ಲಿಂಗರಾಜು ಬಿ.ಎಸ್
ದೇವನೂರರನ್ನು ನಾನು ಮೊದಲು ಭೇಟಿ ಮಾಡಿದ್ದು ಚಿಕ್ಕಮಗಳೂರಿನಲ್ಲಿ. ಬಾಬಾಬುಡನ್ ದರ್ಗಾವನ್ನು ದತ್ತಪೀಠವೆಂಬ ವೈದಿಕ ಗರ್ಭಗುಡಿಯೊಳಗೆ ಬಂಧಿಸುವ ಸಂಘಪರಿವಾರದ ಹುನ್ನಾರದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗೆ ದೇವನೂರು ಬಂದಿದ್ದರು. ಬಂದಿದ್ದು ವಿಶೇಷವಿಲ್ಲದಿದ್ದರೂ ಬಂದ ರೀತಿ ಮಾತ್ರ ಎಂಥವರಿಗೂ ಆಭಿಮಾನ ಮೂಡಿಸುವಂಥದ್ದು. ಚಿಕ್ಕಮಗಳೂರಿಗೆ ಬರುವವರನ್ನೆಲ್ಲಾ ತಪಾಸಣೆ ಮಾಡಿಯೇ ಬಿಡುತ್ತಿದ್ದ ಜಿಲ್ಲಾಡಳಿತದ ಕಣ್ತಪ್ಪಿಸಿ ಆವರು ಬಂದಿದ್ದರು.
ಹುಲ್ಲನ್ನು ಸಾಗಿಸುವ ಲಾರಿಯಲ್ಲಿ ಹುಲ್ಲಿನ ಮೇಲೆ ಮಲಗಿಕೊಂಡು ಬಂದಿದ್ದ ದೇವನೂರರ ತಲೆ ಹಾಗೂ ಸ್ವಟರ್ ಮೇಲೆಲ್ಲಾ ಹುಲ್ಲು. ಲಾರಿಯಿಂದ ಇಳಿದಾಗಲಿಂದ ಪ್ರತಿಭಟನೆ ನಡೆಯುವ ಸ್ಥಳದವರೆಗೂ ಹುಲ್ಲನ್ನು ಕೊಡವುತ್ತಲೇ ಇದ್ದರು. ಪ್ರತಿಭಟನೆ ಸ್ಥಳಕ್ಕೆ ಕರೆದುಕೊಂಡು ಬರಲು ಹೋಗಿದ್ದ ನಾನು ಅಣ್ಣಾ (ನಾನು ಯಾವಾಗಲೂ ಆವರನ್ನು ಅಣ್ಣ ಎಂದೇ ಕರೆಯುವುದು) ಇಲ್ಲೇ ಎಲ್ಲಾದರೂ ಟೀ ಕುಡಿಯೋಣ ಎಂದೆ.
ಯಾಕೆಂದರೆ ಕನಿಷ್ಠ ಆಲ್ಲಿ ಬಾಯಿ ತೊಳೆಯುವಾಗ ಕನ್ನಡಿ ನೋಡಿ ಉಳಿದ ಹುಲ್ಲನ್ನಾದರೂ ಕೊಡವುತ್ತಾರೆ ಎಂಬ ಆಸೆ ನನ್ನದು. ಆದರೆ ಟೀ ಕುಡಿಯೋದು ಬೇಡ ಎಂದರು. ಯಾಕೋ ಆವರ ಮನಸು ಸರಿಯಿಲ್ಲ ಎಂದು ಅಂದುಕೊಂಡು ಸುಮ್ಮನಾದೆ. ದಾರಿಯುದ್ದಕ್ಕೂ ಮಾತನಾಡುತ್ತಲೇ ಬಂದ ಅವರು ಹೇಳಿದ್ದು ಒಂದೇ ಮಾತು “ಇಲ್ಲಿನ ಹಳೆ ಮರಗಳಿಗೆಲ್ಲಾ ಎಂತದೋ ಕಾಯಿಲೆ ಬಂದಿದೆ ಕಣೋ, ಊರಲೆಲ್ಲಾ ಹರಡೋ ಮುಂಚೆ ಹುಷಾರು ಮಾಡಬೇಕು. ಅದಕ್ಕೆ ನಿಮ್ಮಂಥೋರು(ನನ್ನ ವಯಸ್ಸಿನವರು) ಡಾಕ್ಟರಾಗಬೇಕು” ಅಂತ.
ನಂತರ ಹುಲ್ಲಿನ ಲಾರಿಯಲ್ಲಿ ಬಂದಿದ್ದನ್ನು ಅವರು ಭಾಷಣದಲ್ಲೇನೂ ಹೇಳಿಕೊಳ್ಳಲಿಲ್ಲ. ಅದರೆ ಏನಿದು ಹುಲ್ಲು ಅಂದ ಎಲ್ಲರಿಗೂ ಹೇಳುತ್ತಿದ್ದುದ್ದು, ಇಲ್ಲಿ ಕಸ ಗುಡಿಸುವ ಮುಂಚೆ ಅಲ್ಲೊಂದು ಕಡೆ ಕಸಗುಡಿಸಿ ಬಂದೆ ಅಂಥ. ಆದರೆ ಇದು ಎಷ್ಟು ಜನರಿಗೆ ಅರ್ಥವಾಯಿತೋ ಇಲ್ಲವೋ ಗೊತ್ತಿಲ್ಲ.
ಇದನ್ನು ಇಲ್ಲಿ ಹೇಳಿದ ಕಾರಣ ಇಷ್ಟೆ, ದೆಏವನೂರರ ಬರಹ ಓದಿ ಕುಣಿಯುವುದು ಬೇರೆ, ಅನುಭವಿಸುವುದು ಬೇರೆ, ಎಲ್ಲಾ ಹೇಳುವಂತೆ ಅವರು ಮಾತನಾಡುವುದು ಕಡಿಮೆ, ಬರೆಯುವುದು ಕಡಿಮೆ, ಹಾಗೆಯೇ ಅವರೊಳಕ್ಕೆ ಇಳಿದಿರುವವರು ಇನ್ನೂ ತುಂಬಾ ಕಡಿಮೆ. ಅಂಥದ್ದರಲ್ಲಿ ಬಾಗಿಲಲ್ಲಿ ನಿಂತು ಓದಿದವರು ಮಾಡಿದ ಒಂದೆರಡು ಸಾಲು ದೇವನೂರರನ್ನು ಮತ್ತೆ ಮತ್ತೆ ಓದಿಸಿಕೊಳ್ಳಲು ಕಾರಣವಾಗುತ್ತದೆ. ಟೀಕೆ ಯಾವಾಗಲೂ ಇನ್ನಷ್ಟು ಎತ್ತರಕ್ಕೆ ಬೆಳೆಸುತ್ತದೆ, ಒಳಗೂ ಹೊರಗೂ ಪ್ರಾಮಾಣಿಕರನ್ನು ಮಾತ್ರ.
kanditha e mathu sathya
“ಇಲ್ಲಿನ ಹಳೆ ಮರಗಳಿಗೆಲ್ಲಾ ಎಂತದೋ ಕಾಯಿಲೆ ಬಂದಿದೆ ಕಣೋ, ಊರಲೆಲ್ಲಾ ಹರಡೋ ಮುಂಚೆ ಹುಷಾರು ಮಾಡಬೇಕು. ಅದಕ್ಕೆ ನಿಮ್ಮಂಥೋರು(ನನ್ನ ವಯಸ್ಸಿನವರು) ಡಾಕ್ಟರಾಗಬೇಕು” ಅಂತ. ಇಲ್ಲಿ ಕಸ ಗುಡಿಸುವ ಮುಂಚೆ ಅಲ್ಲೊಂದು ಕಡೆ ಕಸಗುಡಿಸಿ ಬಂದೆ ಅಂಥ. ……. ಈ ಎರಡು ಹೇಳಿಕೆಗಳು ಮಹಾನ್ ದಾರ್ಶನಿಕರ ನುಡಿಗಳಂತಿವೆ.