ಮಹಮ್ಮದ್ ಶರೀಫ್ ಕಾಡುಮಠ
**
ಮೊಗೆಮೊಗೆದರೂ ಮುಗಿಯದಷ್ಟು
ಉಸಿರುಸಿರಲಿ ಬೆಸೆಯುವಷ್ಟು
ಬಿಟ್ಟಿರಲಾರದಷ್ಟರ ಮಟ್ಟಿಗೆ
ಪ್ರೀತಿಸಿದವರಿಗೊಂದು
ಕೋಣೆ ಸಿಗಬಹುದಾ
ಊರ ಸದ್ದಿರದ
ಗೌಜಿ ಗದ್ದಲವಿರದ
ಜಾಗ ಹುಡುಕಿ ಮಾತಿಗೆ ಕೂತರೆ
ಜಾತಿ ಹುಡುಕಿ ಬಂದು
ತಡೆವವರ ಹೊಡೆವವರ
ಕಾಟ ತಪ್ಪುವುದಿಲ್ಲ
ಕಾಫಿ ಶಾಪಿನಲಿ ಕೂತು
ಮಾತು ಶುರು ಹಚ್ಚುವ ಮುನ್ನ
ಕಾಫಿ ಬಿಸಿ ಆರುವ ಮುನ್ನ
ಎದೆ ನಡುಗಿ ನಡು ಬೀದಿಯಲಿ
ಅವರಿವರೆಲ್ಲರ ನಡುವೆ
ಕತ್ತುಪಟ್ಟಿ ಕೈಗೆ ಕೊಟ್ಟು
ಕೈಮುಗಿದು ನಿಲ್ಲಬೇಕಲ್ಲ
ಕಿವಿ ಸಹಿಸದ
ಅತಿಕೊಳಕು ಭಾಷೆಯಲಿ
ಅವರುಗಿವ
ಸಂಸ್ಕೃತಿಯ ಹಿತವಚನ
ಕೇಳಬೇಕಲ್ಲ
ಕಿವಿಯಿರದ
ನಾಲ್ಕು ಗೋಡೆಯ ನಡುವೆ
ದಿನವಿಡೀ ಮನಬಂದ ಹಾಗೆ
ನಮ್ಮಲ್ಲೆ ನಾವು
ಕಳೆದು ಬಿಡಬಹುದೆಂದು
ಕನಸು ಕಟ್ಟಿ ಕೋಣೆ ಸೇರಿ
ಬಾಗಿಲು ಮುಚ್ಚಿದರೂ
ಹಿಂಬಾಲಿಸುತ್ತದಲ್ಲ
ಹಿಂಡು ಕೋಣಗಳಂತೆ
ಪುಂಡು ಪೋಕರಿಗಳ ತಂಡ
ಕಡಲ ಕಿನಾರೆಯಲಿ
ಕೈಕೈ ಹಿಡಿದು
ನಾಲ್ಕು ಹೆಜ್ಜೆ ನಡೆಯಬೇಕೆಂದರೆ
ದಿಕ್ಕು ದಿಕ್ಕಿಗೂ ಹದ್ದಿನ ಕಣ್ಣು
ಯಾರ ಗೋಜಿಗು ಇರದೆ
ಕುಳಿರುಗಾಳಿಯ ಹಸಿರ ಮಡಿಲಲಿ
ಅವಳ ಮಡಿಲಲಿ ತಲೆಯಿಟ್ಟು
ಹಳೆಕತೆಯ ಆಗಾಗ ಕೆದಕುತ್ತ
ತುಸುಹೊತ್ತು ಕಳೆಯಬೇಕೆನಿಸಿ
ಪುಟ್ಟ ಬೆಟ್ಟ ಹತ್ತಿದರೆ
ಜಾಡು ಹಿಡಿದು ಬೆನ್ನಟ್ಟುವರಲ್ಲ
ಮನೆಯವರ ಕರೆದು ತಂದು
ನಿಲ್ಲಿಸಿ ಖಾಕಿ ಮುಂದೆ
ವಾಟ್ಸಾಪ್ ಫೇಸ್ಬುಕ್ಕಿನಲಿ
ವಿಡಿಯೊ ಹರಿದು
ಪತ್ರಿಕೆ ಟಿವಿ ಚಾನೆಲ್ಲುಗಳಲಿ
ಬಿಸಿಬಿಸಿ ಸುದ್ದಿ
ಹಿಡಿ ಪ್ರೀತಿ ಹಿಡಿದು
ಈ ನೆಲದೊಳಿನ್ನು
ಯಾವ ಮೂಲೆ ಸುತ್ತಬೇಕು
ನಿರಾಳತೆಯ ನೆರಳು ಹುಡುಕುತ್ತ
ನೀರೊಳಗೆ ಅವಿತು
ಬಾನಿನಲಿ
ವಾಯುಶಕ್ತಿಯಲಿ ನಿಂತು
ಪ್ರೇಮಿಸಲಾಗುವುದಿಲ್ಲವಲ್ಲ
ಬೇರೇನಿಲ್ಲ
ಜಾತಿಯ ಹಗ್ಗ ಸೊಂಟಕ್ಕೆ ಬಿಗಿದು
ಉಸಿರು ನಿಂತ ಜೋಡಿದೇಹ
ನದಿದಡದಲಿ ಪತ್ತೆಯಾಗುವಾಗ
ಮರ್ಯಾದೆಯ ಮರದ ಕೊಂಬೆಗೆ
ನೇಣು ಬಿಗಿದುಕೊಂಡು
ಪ್ರೀತಿ ಅಸುನೀಗುವಾಗ
ಧರ್ಮದ ಕತ್ತಿಯಲಗಿಗೆ
ಪ್ರೀತಿ ಕೊಟ್ಟವನ ಕತ್ತು ಸಿಕ್ಕಿ
ನೆತ್ತರು ನೆಲ ಮುಟ್ಟಿ
ಅವಳಾಕ್ರಂದನ ಮುಗಿಲು ಮುಟ್ಟಿ
ಬಟ್ಟೆ ಸುತ್ತಿದ ದೇಹ
ಮಣ್ಣು ಸೇರುವಾಗೆಲ್ಲ
ಬೆನ್ನ ಹಿಂದಿಂದ ಯಾರೋ ಬಂದು
ಕರುಳನೆಳೆದಷ್ಟು ಯಾತನೆ
ಬಳಿ ಕೂತು
ನಾಕೇ ನಾಕು ಮಾತು
ಆಡುವುದಕ್ಕೂ
ಉಸಿರುಕಟ್ಟಿ
ನಿಲ್ಲುವಲ್ಲಿ
ಇನ್ನಾದರೂ
ಪ್ರೀತಿಸಿದವರಿಗೊಂದು
ಕೋಣೆ ಸಿಗಬಹುದಾ
0 ಪ್ರತಿಕ್ರಿಯೆಗಳು