ಧ್ರುವ ಪಾಟೀಲ ಓದಿದ ‘ಮೈದಾನ’

ಭಾವನೆಗಳ ಕೈದೋಟದ ಕಿರು ಗುಡಿಸಲು ಮೈದಾನ

ಧ್ರುವ ಪಾಟೀಲ

ಈ ಮೇಲಿನ ಸಾಲನ್ನು ಎಚ್. ಎಸ್. ರಾಘವೇಂದ್ರರಾವ್ ಅವರು ಅನುವಾದಿಸಿದ ಮಾರಿಯಾ ರಿಲ್ಕ್‌ನ ಕಾವ್ಯಗಳ ’ಮಂಜಿನ ಶಿವಾಲಯಕ್ಕೆʼ ಎಂಬ ಪುಸ್ತಕದಿಂದ ಆಯ್ದುಕೊಂಡಿದ್ದೇನೆ. ಮೈದಾನ ಕಾದಂಬರಿ ಹೆಸರಿಗೆ ತಕ್ಕ ಹಾಗೆ ಇದು ದೇಹಕ್ಕೆ ಸಂಬಂಧಿಸಿದ, ಲೋಕದ ಹಂಗನ್ನು ಮೀರಿ ನಿಂತ ರಾಜೇಶ್ವರಿಯ ಅಂತರಾಳದ ಕಥೆ. ಇದು ಕೇವಲ ಹೆಣ್ಣಿನ ಅಂತರಂಗದ ಕಾದಂಬರಿ ಆದರೂ ಸಹ ಸಂಪ್ರದಾಯಸ್ಥ ಬ್ರಾಹಣ ಕುಟುಂಬದ ಹೆಣ್ಣು ಹೊಸಿಲನ್ನು ದಾಟಿ ಮುಸ್ಲಿಂ ಯುವಕನ ನಿಷ್ಕಲ್ಮಶ ಪ್ರೇಮವನ್ನು ಅರಸಿ ಹೋಗುವ ನವಿರು ಪ್ರೇಮ ಕಥನ.

ಈ ಕಾದಂಬರಿ ೧೯೨೫ ರಲ್ಲಿಯೇ ರಚನೆಯಾದರೂ ಇದು ಕಾಲಾತೀತವಾದದ್ದು. ಅಂದಿನ ಸಮಾಜದ ದೃಷ್ಟಿಯಲ್ಲಿ ಒಪ್ಪಿತವಲ್ಲದ ವಿಚಾರವನ್ನು ಅರುಹುತ್ತದೆ. ರಾಜೇಶ್ವರಿ ತಾನು ಅರಸಿ ಹೋಗಿದ್ದು ಏನನ್ನು ಪ್ರೇಮವನ್ನೋ, ಕಾಮವನ್ನೋ, ಸ್ನೇಹವನ್ನೋ, ದೈವತ್ವವನ್ನೋ? ಈ ಎಲ್ಲ ಪ್ರಶ್ನೆಗಳ ಆಚೆ ಅವಳದೇ ದೃಷ್ಟಿಯಲ್ಲಿ ನೋಡಿದಾಗ ಅವಳು ಹೇಳುವುದೇ ಹೀಗೆ ’ಅಮೀರ್‌ನೊಂದಿಗೆ ಕಾಮ ತೀರಿಸಿಕೊಳ್ಳುವುದಕ್ಕಲ್ಲ. ಆತನ ಮುಖ ನೋಡುತ್ತಾ ಆತನನ್ನು ಪೂಜಿಸಲು! ಅಮೀರ್ ಕಣ್ಣಲ್ಲಿ ಆರಾಧನೆಯನ್ನು ನೋಡಲು, ಆತನೊಂದಿಗೆ ಮಾತಾಡಿ, ಆತನೆಡೆಗೆ ನೋಡುವ ಅದೃಷ್ಟಕ್ಕಾಗಿ ಹೋದೆ. ಅದು ಕಾಮವೇ?(ಪು.೨೮) ಸಮಾಜದ ಕಟ್ಟುಪಾಡುಗಳನ್ನು ಮೀರುವ ಸಾಹಸ ಮಾಡಿದ್ದು ರಾಜೇಶ್ವರಿಯ ಗೆಲುವು.

ಪುರುಷ ಸಮಾಜ ಗುರುತಿಸುವ, ಕರೆಯುವ ಹಾಗೆ ’ಓಡಿ ಹೋದವಳುʼ ಎಂಬಲ್ಲಿಂದ ಆರಂಭವಾದ ಈ ಕಾದಂಬರಿ ಕೊನೆಗೆ ದುರಂತವಾಗಿ ಅಂತ್ಯಗೊಳ್ಳುತ್ತದೆ. ಮೈದಾನ ಈ ಪದವನ್ನು ಬಿಡಿಸಿದಾಗ ಎರಡು ಅರ್ಥ ಬರುತ್ತವೆ. ಮೈ, ದೇಹಕ್ಕೆ ಸಂಬಂಧಿಸಿದ್ದು, ದಾನ ಎಂದರೆ ನೀಡುವುದು ಅಥವಾ ಪಡೆಯುವುದು ಎಂದರ್ಥ. ರಾಜೇಶ್ವರಿ ತನ್ನನ್ನು ತಾನು ದೈವತ್ವಕ್ಕೆ, ಅಮರತ್ವಕ್ಕೆ ಅರ್ಪಿಸಿಕೊಳ್ಳುವುದರ ಜೊತೆಗೆ ಪಡೆದುಕೊಳ್ಳುವುದನ್ನು ಕಾದಂಬರಿ ನಿರೂಪಿಸುತ್ತಾ ಹೋಗುತ್ತದೆ.

ಪೂಜೆ ಮತ್ತು ಫಲ ಎರಡರಿಂದ ಒಂದು ಹೊಸ ಅನುಭೂತಿ ಸೃಷ್ಟಿ ಆಗುತ್ತದೆ. ’ಆ ಜೀವನವೆಲ್ಲ ಸುಂದರ ಸ್ವಪ್ನದಂತೆ, ಆ ಮರುಭೂಮಿ ಪುಣ್ಯಭೂಮಿಯಂತೆ, ನನ್ನ ಜೀವನದಲ್ಲಿ ಈಶ್ವರನಿಗೆ ನಾನೆತ್ತುವ ಮಂಗಳಾರತಿಯಂತೆ ಅನ್ನಿಸಿತುʼ. ಅದು ಖಾಲಿ, ಬಯಲು ಅಲ್ಲದೆ ಸಂತೃಪ್ತ ಬದುಕಿನ ಅವಿಭಾಜ್ಯ ಅಂಗವಾಗಿ ಗೋಚರಿಸುತ್ತದೆ. ’ಹೆಣ್ಣಿಗೂ ಒಂದು ದೇಹ ಇದೆ, ಅದಕ್ಕೆ ವ್ಯಾಯಾಮ ಕೊಡಿ, ಮೆದುಳಿದೆ ಅದಕ್ಕೆ ಜ್ಞಾನ ಕೊಡಿ, ಹೃದಯವಿದೆ ಅದಕ್ಕೆ ಅನುಭವ ಕೊಡಿʼ ಎಂಬ ಸಾಲಿನ ಹಿನ್ನಲೆಯಾಗಿ ಚಲಂ ತಮ್ಮ ಜೀವನದುದ್ದಕ್ಕೂ ಇಂತಹದೇ ಪ್ರಶ್ನೆಗಳನ್ನು ಮುಖ್ಯ ನೆಲೆಯನ್ನಾಗಿ ಮಾಡಿಕೊಂಡು ಕಾದಂಬರಿ ರಚಿಸಿದರು.

ಮುನ್ನುಡಿಯಲ್ಲಿ ಜಯಪ್ರಭ ಅವರು ಹೇಳುವ ಹಾಗೆ ’ಕೇವಲ ಸನಾತನ ಧರ್ಮವನ್ನು… ಅದರೊಳಗಿನ ಸ್ತ್ರೀಯರ ಅತಂತ್ರ ಬದುಕನ್ನ ವಿವರಿಸಲೆಂದು ಚಲಂ ಮೈದಾನಂ ಬರೆಯಲಿಲ್ಲ. ಚಲಂಗೆ ಮೈದಾನಂ ಒಂದು ಆದರ್ಶ ಇಕ್ಕಟ್ಟಿನ ಕೋಣೆಯ ಅಧಮ ಶೃಂಗಾರದಲ್ಲಿ… ಅಸಮ-ಸಂಬಂಧಗಳ ಮಧ್ಯೆ ಸ್ತ್ರೀ ಪುರುಷರೊಳಗೆ ಕೊಳೆತು ಹೋಗುತ್ತಿರುವ ಪ್ರೇಮ ಬಂಧನವನ್ನ ಬಲಪಡಿಸಲು ಚಲಂ ಮೈದಾನಂ ಬರೆದರು. ಮನುಷ್ಯನಿಗೆ ಪ್ರಕೃತಿಯೊಂದಿಗೆ ಇರಬೇಕಾದ ಸಾಮೀಪ್ಯವನ್ನು ಸೂಚಿಸಿದರು’.

ರಾಜೇಶ್ವರಿ, ಅಮೀರ, ಮೀರಾ ಇವೆ ಪ್ರಧಾನ ಪಾತ್ರಗಳು. ಈ ತ್ರಿಕೋನ ಪ್ರೇಮ ಕಾದಂಬರಿ ಸಮಾಜ ಒಪ್ಪಿತ ಮೌಲ್ಯಗಳನ್ನು ಪ್ರಶ್ನಿಸುವ, ತಿರಸ್ಕರಿಸುವ ಮೂಲಕ ಸಮಾಜಕ್ಕೊಂದು ಸ್ತ್ರೀ ಸ್ವೇಚ್ಛೇ ಸ್ವಾತಂತ್ರ್ಯವನ್ನು ನೀಡುತ್ತದೆ. ರಾಜೇಶ್ವರಿಗೆ ಐಷಾರಾಮಿ ಜೀವನಕ್ಕಿಂತ ತನ್ನನ್ನು ಪ್ರೀತಿಸುವ ಜೀವದ ಅವಶ್ಯಕತೆ ತುಂಬಾ ಇತ್ತು. ಆಕಸ್ಮಿಕವಾಗಿ ಭೇಟಿಯಾಗುವ ಅಮೀರನ ಸಾಂಗತ್ಯಕ್ಕೆ ಒಳಗಾಗಿ ಕೊನೆಗೆ ಗಂಡ ಮತ್ತು ಮನೆ ತೊರೆದು ಪ್ರಕೃತಿಯ ಮೈದಾನಕ್ಕೆ ಬೀಳುತ್ತಾಳೆ. ಅಮೀರನ ಬಲವಾದ ಮೋಹ ಅವಳಿಗೆ ದೈವತ್ವ, ಪ್ರೇಮತ್ವ, ಅಮರತ್ವ ನೀಡುತ್ತದೆ. ಆರಂಭದಲ್ಲಿ ಕೇವಲ ಅಮೀರನ ದೂರದ ಸ್ಪರ್ಶ ಅವಳನ್ನು ಹೊಸ ಮನುಷ್ಯಳನ್ನಾಗಿ ಮಾಡುತ್ತದೆ. ’ಮನೆಯ ಪ್ರತಿ ಮೂಲೆಯನ್ನು ಬೆಳಗಿದೆ ನನ್ನ ಹೃದಯದ ಆನಂದದ ಜ್ಯೋತಿಯಿಂದʼ. ಎಂದು ಹೇಳುವ ಮೂಲಕ ಹೊಸ ಮನುಷ್ಯಳಾಗುವ ಕಡೆಗೆ ಮೊದಲ ಹೆಜ್ಜೆ ಇಡುತ್ತಾಳೆ. ಸಮಾಜ ಹೆಣ್ಣಿನ ಮೇಲೆ ಹೇರಲಾದ ಅಧಾರ್ಮಿಕ ನೀತಿಯನ್ನು ರಾಜೇಶ್ವರಿ ಪ್ರಶ್ನಿಸುತ್ತಲೇ ಹೋಗುತ್ತಾಳೆ. ಮನೆ ತೊರೆದು ಅಮೀರ್‌ನೊಂದಿಗೆ ಹೋದ ರಾಜೇಶ್ವರಿ ಅನುಭವಿಸಿದ ಆತ್ಮಸಂಗಾತ್ಯ ಎನ್ನುವಂತಹ ಪ್ರೀತಿ, ಶೃಂಗಾರದ ರಸಘಳಿಗೆಗಳು ತನಗೆ ತಾನೇ ಹೇಳಿಕೊಳ್ಳುವ ರೀತಿಯಲ್ಲಿವೆ. ಹೆಣ್ಣು ಲೈಂಗಿಕತೆ ಕುರಿತಾಗಿ ಮುಕ್ತತೆಯಿಂದ ಮಾತನಾಡುವುದು ಪುರುಷ ಪ್ರಧಾನ ಸಮಾಜದಲ್ಲಿ ನಿಷಿದ್ಧ. ಹೆಣ್ಣು ಗಂಡಿನ ವಿಷಯ ಕೇವಲ ನಾಲ್ಕು ಗೋಡೆಗೆ ಸೀಮಿತ ಮಾಡಿದ ಜಿಡ್ಡುಗಟ್ಟಿದ ಸಂಪ್ರದಾಯದ ವಿರುದ್ಧ ರಾಜೇಶ್ವರಿ ಪ್ರತಿಭಟಿಸುವುದು ಹೊಸ ಲೋಕದ ಬೆಳವಣಿಗೆಯ ದ್ಯೋತಕ ಎನ್ನಬಹುದು. ತಾನು ಅರಸಿ ಹೋಗಿದ್ದ ಅಮೀರನು ನಂತರದಲ್ಲಿ ಆ ಊರಿನ ತೋಳು ಸಾಬನ ಮಗಳ ಮೇಲೆ ಅನುರಕ್ತಿ ಬಯಸಿ ಹೋದಾಗ ಏನನ್ನೂ ಯೋಚಿಸದೆ ಅವಳೊಂದಿಗೆ ಮಾತನಾಡಿ ಅಮೀರನನ್ನು ಆನಂದದಲ್ಲಿ ಇರುವ ಹಾಗೆ ನೋಡಿಕೊಳ್ಳುತ್ತಾಳೆ. ಹೆಣ್ಣು ಎಂದರೆ ತ್ಯಾಗ, ಗಂಡು ಎಂದರೆ ಅಧಿಕಾರ, ದರ್ಪ ಎಂಬುದು ಅಮೀರನ ಮೂಲಕ ಮತ್ತೊಮ್ಮೆ ನಿರೂಪಣೆಗೊಳ್ಳುತ್ತದೆ.

ಒಮ್ಮೆ ರಾಜೇಶ್ವರಿಯನ್ನು ಕಾಣಲು ಅವಳ ಮಾವ ಬಂದಾಗ ಆಗ ರಾಜೇಶ್ವರಿ ದಿಟ್ಟತನದಿಂದ ಅವರನ್ನು ಪ್ರಶ್ನಿಸುತ್ತಾಳೆ. ಮೇಲ್ವರ್ಗದ ಸಮಾಜದ ಒಳಗಿನ ಕರ್ಮಠಗಳನ್ನು ಒಂದೊಂದಾಗಿ ಬಯಲಿಗೆಳೆಯುತ್ತಾಳೆ. ಒಂದು ಕಡೆ ಅವಳು ಹೇಳುವ ಮಾತು ’ಏನೂ ಇಲ್ಲ ಇದುವರೆಗು ಪಶುವಿಗಿಂತ ಕೀಳಾದ ಬದುಕನ್ನೆ ಬದುಕಿದ್ದೆ. ಈಗ ಪಶುವಾಗಿ ಸುಖ ಪಡುತ್ತಿದ್ದೀನಿ’ ಎಂದು ಹೇಳಿದಾಗ ಅವಳ ಮಾವ ದಿಗ್ಭ್ರಾಂತರಾಗುತ್ತಾರೆ. ನಾನು ಆಡಿ ಬೆಳೆಸಿದ ರಾಜೀ ಇವಳೇನಾ ಎಂದು. ಅವಳ ಮಾವ ನಮ್ಮ ಪ್ರೇಮದ ಸಮಯವನ್ನು ಕಾಲಹರಣ ಮಾಡುತ್ತಿದ್ದಾನೆ ಎಂದು ಹೇಳುತ್ತಾ, ʼಒಂದು ನಿಮಿಷ ಬಿಟ್ಟಿರದ ಪ್ರೇಮ ಅನುಭವಿಸುವುದಕ್ಕಿಂತ ಅದೃಷ್ಟ ಬೇರೇನಿದೆ ಹೆಣ್ಣಿಗೆ, ನಿನಗರ್ಥವಾಗಲ್ಲ ಬಿಡು’ ಎಂದು ನುಡಿಯುತ್ತಾಳೆ.

ಹೆಣ್ಣಿಗೆ ಉಣ್ಣಲು, ಉಡಲು ಕೊಟ್ಟರೆ ಸಾಲದು ಅವಳನ್ನು ಪ್ರೀತಿಯಿಂದ, ಅಪ್ಪುವ, ಮುದ್ದಿಸುವ, ಲಲ್ಲೆಗರೆಯುವ ಹಾಗೆ ಮಾಡಬೇಕು ಎಂಬುದನ್ನು ಕಾದಂಬರಿ ನಿರೂಪಿಸುತ್ತದೆ. ಅರಸಿಕರಿಗೆ ರಸಿಕತನದ ರುಚಿ ಗೊತ್ತಾಗುವುದಿಲ್ಲ. ಹೆಂಡತಿ ಎಂದರೆ ಕೆಲಸದವಳು ಎಂದು ಭಾವಿಸಿದ ಈ ಸಮಾಜಕ್ಕೆ ಒಂದು ಯಕ್ಷಪ್ರಶ್ನೆಯಾಗಿ ರಾಜೇಶ್ವರಿ ನಿಲ್ಲುತ್ತಾಳೆ. ಅವಳು ಎತ್ತುವ ಪ್ರಶ್ನೆ ನಮ್ಮನ್ನು ಚಕಿತರನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ. ರಾಜೇಶ್ವರಿ ಅಮೀರ್ ಪ್ರೇಮ ಎಂತಹದ್ದು ಎಂದು ಹೇಗೆ ಹೇಳೋದು ಉಣ್ಣೋಕೆ, ಉಡೋಕೆ ಏನು ಇಲ್ಲದ ಬದುಕು. ಬೇಂದ್ರೆ ಅವರು ಹೇಳುವ ಹಾಗೆ ’ನಾನು ಬಡವ ಆತ ಬಡವಿ ಒಲವೇ ನಮ್ಮ ಬದುಕು’ ಎನ್ನುವುದಕ್ಕೆ ಹತ್ತಿರವಾದದ್ದು.

ರಾಜೇಶ್ವರಿಯ ಕೆಲವು ನಿರ್ಧಾರಗಳು ಅವಸರವಾದವೋ ಅಥವಾ ಮೋಹಕ್ಕೆ ಒಳಗಾಗಿ ತನ್ನನ್ನೇ ತಾನು ಸಂಕಷ್ಟಕ್ಕೆ ದೂಡಿಕೊಂಡಳೋ ಏನೂ ಅರಿಯದು. ತನ್ನ ಗಂಡನ ಮೇಲಿನ ಜಿಗುಪ್ಸೆಯಿಂದ ಈ ನಿಲುವು ತಾಳಿದಳೋ ಗೊತ್ತಾಗದು. ಒಟ್ಟಿನಲ್ಲಿ ಅವಳಿಗೆ ತನ್ನನ್ನು ಸಂತೈಸುವ ಒಂದು ಜೀವದ ಅವಶ್ಯಕತೆ ಅಂತೂ ತುಂಬಾ ಇತ್ತು. ಹೇಗೆಂದರೆ ಸ್ವಲ್ಪ ದಿನ ಅಮೀರ್ ಮುನಿಸಿಕೊಂಡು ಹೋದಾಗ ಅವಳಿಗೆ ಹತ್ತಿರ ಆಗುವವನು ಮೀರಾ ಎಂಬ ಎಳೆ ಪ್ರಾಯದ ಹುಡುಗ. ಅವಳ ಪ್ರತಿಯೊಂದು ಕಷ್ಟಕ್ಕೂ ಕರಗಿ ನೀರಾದವನು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ರಾಜೇಶ್ವರಿಯ ಅಂತರಂಗದ ತುಮುಲ. ಒಂದು ಕಡೆ ಅಮೀರನಿಗೋಸ್ಕರ ತನ್ನ ಜೀವವನ್ನೇ ಮುಡಿಪಾಗಿಟ್ಟಿದ್ದಾಳೆ. ಇನ್ನೊಂದು ಕಡೆ ಮೀರಾನನ್ನು ಕಳೆದುಕೊಳ್ಳಲು ಸಿದ್ಧವಿಲ್ಲ. ಈ ದ್ವಂದ್ವಾತ್ಮಕ ನೀತಿ ಅವಳನ್ನು ಚಿಂತೆಗೀಡು ಮಾಡಿದೆ. ಕೆಲವು ಸಲ ʼಮೀರಾ ನನ್ನ ಮೀರಾʼ ಎಂದು ಕನವರಿಸಿದ್ದಾಳೆ. ಇದನ್ನು ಕಂಡ ಅಮೀರ್ ಕೆಂಡಮಂಡಲನಾಗುತ್ತಾನೆ. ಮೀರಾನಿಗೂ ರಾಜೇಶ್ವರಿಯ ಮೇಲೆ ಪ್ರೇಮಾಂಕುರವಾಗಿ ಅವಳನ್ನು ಸೈತಾನನಾದ ಅಮಿರ್ ನಿಂದ ಕಾಪಾಡಿ ದೂರ ಕರೆದುಕೊಂಡು ಹೋಗಲು ನಿರ್ಧರಿಸುತ್ತಾನೆ. ಅಂತಹದೇ ಸಂದರ್ಭದಲ್ಲಿ ಅಮೀರ್‌ನ ಕೊಲೆ ಆಗುತ್ತದೆ. ತಾನೇ ಮಾಡಿದ್ದು ಎಂದುಕೊಂಡ ಮೀರಾ ಪೊಲೀಸರಿಗೆ ಶರಣಾಗತನಾಗುತ್ತಾನೆ. ಕೊಲೆ ಮೀರಾ ಮಾಡಿದ್ದು ಅಲ್ಲ, ಅಮೀರ್ ತನ್ನನ್ನೇ ತಾನೆ ಹತ್ಯೆಗೈದುಕೊಂಡಿದ್ದು ʼಆ ಮೀರಾನೊಂದಿಗೆ ನಿನ್ನನ್ನ ಹಂಚಿಕೊಳ್ಳುತ್ತಿನಿ ಅಂದುಕೊಂಡಿಯಾ? ತುರುಕ ಮಗ’ ಎಂದು ರಾಜೇಶ್ವರಿಗೆ ಹೇಳಿ ಪ್ರಾಣ ಬಿಡುತ್ತಾನೆ.

’ಅಬ್ಧಿಯೊಮೊರ್ಮೆ ಕಾಲವಶದಿಂ ಮರ‍್ಯಾದೆಯಂ ದಾಂಟದೇ’ (ಕಾಲದ ಪ್ರೇರಣೆಯಿಂದಾಗಿ ಸಮುದ್ರ ಕೂಡ ತನ್ನ ಮೇರೆಯನ್ನು ಒಮ್ಮೊಮ್ಮೆ ಮೀರುತ್ತದೆ ಎನ್ನುವುದು ಈ ಸಾಲಿನ ಅರ್ಥ. ಈ ಸಾಲಿಗೆ ಪೂರಕವಾಗಿ ರಾಜೇಶ್ವರಿ, ಅಮೀರ್, ಮೀರಾ ಸಮಾಜದ ಮರ್ಯಾದೆ ಕಟ್ಟುಪಾಡುಗಳನ್ನು ಮೀರಿ ನಿಂತವರು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಭಾಷೆಗಿಂತ ಭಾವನೆ ಮುಖ್ಯ ಎನ್ನುವ ಮಾತಿನಂತೆ ಮೂಲ ಭಾಷೆಗೆ ಧಕ್ಕೆ ಬಾರದ ಹಾಗೆ ನಮ್ಮಿಷ್ಟದ ಕವಿ ರಮೇಶ ಅರೋಲಿ ಅವರು ಸುಂದರವಾಗಿ ಅನುವಾದಿಸಿದ್ದಾರೆ.

‍ಲೇಖಕರು Admin

October 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: