ನಂದಿನಿ ಹೆದ್ದುರ್ಗ
**
“ಅಮ್ಮಾ ನಿಂಗೆ ಸ್ಪಾ ಎಕ್ಸಪೀರಿಯನ್ಸ್ ಗೊತ್ತಿಲ್ಲ ಅಲ್ವಾ. ಅಪಾಯಿಂಟ್ಮೆಂಟ್ ತಗೊಳ್ಲಾ” ಅಂದಳು ಮೊನ್ನೆ ಮಗಳು. ಅದೇನೋ ಗೊತ್ತಿಲ್ಲ. ಪಾರ್ಲರಿಗೆ ಹೋಗಿ ಹಣ ಸುರಿಯುವುದು ನನಗೆ ಇಲ್ಲಿತನಕ ಅಭ್ಯಾಸ ಆಗದೆ ಫೇಷಿಯಲ್ ಸ್ಪಾಗಳ ಅನುಭವದಿಂದ ವಂಚಿತಳಾಗೇ ಉಳಿದಿದ್ದೇನೆ. ಹಾಗಂತ ಫೇಷಿಯಲ್, ಸ್ಪಾ ಮಾಡಿಸಿಕೊಳ್ಳದೆ ಇರುವುದು ಒಳ್ಳೆಯದು ಅಂತೇನಿಲ್ಲ. ನಿಯಮಿತವಾಗಿ ಮಾಡಿಸಿಕೊಳ್ಳುವ ಫೆಷಿಯಲ್, ಸ್ಪಾಗಳಿಂದ ಅಕಾಲಿಕ ವೃದ್ಧಾಪ್ಯವನ್ನು ಖಂಡಿತವಾಗಿ ದೂರ ಮಾಡಿಕೊಳ್ಳಬಹುದು. ಇನ್ನು ಸ್ಪಾ ಕೂಡ ಚಂದದ ಅನುಭವ. ಆರೋಗ್ಯಕ್ಕೂ ಒಳಿತೆ.
ಎಷ್ಟಾಗುತ್ತೆ ಮಗಳೆ ಅಂದೆ.
‘….’ ಇಷ್ಟು.
‘ಅಯ್ಯಪ್ಪ…ನೋ..ನಿನಗೇನು ದುಡ್ಡು ಹೆಚ್ಚಾಗಿದೆಯಾ’
‘ಇರಲಿ ಬಿಡಮ್ಮ.ಒಂದು ಸರ್ತಿ ತಾನೇ’
‘ನೊ.ನೆವರ್.. ಹಂಗೆಲ್ಲ ಹಣ ವಿಪರೀತ ಖರ್ಚು ಮಾಡೋದು ಒಳ್ಳೆದಲ್ಲ ಮಗಳೆ’
‘ಹೋಗಲಿ ಫೇಷಿಯಲ್ ಆಗ್ತದಾ ಅಮ್ಮಾ?’
‘ಅದಕ್ಕೆ ಎಷ್ಟು’
‘…’
ಮತ್ತೆ ಬಾಯಿ ಬಿಟ್ಕೊಂಡು ನೋಡ್ತಿದ್ದವಳ ಬಾಯಿ ಮುಚ್ಚಿಸಿ ಬುಕ್ ಮಾಡಿದ್ಳು. ಅರ್ಧ ತಾಸಿನ ಫೇಷಿಯಲ್ ಗೆ ಮಗಳು, ಸಾವಿರ ಕೊಟ್ಟಿದ್ದು ಮುಗಿದ ಮೇಲೆ ಕನ್ನಡಿಯಲ್ಲಿ ಮುಖ ನೋಡ್ಕೊಂಡೆ. ಮಹಾರಾಣಿ ಥರ ಫೀಲ್ ಆಯ್ತು. ಮಗಳೂ ಅದೇ ಫೇಷಿಯಲ್ ಮಾಡಿಸಿಕೊಂಡು ಮತ್ತೇನೊ ಮಾಸ್ಕ್ ಹಾಕಿಸಿಕೊಂಡಿದ್ದೀನಿ ಕೂತಿರು ಅಂತ ಮೆಸೇಜ್ ಹಾಕಿದ್ಳು. ನಮ್ಮ ಜೊತೆಗಿದ್ದ ಮಗಳ ಕಲೀಗ್ ಇನ್ನೂ ಎಂಥದ್ದೋ ಮಾಡಿಸಿಕೊಳ್ತಿದ್ದ. ಹೊರಗೆ ಬಂದ ಮಗಳನ್ನು ‘ಅವನೂ ಹೀಗೇ ಖರ್ಚು ಮಾಡ್ತಾನಾ.ಹುಡುಗ್ರೂನೂ?’ ಅಂತ ಕೇಳಿದೆ. ಜಿಪುಣ ಜೀನ್ಸಿನ ಮಾಲ್ಕಿನ್ ಅಲ್ವೆ ಎಷ್ಟೇ ಆದರೂ. ‘ಅಮ್ಮ. ಸುಮ್ಮನೇ ಬಾ ಒಂದ್ಸರ್ತಿ ನೀನು. ಅವನದ್ದು ನಮಗಿಂತ ಜಾಸ್ತಿ ಆಗುತ್ತೆ.’ ಅಂತಂದು ಆಚೆ ಕರಕೊಂಡು ಬಂದಳು. ಇನ್ನು ಮುಂದೆ ವರ್ಷಕ್ಕೆ ನಾಲ್ಕು ಸರ್ತಿಯಾದರೂ ಹೀಗೆ ಫೇಷಿಯಲ್ ಹೆಸರಿನಲ್ಲಿ ನೆಮ್ಮದಿಯ ಕ್ಷಣಗಳನ್ನು ನೋಡಬೇಕು ಅಂತ ನಿರ್ಧರಿಸಿಕೊಂಡೆ. ಇದೇ ಮಗಳು ನಾಲ್ಕು ವರ್ಷದವಳಿದ್ದಾಗ ಇದೇ ಪುಣೆ ಕೊಟ್ಟಿದ್ದ ಅನುಭವಗಳು ನೆನಪಾಗಿ ಕಣ್ಣು ತುಂಬಿ ಬಂದವು.
ಹದಿನೆಂಟು ವರ್ಷಗಳ ಹಿಂದೆ ನನ್ನ ಅಣ್ಣ ಪುಣೆಯಲ್ಲಿ ನಾಲ್ಕು ವರ್ಷ ಕೆಲಸ ಮಾಡಿದ್ದರು. ಪ್ರತಿ ರಜೆಯಲ್ಲಿ ಅವರ ಮನೆಗೆ ಮಕ್ಕಳ ಜೊತೆಗೆ ಬಂದು ಹದಿನೈದು ದಿನ ಇದ್ದು ಹೋಗ್ತಿದ್ದೆ. ಅಪ್ಪ ಅಮ್ಮನೂ ಒಂದೆರಡು ಸರ್ತಿ ಜೊತೆಗಿದ್ರು. ಆಗಲೇ ತ್ರ್ಯಂಬಕೇಶ್ವರ ಗ್ರಿಷ್ಮೇಶ್ವರ್ ಜ್ಯೋತಿರ್ಲಿಂಗ ದರ್ಶನ ಮಾಡಿದ್ದು. ಶಿರಡಿ ಪಂಢರಪುರ ಬಾಲಾಜಿ ಮಂದಿರ್ ಕೂಡ ಆಗಲೇ ನೋಡಿದ್ದು. ಖಂಡಾಲಾ ,ಲೋನಾವಾಲಾ ,ಶನಿವಾರವಾಡ್, ಸಿನೇಘಡ್ ಫೋರ್ಟ್ ,ದಗಡು ಶೇಟ್ ಮಂದಿರ್ ,ಬಾಂಬೆ ಪೂನಾ ಎಕ್ಸ್‌ಪ್ರೆಸ್ ವೇ ಡ್ರೈವ್ ಎಲ್ಲದಕ್ಕೂ ಅವರು ಕರಕೊಂಡು ಹೋಗಿದ್ದರು.
ಆಗಿನ ದೃಷ್ಟಿಕೋನ ಹೋದ ಸ್ಥಳವನ್ನು ಆದಷ್ಟೂ ಕಡಿಮೆ ಖರ್ಚಿನಲ್ಲಿ ನೋಡಿಬರುವುದಾಗಿತ್ತು. ಈಗ ಯೋಚಿಸಿದರೂ ಅವರು ಸಾಕಷ್ಟು ದುಬಾರಿಯಾಗಿಯೇ ನಮ್ಮನ್ನು ನೋಡಿಕೊಂಡು ಕಳಿಸಿದ್ದರು. ಸಾಮಾನ್ಯವಾಗಿ ಮಕ್ಕಳನ್ನು ಕರಕೊಂಡು ಊರಿಂದ ಬೆಂಗಳೂರಿಗೆ ಬಂದು ಮದ್ಯಾಹ್ನ ಮೂರರ ಬೆಂಗಳೂರು ಪುಣೆ ಬಸ್ಸು ಹತ್ತುತ್ತಿದ್ದು ಅಭ್ಯಾಸ. ಮೊದಲಿಂದಲೂ ಟ್ರೈನು ಪ್ರಯಾಣ ಅಲರ್ಜಿ. ನನ್ನ ಬಳಿ ಹಣ ಓಡಾಡದ ಕಾಲ ಅದಾಗಿದ್ದಿದ್ರಿಂದ ಅಣ್ಣ ಹೋಗುವ ಬರುವ ಟಿಕೆಟ್ ಮಾಡಿಸಿಕಳಿಸ್ತಿದ್ದರು.
ಹೀಗೆ ಒಮ್ಮೆ. ಇಪ್ಪತ್ತು ದಿನಕ್ಕೆ ಬಂದವಳು ಅವಸರದಲ್ಲಿ ಹದಿನೈದು ದಿನಕ್ಕೇ ಹೊರಡಬೇಕಾಯ್ತು. ಎಂದಿನಂತೆ ಪುಣೆಯಿಂದ ಬೆಂಗಳೂರು ಟಿಕೆಟ್ ಮಾಡಿಸಲು ನೋಡಿದ್ರೆ ನಮ್ಮ ಅನುಕೂಲಕರ ಸಮಯಕ್ಕೆ ಕೇವಲ ಹರಿಹರಕ್ಕೆ ಟಿಕೆಟ್ ಇತ್ತು. ಅಲ್ಲಿಂದ ಬೆಂಗಳೂರು ಬಸ್ ಹಿಡಿದು ಅಲ್ಲಿಂದ ಹಾಸನಕ್ಕೆ ಬಂದು ಆಮೇಲೆ ಊರಿಗೆ ಬರಬೇಕಿತ್ತು. ಮತ್ತೇನೂ ನಿರ್ವಾಹವಿಲ್ಲದೆ ಅಣ್ಣ ಹರಿಹರಕ್ಕೆ ಟಿಕೆಟ್ ಮಾಡಿದ್ರು. ನನಗೆ ಫುಲ್, ಮಗನಿಗೆ ಹಾಫ್ ,ಮಗಳು ಇನ್ನೂ ತೊಡೆಮೇಲೆ. ಅದು ಎರಡನೆ ಬಾರಿ ಪುಣೆಗೆ ಬಂದಿದ್ದು. ಹದಿನೈದು ದಿನ ಪುಣೆಯಲ್ಲಿ ಇದ್ದು ತುಳಸಿಬಾಗ್ ನಂತಹ ಮಾರ್ಕೆಟ್ ಏರಿಯಾಗಳಲ್ಲಿ ಮೊದಲ ಬಾರಿ ಓಡಾಡಿ ಒಂದಿಷ್ಟು ಹೆಚ್ಚೇ ಖರ್ಚು ಮಾಡಿದ್ದೆ. ಮಕ್ಕಳೂ ಜೊತೆಗಿರ್ತಿದ್ದಿದ್ರಿಂದ ಅವರ ಬೇಡಿಕೆಗಳೂ ಜೊತೆ ಸೇರಿ ನನ್ನ ಪರ್ಸನ್ನು ತೆಳ್ಳಗೆ ಮಾಡಿತ್ತು.
ಆಗಿನ ಕಾಲಕ್ಕೆ ನಾಲ್ಕೈದು ಸಾವಿರ ಕೈಯಲ್ಲಿ ಇರ್ತಿದ್ದಿದ್ದೇ ಹೆಚ್ಚು. ಮತ್ತೆ ಹೊರಡುವಾಗ ಕೈಯಲ್ಲಿ ಕನಿಷ್ಠ ಒಂದು ಸಾವಿರವಾದರೂ ಇಟ್ಕೊಂಡು ವಾಪಸು ಬರಬೇಕಿತ್ತು. ಈ ಬಾರಿ ಕೈಯಲ್ಲಿ ಉಳಿದಿದ್ದು ಕೇವಲ ಏಳು ನೂರು ರೂಪಾಯಿ ಮಾತ್ರ. ಹೇಗಿದ್ರೂ ಬೆಂಗಳೂರುವರೆಗೆ ಟಿಕೆಟ್ ಆಗಿರುತ್ತಲ್ಲಾ. ಸಾಕಾಗುತ್ತೆ ಅಂತಂದುಕೊಂಡವಳಿಗೆ ಹರಿಹರದವರೆಗೆ ಮಾತ್ರ ಟಿಕೆಟ್ ಸಿಕ್ಕಿದಾಗ ವಿಪರೀತ ಆತಂಕ ಆಗಿತ್ತು. ಇರುವ ಏಳುನೂರು ರೂಪಾಯಿಯಲ್ಲಿ ಹೇಗೆ ಸಂಭಾಳಿಸುವುದು ಅಂತೆಲ್ಲ ಯೋಚಿಸಿ ತೊಡಗಿದೆ. ಹರಿಹರದಿಂದ ಬೆಂಗಳೂರಿಗೆ ಟಿಕೆಟ್ , ಬೆಂಗಳೂರಿಂದ ಹಾಸನಕ್ಕೆ , ಹಾಸನದಿಂದ ಊರಿಗೆ ಟಿಕೆಟ್ಟುಗಳ ಹಣವನ್ನು ಕೂಡಿ ಕಳೆದು ನೋಡಿ ತೊಂದರೆ ಆಗಲ್ಲ ಅಂದುಕೊಂಡಿದ್ದೆನಾದರೂ ನಡುವಿನ ಊಟ ತಿಂಡಿಗಳ ಖರ್ಚು ನೆನೆದು ಜೀವ ಹೊಡೆದುಕೊಳ್ತಿತ್ತು.
ಅಣ್ಣನ ಬಳಿ ಹಣ ಕೇಳುವುದಾ , ಅತ್ತಿಗೆಯ ಬಳಿ ಅಣ್ಣನಿಗೆ ಗೊತ್ತಾಗದಂತೆ ಸ್ವಲ್ಪ ಹಣ ಕೇಳಬಹುದಾ ಅಂತನ್ನುವ ಯೋಚನೆಗಳೆಲ್ಲವೂ ನನ್ನ ಮೊಂಡು ಸ್ವಾಭಿಮಾನದ ಗುಣದಿಂದಾಗಿ ಸಾಧ್ಯವಾಗದೇ ಹೋಗಿ ದೇವರಿಟ್ಟಂತೆ ಆಗ್ತದೆ, ತೀರಾ ಅಷ್ಟೊಂದು ಕಡಿಮೆ ಏನೂ ಇಲ್ವಲ್ಲಾ ಅಂತಂದುಕೊಂಡು ಸುಮ್ಮನಿದ್ದೆ. ಹೊರಡುವ ದಿನ. ಸಂಜೆ ಏಳುಗಂಟೆಗೆ ಅಣ್ಣ ಬಂದು ಹರಿಹರ ಬಸ್ ಹತ್ತಿಸಿದ್ರು. ಹೊರಡುವಾಗ ಚಪಾತಿ ಪ್ಯಾಕ್ ಮಾಡಿ ನೀರಿನ ಬಾಟಲ್ ಕೊಟ್ಟಿದ್ರು. ಮಗಳು ಸಣ್ಣವಳಾದ್ರಿಂದ ಒಂದೆರಡು ಚಾಕೊಲೇಟ್ ಚಿಪ್ಸು ಇಟ್ಕೊಂಡಿದ್ದೆ. ಬಸ್ ಹೊರಟು ಅಣ್ಣನಿಗೆ ಬೈ ಮಾಡುವಾಗಲೂ ಇನ್ನೂರು ರೂಪಾಯಿ ಇಸ್ಕೊಳ್ಲಾ ಅನ್ನುವ ಯೋಚನೆ ಬಾಯಿ ತುದಿಯವರೆಗೂ ಬಂದರೂ ಕೇಳಲಾಗದ ಸಂಕಟಕ್ಕೆ ಸುಮ್ಮನೇ ಕೂತೆ.
ಬಸ್ಸು ಹೊರಟು ಹತ್ತು ನಿಮಿಷಕ್ಕೇ ಮಗಳು ಅಮ್ಮಾ ಚಾಕಿ ಅಂದಳು. ‘ಈಗಿನ್ನೂ ಊಟ ಮುಗಿಸಿ ಬಂದಿದಲ್ವಾ ಪುಟ್ಟು ಇನ್ ಸ್ವಲ್ಪ ಹೊತ್ತಾದ ಮೇಲೆ ಚಾಕಿ ಕೊಡ್ತಿನಿ ಆಗದಾ’ ಅಂದೆ. ‘ಇಲ್ಲ, ಈಗಲೇ ಬೇಕು. ಊಉಊಊಊ..’ ಸುಮ್ಮನಾದರೂ ಅತ್ತವಳಂತೆ ಮಾಡಿ ಅಮ್ಮನ ಪಕ್ಕ ಘನಗಂಬೀರವಾಗಿ ಕೂತಿರುವ ಅಣ್ಣನ ಗಮನ ಸೆಳೆದು ಚಾಕೊಲೇಟ್ ಪಡೆಯುವುದು ಅವಳ ಉದ್ದೇಶ. ಹದಿಮೂರು ವರ್ಷದ ಮಗ ಒಮ್ಮೆ ನನ್ನ ನೋಡಿ ಬ್ಯಾಗಿಂದ ಚಾಕೋಲೆಟ್ ತೆಗೆದು ಅವಳ ಕೈಗೆ ಕೊಟ್ಟ. ‘ಅಮ್ಮ ಗುಮ್ಮ ಅಲ್ವಾ ಅಣ್ಣ’ ಅಂತಂದು ಅವನ ಮೈಮೇಲೆ ಒಂದೆರಡು ನಿಮಿಷ ಕುಣಿದಾಡಿ ಚಾಕೊಲೇಟ್ ಅರ್ಧ ತಿಂದು ಅರ್ಧ ಅಣ್ಣನಿಗೆ ತಿನ್ನಿಸಿ ಹಾಗೇ ನಿದ್ದೆಗೆ ಜಾರಿಕೊಂಡಳು.
ಮಗಳದ್ದು ಚಿಕ್ಕಂದಿನಿಂದಲೂ ಪದೇಪದೇ ತಿನ್ನುವ ಅಭ್ಯಾಸ. ಪ್ರಯಾಣದ ಸಮಯದಲ್ಲಂತೂ ಅಪ್ಪ ಮಗಳು ಮಗ ಮೂವರೂ ನಾನ್ ಸ್ಟಾಪ್ ತಿಂತಾರೆ. ಈ ಅಭ್ಯಾಸ ಈಗಲೂ ಇದೆ. ದಾರಿ ಬದಿಯಲ್ಲಿ ಸಿಗುವ ಜೋಳ ,ಸೋಡಾ ,ಪೈನಾಪಲ್ ,ತಾಳೆ ಹಣ್ಣು, ಟೀ ಎಲ್ಲದರ ರುಚಿಯನ್ನು ಈ ಮೂವರು ನೋಡಲೇಬೇಕು. ಚಿಕ್ಕಂದಿನಿಂದಲೂ ಮಕ್ಕಳಿಬ್ರೂ ಭೋಜನಪ್ರಿಯರು. ಎಲ್ರ ಮನೆಯಲ್ಲಿ ನನ್ನ ಮಕ್ಕಳು ಊಟ ಮಾಡಲ್ಲ ಅಂತ ಗೋಳಾಡಿದ್ರೆ ನಾನು ‘ಸಾಕು ಸಾಕು ಏಳಿ’ ಅನ್ನಿಸಲು ತುರ್ತು ಕೊಟ್ಟವರು. ಚಿತ್ರಾನ್ನ, ಮೊಸರನ್ನ, ಪುಲಾವ್, ಪುಳಿಯೊಗರೆ, ದೋಸೆ, ಇಡ್ಲಿ, ರೊಟ್ಟಿ ಎಲ್ಲವೂ ನನ್ನ ಮಕ್ಕಳ ಫೇವರಿಟ್ ಲಿಸ್ಟನಲ್ಲಿ ಇರುವ ಆಹಾರಗಳೆ.
ಹೊರಗಡೆ ಹೋದಾಗಲೂ ನಾನು ಹಣ್ಣು ಸಾಕು ಅಂದರೆ ಚೋಟುದ್ದದ ನನ್ನ ಮಗಳು ಫುಲ್ ಮೀಲ್ಸ್ ತಗೊಂಡು ಆರಾಮದಲ್ಲಿ ಕುಂತು ಪೂರ್ತಿ ತಿಂದು ಬರುವ ಅಭ್ಯಾಸದವಳು. ಬಸ್ ಬಹುತೇಕ ಎಂಬತ್ತು ಕಿಮೀ ಪುಣೆಯ ಆಚೆಗೆ ಬಂದಿತ್ತು. ಆ ಜಾಗ ಯಾವುದೂಂತ ನನಗೆ ನೆನಪಿಲ್ಲ ಈಗ. ಸ್ವಲ್ಪ ಹೈಎಂಡ್ ಇರುವಂತಹ ಹೋಟೆಲ್ ಒಂದರ ಮುಂದೆ ನಿಲ್ಲಿಸಿ ‘ಅರ್ಧಗಂಟೆ ಊಟಕ್ಕೆ ಟೈಮಿದೆ,ಇಳ್ಕೊಳಿ’ ಅಂದರು. ಡೀಪ್ ಸ್ಲೀಪನಲ್ಲಿದ್ದ ಮಗಳು ಊಟ ಅಂದಕೂಡಲೆ ಥಟ್ಟನೆ ಎದ್ದು ಅಮ್ಮಾ ‘ಸೂಸೂ’ ಅಂತು. ಮಕ್ಕಳಿಬ್ರನ್ನೂ ಕೆಳಗೆ ಇಳಿಸಿಕೊಂಡು ಬಹಳ ಸ್ವಚ್ಚವಿದ್ದ ಆ ಟಾಯ್ಲೆಟ್ ಗೆ ಕಾಸುಕೊಟ್ಟು ಅವರ ನನ್ನ ಶೌಚ ಮುಗಿಸಿ ಕೈ ತೊಳೆಸಿಕೊಂಡು ಮಕ್ಕಳನ್ನು ಬಸ್ಸಿಗೆ ಹತ್ತಿ ಅಂದೆ. ಅಷ್ಟರಲ್ಲಾಗಲೇ ಬಸ್ಸಿಂದಿಳಿದವರು ಊರಗಲದ ಊಟದ ತಟ್ಟೆ ಹಿಡಿದು ಅದರಲ್ಲಿ ಆಕರ್ಷಕವಾಗಿ ಕಾಣುವ ಹಾಗೆ ಜೋಡಿಸಿದ್ದ ಪೂರಿ ಪಲ್ಯ ಜಿಲೇಬಿ ಅನ್ನದ ಬಟ್ಟಲುಗಳನ್ನು ಟೇಬಲ್ ಮೇಲೆ ಇಟ್ಕೊಳ್ತಿದ್ರು.
ಅದನ್ನೆಲ್ಲ ನೋಡಿದ ಮಗಳ ಹಸಿವು ಒಮ್ಮೆಗೆ ಹೆಚ್ಚಾಯಿತು ಕಾಣುತ್ತೆ. ‘ಅಮ್ಮಾ ಊಟ’ ಅಂತ ಜೋರು ಅಳಲಿಕ್ಕೆ ಶುರು ಮಾಡಿದ್ಳು. ‘ಆಯ್ತು ಕಂದ. ಊಟ ಮಾಡುವಿಯಂತೆ .ಬ್ಯಾಗಲ್ಲಿದೆ ಬಾ ‘ ಅಂತ ಬಸ್ಸಿಗೆ ಹತ್ತಿಸಿ ಚಪಾತಿ ನೀರು ಇಟ್ಟಿದ್ದ ಕವರ್ ಹುಡುಕಿದ್ರೆ ಎಲ್ಲಿ ಸಿಗಬೇಕು? ಅದನ್ನು ಮನೆಯಲ್ಲೇ ಬಿಟ್ಟು ಬಂದಿದ್ದೇನೆ. ದೇವರೇ! ಜೀವ ಉಡುಗಿ ಹೋಯ್ತು! ಕೈಯಲ್ಲಿರುವ ಇಷ್ಟೇ ಇಷ್ಟು ಹಣ. ಇದು ಸರಿಯಾಗಿ ಬಸ್ ಟಿಕೆಟ್ ಗಾಗಿ ಒಂದಿಷ್ಟು ಚಿಲ್ಲರೆ ಮಿಗಬಹುದು. ಈಗ ಇದರಲ್ಲೇ ಊಟ ಅಂದರೆ. ಆದರೆ ಯೋಚಿಸ್ತಾ ಕೂರಲಿಕ್ಕೆ ಸಮಯ ಇರಲಿಲ್ಲ. ಮಗಳ ಅಳು ಹೆಚ್ಚುತ್ತಾ ಹೋಯಿತಾದರೂ ಅಮ್ಮನಿಗೆ ಏನೋ ಸಂಕಟ ಆಗಿದೆ ಅಂತ ಮಗನಿಗೆ ಗೊತ್ತಾಯ್ತು. ಮತ್ತೇನೂ ಹೇಳದೆ ಮಕ್ಕಳಿಬ್ರನ್ನೂ ಕೆಳಗೆ ಇಳಿಸಿಕೊಂಡು ಇಬ್ರಿಗೂ ಒಂದು ದೋಸೆ ತಿನ್ನಿಸಿದ್ರೆ ಸ್ವಲ್ಪ ಹಣ ಮಿಗ್ತದೆ ಅಂತಂದುಕೊಂಡು ಒಂದು ದೋಸೆ ಅಂತಂದ ಕೂಡಲೇ ಮಗಳು ಜೋರು ಧ್ವನಿಯಲ್ಲಿ ‘ನಂಗೆ ಊಟವೇ ಬೇಕು’ ಅಂತ ರಚ್ಚೆ ಹಿಡಿದಳು.
ಊಟಕ್ಕೆ ತೊಂಬತ್ತು ರೂಪಾಯಿ ಇತ್ತು. ದೋಸೆ ಮುವ್ವತ್ತು. ಇವಳು ಇನ್ನು ಸುಮ್ಮನಿರುವುದಿಲ್ಲ ಅಂತ ಗೊತ್ತಾಯ್ತು. ವಿಚಿತ್ರ ಆತಂಕದಲ್ಲಿ ಮತ್ತೊಮ್ಮೆ ಪರ್ಸ್ ತೆಗೆದು ಹುಡುಕಿ ಮಗನಿಗೆ ದೋಸೆಗೆ ಹೇಳಿ ಮಗಳಿಗೆ ಊಟಕ್ಕೆ ಹೇಳಿ ಕೂತೆ. ನೀರಿನ ಬಾಟಲಿಗೆ ಎಕ್ಸಟ್ರಾ ಆಗುವುದರಿಂದ ಬೇಡ ಅನಿಸಿ ದೇವರಿಟ್ಟಂತೆ ಆಗಲಿ ಅಂತ ಅಲ್ಲಿದ್ದ ನೀರನ್ನೇ ಮಕ್ಕಳೆದಿರು ಇಟ್ಟೆ. ಊಟದ ತಟ್ಟೆಯ ಆಗಲವೇ ಬಹುತೇಕ ಮಗಳ ಎತ್ತರದ ಮುಕ್ಕಾಲಷ್ಟಿತ್ತು. ತನ್ನ ಎರಡೂ ಕೈಯನ್ನು ಅಗಲಕ್ಕೆ ಚಾಚಿಕೊಂಡು ತಟ್ಟೆಯನ್ನು ಅಷ್ಟಗಲಕ್ಕೆ ಹಿಡಿದು ನಾನು ಮಗ ಕೂತಿದ್ದ ಟೇಬಲಿನಿಂದ ಸ್ವಲ್ಪ ದೂರಕ್ಕೆ ಹೋಗಿ ಸಾವಕಾಶ ಜಾಗ ಮಾಡಿಕೊಂಡು ಊಟಕ್ಕೆ ಕೂತಳು ಮಗಳು.
ಕಣ್ಣಲ್ಲಿ ನೀರು ಸುರಿಸುತ್ತ ಸಿಂಬಳ ಸೀಟಿಕೊಳ್ತಾ ಊಟ ಮಾಡ್ತಿದ್ದ ಮಗಳ ಈ ಊಟದ ಮೋಹದ ಮೇಲೆ ಅವತ್ತು ಇನ್ನಿಲ್ಲದಂತೆ ಕೋಪ ಬಂದಿತ್ತು. ಮಗ ದೋಸೆ ತಿಂದು ಎದ್ದವನು ಬಸ್ಸಿಗೆ ತಡ ಆಗ್ತದೆ ಅಂತ ತಂಗಿಗೆ ‘ಬೇಗಬೇಗನೆ ತಿನ್ನು ಪುಟ್ಟಕ್ಕ’ ಅಂತ ಹೇಳಲಿಕ್ಕೆ ಹೋದ. ನಾನು ನಿಟ್ಟುಸಿರಿಡುತ್ತ ದಾರಿಯಲ್ಲಿ ಏನಾದರು ಹೆಚ್ಚು ಕಮ್ಮಿಯಾದರೆ ಹಣಕ್ಕೇನು ಮಾಡುವುದು ಅಂತ ಅಸಹಾಯಕತೆಯಲ್ಲಿದ್ದೆ. ಮಗಳ ಪುಟ್ಟ ಕಣ್ಣುಗಳ ಧುಮುಗುಡುವ ಕೋಪ ಇನ್ನೂ ಉರಿಯತಿತ್ತು. ಯಾಕೋ ಅವತ್ತು ಅಪ್ಪ ಅಮ್ಮನ ಮೇಲೆ ನನ್ನ ಮೇಲೆ ನನ್ನ ಕುಟುಂಬದ ಮೇಲೆ ಇನ್ನಿಲ್ಲದಂತೆ ರೋಷ ಉಕ್ಕಿ ಅದು ಕಣ್ಣೀರಿನ ಮೂಲಕ ಹೊರಗೆ ಬಂತು. ಅಷ್ಟರಲ್ಲಿ ಬಸ್ ಹೊರಟು ಕಂಡಕ್ಟರ್ ಗಡಿಬಿಡಿ ಮಾಡ್ತಿದ್ದ. ಮಗಳು ಊಟವನ್ನು ಪೂರ್ತಿ ಮುಗಿಸಿ , ತಟ್ಟೆಯಲ್ಲಿದ್ದ ಜಿಲೇಬಿಯನ್ನು ಜೋಪಾನ ಕೈಯಲ್ಲಿ ಹಿಡಿದು ಅಣ್ಣನ ಜೊತೆಗೆ ಊಟ ಹೆಂಗೆಲ್ಲ ರುಚಿಯಾಗಿತ್ತು ಅಂತ ವಿವರಿಸ್ತಾ ಬಸ್ಸಿನ ಕಡೆಗೆ ಓಡ್ತಿದ್ಳು.
ನನ್ನ ಕಣ್ಣೀರಿನಿಂದಾಗಿ ಆ ದೃಶ್ಯ ಇವತ್ತಿಗೂ ಮಂಜು ಮಂಜಾಗಿ ನೆನಪಿನ ಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. ಬಸ್ಸಿನಲ್ಲಿ ಕೂತ ಮಗಳು ಮತ್ತೆ ಅಣ್ಣನಿಗೆ ದೋಸೆ ಹೇಗಿತ್ತು ಅಂತೆಲ್ಲ ಕೇಳ್ತಾ ತಾನು ತಂದಿದ್ದ ಜಿಲೇಬಿಯನ್ನು ಸಣ್ಣಗೆ ಮುರಿದು ತಿನ್ನುತ್ತಾ ಅಣ್ಣನಿಗೂ ಒಂದು ತುಣುಕು ತಿನ್ನಿಸಿ ವಾರೆಗಣ್ಣಿನಲ್ಲಿ ನನ್ನ ನೋಡಿದ್ಳು. ನಾನು ಕಣ್ಣೊರೆಸಿಕೊಂಡಿದ್ದು ಕಂಡು ಪಾಪ ಅನಿಸಿತೇನೋ. ನನಗೂ ಒಂದು ಪುಟ್ಟ ತುಣುಕು ಜಿಲೇಬಿ ಕೊಟ್ಟು ಹಸಿವಾಯ್ತಾ ನಿಂಗೂ ಅಂತ ಒಂದೆರಡು ನಿಮಿಷ ಮಾತಾಡಿ ಹೊಟ್ಟೆ ತುಂಬಿದ ಆಯಾಸಕ್ಕೆ ಮಲಗಿದ್ಳು. ಮಗನೂ ಮಲಗಿದ. ಪರ್ಸಿನ ಹಣ ಸರಿಯಾಗಿ ಎಷ್ಟಿದೆ ಅಂತ ಮತ್ತೊಮ್ಮೆ ಎಣಿಸುವ ಅನಿಸಿದ್ರೂ ಬಸ್ಸಿನ ಲೈಟ್ ಅಷ್ಟರಲ್ಲಿ ಆರಿಸಿಯಾಗಿತ್ತು. (ಎಂದೂ ಯಾವ ಕಾರಣಕ್ಕೂ ಪರ್ಸಿನ ಹಣವನ್ನು ಪೂರ್ತಿಯಾಗಿ ಆಚೆ ತೆಗೆದು ಎಣಿಸಬಾರದು ಎನ್ನುವುದು ಪುರಾತನ ಕಾಲದಿಂದಲೂ ನಂಬಿಕೆ ನನಗೆ) ಹರಿಹರದಲ್ಲಿ ಬಸ್ ನಿಲ್ಲಿಸಿದಾಗ ನಡುರಾತ್ರಿ ಮೂರು ಗಂಟೆಯೇನೊ. ಮಲಗಿದ್ದ ಮಕ್ಕಳಿಬ್ರನ್ನೂ ಎಬ್ಬಿಸಿ ಇಳಿಸಿಕೊಂಡು ಬ್ಯಾಗ್ ಹಿಡಿದು ಬಸ್ ಸ್ಟ್ಯಾಂಡ್ ನಲ್ಲಿ ಬಂದು ಕೂತೆ.
ಕೂತವಳ ಜೀವದ ಭರ್ತಿ ಪರ್ಸಿನ ಹಣ ಲೆಕ್ಕ ಹಾಕುವ ಉಮೇದು ತುಂಬಿದ್ದರೂ ಮೊದಲೇ ಗುರುತು ಪರಿಚಯವಿಲ್ಲದ ಊರು,ಅಪರಾತ್ರಿ, ಕಳ್ಳಕಾಕರು ಇದ್ದರೂ ಇರಬಹುದು ಅಂತನ್ನುವ ಭಯದಲ್ಲಿ ಸುಮ್ಮನಾದೆ. ಹರಿಹರದಿಂದ ಬೆಂಗಳೂರು ತಲುಪಿದ ಮೇಲೆ ಅಲ್ಲಿ ಮಕ್ಕಳಿಗೆ ತಿಂಡಿ. ಮತ್ತೆ ಹಾಸನಕ್ಕೆ ಹೋಗುವಾಗ ಊಟ…ಯೋಚಿಸಿದಷ್ಟೂ ಜೀವ ತಣ್ಣಗಾಗತೊಡಗಿತು. ದೇವರೆ! ನಾನು ಯಾಕೆ ಇಷ್ಟೊಂದು ಹೆಡ್ಡತನ ಮಾಡಿದೆ. ಅಣ್ಣನ ಬಳಿ ಕೇಳಬಹುದಿತ್ತು .ಯಾವುದೇ ಕಾರಣಕ್ಕೂ ಅಣ್ಣ ತಪ್ಪು ತಿಳಿಯುತ್ತಿರಲಿಲ್ಲ. ದೇವರೇ! ಆಗಿದ್ದು ಆಗಿ ಹೋಗಿದೆ. ನಾಳೆ ಸಂಜೆಯವರೆಗೆ ಮಕ್ಕಳಿಗೆ ಹೆಚ್ಚು ಹಸಿವು ಆಗದಿರಲಿ ಅಂತ ನೆನಪಿದ್ದ ದೇವರನ್ನೆಲ್ಲ ನೆನಪಿಸಿಕೊಂಡೆ. ಅಷ್ಟರಲ್ಲಿ ಬೆಳಗಿನ ನಾಲ್ಕೂವರೆ ಗಂಟೆ.
ಹರಿಹರದಲ್ಲಿ ಬಸ್ ಹತ್ತಿದಾಗ ಆಕಾಶದಲ್ಲಿ ಒಂದಿಷ್ಟು ಬೆಳಕು ಕಾಣ್ತಿತ್ತು. ಮಗನನ್ನು ಕೊನೆಯಲ್ಲಿ ಕೂರಿಸಿ ಮಗಳನ್ನು ಮಧ್ಯಕ್ಕೆ ಬಿಟ್ಟು ನಾನು ಕಿಟಿಕಿ ಪಕ್ಕ ಕೂತವಳು ಮೊದಲು ಪರ್ಸ್ ಓಪನ್ ಮಾಡಿ ಇದ್ದ ಹತ್ತು ಐದು ಇಪ್ಪತ್ತು ಐವತ್ತು ನೂರರ ನೋಟು ಜೋಡಿಸಿಕೊಂಡು ಎಣಿಸತೊಡಗಿದೆ. ಕೈ ನನ್ನ ಹಿಡಿತ ಮೀರಿ ನಡುಗುತಿತ್ತು. ಬೆಳಗಿನ ತಂಪಿನಲ್ಲೂ ಹಣೆ ಮುಖದಲ್ಲಿ ಬೆವರು ಮೂಡಿತ್ತು. ಇನ್ನೂ ಕಂಡಕ್ಟರ್ ಟಿಕೆಟ್ ಗೆ ಬಂದಿರಲಿಲ್ಲ. ಮತ್ತೆ ಮತ್ತೆ ಎಣಿಸಿ ನೋಡಿ ನಿಟ್ಟುಸಿರಿಟ್ಟು ನೂರು ಐವತ್ತರ ಎರಡು ನೋಟನ್ನು ಟಿಕೇಟಿಗಾಗಿ ತುದಿಯಲ್ಲಿಟ್ಟುಕೊಂಡು ಉಳಿದಿದ್ದು ಪರ್ಸಿನ ಒಳಝಿಪ್ಪಿಗೆ ಇಟ್ಟೆ. ಕಣ್ಣಿನಿಂದ ಒಂದೇ ಸಮನೆ ಇಳಿಯುತ್ತಿದ್ದ ಧಾರೆಯನ್ನು ಒರೆಸಿಕೊಳ್ಳಲು ಮಗಳ ಕರ್ಚಿಫ್ ಇಟ್ಕೊಳ್ತಿದ್ದ ಮತ್ತೊಂದು ಝಿಪ್ ಓಪನ್ ಮಾಡಿ ಕರ್ಚಿಫ್ ಆಚೆ ತೆಗೆದು ಇಳಿಯುತ್ತಿದ್ದ ಕಣ್ಣೀರು ಒರೆಸಿಕೊಂಡೆ.
ಕ್ಷಣಕ್ಷಣಕ್ಕೂ ಆತಂಕ ಹೆಚ್ಚುತ್ತಿತ್ತು. ಕರ್ಚಿಫ್ ಒಳಗಿಡುವಾಗ ಅದರೊಳಗಿದ್ದ ಮತ್ತೊಂದು ಪುಟ್ಟ ಒಳಪರ್ಸ್ ಕೈಗೆ ತಾಕಿತು. ಅಭ್ಯಾಸದಂತೆ ಅದರ ಝಿಪ್ ಅನ್ನೂ ಓಪನ್ ಮಾಡಿದೆ. ಪುಟ್ಟ ತುಣುಕೊಂದು ಕೈಗೆ ಸಿಕ್ತು. ಸಾಮನ್ಯವಾಗಿ ಯಾವುದಾದರೂ ದೇವರ ಕುಂಕುಮ ಗಂಧ ಪ್ರಸಾದಗಳನ್ನು ಪುಟ್ಟ ಪೇಪರಿನಲ್ಲಿಟ್ಟು ಹೀಗೆ ಕೊನೆಯ ಒಳಪರ್ಸಿಗಿಟ್ಕೊಳ್ತೀನಿ. ಯಾವ ಕಾಣದ ದೇವರ ಪ್ರಸಾದವೋ ಏನೋ., ‘ದೇವರೇ ನೀನಾದರೂ ಈ ದಿನವನ್ನು ಕಾಪಾಡು’ ಅಂತಂದು ಕಣ್ಮುಚ್ಚಿದವಳಿಗೆ ಅದರೊಳಗಿನ ಪ್ರಸಾದವನ್ನು ಹಣೆಗಿಟ್ಕೊಳುವ ಅನಿಸಿ ಕಾಗದದ ತುಣುಕು ಆಚೆ ತೆಗೆದರೆ ಅದು ದೇವರ ಪ್ರಸಾದ ಇಟ್ಟಿದ್ದ ಕಾಗದವಲ್ಲ!
ಗುಲಾಬಿ ಬಣ್ಣದ ನೋಟು!!!
ಅರೆ ಇಪ್ಪತ್ತು ರೂಪಾಯಿ. ದೇವರೇ ನೀನು ನಿಜಕ್ಕೂ ದೊಡ್ಡವನು ಎಂದುಕೊಳ್ತಾ ನಿಡಿದಾಗಿ ಉಸಿರು ಬಿಟ್ಟೆ. ಅಷ್ಟರಲ್ಲಾಗಲೇ ಸೂರ್ಯ ಪೂರ್ತಿಯಾಗಿ ಕಾಣಿಸಿ ಎಳೆ ಬಿಸಿಲು ಹರಡಿತ್ತು ಹೊರಗೆ. ವೇಗವಾಗಿ ಹೋಗ್ತಿದ್ದ ಬಸ್ಸು. ಏನೋ ಸಮಾಧಾನದಿಂದ ಆಚೆಗೆ ಇಣುಕಿ ನೋಡಿದೆ. ದಾವಣಗೆರೆ ಅಂತ ಬೋರ್ಡ್ ಕಾಣಿಸಿ ಇನ್ನೇನು ಬೇಗ ಬೆಂಗಳೂರಿಗೆ ತಲುಪ್ತಿವಿ ಅಂತಂದುಕೊಂಡು ಮತ್ತೆ ಆ ಗುಲಾಬಿ ನೋಟನ್ನು ನೋಡಿ ಎರಡೂ ಕೈಯಲ್ಲಿ ಸರಿಯಾಗಿ ಅಗಲ ಮಾಡಿದೆ. ದೇವರೇ. ನನ್ನ ಕಣ್ಣು ನಾನೇ ನಂಬುವಂತಿರಲಿಲ್ಲ! ಅದು. ಅದು. ಒಂದು ಸಾವಿರ ರೂಪಾಯಿಯ ನೋಟು! ಕಣ್ಣಿಂದ ನೀರು ದಳದಳನೆ ಸುರಿಯುತ್ತಿದ್ದಿದ್ದು ನೋಡಿ ಆ ಬದಿಯ ಸೀಟಿನವ ಏನೋ ಆಯ್ತೆಂದು ಮತ್ತೆಮತ್ತೆ ಹೊರಳಿ ನೋಡಿದ.
ಹರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ತಾ ಮತ್ತೆ ಆ ನೋಟನ್ನು ಪರೀಕ್ಷೆ ಮಾಡಿಕೊಂಡೆ. ಹೌದು. ಅದು ಒಂದು ಸಾವಿರ ರೂಪಾಯಿಯ ಅಸಲಿ ನೋಟು! ದೇವರು ನಿಜಕ್ಕೂ ಕರುಣಾಮಯಿ ಅಂತ ಆ ದಿನ ಮೊದಲ ಬಾರಿಗೆ ಅನಿಸಿತ್ತು. ಬೆಂಗಳೂರಿಗೆ ಬಂದ ಮೇಲೆ ಮಕ್ಕಳಿಬ್ರನ್ನೂ ಹೋಟೆಲಿಗೆ ಕರಕೊಂಡು ಹೋಗಿ ತಿಂಡಿ ತಿನ್ನಿಸಿ ಎರಡು ಪ್ಯಾಕ್ ಚಿಪ್ಸ್ ಎರಡು ಫ್ರೂಟಿ, ಒಂದು ಗುಡ್ಡೆ ಬಿಸ್ಕೆಟ್ ಪ್ಯಾಕ್ ಕೊಂಡು ಕೊಂಡೆ. ಮಗನ ಕಣ್ಣು ಒಮ್ಮೆಗೆ ಅರಳಿದವು. ಮಗಳು ಅದೆಲ್ಲವನ್ನೂ ಹಕ್ಕಿನಲ್ಲಿ ಹಿಡಿದು ಹೆಮ್ಮೆಯಿಂದ ಬೆಂಗಳೂರು ಬಸ್ ಹತ್ತಿದಳು.
ಅಮ್ಮಾ. ಬಾ ಸ್ವಲ್ಪ ಗೇಮ್ಸ್ ಸೆಕ್ಷನ್ ಗೆ ಹೋಗಿ ಬರುವ ಅಂತ ಮಗಳು ಕರೆದಾಗ ಎಕ್ಸಪೆನ್ಸಿವ್ ಇದ್ರೆ ಬೇಡ ಮಗಳೆ ಅಂತನ್ನಲಿಕ್ಕೆ ಹೊರಟವಳು ದೇವರು ಕೊಡುವ ಕಾಲಕ್ಕೆ ಖರ್ಚು ಮಾಡಿದ್ರೆ ತಪ್ಪೇನೂ ಇಲ್ಲ ಅನಿಸಿ ನಡೀ ಅಂದೆ. ಅಷ್ಟರಲ್ಲಿ ಮನೆಯವರು ಫೋನ್ ‘ಎಲ್ಲಿದ್ದೀರಾ ಅಮ್ಮ ಮಗಳು?’ ನಡುವೆ ಅದು ಇದೂ ಮಾತಾಡಿ ‘ಮೆಣಸು ಪಲ್ಪರ್ ಮಾಡ್ತಿದ್ದೆ ಇಷ್ಟೊತನಕ’ ಅಂದರು. ‘ಈ ಸರ್ತಿ ಐದು ಟನ್ ಮೆಣಸು ಕುಯ್ಯತಿನಿ ಗೊತ್ತಾ ಮಗಳೆ ನಾನು’ ಫೋನಿಡುವ ಕೊನೆಯಲ್ಲಿ ಮಗಳ ಬಳಿ ಹೇಳಿದ್ದು ಕೇಳಿ ಜೀವ ಹಗೂರಾಗಿ ತೇಲಿದಂತೆ ಭಾಸವಾಯಿತು. ಐದು ಟನ್ ಕಾಳು ಮೆಣಸು ಬೆಳೆಯುವುದು ನನ್ನ ಮತ್ತೊಂದು ಕನಸು. ಖಂಡಿತವಾಗಿ ದೇವರು ದೊಡ್ಡವನು. ಕೊಡುವ ಕಾಲಕ್ಕೆ ಎಲ್ಲವನ್ನೂ ಕೊಡ್ತಾನೆ. ನೋವು ಕೊಟ್ರೂ ಅದಕ್ಕೆ ಸರಿಸಮನಾದ ಸುಖವನ್ನೂ ಜೊತೆಗೇ ಇಟ್ಟಿರ್ತಾನೆ. ‘ಹೇಗನಿಸ್ತಮ್ಮ ಫೇಷಿಯಲ್ಲು, ಹೌ ಯೂ ಫೀಲಿಂಗ್’ ಅಂದಳು ಮಗಳು. ‘ಲೈಕ್ ಎ ಕ್ವೀನ್’ ಅಂತ ಹೇಳಬೇಕೆಂದುಕೊಂಡವಳು ಏನೂ ಹೇಳದೆ ಮಗಳನ್ನೇ ನೋಡ್ತಾ ಅವಳ ಕೈ ಹಿಡಿದೆ. ಅಂಗೈ ಬೆಚ್ಚಗಿತ್ತು.
ಹದಿನೆಂಟು ವರ್ಷಗಳ ಹಿಂದೆ ಎರಡು ಸಾವಿರದ ನೋಟು ಚಾಲ್ತಿಯಲ್ಲಿತ್ತ ನಂದಿನಿ ಮೇಡಂ.
ಕಥೆ ಚೆನ್ನಾಗಿತ್ತು . ಅಭಿನಂದನೆಗಳು !
ಆದರೆ ….
ಹದಿನೆಂಟು ವರುಷಗಳ ಹಿಂದೆ ಎರಡು ಸಾವಿರ ರೂ.ಗಳ “ಗುಲಾಬಿ ನೋಟು ” ಇತ್ತೇ ??
https://en.wikipedia.org/wiki/Indian_2000-rupee_note