ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲಿ ಜೋಗಿ ಗುಡ್ಡದತ್ತ…

ನೆಂಪೆ ದೇವರಾಜ್

ನಿನ್ನೆ ಪುನರ್ವಸು ಮಳೆ ತನ್ನ ಲಾಗಾಯ್ತಿನ ಆರ್ಭಟವನ್ನು ತೋರಿಸುತ್ತಿತ್ತು. ವುಡ್ರು ಅಂಗಾಲನ್ನು ಕೊರೆದು ಕಾಲೊಳಗಿನಿಂದ ಹೋಗಿ ಎದೆ ಹೊಟ್ಟೆಯನ್ನೆಲ್ಲ ಮರಗಟ್ಟಿಸುವ ಪ್ರಯತ್ನದಲ್ಲಿತ್ತು.. ಇಂತಹ ಹೊತ್ತಲ್ಲಿ ನಮ್ಮೂರ ಹತ್ತಿರದ ಜೋಗಿ ಗುಡ್ಡದ ಉಪ ಗುಡ್ಡ ಕರಿ ಗುಡ್ಡದತ್ತ ಹೊರೆಟೆವು. ತೀರ್ಥಹಳ್ಳಿಯ ಇಸ್ಮಾಯಿಲ್ ಮತ್ತು ಗೆಳೆಯರ ತಂಡ ನಮ್ಮೊಂದಿಗೆ ಜೊತೆಗೂಡಿತು.

ಸ್ಟೂಡೆಂಟ್ ಇಸ್ಲಾಮಿಕ್ ಸಂಘಟನೆಯ ಎಂಟತ್ತು ಮಂದಿ ಗಿಡಗಂಟಿಗಳ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಕೇಳುತ್ತಾ, ಉತ್ತರ ಪಡೆಯುತ್ತಾ ನಡೆಯತೊಡಗಿತು.. ಕಾಡೊಳಗಿನ ಪ್ರತಿ ಗಿಡ, ಬಳ್ಳಿ, ಹೂಗಳ ಜೊತೆಗೆ, ಪೊಟರೆ, ಮೊಟ್ಟುಗಳಲ್ಲದೆ ಮುಕ್ಕುಡುಕ, ತಗ್ಗಿ, ಕಾರೆ ಗಿಡಗಳ ಔಷಧೀಯ ಮಹತ್ವಗಳ ಬಗ್ಗೆಯೂ ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲಿ ಹೇಳುತ್ತಾ,… ಟ್ರಕ್ಕಿಂಗ್ ಮಾಡುತ್ತಾ.. ಹೋಗುತ್ತಿದ್ದುದರ ಖುಷಿ ಅಪರೂಪದ್ದು.

ಇಸ್ಮಾಯಿಲ್ ಮತ್ತು ಅವರ ಯುವ ತಂಡದ ಸದಸ್ಯರುಗಳ ಪರಿಸರ ಪ್ರೀತಿ, ಕುತೂಹಲ, ಮುಗ್ಧತೆಗಳು ಆರೋಗ್ಯಯುತ ಮನಸ್ಥಿತಿಯೊಂದರ ದ್ಯೋತಕವಾಗಿ ಕಂಡು ಬಂದವು. ಹೊನ್ನಾನಿ ದೇವರಾಜ್, ಹರಳೀಮಠದ ಯಾಕೂಬ್, ಮೇಲಿನ ಕುರುವಳ್ಳಿಯ ನಿರಂಜನ ಉರುಫ್ ಪ್ರದೀಪ್ ಮತ್ತು, ಶಶಿ ಕುಮಾರ್ ಕರಿಗುಡ್ಡದ ನೆತ್ತಿಗೆ ಹೊಯ್ಯುತ್ತಿದ್ದ ಮಳೆಯನ್ನು ಅಪೂರ್ವ ಕ್ಷಣಗಳೆಂಬಂತೆ ಬೆರಗುಗಣ್ಣುಗಳಿಂದ ಬೆಟ್ಟದಡಿಯಲ್ಲಿದ್ದ ಹಸಿರ ಹೊನ್ನನ್ನು ನೋಡುತ್ತಾ ಅನುಭವಿಸುತ್ತಿದ್ದರು.

ನಿಶ್ಚಲ ಜಾದೂಗಾರ್ ಅಂತೂ ಮಳೆ ಚಳಿಯಿಂದ ಬಿಡುಗಡೆ ಹೊಂದಲು ಕುರುವಳ್ಳಿಯಿಂದ ಬರುವಾಗಲೆ ಪ್ಲಾಸ್ಟಿಕ್ ಕೊಟ್ಟೆಯೊಳಗೆ ತೂರಿಕೊಂಡಿದ್ದನು. ಕರಿಗುಡ್ಡದ ಸುತ್ತ ಸ್ವಾಭಾವಿಕವಾಗಿ ಬೆಳೆದು ನಿಲ್ಲ ಬಹುದಾಗಿದ್ದ ಅಗಾಧ ಸಸ್ಯ ಸಂಪತ್ತನ್ನು ಧರೆಗುರುಳಿಸಿ ಅಕೇಶಿಯಾ ಎಂಬ ಏಕ ಜಾತಿಯ ಸಸ್ಯವನ್ನು ಬೆಳೆಸಲು ಅರಣ್ಯ ಇಲಾಖೆ ನಡೆಸಿದ್ದ ವಿಕೃತ ಪ್ರಯತ್ನದ ಜ್ವಲಂತ ಸಾಕ್ಷಿಗಳು ಎದೆಗೆ ಒದೆಯುತ್ತಿದ್ದವು.

ಕರಿಗುಡ್ಡದ ಸಾಮ್ರಾಟನಂತೆ ಅಗಾಧ ಹಸಿರನ್ನು ಹೊದ್ದು ಆಕಾಶದ ಎತ್ತರಕ್ಕೆ ಬೆಳೆದು ನಿಂತಿದ್ದ ಜೋಗಿ ಗುಡ್ಡದ ಮೇಲೆ ಅಕೇಶಿಯಾದ ಕರಿ ನೆರಳು ಕವಿಯಲು ಸಾಧ್ಯವಾಗದ್ದೊಂದು ಸಂತಸದ ವಿಷಯ. ನಮ್ಮ ಜೊತೆಗಿನ ಯುವಕರ ತಂಡ ಜೋಗಿ ಗುಡ್ಡವನ್ನು ಹತ್ತುವ ಉತ್ಸಾಹ ತೋರಿತಾದರೂ ಮಳೆಯ ಜೊತೆ ಜೊತೆಯೇ ಅಭೇಧ್ಯವಾಗಿ ಬೆಳೆದಿದ್ದ ಉಡುಕಲು, ಗಿಜುರು, ಬಳ್ಳಿ, ಮೊಟ್ಟುಗಳಿಗೆ ಬೆದರಿದ್ದರಿಂದ ಉತ್ಸಾವನ್ನು ಆ ಕ್ಷಣದಲ್ಲೆ ಅದುಮಿಕೊಳ್ಳಬೇಕಾಯಿತು.

ಅದೂ ಅಲ್ಲದೆ ಎರಡು ವರ್ಷಗಳ ಹಿಂದೆ ನಾನೂ, ಹೊನ್ನಾನಿ ಮತ್ತು ನನ್ನ ಮಗ ಅರೋಚಿ ಜೋಗಿ ಗುಡ್ಡವನ್ನು ಹತ್ತಿ ಇನ್ನೊಂದು ಪಥದಿಂದ ಇಳಿಯುವಾಗ ಅನುಭವಿದ ಪಡಿಪಾಟಲುಗಳು ನಮ್ಮೊಳಗೆ ಇನ್ನೂ ಜೀವಂತವಾಗಿದ್ದವು. ಜೋಗಿ ಗುಡ್ಡದ ಬುಡದಿಂದಲೇ ಅದರ ಭವ್ಯತೆಯನ್ನೂ, ಅದು ತನ್ನ ಮೇಲೆ ಸುರಿದು ಕೊಳ್ಳುತ್ತಿದ್ದ ಮಳೆಯನ್ನೂ, ತನ್ನ ಮೇಲೆ ಮನುಷ್ಯ ನಿರಂತರವಾಗಿ ನಡೆಸಿದ್ದ ದಾಳಿಯನ್ನು ಹೇಳುತ್ತಿದ್ದ ಬಗೆಯನ್ನು ನೋಡಿ ನೋಡಿಯಷ್ಟೇ ಹಿಂತಿರುಗಬೇಕಾಯಿತು..

‍ಲೇಖಕರು Admin

July 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: