ದೃಶ್ಯ ಟಾನಿಕ್ ಇದು!

 ಕಿರಣ್ ರಾಜನಹಳ್ಳಿ
ಬಹಳ ವರ್ಷಗಳ ಹಿಂದೆ ಕೆಲವು ಸಿನಿಮಾ ರಸಗ್ರಹಣ ಶಿಬಿರಗಳಲ್ಲಿ ಭಾಗವಹಿಸಿದ್ದೆ. ಬಾದಾಮಿ ಹೌಸ್ , ಹೆಗ್ಗೋಡಿನ ನೀನಾಸಂನಲ್ಲಿ ನಡೆಯುತ್ತಿದ್ದ ಆ ಶಿಬಿರಗಳಲ್ಲಿ ಭಾಗವಹಿಸುವುದೇ ಒಂದು ರೋಚಕ ಅನುಭವ! ದಿನಕ್ಕೆ ಕಡಿಮೆಯೆಂದರೂ ನಾಲ್ಕೈದು ಸಿನಿಮಾಗಳ ರಸದೌತಣ! ಪ್ರಪಂಚದ ವಿವಿಧ ಭಾಷೆಗಳ ಆಯ್ದ ಒಳ್ಳೆಯ ಸಿನಿಮಾಗಳನ್ನು ನೋಡುತ್ತಾ ನೋಡುತ್ತಾ ಆ ಸಿನಿಪ್ರಪಂಚದಲ್ಲಿ ಕಳೆದು ಹೋಗುವುದು ಇದೆಯಲ್ಲಾ…ವ್ಹಾ, ಅದ್ಭುತ!!
ಒಂದಾದ ಮೇಲೊಂದರಂತೆ ಸಿನಿಮಾ ನೋಡುವುದೂ ಸವಾಲಿನ ವಿಷಯವೇ. ಆತ್ಮ ನಿಗ್ರಹ ಬೇಕು ಅದಕ್ಕೆ… ಆತ್ಮ ಸಂಯಮ ಬೇಕು! ಅದರಲ್ಲೂ ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತಾ ಬೋರ್ ಹೊಡೆಸುವ ಸಿನಿಮಾಗಳನ್ನು ತಾಳ್ಮೆಯಿಂದ ನೋಡುವುದಕ್ಕೂ ತಾಕತ್ ಬೇಕು! …ಹಾಗೆ ಲೆಕ್ಕವಿಲ್ಲದಷ್ಟು ಸಿನಿಮಾಗಳನ್ನು ನೋಡುತ್ತಾ, ಸಿನಿಮಾ ಭಾಷೆ ಚೆನ್ನಾಗಿ ಮನದಟ್ಟಾಗಿದೆ. ಸಿನಿಮಾದ ಧಮನಿ ಧಮನಿಯೂ ಅರ್ಥವಾಗಿಬಿಟ್ಟಿದೆ. ಒಂದೆರಡು ಸ್ಥಳೀಯ ಪತ್ರಿಕೆಗಳಿಗೆ ಸಿನಿಮಾ ವಿಮರ್ಶೆಯನ್ನೂ ಕೆಲವು ಕಾಲ ಬರೆದು, ಆ ಕ್ಷೇತ್ರವನ್ನೂ ಬಿಟ್ಟಿಲ್ಲ ಎಂಬ ಹೆಮ್ಮೆಯನ್ನೂ ಹೊಂದಿದ್ದೂ ಆಗಿದೆ!
‘ಸಿನಿಜೋಶ್’ಪತ್ರಿಕೆಗೆ ಮೂರು ವರ್ಷಗಳ ಕಾಲ ನಾನೇ ರಚಿಸಿದ “ಸಿನಿ ಪದಬಂಧ” ಅಂಕಣವನ್ನೂ ಬರೆದಾಯ್ತು. ಸಿನಿಮಾ ಬಗ್ಗೆ ಇಷ್ಟೊಂದು ತಿಳಿದುಕೊಂಡಿರುವೆನಾ ಎಂದು ನಾನೇ ಅಚ್ಚರಿ ಪಟ್ಟಿದ್ದೂ ಆಯ್ತು! ನಿಜ ಹೇಳಬೇಕೆಂದರೆ ನಾನು ಸಿನಿಮಾವನ್ನು ನೋಡುತ್ತಿದ್ದೆ ಎನ್ನುವುದಕ್ಕಿಂತಲೂ ಅದರ ಅಣುವಣುವನ್ನೂ ಆಳವಾಗಿ ಅಧ್ಯಯನ ಮಾಡುತ್ತಿದ್ದೆ! ಈ ಲಾಕ್ ಡೌನ್ ಸಮಯದಲ್ಲಿ ಮತ್ತೇ ಅತಿ ದೀರ್ಘ ಕಾಲದ ಸಿನಿಮಾ ರಸಗ್ರಣ ಶಿಬಿರದಲ್ಲಿ ಭಾಗಿಯಾಗಿದ್ದೇನೆ… ಸ್ಥಳ: ಮನೆ! ಹಾಗಾಗಿ ನನಗೆ ಬೇಕಾದ ಹಾಗೆ ಸಮಯವನ್ನು ಹೊಂದಿಸಿಕೊಳ್ಳಬಹುದಾಗಿದೆ. ಓಡಾಟದ ಸಮಯ ಉಳಿಯುವುದರಿಂದ ಹೆಚ್ಚಿಗೆ ಸಿನಿಮಾಗಳನ್ನ ನೋಡಬಹುದು.

ಪ್ರೈಮ್, ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್, ಆಪಲ್ ಟಿ.ವಿ, ಯೂ ಟ್ಯೂಬ್… ಎಲ್ಲಾ ಥೇಟರ್ ಗಳೂ ಮನೆಗೇ ಬಂದಿರುವುದರಿಂದ ಇಷ್ಟವಾದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕಳೆದೆರಡು ತಿಂಗಳುಗಳಿಂದ ಸಿನಿಮಾಗಳನ್ನು ನೋಡೀ ನೋಡೀ ನಾನು ಮತ್ತು ನನ್ನ ಪತಿ ಎಷ್ಟು ಸಿನಿಬೌದ್ಧಿಕವಾಗಿ ಬೆಳೆದು ಬಿಟ್ಟಿದ್ದೇವೆಂದರೆ, ಅಂತಿಂಥ ಸಿನಿಮಾವನ್ನು ಐದು ನಿಮಿಷದ ಮೇಲೆ ನೋಡುವುದಕ್ಕೂ ಆಗುತ್ತಿಲ್ಲ. ತಕ್ಷಣ ಇನ್ನೊಂದು ಸಿನಿಮಾಕ್ಕೆ ಹಾರುತ್ತೇವೆ. ಅಸಂಖ್ಯ ಸಿನಿಮಾಗಳನ್ನು ನೋಡಿದ್ದರಿಂದ ಕೆಲವೊಮ್ಮೆ ಆ ಎಲ್ಲಾ ಸಿನಿಮಾಗಳ ಹೆಸರೂ ಮರೆತು ಹೋಗಿರುತ್ತದೆ. ಅದನ್ನೇ ಹಾಕಿಕೊಂಡು ನೋಡುತ್ತಿದ್ದಾಗ, ಸ್ವಲ್ಪ ಹೊತ್ತಿನಲ್ಲೇ ನೋಡಿದ ಸಿನಿಮಾ ಎಂದು ಗೊತ್ತಾಗಿ ಬಿಡುತ್ತದೆ.
“ಹೇ… ಇದನ್ನು ನೋಡಿಯಾಗಿದೆ” ಎಂದು ಒಬ್ಬರು, “ಹೌದಾ…ನಂಗ್ಯಾಕೋ ನೋಡಿಲ್ಲ ಅನ್ನಿಸ್ತಿದೆ! ಏನು ಕತೆ ಹೇಳಿ” ಎಂದು ಇನ್ನೊಬ್ಬರೂ, “ಹಾ… ಹೌದೌದು! ಈಗ ನೆನಪಾಯ್ತು” ಎಂಬ ಸಂಭಾಷಣೆ ಸಾಮಾನ್ಯವಾಗಿಬಿಟ್ಟಿದೆ. ಪ್ರಶ್ನೆ ಪತ್ರಿಕೆಯನ್ನು ಸಾಲ್ವ್ ಮಾಡುವ ರೀತಿ “ಈ ಸಿನಿಮಾ ಆಯ್ತು, ಇದು ನೋಡಿದ್ವಿ, ಇದು ಮುಗೀತು, ಇದು ಬೇಡ…”, ಎನ್ನುತ್ತಾ ನೋಡದ ಸಿನಿಮಾಗಳನ್ನು ಜಾಲಾಡುತ್ತೇವೆ! ನನ್ನ ಗ್ರಹಚಾರಕ್ಕೋ… ಸಿನಿಮಾ ಪ್ರಾರಂಭವಾಗುತ್ತಿದ್ದ ಹಾಗೇನೇ ಸಿನಿಮಾದ ಅಂತ್ಯ ಏನೆಂದು ಗೊತ್ತಾಗಿ ಬಿಡುತ್ತದೆ.
ಅದನ್ನು ಮನೆಯವರಿಗೂ ಹೇಳಿ ಬೈಸಿಕೊಂಡಿದ್ದೂ ಆಗಿದೆ. “ನೀನು ಎಂಡಿಂಗ್ ಗೆಸ್ ಮಾಡಿದ್ರೆ ನಿನ್ನ ಮನಸ್ನಲ್ಲೇ ಇಟ್ಕೊ… ನಮಗೆ ಹೇಳ್ಬೇಡ. ನಮಗೆ ಕ್ಯೂರಿಯಾಸಿಟಿನೇ ಇಲ್ದಂಗೆ ಮಾಡ್ತೀಯಾ,” ಎಂದೆಲ್ಲಾ ಗದರಿಸಿಕೊಂಡಿರುವುದರಿಂದ ಈಗ ಹೇಳಲು ಬಾಯ್ ತೆರೆದವಳು… ಹೇಳಲಾಗದೆ ಹಾಗೇ ನುಂಗಿಕೊಳ್ಳುತ್ತೇನೆ…ಏನೇ ಹೇಳಿ, ಈ ಶತಮಾನ ನಮಗಿತ್ತ ಬಹುದೊಡ್ಡ ಗಿಫ್ಟ್ ” ಸಿನಿಮಾ”! ಎಂಥಾ ನೋವುಗಳನ್ನೂ, ಕೊರೆಯುವ ಬೇಸರವನ್ನೂ ಕೆಲವು ತಾಸುಗಳಾದರೂ ಮರೆಯುವಂತೆ ಮಾಡುವ ದೃಶ್ಯ ಟಾನಿಕ್ ಇದು!

‍ಲೇಖಕರು nalike

May 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: