ದೀಪಾ ಹಿರೇಗುತ್ತಿ ನೋಡಿದ ‘ಟೋಬಿ’

ʼಟೋಬಿʼ ಸಿನಿಮಾ ಏಕೆ ನೋಡಬೇಕು?

ದೀಪಾ ಹಿರೇಗುತ್ತಿ, ಕೊಪ್ಪ.

——

ನಿನ್ನೆ ಸಂಜೆ ಆಸ್ಕರ್‌ ವಿಜೇತ ʼಲಾ ಲಾ ಲ್ಯಾಂಡ್‌ʼ ನೋಡುತ್ತಿದ್ದೆ. ಹತ್ತಾರು ಹಾಡುಗಳು, ಚೆಂದದ ಸಂಗೀತ, ವಾಸ್ತವದಿಂದ ಕೂಡಿದ ಅಂತ್ಯದ ಚಿತ್ರ ಬಹು ಇಷ್ಟವಾಯಿತು. ಅದಾದ ಮೇಲೆ ರಾತ್ರಿ ʼಟೋಬಿʼ ನೋಡಿದೆ. ಇಲ್ಲಿಯೂ ಸಮಾಜದ ವಾಸ್ತವ ಚಿತ್ರಣವನ್ನು ನೋಡಿ ಸಮಾಧಾನ ಹೊಂದಿದೆ.

ಹಾಸ್ಯ, ಭಯ, ಮಮತೆಯಂತಹ ಹಲವು ಭಾವನೆಗಳ ಸಂಗಮವಾದ ʼಟೋಬಿʼ ಹುಣ್ಣಿಮೆಗೆ ಉಕ್ಕೇರುವ ಸಾಗರವಲ್ಲ, ಕ್ಷಣಾರ್ಧದಲ್ಲಿ ಕಟ್ಟೆಯನ್ನೊಡೆದು ಪ್ರವಹಿಸುವ ನದಿಯೂ ಅಲ್ಲ. ನಿಧಾನವಾಗಿ ತನ್ನಷ್ಟಕ್ಕೆ ತಾನು ಹರಿಯುತ್ತ ಸಾಗುವ ಜುಳುಜುಳು ಹರಿಯುವ ತೊರೆಯಂತಹುದು, ಅದು ಬೇಸಿಗೆಯಲ್ಲಿ ತೆಳುವಾಗಿ ಹರಿಯುತ್ತದೆ, ಮಳೆಗಾಲದಲ್ಲಿ ಒಡಲನ್ನು ಕೆಂಪಗಾಗಿಸಿಕೊಂಡು ಹೆದರಿಕೆ ಹುಟ್ಟಿಸಿ ರಭಸದಿಂದ ಮುನ್ನಡೆಯುತ್ತದೆ, ವಸಂತದಲ್ಲಿ ಹೂವರಳಿಸಿ ನಿಂತ ಮರಗಳ ಪ್ರತಿಬಿಂಬವನ್ನು ಚೆದುರಿಸುತ್ತ ಹೂಗಳ ಪಕಳೆಗಳೊಂದಿಗೆ ಮನಸ್ಸಿಗೆ ಮುದ ನೀಡುತ್ತ ಮುಂದುವರಿಯುತ್ತದೆ.

ಕಟು ವಾಸ್ತವಗಳನ್ನು ಹೇಗೆ ಹೇಳಬೇಕೋ ಹಾಗೆ ಹೇಳಿ ಮೆಚ್ಚುಗೆಯನ್ನು ಗಳಿಸುವ ʼಟೋಬಿʼ ಸಮಾಜವಾಗಿ ನಮ್ಮೊಳಗೊಂದು ಪುಟ್ಟ ಗಿಲ್ಟ್‌ ಅನ್ನೂ ಹುಟ್ಟಿಸುತ್ತದೆ. ಕಾರಣ ಹಣವಿರುವ ಸಮಾಜ ಬಡತನವನ್ನು ತನ್ನ ಗುರಿಸಾಧನೆಗೆ ʼಮೀನ್ಸ್‌ʼ ಅಥವಾ ದಾರಿಯನ್ನಾಗಿ ಮಾತ್ರ ಮಾಡಿಕೊಳ್ಳುತ್ತದೆ. ಕೆಟ್ಟವರನ್ನು ತೊಲಗಿಸಿ ಅಧಿಕಾರ ಹಿಡಿಯುವ ʼಒಳ್ಳೆಯವರೂʼ ಕೆಟ್ಟವರಾಗುತ್ತ ಹೋಗುವುದು ಅಥವಾ ಹಳಬರನ್ನು ಮೀರಿಸಿ ಕ್ರೌರ್ಯಕ್ಕೆಳಸುವುದು ನಮಗ್ಯಾರಿಗೂ ಗೊತ್ತಿರದ ವಿಷಯವಲ್ಲ. ಜಾರ್ಜ್‌ ಆರ್ವೆಲ್‌ನ ʼಆನಿಮಲ್‌ ಫಾರ್ಮ್‌ʼ ನಲ್ಲಿ ಎಲ್ಲರೂ ಸಮಾನರು ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಪ್ರಾಣಿಗಳು ಕೊನೆಯಲ್ಲಿ ಕೆಲವರು ಹೆಚ್ಚು ಸಮಾನರು ಎಂಬ ತಿದ್ದುಪಡಿ ಮಾಡಿದಂತೆ ಇಲ್ಲಿಯೂ ಆಗುತ್ತದೆ.

ಹೇಗೆ ಬಡತನವೆನ್ನುವುದು ವ್ಯಕ್ತಿಗಳ ತಪ್ಪೇ ಇಲ್ಲದಿದ್ದರೂ ಅವರನ್ನು ಅವಕಾಶಗಳಿಂದ ವಂಚಿತವಾಗಿಸುವುದು ಮಾತ್ರವಲ್ಲ, ಅಪರಾಧಗಳ ಸುಳಿಯೊಳಗೆ ಸಿಲುಕಿಸಿ ಹೊರಬರದಂತೆ ಮಾಡಿಬಿಡುತ್ತದೆ ಎಂಬ ನೈಜ ಚಿತ್ರಣ ಇಲ್ಲಿದೆ. ಉದಾಹರಣೆಗೆ ಶಿಕ್ಷಕ ತೊಂದರೆ ಕೊಟ್ಟುದ್ದಕ್ಕೆ ಶಾಲೆಯನ್ನೇ ಬಿಟ್ಟು ಮೀನು ಮಾರಲು ಹೋಗುವ ಜೆನ್ನಿ. ಒಂದು ವೇಳೆ ಶ್ರೀಮಂತರ ಮಗಳಾಗಿದ್ದಿದ್ದರೆ ಮನೆಯಲ್ಲಿ ದೂರು ನೀಡಿ ಶಾಲೆ ಮುಂದುವರೆಸುತ್ತಿರಲಿಲ್ಲವೇ? ಬಾಲ್ಯದಲ್ಲಿ ರಿಮ್ಯಾಂಡ್‌ ಹೋಮಿನಿಂದ ಜೈಲಿಗೆ ಜೈಲಿನಿಂದ ಮತ್ತೊಂದು ಜೈಲಿಗೆ ಹೋಗುತ್ತಲೇ ಬೆಳೆದ ಟೋಬಿಯೊಳಗೂ ಒಬ್ಬ ಮನುಷ್ಯನಿದ್ದಾನೆ. ಆದರೆ ಈ ಸಮಾಜದ ಸ್ವಾರ್ಥ ಅವನೊಳಗಿನ ರಾಕ್ಷಸನನ್ನೇ ವಿಜೃಂಭಿಸುವಂತೆ ಮಾಡಿಬಿಡುತ್ತದೆ. ಇಂತಹ ಒಂದು ಕ್ಯಾರೆಕ್ಟರ್‌ನ ಸುತ್ತ ಕಮರ್ಷಿಯಲ್‌ ಸಿನಿಮಾ ಒಂದನ್ನು ಮಾಡುವ ಎದೆಗಾರಿಕೆಗೆ ನಿಜಕ್ಕೂ ಹ್ಯಾಟ್ಸಾಫ್‌ ಹೇಳಲೇಬೇಕು. ಮಾತಿಲ್ಲದೇ ಅಭಿನಯದಲ್ಲಿಯೇ ನಮ್ಮ ಮನ ಸೂರೆಗೊಳ್ಳುವ ರಾಜ್‌ ಶೆಟ್ರು ವಂಡರ್‌ ಫುಲ್!‌ ಅವರ ಈ ಸಾಹಸಕ್ಕೆ ಸೈ ಎಂದು ಅವರ ಮೇಲೆ ಪೂರ್ತಿ ನಂಬಿಕೆಯಿಟ್ಟು ಚಿತ್ರ ನಿರ್ಮಾಣ ಮಾಡಿದ ರವಿಯಣ್ಣ ಅಭಿನಂದನೆಗಳು ನಿಮಗೆ!

ಕ್ರೌರ್ಯ ನಂಬಿಕೆದ್ರೋಹಗಳ ನಡುವೆ ನಮ್ಮನ್ನು ಸೆಳೆಯುವುದು ಮನುಷ್ಯಪ್ರೀತಿಯ ಅಪ್ಪಟ ಕ್ಷಣಗಳು. ಬಾಲಾಪರಾಧಿಯಾದ ಟೋಬಿಯನ್ನು ತಬ್ಬಿಕೊಳ್ಳುವ ಫಾದರ್‌ ಆ ಒಂದು ಅಪ್ಪುಗೆಯಲ್ಲಿ ಏನೆಲ್ಲವನ್ನು ಹೇಳುತ್ತಾರೆ! ಅವರೋ ನಮ್ಮೂರಿನ ಯಾವುದೋ ಚರ್ಚಿನ ಫಾದರ್‌ ಥರವೇ ಕಾಣುತ್ತಾರಲ್ಲ ಎಂದು ಸುಧೀರ್‌ ಹೇಳುತ್ತಿದ್ದರು! ಹೊಳೆದಂಡೆಯ ಚಳಿಯಲ್ಲಿ ಆಗತಾನೇ ಹುಟ್ಟಿದ ಮಗುವೊಂದು ಅಳುತ್ತಿರುವಾಗ ಊರವರೆಲ್ಲ ಪೋಲಿಸರಿಗೆ ಹೇಳುವುದೋ ಚರ್ಚಿನ ಫಾದರ್‌ಗೆ ಹೇಳುವುದೋ ಎಂದು ಚರ್ಚೆ ನಡೆಸುತ್ತಲೇ ಇರುವಾಗ ಸೀದಾ ಹೋಗಿ ಮಗುವನ್ನು ಎತ್ತಿ ಮನೆಗೆ ಕರೆದುಕೊಂಡು ಹೋಗುವ ಟೋಬಿ ನಮ್ಮ ಮುಖವಾಡಗಳನ್ನು ಮುಟ್ಟಿ ನೋಡಿಕೊಳ್ಳುವಂತೆ ಮಾಡುತ್ತಾನೆ! ತಂದೆ ಮಗಳ ಮಮತೆಯ ಕ್ಷಣಗಳು ತುಟಿಯಂಚಿನಲ್ಲಿ ಕಿರುನಗೆಯನ್ನೂ, ಕಣ್ಣಂಚಿನಲ್ಲಿ ಹನಿಯೊಂದನ್ನೂ ಮೂಡಿಸುತ್ತವೆ! ತಾನು ಮೈ ಮಾರಿಕೊಳ್ಳುವವಳು ಎಂದು ಸಾವಿತ್ರಿ ಹೇಳಿದಾಗ ಏನಾದರೂ ಮಾರಿಕೋ ಆದರೆ ಮದುವೆಯಾಗು ಎನ್ನುವ ಪುಟ್ಟ ಜೆನ್ನಿ ಥಿಯೇಟರ್‌ನಲ್ಲಿ ನಗು ಉಕ್ಕಿಸುವುದು ಮಾತ್ರವಲ್ಲ, ಯೋಚನೆಗೂ ಹಚ್ಚುತ್ತಾಳೆ. ಬದುಕುವುದಕ್ಕಾಗಿ ವೇಶ್ಯಾವೃತ್ತಿಗೆ ಇಳಿದಿರುವ ಸಾವಿತ್ರಿಯ ಉದ್ಯೋಗವನ್ನು ಅತ್ಯಂತ ಸಹಜವಾಗಿ ತೆಗೆದುಕೊಳ್ಳುವ ಟೋಬಿ ಸಮಾಜಕ್ಕೊಂದು ಅತ್ಯುತ್ತಮ ಸಂದೇಶ ಕೊಡುತ್ತಾನೆ. ಮನಸೊಳಗೆ ಮೈಲಿಗೆ ತುಂಬಿಕೊಂಡು ಇತರರ ವೈಯಕ್ತಿಕ ಬದುಕನ್ನು ಅತ್ಯಂತ ನೀಚತನದಿಂದ ಆಡಿಕೊಳ್ಳುವ ಸಮಾಜದಲ್ಲಿ ನಾವಿರುವಾಗ ಕಮರ್ಷಿಯಲ್‌ ಸಿನಿಮಾದಲ್ಲಿ ಈ ರೀತಿಯ ಪಾತ್ರಪೋಷಣೆ ನಿಜಕ್ಕೂ ಸ್ವಾಗತಾರ್ಹ.

ಈ ಸಿನಿಮಾದ ಮೂಲಕ ರಾಜ್‌ ಶೆಟ್ರು ತಾವು ಎಂಥ ಪಾತ್ರಕ್ಕೂ ನ್ಯಾಯ ಒದಗಿಸಬಲ್ಲವರೆಂದು ಸಾಬೀತುಪಡಿಸಿದ್ದಾರೆ. ವಿರಾಮಕ್ಕೆ ಮುನ್ನ ಒಂದು ಫೈಟಿಂಗ್ ದೃಶ್ಯ ಬರುತ್ತದಲ್ಲ, ಅದನ್ನು ಸಂಯೋಜಿಸಿದ ರೀತಿ ಅದ್ಭುತ. ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್ಯ ಇಬ್ಬರಿಗೂ ಕನ್ನಡದಲ್ಲಿ ಹೆಚ್ಚಿನ ಅವಕಾಶಗಳು ಸಿಗಬೇಕು. ಸಮಾನತೆಯನ್ನು ಬಯಸುತ್ತ ಅಧಿಕಾರ ಹಿಡಿದ ಕೂಡಲೇ ಹೆಚ್ಚಿನ ಸಮಾನತೆಯನ್ನು ಬಯಸುವ ಕ್ರೂರಿ ಖಳನಾಯಕ ಆನಂದನ ಪಾತ್ರಕ್ಕೆ ದೀಪಕ್‌ ಶೆಟ್ಟಿ ನ್ಯಾಯ ಒದಗಿಸಿದ್ದಾರೆ. ನಿರ್ದೇಶಕ ಬಾಸಿಲ್‌ ಅವರಿಂದ ಒಳ್ಳೆಯ ನಿರೀಕ್ಷೆ ಇಟ್ಟುಕೊಳ್ಳಬಹುದು. ಕಥೆಗಾರರಾದ T K ದಯಾನಂದ ಅವರಿಗೆ ಅಭಿನಂದನೆಗಳು.

ಹಾಗಂತ ಸಿನಿಮಾದಲ್ಲಿ ಕೊರತೆಗಳೇ ಇಲ್ಲವೇ? ಇವೆ, ಹಲವಾರಿವೆ. ಸಿನಿಮಾ ಸ್ವಲ್ಪ ನಿಧಾನವೆನ್ನಿಸುತ್ತದೆ, ಕ್ರೌರ್ಯ ನಡುಕ ಹುಟ್ಟಿಸುತ್ತದೆ. ಆದರೂ ಒಂದು ಬೆಟರ್‌ ಪ್ರಯತ್ನ ಅನ್ನಬಹುದು. ನಮ್ಮ ತಕರಾರುಗಳನ್ನು ನಿಧಾನವಾಗಿ ಹೇಳೋಣ. ಆದರೆ ನೂರಾರು ಕೋಟಿ ಚೆಲ್ಲಿ ಒಂದೇ ಸಿದ್ಧ ಸೂತ್ರವನ್ನಿಟ್ಟುಕೊಂಡು, ನಾಯಕನೊಬ್ಬನನ್ನೇ ಮೆರೆಸಿ ಮಾಡುವ ಸಿನಿಮಾಗಳ ಮಧ್ಯೆ ಈ ಹೊಸ ಪ್ರಯತ್ನಕ್ಕೆ ನಾವು ʼಟೋಬಿʼಯ ಬಳಗವನ್ನು ಪ್ರೋತ್ಸಾಹಿಸಬೇಡವೇ?

‍ಲೇಖಕರು avadhi

August 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: