ಇದು ವಿಶ್ವ ಛಾಯಾಗ್ರಹಣ ದಿನಕ್ಕೆ ಕೊಡುಗೆಯೂ ಹೌದು!
ಲೋಕೇಶ್ ಮೊಸಳೆ
ಮೊನ್ನೆ ರಂಗಾಯಣದ ಗೀತಾ ಮೋಂಟಡ್ಕ ಫೋನ್ ಮಾಡಿ ‘ಲಂಕೇಶ್ ಅವರ ನಾಟಕ ‘ಮುಟ್ಟಿಸಿಕೊಂಡವನು’ ಶೋ ಮಾಡತಿದ್ದೇವೆ. ಅದಕ್ಕೆ ಮುಂಚೆ ನೀವು ಫೋಟೊ ತೆಗೆದು ಕೊಡುವಿರಾ ‘ಎಂದು ಕೇಳಿದರು. ಅಷ್ಟರಲ್ಲಿ ಕೆ ಆರ್ ನಂದಿನಿ ‘ಇದನ್ನು ನಾನೇ ಡೈರೆಕ್ಟ್ ಮಾಡ್ತಿರೋದು…. ಶೂಟ್ ಮಾಡಿಕೊಡಿ’ ಅಂದರು.
ಪ್ರಶಾಂತ ಹಿರೇಮಠ್ ಅಂತೂ ಇದು ‘ಹ್ಯಾಮ್ಲೆಟ್’ ಶೂಟ್ ಗಿಂತ ಚೆನ್ನಾಗಿ ಬರಬೇಕು ಎಂದರು… ಇವರೆಲ್ಲರ ಮಾತಿನಲ್ಲಿ ಒಂದು ಸದರ- ಪ್ರೀತಿ ಇತ್ತು… ಒಪ್ಪಿ ನಿನ್ನೆ ಒಮ್ಮೆ ರಿಹರ್ಸಲ್ ನೋಡಿ ಮುಗಿದಾಗ…. ಎದುರಿಗೆ ನಂದಿನಿ ಬಂದರು. ‘ಹೇಗಾಗಿದೆ?’ ಎಂದು ಕೇಳಿದರು.
ಮನಸ್ಸು ಭಾರವಾಗಿ ದುಃಖದಲ್ಲಿದ್ದೆ. ಪ್ರೇಕ್ಷಕರ ಗ್ಯಾಲರಿ ಮಬ್ಬು ಬೆಳಕಿತ್ತು…. ಮಾತಾಡಲಾಗಲಿಲ್ಲ…. ನಂದಿನಿ ಕೈಹಿಡಿದು ಬಿಕ್ಕಳಿಸಿದೆ… ಸಮಾಧಾನ ಪಡಿಸಿದರು.
ನನ್ನ ದುಃಖಕ್ಕೆ ಕಾರಣ ಗೊತ್ತಿಲ್ಲ ….!!!, ವ್ಯವಸ್ಥೆಯೊ … ನಾಟಕದ ಅಭಿನಯವೊ…. ಲಂಕೇಶರ ಕತೆಯೋ ಗೊತ್ತಿಲ್ಲ..
ಇಂದಿನಿಂದ ಲಂಕೇಶ್ ಅವರ ‘ಮುಟ್ಟಿಸಿಕೊಂಡವನು …’ ಈ ನಾಟಕ ಮೈಸೂರಿನ ರಂಗಾಯಣದಲ್ಲಿ ಪ್ರದರ್ಶನವಾಗುತ್ತಿದೆ.
ನಿನ್ನೆ ಸಂಜೆ ನಾನು ಇಷ್ಟಪಟ್ಟು ಚಿತ್ರ ತೆಗೆದು ‘ವಿಶ್ವ ಛಾಯಾಗ್ರಾಹಕರ ದಿನ’ವನ್ನು ಆಚರಿಸಿಕೊಂಡೆ… ಹಾಗಾಗಿ ನಿಮ್ಮೊಂದಿಗೆ ಈ ಚಿತ್ರಗಳು…!!!
1987-88ರ ಸುಮಾರಿಗೆ ಮೈಸೂರಿಗೆ ನಟನೆ ಕಲಿಯಲು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಇವರೆಲ್ಲರನ್ನು ಪ್ರತಿದಿನ ನೋಡುತ್ತಿದ್ದೆ …. , ಆಗ ನಾನು ಮಹಾರಾಜಾ ಕಾಲೇಜಿಗೆ ಪಡುವಾರಹಳ್ಳಿಯಿಂದ ನಡೆದು ರಂಗಾಯಣ quarters… ಜಲದರ್ಶಿನಿ, ಕಲಾಮಂದಿರ ಮೂಲಕ ಹೋಗುತ್ತಿದ್ದೆ…
ಆಗ ನನಗೆ ಫೋಟೋಗ್ರಫಿ ಗೊತ್ತಿರಲಿಲ್ಲ… ಇವರಿಗೂ ನಟನೆ ಗೊತ್ತಿತ್ತೂ ಇಲ್ಲವೋ… ಈಗ ನಟನೆಯನ್ನೆ ಹಾಸಿ ಹೊದ್ದು ರಂಗಾಯಣದಿಂದ ನಿವೃತ್ತಿ ಹಂತ ತಲುಪಿದ್ದಾರೆ, ಇವರೆಲ್ಲರ ಬದುಕಿನ ಮೆಟ್ಟಿಲುಗಳನ್ನು ಹತ್ತಿರದಿಂದ ಮೂರ್ನಾಲ್ಕು ದಶಕಗಳಿಂದ ಕಂಡಿದ್ದೇನೆ. ಆದರೆ ನಿವೃತ್ತಿ ಆದವರೂ ಕೂಡ ರಂಗದ ಸುತ್ತ ಸುತ್ತುತ್ತಲೇ ನಾಡು ನುಡಿ ಸಂಸ್ಕೃತಿಯ ಸುತ್ತ ಸುತ್ತುತ್ತಲೇ ದೇಶದ ಆಸ್ತಿ ಆಗಿದ್ದಾರೆ….
ಈಗ ಕಾರಂತರು ನೆನಪಾಗುತ್ತಿದ್ದಾರೆ. ನನ್ನ ಚಿತ್ರಗಳು ನನಗೆ ಹೆಮ್ಮೆ ಎನಿಸುತ್ತಿದೆ .
0 ಪ್ರತಿಕ್ರಿಯೆಗಳು