ದೇಶ ವಿಘಟನೆಯ ಮೂಲಕ ರಾಷ್ಟ್ರ ನಿರ್ಮಾಣ ಸಾಧ್ಯವಿಲ್ಲ..

ಮೂಲ: ನೀರ ಚಂಧೋಕ್ / ದ ಹಿಂದೂ

ಅನುವಾದ : ನಾ ದಿವಾಕರ

ಭಾರತದಲ್ಲಿರುವ ಬಹುತೇಕ ಭಾಷಿಕ ಮತ್ತು ಜನಾಂಗೀಯ ಗುಂಪುಗಳು ತಮ್ಮದೇ ಆದ ರಾಷ್ಟ್ರವನ್ನು ಹೊಂದಲು ಬಯಸುತ್ತವೆ. ಈ ಧ್ಯೇಯವನ್ನು ಸಾಧಿಸಲು ಉಗ್ರವಾದಿಗಳು ಸರ್ಕಾರದ ವಿರುದ್ಧ ಮತ್ತು ಇತರ ಗುಂಪುಗಳ ವಿರುದ್ಧ ಸಶಸ್ತ್ರ ಹೋರಾಟಗಳಿಗೆ ಮೊರೆ ಹೋಗಿದ್ದಾರೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಕೇಂದ್ರ ಸರ್ಕಾರ ಸಂವಿಧಾನ ರೂಪಿಸಿದ್ದ ವಿಧಿ 370ನ್ನು ರದ್ದುಪಡಿಸಲು ಮುಂದಾಗಿರುವುದು ಮತ್ತು ಜಮ್ಮು-ಕಾಶ್ಮೀರ ರಾಜ್ಯವನ್ನು ವಿಭಜಿಸಿರುವುದು ದೇಶಾದ್ಯಂತ ಪ್ರಶಂಸೆ, ಸಂಭ್ರಮಾಚರಣೆಗಳಿಗೆ ಎಡೆಮಾಡಿಕೊಟ್ಟಿರುವುದು ಅಚ್ಚರಿ ಮೂಡಿಸುತ್ತದೆ. ಪ್ರಜೆಗಳ ಕ್ರೋಢೀಕರಣ ಮತ್ತು ಜನಪ್ರಿಯ ಹೋರಾಟಗಳ ಮೂಲಕವೇ ಪ್ರತ್ಯೇಕ ರಾಜ್ಯವಾಗಿ ರೂಪುಗೊಂಡ ತೆಲಂಗಾಣ ಸರ್ಕಾರವೂ ಸಹ ಜಮ್ಮು-ಕಾಶ್ಮೀರದ ವಿಭಜನೆಗೆ ಬೆಂಬಲ ನೀಡಿರುವುದು ಅಚ್ಚರಿ ಮೂಡಿಸುತ್ತದೆ.

ದೆಹಲಿಯನ್ನು ಪರಿಪೂರ್ಣ ರಾಜ್ಯವನ್ನಾಗಿ ಮಾಡುವಂತೆ ಸತತವಾಗಿ ಆಗ್ರಹಿಸುತ್ತಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಸಹ ಈ ಮಸೂದೆಯ ಪರ ವಹಿಸಿದ್ದಾರೆ. ಒಡಿಷಾದ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳ ಸರ್ಕಾರವೂ ಅನುಮೋದಿಸಿದೆ.

ತಮ್ಮ ರಾಜ್ಯದ ಅಸ್ತಿತ್ವವನ್ನು ಪಲ್ಲಟಗೊಳಿಸಲು ಯತ್ನಿಸುವ ಕೇಂದ್ರ ಸರ್ಕಾರದ ಬಗ್ಗೆ ಪ್ರಾದೇಶಿಕ ಪಕ್ಷಗಳು ಎಚ್ಚರದಿಂದಿರಬೇಕಾಗುತ್ತದೆ. ಈಗ ಕೇಂದ್ರ ಸರ್ಕಾರ ಯಾವುದೇ ರಾಜ್ಯವನ್ನು ತನ್ನದೇ ಆದ ಕಾರಣಗಳನ್ನು ಮುಂದಿಟ್ಟು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸುವ ಅಧಿಕಾರವನ್ನು ಸಂಪಾದಿಸಿದೆ. ದುರದೃಷ್ಟವಶಾತ್ ಇದು ಒಂದು ಪರಂಪರೆಯನ್ನು ಹುಟ್ಟುಹಾಕಿದೆ.

ತನ್ನ ವಕ್ರದೃಷ್ಟಿಯ ನೀತಿಗಳನ್ನು ಜಾರಿಗೊಳಿಸುವುದನ್ನೇ ಕಾರ್ಯಸೂಚಿಯನ್ನಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ದೇಶದ ಒಕ್ಕೂಟ ವ್ಯವಸ್ಥೆಯನ್ನು ಸಮರ್ಥಿಸುವ ಮತ್ತು ರಕ್ಷಿಸುವ ಪ್ರತಿಯೊಂದು ಸಂಹಿತೆ, ಪ್ರತಿಯೊಂದು ನೀತಿ ಮತ್ತು ಪ್ರತಿಯೊಂದು ಸಾಂವಿಧಾನಿಕ ನಿಯಮವನ್ನೂ ಉಲ್ಲಂಘಿಸಿರುವುದು ಸ್ಪಷ್ಟ. ಹೀಗಿರುವಾಗಲೂ ಪ್ರಾದೇಶಿಕ ಸ್ವಾಯತ್ತತೆಯನ್ನು ಕರುಣಿಸುವ ವಿಧಿ 370ನ್ನು ಏಕೆ ಉಲ್ಲಂಘಿಸಬಾರದು ಎಂದು ಯಾರೂ ಕೇಳುತ್ತಿಲ್ಲ. ಕಾರಣ, ಭಾರತದಂತಹ ಬಹುಮುಖಿ, ಸಂಕೀರ್ಣ ಸಮಾಜಕ್ಕೆ ಪ್ರಾದೇಶಿಕ ಸ್ವಾಯತ್ತತೆ ಅನಿವಾರ್ಯ.

1989ರಲ್ಲಿ ಬರ್ಲಿನ್ ಗೋಡೆಯ ಪತನದ ನಂತರದಲ್ಲಿ ಜಗತ್ತಿನಾದ್ಯಂತ ಈ ರಾಜಕೀಯ ಪ್ರಜ್ಞೆ ಜಾಗೃತವಾಗಿದೆ. ಈ ಸಂದರ್ಭದಲ್ಲಿ ಅನೇಕ ದೇಶಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದ್ದೇ ಅಲ್ಲದೆ ಹಳೆಯ ದೇಶಗಳ ಪಳೆಯುಳಿಕೆಗಳ ಮೇಲೆ ಹೊಸ ರಾಷ್ಟ್ರಗಳು ಹುಟ್ಟಿಕೊಂಡವು. ಹತ್ಯಾಕಾಂಡ, ಜನಾಂಗೀಯ ದ್ವೇಷ ಮತ್ತು ಹಿಂಸಾಕಾಂಡಗಳು ತಾಂಡವವಾಡಿದವು.

ದೇಶಗಳ ವಿಭಜನೆ ಮತ್ತು ಹೊಸ ದೇಶಗಳ ನಿರ್ಮಾಣವನ್ನು ಏಕಕಾಲಕ್ಕೆ ಎದುರಿಸಿದ ಜಗತ್ತಿನಲ್ಲಿ ನಿದ್ರಾವಸ್ಥೆಯಲ್ಲಿದ್ದ ಪ್ರತ್ಯೇಕತಾ ಚಳುವಳಿಗಳಿಗೆ ಮರುಜೀವ ಬಂದಿತ್ತು.

ಭಾರತದಲ್ಲಿ ನಾಗಾ ಮತ್ತು ಬೋಡೋ ಚಳುವಳಿಗಳು, ರಷ್ಯಾದಲ್ಲಿ ಚೆಚನ್ ಪ್ರಜೆಗಳು, ಅಜರ್ಬೇಜಾನ್‍ನಲ್ಲಿ ನಾಗೊರ್-ನೊ-ಕರಾಬಕ್, ಮಾಲ್ಡೋವಾದಲ್ಲಿ ಟ್ರಾನ್ಸ್ ನೀಸ್ಟರ್, ಪಾಕಿಸ್ತಾನದಲ್ಲಿ ಬಲೂಚಿಸ್ಥಾನ, ಇಂಡೋನೇಷಿಯಾದಲ್ಲಿ ಪಶ್ಚಿಮ ಪಪುವಾ ಮತ್ತು ಒರೋಮಾ, ಇಥಿಯೋಪಿಯಾ-ಸೊಮಾಲಿ ಪ್ರಾಂತ್ಯದಲ್ಲಿ ಸೊಮಾಲೀಯರು, ಸೂಡಾನ್ ಮತ್ತು ಟರ್ಕಿಯಲ್ಲಿ ಕುರ್ಡ್ ಜನಾಂಗ, ಶ್ರೀಲಂಕಾದ ತಮಿಳರು, ಜಾರ್ಜಿಯಾದಲ್ಲಿ ದಕ್ಷಿಣ ಒಸೆಟಿಯಾ ಮತ್ತು ಅಬಕಾಜಿಯಾ ಈ ಬೆಳವಣಿಗೆಗಳ ನಡುವೆಯೇ ಭಾರತದ ಕಾಶ್ಮೀರದಲ್ಲೂ ಪ್ರತಿರೋಧ ರಾಜಕಾರಣ ರೂಪುಗೊಂಡಿತ್ತು.

ಕೆನಡಾ, ಬ್ರಿಟನ್ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ಕ್ರಮವಾಗಿ ಕ್ಯೂಬೆಕ್, ಸ್ಕಾಟ್‍ಲೆಂಡ್ ಮತ್ತು ಕಟಲೋನಿಯಾ ಪ್ರಾಂತ್ಯಗಳಲ್ಲಿ, ಬಾಸ್ಕ್ ದೇಶ ಮತ್ತು ಕೊರ್ಸಿಯಾಗಳಲ್ಲಿ ಸ್ವಾತಂತ್ರ್ಯದ ಕೂಗು ಕೇಳಿಬರುತ್ತಲೇ ಇದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಲೆದೋರಿರುವ ಜನಾಂಗೀಯ ಕಗ್ಗೊಲೆ ಮತ್ತು ಹಿಂಸಾಕಾಂಡಗಳನ್ನು ಗಮನಿಸಿಯೇ ಅನೇಕ ವಿದ್ವಾಂಸರು, ವಿಭಿನ್ನ ಭಾಷೆಗಳನ್ನು ಮಾತನಾಡುವ, ವಿಭಿನ್ನ ದೇವರುಗಳನ್ನು ಆರಾಧಿಸುವ, ವಿಭಿನ್ನ ನಂಬಿಕೆಗಳನ್ನು ಹೊಂದಿರುವ ಜನರು ಬಹುಮುಖಿ ಸಮಾಜದಲ್ಲಿ ಹೇಗೆ ಬಾಳಲು ಸಾಧ್ಯ ಎಂಬ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ.

ಈ ಪ್ರಶ್ನೆಗೆ ಉತ್ತರ ಶೋಧಿಸುತ್ತಲೇ ಅನೇಕ ವಿದ್ವಾಂಸರು  ಸಹಬಾಳ್ವೆಗೆ ಒಕ್ಕೂಟ ವ್ಯವಸ್ಥೆಯೇ ಉತ್ತಮ ಪರಿಹಾರ ಎಂದು ವ್ಯಾಖ್ಯಾನಿಸಿದ್ದಾರೆ. ಬಹುಸಂಸ್ಕೃಂತಿ, ಬಹುಮುಖಿ ಸಮಾಜಗಳಲ್ಲಿ ಪ್ರಜಾತಂತ್ರ ಮೌಲ್ಯಗಳಿಗೆ ಧಕ್ಕೆ ಉಂಟು ಮಾಡುವ ಅಧಿಕಾರ ಕೇಂದ್ರೀಕರಣಕ್ಕೆ ಪ್ರತಿರೋಧಕವಾಗಿ ಒಕ್ಕೂಟ ವ್ಯವಸ್ಥೆಯನ್ನು ಗತ ಕಾಲದಿಂದಲೂ ಸಮರ್ಥಿಸಲಾಗುತ್ತಿದೆ.

ಅಧಿಕಾರ ವಿಕೇಂದ್ರೀಕರಣ ಮತ್ತು ಪ್ರಾದೇಶಿಕ ಸ್ವಾಯತ್ತತೆ ಜವಾಬ್ದಾರಿಯುತ ಮತ್ತು ಉತ್ತರದಾಯಿತ್ವ ಇರುವ ಆಳ್ವಿಕೆಗೆ ಎಡೆ ಮಾಡಿಕೊಡುತ್ತದೆ. ಇದರಿಂದ ಆಡಳಿತ ದಕ್ಷತೆ ಹೆಚ್ಚಾಗುವುದೇ ಅಲ್ಲದೆ ಹಣಕಾಸು ನಿರ್ವಹಣೆಯಲ್ಲಿ ಪ್ರಾಮಾಣಿಕತೆ ಮತ್ತು ಜನರ ಭಾಗವಹಿಸುವಿಕೆಯೂ ಹೆಚ್ಚಾಗುತ್ತದೆ.  ಆದರೆ ವ್ಯಕ್ತಿಗತ ನೆಲೆಯಲ್ಲಿ ಪ್ರಜೆಗಳು ಆರ್ಥಿಕ ಸೌಲಭ್ಯಗಳನ್ನು ಬಯಸುವುದೇ ಅಲ್ಲದೆ ತಮ್ಮದೇ ಆದ ಅಸ್ಮಿತೆಯನ್ನೂ ಬಯಸುತ್ತಾರೆ ಎನ್ನುವ ಸತ್ಯವನ್ನು 1990ರ ದಶಕದ ಸಂದರ್ಭದಲ್ಲಿ ವಿದ್ವಾಂಸರು ಗುರುತಿಸಿದ್ದರು.

ಭಾಷಿಕ, ಮತ ಧಾರ್ಮಿಕ ಅಥವಾ ಸಹಬಾಳ್ವೆಯ ಸಂಪ್ರದಾಯಗಳನ್ನೊಳಗೊಂಡ ಸಮುದಾಯವನ್ನು ವ್ಯಕ್ತಿಗತ ನೆಲೆಯಲ್ಲಿ ಬಯಸಲಾಗುತ್ತದೆ ಎನ್ನುವುದನ್ನು ಗ್ರಹಿಸಿದ್ದರು. ಒಂದು ಸಮಾಜದಲ್ಲಿ ಕೆಲವರು ತಮ್ಮ ಸಮುದಾಯದೊಡನೆ ಗಾಢವಾಗಿ ಗುರುತಿಸಿಕೊಳ್ಳುತ್ತಾರೆ. ಇನ್ನು ಕೆಲವರು ಈ ನಿಟ್ಟಿನಲ್ಲಿ ಹೆಚ್ಚಿನ ಆಸ್ಥೆ ವಹಿಸುವುದಿಲ್ಲ ಮತ್ತು ಇನ್ನೂ ಕೆಲವರು ಇತರ ಸಮುದಾಯಗಳ ನೀತಿ-ನಿಯಮಗಳನ್ನೂ ಅನುಸರಿಸಲು ಸಿದ್ಧರಾಗಿರುತ್ತಾರೆ.

ಆದರೆ ಬಹುತೇಕ ಸಂದರ್ಭದಲ್ಲಿ, ಬಹುಪಾಲು ಜನರು, ತಮ್ಮ ಹುಟ್ಟಿನ ಮೂಲಕವೇ ಸಮುದಾಯದ ಅಸ್ಮಿತೆಯನ್ನೂ ಗುರುತಿಸಿಕೊಳ್ಳುತ್ತಾರೆ.  ಏಕೆಂದರೆ ಮನುಷ್ಯನ ಜೀವನದಲ್ಲಿ ಬದುಕನ್ನು ಕಲಿಸಿಕೊಡುವ ಪ್ರಕ್ರಿಯೆಯಲ್ಲಿ ಅಕ್ಷರಾಭ್ಯಾಸದಿಂದ ಹಿಡಿದು, ನಮ್ಮವರು ಯಾರು, ಅವರೊಡನೆ ಹೇಗೆ ಬದುಕಬೇಕು, ನಮ್ಮಂತೆ ಇರುವವರು ಯಾರು, ನಮ್ಮಂತೆ ಇಲ್ಲದವರು ಯಾರು ಎನ್ನುವುದನ್ನು ಕಲಿಸಿಕೊಡುವುದೇ ಈ ಮೂಲಕ.

ಈ ಭಾಷಿಕ ಅಕ್ಷರಗಳೇ ನಮ್ಮತನವನ್ನು ನಮ್ಮಲ್ಲಿ ಬೆಳೆಸುತ್ತಾ ಬರುತ್ತದೆ, ನಮ್ಮ ಜಗತ್ತನ್ನು ರೂಪಿಸುತ್ತದೆ, ಇತರರೊಡನೆ ನಮ್ಮ ಸಂಬಂಧಗಳನ್ನೂ ರೂಪಿಸುತ್ತದೆ. ಮಾನವ ಜೀವನದಲ್ಲಿ ಸಮುದಾಯ ಇಷ್ಟೊಂದು ಮಹತ್ವದ ವಿದ್ಯಮಾನವಾಗಿದ್ದಲ್ಲಿ ಜನರಿಗೆ ತಮ್ಮ ಸಮುದಾಯದೊಡನೆ ಸಹಬಾಳ್ವೆ ನಡೆಸುವ ಅವಕಾಶ ಒದಗಿಸುವುದು ಅನಿವಾರ್ಯವಾಗುತ್ತದೆ.

ಹಾಗಾಗಿ ಯಾವುದೇ ಪ್ರಭುತ್ವ ಅಥವಾ ಸಮಾಜ ಯಾವುದೇ ಸಮಾಜಕ್ಕೆ ಅಪಾಯ ಉಂಟು ಮಾಡಬಾರದು.  ಒಂದು ಸಮುದಾಯವನ್ನು ವ್ಯತಿರಿಕ್ತವಾಗಿ ಬಿಂಬಿಸುವ ಮೂಲಕ ಮತ್ತು ಹಿಂಸಾತ್ಮಕ ಚಟುವಟಿಕೆಗಳಿಂದ ಚಿತ್ರಿಸುವ ಮೂಲಕ ಭಾರತದ ಪ್ರಜೆಗಳನ್ನು ವ್ಯಕ್ತಿಗತ ನೆಲೆಯಲ್ಲೇ ಹಿಂಸಿಸಿದಂತಾಗುತ್ತದೆ. ಯಾವುದೇ ಸಮುದಾಯಕ್ಕೆ ಸೇರದ ಮನುಷ್ಯರು ಪರಿಪೂರ್ಣ ಮನುಜರಾಗಿ ಕಾಣುವುದಿಲ್ಲ.

ಅಂಥವರು ನಿರ್ವಸಿತರಾಗಿ ತಮ್ಮತನವನ್ನು ಅರಸಿಕೊಂಡು ಅಲೆಯುವ ಯಾವುದೇ ಗುರಿಯಿಲ್ಲದ ಮಾರ್ಗದಲ್ಲಿ ಚಲಿಸುವಂಥವರಾಗಿ ಕಾಣುತ್ತಾರೆ. ಹಾಗಾಗಿಯೇ ಸಾಮುದಾಯಿಕ ವಿನಾಶ ಆಘಾತ ಸೃಷ್ಟಿಸುತ್ತದೆ. ಹೋರಾಟಗಳಿಗೆ ಎಡೆಮಾಡಿಕೊಡುತ್ತದೆ.  ನಾಗರಿಕ ಯುದ್ಧಕ್ಕೆ ಎಡೆಮಾಡಿಕೊಡುತ್ತದೆ. ವಿಶ್ವದಾದ್ಯಂತ ನಾವು ಎರಡು ರೀತಿಯ ಸಂಘರ್ಷಗಳನ್ನು ಕಾಣುತ್ತೇವೆ.

ಭೌತಿಕ ಸಂಪನ್ಮೂಲಗಳಿಗಾಗಿ ನಡೆಯುವ ಸಂಘರ್ಷ ಮತ್ತು ಅಸ್ಮಿತೆಗಾಗಿ ನಡೆಯುವ ಸಂಘರ್ಷ. ಅಸ್ಮಿತೆಗಾಗಿ ನಡೆಯುವ ಸಂಘರ್ಷಗಳು ಮಾನವ ಇತಿಹಾಸದಲ್ಲಿ ಭೀಕರ ಯುದ್ಧಗಳನ್ನು ಹುಟ್ಟುಹಾಕಿವೆ. ಸಮುದಾಯಗಳ ಅಸ್ಮಿತೆಗೆ ಅಪಾಯಕಾರಿಯಾಗಿ ಕಾಣುವ ಸಂಸ್ಥೆ ಎಂದರೆ ಪ್ರಭುತ್ವವೇ ಆಗಿರುತ್ತದೆ. ಇದನ್ನು ಇತಿಹಾಸದ ಅತಿ ದೊಡ್ಡ ಪ್ರಮಾದ ಎಂದೂ ಪರಿಗಣಿಸಲಾಗುತ್ತದೆ.

ರಾಷ್ಟ್ರಗಳು ಏಕ್‍ದಂ ಸೃಷ್ಟಿಯಾಗುವ ಪ್ರದೇಶಗಳಲ್ಲ. ವಿಭಿನ್ನ ಭಾಷೆ, ಧರ್ಮ, ಸಂಸ್ಕೃಂತಿಯನ್ನು ಸಮ್ಮಿಳಿತಗೊಳಿಸುವ ಮೂಲಕ, ಶಿಕ್ಷಣ, ಬಲಾತ್ಕಾರದಿಂದ, ಒತ್ತಾಯದ ಮೂಲಕ ರಾಷ್ಟ್ರಗಳನ್ನು ರೂಪಿಸಲಾಗುತ್ತದೆ.  ವಸಾಹತು ಕಾಲಘಟ್ಟದ ನಂತರದಲ್ಲಿ ಪ್ರಭುತ್ವಗಳು ವಿಭಿನ್ನ ಜನಸಮುದಾಯಗಳನ್ನು ಒಟ್ಟಿಗೆ ಕಲೆಹಾಕುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಿರುವುದು ಸಾಕಷ್ಟು ಹಾನಿಯನ್ನೂ ಉಂಟುಮಾಡಿದೆ.

ಶ್ರೀಲಂಕಾದಲ್ಲಿ ಅಧಿಕೃತ ಮಾಹಿತಿಯ ಪ್ರಕಾರವೇ, ಅಂತರಿಕ ಕಲಹದ ಕೊನೆಯ ಹಂತದಲ್ಲಿ, 2009ರ ಜನವರಿ ಮತ್ತು ಮೇ ಮಾಸದ ಅವಧಿಯಲ್ಲಿ, ಪ್ರತ್ಯೇಕತೆಗಾಗಿ ಹೋರಾಡುತ್ತಿದ್ದ ಎಲ್‍ಟಿಟಿಇ ಮತ್ತು ಶ್ರೀಲಂಕಾ ಸೇನೆಯ ನಡುವಿನ ಸಂಘರ್ಷದಿಂದ 7000 ಜನರು ಮೃತಪಟ್ಟಿದ್ದು, 70 ಸಾವಿರಕ್ಕೂ ಹೆಚ್ಚು ಜನರು ಸ್ಥಳಾಂತರ ಹೊಂದಿದ್ದಾರೆ. ಆದರೆ ವಿಶ್ವಸಂಸ್ಥೆಯ ಮಾಹಿತಿಯ ಅನುಸಾರ ಈ ಅವಧಿಯಲ್ಲಿ ಶ್ರೀಲಂಕಾದ 40 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಆತ್ಮಹತ್ಯಾ ಬಾಂಬ್ ದಾಳಿ,  ಗ್ರೆನೇಡ್ ಸ್ಫೋಟ, ಸರ್ಕಾರಿ ಕಟ್ಟಡಗಳ ಮೇಲಿನ ದಾಳಿ,  ಸರ್ಕಾರಿ ಘಟಕಗಳ ಮೇಲಿನ ಆಕ್ರಮಣ, ಕೊಲೆ, ಹತ್ಯೆ, ದೊಂಬಿ, ಗಲಭೆ ಮತ್ತು ಗುಂಡಿನ ಚಕಮಕಿಗಳಿಗೆ ಸಾವಿರಾರು ಅಮಾಯಕ ಜೀವಗಳು ಬಲಿಯಾಗಿವೆ. 1971ರಲ್ಲಿ ಪೂರ್ವ ಬಂಗಾಲ ಪ್ರಾಂತ್ಯವನ್ನು ಪಾಕಿಸ್ತಾನದಿಂದ ಬೇರ್ಪಡಿಸಿ ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಿದಾಗ ನೂತನ ದೇಶ ಬಾಂಗ್ಲಾದೇಶ ಮತ್ತು ಮೂಲ ರಾಷ್ಟ್ರ ಪಾಕಿಸ್ತಾನದ ನಡುವೆ ಸಂಭವಿಸಿದ ಯುದ್ಧದಲ್ಲಿ ಮೂವತ್ತು ಲಕ್ಷ ಜನರು ಮೃತಪಟ್ಟಿದ್ದರು.

ಒಂದು ಕೋಟಿಗೂ ಹೆಚ್ಚು ಜನರು ನಿರ್ವಸಿತರಾಗಿ, ನಿರ್ಗತಿಕರಾಗಿದ್ದರು. ಮತ್ತೊಂದು ಚಾರಿತ್ರಿಕ ಸಂದರ್ಭದಲ್ಲಿ ಎ ಇ ಹೊಸ್ಮನ್ ಹೀಗೆ ಹೇಳುತ್ತಾರೆ : “ ನನ್ನ ಪದ್ಯ ಕೆಟ್ಟದಾಗಿದೆ ಎಂದು ಅವರು ಹೇಳುತ್ತಾರೆ, ಅಡ್ಡಿಯಿಲ್ಲ ಇದರ ಸೀಮಿತ ವ್ಯಾಪ್ತಿಯಲ್ಲಿ ಚಿರಂತನತೆಯ ಕಂಬನಿ ಮತ್ತು ಸಂಕಷ್ಟಗಳು ಹರಿದು ಹೋಗುತ್ತವೆ, ನನ್ನವಲ್ಲ ಮಾನವನದು”. ಇದು ರಾಷ್ಟ್ರ ಪ್ರಭುತ್ವದ ಶಾಸನದಂತೆಯೇ ಕಾಣುತ್ತದೆ.

ರಾಷ್ಟ್ರ ಪ್ರಭುತ್ವಗಳು ಬಯಸುವ ಏಕರೂಪಿ ಸಮಾಜದ ತುಡಿತ ಸಹಜವಾಗಿಯೇ ಪ್ರತಿರೋಧ ಎದುರಿಸಬೇಕಾಗುತ್ತದೆ.  ಇವು ರಾಜಕೀಯ ಕಲಹಗಳಾಗಿರುವುದರಿಂದ ಸೇನಾ ಬಳಕೆಯ ಮೂಲಕ ಪರಿಹಾರವಾಗುವುದಿಲ್ಲ. ಈ ಪ್ರಕ್ಷುಬ್ಧತೆ ಮತ್ತು ಅಸಂಖ್ಯಾತ ದುರಂತಗಳನ್ನು ತಪ್ಪಿಸುವ ಏಕೈಕ ಮಾರ್ಗವೆಂದರೆ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದೇ ಆಗಿರುತ್ತದೆ.

ವಿಕೇಂದ್ರೀಕೃತ ರಾಜಕೀಯ ವ್ಯವಸ್ಥೆ ಸಹಭಾಗಿತ್ವಕ್ಕೆ ಅವಕಾಶ ನೀಡುತ್ತದೆ. ಹಾಗೆಯೇ ಅಲ್ಪಸಂಖ್ಯಾತರ ಅಸ್ಮಿತೆಗಳನ್ನೂ ರಕ್ಷಿಸುತ್ತದೆ. 1950ರಲ್ಲಿ ಭಾರತ ಭಾಷಾವಾರು ಪ್ರಾಂತ್ಯಗಳನ್ನು ರಚಿಸುವುದರ ಹಿಂದೆ ಇದೇ ಪ್ರಮುಖ ತರ್ಕವಾಗಿತ್ತು.  ಈ ತರ್ಕವನ್ನಾಧರಿಸಿಯೇ ಜಮ್ಮು-ಕಾಶ್ಮೀರಕ್ಕೆ ಮತ್ತು ಇತರ ರಾಜ್ಯಗಳಿಗೆ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಸ್ವಾಯತ್ತತೆಯನ್ನು ನೀಡಲಾಗಿತ್ತು.

ಪ್ರಬುದ್ಧ ಪ್ರಜಾತಂತ್ರ ವ್ಯವಸ್ಥೆಗಳಲ್ಲಿ ವೈವಿಧ್ಯತೆಯನ್ನು ನಾಶಪಡಿಸಿ ಅಲ್ಪಸಂಖ್ಯಾತರನ್ನು ದಮನಿಸಲಾಗುವುದಿಲ್ಲ.  ಮಾನವ ಸಮಾಜದ ಸಂಕೀರ್ಣತೆ ಮತ್ತು ವೈವಿಧ್ಯತೆಗಳನ್ನು ಸಾಂಸ್ಕೃಂತಿಕ ವೈವಿಧ್ಯತೆಯ ಮೂಲಕವೇ ವಿಕಾಸಗೊಳಿಸಬಹುದು ಮತ್ತು ಉತ್ತಮಪಡಿಸಬಹುದು ಎಂದು ಪ್ರಬುದ್ಧ ಪ್ರಜಾತಂತ್ರ ವ್ಯವಸ್ಥೆಗಳು ಗ್ರಹಿಸುತ್ತವೆ.

ಯಾವುದೇ ಏಕವರ್ಣ, ಏಕರೂಪಿ ಸಮಾಜವು ಮೂಲತಃ ಆತ್ಮರಹಿತವಾಗಿರುತ್ತದೆ. ಹೊಸ ಭಾಷೆಗಳನ್ನು ಕಲಿಯುವ ಉತ್ಸಾಹವೇ ಇಲ್ಲದೆ, ಹೊಸ ಮೌಲ್ಯಗಳನ್ನು ಶೋಧಿಸುವ ಪ್ರೇರಣೆ ಸ್ಫೂರ್ತಿ ಇಲ್ಲದೆ, ಹೊಸ ಆಹಾರ ಪದ್ಧತಿಯನ್ನು ಸ್ವೀಕರಿಸುವ ಮನಸ್ಸಿಲ್ಲದೆ, ಹೊಸ ಸಾಹಿತ್ಯ, ಸಂಗೀತ, ಕಲೆ, ಶಿಲ್ಪಕಲೆ ಮತ್ತು ಜಗತ್ತನ್ನು ಗ್ರಹಿಸುವ ಹೊಸ ಮಾದರಿಗಳ ಸೋಂಕು ಇಲ್ಲದೆ ಇಂತಹ ಸಮಾಜಗಳು ಸೊರಗಿ ಹೋಗುತ್ತವೆ. ಬಹುಮುಖಿ ಸಮಾಜದಲ್ಲಿ ಬದುಕು ಸಾಹಸಿ ಪ್ರವೃತ್ತಿಯಿಂದ ಮುನ್ನಡೆಯುತ್ತದೆ.

ವೈವಿಧ್ಯತೆಯನ್ನು ರಕ್ಷಿಸುವ ಅತ್ಯುತ್ತಮ ಮಾರ್ಗ ಎಂದರೆ ಒಕ್ಕೂಟ ವ್ಯವಸ್ಥೆಯನ್ನು ಪ್ರೋತ್ಸಾಹಿಸುವುದೇ ಆಗಿರುತ್ತದೆ. ನಾವು ವೈವಿಧ್ಯತೆಯನ್ನು ನಿರಾಕರಿಸಿದರೆ, ಬಹಿಷ್ಕರಿಸಿದರೆ ಬಹಳಷ್ಟು ಕಳೆದುಕೊಳ್ಳುತ್ತೇವೆ, ಉತ್ಸಾಹ ಕಳೆದುಕೊಳ್ಳುತ್ತೇವೆ ಮತ್ತು ಪ್ರತಿರೋಧಕ್ಕೆ ಎಡೆಮಾಡಿಕೊಡುತ್ತೇವೆ.

ತಮ್ಮ 52ನೆಯ ವಯಸಿನಲ್ಲೇ ಇಹಲೋಕ ತ್ಯಜಿಸಿದ  ಕಾಶ್ಮೀರದ ಸುಪ್ರಸಿದ್ಧ ಸಮಕಾಲೀನ ಕವಿ ಆಘಾ ಶಹೀದ್ ಅಲಿ ತಮ್ಮ “ ಒಂದು ತಪ್ಪು ತಿರುವು ” ಎನ್ನುವ ಕವಿತೆಯಲ್ಲಿ “ ನನ್ನ ಕನಸಿನಲ್ಲಿ ನಾನು ಸದಾ ಸಂಹಾರಕ್ಕೊಳಗಾದ ನಗರದಲ್ಲೇ ವಾಸಿಸುತ್ತೇನೆ, ಆ ನಗರದ ಹೆಸರು ಭೂಪಟದಿಂದ ಅಳಿಸಿ ಹೋಗಿರುತ್ತದೆ, ದಾರಿ ತೋರುವ ಯಾವುದೇ ಚಿಹ್ನೆಗಳೂ ಇರುವುದಿಲ್ಲ, ಒಂದು ತಪ್ಪು ತಿರುವು ನನ್ನನ್ನು ಇಲ್ಲಿಗೆ ಕರೆತರುತ್ತದೆ,,,,,” ಎಂದು ಹೇಳುವುದನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಸೂಕ್ತ.  ತಮ್ಮ ರಾಜ್ಯದ ಅಸ್ತಿತ್ವವನ್ನೇ ಕಳೆದುಕೊಂಡ ಜನತೆಯ ಮನಸ್ಥಿತಿ ಹೇಗಿರಬಹುದು ಎಂದು ಊಹಿಸಿ ನೋಡಿ. ಅವರು ತಮ್ಮದೇ ನೆಲದಲ್ಲಿ, ತಮ್ಮ ಪೂರ್ವಿಕರ ನೆಲದಲ್ಲಿ, ತಮ್ಮ ಸ್ಮರಣೆಯಲ್ಲಿನ ನೆಲದಲ್ಲಿ, ತಮ್ಮ ಸಂಪ್ರದಾಯಗಳ ನೆಲದಲ್ಲಿಯೇ ನಿರಾಶ್ರಿತರಾಗುತ್ತಾರೆ. ನಮ್ಮ ನಡುವೆ ಬೇರುಗಳಿಲ್ಲದ ಅಸಂಖ್ಯಾತ ವ್ಯಕ್ತಿಗಳಿದ್ದಾರೆ. ಅವರು ಯಾವ ದಿಕ್ಕಿನಲ್ಲಿ ಬೇಕಾದರೂ ಚಲಿಸಬಹುದು.

 22-8-19

‍ಲೇಖಕರು avadhi

September 8, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: