ದೇರಾಜೆಯವರ ‘ಕುರುಕ್ಷೇತ್ರಕ್ಕೊಂದು ಆಯೋಗ’

ನಿನ್ನೆಯಿಂದ ಮುಂದುವರೆದಿದೆ – ಆ ಲೇಖನಕ್ಕೆ ಇಲ್ಲಿ ಕ್ಲಿಕ್ಕಿಸಿ 

 ಲಕ್ಷ್ಮಿನಾರಾಯಣ ಭಟ್ಟ.ಪಿ. ಮಂಗಳೂರು

ಕರ್ಣ: ಕರ್ಣನ ಜೀವನವೂ ದ್ರೋಣರಂತೆ ವರ್ಣಾಶ್ರಮ ಧರ್ಮದ ವೈಪರೀತ್ಯವೇ. ಸೂರ್ಯನಿಂದ ಕುಂತಿಯಲ್ಲಿ ಜನಿಸಿ ಕ್ಷತ್ರಿಯನಾದರೂ ತಾಯಿಯಿಂದಲೇ ಲೋಕಾಪವಾದಕ್ಕೆ ಹೆದರಿ ಪರಿತ್ಯಜಿಸಲ್ಪಟ್ಟು ರಾಧೇಯ, ಸೂತಪುತ್ರ ಎಂದು ನಿತ್ಯವೂ ನಿರಂತರವೂ ಹಂಗಿಸಲ್ಪಟ್ಟವನು, ಮತ್ತು ದ್ರೌಪದಿಯಿಂದಲೂ ‘ನಾಹಂ ವರಯಾಮಿ ಸೂತಂ’ ಎಂದು ತಿರಸ್ಕರಿಸಲ್ಪಟ್ಟವನು. ಹೀಗೆ ಹುಟ್ಟಿದ ಕೀಳರಿಮೆ ಮತ್ತು ಕೊತ ಕೊತ ಕುದಿಯುವ ಅಸಹನೆ ಕರ್ಣನ ವ್ಯಕ್ತಿತ್ವದ ಭಾಗವೇ ಆಯಿತು.

ದೇರಾಜೆಯವರು ಜನಜನಿತ ಕರ್ಣನ ದಾನಶೂರತ್ವಕ್ಕೆ ಒಂದು ಹೊಸ ತಿರುವು ಕೊಟ್ಟಿದ್ದಾರೆ: ದ್ರೋಣರು ಕರ್ಣನಿಗೆ ಮಂತ್ರಾಸ್ತ್ರಗಳನ್ನು ಉಪದೇಶಿಸಲು ಆತ ಸೂತಪುತ್ರನೆಂಬ ಹಿನ್ನೆಲೆಯಲ್ಲಿ ನಿರಾಕರಿಸುತ್ತಾರೆ. ಮುಂದೆ ಪರಶುರಾಮರಲ್ಲಿ ತಾನು ಬ್ರಾಹ್ಮಣ ಎಂದು ಸುಳ್ಳು ಹೇಳಿ ವಿದ್ಯೆ ಕಲಿತಾಗ ‘ಕಲಿಸಿದ್ದೆಲ್ಲಾ ಮರವೆಯಾಗಲಿ’ ಎಂದು ಅವರ ಶಾಪಕ್ಕೂ ಗುರಿಯಾಗುತ್ತಾನೆ. ಹಿಂತಿರುಗಿ ಬರುವಾಗ

“ಅರಣ್ಯ ಮಧ್ಯದಲ್ಲಿ ತಿಳಿಯದೇ ಬ್ರಾಹ್ಮಣನೊಬ್ಬನ ಹೋಮಧೇನುವಿನ ಮರಣಕ್ಕೆ ಕಾರಣನಾಗಿ ‘ನಿನ್ನ ಕೊನೆಗಾಲದಲ್ಲಿ ರಥಚಕ್ರವು ಭೂಮಿಯಲ್ಲಿ ಹೂತುಹೊಗಲಿ’ ಎಂಬ ಶಾಪವನ್ನೂ ಪಡೆಯಬೇಕಾಗಿ ಬಂತು. ಎಷ್ಟು ಬೇಡಿಕೊಂಡರೂ ಆ ಬ್ರಾಹ್ಮಣನು ಅನುಗ್ರಹವನ್ನು ಮಾಡಲೇ ಇಲ್ಲ. ಈ ಮೂರು ಮಂದಿ ಬ್ರಾಹ್ಮಣರು ನನ್ನ ಉತ್ಕರ್ಷಕ್ಕೆ ಮಾರಕರಾದರು. ಅದರಿಂದ ಬ್ರಾಹ್ಮಣ್ಯದ ಮೇಲೆಯೇ ನನಗೆ ಒಂದು ರೀತಿಯ ತಿರಸ್ಕಾರವುಂಟಾಯಿತು.” (ಪು.೪೦).

ಮುಂದೆ ದ್ರೋಣರ ಪರೀಕ್ಷಾ ಮಂದಿರದಲ್ಲಿಯೂ ಸೂತಪುತ್ರನೆಂದು ನಿಂದಿಸಲ್ಪಡುತ್ತಾನೆ. ಆ ಸಂದರ್ಭದಲ್ಲಿ ದುರ್ಯೋಧನನು ಅಪ್ರಾರ್ಥಿತವಾಗಿ ಅಂಗರಾಜ್ಯವನಿತ್ತು ರಾಜತ್ವವನ್ನು ನೀಡಿ ಗೌರವಿಸಿದರೂ

“ಬ್ರಾಹ್ಮಣರಾಗಲಿ ಕ್ಷತ್ರಿಯರಾಗಲಿ ಸೂತಪುತ್ರನೆಂದು ನನ್ನನ್ನು ಕಡೆಗಣಿಸುವುದನ್ನು ಬಿಡಲಿಲ್ಲ. ಅದರಿಂದ ಉಚ್ಚವರ್ಣೀಯರೆಂಬವರ ಮೇಲೆಯೇ ನನಗೆ ಅನಾದರಣೆಯುಂಟಾಯಿತು. ನಾನು ಬ್ರಾಹ್ಮಣರಿಗೆ ಬಹುವಾಗಿ ದಾನ ಮಾಡುತ್ತಿದ್ದೆ. ಆ ಜಾತಿಯ ಮೇಲೆ ನನಗೆ ತಿರಸ್ಕಾರವಿದ್ದರೂ ಅವರನ್ನು ಕರೆಕರೆದು ದಾನ ಕೊಡುತ್ತಿದ್ದೆ. ದಾನ ಮಾಡಿದ ಪುಣ್ಯಕ್ಕಾಗಿಯೂ ಅಲ್ಲ, ಆ ಕೊಳ್ಳುವವರ ಮೇಲಿನ ಅನುಕಂಪದಿಂದಲೂ ಅಲ್ಲ. ‘ನಿತ್ಯ ಆ ಬ್ರಾಹ್ಮಣರೆಂಬವರು ಬಂದು ನನ್ನ ಮುಂದೆ ಕೈ ಚಾಚಲಿ’ ಎಂದು.” (ಪು.೪೧).

ಇದು ಸಾಮಾನ್ಯವಾಗಿ ಉಳಿದ ಕವಿಗಳು ಮಾಡಿದಂತೆ (ಉದಾ; ಕುಮಾರವ್ಯಾಸ) ಕರ್ಣನ ಅತಿರಂಜಿತ ವ್ಯಕ್ತಿತ್ವವನ್ನು ದೇರಾಜೆಯವರು ಸಮದೃಷ್ಟಿಯಿಂದ ವಿಮರ್ಶಿಸಿದ ರೀತಿ ಎಂದು ನಾನು ಭಾವಿಸುತ್ತೇನೆ.

ಶಲ್ಯ, ಶಕುನಿ, ದ್ರೃಷ್ಟದ್ಯುಮ್ನ: ಅರ್ಜುನನ ಸಾರಥಿಯಾಗಬೇಕೆಂದುಕೊಂಡು ಸೈನ್ಯ ಸಮೇತ ಪಾಂಡವವರತ್ತ ಹೊರಟ ಶಲ್ಯ ಮಾರ್ಗಮಧ್ಯದಲ್ಲಿ ತಿಳಿಯದೇ ದುರ್ಯೋಧನನ ಸತ್ಕಾರ ಸ್ವೀಕರಿಸಿ ಒಂದು ರೀತಿಯ ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ಕೌರವನ ಪಕ್ಷ ಸೇರುತ್ತಾನೆ. ಶಕುನಿ ಧರ್ಮರಾಯನ ದ್ಯೂತದ ವ್ಯಸನ ದೌರ್ಬಲ್ಯವನ್ನು ಕೌರವ ಪಕ್ಷಪಾತಿಯಾಗಿ ಅವರ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡ. ಗಾಂಧಾರಿಯ ಸಹೋದರನಾಗಿ ಹಸ್ತಿನಾವತಿಗೆ ಬಂದ ಶಕುನಿಗೆ ಪಾಂಡವರ ಮೇಲೆ ಯಾವ ವ್ಯಾಮೋಹವೂ ಇರಲಿಲ್ಲ. ಅವನ ಗಮನ ಏನಿದ್ದರೂ ಗಾಂಧಾರಿಯ ಮಕ್ಕಳ ಅಭ್ಯುದಯದ ಕಡೆಗೆ ಎನ್ನುವುದನ್ನು ಬಿಟ್ಟರೆ ಬೇರೇನೂ ಹೆಚ್ಚುಗಾರಿಗೆ ಇಲ್ಲ. ದೃಷ್ಟದ್ಯುಮ್ನ ದ್ರೋಣವಧೆಗಾಗಿಯೇ ಹುಟ್ಟಿದ್ದು ಎಂಬುದರಿಂದ, ಪಾಂಡವರ ಸೇನಾಧಿಪತಿಯಾಗಿಯೂ ಅವನ ಹೆಚ್ಚುಗಾರಿಕೆ ಏನಿಲ್ಲ. ಹೀಗೆ ಶಲ್ಯ, ಶಕುನಿ, ದೃಷ್ಟದ್ಯುಮ್ನರ ಪಾತ್ರಗಳ ನಿರ್ವಚನೆಯಲ್ಲಿ ನಾನು ವಿಶೇಷವಾಗಿ ಕಂಡದ್ದೇನೂ ಇಲ್ಲ.

ಅಶ್ವತ್ಥಾಮ: ಅಶ್ವತ್ಥಾಮನದ್ದು ನಿರ್ಲಕ್ಷಿತ ಮಗನ ಬಾಳು. ‘ಗುರುಪುತ್ರ’ನೆಂದೇ ಕರೆಯಲ್ಪಡುತ್ತಿದ್ದ ಅಶ್ವತ್ಥಾಮನಿಗೆ ಯಾವ ವಿಶೇಷ ಸ್ಥಾನಮಾನಗಳೂ ಇರಲಿಲ್ಲ. ದ್ರೋಣರಿಗೆ ಅರ್ಜುನನನ್ನು “ಏಕ: ಪಾರ್ಥೋ ಧನುರ್ಧರಃ ಎಂದು ಸಾಧಿಸುವ ಆಸೆ.

“ಆ ಅರ್ಜುನನ ಮೇಲೆ ನಮ್ಮಪ್ಪನಿಗೆ ಎಷ್ಟು ವಾತ್ಸಲ್ಯ! ಸ್ವಂತ ಮಗನಾದ ನನ್ನ ಮೇಲಿನ ಪ್ರೀತಿಗಿಂತಲೂ ಹೆಚ್ಚು. ನನಗೇ ಉಪದೇಶ ಮಾಡದ ಬ್ರಹ್ಮಶೀರ್ಷಾಸ್ತ್ರವನ್ನು ಅವನಿಗೆ ಕೊಟ್ಟರು. ನನಗೆ ಕೊಡಿ ಎಂದಾಗ ‘ನೀನು ಅದಕ್ಕೆ ಯೋಗ್ಯನಲ್ಲ. ನಿನ್ನ ಸ್ವಭಾವವು ಸ್ವಲ್ಪ ದುಡುಕಿನದು. ಮುಂದೆ ನೋಡುವ’ ಎಂದು ಹೇಳಿದ್ದರು. (ಪು.೬೪).

ಇದನ್ನು ದ್ರೋಣರು ಸರಿಯಾಗಿಯೇ ಗುರುತಿಸಿದ್ದಾರೆ. ಕುರುಕ್ಷೇತ್ರದ ಕೊನೆಯಲ್ಲಿ ಅಶ್ವತ್ಥಾಮನ ಆವಾಂತರವೇ ಇದಕ್ಕೆ ಸಾಕ್ಷಿ.

ಏಕಲವ್ಯನ ಪ್ರಕರಣವನ್ನು ಅಶ್ವತ್ಥಾಮನ ಮೂಲಕ ದೇರಾಜೆಯವರು ನಿರ್ವಚಿಸಿದ ರೀತಿಯೂ ವಿನೂತನವೇ. ಆದರೆ ಇದು ಸಾಂಪ್ರದಾಯಿಕ ದೃಷ್ಟಿಯೇ ಹೊರತು ಬೇರಲ್ಲ. ದ್ರೋಣರು ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದದ್ದು ಅರ್ಜುನ ಬಿಲ್ವಿದ್ಯೆಯಲ್ಲಿ ಮೇಲುಗೈ ಸಾಧಿಸಲು ಅನುಕೂಲ ಎಂಬುದಕ್ಕಾಗಿ ಎಂದು ಸಾಮಾನ್ಯವಾಗಿ ಎಲ್ಲರೂ ತಿಳಿದುಕೊಂಡದ್ದು. ಆದರೆ ದ್ರೋಣರು ಏಕಲವ್ಯನ ಮೇಲೆ ಕರುಣೆದೋರಿ, ಆ ಕಾಲದ ಸಮಾಜ ಒಪ್ಪಿದ ನಿಯಮಾನುಸಾರ ವಿಧಿಸಿದ ಕನಿಷ್ಠ ಶಿಕ್ಷೆ ಅದು ಎಂದು ದೇರಾಜೆಯವರು ಅಭಿಪ್ರಾಯ ಪಡುತ್ತಾರೆ.

ಇದು ನನಗೆ ಆಪ್ತವಾಯಿತು. ಗತಕಾಲದ ಘಟನೆಗಳನ್ನು ಆಯಾಯ ಕಾಲಘಟ್ಟದಲ್ಲಿ ಪ್ರಚಲಿತವಿದ್ದ ಶಿಷ್ಟಾಚಾರ, ವಿಧಿ-ನಿಷೇಧಗಳ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕೇ ಹೊರತು ವರ್ತಮಾನದ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅನ್ವಯಿಸುವುದು ಸಾಧು ಅಲ್ಲ. ಸೀತಾಮಾತೆಯ ಪರಿತ್ಯಾಗ ಮತ್ತು ಅಗ್ನಿಪರೀಕ್ಷೆ ಪ್ರಕರಣದಲ್ಲೂ ಇದೆ ಸಂದಿಗ್ಧ ಎದುರಾದಾಗ ರಾಜಧರ್ಮ, ಪತಿಧರ್ಮ ಇವೆರಡರ ಮಧ್ಯೆ ಶ್ರೀ ರಾಮ ರಾಜಧರ್ಮವನ್ನು ಆರಿಸಿಕೊಂಡದ್ದು. ಸಮಷ್ಟಿ, ವೈಯಕ್ತಿಕ ದ್ವಂದ್ವಗಳ ನಡುವಿನ ತಳಮಳಗಳಲ್ಲಿ ಆತ ಸಮಷ್ಟಿ ದೃಷ್ಟಿಕೋನದಿಂದ ವ್ಯವಹರಿಸಿದ ಎಂಬ ಸಮಾಧಾನ ಪಡುವುದೇ ಹೆಚ್ಚು ಸರಿ ಎಂದಷ್ಟೇ ಹೇಳಬಲ್ಲೆ. ಇದನ್ನೇ ಏಕಲವ್ಯನ ಪ್ರಕರಣಕ್ಕೂ ಅನ್ವಯಿಸಿ ಸಮಾಧಾನ – ಸಮಜಾಯಿಷಿಕೆ ಅಲ್ಲ –  ಪಡುವುದು ಹೆಚ್ಚು ಸೂಕ್ತ. ಇಲ್ಲಿ ದ್ರೋಣರು ಅಶ್ವತ್ಥಾಮನಿಗೆ ಇದರ ಹಿನ್ನೆಲೆಯನ್ನು ತುಸು ದೀರ್ಘವಾಗಿಯೇ ವಿವರಿಸುತ್ತಾರೆ.

ಈ ವಿವರಣೆ ಓದಿದ ಮೇಲೆ ನನ್ನ ಗ್ರಹಿಕೆ ಸರಿ ಎಂದು ನಿಮಗೆ ಅನಿಸುತ್ತದೆಯೋ ನೋಡಿ:

“ಎಲ್ಲ ವಿದ್ಯೆಗಳಂತೆ ಅಲ್ಲ ವೇದವಿದ್ಯೆ, ಅನಧಿಕಾರಿಗಳಿಗೆ ಅಪ್ರಾಪ್ಯವಾದದ್ದು ಅದು. ಧನುರ್ವೇದವೆಂಬುದು ಯಜುರ್ವೇದಕ್ಕೆ ಉಪವೇದ. ಯಜ್ಞ ಸಂರಕ್ಷಣೆಗೆಂದೇ ಹೇಳಲ್ಪಟ್ಟದ್ದು, ವೇದಾಧಿಕಾರವಿಲ್ಲದವರಿಗೆ ಅದನ್ನು ಉಪದೇಶಿಸಬಾರದು, ಹೀಗೆ ಕಟ್ಟುನಿಟ್ಟಾದ ನಿಯಮವಿದೆ. ಆ ಕುರಿತು ಅದನ್ನು ಒಪ್ಪಿ ಹಾಗೆಯೇ ನಡೆಯುತ್ತೇನೆಂದು ಗುರುಸನ್ನಿಧಿಯಲ್ಲಿ ಪ್ರಮಾಣ ಮಾಡಿಯೇ ಧನುರ್ವೇದವನ್ನು ಬ್ರಾಹ್ಮಣರು ಅಧ್ಯಯನ ಮಾಡುವುದು. ಬ್ರಾಹ್ಮಣರು ಅದನ್ನು ಕಲಿಯುವುದು ಸುಪಾತ್ರರಿಗೆ ಕಲಿಸುವುದಕ್ಕಾಗಿ ಮತ್ತು ಅಂತಹ ಸಂದರ್ಭಗಳು ಒದಗಿ ಬಂದಾಗ ಧರ್ಮರಕ್ಷಣೆಗಾಗಿ. ಹೀಗೆ ಗುರುಮುಖದಿಂದ ಪ್ರಾಪ್ತವಾದ ಆ ವಿದ್ಯೆಯನ್ನು ಸರ್ವವಿಧದಿಂದಲೂ ರಕ್ಷಿಸಿಕೊಳ್ಳುವುದು ಅವನಿಗೆ ಕರ್ತವ್ಯ. ಕದ್ದು ಕೇಳಿ ಕಲಿಯುವವರಿಂದ ಅದು ಅಪಹೃತವಾಗದಂತೆ ನೋಡಿಕೊಳ್ಳಬೇಕು. ಎಲ್ಲಾದರೂ, ಎಂದಾದರೂ ಅಂಥಾದ್ದು ನಡೆದರೆ ಆ ವಿದ್ಯಾಚೋರನನ್ನು ಶಪಿಸಿ ಅವನಿಗದು ದಕ್ಕದಂತೆ ಮಾಡಬೇಕು, (ಕರ್ಣನ ವಿಷಯದಲ್ಲಿ ಗುರು ಪರಶುರಾಮರು ಮಾಡಿದ್ದು ಇದೆ ಅಲ್ಲವೇ!)

ಅಥವಾ ಅಂಥವನನ್ನು ವಧಿಸಿಯಾದರೂ ಬಿಡಬೇಕು. ಹೀಗಿದೆ ಪವಿತ್ರವಾದ ಧನುರ್ವೇದದ ಗುರುತ್ವ. ಏಕಲವ್ಯನಿಂದ ನನ್ನ ವಿದ್ಯೆಯು ಅಪಹೃತವಾಯಿತು, ನನ್ನ ಅರಿವಿಗೇ ಬಾರದೆ ನನ್ನ ಗುರುತ್ವದ ಮೇಲಿನ ಅವನ ಶ್ರದ್ಧೆಯಿಂದ ಅವನು ಪರಿಣತಿಯನ್ನು ಪಡೆದ. ದ್ರೋಣಾಚಾರ್ಯರ ಶಿಷ್ಯನೆಂದೇ ಹೇಳಿಕೊಂಡ ಕೂಡ. ನನ್ನ ಗುರುತ್ವಕ್ಕೆ ದ್ರೋಹ ಮಾಡಿದ, ಅವನನ್ನೇನು ಮಾಡಲಿ? ಅವನ ಗುರುಭಕ್ತಿಗೂ ವಿದ್ಯಾಶ್ರದ್ಧೆಗೂ ನಾವು ನಮ್ಮ ಜೀವವನ್ನೇ ಕೊಡಬೇಕು. ಆದರೂ ವಿದ್ಯಾಗೌರವದ ಗುರುದಕ್ಷಿಣೆಯೆಂದು ಅವನ ಬಲಗೈಯ ಹೆಬ್ಬೆಟ್ಟನ್ನೇ ಕೇಳಿದೆ. ಯಾಕೆ? ಏನು? ಎಂದು ಯಾವ ಪ್ರಶ್ನೆಯನ್ನೂ ಕೇಳದೆ ಅನನ್ಯ ಭಕ್ತಿಯಿಂದಲೇ ಕಡಿದು ಕೊಟ್ಟ. ಗುರುವಾಗಿ ನನಗೆ ಅತ್ಯಂತ ದುಃಖವಾಯಿತು, ಆದರೂ ಗುರುತ್ವದ ಗೌರವ ಉಳಿಯಿತು. ಹೆಬ್ಬೆಟ್ಟಿಲ್ಲದೆ ಲೀಲಾಜಾಲವಾಗಿ ಬಾಣಪ್ರಯೋಗವು ಅಸಾಧ್ಯ. ಅವನ ಕುಲವೃತ್ತಿ ಬೇಟೆ, ಅದಕ್ಕೆ ಕೌಶಲಪೂರ್ಣವಾದ ಬಾಣಪ್ರಯೋಗದ ಅವಶ್ಯಕತೆ ಇಲ್ಲ, ಹಾಗೆ ವಾತ್ಸಲ್ಯದಿಂದಿತ್ತ ಶಿಕ್ಷೆ ಅದು. ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ನನ್ನ ಗುರುಸನ್ನಿಧಿಯಲ್ಲಿ ನಾನು ಕೈಕೊಂಡ ಪ್ರತಿಜ್ಞೆಯನ್ನು ಪಾಲಿಸಿದ್ದೇನೆ. ನನ್ನ ಹೆಸರು ಹೇಳಿಯೇ ಕಲಿತ ಆ ಶ್ರದ್ಧಾವಂತ ಶಿಷ್ಯನನ್ನು ಶಪಿಸಿ ಅವನ ಶ್ರೇಯಸ್ಸನ್ನು ಹಾಳು ಮಾಡಲಿಲ್ಲ. ಶಿಷ್ಯನ ತಪ್ಪಿಗೆ ಗುರುವಾದವನು ಶಿಕ್ಷೆಯನ್ನೇ ಕೊಡುವುದು ವಿಹಿತವಲ್ಲದೆ ಶಾಪವನ್ನಲ್ಲ. ಶಿಕ್ಷೆಗೆ ಅವಕಾಶವಿಲ್ಲದಿದ್ದಲ್ಲಿ ಶಾಪ ಅಷ್ಟೇ. ಇಲ್ಲಿ ನಮ್ಮಿಬ್ಬರಿಗೂ ನಮ್ಮ ನಮ್ಮ ವ್ಯಕ್ತಿತ್ವಕ್ಕೆ ಕೊರತೆಯಾಗಲಿಲ್ಲ, ಅಂತೆಯೇ ನನಗೆ ಸಂತೃಪ್ತಿ.” (ಪು.೬೩-೬೪).

ದ್ರುಪದ: ದ್ರುಪದನ ಹುಟ್ಟು ಮತ್ತು ದ್ರೋಣರ ಹುಟ್ಟಿಗೆ ಒಂದು ಸಾಮ್ಯತೆ ಇದೆ: ದ್ರುಪದನ ತಂದೆ ಪ್ರುಷತ ಮಹಾರಾಜ ಗಗನಮಾರ್ಗದಲ್ಲಿ ಹೋಗುತ್ತಿದ್ದ ಅಪ್ಸರೆಯನ್ನು ನೋಡಿ ಉದ್ರಿಕ್ತನಾದಾಗ ಅವನ ರೇತಸ್ಸು ಸ್ಖಲಿಸಿ ಪಾದದ ಮೇಲೆ ಬಿದ್ದು ಹಾಗೆ ಜನಿಸಿದವನೇ ದ್ರುಪದ. ದ್ರೋಣರೂ ಹೀಗೆ ಸಂಯೋಗರಹಿತ ಶಕ್ತಿಪಾತದಿಂದ ಹುಟ್ಟಿದವರು. ಇಬ್ಬರೂ ಸಂಧಿಸುವುದು ಗುರುಕುಲದಲ್ಲಿ. ದ್ರುಪದ ಯಾವುದೋ ಧ್ಯಾನದಲ್ಲಿ ದ್ರೋಣರಿಗೆ ಅರ್ಧ ರಾಜ್ಯ ಕೊಡುತ್ತೇನೆ ಎಂದು ಹೇಳಿದ್ದನ್ನೇ ಗಟ್ಟಿಯಾಗಿ ನಂಬಿ ಮೋಸ ಹೋದೆ ಎಂದು ಹಪಹಪಿಸಿದವರು. ದ್ರುಪದನ ಬಳಿಗೆ ಹೋಗಿ ಅವಮಾನಿತರಾದವರು.

“ದ್ರೋಣನು ಎಂಥಾ ಬ್ರಾಹ್ಮಣನೆಂದು ನನಗೆ ಗೊತ್ತಿತ್ತು. ಬ್ರಾಹ್ಮಣ್ಯದ ಮೇಲೆ ಅವನಿಗೇ ಅಷ್ಟು ಆಸಕ್ತಿ ಇರಲಿಲ್ಲ. ಅವನಿಗೆ ಶಸ್ತ್ರಸಂಪನ್ನನಾಗುವುದರಲ್ಲಿಯೇ ಆಸಕ್ತಿ. ಮೇಲಾಗಿ ರಾಜಭೋಗದ ಆಮಿಷ, ಆಸೆ” (ಪು.೮೦).

ದ್ರೋಣರು ಹಸ್ತಿನಾವತಿಗೆ ಹೋಗಿ ರಾಜಾಶ್ರಯ ಪಡೆದು ಕೌರವ-ಪಾಂಡವರಿಗೆ ಶಸ್ತ್ರಾಸ್ತ್ರ ವಿದ್ಯೆ ಕಲಿಸುವ ಗುರುಗಳಾಗಿ ನಿಯುಕ್ತಿಗೊಂಡರು ಎಂಬುದನ್ನರಿತ ದ್ರುಪದನ ಮನಸ್ಸಿನಲ್ಲಿ ಒಂದು ಅನುಮಾನ ಮೂಡುತ್ತದೆ. ಎಲ್ಲಿಯಾದರೂ ದ್ರೋಣರು ತಮ್ಮ ಶಿಷ್ಯರನ್ನು ತನ್ನ ಪ್ರತಿಜ್ಞಾ ಪೂರೈಕೆಗೆ ಬಳಸಿಕೊಂಡಾರೆ ಎಂಬುದಾಗಿ. ಆದರೆ ಇದು ರಾಜನೀತಿಯಾಗಲಾರದು ಎಂದು ದ್ರುಪದ ತರ್ಕಿಸುತ್ತಾನೆ:

“ಒಬ್ಬ ಬ್ರಾಹ್ಮಣನ ಸ್ವಾರ್ಥಕ್ಕಾಗಿ ಖ್ಯಾತಿವೆತ್ತ ಹಸ್ತಿನಾವತಿಯು ಸ್ನೇಹಭಾವದಿಂದಲೇ ಇರುವ ಪಾಂಚಾಲ ದೇಶಕ್ಕೆ ದ್ರೋಹ ಮಾಡೀತೆ? ಮಾಡಲಾರದು.” (ಪು.೮೦).

ಆದರೆ ದ್ರೋಣರ ಮಹತ್ವಾಂಕ್ಷೆ ಹೇಗೆ ದ್ವೇಷದ ಕಿಡಿ ಹೊತ್ತಿಸಿತು ಎನ್ನುವುದನ್ನು ದ್ರುಪದನ ಬಾಯಿಯಿಂದಲೇ ಕೇಳಿ. ಅರ್ಜುನ ದ್ರುಪದನನ್ನು ಹೆಡೆಮುರಿ ಕಟ್ಟಿ ತಂದು ದ್ರೋಣನ ಮಂಚದ ಕಾಲಿಗೆ ಕಟ್ಟಿದಾಗ

“ಹಸ್ತಿನಾವತಿಯ ಹಿರಿಯರೆಲ್ಲರೂ ಇದನ್ನು ಗಮನಿಸದಂತೆಯೇ ಇದ್ದು ಬಿಟ್ಟಿದ್ದರು… ಪಾಂಚಾಲ ರಾಜನ ಮಾನಭಂಗವು ತಮ್ಮ ರಾಜಪುತ್ರರಿಂದ ತಮ್ಮ ರಾಜಧಾನಿಯಲ್ಲಿಯೇ ಬಹಿರಂಗವಾಗಿ ನಡೆದುದಕ್ಕೆ ಅವರಾರಿಗೂ ‘ಅಯ್ಯೋ’ ಅನ್ನಿಸಲಿಲ್ಲ… ಒಂದು ವೇಳೆ ಅಂಧರಾಜನನ್ನು ಮುಂದಿಟ್ಟುಕೊಂಡು ಭೀಷ್ಮನೇ ಬಂದು ಎರಡು ಒಳ್ಳೇ ಮಾತನ್ನಾಡುತ್ತಿದ್ದರೆ ನನ್ನ ಕ್ರೋಧವು ಇಳಿದು ಹೋಗುತ್ತಿತ್ತೋ ಏನೋ..? ನನಗಂತೂ ದ್ರೋಣನ ಮೇಲಿನ ಸೇಡು ಕುದಿಯುತ್ತಿದ್ದಂತೆಯೇ ಹಸ್ತಿನಾವತಿಯನ್ನು ಧ್ವಂಸ ಮಾಡಿ ಬಿಡಬೇಕೆಂಬ ಹಠವೂ ಉಲ್ಬಣಿಸತೊಡಗಿತು. ಅಂತೆಯೇ ಅದೆಲ್ಲವನ್ನೂ ಮನಸ್ಸಿನಲ್ಲೇ ಹುದುಗಿಟ್ಟುಕೊಂಡು ಯಾರಿಗೂ ಹೇಳದೆ ಯಾರನ್ನೂ ಕೇಳದೆ ಹೊರಟು ಹೋದೆ. ಹೋದೆ ಎನ್ನುವುದಕ್ಕಿಂತ ದ್ರುಪದ ರಾಜನ ಹೆಣ ಕಾಲೆಳೆಯುತ್ತಾ ಹೋಯಿತು ಎನ್ನುವುದೇ ಯುಕ್ತವಾದೀತು.” (ಪು.೮೧).

ಭೀಷ್ಮರ ಬಗ್ಗೆಯೂ ದ್ರುಪದ ಹೇಳಿದ್ದು ಸರಿಯಾಗಿದೆಯೆಂದೇ ನನ್ನ ಭಾವನೆ.

“ಹಸ್ತಿನಾವತಿಯ ರಾಜಕಾರಣದಲ್ಲಿ ಭೀಷ್ಮನು ಒಂದು ಸಮಸ್ಯೆಯೇ ಆಗಿದ್ದನು.” (ಪು.೮೭).

ದ್ರೌಪದಿಯ ಮಾನಹರಣದ ಪ್ರಯತ್ನ ತುಂಬಿದ ರಾಜಸಭೆಯಲ್ಲಿ ನಡೆದಾಗ,

“ಭೀಷ್ಮ ದ್ರೋಣರು ಔದಾಸೀನ್ಯವನ್ನೇ ತಳೆದಿದ್ದರಂತೆ. ಕುಟುಂಬದ ಹಿರಿಯನಾಗಿ, ಧರ್ಮಜ್ಞನಾಗಿ, ಹಸ್ತಿನಾವತಿಯ ಸಂರಕ್ಷಕನಾಗಿ ಜೀವಂತನೇ ಆಗಿದ್ದ ಆ ಭೀಷ್ಮನು ಯಾಕೆ ಹಾಗೆ ಮಾಡಿದನೋ..? ಅಂಧರಾಜನ ರಾಜಸಭೆಯಲ್ಲಿ ಸೇರಿದ್ದ ಎಲ್ಲರೂ ಬುದ್ಧಿಕುರುಡರೇ ಆಗಿದ್ದರಂತೆ… ದ್ರೋಣ ದ್ರುಪದರ ಕಲಹವು ಕೇವಲ ವೈಯಕ್ತಿಕ. ಅದನ್ನು ರಾಜಕೀಯವಾಗಿ ಬೆಳೆಸಲು ಆಸ್ಪದ ಕೊಟ್ಟವನು ಭೀಷ್ಮ. ಆ ಭೀಷ್ಮ ದ್ರೋಣರಿಬ್ಬರಿಗೂ ನನ್ನ ಮಕ್ಕಳೇ ಮೃತ್ಯು ಕಾರಣರು. ಇದೇ ಯೋಗಾಯೋಗ.” (ಪು.೮೮).

ಧರ್ಮರಾಯ: ಧರ್ಮರಾಯನ ಪಾತ್ರವೂ ಪರೋಕ್ಷವಾಗಿ ಭೀಷ್ಮನನ್ನೇ ಈ ದುರಂತಮೂಲಕ್ಕೆ ಹೊಣೆಗಾರನನ್ನಾಗಿಸುತ್ತದೆ. ಕೌರವ ಪಾಂಡವರ ಒಳಗಿನ ದಾಯಾದ್ಯಮತ್ಸರವು ಬೆಳೆದು ಹೆಮ್ಮರವಾಗಲು ಉಭಯಕುಲಪಿತಾಮಹರ ನಿರ್ಲಕ್ಷ್ಯವೇ ಕಾರಣ ಎಂಬುದು ಸುಸ್ಪಷ್ಟ.

“ಹಿರಿಯರು ನಮ್ಮ ಈ ದ್ವೇಷಭಾವವನ್ನು ತೊಡೆದು ಹಾಕಲು ಹೆಚ್ಚಿನ ಪರಿಶ್ರಮವನ್ನು ವಹಿಸದಿದ್ದುದು ನಮ್ಮ ದುರ್ಯೋಗ. ಅರಸುಮಕ್ಕಳು ಅಂಕೆ ತಪ್ಪಿಯೇ ಬೆಳೆಯುತ್ತಾರೆ ಎನ್ನುವಂತಾಗಿತ್ತು.” (ಪು.೯೦).

ದ್ಯೂತ, ಮರುದ್ಯೂತದ ಪ್ರಕರಣದಲ್ಲಿ ಧರ್ಮರಾಯನ ಜೂಜಿನ ವ್ಯಸನವೇ ಪ್ರಧಾನವಾಗಿ ಕಾಣುವ ಅಂಶ. ಇಲ್ಲಿ ಪರೋಕ್ಷವಾಗಿ ವನವಾಸ ಕಾಲದಲ್ಲಿ ಪಾಂಡವರ ಶಕ್ತಿ ವರ್ಧಿಸಿದ್ದೂ ಒಂದು ಅಯಾಚಿತ ಫಲ ಎನ್ನಬಹುದು. ಉದಾ. ಅರ್ಜುನನಿಗೆ ಶಿವಾನುಗ್ರಹದಿಂದ ಪಾಶುಪತಾಸ್ತ್ರ ಪ್ರದಾನ ಇತ್ಯಾದಿ,

“ದ್ರೋಣವಧಾ ಪ್ರಕರಣದಲ್ಲಿ ಅಶ್ವತ್ಥಾಮನೆಂಬ ಆನೆ ಸತ್ತ ಸತ್ಯವನ್ನೇ ನಾನು ಹೇಳಿದ್ದು. ಅದರ ಪರಿಣಾಮವು ದ್ರೋಣರಿಗೆ ದಿಗ್ಭ್ರಮೆ ಹುಟ್ಟಲು ಕಾರಣವಾಯಿತು. ನಮಗೂ ಅದೇ ಉದ್ದೇಶವಿದ್ದದ್ದು. ಮೇಲಾಗಿ ಶ್ರೀಕೃಷ್ಣನ ಆದೇಶದಂತೆ ಹಾಗೆ ಮಾಡಿದ್ದು. ನಾನು ಅನೃತವನ್ನಾಡಲಿಲ್ಲ  ಎಂದು ನನ್ನ ವಿಶ್ವಾಸ. ಶ್ರೀಕೃಷ್ಣನ ಶಂಖಧ್ವಾನದಿಂದ ನನ್ನ ಮಾತಿನ ಸತ್ಯವು ಮರೆಯಾಯಿತು. ನೆಮ್ಮದಿಗೆಟ್ಟ ಗುರುಗಳು ಆಯುಧವನ್ನು ಚೆಲ್ಲಿಕೊಟ್ಟು ಕುಸಿದು ಕುಳಿತರು. ಅದಕಾಗಿಯೇ ಹುಟ್ಟಿದ ದೃಷ್ಟದ್ಯುಮ್ನನು ಅವನ ಕೆಲಸವನ್ನು ಆಗಲೇ ಪೂರೈಸಿಬಿಟ್ಟ.” (ಪು.೯೭).

ಇದು ಶ್ರೀಕೃಷ್ಣನ ಆದೇಶ ಎಂದಲ್ಲಿಗೆ ಮುಂದೆ ಯಾವ ಪ್ರಶ್ನೆಯೂ ಉದ್ಭವಿಸುವುದಿಲ್ಲ ಏಕೆಂದರೆ ಶ್ರೀಕೃಷ್ಣನನ್ನು ಅವತಾರ ಪುರುಷ ಎಂದು ಮೊದಲೇ ಒಪ್ಪಿಯಾಗಿದೆ. ಹಾಗಾಗಿ ಅದು ‘ದೈವ ಸಂಕಲ್ಪ’ ಎಂದೇ ಪರಿಗಣಿಸಲ್ಪಡುತ್ತದೆ.

ಆದರೆ ಕೊನೆಗೆ ಹದಿನೆಂಟು ದಿವಸಗಳ ಘನಘೋರ ಯುದ್ಧದಲ್ಲಿ ಕೌರವನ ಹನ್ನೊಂದು ಅಕ್ಷೋಹಿಣಿ ಸೈನ್ಯ, ಪಾಂಡವರ ಏಳು ಅಕ್ಷೋಹಿಣಿ ಸೈನ್ಯ ಸಂಪೂರ್ಣ ನಾಶವಾದ ಮೇಲೆ ಯುದ್ಧದ ನಿರರ್ಥಕತೆಯನ್ನು ಧರ್ಮರಾಯ ಬಿಚ್ಚಿಡುವ ಬಗೆ ಹೀಗಿದೆ:

“ಕುರುಕ್ಷೇತ್ರ ಯುದ್ಧದಲ್ಲಿ ಗೆದ್ದು ನಾವು ಪಡೆದದ್ದು ಬಹುಮಂದಿಯ ಕಣ್ಣೀರಿನ ರೋದನ ಎನ್ನುವಷ್ಟಾಯಿತು. ಯುದ್ಧವು ಬೇಕು ಎಂದವರೂ ಉಳಿಯಲಿಲ್ಲ, ಬೇಡ ಎಂದವರೂ ಉಳಿಯಲಿಲ್ಲ, ಮಡಿದ ಎಷ್ಟೋ ಮಂದಿಯಲ್ಲಿ ನಾವಷ್ಟು ಮಂದಿ ಮಾತ್ರ ಆಗ ಸಾಯಲಿಲ್ಲ. ಬದುಕಿಕೊಂಡೆವು, ಕೊಂಡದ್ದು ಮಾತ್ರ ಅಪರಿಹಾರ್ಯವಾದ ದುಃಖವನ್ನು. ಸಾಕಲ್ಲ, ಯಾರಿಗೆ ಬೇಕಾಗಿತ್ತು? ಯಾಕೆ ಬೇಕಾಗಿತ್ತು?” (ಪು.೯೮).

ಈ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ ಓದುಗರ ಮನಸ್ಸಿನಲ್ಲೂ. ಇದೊಂದು ಸಾರ್ವಕಾಲಿಕ ಪ್ರಶ್ನೆಯೂ ಹೌದಷ್ಟೇ!

ದ್ರೌಪದಿ: ದ್ರೌಪದಿ ಕುರುಕ್ಷೇತ್ರ ಯುದ್ಧಕ್ಕೆ ಅತೀ ದೊಡ್ಡ ಪ್ರಚೋದನಾ ಶಕ್ತಿಯಾಗಿ ಕಾಣಿಸಿಕೊಂಡವಳು. ಯಜ್ಞಮುಖೇನ ಅವಳ ಹುಟ್ಟೇ ತಂದೆಯಾದ ದ್ರುಪದನ ಸೇಡಿನ ಕಿಚ್ಚಿನಿಂದ ಪ್ರೇರಿತವಾದದ್ದು ಎಂದಾಗ (ಮತ್ತು ಅವಳ ಗಂಡ ಭೀಮಸೇನ. ಈಕೆ ‘ಅನಲಜೆ’ = ಬೆಂಕಿಯಲ್ಲಿ ಹುಟ್ಟಿದವಳು; ಭೀಮ ‘ಅನಲಜ’ = ವಾಯುಪುತ್ರ; ಬೆಂಕಿಯೂ ಗಾಳಿಯೂ ಸೇರಿದರೆ ವಿನಾಶವಾಗದಿದ್ದೀತೆ!) ಅವಳ ಮುಂದಿನ ಬದುಕಿನ ದಾರಿ ಹುಟ್ಟುವಾಗಲೇ ನಿರ್ಧರಿತವಾದದ್ದು. ಇದಕ್ಕೆ ಪೂರಕವೋ, ಪ್ರೇರಕವೋ ಎಂಬಂತೆ ತಂದೆ ದ್ರುಪದ ಅವಳನ್ನು ಅರ್ಜುನನಿಗೆ ಕೊಟ್ಟು ಮದುವೆ ಮಾಡಬೇಕೆಂದು ಆಗಲೇ ಸಂಕಲ್ಪ ಮಾಡುತ್ತಾನೆ:

“ಪ್ರಜ್ವಲಿಸುತ್ತಿದ್ದ ಯಾಗಾಗ್ನಿಜ್ವಾಲೆಯೇ ನನ್ನ ಜನ್ಮಕ್ಷೇತ್ರವಾಯಿತು. ಹಾಗೆಯೇ ಹುಟ್ಟಿದ್ದ ದೃಷ್ಟದ್ಯುಮ್ನನ ಹಿಂದಿನಿಂದಲೇ ಹುಟ್ಟಿ ಬಂದವಳು ನಾನು. ನನ್ನನ್ನು ಅರ್ಜುನನಿಗೇ ಕೊಡುವುದೆಂದು ನಮ್ಮ ಅಪ್ಪ ಆಗಲೇ ನಿರ್ಧರಿಸಿದ್ದರಂತೆ. ನನಗೆ ತಿಳಿವು ಮೂಡುವಾಗಲೇ ಅದು ಗೊತ್ತಾಗಿತ್ತು. ನನಗೂ ಅದು ಪ್ರಿಯವಾಗಿತ್ತು.” (ಪು.೯೯).

ಮತ್ಸ್ಯಲಾಂಛನವನ್ನು ಬ್ರಾಹ್ಮಣ ವೇಷಧಾರಿಯಾಗಿದ್ದ ಅರ್ಜುನ ಭೇದಿಸಿದಾಗ ಆತನ ಕೊರಳಿಗೆ ವರಣಮಾಲಿಕೆಯನ್ನು ಹಾಕಿ ಅವನೊಂದಿಗೆ ಬಂದಾಗ ಅವನು

“ಅಮ್ಮಾ ಒಂದು ಹೆಣ್ಣು ಸಿಕ್ಕಿತು” ಎಂದರೆ ಒಳಗಿನಿಂದ ವೃದ್ಧೆಯೊಬ್ಬಳು “ಐವರೂ ಹಂಚಿಕೊಳ್ಳಿ ಎನ್ನಬೇಕೆ?” (ಪು.೧೦೦).

ಇದಕ್ಕೆ ಅವಳ ಪೂರ್ವಜನ್ಮದ ಕಥೆಯನ್ನು ವ್ಯಾಸರು ಹೇಳಿ ಸಮಾಧಾನಿಸಿದ ಬಳಿಕವೇ ದ್ರುಪದ ಆಕೆಯನ್ನು ಪಾಂಡವರೈವರಿಗೂ ಐದು ದಿನ ಬೇರೆ ಬೇರೆಯಾಗಿಯೇ ಧಾರೆಯೆರೆದು ಕೊಟ್ಟ. ಈ ವಿಶೇಷ ವಿವಾಹದಿಂದ ಪಾಂಡವರ ಒಗ್ಗಟ್ಟಿನ ತಂತು ಗಟ್ಟಿಯಾದಂತೆ ಸಂಬಂಧಗಳು ವಿಶಿಷ್ಟವೂ ಆಯಿತು ಎನ್ನುವುದನ್ನು ದೇರಾಜೆಯವರು ಆಕೆಯ ಬಾಯಿಂದ ಹೀಗೆ ಹೇಳಿಸುತ್ತಾರೆ:

“ಧರ್ಮರಾಜನಿಗೆ ನಾನು ಹೆಂಡತಿಯೂ ನಾದಿನಿಯೂ ಆದೆ, ಭೀಮಾರ್ಜುನನಕುಲರಿಗೆ ಹೆಂಡತಿಯೂ ಅತ್ತಿಗೆಯೂ ನಾದಿನಿಯೂ ಆಗಿ ಪಂಚವಲ್ಲಭೆ ಎನಿಸಿಕೊಂಡೆ.” (ಪು.೧೦೧).

ಇಷ್ಟು ಸೌಭಾಗ್ಯವಿದ್ದರೂ ಆಕೆಯ ಮಾನಹರಣದ ಯತ್ನ ತುಂಬಿದ ರಾಜಸಭೆಯಲ್ಲಿ ನಡೆದಾಗ ಆಕೆ ಹೇಳುವ ಮಾತು ಎಷ್ಟು ತೀಕ್ಷ್ಣವಾಗಿತ್ತು ನೋಡಿ:

“ಸತ್ತ ಹೆಣವನ್ನಾದರೂ ಬಟ್ಟೆಯಿಂದ ಮುಚ್ಚುತ್ತಾರೆ. ಈ ಪಾಪಿಗಳು ಬದುಕಿದ್ದ ನನ್ನ ಮೈಮೇಲಿನ ಬಟ್ಟೆಯನ್ನೇ ಕೀಳಲು ತೊಡಗಿದರು. ಮೈಯ ತೊಗಲನ್ನೇ ಹರಿಯುತ್ತಿರುವಂತೆ ವೇದನೆಯಾಯಿತು. ಅತ್ತುಬಿಟ್ಟೆ. ಗಾಂಧಾರಿಯನ್ನೂ, ಭಾನುಮತಿಯನ್ನೂ, ದುಶ್ಯಳೆಯನ್ನೂ ಹೆಸರೆತ್ತಿ ಕೂಗಿ ಗೋಳಿಟ್ಟೆ. ಆ ಹೆಂಗಸರಾರೂ ಸೊಲ್ಲೆತ್ತಲಿಲ್ಲ. ಧೃತರಾಷ್ಟ್ರನನ್ನು ಕೈಮುಗಿದು ಪ್ರಾರ್ಥಿಸಿದೆ. ಅವನಿಗೆ ಕಣ್ಣಿಲ್ಲ ನಿಜ, ಕಿವಿಯೂ ಇಲ್ಲದವನಂತೆ ಇದ್ದುಬಿಟ್ಟ. ಭೀಷ್ಮ, ದ್ರೋಣರಲ್ಲಿ ಬೇಡಿಕೊಂಡೆ. ಅವರು ತಮ್ಮ ಕಣ್ಣನ್ನೇ ಮುಚ್ಚಿಕೊಂಡು ಧೃತರಾಷ್ಟ್ರನನ್ನೇ ಅನುಸರಿಸಿದರು. ಬಾಯಿಯೇ ಬಿಡಲಿಲ್ಲ… ತುಂಬಿದ ರಾಜಸಭೆ ಗೊಂಡಾರಣ್ಯದಂತಾಗಿತ್ತು. ಧರ್ಮವೆಂಬುದು ಪಾಂಡವರ ಕಾಲಬುಡದಲ್ಲಿಯೇ ಮುರುಟಿಬಿದ್ದಿತ್ತು.

(ಈ ‘ಕಾಲಬುಡ’ ಶಬ್ದ ಹವ್ಯಕ ಭಾಷೆಯ ಒಂದು ಟಿಪಿಕಲ್ ಪ್ರಯೋಗ! ದೇರಾಜೆಯರು ಇದನ್ನು ಉದ್ದೇಶಪೂರ್ವಕ ಬಳಸಿದ್ದೋ ಅಲ್ಲವೋ ಎಂಬುದನ್ನು ನಾನು ಹೇಳಲಾರೆ; ಆದರೂ ನಮ್ಮ ನಮ್ಮ ಭಾಷೆಯ ನುಡಿಗಟ್ಟುಗಳು ಹೇಗೆ ನಮ್ಮ ಅಭಿವ್ಯಕ್ತಿಯಲ್ಲಿ ತಾನೇ ತಾನಾಗಿ ಬರುತ್ತವೆ ಎಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆ.)

ನ್ಯಾಯವೆಂಬುದು ಧೃತರಾಷ್ಟ್ರನ ಕಣ್ಣುಗಳೊಂದಿಗೇ ಇಂಗಿಹೋಗಿತ್ತು. ಮಾನವೀಯತೆಯೆಂಬುದು ಕೌರವಾದಿಗಳ ಮದಾಂಧತೆಯಲ್ಲಿ ಮುಚ್ಚಿಹೋಗಿತ್ತು.” (ಪು.೧೦೩).

ಮತ್ತೆ ಸೇಡಿನ ಜ್ವಾಲೆ ಪ್ರಜ್ವಲಿಸಿತ್ತು. ದ್ರೌಪದಿ ಬಿಚ್ಚಿದ ಮುಡಿಯನ್ನು ಕಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದಳು. ಆ ಹದಿನೆಂಟು ದಿನಗಳ ಯುದ್ಧ ಮುಗಿದು ಆಕೆಯ ಸೇಡಿನ ಜ್ವಾಲೆ ತಣಿದಾಗ ಉಳಿದದ್ದೇನು?

“ಸೇಡು ತೀರಿದ ಮೇಲೆ ನೋಡಿ ಅನುಭವಿಸಿದ ದುಃಖ ಎಂತಹುದು? ಧೃತರಾಷ್ಟ್ರ ಗಾಂಧಾರಿಯರು ಏನೇ ಮಾಡಿದ್ದರೂ ಇದ್ದ ಮಕ್ಕಳನ್ನೆಲ್ಲಾ ಕಳೆದುಕೊಂಡು ದುಃಖಿಸುತ್ತಿರುವ ಅವರನ್ನು ನೋಡುವುದು ಹೇಗೆ? ಗೆದ್ದ ಮಕ್ಕಳ ಭಾಗ್ಯವನ್ನು ಕಂಡು ಆನಂದಗೊಳ್ಳಬೇಕಾದ ನಮ್ಮ ಅತ್ತೆ ಕರ್ಣನನ್ನು ಕಳೆದುಕೊಂಡು ಚಿಂತಿಸುತ್ತಿರುವುದನ್ನು ಕಾಣುವುದು ಹೇಗೆ? ಗಂಡನನ್ನು ಕಳೆದುಕೊಂಡ ತುಂಬಿದ ಗರ್ಭಿಣಿ ಉತ್ತರೆಯನ್ನು ಸಂತೈಸುವುದು ಹೇಗೆ? ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಸುಭದ್ರೆಯ ಕಣ್ಣೀರನ್ನು ತೊಡೆಯುವುದು ಹೇಗೆ? ಇನ್ನೂ ಎಷ್ಟೆಷ್ಟೋ ಮಂದಿ ತಮ್ಮವರನ್ನೆಲ್ಲಾ ಕಳೆದುಕೊಂಡು ಶೋಕಿಸುವುದನ್ನು ನೋಡುವುದಾದರೂ ಹೇಗೆ? ಉತ್ತರೆಯ ಗರ್ಭವು ಬೆಳೆದು ಮುಂದೆ ವಂಶದ ಕುಡಿ ಚಿಗುರೊಡೆಯಬೇಕು. ಅಷ್ಟಾಯಿತು ಈ ಯುದ್ಧದಿಂದ. ನಾನಂತೂ ಪ್ರಜ್ವಲಿಸುತ್ತಿದ್ದ ಯಾಗಾಗ್ನಿಜ್ವಾಲೆಯಲ್ಲೇ ಹುಟ್ಟಿದೆ, ಕಷ್ಟಸಂಕಷ್ಟಗಳ ಕುಲುಮೆಯಲ್ಲೇ ಬೆಳೆದೆ, ಇನ್ನುಳಿದ ಶೇಷಾಯುಷ್ಯವನ್ನು ಈ ದುಃಖಾಗ್ನಿಕುಂಡದಲ್ಲೇ ಕಳೆಯಬೇಕಾಗಿ ಬಂತು ಎಂದು ಅಂದೇ ಅನಿಸಿತ್ತು.” (ಪು.೧೦೬).

ಕುಂತಿ: ಕುಂತಿಯ ಪಾತ್ರದ ವಿಶೇಷತೆ ಏನೆಂದರೆ ಆಕೆ – “ಪರಸ್ಪರ ಹೋರಾಡುವುದಕ್ಕಾಗಿಯೇ ಮಕ್ಕಳನ್ನು ಪಡೆದ ದುರ್ದೈವಿ” (ಪು.೧೦೭). “ಕರ್ಣನು ಸತ್ತ, ಅವನ ತಾಯಿಯಾದ ನಾನು ಬದುಕಿದ್ದೆ. ಅರ್ಜುನನು ಗೆದ್ದ, ಅವನ ತಾಯಿಯಾಗಿ ನಾನು ಸತ್ತಿದ್ದೆ. ಸತ್ತವನಿಗೂ ತಾಯಿ ನಾನೇ, ಗೆದ್ದವನಿಗೂ ತಾಯಿ ನಾನೇ. ಆ ಇಬ್ಬರನ್ನೂ ಹಡೆದು ಇಬ್ಬಗೆಯ ಭಾವದಿಂದಲೇ ಬದುಕಿಯೂ ಸತ್ತಂತಾಯಿತು.” (ಪು.೧೧೭).

ಈ ದುರಂತ ಯಾವ ತಾಯಿಗೆ ತಾನೇ ಸಹ್ಯವಾದೀತು? ಬಾಲಿಶತನದಲ್ಲಿ ಪಡೆದ ಮಗ ಕರ್ಣ. ಅವಳ ಎಲ್ಲಾ ಸಂತಾನವೂ ಕ್ಷೇತ್ರಜವೇ. ಪಿತೃಗಳಾಗಿ ಮಹಾಮಹಿಮರನ್ನು ಹೊಂದಿದ ಪಾಂಡವರು ಒಂದು ದಿನವಾದರೂ ಸುಖದಿಂದ, ನೆಮ್ಮದಿಯಿಂದ ಬಾಳಿದರೇ? ಹಾಗಾಗಿ ಅವರು ಸಾಧಿಸಿದ್ದೇನು, ಪಡೆದದ್ದೇನು ಎಂಬ ಪ್ರಶ್ನೆಗೆ ಯಾರು ಉತ್ತರಿಸಬೇಕು?

ಗಾಂಧಾರಿಯ ಕುರಿತು ಕುಂತಿ ಹೇಳುವ ಮಾತು ವಿಚಾರಯೋಗ್ಯವೇ ಆಗಿದೆ.

“ತನ್ನ ಗಂಡನು ಹುಟ್ಟು ಕುರುಡನಾದ್ದರಿಂದ ತನಗೂ ಕಣ್ಣು ಕಾಣುವುದು ಬೇಕಿಲ್ಲ ಎಂದು ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳವಳು. ಅನೇಕರು ಅವಳ ಆ ರೀತಿಯ ಭಕ್ತಿಯನ್ನು ಮೆಚ್ಚಿ ಕೊಂಡಾಡುತ್ತಿದ್ದರು. ನನಗೇಕೋ ಅದು ಅತಿರೇಕವೆಂದೇ ಕಾಣುತ್ತಿತ್ತು. ಕಣ್ಣು ಬೇಡವಾದರೆ ಕುಕ್ಕಿ ಕುರುಡೇ ಮಾಡಿಕೊಳ್ಳಬಹುದಾಗಿತ್ತು. ಹಾಗೆ ಮಾಡಿಕೊಳ್ಳುವುದಕ್ಕೆ ಅವಳ ಕಣ್ಣೇ ಅಲ್ಲವೇ? ಬಟ್ಟೆಯನ್ನು ಮಾತ್ರ ಅಡ್ಡವಾಗಿ ಕಟ್ಟಿಕೊಂಡದ್ದು. ಅಗತ್ಯವಿದ್ದಾಗ ನೋಡುವಂತಿರಬೇಕು ಎಂಬುದು ಅದರ ಒಳಗುಟ್ಟಿರಬೇಕೆಂದು ನನಗನಿಸುತ್ತಿತ್ತು.” (ಪು.೧೦೮).

ಹೌದು ಎಂದು ನಮಗೂ ಅನಿಸುತ್ತದೆ ಅಲ್ಲವೇ? ಆಕೆಯಾದರೂ ಕಣ್ಣು ತೆರೆದು ನೋಡಿರುತ್ತಿದ್ದರೆ ಕುರುಡ ಗಂಡ ಮತ್ತು ಮಕ್ಕಳು ದಾರಿ ತಪ್ಪಿದಾಗ ಅವರನ್ನು ಸರಿಪಡಿಸುವ ಅವಕಾಶವಾದರೂ ಅವಳ ಪಾಲಿಗಿರುತ್ತಿತ್ತೋ ಏನೋ? ಅದನ್ನು ತಾನಾಗಿಯೇ ಕಳೆದುಕೊಂಡಳು ಎಂದು ಭಾವಿಸಬಹುದು.

। ಇನ್ನು ನಾಳೆಗೆ ।

‍ಲೇಖಕರು nalike

July 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: