕುಗಳ ಫರಕ್ಕಿಲ್ಲದೆ
ಪದೇಪದೇ
ಮುಗಿಲು ನೋಡುತ್ತೇನೆ
‘ಕಾಮನಬಿಲ್ಲು ಕಟ್ಟಿತಾ..
ಕಾಮನಬಿಲ್ಲು ಕಂಡಿತಾ..?’
ಕಾಮನೂ…ಬಿಲ್ಲೂ
ಋಣವಿದ್ದವರ ಪಾಲಂತೆ
ಹರಿದು ಬರುತ್ತಿರುವ
ಹರಿತ ಬಾಣವೊಂದೇ
ನನ್ನ ಹಣೆ ಬರಹದಲ್ಲಿ

ನಾನು ಏನನ್ನೂ
ಮಾಡಬಹುದಿತ್ತು
ಎದೆ ಕೊಟ್ಟು ನೆತ್ತರು
ಚಿಮ್ಮಿಸಿಕೊಂಡು
ಹುತಾತ್ಮಳಾಗುವುದನ್ನು
ಕಾಯುತ್ತ ನಿಂತವರೆ
ತುಸುವೇ ಸರಿದು
ಹರಿದು ಬಂದ ಹರಿತ ಅಲಗು
ಚರುಮ್ಮನೆ
ಮಣ್ಣು ಬಗೆಯಲು ಬಿಟ್ಟೆ
ಸೆಲೆ ಸಿಕ್ಕಿದರೆ ಬೆಳೆ ಬೆಳೆಯುತ್ತೇನೆ
ಶಿಲೆ ಸಿಕ್ಕಿದರೆ ಎದ್ದ ಕಿಡಿಯಲ್ಲಿ
ಚಳಿ ಕಾಸಿಕೊಳ್ಳುತ್ತ ಮತ್ತೆ
ಮುಗಿಲು ನೋಡುತ್ತೇನೆ
0 ಪ್ರತಿಕ್ರಿಯೆಗಳು