ಡಾ. ದಿನಮಣಿ ಬಿ.ಎಸ್.
—
ಭವದ ಜಗದ ಮುಂದೆ
ಬೆತ್ತಲಾಗುವ ಬಯಕೆ ಹೊಂದಲು
ನಾನು ಅಕ್ಕನೆಂದಿರಾ?
ಶೋಭಾಚಾರಕೆ ಸಂಸ್ಕೃತಿಯ
ಮುಖವಾಡ ತೊಡಿಸಿ
ವ್ಯಾಪಾರವನೇ ವೇದಿಕೆಯಾಗಿಸಿ
ಬಟ್ಟೆಯ ಬೆತ್ತಲಾಗಿಸಿ
ಹೆಣ್ಣ ಸೌಂದರ್ಯವನಳೆವ
ನಿಮ್ಮ ಮಾಪನವಾದರೂ
ಯಾವುದು ಹೇಳಬಲ್ಲಿರಾ?
ಸರಸವೆನೆಲು
ಕೋಣೆಯೊಳಗೂ ನಾ ಬೆತ್ತಲೆ
ಕಲಹವಿರಲು
ಊರ ಮುಂದೆಯೂ ನಾ ಬೆತ್ತಲೆ
ವಸನ ಹರಿದು ಬಯಲಿಗೆ ಮೈಯೊಡ್ಡಲು
ನನ್ನ ದೇಹವಾದರೂ ಬೆಳಕು ಕಂಡೀತು
ನಿಮ್ಮ ಬುದ್ಧಿಗೇಕಿನ್ನೂ ಕತ್ತಲೆ
ತಿಳಿಸಬಲ್ಲಿರಾ?

ಅಪ್ರಾಪ್ತೆ ಎನಲಿಲ್ಲ
ಅಮಾಯಕಳ ಬಿಡಲಿಲ್ಲ
ಒಡಹುಟ್ಟಿದವಳು
ನಂಬಿ ಬಂದವಳು
ಜೀವ ಕೊಟ್ಟವಳೆಂದೂ ನೋಡದೆ
ಉಡುಪು ಸೆಳೆಯುವ ನೀವು
ನಿಮ್ಮನೆ ಮಾನವರೆಂದು
ಒಪ್ಪಿಕೊಳ್ಳುವಿರಾ?
ಗುರುವು ಗುರುವಾಗಲಿಲ್ಲ
ಹಿರಿಯ ದಾರಿ ತೋರಲಿಲ್ಲ
ಹರಿಯುವುದು ಎರಗುವುದೇ
ಗೆಲುವೆಂದು ಮೆರೆಯುವಿರಾ?
ವರ್ತಮಾನದ ಬೀಜದಲಿ
ಭವಿತವ್ಯದ ಹಸಿರಿಹುದ ಕಾಣದೆ
ಸಮತೆ ನ್ಯಾಯಗಳ ಕೊರಳಿಗೆ
ಉರುಳು ಬಿಗಿಯುವಿರಾ?
ಆಡಿದ್ದೆ ಆಟ ಹೂಡಿದ್ದೆ ಲಗ್ಗೆ
ಊರೆಲ್ಲವೂ ಮೂಕಪ್ರೇಕ್ಷಕ
ಬಂಧು ಬಳಗವೂ ಆಗಂತುಕ
ಅಜ್ಞಾನಿಗಳಿರಾ ಅವಿವೇಕಿಗಳಿರಾ
ಹೊಟ್ಟೆ ಹರಿದು ಬುವಿಗೆ ತಂದವಳ
ಜನರೆದುರು ಬೆತ್ತಲಾಗಿಸುವಾಗ
ಸತ್ಯದ ಬೆಳಕಲಿ ನೀವೇ
ಬೆತ್ತಲಾದ ಪರಿಯ ಕಾಣಿರಾ?
0 ಪ್ರತಿಕ್ರಿಯೆಗಳು