ಡಾ ಮೇಘನಾ ಎನ್
ಕೆಲವರು ಜೀವನದಲ್ಲಿ ಏನಾಗಬೇಕು ಅಂತ ನಿರ್ಧಾರ ಮಾಡಿರ್ತಾರಂತೆ. ನಾನು ಸಹ ಮಾಡಿದ್ದೆ. ನಮ್ಮ ಸ್ಕೂಲ್ ಟೀಚರ್ ನೋಡಿ ಟೀಚರ್ ಆಗಬೇಕು ಅಂತ, ಎದೆ ತುಂಬಿ ಹಾಡುವೆನು ನೋಡಿ ಸಿಂಗರ್ ಆಗಬೇಕು ಅಂತ ಹೀಗೆ ಆಗಬೇಕು ಅನ್ನೋ ಪಟ್ಟಿ ದೊಡ್ಡದೇ ಇತ್ತು. ಆದರೆ ಇದ್ಯಾವುದೂ ಆಗದೇ ಬೇರೆನೇ ಹಾದಿ ಹಿಡಿದೆ. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ನನಗೆ ನನ್ನ ಕಾಲಮೇಲೆ ನಾನು ನಿಲ್ಲಬೇಕು, ಇಂಡಿಪೆಂಡೆಂಟ್ ಆಗಿರಬೇಕು ಅಂತ ಮಾತ್ರ ಚೆನ್ನಾಗಿ ಮನದಟ್ಟಾಗಿತ್ತು.
ಒಬ್ಬಳೇ ಮಗಳಾಗಿದ್ದರಿಂದ ಮಗಳನ್ನು ಸಕಲಕಲಾವಲ್ಲಭೆ ಮಾಡಬೇಕು ಅಂತ ಅಪ್ಪ ಅಮ್ಮ ಪರಮೋತ್ಸಾಹದಲ್ಲಿ ಸಂಗೀತ, ನೃತ್ಯ ಅಂತೆಲ್ಲ ಕಲಿಯಲು ಪ್ರೋತ್ಸಾಹಿಸಿದರು. ಅವೆಲ್ಲ ಹವ್ಯಾಸಗಳಾಗಿ ಉಳಿದವು.
ಈ ೧೦ನೇ ಕ್ಲಾಸು ಪಿಯುಸಿ ಕುರಿತು ನಮ್ಮಲ್ಲಿ ಎಂತೆಂತಹ ಕಲ್ಪನೆಗಳಿವೆ ಅಂದರೆ ಅಪ್ಪ ಅಮ್ಮ, ಸುತ್ತಲು ಇರೋರು ಒಂದೇ ರಾಗ ಒಂದೇ ಹಾಡು ಹಾಡ್ತಿರ್ತಾರೆ. “ಇದು ನಿಮ್ಮ ಲೈಫ್‌ನ ಟರ್ನಿಂಗ್ ಪಾಯಿಂಟು. ಇಲ್ಲಿ ಸೀರಿಯಸ್ಸಾಗಿ ಕೂತು ಓದಿಬಿಟ್ಟರೆ ನಿಮ್ಮ ಲೈಫು ಸೆಟಲ್ ಆದಂಗೆ ಲೆಕ್ಕ” ಅಂತ. ಆದರೆ ನಿಜವಾಗಿ ಹಾಗೆ ಲೈಫು ಸೆಟಲ್ ಆಗೋಗುತ್ತಾ ಅಂದರೆ ಇಲ್ಲ. ಲೈಫಿನ ಸ್ಟ್ರಗಲ್‌ಗಳ ಹಾದಿ ಶುರುವಾಗಿರುತ್ತೆ. ಒಂದು ವಿಷಯ ಏನಪ್ಪ ಅಂದರೆ ನಿಮ್ಮ ಸ್ಟ್ರಗಲ್‌ನ ಹಾದಿ ಯಾವುದು ಅಂತ ಇಲ್ಲಿ ನಿರ್ಧಾರ ಆಗಿರುತ್ತೆ.

ನಾನೂ ಅವೆರೆಡನ್ನೂ ದಾಟಿ ಡಾಕ್ಟರ್ ಆಗ್ತೀನಿ ಅಂತ ನಿಂತೆ. ನನ್ನ ಸ್ಕೂಲಿನ ಬಯಾಲಜಿ ಟೀಚರ್ ನೋಡಿ ಈ ನಿರ್ಧಾರ ಮಾಡಿದ್ದೆ. ದಾವಣಗೆರೆ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಕ್ಕಿತು. ಏನೋ ಭಾರಿ ಸಾಧನೆ ಮಾಡಿದವಳಂಗೆ ಕಾಲೇಜಿಗೆ ಹೋದವಳಿಗೆ ಮೊದಲನೇ ದಿನ ನನ್ನಂತೆ ಸೀಟು ಪಡೆದು ಬಂದಿದ್ದ ೧೫೦ ಜನರನ್ನು ನೋಡಿ ಒಳಗಿದ್ದ ಹೆಮ್ಮೆಯಲ್ಲ ಸೋರಿಹೋಯಿತು. ಐದೂವರೆ ವರ್ಷ ಮುಗಿದ ಮೇಲೆ ನಮ್ಮಿಷ್ಟೂ ಜನಕ್ಕೆ ಕೆಲಸ ಎಲ್ಲಿ ಸಿಗುತ್ತೆ? ಅನ್ನೋ ಯೋಚನೆಯೇ ಗಾಬರಿ ಹುಟ್ಟಿಸಿತು. ಲೈಫ್ ಸೆಟಲ್ ಆಗೋಯ್ತು ಅಂದುಕೊಂಡಿದ್ದವಳಿಗೆ ಈಗ ಬದುಕು ಶುರುವಾಗಿದೆ ಅನ್ನೋದು ಅರ್ಥವಾಯಿತು.
ಎಂದೂ ಮನೆಯಿಂದ ದೂರವಿರದವಳು ದೂರದ ಊರಿನಲ್ಲಿ ಕಾಲೇಜಿಗೆ ಸೇರಿದ್ದೆ, ಹಾಸ್ಟಲ್ ವಾಸಕ್ಕೆ ಅಡಿಯಿಟ್ಟಿದ್ದೆ. ಜೀವನದ ಹೊಸ ಅಧ್ಯಾಯ ಶುರುವಾಯಿತು. ಹೊಸ ಜೀವನ, ಹೊಸ ಹುರುಪು. ಮೆಡಿಕಲ್ ಕಾಲೇಜ್ ಲೈಫಿನ ಬಗ್ಗೆ ಸೀರಿಯಲ್, ಸಿನಿಮಾ ನೋಡಿ ಬಹಳ ರಮ್ಯ ಕಲ್ಪನೆ ಮಾಡಿಕೊಂಡಿದ್ದ ನನಗೆ ವಾಸ್ತವ ಬೇರೆಯೇ ಇರುತ್ತೆ ಅನ್ನೋದು ಅರ್ಥವಾಯಿತು. ʼಅದೇ ರಾಗ ಅದೇ ಹಾಡುʼ ಸಿನಿಮಾ ನೋಡ್ತಿದ್ದಾಗ ಅದರಲ್ಲೊಂದು ಡಿಸೆಕ್ಷನ್ ಸೀನ್ ಬರುತ್ತೆ. ಅದರಲ್ಲಿ ಹೆಣ ಕಣ್ಣು ಬಿಡೋದನ್ನ ನೋಡಿ ಹೆದರಿ ಕಿರುಚಿದ್ದೆ. ಈಗ ಅದೇ ಸೀನಿನಲ್ಲಿ ನಾನಿದ್ದೆ. ನನ್ನ ಮುಂದೆ ಹೆಣವಿತ್ತು. ಒಂದು ಸಣ್ಣ ಬದಲಾವಣೆ ಅಂದರೆ ನನ್ನ ಮುಂದೆ ಇದ್ದಿದ್ದು ಗಂಡು ಹೆಣ. ಅದು ಕಣ್ಣು ಬಿಡಲಿಲ್ಲವಾದರೂ ಆ ಸೀನ್ ಪದೇ ಪದೇ ನೆನಪಾಗುತ್ತಿತ್ತು. ಹೆಣ ಕೆಡದಂತೆ ಇರಲು ಅದಕ್ಕೆ ಫಾರ್ಮಲೈನ್ ಬಳಸಿರ್ತಾರೆ. ಅದರ ವಾಸನೆಗೆ ಮೊದಲ ದಿನ ತಲೆತಿರುಗಿ ಬಿದ್ದವರೆಷ್ಟೋ, ವಾಂತಿ ಮಾಡಿಕೊಂಡವರೆಷ್ಟೋ. ದಿನ ಕಳೆದಂತೆ ಆ ವಾಸನೆಗೆ ಮೂಗು ಅಡ್ಜೆಸ್ಟ್ ಆಗೋಯ್ತು.
ಈ ಲ್ಯಾಬಿನ ದಿನಗಳು ನೆನಪಾದರೆ ಈಗಲೂ ನಗು ಬರುತ್ತೆ. ಒಂದು ಸಣ್ಣ ಗಾಯವಾದರೆ ಸಾಕು ಪ್ರಾಣವೇ ಹೋದವಳಂಗೆ ಆಡುತ್ತಿದ್ದ ನಾನು ಫಿಸಿಯಾಲಜಿ ಲ್ಯಾಬಿನಲ್ಲಿ ನನ್ನದೇ ಬೆರಳಿಗೆ ಚುಚ್ಚಿಕೊಂಡು ರಕ್ತ ತೆಗೆದು ಪ್ರಯೋಗ ಮಾಡಬೇಕಾದಾಗ ಬೇಡ ನನ್ನ ಫಜೀತಿ. ಮೊದಲ ಸಲ ಚುಚ್ಚಿಕೊಳ್ಳಲು ಧೈರ್ಯ ಸಾಲದೆ ಫ್ರೆಂಡ್ ಹತ್ರ ಚುಚ್ಚಿಸಿಕೊಂಡು ಗೋಳೋ ಅಂತ ಅತ್ತಿದ್ದೇ ಅತ್ತಿದ್ದು. ಮೆಡಿಕಲ್ ಮೊದಲ ವರ್ಷದಲ್ಲಿ ಮೂಳೆಗಳಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡೋದು ಇರುತ್ತೆ. ಹಾಗಾಗಿ ಹಾಸ್ಟೆಲ್ ರೂಂನಲ್ಲಿ ಮೂಳೆಗಳನ್ನ ತೊಗೊಂಡೊಗಿ ಇಟ್ಕೊಂಡಿದ್ವಿ. ನನ್ನ ನೋಡೋಕೆ ಬಂದ ಮನೆಯವರು ಅದನ್ನು ನೋಡಿ ಗಾಬರಿಯಾದರು. “ಏನು ಮಾಡ್ತಿದಾಳೋ ನಿನ್ನ ಮಗಳು? ರೂಮಿನ ತುಂಬ ಮಾಟ ಮಾಡೋರ ತರಹ ಮೂಳೆ ತಂದಿಟ್ಕೊಂಡಿದಾಳೆ..” ಅಂತ ಅಜ್ಜಿ ಗಾಬರಿಯಾಗಿ ಅಪ್ಪನನ್ನ ಕೇಳಿದ್ದರು.” ಕುಯ್ಯೋದುಗಿಯ್ಯೋದು(ಡಿಸೆಕ್ಷನ್) ಎಲ್ಲ ಮಾಡಿಬಂದಮೇಲೆ ಸ್ನಾನಮಾಡಲು ಹೇಳು” ಅಂತ ಪ್ರತಿಸಲ ಹೇಳೋರು.

ದಾವಣಗೆರೆಗೆ ಹೋದ ಹೊಸತರಲ್ಲಿ ಆ ಬಿಸಿಲು, ಧೂಳಿಗೆ ತತ್ತರಿಸಿಹೋಗಿದ್ದಂತೂ ಹೌದು. ಅಲ್ಲಿನ ವಾತಾವರಣ, ತಿಂಡಿ ತೀರ್ಥಗಳಿಗೆ ಹೊಂದಿಕೊಳ್ಳಲು ಮೊದಮೊದಲು ಕಷ್ಟವಾಯಿತು. ಬೆಂಗಳೂರಿನಲ್ಲಿ ಕೆಎಫ್‌ಸಿ, ಮ್ಯಾಕ್‌ಡೊನಾಲ್ಡ್, ಬಾಸ್ಕಿನ್ ರಾಬಿನ್ಸ್ ಅಂತ ರುಚಿ ಕಂಡಿದ್ದವರಿಗೆ ಇಲ್ಲೇನಪ್ಪಾ ಮಾಡೋದು ಅನ್ನಿಸಿತು. ಆದರೆ ದಾವಣಗೆರೆ ನಿಜವಾಗಿ ತಿಂಡಿಪ್ರಿಯರಿಗೆ ಸ್ವರ್ಗ.. ಒಮ್ಮೆ ಅದರ ರುಚಿ ಹತ್ತಿದ ಮೇಲೆ ಯಾವ ಎಫ್‌ಸಿ, ಡೊನಾಲ್ಡ್‌ಗಳು ನೆನಪಾಗಲಿಲ್ಲ. ಗುಂಡಿ ಸರ್ಕಲ್ಲಿನ ಪಡ್ಡು, ದೋಸೆ, ಕೊಟ್ಟೂರೇಶ್ವರ ಬೆಣ್ಣೆ ದೋಸೆ, ಮಂಡಕ್ಕಿ ಮಿರ್ಚಿ, ರಾಮ್ ಅಂಡ್ ಸರ್ಕಲ್‌ನ ಬೆಣ್ಣೆ ಪಡ್ಡು, ಹಾಫ್ ಗೋಬಿ ಇವೆಲ್ಲ ಹೊಸರುಚಿಗಳು ನಮ್ಮೂರನ್ನು ಮರೆಸಿದವು. ಹಾಸ್ಟೆಲ್ ಮುಂದಿದ್ದ ಗೋಲಪ್ಪ ಸ್ಟಾಲ್‌ಗೆ ನಿತ್ಯದ ಖಾಯಂ ಗಿರಾಕಿಗಳಾದೆವು. ಆ ಊರಿನ ಆ ಪಾಟಿ ಬಿಸಿಲಿಗೆ ಜ್ಯೂಸಿನ ತಂಪೆರೆದಿದ್ದು ಸ್ಪಂದನ ಜ್ಯೂಸ್ ಸೆಂಟರ್.
ಆ ಪುಟ್ಟ ಊರಿನ ಪ್ರಪಂಚ ನಮ್ಮನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಊರು ನಿಧಾನವಾಗಿ ನಮ್ಮೊಳಗಿಳಿದು ಇಷ್ಟವಾಗತೊಡಗಿತು. ಈಗಿನಂತೆ ಸೂಪರ್ ಮಾರ್ಕೆಟ್‌ಗಳಿಲ್ಲದ ಆ ದಿನಗಳಲ್ಲಿ ಹಾಸ್ಟೆಲ್ ಎದುರುಗಡೆ ಇದ್ದ ಸಣ್ಣ ಅಂಗಡಿಯೇ ಸಕಲಸರಂಜಾಮುಗಳ ಲಭ್ಯ ತಾಣವಾಗಿತ್ತು. ಹಲ್ಲುಜ್ಜೋ ಬ್ರಷ್ ಇಂದ ಹಿಡಿದು ಕಾಸ್ಮೆಟಿಕ್ಸ್, ಕುರುಕು ತಿಂಡಿಗಳವರೆಗೆ ಎಲ್ಲದಕ್ಕೂ ಅಲ್ಲಿಗೆ ನಾವು ಎಡತಾಕುತ್ತಿದ್ದೆವು. ಆ ಹೈವೆ ರಸ್ತೆ, ಗುಡ್ಡಗಳು, ಕುಂದವಾಡ ಕೆರೆ, ಚಿತ್ರದುರ್ಗದ ವಿಂಡ್ ಮಿಲ್
ಇವೆಲ್ಲ ನಮ್ಮ ಸುತ್ತಾಣಗಳಾಗಿದ್ದವು.
ಹಾಸ್ಟೆಲ್ ಊಟಕ್ಕೆ ಹೊಂದಿಕೊಳ್ಳಲು ಪಟ್ಟಕಷ್ಟ ಮನೆಯೂಟದ ಬೆಲೆ ಅರಿಯುವಂತೆ ಮಾಡಿತ್ತು. ಅದೆಲ್ಲ ಏನೇ ಇದ್ದರೂ ಒಳ್ಳೆಯ ಸ್ನೇಹಿತರ ಬಳಗ ಇವೆಲ್ಲವನ್ನೂ ಮರೆಸಿ ಆಡಾಡ್ತ ಕಾಲ ಕಳೆಯುವಂತಾಯಿತು. ನಾಲ್ಕು ವರ್ಷ ಮುಗಿಸಿ ಇಂಟರ್ನಶಿಪ್‌ಗೆ ಕಾಲಿಟ್ಟಾಗ ಹೊಸದೊಂದು ಲೋಕ ತೆರೆಯಿತು. ಮೊದಮೊದಲು ಪುಸ್ತಕ ಓದಿ ಓದಿ ರೋಗಿಗಳನ್ನು ಪರೀಕ್ಷೆ ಮಾಡುತ್ತಿದ್ದೆವು. ಅದು ನಮ್ಮ ಕಲಿಕೆಯ ದಾರಿಯಾಗಿತ್ತು. ಮೊದಲ ಸಲ ಇಂಜೆಕ್ಷನ್ ಕೊಟ್ಟದ್ದು, ಗಾಯಕ್ಕೆ ಹೊಲಿಗೆ ಹಾಕಿದ್ದು, ಮೈನರ್ ಸರ್ಜರಿ ಮಾಡಿದ್ದು ಇವೆಲ್ಲ ಮರೆಯಲಾಗದ್ದು. ರೋಗಿಗಳು ಗುಣವಾಗಿ ಮನೆಗೆ ವಾಪಸ್ಸು ಹೋಗುವಾಗ ಅವರ ಮುಖದ ಮೇಲಿನ ನಗು, ತೃಪ್ತಿ ಕಂಡು ಸಾರ್ಥಕತೆಯ ಭಾವ ಮನವನ್ನು ಹಿಗ್ಗಿಸುತ್ತಿತ್ತು.

ಐದೂವರೆ ವರ್ಷ ಮುಗಿಸಿ ಸರ್ಟಿಫಿಕೇಟ್, ಮೆಡಲ್ ತೊಗೊಂಡಾಗ ಅಪ್ಪ ಅಮ್ಮನ ಕಣ್ಣಂಚು ಒದ್ದೆ ಆಗಿತ್ತು. ಹೇಗಪ್ಪಾ ಇರೋದು ಅನ್ನಿಸಿದ್ದ ದಾವಣಗೆರೆಯನ್ನು ಬಿಟ್ಟು ಹೊರಡುವ ಸಮಯ ಇಷ್ಟು ಬೇಗ ಬಂದುಬಿಟ್ಟಿತೇ ಅಂತನ್ನಿಸಿ ದುಃಖ ಉಮ್ಮಳಿಸಿ ಬಂದಿತ್ತು. ಇಡೀ ಕಾಲೇಜಲ್ಲಿ ನಮ್ಮ ಗುಂಪು ಕಾಗೆ ಕತ್ತೆ ಗ್ಯಾಂಗ್ ಎಂದೇ ಚಿರಪರಿಚಿತ ಆಗಿದ್ದೆವು. ನಿಂತಲ್ಲಿ ಕುಂತಲ್ಲಿ ಮಾತು, ನಗುವಿಗೆ ಬರವಿರಲಿಲ್ಲ. ನಾವೆಲ್ಲ ನಮ್ಮ ನಮ್ಮ ಹಾದಿ ಹಿಡಿಯುವ ಕಾಲ ಸನ್ನಿಹಿತವಾಗಿತ್ತು.
ಹತ್ತು ವರ್ಷಗಳ ನಂತರ ಸ್ನೇಹಿತರ ಮದುವೆಯ ನೆಪದಲ್ಲಿ ಮತ್ತೆ ದಾವಣಗೆರೆಗೆ ಹೋದಾಗ ಈ ಎಲ್ಲ ನೆನಪುಗಳು ಕಾಡಿದವು. ನಾವು ನೋಡಿದ್ದ ನಮ್ಮ ಮನಸಿನಲ್ಲಿ ಉಳಿದುಹೋಗಿರುವ ದಾವಣಗೆರೆ ಬದಲಾಗಿತ್ತು. ರೈಲ್ವೇ ಸ್ಟೇಷನ್ ಹೈಟೆಕ್ ದರ್ಜೆಗೇರಿತ್ತು. ಗುಂಡಿಗಳಿದ್ದ ರಸ್ತೆ ಈಗ ರಿಪೇರಿಯಾಗಿತ್ತು. ಸುಣ್ಣಬಣ್ಣದೊಂದಿಗೆ ನಮ್ಮ ಕಾಲೇಜು ನವೀಕರಣಗೊಂಡು ಹೊಸರೂಪ ಪಡೆದಿತ್ತು. ಸಿಂಗಲ್ ಸ್ಕ್ರೀನ್ ಥಿಯೇಟರುಗಳ ಜಾಗದಲ್ಲಿ ಮಲ್ಟಿಪ್ಲೆಕ್ಸ್‌ಗಳು ಬಂದಿವೆ. ಶಾಪಿಂಗ್ ಮಾಲ್‌ಗಳು ಬಂದಿವೆ. ಹೊರರೂಪದಲ್ಲಿ ಏನೇ ಬದಲಾವಣೆ ಕಾಣುತ್ತಿದ್ದರೂ ಮನಸಲ್ಲಿ ಅಚ್ಚೊತ್ತಿರುವ ದಾವಣಗೆರೆ ಮಸುಕಾಗಲೇ ಇಲ್ಲ.
| ಇನ್ನು ಮುಂದಿನ ವಾರಕ್ಕೆ |
0 ಪ್ರತಿಕ್ರಿಯೆಗಳು