ಋತುಗಳನ್ನು ಬಣ್ಣಿಸುವ ‘ಋತುಚಕ್ರ’

ಶ್ಯಾಮಲಾ ಮಾಧವ

ಮರಾಠಿ ಭಾಷಾ ಪ್ರಕಾಂಡ ಪಂಡಿತೆ, ಸಾಹಿತಿ ದುರ್ಗಾ ಭಾಗವತ್ ಅವರ ಅಮೂಲ್ಯ ಕೃತಿ ‘ಋತುಚಕ್ರ’ವನ್ನು ಮುಂಬೈಯ ಗಣಪತಿ ಪೈ ಅವರು ಸೊಗಸಾಗಿ, ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯ ಶೀರ್ಷಿಕೆಯೇ ಸೂಚಿಸುವಂತೆ ಪ್ರಕೃತಿಯಲ್ಲಿ ಋತುಗಳ ಪರ್ಯಟನೆಯ ಮೋಹಕ ಚಿತ್ರವನ್ನು ನಮ್ಮ ಮುಂದಿಡುತ್ತದೆ, ಈ ಕೃತಿ.

ಮೂಲ ಲೇಖಕಿ ದುರ್ಗಾ ಭಾಗವತ್‌ರ ಭಾಷಾ ಪಾಂಡಿತ್ಯ, ಸೂಕ್ಷ್ಮಾತಿಸೂಕ್ಷ್ಮ ಅವಲೋಕನಾ ಶಕ್ತಿ, ಪದಲಾಲಿತ್ಯ ಹಾಗೂ ಕಲ್ಪನಾ ವಿಲಾಸವು, ಗಣಪತಿ ಪೈ ಅವರ ರಸಗ್ರಹಣ ಹಾಗೂ ಭಾವಾಭಿವ್ಯಕ್ತಿಯ ಸಾಮರ್ಥ್ಯದಿಂದ ಅತ್ಯಂತ ಸೂಕ್ತವಾಗಿ ಪಡಿಮೂಡಿರುವುದನ್ನು ನಾವಿಲ್ಲಿ ಕಾಣಬಹುದು.

ಮುಂಬಯಿಯ ರಾಮನಾಥ ಜೋಶಿ ಅವರ ಪ್ರತಿಮಾ ಪ್ರಕಾಶನದಿಂದ ೧೯೯೧ರಲ್ಲಿ ಬೆಳಕು ಕಂಡ ಈ ಕೃತಿಗೆ ಸಾಹಿತಿ ಶಂ.ಬಾ.ಜೋಶಿ ಅವರ ಶ್ಲಾಘನೆಯ ಮಾತುಗಳ ಮುನ್ನುಡಿಯಿದೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ತಾನೀ ಕೃತಿಯನ್ನು ದುರ್ಗಾಭಾಗವತರ ಪಾದಪದ್ಮಗಳಿಗೆ ಸಮರ್ಪಿಸಿರುವುದಾಗಿ ಅನುವಾದಕರು ಹೇಳಿ ಕೊಂಡಿದ್ದಾರೆ.

ಮೂಲ ಲೇಖಕಿ ದುರ್ಗಾ ಭಾಗವತ್ ಬಗ್ಗೆ ವಿಹಂಗಮ ನೋಟದ ಪರಿಚಯಾತ್ಮಕ ಲೇಖನವೂ ಇಲ್ಲಿದೆ. ಅವರ ಬಳಿ ವಿಶ್ವ ವಿದ್ಯಾಲಯದಿಂದ ಹೊರತಾದ ವಿದ್ಯಾರ್ಜನೆಯ ಭಾಗ್ಯ ತನ್ನದಾಗಿದ್ದು, ಅಂಕೆ ಶಂಕೆಗಳನ್ನು ಪರಿಹರಿಸಿಕೊಂಡು ಅವರಿಂದ ಸಮರ್ಪಕ ವಿವರಣೆ ಪಡೆದ ಕಾರಣವೇ ‘ಋತುಚಕ್ರ’ದ ಅನುವಾದ ಸಾಧ್ಯವಾಯಿತೆಂದು ಅವರು ತನ್ನ ಮನೋಗತದಲ್ಲಿ ಹೇಳಿಕೊಂಡಿದ್ದಾರೆ. ಮೂಲ ಲೇಖಕರ ಮುನ್ನುಡಿಯ ಅನುವಾದವೂ ಇಲ್ಲಿದೆ.

ದುರ್ಗಾ ಭಾಗವತ್ ಅವರು ಕ್ರಾಂತಿಕಾರಿ ಧೀರ ಮಹಿಳೆ ಎನ್ನಬಹುದು. ತುರ್ತು ಪರಿಸ್ಥಿತಿಯ ವಾದಗ್ರಸ್ತ ದಿನಗಳಲ್ಲಿ, ತಮ್ಮ ವಿಚಾರ ಮತ್ತು ಮತಸ್ವಾತಂತ್ರ್ಯವನ್ನು ಸರಕಾರಕ್ಕೆ ಮಾರಬಾರದೆಂಬ ಅಭಿಪ್ರಾಯದಿಂದ ಸರಕಾರದ ಯಾವುದೇ ಪುರಸ್ಕಾರ ಇಲ್ಲವೇ ಅನುದಾನವನ್ನು ಸ್ವೀಕರಿಸೆನೆಂದು ಪ್ರತಿಜ್ಞೆಗೈದು, ಅಂತೆಯೇ, ೧೯೯೦ರಲ್ಲಿ ಮಹಾರಾಸಹತರಾಷ್ಟ್ರ ಸರಕಾರ ನೀಡಿದ ಮಹಾರಾಷ್ಟ್ರ ಗೌರವ ಪುರಸ್ಕಾರ ಮತ್ತು ಒಂದು ಲಕ್ಷ ರೂಪಾಯಿಯ ಅನುದಾನವನ್ನು ತಿರಸ್ಕರಿಸಿ ಕೋಲಾಹಲವೆಬ್ಬಿಸಿದವರು.

ತಮ್ಮ ‘ಋತುಚಕ್ರ’, ‘ವ್ಯಾಸಪರ್ವ’ ಮತ್ತು ‘ಪೈಸ್’ ಕೃತಿಗಳಿಂದ ಅವರು ಮರಾಠಿ ಸಾಹಿತ್ಯದ ಧ್ರುವತಾರೆಯೆನಿಸಿದ್ದಾರೆ. ಅವರ ಅನುವಾದ ಕೃಷಿಯೂ ಅಪಾರ. ಪಾಲಿ ಭಾಷೆಯ ಜಾತಕ ಕಥೆಗಳನ್ನು ಅನುವಾದಿಸಿ ಏಳು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಹನ್ನೆರಡು ವರ್ಷಗಳ ಅವರ ಪರಿಶ್ರಮದಿಂದ ಬಾಣ ಭಟ್ಟನ ‘ ಕಾದಂಬರೀ’ ಕೃತಿಯ ಮರಾಠೀ ಅನುವಾದವೂ ಬೆಳಕು ಕಂಡು ಅವರ ವಿದ್ವತ್ತಿಗೆ ದ್ಯೋತಕವಾಗಿದೆ. ಬಂಗಾಳಿಯನ್ನು ಅಭ್ಯಸಿಸಿ ರವೀಂದ್ರನಾಥ ಠಾಕೂರರ ‘ಲೋಕ ಸಾಹಿತ್ಯ’ವನ್ನೂ ಮರಾಠಿಗೆ ನೀಡಿದ್ದಾರೆ.

ಋತುಚಕ್ರದ ಅಧ್ಯಾಯಗಳ ಶೀರ್ಷಿಕೆಗಳೇ ಚೇತೋಹಾರಿಯಾಗಿವೆ. ಅನುಕ್ರಮವಾಗಿ, ‘ವಸಂತ ಹೃದಯ ಚೈತ್ರ’, ‘ಚೈತ್ರ ಮಿತ್ರ ವೈಶಾಖ’, ‘ಜ್ಯೇಷ್ಠದ ಪ್ರಥಮ ಮೇಘ ಮಂಡಲ’, ‘ಮೇಘ ಶ್ಯಾಮ ಆಷಾಢ’, ‘ಶ್ರಾವಣ ಶೃಂಖಲೆ’, ‘ಪುಷ್ಪಮಂಡಿತ ಭಾದ್ರಪದ’, ‘ಹೊಂಬಣ್ಣದ ಆಶ್ವೀಜ’, ‘ಸಂಧ್ಯಾರಂಜಿತ ಕಾರ್ತಿಕ’, ‘ಪ್ರಶಾಂತ ಮತ್ತು ಪ್ರಕ್ಷಬ್ಧ ಮಾರ್ಗಶಿರ’, ‘ತಾಲಬಧ್ಧ ಪುಷ್ಯ’, ‘ಮಾಯಾವಿ ಮಾಘ’ ಮತ್ತು ಕೊನೆಗೆ ‘ರೂಪಧಾರಿ ಫಾಲ್ಗುಣ’ ಎಂದಿರುವ ಶೀರ್ಷಿಕೆಗಳೇ ಹೂರಣದ ಪದಗುಂಫನದ ಮಾಧುರ್ಯವನ್ನು ಸೂಚಿಸುತ್ತವೆ. ಚೈತ್ರನು ಕುಸುಮಾಕರ; ಹೂವಿನ ಧೂಳಿಯಲ್ಲಿ ಹೊರಳಾಡುವವನೇ ವಸಂತ, ಎನ್ನುತ್ತಾ ಮಧುಮಾಸದ ಜೀವ ಚೈತನ್ಯವನ್ನೂ, ಪ್ರಕೃತಿಯ ಕಾಮೋತ್ಕಟ ಚೇಷ್ಟೆಯ ಜೀವ ಸೃಷ್ಟಿಯ ತಂತ್ರವನ್ನೂ ವರ್ಣಿಸಲಾಗಿದೆ.

ಲೇಖಕಿಯ ಸೂಕ್ಷ್ಮಾತಿಸೂಕ್ಷ್ಮ ಅವಲೋಕನವು ಇಲ್ಲಿ ಬಿಚ್ಚಿಡುವ ಹೂ, ಹಣ್ಣು, ತರು, ಲತೆಗಳ, ಹಕ್ಕಿ, ಪಕ್ಕಿ, ಕ್ರಿಮಿಕೀಟಗಳ ವರ್ಣನೆ ಅಸದಳ! ನಳನಳಿಸುವ ಗುಲಾಬಿ ಚಿಗುರೆಲೆಗಳ ಅಶ್ವತ್ಥ ಮರದ ಸೊಬಗೇ ನಮ್ಮನ್ನು ಅಯೋಮಯ ಗೊಳಿಸಿದರೆ, ಆ ಮರವನ್ನು ಹಬ್ಬಿ, ತಬ್ಬಿ, ಎದೆಯೆತ್ತರಕ್ಕೆ ನಿಂತು ಮುತ್ತಿಡುತ್ತಿರುವ ಮಧುಮಾಲತಿಯ ದಟ್ಟ ಗುಲಾಬಿ ಚೆಂಡುಗಳ ವರ್ಣನೆಯಂತೂ ಒದುಗರ ಮೈ ಮರೆಸುವಂತಿದೆ.

ಮಲಬಾರ್ ಹಿಲ್‌ನ ಪುಷ್ಪಿತ ಅಶೋಕ ವೃಕ್ಷಗಳ ಸೊಬಗು; ಹೆಣ್ಣು ಅಶೋಕಗಳಿಗಿಂತ ಅಧಿಕ ಪ್ರಮಾಣದ ಹೂಗಳ ತುರಾಯಿಗಳಿಂದ ಶೋಭಿಸುವ ಗಂಡು ಅಶೋಕ ವೃಕ್ಷಗಳು; ಗುಜರಾತಿನಲ್ಲಿ ಚುನಡಿ ಎಂದು ಕರೆಯಲ್ಪಡುವ, ದುರ್ಗಂಧಿ ಅಥವಾ ಘಾಣೇರಿ ಹೂಗಳ ಅಸಾಧಾರಣ ವರ್ಣವೈಭವ; ಗಗನ ಚುಂಬಿ ತೆಂಗುಗಳಲ್ಲಿ ಉಗುರಿನ ಗಾತ್ರದ ಅಚ್ಚ ಹಳದಿ ಬಣ್ಣದ, ಮೂರು ಎಸಳುಗಳ, ಹಳದಿ ಕೇಸರಗಳ ಮುದ್ದು ಪುಟ್ಟ ಹೂಗಳು; ಸುರ ಅಡಕೆಯ ಎರಡು ಮೊಳ ಉದ್ದದ ಪಚ್ಚೆಯ ಮಣಿಗಳ ಹಾರಗಳ ಗೊಂಚಲುಗಳು; ಸುರಗಿಯ ಸುಂದರ ಕೇಸರ ಪರಾಗಗಳ, ಉಗುರಿನ ಗಾತ್ರದ ಬಿಳಿ ಎಸಳುಗಳುಳ್ಳ ಕಾಂಡಕ್ಕೇ ಅಂಟಿಕೊಂಡಿರುವ ಹೂಗಳು. ಅಂತೆಯೇ ಪುನ್ನಾಗದ ಮರಗಳು ಸೊಗಸು. ಬೇವಿನ ಮರಗಳ ನಸುನೀಲ ತುರಾಯಿಗಳು ; ಬಾಲ ಘನಶ್ಯಾಮ ಕೃಷ್ಣನಂತೆ ಕಾಣುವ ಹಲಗಲಿ (ವೆಲ್ವೆಟ್) ಹೂಗಳು ರಸ್ತೆಯ ಮೇಲೆ ಹಾಸಿದಂತಿರುವ ಪರಿ ! ವಸಂತ ಲಕ್ಷ್ಮಿಯ ಧವಳ ಲಾಸ್ಯ ಹೊಮ್ಮುವ ಬಿಳಿ ಸಂಪಿಗೆಮರ ! ಮುತ್ತಲ, ಬೂರಲ ಮತ್ತು ಸಂಪಿಗೆಯದು ನಿಷ್ಪರ್ಣ ಪುಷ್ಪ ವೈಭವವೆಂಬ ವರ್ಣನೆ !

ಚೈತ್ರ ವೈಶಾಖದ ಹುಣ್ಣಿಮೆ ಆಹ್ಲಾದಕರವೆಂದೂ, ಅಶ್ವಿಜದಿಂದ ಜ್ಯೇಷ್ಠ ಮಾಸದ ವರೆಗೆ ಎಲ್ಲ ಹುಣ್ಣಿಮೆಗಳೂ ಮನೋಹರವೆಂದೂ ವೈಶಾಖ ಹುಣ್ಣಿಮೆ ಎಲ್ಲ ಹುಣ್ಣಿಮೆಗಳ ಸೌಂದರ್ಯದ ಸಾರವೆಂದೂ ಬಣ್ಣಿಸಲಾಗಿದೆ. ಬಾಗಿ, ಗುಲ್‌ಮೊಹರ್, ಬಹಾವಾಗಳ ಸೌಂದರ್ಯ ವರ್ಣನೆಯೊಡನೆ ಮಧುಮಾಸದಲ್ಲಿ ಹಕ್ಕಿಗಳ ಮಿಲನೋತ್ಸವ, ಗೂಡು ಕಟ್ಟುವ ಸಂಭ್ರಮವನ್ನೂ ಅಷ್ಟೊಂದು ಆಕರ್ಷಕವಾಗಿ ಬಣ್ಣಿಸಲಾಗಿದೆ. ಹಾಗೆಯೇ ಜ್ಯೇಷ್ಠ ಮಾಸದಲ್ಲಿ ಎಲ್ಲೆಲ್ಲಿಯೂ ಚರಾಚರಗಳಲ್ಲಿ ಕುಟುಂಬ ವಾತ್ಸಲ್ಯದ ಛಾಯೆ ಕಂಡು ಬರುತ್ತಿದೆಯೆಂದು ಹೇಳಲಾಗಿದೆ.

ಗುಲಗಂಜಿ ಮರ ಹಾಗೂ ಅದರ ಹೂವು, ಕಾಯಿಗಳ ವರ್ಣನೆ ಅಸದೃಶವಾಗಿದೆ. ಸುಫಲಿತ ಸೃಷ್ಟಿಯ ಕೃತಾರ್ಥತೆ ಮತ್ತು ಸುಖದ ಕಂಬನಿಗಳು ಬಕುಲ ಹೂಗಳ ರೂಪದಿಂದ ಟಪ್ ಟಪ್ ಎಂದು ಹಗಲಿರುಳು ಉದುರುತ್ತಿರುತ್ತವೆ ಎಂಬ ಉಪಮೆ ಎಷ್ಟು ಮೋಹಕವಾಗಿದೆ! ಪುಷ್ಪ ಮಂಡಿತ
ಭಾದ್ರಪದದಲ್ಲಂತೂ ಹೂಗಳ ಸುಗ್ಗಿಯೇ ಇದೆ. ಹೀಗೆ ಆರಿಸ ಹೋದರೆ ಮುಗಿಯದ ಋತುವರ್ಣನೆಯ ಅಕ್ಷಯ ಭಂಡಾರವೇ ಇಲ್ಲಿದೆ.

ಪ್ರತಿಯೊಂದು ವರ್ಣನಾ ವಾಕ್ಯವನ್ನೂ ಉಧ್ಧರಿಸುವ ಅಂದನಿಸುತ್ತದೆ. ಒಟ್ಟಿನಲ್ಲಿ ಗಣಪತಿ ಪೈ ಅವರು ಅನುವಾದಿಸಿದ ಋತುಚಕ್ರವು, ಚೆಲುವು, ದಕ್ಷತೆ, ಸಾರ್ಥಕತೆಯ ಉತ್ಕೃಷ್ಟ ರೂಪವಾಗಿದೆ. ಅನುವಾದಕ ಗಣಪತಿ ಪೈ ಅವರು ಈ ಮೂಲ ಮರಾಠಿ ಸಾಹಿತ್ಯ ಕೃತಿಯ ಚೆಲುವು, ಶ್ರೇಷ್ಠತೆಗೆ ಮಾರು ಹೋಗಿ, ಮೂಲ ಲೇಖಕಿಯನ್ನು ಸಂಪರ್ಕಿಸಿ, ಕೃತಿಯನ್ನು ಅಭ್ಯಸಿಸಿ ಅಮಿತ ಪರಿಶ್ರತಮದಿಂದ ಸೊಗಸಾಗಿ ಕನ್ನಡದಲ್ಲಿ ಪಡಿಮೂಡಿಸಿ ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಅನುಪಮ ಕೃತಿರತ್ನವೊಂದನ್ನು ನೀಡಿದ್ದಾರೆ.

‍ಲೇಖಕರು Avadhi

June 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. K.satish kumar

    ಅವಧಿ ಚೇತೋಹಾರಿ ಸಾಹಿತ್ಯಕ ಲೇಖನಗಳ ಸಂಗ್ರಹ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: